ಆಡಿದ ಮಾತುಗಳೇ ಭವಿಷ್ಯವಾಣಿಯಾದರೆ ಹೀಗೇ!

Column F
Published on
ಹಾಗೆ ಸುಮ್ಮನೆ ಒಮ್ಮೆ ಕಲ್ಪನಾ ಲೋಕಕ್ಕೆ ಹೋಗಿಬನ್ನಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಈ ಹಿಜಾಬ್ ಗಲಾಟೆ ನಡೆದಿದ್ದರೆ ಏನಾಗಿರುತ್ತಿತ್ತು? ಈ ರೀತಿಯ ವೇಷ ಧರಿಸಲು ಮುಕ್ತ ಪರವಾನಗಿ ದೊರೆತಿರುತ್ತಿತ್ತಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಅವರು, ಹಿಂದೂಗಳೂ ತಲೆಯಮೇಲೆ ಸ್ಕಾರ್ಫ್ ಧರಿಸಿಕೊಂಡು ಬನ್ನಿ ಎಂದು ಆದೇಶ ಹೊರಡಿಸಿದ್ದರೂ ಅಚ್ಚರಿ ಇರುತ್ತಿರಲಿಲ್ಲ. ಅವರ ಅಧಿಕಾರಾವಧಿ ನಿಮಗೆ ನೆನಪಿದೆಯಲ್ಲ, ಆರಂಭದಲ್ಲಿಯೇ ಪಿಎಫ್​ಐನ ಗೂಂಡಾಗಳನ್ನು ಜೈಲಿನಿಂದ ಮುಕ್ತ ಮಾಡಿದ್ದರು. ಹಿಂದೂಗಳ ಸಾಲು-ಸಾಲು ಹತ್ಯೆ ನಡೆದಿತ್ತು. ಇನ್ನು ಡಿ.ಕೆ ಶಿವಕುಮಾರರೇನಾದರೂ ಆಳ್ವಿಕೆಯಲ್ಲಿದ್ದಿದ್ದರೆ, ವಿಷಯಕ್ಕೆ ತೇಪೆ ಹಚ್ಚಿ ಸಮವಸ್ತ್ರದ ಕಲ್ಪನೆಯನ್ನೇ ತೆಗೆದುಬಿಡುತ್ತಿದ್ದರೇನೋ! ಕಾನೂನು ಮೀರಿ ಗುಡ್ಡಗಳನ್ನೇ ಕ್ರಿಸ್ತನಿಗೆ ಬರೆದುಕೊಟ್ಟವರಿಗೆ ಸಮವಸ್ತ್ರದ ಕಾನೂನನ್ನೇ ತೆಗೆದು ಹಾಕುವುದು ಬಲುಕಷ್ಟದ ಸಂಗತಿಯಲ್ಲ. ಆದರೆ ಈಗ ಕಾಲ ಬದಲಾಗಿದೆ. ಕೇಂದ್ರದಲ್ಲಿರುವ ಮೋದಿ ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಮಾತನಾಡುತ್ತಿದ್ದಾರೆ. ಶಾಹಿ ಇಮಾಮ್ ಕೂಡ ಜನಸಂಖ್ಯಾ ನಿಯಂತ್ರಣದ ಮಾತುಗಳನ್ನಾಡುವಂತೆ ಬಲವಾದ ಒತ್ತಡ ಬಿದ್ದಿದೆ. ಹೀಗಿರುವಾಗ ದೇಶದ ಎಲ್ಲೆಡೆ ಹಿಂದೂ-ಮುಸಲ್ಮಾನ ಭೇದವಿಲ್ಲದೆ, ಅಂಬೇಡ್ಕರರು ರಚಿಸಿದ ಸಂವಿಧಾನದಡಿಯಲ್ಲಿ ಎಲ್ಲರೂ ಬಾಯ್ಮುಚ್ಚಿಕೊಂಡು ಸಮಾನತೆಯ ಸೂತ್ರಕ್ಕೆ ತಕ್ಕಂತೆ ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಿಜಕ್ಕೂ ಸಂವಿಧಾನಕ್ಕೆ ಗೌರವ ದೊರೆಯುತ್ತಿರುವುದು ಈಗಲೇ.

ಆದರೂ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡೇ ಕುಳಿತುಕೊಳ್ಳುತ್ತೇವೆಂದು ಹಠ ಹಿಡಿದಿರುವ ಮತ್ತು ಅದನ್ನು ಬೆಂಬಲಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಅಯೋಗ್ಯರ ಧಾಷ್ಟರ್್ಯವನ್ನು ಮೆಚ್ಚಲೇಬೇಕು. ಮಾತಿನ ಭರದಲ್ಲಿ ‘ಶಾಲೆ-ಕಾಲೇಜುಗಳಲ್ಲಿ ಗಣೇಶನ ಪೂಜೆ ಮಾಡುವುದಿಲ್ಲವೇ? ಸರಸ್ವತಿಯ ಪೂಜೆ ಮಾಡುವುದಿಲ್ಲವೇ?’ ಎಂದೆಲ್ಲಾ ಪ್ರಶ್ನಿಸುತ್ತಾರೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಇವೆಲ್ಲವನ್ನೂ ತಮ್ಮಿಂದ ಒಪ್ಪಲಾಗದು ಎಂದೇ ಪ್ರತ್ಯೇಕ ರಾಷ್ಟ್ರ ಪಡೆದು ಹೊರಟವರಲ್ಲವೇ ಅವರು? ಆಗ ಹಿಂದೂಗಳ ದಯೆ, ಕಾರುಣ್ಯ, ಉದಾರತೆಯ ಲಾಭ ಪಡೆದು ಇಲ್ಲಿಯೇ ಉಳಿದು ಈಗ ತಮ್ಮ ಸಂಖ್ಯೆ ಹೆಚ್ಚಳವಾದೊಡನೆ ಮತ್ತೊಂದು ವಿಭಜನೆಯತ್ತ ದೇಶವನ್ನು ಕೊಂಡೊಯ್ಯುವ ರಾಜಕಾರಣದ ಬೀಜ ಬಿತ್ತುತ್ತಿದ್ದಾರಲ್ಲ, ಇವರನ್ನು ಕ್ಷಮಿಸುವುದಾದರೂ ಹೇಗೆ? ಈ ಇಡಿಯ ಪ್ರಕರಣದಲ್ಲಿ ಅನಾಥಶಿಶುವಾಗಿರುವುದು ಸ್ವತಃ ಕಾಂಗ್ರೆಸ್ಸು. ಮುಸಲ್ಮಾನರ ಪರವಾಗಿ ಎಲ್ಲ ವಿಚಾರಕ್ಕೂ ಧಾವಿಸಿ ಬರುತ್ತಿದ್ದ ಪಕ್ಷ ಈಗ ಪರಮಶಾಂತವಾಗಿಬಿಟ್ಟಿದೆ. ಕಳೆದ ಬಾರಿ ಹಿಂದೂ ವಿರೋಧ ಕಟ್ಟಿಕೊಂಡು ಅನುಭವಿಸಿದ ಹೊಡೆತವನ್ನು ಅದಿನ್ನೂ ಮರೆತಿಲ್ಲ. ಮತ್ತೊಂದೆಡೆ ಮುಸಲ್ಮಾನರ ಪಕ್ಷದಲ್ಲಿ ನಿಂತು ಬಲುಜೋರಾಗಿ ವಾದಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಸ್​ಡಿಪಿಐನ ಅಂಗ ಸಂಸ್ಥೆಯಾಗಿದ್ದು ಅದು ಬೆಳೆದಷ್ಟೂ ಕಾಂಗ್ರೆಸ್ಸಿಗೆ ಹೊಡೆತವೇ. ಸುಮ್ಮನಿದ್ದರೆ ಮುಸಲ್ಮಾನರ ವೋಟು ಕಳೆದುಕೊಳ್ಳುವ, ಮಾತನಾಡಿದರೆ ಹಿಂದೂಗಳಿಂದ ಹೊಡೆತ ತಿನ್ನುವ ದೈನೇಸಿ ಸ್ಥಿತಿ ಕಾಂಗ್ರೆಸ್ಸಿನದು! ಕಳೆದ 75 ವರ್ಷಗಳಲ್ಲಿ ತುಷ್ಟೀಕರಣದ ರಾಜಕಾರಣದ ಮೂಲಕವೇ ರಾಜಕೀಯ ಜೀವನ ರೂಪಿಸಿಕೊಂಡ ಕಾಂಗ್ರೆಸ್ಸಿಗರು ಭವಿಷ್ಯವನ್ನಂತೂ ಹಾಳುಮಾಡಿಕೊಂಡರು, ರಾಷ್ಟ್ರವನ್ನೂ ಕಟಕಟೆಯಲ್ಲಿ ತಂದು ನಿಲ್ಲಿಸಿದರು.

