ನಿಧಿ ಸಂಗ್ರಹಿಸಿ, ಮಜಾ ಮಾಡುವ ಬುದ್ಧಿಜೀವಿಗಳು!

Rana Ayub
Published on
ಕಾಂಗ್ರೆಸ್ಸು ಮತ್ತು ಎಡಪಂಥೀಯರ ಮೋದಿ ವಿರೋಧಿ ಕೂಗಿಗೆ ದನಿಯಾದ ರಾಣಾ ಅಯೂಬ್, ಪಿಎಮ್ೇರ್ಸ್​ಗೆ ಹಣ ಏಕೆ ಕೊಡಬೇಕು? ಅದಕ್ಕೆ ಲೆಕ್ಕವಿಲ್ಲ, ಎಲ್ಲಿ ಖರ್ಚು ಮಾಡಿದರು ಕೇಳುವವರಿಲ್ಲ ಎಂದೆಲ್ಲ ಬೀಡುಬೀಸಾಗಿಯೇ ಮಾತಾಡಿದ್ದರು. ಗಾಜಿನ ಮನೆಯಲ್ಲಿ ಕುಳಿತು ಕಲ್ಲಿನ ಕೋಟೆಯ ಮೇಲೆ ಕಲ್ಲೆಸೆಯುವ ಅವರ ತಾಕತ್ತನ್ನು ಮೆಚ್ಚಲೇಬೇಕಿತ್ತು ಬಿಡಿ!

ಹರ್ಷನ ಸಾವಿಗೆ ದೇಶದಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚು ಹಿಂದೂ ಐಕ್ಯತೆ ಕಂಡುಬರುತ್ತಿದೆ. ಹಿಂದೂಗಳು ಒಗ್ಗಟ್ಟಾಗುವುದಿಲ್ಲ, ಜಾತಿ-ಜಾತಿಯಲ್ಲಿ ವಿಭಜಿತಗೊಳ್ಳುತ್ತಾರೆ, ಭಾಷೆ, ಗಡಿಗಳ ಹೆಸರಲ್ಲಿ ಕಾದಾಡುತ್ತಾರೆ ಎಂದೆಲ್ಲ ಆರೋಪಗಳು ಬಹುಕಾಲದಿಂದ ಇದ್ದದ್ದೇ. ಹರ್ಷ ತನ್ನ ಸಾವಿನಿಂದ ದೇಶದ ಹಿಂದೂಗಳನ್ನೆಲ್ಲ ವಿಭಿನ್ನ ರೂಪದಲ್ಲಿ ಒಗ್ಗೂಡಿಸಿಬಿಟ್ಟ. ಹರ್ಷನ ಮನೆಗೆ ಸಾಮಾಜಿಕ ಕಾರ್ಯಕರ್ತರು ಬಂದರು, ರಾಜಕೀಯ ಧುರೀಣರು ಬಂದರು, ಕೊನೆಗೆ ಒಂದೆರಡು ದಿನ ಕಾದು ಮಠಾಧೀಶರು ಒಬ್ಬರಾದ ಮೇಲೊಬ್ಬರು ಧಾವಿಸಿ ಬರಲಾರಂಭಿಸಿದರು. ಈ ಸಾವಿನೊಂದಿಗೆ ತಾವು ಇರಬೇಕೋ ಬೇಡವೋ ಎಂದು ಇತರ ಸಂತರು ಚಿಂತೆಗೆ ಬಿದ್ದಂತಿತ್ತು. ಆದರೆ ಯಾವಾಗ ಇಡಿಯ ಹಿಂದೂ ಸಮಾಜ ಹರ್ಷನ ಪರವಾಗಿ ನಿಂತಿದೆ; ಇಡಿಯ ದೇಶ ಹರ್ಷನ ಸಾವಿಗೆ ಮರುಗುತ್ತಿದೆ ಎಂದರಿವಾಯ್ತೋ ಚಿತ್ರಣ ಬದಲಾಗಿಹೋಯ್ತು. ಒಬ್ಬೊಬ್ಬರಾಗಿ ಮಠಾಧೀಶರು ಹರ್ಷನ ತಾಯಿಯನ್ನು ಸಮಾಧಾನಗೊಳಿಸಲು ಬಂದಿದ್ದು ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಿತ್ತು. ಕೊಲೆಗಡುಕರನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಪ್ರತಿಪಕ್ಷಗಳು ಅನಿವಾರ್ಯವಾಗಿ ತೆಪ್ಪಗಾದವು. ದೂರದ ದೆಹಲಿಯಿಂದ ಹಿಡಿದು ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾದವರೆಗೂ ಎಲ್ಲೆಡೆ ಹರ್ಷನ ಸಾವಿಗೆ ಮರುಗಿದ ಜನತೆ ಬೀದಿಗಿಳಿದು ಬಲವಾದ ಪ್ರತಿಭಟನೆ ನಡೆಸಿದರು.

