ಈ ಹೋರಾಟ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ!

Column F
Published on
ಹಲಾಲ್ ಎಕಾನಮಿಗೆ ಅಡಿಪಾಯ ಹಾಕಿಕೊಟ್ಟಿದ್ದು ಮಲೇಷ್ಯಾ. ಇಲ್ಲಿ ಆರಂಭಗೊಂಡ ಇಸ್ಲಾಮಿಕ್ ಬ್ಯಾಂಕುಗಳು ಬೆಳವಣಿಗೆ ಕಾಣಲಿಲ್ಲ. ಧಾರ್ವಿುಕ ಕಟ್ಟು-ಕಟ್ಟಳೆಗಳ ಆಧಾರದ ಮೇಲೆ ನಡೆಯುವ ಈ ಬ್ಯಾಂಕುಗಳನ್ನು ಜಗತ್ತು ಒಪ್ಪಿಕೊಳ್ಳಲೂ ಇಲ್ಲ. ಹೀಗಾಗಿಯೇ ಮಲೇಷ್ಯಾ ಹಲಾಲ್ ಇಂಡಸ್ಟ್ರಿ ಡೆವಲಪ್​ವೆುಂಟ್ ಕಾರ್ಪೆರೇಷನ್ ಆರಂಭಿಸಿತು.

ಅಂತೂ ಸುದೀರ್ಘಕಾಲದ ನಂತರ ಹಲಾಲ್ ಚರ್ಚೆಗೆ ಬಂತು. ಹಿಜಾಬ್ ಈಗ ಹಲಾಲ್​ಗೆ ಬಂದು ನಿಂತಿದೆ. ಸ್ಥೂಲವಾಗಿ ಹೇಳಬೇಕೆಂದರೆ ಹಿಜಾಬ್​ನ ಗಲಾಟೆಯನ್ನು ವ್ಯಾಪಕಗೊಳಿಸಿ ಮುಸಲ್ಮಾನರು ತಪು್ಪ ಮಾಡಿದರು. ಆರು ಜನ ಮುಸ್ಲಿಂ ಹುಡುಗಿಯರು ಅಧ್ಯಯನಕ್ಕಿಂತ ಹಿಜಾಬ್ ಮುಖ್ಯ ಎಂಬ ವಾದವನ್ನು ಮುಂದಿರಿಸಿಕೊಂಡು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಕೊಳ್ಳಿ ಇಡುವ ಪ್ರಯತ್ನ ಮಾಡಿದರು. ರಾಜ್ಯಾದ್ಯಂತ ಹಿಂದೂಗಳ ಜಾಗೃತಿ ಈ ಪ್ರಮಾಣದಲ್ಲಿ ಆಗಬಹುದೆಂಬ ಊಹೆ ಅವರಿಗಿರಲಿಲ್ಲ. ಯಾವ ಹಿಂದೂ ಹೆಣ್ಣುಮಕ್ಕಳನ್ನು ಹಿಂದುತ್ವದ ಕುರಿತಂತೆ ಪ್ರೇರೇಪಿಸುವುದು ಐವತ್ತು ಸಾವಿರ ಭಾಷಣಗಳಿಗೆ, ಐದು ಲಕ್ಷ ಅಂಕಣಗಳಿಗೆ ಸಾಧ್ಯವಾಗುತ್ತಿರಲಿಲ್ಲವೋ ಅದನ್ನು ಆರು ಹೆಣ್ಣುಮಕ್ಕಳು ಹಿಜಾಬ್ ಆಗ್ರಹಕ್ಕೆ ನಿಂತು ಸಾಧಿಸಿಬಿಟ್ಟರು. ಮೊದಲೇ ಹಿಜಾಬ್ ಗಲಾಟೆಯಿಂದಾಗಿ ಮುಸಲ್ಮಾನರ ವ್ಯಕ್ತಿತ್ವದ ಮೇಲೆ ಸಿಟ್ಟೇರಿಸಿಕೊಂಡಿದ್ದ ಹಿಂದೂವಿಗೆ ಶಿವಮೊಗ್ಗದ ಹರ್ಷನ ಸಾವು ಗಾಯದ ಮೇಲಿನ ಉಪ್ಪಾಯ್ತು. ಇದು ಆರುವ ವೇಳೆಗೆ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ಮುಸಲ್ಮಾನರು ರಾಜ್ಯ ಬಂದ್ ಘೊಷಿಸಿ ತಮ್ಮ ಅಂಗಡಿಗಳಲ್ಲಿ ಬಾಡಿಗೆಗಿದ್ದ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಬಾಗಿಲು ಮುಚ್ಚಿಸಿದರು. ಅಲ್ಲಿಗೆ ಹಿಂದೂವಿನ ಆಕ್ರೋಶಕ್ಕೆ ಎಣೆಯೇ ಇರಲಿಲ್ಲ. ಅವನೀಗ ಬಾಗಿಲು ಹಾಕಿದ್ದ ಅಂಗಡಿಗಳನ್ನು ಗಮನಿಸಿದ. ಅವುಗಳಲ್ಲಿ ಬಹುತೇಕ ಹಿಂದೂ ದೇವರ ಹೆಸರುಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಮುಸಲ್ಮಾನರದ್ದೇ ಆಗಿದ್ದವು. ಇದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಯ್ತು. ಯಾವ ಸಂಘಟನೆಯೂ ಕರೆಕೊಡದೇ ತಾನೇ ತಾನಾಗಿ ಮುಸಲ್ಮಾನರೊಂದಿಗೆ ವ್ಯಾಪಾರ ಮಾಡದಿರುವ ಖಡಕ್ಕು ನಿರ್ಣಯಕ್ಕೆ ಆತ ಪ್ರತಿಬದ್ಧನಾದ. ಸರ್ಕಾರದ ಕಾನೂನುಗಳಿಗಿಂತಲೂ ಬಲವಾದದ್ದು ಮನಸ್ಸಿನ ನಿರ್ಣಯಗಳು. ಇದಕ್ಕೆ ಪೂರಕವಾಗಿಯೇ ಜಾತ್ರೆಗಳಲ್ಲಿ ಅವರಿಗೆ ಅಂಗಡಿ ಕೊಡದಿರುವ ನಿರ್ಧಾರ ಹಿಂದೂ ಸಮಾಜ ಮಾಡಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತಂತೆ ವಿರೋಧದ ದನಿ ಎತ್ತಿದ್ದು ನಿಜ. ಆದರೆ ಇಂಥದ್ದೊಂದು ಸಂಕಲ್ಪ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಕಾನೂನಾಗಿ ರೂಪುಗೊಂಡಿತ್ತು ಎಂಬುದನ್ನು ಅವರಿಗೆ ತಿಳಿ ಹೇಳಿದಾಗ ತೊದಲುತ್ತ ಸೈಡ್​ವಿಂಗ್​ಗೆ ಸರಿದರು. ಇಷ್ಟರ ವೇಳೆಗೆ ಹಿಂದೂ ಸಮಾಜ ಒಟ್ಟಾಗಿಬಿಟ್ಟಿತ್ತು. ಇಡಿಯ ಪ್ರಕರಣ ಹಲಾಲ್ ಕಡೆಗೆ ತಿರುಗಿಕೊಂಡು ಆರ್ಥಿಕ ನಿಷೇಧ ಹೇರುತ್ತಿರುವುದು ಹಿಂದೂಗಳಲ್ಲ, ಮುಸಲ್ಮಾನರೇ ಎಂಬುದು ಸಮಾಜಕ್ಕೆ ಅರಿವಾಗಿಬಿಟ್ಟಿತ್ತು.