ಈ ಹಿನ್ನೆಲೆಯಲ್ಲಿಯೇ ಕೆಲವು ಭವಿಷ್ಯವಾಣಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿರುವೆ. 2002 ಎಂದಾಕ್ಷಣ ನಮಗೆಲ್ಲ ನೆನಪಾಗುವುದು ಗುಜರಾತ್ ದಂಗೆಗಳೇ. ಅದಕ್ಕೆ ಎಡಪಂಥೀಯರು, ಬುದ್ಧಿಜೀವಿಗಳು ಎಷ್ಟು ಪ್ರಚಾರ ಕೊಟ್ಟಿದ್ದಾರೆಂದರೆ ಕರಸೇವಕರ ಹತ್ಯೆಯನ್ನು ಮರೆತೇಹೋಗುವಷ್ಟು! ಆ ದಿನಗಳಲ್ಲಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಎಂಥದ್ದಿತ್ತೆಂದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿಬಿಡಬೇಕೆಂಬುದು ಬಿಜೆಪಿಯ ಒಳಗಿನವರದ್ದೇ ಇಚ್ಛೆಯಾಗಿತ್ತು. ಸ್ವತಃ ಅಟಲ್ ಬಿಹಾರಿ ವಾಜಪೇಯಿ ಈ ಪಕ್ಷದಲ್ಲಿದ್ದರು. ಆದರೆ ಆ ಹೊತ್ತಿನಲ್ಲಿ ಮೋದಿಯವರ ಸಹಾಯಕ್ಕೆ ಬಂದಿದ್ದು ಬಾಳಾಸಾಹೇಬ್ ಠಾಕ್ರೆ. ಅಡ್ವಾಣಿಯವರೊಂದಿಗೆ ಮಾತನಾಡಿ, ‘ನರೇಂದ್ರ ಮೋದಿ ಗುಜರಾತಿನ ಭವಿಷ್ಯ. ರಾಷ್ಟ್ರದ ಭವಿಷ್ಯ ಕೂಡ. ಅವರನ್ನು ಕಳೆದುಕೊಳ್ಳಲು ಬಿಡಬೇಡಿ’ ಎಂದು ಕಿವಿಮಾತು ಹೇಳಿದ್ದರು. ಅದು ಕೆಲಸ ಮಾಡಿತು ಕೂಡ. ಅಡ್ವಾಣಿಯವರು ಮೋದಿಯವರ ಬೆನ್ನಿಗೆ ಬಲವಾಗಿ ನಿಂತು ಅಧಿಕಾರದಿಂದ ಕೆಳಗಿಳಿಯದಂತೆ ನೋಡಿಕೊಂಡರು. ಮುಂದಿನದ್ದು ನಮಗೆಲ್ಲರಿಗೂ ಗೊತ್ತೇ ಇರುವಂಥದ್ದು. ಮೋದಿ ಮತ್ತೆ ಮತ್ತೆ ಗುಜರಾತಿನ ಮುಖ್ಯಮಂತ್ರಿಯಾದರು. ಎರಡೆರಡು ಬಾರಿ ದೇಶದ ಪ್ರಧಾನಮಂತ್ರಿಯಾದರು. ಈ ವಿಚಾರವನ್ನು ಸ್ವತಃ ಠಾಕ್ರೆಯವರೇ ಹಂಚಿಕೊಂಡಿದ್ದು 2009ರಲ್ಲಿ. ಮೋದಿ ಮುಖ್ಯಮಂತ್ರಿಯ ಜವಾಬ್ದಾರಿಯೊಂದಿಗೆ ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿಯನ್ನೂ ಹೊತ್ತಿದ್ದರು. ಪ್ರಮೋದ್ ಮಹಾಜನ್​ರ ಹತ್ಯೆಯಾಗಿದ್ದರಿಂದ ಚುನಾವಣೆಯನ್ನು ನಿರ್ವಹಿಸಬಲ್ಲ ಸಮರ್ಥ ಕೈಗಳ ಅಗತ್ಯವಿತ್ತು. ಆ ಜಾಗಕ್ಕೆ ಬಂದ ಮೋದಿ ಠಾಕ್ರೆಯವರ ಎದುರಿಗೆ ಹಿಂದೂ ಹೃದಯ ಸಾಮ್ರಾಟರಾಗಿ ಗುರುತಿಸಿಕೊಳ್ಳಲ್ಪಟ್ಟಿದ್ದರು. ಠಾಕ್ರೆ ತಡಮಾಡಲಿಲ್ಲ. 2002ರ ಈ ಘಟನೆಯನ್ನು ಪತ್ರಕರ್ತರ ಮುಂದೆಯೇ ಹಂಚಿಕೊಂಡು ಮೋದಿಯವರನ್ನು ಆಂತರಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದರು. ಆದರೆ ಅವರು ಹೇಳಿದ ಮಾತಂತೂ ನಿಜವೇ ಆಯ್ತು. ಮೋದಿ ಗುಜರಾತಿನ ಭವಿಷ್ಯವಾಗಿ ಬಲವಾಗಿ ನಿಂತರಷ್ಟೇ ಅಲ್ಲದೇ, ಭಾರತದ ಭವಿಷ್ಯವೂ ಆದರು. ಇಂದು ಹಿಂದೂಗಳ ಪರವಾಗಿ ಎಲ್ಲ ರಾಜಕಾರಣಿಗಳು ಮಾತನಾಡುತ್ತಿದ್ದಾರೆಂದರೆ ಅದರ ಹಿಂದಿರುವ ಶಕ್ತಿ ಮೋದಿಯೇ. ಇಲ್ಲವಾದರೆ ಇವರ ಚುನಾವಣಾ ಪ್ರಚಾರ ಭಾಷಣದಲ್ಲೂ ಮುಸ್ಲಿಂ ತುಷ್ಟೀಕರಣದ ಮಾತುಗಳಿಗೆ ಕೊರತೆಯೇನು ಇರುತ್ತಿರಲಿಲ್ಲ.

ಸಾವರ್ಕರ್ 1943ರಲ್ಲಿ ಸಿಂಧ್ ಪ್ರಾಂತದ ಚುನಾವಣೆಯ ವಿಚಾರಕ್ಕೆ ಕಾಂಗ್ರೆಸ್ಸಿನ ವಿರುದ್ಧ ಗುಡುಗಿದ್ದರು. ಅಲ್ಲಿ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್​ಗಳು ಒಟ್ಟಾಗುವ ಸಾಧ್ಯತೆ ಇದೆ ಎಂದು ಮಹಾಸಭಾ ಹಿಂದೂವಿರೋಧಿ ನೀತಿಯನ್ನು ತನ್ನದಾಗಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪುಕಾರು ಹಬ್ಬಿಸಿತ್ತು. ಈ ಮೂಲಕ ಹಿಂದೂ ಮಹಾಸಭಾಕ್ಕೆ ಬರಬಹುದಾಗಿದ್ದ ಹಿಂದೂಗಳ ವೋಟುಗಳನ್ನು ಕಸಿಯುವ ರಾಜಕಾರಣದ ಕಾಂಗ್ರೆಸ್​ನ ಎಂದಿನ ಶೈಲಿ ಅದು. ಕುಪಿತರಾದ ಸಾವರ್ಕರ್​ರು, ‘ಒಂದು ದಿನ ಇದೇ ಕಾಂಗ್ರೆಸ್ ನಾಯಕರು ಹಿಂದೂ ವಿಚಾರಧಾರೆಯನ್ನು ಜನಿವಾರ ಹಾಕಿಕೊಂಡು ಹರಡಬೇಕಾದ ಸ್ಥಿತಿ ಬರಲಿದೆ; ಜನಿವಾರವನ್ನು ದೇಹದ ಮೇಲಷ್ಟೇ ಅಲ್ಲ, ಅಗತ್ಯಬಿದ್ದರೆ ಕೋಟಿನ ಮೇಲೆ ಕೂಡ ಧರಿಸಿಬಿಡುತ್ತಾರೆ’ ಎಂದಿದ್ದರು. ಈ ಭವಿಷ್ಯವಾಣಿ ಎಷ್ಟರಮಟ್ಟಿಗೆ ನಿಜವಾಯ್ತೆಂದರೆ ಮೋದಿಗೂ ಮುನ್ನ ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳಲು ಹಿಂಜರಿಯುತ್ತಿದ್ದ, ಟೋಪಿ ಹಾಕಿಕೊಂಡು ಇಫ್ತಾರ್ ಕೂಟಗಳಿಗೆ ಧಾವಿಸುತ್ತಿದ್ದ, ಸೀರೆಯನ್ನು ಹಿಜಾಬ್​ನಂತೆ ಸುತ್ತಿಕೊಂಡು ನಮಾಜ್ ಮಾಡುವ ಶೈಲಿಯಲ್ಲಿ ಕೂರುತ್ತಿದ್ದ ರಾಜಕಾರಣಿಗಳು ಈಗ ಕಾಣುತ್ತಲೇ ಇಲ್ಲ. ಇದಕ್ಕೆ ವಿರುದ್ಧವಾಗಿ ಚುನಾವಣೆ ಬಂತೆಂದರೆ ಮಂದಿರಕ್ಕೆ ಓಡಿ, ಹಣೆತುಂಬ ವಿಭೂತಿ ಧರಿಸಿಕೊಂಡು ಪಾದಯಾತ್ರೆಗೂ ಮುನ್ನ ನದಿಗೆ ಪೂಜೆಮಾಡಿ, ಕ್ಯಾಮರಾದೆದುರು ಮೆಟ್ಟಿಲಿಗೆ ನಮಸ್ಕಾರ ಮಾಡುತ್ತ ಆಡಿಕೊಳ್ಳುವ ವಸ್ತುವಾಗಿಬಿಡುತ್ತಿದ್ದಾರೆ! ಧಾರ್ವಿುಕ ಆಚರಣೆಗಳು ಒಂದು ದಿನಕ್ಕೆ ಕಲಿತುಬಿಡುವಂಥದ್ದಲ್ಲ, ಅದು ನಿರಂತರ ಸಂಸ್ಕಾರದ ಫಲ. ಮೋದಿ ಮಂದಿರದಲ್ಲಿ ಮಾಡುವ ಆರತಿ, ಗಂಗೆಗೆ ನಮಸ್ಕರಿಸುವ ರೀತಿ ಎಂಥವನನ್ನೂ ಬೆರಗುಗೊಳಿಸುತ್ತದೆ. ಅದು ಅವರ ಬದುಕಿನ ಶೈಲಿಯೇ ಆಗಿಹೋಗಿರುವುದರಿಂದ ಯಾರಿಗೂ ಎಂದಿಗೂ ನಾಟಕವೆನಿಸದು. ಆದರೆ ವೋಟಿಗಾಗಿ ಈ ವಯಸ್ಸಿನಲ್ಲಿ ಇವೆಲ್ಲವನ್ನೂ ಕಲಿಯಬೇಕಾದ ಸ್ಥಿತಿ ನಿರ್ವಣವಾಯ್ತಲ್ಲ, ಕಾಂಗ್ರೆಸ್ಸಿಗರ ಪರಿಸ್ಥಿತಿ ಹೇಳಿ! ಸಾವರ್ಕರರ ಮಾತು ಎಷ್ಟು ನಿಜವಾಯ್ತಲ್ಲವೇ?

ಭವಿಷ್ಯವಾಣಿಗಳು ಇಷ್ಟಕ್ಕೇ ಮುಗಿಯಲಿಲ್ಲ. ಸುಮಾರು 55 ವರ್ಷಗಳ ಹಿಂದೆ ಸಂತ ಸ್ವಾಮಿ ಕರಪಾತ್ರಿಜಿ ಮಹಾರಾಜರು ತಮ್ಮ ಪ್ರಖರ ಹಿಂದುತ್ವದ ಇಡೀ ನಾಡನ್ನೇ ಚಿಂತನೆಗಳಿಂದ ತೋಯಿಸಿಬಿಟ್ಟಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ನಂತರ ಇಂದಿರಾಗಾಂಧಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಬಲುದೊಡ್ಡದ್ದು ಎಂದೂ ಕೆಲವರು ಹೇಳುತ್ತಾರೆ. ಪ್ರಖರ ಶಾಸ್ತ್ರಜ್ಞಾನದ ಅವರು ಹಿಂದೂ ವಿಚಾರಧಾರೆ ರಕ್ಷಣೆಗೆ ಕಂಕಣಬದ್ಧರಾಗಿದ್ದರು. ಅವರು 1966ರಲ್ಲಿ ಗೋಹತ್ಯಾ ನಿಷೇಧದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ರಾಷ್ಟ್ರದಾದ್ಯಂತ ಕಾನೂನು ತರುವಂತೆ ವಿನಂತಿಸಿದರು. ಆ ರೀತಿಯ ಇಚ್ಛೆ ತನಗಿಲ್ಲವೆಂದು ಸರ್ಕಾರ ಮುಲಾಜಿಲ್ಲದೇ ಹೇಳಿತು. ಮುಸಲ್ಮಾನರ ತುಷ್ಟೀಕರಣಕ್ಕೆ ನಿಂತ ಮಂದಿಗೆ ಅವರ ವೋಟುಗಳನ್ನು ಕಳೆದುಕೊಳ್ಳುವ ಇಚ್ಛೆ ಬರುವುದು ಹೇಗಾದರೂ ಸಾಧ್ಯವಾದೀತು ಹೇಳಿ? ಕರಪಾತ್ರಿ ಮಹಾರಾಜರು ಸಾಮಾನ್ಯದವರಲ್ಲ. ಸಾವಿರಾರು ಸಂತರನ್ನು ಒಟ್ಟುಗೂಡಿಸಿದರು ಮತ್ತು ನೇರವಾಗಿ ಸಂಸತ್ತಿಗೇ ಮುತ್ತಿಗೆ ಹಾಕಲೆಂದು ಹೋದರು. ಆಗ ಕೇಂದ್ರದಲ್ಲಿದ್ದದ್ದು ಇಂದಿರಾರದ್ದೇ ಸರ್ಕಾರ. ಗುಲ್ಜ್ಜಾರಿಲಾಲ್ ನಂದಾ ಗೃಹಮಂತ್ರಿ. ಬ್ಯಾರಿಕೇಡ್​ಗಳನ್ನು ಸಂಸತ್ತಿನ ಮುಂದಿರಿಸಿ ಯಾರೂ ಒಳನುಗ್ಗದಂತೆ ತಡೆಯುವ ಪ್ರಯತ್ನ ಮಾಡಲಾಗಿತ್ತು. ಆದರೂ ದನಕರುಗಳೊಂದಿಗೆ ಆಗಮಿಸಿದ ಸಂತರು ನುಗ್ಗಲಾರಂಭಿಸಿದರು. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದ ಗುಲ್ಜಾರಿಲಾಲ್ ನಂದಾರಿಗೆ ಮೇಲಿನಿಂದ ಆದೇಶ ದೊರೆಯಿತೋ ಪ್ರೇರಣೆಯಾಯಿತೋ ದೇವರೇ ಬಲ್ಲ. ಸಂಸತ್ತನ್ನು ಈ ಸಂತರು ಒಳಪ್ರವೇಶಿಸಬಹುದು ಎಂಬ ಭಯದಿಂದ ಗೋಲಿಬಾರ್ ನಡೆಸಲಾಯ್ತು. ಸಾವಿನ ಕುರಿತಂತೆ ಭಿನ್ನ-ಭಿನ್ನ ಲೆಕ್ಕಾಚಾರಗಳಿವೆಯಾದರೂ ಅನೇಕ ಸಾಧುಗಳು ತೀರಿಕೊಂಡದ್ದಂತೂ ಸತ್ಯ. ಸಾಧುಗಳ ಶವವನ್ನು ಅಲ್ಲಿಂದ ತೆಗೆಯುತ್ತಾ ಕಣ್ಣೀರಿನಲ್ಲಿ ತೋಯ್ದುಹೋಗಿದ್ದ ಕರಪಾತ್ರಿ ಮಹಾರಾಜರು ಆಕ್ರೋಶದ ದನಿಯಲ್ಲಿ ಗುಡುಗಿದ್ದರು, ‘ಹಿಮಾಲಯದಲ್ಲಿ ಸಾಧುವಾಗಿರುವ ವ್ಯಕ್ತಿಯೊಬ್ಬ ಆಧುನಿಕ ಪೋಷಾಕುಗಳೊಂದಿಗೆ ಸಂಸತ್ತನ್ನು ಪ್ರವೇಶಿಸಿ ನಿಮ್ಮನ್ನು ಸಮೂಲನಾಶ ಮಾಡುತ್ತಾನೆ. ಬ್ರಾಹ್ಮಣನೊಬ್ಬನ ಶಾಪ ವ್ಯರ್ಥವಾಗಿ ಹೋಗುವುದಿಲ್ಲ. ಸಂತರ ಕಣ್ಣೀರಿಗೆ ನೀವು ಬೆಲೆ ತೆರಲೇಬೇಕಾಗುತ್ತದೆ’ ಎಂದು! ಈಗ ಹಿಮಾಲಯದ ಸಾಧು ಬಂದು ಕುಳಿತೇಬಿಟ್ಟಿದ್ದಾನೋ ಅಥವಾ ಇನ್ನೂ ಬರುವವನಿದ್ದಾನೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ಸಿನ ಗತಿ ಮಾತ್ರ ಅಧೋಮುಖವಾಗಿಯೇ ನಡೆದಿದೆ. ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶವನ್ನು ಗೆದ್ದವರು ರಾಷ್ಟ್ರವನ್ನಾಳುತ್ತಾರೆ ಎಂಬೆಲ್ಲ ಮಾತಿದೆ. ಬಂಗಾಳದಲ್ಲಿ ಬಿಜೆಪಿ ಮೂರಂಕಿ ದಾಟುವುದಿಲ್ಲ ಎಂದು ಸಂಭ್ರಮಿಸುತ್ತಿದ್ದ ಕಾಂಗ್ರೆಸ್ಸಿಗರು ಉತ್ತರ ಪ್ರದೇಶದಲ್ಲಿ ಎರಡಂಕಿ ಮುಟ್ಟುವುದೂ ಕಷ್ಟವೆಂದಾಗಿಬಿಟ್ಟಿದೆ. ಅವರ ಹೋರಾಟ ಹೆಚ್ಚು-ಕಡಿಮೆ ಸತ್ತೇಹೋಗಿದೆ. ಗೋವಾದಲ್ಲಿ ಸ್ವಲ್ಪ ಉಸಿರಾಡುತ್ತಿದ್ದೇವೆ ಎಂದು ಸಂಭ್ರಮಿಸಬೇಕಷ್ಟೇ. ನಾಯಕತ್ವಕ್ಕೆ ಎದುರಾಗುತ್ತಿರುವ ಸವಾಲುಗಳು, ಆಂತರಿಕ ಬೇಗುದಿ ಬಗೆಹರಿಸುವಲ್ಲಿ ಹೆಣಗಾಡುತ್ತಿರುವ ಪರಿ, ಇವೆಲ್ಲವನ್ನೂ ನೋಡಿದರೆ ಕರಪಾತ್ರಿ ಮಹಾರಾಜರ ಭವಿಷ್ಯವಾಣಿ ನಿಜವಾಗುತ್ತಿದೆಯೇನೋ ಎನಿಸುತ್ತಿದೆ! ಇಷ್ಟೇ ಅಲ್ಲ, ಈ ದೇಶ ಒಂದು ದಿನ ಕಾಂಗ್ರೆಸ್​ವುುಕ್ತವಾಗಲಿದೆ ಎಂಬ ಭವಿಷ್ಯವಾಣಿಯೂ ಇತ್ತು ಮತ್ತು ಆ ಭವಿಷ್ಯವಾಣಿಯನ್ನು ಕೋಟ್ಯಂತರ ಜನರ ಮುಂದೆ ಪುನರುಚ್ಚರಿಸಿದ್ದು ಸ್ವತಃ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ. ಎಂದಿಗೋ ಮುಗಿಯಬೇಕಾಗಿದ್ದ ಕಾಂಗ್ರೆಸ್ಸು ಪ್ರತೀಬಾರಿಯೂ ಹೊಸ ಹೊಸ ರೂಪಧಾರಣೆ ಮಾಡುತ್ತಾ ಭಿನ್ನ-ಭಿನ್ನ ವೇಷ ಧರಿಸುತ್ತ ಉಳಿದುಕೊಂಡು ಬಂದುಬಿಟ್ಟಿತು. ಸಂಸತ್ತಿನಲ್ಲಿ ರಾಹುಲ್ ಮಾತನಾಡಿದ ಪರಿ ನೋಡಿದರೆ ಅದರ ಇಂದಿನ ದೈನೇಸಿಸ್ಥಿತಿ ಅರಿವಾಗುತ್ತದೆ.