ಆ ಆಕ್ರೋಶದ ಭಾಗವಾಗಿಯೇ ಹರ್ಷನ ಸಾವಿಗೂ ಪ್ರತಿಕ್ರಿಯೆ ಒದಗಿದ್ದು. ಮಹೇಶ್ ವಿಕ್ರಂ ಹೆಗ್ಡೆ ತನ್ನ ಪೋಸ್ಟ್​ಕಾರ್ಡ್ ಮೂಲಕ ನಿಧಿಸಂಗ್ರಹ ಆರಂಭಿಸಿದಾಗ ಕೆಲವು ಲಕ್ಷಗಳಷ್ಟು ಒಟ್ಟಾಗಬಹುದೇನೋ ಎಂದುಕೊಂಡಿದ್ದರು ಎಲ್ಲರೂ. ಈಗ ಈ ಮೊತ್ತ ಕನಿಷ್ಠ ಒಂದು ಕೋಟಿ ರೂಪಾಯಿ ದಾಟಿದೆ. ಬಹುಶಃ ಪುಂಡರೊಂದಿಗೆ ಕಾದಾಟ ಮಾಡುವ ಪ್ರತಿಯೊಬ್ಬ ಹಿಂದೂ ತರುಣನಿಗೂ ತನ್ನ ಸಾವಿನೊಂದಿಗೆ ತನ್ನ ಮನೆ ಅನಾಥವಾಗಲಾರದು ಎಂಬ ಶ್ರದ್ಧೆಯ ಭಾವನೆಯೇ ಹೆಚ್ಚಿನ ಶಕ್ತಿ ಕೊಡಬಲ್ಲದು. ಆದರೆ ವಾಸ್ತವವಾಗಿ ಇಲ್ಲಿ ಉಲ್ಲೇಖ ಮಾಡಬೇಕೆಂದಿರುವ ಸಂಗತಿಯೇ ಬೇರೆ. ಹರ್ಷನಿಗೆಂದು ಹಣ ಸಂಗ್ರಹಿಸಲು ಯೋಜನೆ ರೂಪಿಸಿದವರೆಲ್ಲ ಆತನ ತಾಯಿಯ ಅಕೌಂಟ್ ನಂಬರನ್ನೇ ಕೊಟ್ಟು ಅದಕ್ಕೇ ಹಣ ಹಾಕುವಂತೆ ಕೇಳಿಕೊಂಡರು. ಜನ್​ಧನ್ ಅಕೌಂಟಿನಿಂದ ಅದನ್ನು ಸಾಮಾನ್ಯ ಅಕೌಂಟಿಗೆ ವರ್ಗಾಯಿಸಿ ಹಣ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿರುವಾಗ ನಾನು ಹರ್ಷನ ಮನೆಯಲ್ಲಿಯೇ ಇದ್ದದ್ದು ನೆನಪಿದೆ. ಇದು ಅತ್ಯಂತ ಪಾರದರ್ಶಕವಾದ ನಿಧಿ ಸಂಗ್ರಹ ವ್ಯವಸ್ಥೆ. ಹಿಂದೊಮ್ಮೆ ಕಥುವಾದಲ್ಲಿ ಹೆಣ್ಣುಮಗಳೊಬ್ಬಳ ಅತ್ಯಾಚಾರ ಮತ್ತು ಸಾವಿನ ಘಟನೆಯಾದದ್ದನ್ನು ನೆನಪಿಸಿಕೊಳ್ಳಿ. ಆ ಹೆಣ್ಣುಮಗಳು ಹತ್ಯೆಯಾದ ಹೊತ್ತಲ್ಲೇ ಆಕೆಯ ಪರಿವಾರದ ಹಿತಾಸಕ್ತಿಯ ರಕ್ಷಣೆಗೆಂದು ಶೆಹ್ಲಾ ರಶೀದ್ ಎಂಬ ಜೆಎನ್​ಯುುವಿನ ಶಾಶ್ವತ ವಿದ್ಯಾರ್ಥಿನಿ ಹಣ ಸಂಗ್ರಹ ಶುರುಮಾಡಿದ್ದಳು. ಕೋಟ್ಯಂತರ ರೂಪಾಯಿ ಹಣ ಸಂಗ್ರಹವಾಗಿದೆ ಎಂಬ ಕೂಗು ಕೇಳಿಬಂತು. ಕೆಲವು ಲಕ್ಷಗಳನ್ನು ಶೆಹ್ಲಾ ರಶೀದ್ ಪೀಡಿತರ ಅಕೌಂಟಿಗೆ ವರ್ಗಾಯಿಸಿದ್ದೂ ಕಂಡುಬಂತು. ಆದರೆ ಬಹುಪಾಲು ಹಣ ನಾಪತ್ತೆಯಾಗಿತ್ತು. ‘ನನಗೇ ಅರಿವಿಲ್ಲದಂತೆ ನನ್ನ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿಯನ್ನು ಪಡೆದು ಕೇವಲ 35,000 ರೂಪಾಯಿ ಉಳಿಸಿದ್ದಾರೆ’ ಎಂದು ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ ಕೆಲವು ದಿನಗಳಲ್ಲೇ ಆರೋಪ ಮಾಡಿದ್ದಲ್ಲದೆ ಪೂರಕವಾಗಿ ಪಾಸ್​ಬುಕ್ ಅನ್ನೂ ಮುಂದಿರಿಸಿದ್ದರು! ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಶೆಹ್ಲಾ ರಶೀದ್ ತನ್ನ ಟ್ವಿಟರ್ ಅಕೌಂಟನ್ನೇ ತೆಗೆದು ಹಾಕಿ ಮಂಗಮಾಯವಾಗಿಬಿಟ್ಟಿದ್ದರು. ಎಡಪಂಥೀಯ ಬುದ್ಧಿಜೀವಿಗಳೆನಿಸಿಕೊಂಡವರು ಈ ರೀತಿ ಹಲವು ಬಾರಿ ಸಮಾಜದ ಹಣವನ್ನು ನುಂಗಿ ನೀರುಕುಡಿಯುವ ಕೆಲಸ ಮಾಡಿದ್ದಾರೆ. ಎಷ್ಟಾದರೂ ಕರ್ಮ ಸಿದ್ಧಾಂತದ ಬಗ್ಗೆ ನಂಬಿಕೆ ಇಲ್ಲದವರಲ್ಲವೇ? ದುಡ್ಡು ಯಾರಪ್ಪನದಾದರೇನು? ತಿಂದುಂಡು ಮಜಾ ಮಾಡಿದರಾಯ್ತು ಎಂಬುದಷ್ಟೇ ಅವರ ಉದ್ದೇಶ. ಇದೇ ಆಧಾರದ ಮೇಲೆ ಮೋಸಗಾರರ ಪಟ್ಟಿಗೆ ಹೊಸ ಸೇರ್ಪಡೆ ರಾಣಾ ಅಯೂಬ್!

ಸಾಧಾರಣವಾಗಿ ರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಅನುಸರಿಸುವವರಿಗೆ ರಾಣಾ ಅಯೂಬ್ ಗೊತ್ತಿರಲೇಬೇಕು. ಕಂಠಮಟ್ಟದವರೆಗೆ ಮೋದಿಯವರ ಕುರಿತಂತೆ ಆಕ್ರೋಶ ತುಂಬಿಕೊಂಡಿರುವ, ರಾಷ್ಟ್ರೀಯತೆಯನ್ನೇ ಉಸಿರಾಡುವ ಪ್ರತಿಯೊಬ್ಬರ ಮೇಲೂ ವಿಷಕಾರುವ ಮಹಿಳೆ ರಾಣಾ ಅಯೂಬ್. ಕರೊನಾದ ಸಂದರ್ಭ ಇಂಥವರಿಗೆ ಹಬ್ಬವಾಗಿಬಿಟ್ಟಿತ್ತು. ಜನರ ಬವಣೆಯನ್ನು ಬಂಡವಾಳವಾಗಿಸಿಕೊಂಡು ಮೋದಿಯನ್ನು ವಿರೋಧಿಸುವ ಸಿರಿವಂತರನ್ನು ತನ್ನ ಗಾಳಕ್ಕೆ ಸಿಕ್ಕಿಸಿಕೊಳ್ಳುವ ಇಂಥವರ ಪ್ರಯತ್ನಕ್ಕೆ ಶಕ್ತಿ ಬಂದಿದ್ದು ಆಗಲೇ. ಮೋದಿಯನ್ನು ಪ್ರೀತಿಸುವವರೆಲ್ಲ ನೇರವಾಗಿ ತಾವೇ ಜನರ ಸಹಾಯಕ್ಕೆ ಧುಮುಕಿದ್ದರು ಅಥವಾ ಮೋದಿಯವರ ನೇತೃತ್ವದಲ್ಲಿ ಸೇವಾಕಾರ್ಯ ಮಾಡುವ ಪಿಎಮ್ ಕೇರ್ಸ್​ಗೆ ದಾನ ಕೊಟ್ಟಿದ್ದರು. ವಿದೇಶಗಳಲ್ಲಿದ್ದು ನೇರ ಸಹಾಯ ಮಾಡಲಾಗದ, ಮೋದಿಯ ಕುರಿತಂತೆ ದ್ವೇಷವನ್ನು ಹೊಂದಿರುವ ಮಂದಿ ರಾಣಾ ಅಯೂಬ್​ರಂಥವರ ಖೆಡ್ಡಾಕ್ಕೆ ಬಿದ್ದರು. 2020ರ ಏಪ್ರಿಲ್-ಮೇ ತಿಂಗಳಲ್ಲಿ ಮೊದಲ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ ರಾಣಾ ಸ್ಲಂನಲ್ಲಿ ವಾಸಿಸುವಂಥವರಿಗೆ ಮತ್ತು ರೈತರಿಗಾಗಿ ತಾನು ಸೇವಾಕಾರ್ಯ ಮಾಡಬೇಕೆಂದಿದ್ದೇನೆ ಎಂದು ಹೇಳಿಕೊಂಡಿದ್ದರು. ಅಭಿಯಾನ ಆರಂಭವಾದ ಎಂಟೇ ದಿನದಲ್ಲಿ 2500 ಕುಟುಂಬಗಳಿಗೆ ಪರಿಹಾರ ಸಾಮಗ್ರಿ ಕೊಟ್ಟಿರುವ ಕುರಿತಂತೆ ಆಕೆ ಟ್ವೀಟ್ ಮಾಡಿದ್ದರು. ಮುಂದಿನ 15 ದಿನಗಳಲ್ಲಿ ಈ ಸಂಖ್ಯೆ 23 ಸಾವಿರ ದಾಟಿತ್ತಲ್ಲದೆ ವಲಸೆ ಕಾರ್ವಿುಕರಿಗೆ, ಆದಿವಾಸಿಗಳಿಗೆ ಸಹಾಯ ಮಾಡಿದ್ದೇನೆಂದು ಹೇಳಿಕೊಂಡರು. ಒಟ್ಟಾರೆ ಈ ಅಭಿಯಾನದಲ್ಲಿ ರಾಣಾ ಸಂಗ್ರಹಿಸಿದ್ದು ಸುಮಾರು ಒಂದೂಕಾಲು ಕೋಟಿ, ಬರೋಬ್ಬರಿ 125 ಲಕ್ಷ! ಇದರಲ್ಲಿ 50 ಲಕ್ಷ ರೂಪಾಯಿಯನ್ನು ತನ್ನ ತಂದೆ ಹೆಸರಿನಲ್ಲಿ ಫಿಕ್ಸ್ ್ಡ ಡೆಪಾಸಿಟ್ ಆಗಿ ಇಟ್ಟರು. ನಿಧಿಯಲ್ಲಿ ಬಳಸದೇ ಉಳಿದಿದ್ದ ಹಣ 57 ಲಕ್ಷದಷ್ಟಿತ್ತು. ಹಾಗಿದ್ದ ಮೇಲೆ ಟ್ವೀಟ್​ಗಳಲ್ಲಿ ಹೇಳಿಕೊಂಡಿದ್ದಂತೆ ಸಾವಿರಾರು ಮಂದಿಗೆ ಸಹಾಯ ಮಾಡಿದ ಹಣ ಎಲ್ಲಿಂದ ಬಂತು? ಜೂನ್ ತಿಂಗಳಲ್ಲಿ ನಿಧಿ ಸಂಗ್ರಹಕ್ಕೆ ಎರಡನೇ ಅಭಿಯಾನ ಆರಂಭಿಸಿದರು. ಮೊದಲ ಅಭಿಯಾನದ ಹೊತ್ತಲ್ಲಿ ಬಂದ ಲಕ್ಷಾಂತರ ರೂಪಾಯಿ ಮತ್ತು ಯಾರೂ ಲೆಕ್ಕ ಕೇಳುತ್ತಿಲ್ಲವೆಂಬ ವಿಶ್ವಾಸ ರಾಣಾರ ಮನ ಕೆಡಿಸಿರಲು ಸಾಕು. ಈ ಬಾರಿ ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಪರಿಹಾರ ಕಾರ್ಯಕ್ಕೆ ಹಣ ಬೇಕೆಂಬುದು ಅವರ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಪೀಠಿಕೆಯಾಗಿ ಮಾಡಿದ ಟ್ವೀಟ್​ನಲ್ಲಿ 70 ಸಾವಿರ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿರುವುದಾಗಿಯೂ 10 ಸಾವಿರ ವಲಸೆ ಕಾರ್ವಿುಕರನ್ನು ಮನೆಗೆ ತಲುಪಿಸಿರುವುದಾಗಿಯೂ ಹೇಳಿಕೊಂಡರು. ಅಷ್ಟೇ ಅಲ್ಲ, ಎಂಟು ಟನ್​ಗಳಷ್ಟು ಆಹಾರ, 80 ಸಾವಿರ ಲೀಟರ್ ಹಾಲು, 50 ಸಾವಿರ ಲೀಟರ್ ಎಣ್ಣೆ, 50 ಸಾವಿರ ಕೇಜಿ ಧಾನ್ಯ ಹಂಚಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡರು. ಆದರೆ ಮೊದಲನೇ ಅಭಿಯಾನ ಮುಗಿಯುವಾಗ ಅವರು ಹೇಳಿದ ಸಂಖ್ಯೆಗೂ ಈಗ ಹೇಳುತ್ತಿರುವ ಸಂಖ್ಯೆಗೂ ಅಜಗಜಾಂತರವಿತ್ತು. ಅವರನ್ನು ಹತ್ತಿರದಿಂದ ಅನುಸರಿಸುತ್ತಿದ್ದ ಕೆಲವರಿಗೆ ಅನುಮಾನ ಶುರುವಾಗಿದ್ದು ಆಗಲೇ. ರಾಣಾ ಹೇಳಿರುವ ಲೆಕ್ಕಾಚಾರದ ಪ್ರಕಾರ 10 ಸಾವಿರ ಕಾರ್ವಿುಕರನ್ನು ಅವರವರ ಮನೆಗೆ ತಲುಪಿಸಲು ಕನಿಷ್ಠ 35 ಲಕ್ಷ ರೂ. ಬೇಕಿತ್ತು. 