ಇಷ್ಟಕ್ಕೂ ಹಲಾಲ್ ಎಂದರೆ ಸ್ವೀಕರಿಸಬಹುದಾದದ್ದು ಎಂದರ್ಥ. ಇದಕ್ಕೆ ವಿರುದ್ಧವಾದದ್ದು ಹರಾಮ್ ಇಸ್ಲಾಂ ಆರಂಭದಿಂದ ಕಳೆದ ಕೆಲವು ದಶಕಗಳವರೆಗೂ ಹಲಾಲ್ ಎಂಬುದು ಮಾಂಸಕ್ಕೇ ಸಂಬಂಧಪಟ್ಟಿದ್ದಾಗಿತ್ತು. ಅಂದರೆ, ಸತ್ತಿರುವ ಪ್ರಾಣಿಯನ್ನು ಕತ್ತರಿಸಿ ತಿನ್ನಲು ಬಳಸುವಂತಿಲ್ಲ. ಮಾಂಸಕ್ಕಾಗಿ ಕೋಳಿ, ಕುರಿಗಳನ್ನು ಕತ್ತರಿಸುವ ಮೊದಲು ಅದು ಬದುಕಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಅದನ್ನು ಕೊಲ್ಲುವಾಗ ಬೆನ್ನಹುರಿ ನೇರವಾಗಿದ್ದು ಗಂಟಲನಾಳದ ರಕ್ತನಾಳಗಳನ್ನು ಒಂದೇ ಏಟಿಗೆ ಕತ್ತರಿಸಿಬಿಡಬೇಕು. ಹೀಗೆ ಕತ್ತು ಕತ್ತರಿಸಿಕೊಂಡ ಪ್ರಾಣಿಯ ಜೀವ ಹೋಗಿರುವುದಿಲ್ಲ. ಹೀಗಾಗಿಯೇ ಹೃದಯ ಇನ್ನೂ ಜೋರಾಗಿ ಬಡಿದುಕೊಳ್ಳುತ್ತ ಅಷ್ಟೂ ರಕ್ತವನ್ನು ಹೊರಕಾರುತ್ತದೆ. ಇದರಿಂದ ರಕ್ತ ಪೂರ್ತಿ ಖಾಲಿಯಾದ ಆ ಪ್ರಾಣಿ ತಿನ್ನಲು ಶುದ್ಧವಾಗಿರುತ್ತದೆ ಎಂಬುದು ಇವರ ಅಭಿಪ್ರಾಯ. ಎಲ್ಲವೂ ಸರಿ, ಇದಕ್ಕೂ ಹಲಾಲ್ ಎಕಾನಮಿಗೂ ಏನು ಸಂಬಂಧ?

ಹಲಾಲ್ ಎಕಾನಮಿಗೆ ಅಡಿಪಾಯ ಹಾಕಿಕೊಟ್ಟಿದ್ದು ಮಲೇಷ್ಯಾ. ಇಲ್ಲಿ ಆರಂಭಗೊಂಡ ಇಸ್ಲಾಮಿಕ್ ಬ್ಯಾಂಕುಗಳು ಬೆಳವಣಿಗೆ ಕಾಣಲಿಲ್ಲ. ಧಾರ್ವಿುಕ ಕಟ್ಟು-ಕಟ್ಟಳೆಗಳ ಆಧಾರದ ಮೇಲೆ ನಡೆಯುವ ಈ ಬ್ಯಾಂಕುಗಳನ್ನು ಜಗತ್ತು ಒಪ್ಪಿಕೊಳ್ಳಲೂ ಇಲ್ಲ. ಹೀಗಾಗಿಯೇ ಮಲೇಷ್ಯಾ ಉತ್ಪಾದನೆಯಿಂದ ಹಿಡಿದು ಹಣಕಾಸಿನವರೆಗೂ ಎಲ್ಲವನ್ನೂ ಹಲಾಲ್ ಮಾಡಿಬಿಟ್ಟರೆ ಈ ಬ್ಯಾಂಕುಗಳು ಅಭಿವೃದ್ಧಿ ಕಾಣುವುದು ನಿಶ್ಚಿತ ಎಂದು ಆಲೋಚಿಸಿ ಹಲಾಲ್ ಇಂಡಸ್ಟ್ರಿ ಡೆವಲಪ್​ವೆುಂಟ್ ಕಾರ್ಪೆರೇಷನ್ ಆರಂಭಿಸಿತು. ಕೌಲಾಲಂಪುರದಲ್ಲಿ ನಡೆದ ವಿಶ್ವ ಹಲಾಲ್ ಸಮ್ಮೇಳನದಲ್ಲಿ ಜಗತ್ತಿನ ಅನೇಕ ಮುಸ್ಲಿಂ ರಾಷ್ಟ್ರಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮುಸಲ್ಮಾನರ ಶಕ್ತಿವೃದ್ಧಿಗೆ ಹಲಾಲ್ ಉಪಯೋಗಿಸಬೇಕು ಎಂದು ನಿರ್ಧರಿಸಿದವು. ಪರಿಣಾಮ 2000ದಲ್ಲಿ ಶೇಕಡ 6.9ರಷ್ಟಿದ್ದ ಮಲೇಷ್ಯಾ ಇಸ್ಲಾಮಿಕ್ ಬ್ಯಾಂಕುಗಳ ಆಸ್ತಿ ಒಂದೇ ದಶಕದಲ್ಲಿ ಶೇ.22ಕ್ಕೆ ಏರಿತು. ಆರಂಭದಲ್ಲಿ ಹಲಾಲ್ ಎಂದರೆ ಮಾಂಸವೆಂದಷ್ಟೇ ಇದ್ದಿದ್ದನ್ನು ಇವರು ವಿಸ್ತರಿಸಿ ಸೌಂದರ್ಯವರ್ಧಕ, ಔಷಧ, ಆಸ್ಪತ್ರೆ, ಅಪಾರ್ಟ್​ವೆುಂಟ್, ಕೊನೆಗೆ ಡೇಟಿಂಗ್ ವೆಬ್​ಸೈಟ್​ಗಳಿಗೂ ವಿಸ್ತರಿಸಿಬಿಟ್ಟರು. ಎಲ್ಲೆಡೆಯೂ ಮುಸಲ್ಮಾನರು ಹಲಾಲ್ ಮುದ್ರೆ ಇರುವಂಥ ವಸ್ತುಗಳನ್ನೇ ಕೇಳಬೇಕೆಂಬ ವಿಷಬೀಜವನ್ನು ಬಿತ್ತಲಾಯ್ತು. ಹಾಗಂತ ಹಲಾಲ್ ಮುಂಚಿನಿಂದಲೂ ಇರಲಿಲ್ಲವೆಂದೇನೂ ಅಲ್ಲ. ಆದರೆ ಅದು ಅನಿವಾರ್ಯವಾಗಿರಲಿಲ್ಲ. ಹೇಗೆ ಹಿಜಾಬ್ ಒಂದು ರಾಜಕೀಯ ಮಹತ್ವಾಕಾಂಕ್ಷೆಯ ಭಾಗವಾಗಿ ತಲೆದೋರಿತೋ ಹಾಗೆಯೇ ಹಲಾಲ್ ಕೂಡ ಜಗತ್ತನ್ನು ಆವರಿಸಿಕೊಂಡಿತು. ಮುಸಲ್ಮಾನರು ಅಂಗಡಿಗಳಲ್ಲಿ ಹಲಾಲ್ ಮಾಡಿದ ವಸ್ತುಗಳೇ ಬೇಕೆಂದು ಕೇಳಲಾರಂಭಿಸಿದರು. ಜಗತ್ತಿನಾದ್ಯಂತ ‘ಹಲಾಲ್ ಸರ್ಟಿಫಿಕೇಟ್’ ಕೊಡುವ ಇಸ್ಲಾಮಿಕ್ ಸಂಸ್ಥೆಗಳು ಹುಟ್ಟಿಕೊಂಡವು. 2018ರ ವೇಳೆಗೆ ಹಲಾಲ್ ಆರ್ಥಿಕತೆಯ ಒಟ್ಟು ವಹಿವಾಟು 6.4 ಟ್ರಿಲಿಯನ್ ಡಾಲರ್​ಗಳಷ್ಟಾಗಿತ್ತು. 2025ರ ವೇಳೆಗೆ ಸುಮಾರು 10 ಟ್ರಿಲಿಯನ್ ಡಾಲರ್​ಗಳನ್ನು ಮುಟ್ಟುವ ಗುರಿ ಹಲಾಲ್ ಆರ್ಥಿಕತೆಯದ್ದಾಗಿತ್ತು.