ಅಲ್ಲದೇ ಮತ್ತೇನು? ಹಿಂದೂಗಳ ವೋಟಿಗಾಗಿ ಕಾಂಗ್ರೆಸ್ ನಾಯಕರು ಅಷ್ಟೆಲ್ಲ ಸಾಹಸ ಮಾಡುತ್ತಿರುವಾಗ, ಕೇಸರಿ ಪೇಟ ತೊಡಿಸಲು ಬಂದ ಉತ್ತರ ಕರ್ನಾಟಕದ ಯಜಮಾನರನ್ನು ಕೆಂಗಣ್ಣಿನಿಂದ ನೋಡಿ ಆ ಪೇಟವನ್ನು ಬಿಸಾಡಿದ ಸಿದ್ದರಾಮಯ್ಯನವರು ಒಳಗಿದ್ದುಕೊಂಡೇ ಬಲವಾದ ಪೆಟ್ಟು ಕೊಡಬಲ್ಲ ಸಮರ್ಥರು! ಕಾಂಗ್ರೆಸ್ಸಿಗೆ ಮಿತ್ರರು, ಶತ್ರುಗಳ ನಡುವೆ ಅಂತರವೇ ಅರಿವಾಗದಂತಹ ಸ್ಥಿತಿ. ಸಿಧುವನ್ನು ನಂಬಿಕೊಂಡು ಕ್ಯಾಪ್ಟನ್ ಅಮರಿಂದರ್ ಸಿಂಗರನ್ನು ಹೊರದಬ್ಬಿದರು. ಈಗ ಅದೇ ಸಿಧು ಒಳಗಿದ್ದುಕೊಂಡೇ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ಕ್ಯಾಪ್ಟನ್ ಸಾಹೇಬರು ಪಂಜಾಬ್​ನಲ್ಲಿ ಸತ್ತೇಹೋಗಿದ್ದ ಬಿಜೆಪಿಗೆ ಮರುಜೀವ ತುಂಬುತ್ತಿದ್ದಾರೆ. ಇವೆಲ್ಲದರ ನಡುವೆ ಕಟ್ಟರ್ ಮುಸಲ್ಮಾನರು ದಾರಿ ತಪ್ಪಿದಂತಾಗಿಬಿಟ್ಟಿದ್ದಾರೆ. ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ಪರಿಸ್ಥಿತಿ ಗಂಭೀರವಾಗಲಿದೆ ಎಂಬುದು ಅವರಿಗೆ ಗೊತ್ತೇ ಇದೆ. ಸೌದಿ ಅರೇಬಿಯಾ ಕಟ್ಟರ್ ಆಲೋಚನೆಯಿಂದ ಹೊರಬರಲು ಯತ್ನಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಅದಾಗಲೇ ಬುರ್ಖಾ, ಹಿಜಾಬ್​ಗಳ ವಿರುದ್ಧ ತಾಲಿಬಾನಿಗಳ ವಿರುದ್ಧವೇ ಪ್ರತಿಭಟಿಸುತ್ತಿದ್ದಾರೆ. ಆದರೆ ಇಲ್ಲಿ ಮಾತ್ರ ಇವರು ಮಹಿಳೆಯರನ್ನು ಮಧ್ಯಯುಗಕ್ಕೆ ಕೊಂಡೊಯ್ಯುವ ಹರಸಾಹಸ ಮಾಡುತ್ತಿದ್ದಾರೆ. ಇದು ಸುದೀರ್ಘಕಾಲ ನಡೆಯದು ಎಂಬುದು ಅವರಿಗೆ ಅರಿವಾಗಬೇಕಿದೆ ಅಷ್ಟೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net