15 ಸಾವಿರ ಕುಟುಂಬಗಳನ್ನು ಧನಸಹಾಯದ ಮೂಲಕ ಸಾಕಲು ನಾಲ್ಕೂವರೆ ಕೋಟಿಯಾದರೂ ಬೇಕಿತ್ತು. ಇನ್ನು ಅಕ್ಕಿ, ಬೇಳೆ, ಹಾಲು ಇತ್ಯಾದಿಗಳಿಗಾಗಿ ಕನಿಷ್ಠ ಒಂದೂವರೆ ಕೋಟಿ ಅಗತ್ಯವಿತ್ತು. ಆದರೆ ಅವರು ಸಂಗ್ರಹಿಸಿದ್ದು ಒಂದೂಕಾಲು ಕೋಟಿ ಮಾತ್ರ. ಲೆಕ್ಕ ಸರಿ ಹೊಂದುತ್ತಿರಲಿಲ್ಲ. ಆದರೆ ರಾಣಾರ ಹಳಿಯಿಲ್ಲದ ರೈಲು ಮಾತ್ರ ಧಾವಿಸುತ್ತಲೇ ಇತ್ತು. ಈ ಅಭಿಯಾನದಲ್ಲೂ ರಾಣಾಗೆ ಲಕ್ಷಾಂತರ ರೂಪಾಯಿ ಹರಿದುಬಂತು. ವೈಯಕ್ತಿಕ ಖರ್ಚುಗಳಿಗೆ ಈ ಹಣವನ್ನು ರಾಣಾ ಮನಸೋ ಇಚ್ಛೆ ಬಳಸಿದರು. 2021ರ ಮಧ್ಯಭಾಗದಲ್ಲಿ ಕೋವಿಡ್ ಪೀಡಿತರಿಗಾಗಿ ಸಹಕಾರ ಮಾಡುವ ನೆಪದಲ್ಲಿ ಮತ್ತೊಂದು ಅಭಿಯಾನ ಆರಂಭಿಸಿದರು. ಮೂರು ಅಭಿಯಾನಗಳಿಂದ ಸುಮಾರು ಎರಡು ಮುಕ್ಕಾಲು ಕೋಟಿಯಷ್ಟು ಹಣ ಸಂಗ್ರಹಿಸಿದ್ದರು. ಈ ಹೊತ್ತಿನಲ್ಲಿಯೇ ರಾಣಾ ಅಯೂಬ್ ಕಾಂಗ್ರೆಸ್ಸು ಮತ್ತು ಎಡಪಂಥೀಯರ ಮೋದಿ ವಿರೋಧಿ ಕೂಗಿಗೆ ದನಿಯಾಗಿದ್ದು. ಪಿಎಮ್ೇರ್ಸ್​ಗೆ ಹಣ ಏಕೆ ಕೊಡಬೇಕು? ಅದಕ್ಕೆ ಲೆಕ್ಕವಿಲ್ಲ, ಎಲ್ಲಿ ಖರ್ಚು ಮಾಡಿದರು ಕೇಳುವವರಿಲ್ಲ ಎಂದೆಲ್ಲ ರಾಣಾ ಬೀಡುಬೀಸಾಗಿಯೇ ಮಾತಾಡಿದ್ದರು. ಗಾಜಿನ ಮನೆಯಲ್ಲಿ ಕುಳಿತು ಕಲ್ಲಿನ ಕೋಟೆಯ ಮೇಲೆ ಕಲ್ಲೆಸೆಯುವ ಅವರ ತಾಕತ್ತನ್ನು ಮೆಚ್ಚಲೇಬೇಕಿತ್ತು ಬಿಡಿ!

ಇಷ್ಟರ ವೇಳೆಗೆ ಅವರು ನೀಡಿದ ವರದಿಗಳಲ್ಲಿ ಹೇರಾ-ಫೇರಿ ಗಮನಿಸಿದ ಕೆಲವರು ನೇರವಾಗಿ ಇಡಿಗೆ ಪತ್ರ ಬರೆದರು. ತಕ್ಷಣ ಇಡಿ ರಾಣಾ ಅಯೂಬ್ ಹಣ ಸಂಗ್ರಹಿಸಲು ಬಳಸಿದ ‘ಕೆಟ್ಟೊ’ ಎಂಬ ವೇದಿಕೆಗೆ ಪತ್ರ ಬರೆದು ವಿವರಣೆ ಕೇಳಿತು. ಫೌಂಡೇಶನ್​ನ ಮುಖ್ಯಸ್ಥ ವರುಣ್ ಸೇಠ್ ಉತ್ತರಿಸಿ ಸಂಗ್ರಹಗೊಂಡ ಎರಡುಮುಕ್ಕಾಲು ಕೋಟಿಯಲ್ಲಿ ಒಂದೂಕಾಲು ಕೋಟಿ ಖರ್ಚಾಗಿದ್ದು 90 ಲಕ್ಷ ತೆರಿಗೆಯನ್ನು ಕಟ್ಟಿ, 50 ಲಕ್ಷ ಉಳಿಸಿಕೊಂಡಿರುವುದಾಗಿ ರಾಣಾ ಕೊಟ್ಟಿರುವ ಮಾಹಿತಿಪತ್ರದ ಆಧಾರದ ಮೇಲೆ ಹೇಳಿದರು. ರಾಣಾ ಈ ಹಣವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಲ್ಲದೆ ಸಂಬಂಧಿಗಳಾದ ಮೊಹಮ್ಮದ್ ವಾಕಿಫ್ ಮತ್ತು ಇಫಾತ್ ಶೇಖ್ ಖಾತೆಗೂ ವರ್ಗಾಯಿಸಿದ್ದರು. ಈ ಬಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ಮುಖ ಉಳಿಸಿಕೊಳ್ಳಲು ರಾಣಾ ದೊಡ್ಡಮೊತ್ತವನ್ನು ಪಿಎಮ್ೇರ್ಸ್​ಗೆ ವರ್ಗಾಯಿಸಿಬಿಟ್ಟರು. ಯಾವುದಕ್ಕೆ ಲೆಕ್ಕವಿಲ್ಲ, ಯಾರೂ ದಾನ ಮಾಡಬಾರದು ಎಂದೆಲ್ಲ ಬಡಬಡಾಯಿಸುತ್ತಿದ್ದರೋ ಅದೇ ಪಿಎಮ್ೇರ್ಸ್​ಗೆ ಅವರು ಜನರಿಂದ ಸಂಗ್ರಹಿಸಿದ ಹಣವನ್ನು ಕೊಟ್ಟಿದ್ದಾದರೂ ಏಕೆ? ಪ್ರಶ್ನೆಯಂತೂ ಹಾಗೆಯೇ ಉಳಿದುಬಿಡುತ್ತದೆ. ಲೂಟಿಯ ಒಂದುಪಾಲನ್ನು ತಿಮ್ಮಪ್ಪನ ಹುಂಡಿಗೆ ಹಾಕಿಬಿಟ್ಟರೆ ಪಾಪ ಮಾಫಿ ಎಂದು ಕೆಲವರು ಭಾವಿಸುತ್ತಾರಲ್ಲ, ಹಾಗೆಯೇ ಇದು. ಆದರೆ ಇಡಿ ಸುಮ್ಮನಾಗಲಿಲ್ಲ. ಪ್ರಶ್ನೆಗಳು ಜೋರಾಗುತ್ತಿದ್ದಂತೆ ರಾಣಾ, ‘ನಾನು ಆಸ್ಪತ್ರೆಯೊಂದಕ್ಕೆ ವಿಶೇಷ ವಾರ್ಡ್ ನಿರ್ವಣಕ್ಕೆಂದು ಹಣ ಕಳಿಸಿಕೊಟ್ಟಿದ್ದೆ. ರಾಜಕೀಯ ಒತ್ತಡಗಳಿಂದ ಅವರು ಅದನ್ನು ಹಿಂದಿರುಗಿಸಿಬಿಟ್ಟರು’ ಎಂದು ಹೇಳಿದರಾದರೂ, ಅದು ಯಾವ ಆಸ್ಪತ್ರೆ ಎಂದು ನಮೂದಿಸಲಿಲ್ಲ. ಒತ್ತಡ ಯಾವ ಪಕ್ಷದ್ದು ಎಂದೂ ಹೇಳಲಿಲ್ಲ. ರಾಣಾ ಮೇಲಿನ ಆರೋಪಗಳು ಈಗ ಪೂರ್ಣ ಕ್ರೋಢೀಕರಣಗೊಂಡಿದ್ದವು. ಸಂಗ್ರಹಿಸಿದ ಸುಮಾರು ಎರಡುಮುಕ್ಕಾಲು ಕೋಟಿಯಲ್ಲಿ 80 ಲಕ್ಷಕ್ಕೂ ಹೆಚ್ಚು ವಿದೇಶದಿಂದ ಬಂದಿದ್ದೇ ಆಗಿತ್ತು. ಪತ್ರಕರ್ತರು ವಿದೇಶದ ಹಣವನ್ನು ಪಡೆಯಬಾರದು ಎಂಬ ಕಾನೂನಿನ ನಡುವೆಯೂ ಈ ಕೆಲಸ ಮಾಡಿದ್ದರು. ಪರಿಹಾರ ಕಾರ್ಯಕ್ಕೆಂದು ಬಳಸಿದ ಸುಮಾರು 70 ಲಕ್ಷ ರೂಪಾಯಿ ಹಣಕ್ಕೆ ರಶೀದಿ ಕೊಡುವಾಗ 40 ಲಕ್ಷಕ್ಕೂ ಹೆಚ್ಚಿರಲಿಲ್ಲ. ಅದನ್ನೂ ಇಡಿ ಸೂಕ್ಷ್ಮವಾಗಿ ಅವಲೋಕಿಸಿದಾಗ 28 ಲಕ್ಷದಷ್ಟು ಮಾತ್ರ ಒಪ್ಪಬಹುದಾದ ರಶೀದಿಗಳಾಗಿದ್ದವು! ಸಂಗ್ರಹಿಸಿದ ಬಹುಪಾಲು ಹಣ ಖರ್ಚಾಗದೇ ವರ್ಷಗಳ ಕಾಲ ಅಕೌಂಟಿನಲ್ಲಿಯೇ ಇತ್ತು. ಸುಮಾರು 19 ಲಕ್ಷದಷ್ಟು ಹಣವನ್ನು ಸ್ವಂತಕ್ಕಾಗಿ ಬಳಸಿಬಿಟ್ಟಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಹಣ ಕೊಟ್ಟ ದಾನಿಗಳ ಬೆನ್ನಿಗೆ ಚೂರಿ ಇರಿದು ತಾನು ವೈಭವದ ಸೌಧ ಕಟ್ಟಿಕೊಂಡಿದ್ದರು ರಾಣಾ. ಇಂತಹ ರಾಣಾ ಅಯೂಬ್ ಬೆಂಬಲಕ್ಕೆ ವಾಷಿಂಗ್ಟನ್ ಪೋಸ್ಟ್ ಧಾವಿಸಿಬಂತು. ಒಂದಿಡೀ ಪುಟದಷ್ಟು ಜಾಹೀರಾತನ್ನು ಆಕೆಯ ಪರವಾಗಿ ನೀಡಿತು. ಅತ್ತ ಗೃಹ ಸಚಿವರಿಂದ ಛೀಮಾರಿ ಹಾಕಿಸಿಕೊಂಡಿದ್ದ ಆಮ್ನೆಸ್ಟಿ ಇಂಟರ್​ನ್ಯಾಷನಲ್ ರಾಣಾ ಅಯೂಬ್ ಬೆನ್ನಹಿಂದೆ ಬಿದ್ದಿರುವ ಇಡಿ ಅಧಿಕಾರಿಗಳು ವೈಯಕ್ತಿಕ ದ್ವೇಷದಿಂದ, ಮೋದಿ ಪರವಾದ ಹಿನ್ನೆಲೆಯಿಂದ ಬಂದಿರುವಂಥವರು ಎಂದು ಹೇಳಿಬಿಟ್ಟಿತು. ಎಲ್ಲಕ್ಕಿಂತ ಹಾಸ್ಯಾಸ್ಪದವಾದದ್ದು ಯುನೈಟೆಡ್ ನೇಷನ್ಸ್​ನ ಟ್ವೀಟು. ಪಾಕಿಸ್ತಾನ ಭಯೋತ್ಪಾದಕ ಕೃತ್ಯ ನಡೆಸಿದಾಗ, ಚೀನಾ ಗಲ್ವಾನ್​ನಲ್ಲಿ ನುಗ್ಗಿದಾಗ ಮಿಸುಕಾಡದ, ಯೂಕ್ರೇನ್ ವಿಚಾರದಲ್ಲಿ ಸುಮ್ಮನಿರುವ ಯುಎನ್ ರಾಣಾ ಪರವಾಗಿ ಟ್ವೀಟ್ ಮಾಡಿ ಭಾರತದ ವಿರುದ್ಧದ ತನ್ನ ವಿಷ ಕಾರಿಕೊಂಡಿತು. ಭಾರತ ಸರ್ಕಾರವೂ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿ ಯುನೈಟೆಡ್ ನೇಷನ್ಸ್​ನ ನಿಜವಾದ ಯೋಗ್ಯತೆ ಪರಿಚಯಿಸಿಕೊಡಲು ಮರೆಯಲಿಲ್ಲ. ಇವೆಲ್ಲದರ ನಡುವೆ ರಾಣಾ ಅಯೂಬ್ ಮಾತ್ರ ಜನರ ದುಡ್ಡನ್ನು ಉಡಾಯಿಸಿಯೂ ಮೆರೆದಾಡುತ್ತಿರುವುದನ್ನು ನೋಡಿದರೆ ಎಂಥವನಿಗೂ ಅಸಹ್ಯವೆನಿಸದಿರದು. ಆದರೆ ಬುದ್ಧಿಜೀವಿಗಳಿಗೆ ಇದೇನು ಹೊಸತಲ್ಲ ಎಂಬುದೇ ನಾವೆಲ್ಲರೂ ಅರಿತಿರಬೇಕಾದ ಸಂಗತಿ ಅಷ್ಟೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net