ಮುಸಲ್ಮಾನರು ತಮ್ಮ ಇಚ್ಛೆಗೆ ತಕ್ಕಂತೆ ಹಲಾಲ್ ಬೇಕೆಂದು ಕೇಳಿದರೆ ತಪ್ಪೇನೂ ಇಲ್ಲ. ಆದರೆ ಹಲಾಲ್ ಸರ್ಟಿಫಿಕೇಟ್ ನೀಡುವ ನೆಪದಲ್ಲಿ ಮಾಂಸ ಕಡಿಯುವ ಪ್ರತೀ ಹಂತದಲ್ಲೂ ಅದು ಕೋಳಿಯನ್ನು ಸಾಗಿಸುವುದರಿಂದ ಹಿಡಿದು, ಅದರ ಮಾಂಸವನ್ನು ಪ್ಯಾಕೆಟುಗಳಲ್ಲಿ ತುಂಬುವವರೆಗೆ ಮುಸಲ್ಮಾನನೇ ಇರುವಂತೆ ನೋಡಿಕೊಳ್ಳಲಾಯ್ತು. ಹೀಗೆ ಇಂಗ್ಲೆಂಡಿನಲ್ಲಿರುವ ಐದಾರು ಪ್ರತಿಶತ ಮುಸಲ್ಮಾನರು ಅಲ್ಲಿ ಕಡಿಯುವ 51 ಪ್ರತಿಶತ ಮೇಕೆಗಳನ್ನು ಹಲಾಲ್ ಮೂಲಕವೇ ತುಂಡಾಗುವಂತೆ ನೋಡಿಕೊಂಡಿದ್ದಾರೆ. ಅಂದರೆ ಬಹುಸಂಖ್ಯಾತರು ಹಲಾಲ್​ನ ಎದುರು ತಲೆಬಾಗುವಂತೆ ಮಾಡುವ ಸಾಮರ್ಥ್ಯ ಅವರದ್ದು. ಹಲಾಲ್ ಹಿಂದಿರುವ ಈ ಹುನ್ನಾರವೇ ಎಲ್ಲರನ್ನೂ ಇಂದು ಹೆದರಿಸುತ್ತಿರುವುದು. ಇಂದು ಹಲಾಲ್ ಉದ್ಯಮ ನಮ್ಮೆಲ್ಲ ಕಲ್ಪನೆಯನ್ನು ಮೀರಿ ಬೆಳೆದುಬಿಟ್ಟಿದೆ. ಥಾಮ್ಸನ್ ರಾಯ್ಟರ್ಸ್ ಮತ್ತು ದಿನಾರ್ ಸ್ಟಾಂಡರ್ಡ್ 2018ರಲ್ಲಿ ಪ್ರಸ್ತುತಪಡಿಸಿದ ವರದಿಯೊಂದರ ಪ್ರಕಾರ ಜಗತ್ತಿನ ಮಾಂಸ ಉದ್ದಿಮೆಯಲ್ಲಿ ಹಲಾಲ್​ನ ವಹಿವಾಟು ಸುಮಾರು ಒಂದೂವರೆ ಟ್ರಿಲಿಯನ್ ಡಾಲರ್​ಗಳಷ್ಟಾದರೆ ಬಟ್ಟೆಗಳದ್ದು 270 ಬಿಲಿಯನ್ ಡಾಲರ್. ಬಟ್ಟೆಗಳಲ್ಲಿ ಹಲಾಲ್ ಯಾವುದು ಎಂದರೆ, ಅಂಗಾಂಗಗಳು ಕಡಿಮೆ ಕಾಣುವ ಬಟ್ಟೆಗಳು ಹಲಾಲ್ ಎಂದುಬಿಡುತ್ತಾರೆ. ಹಲಾಲ್ ಟ್ರಾವೆಲ್ ಒಂದು ವರ್ಷದಲ್ಲಿ ಸುಮಾರು 200 ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ನಡೆಸಿದೆ. ಹಲಾಲ್ ಔಷಧ ಜಗತ್ತಿನಾದ್ಯಂತ 87 ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ಕಂಡಿದ್ದರೆ ಸೌಂದರ್ಯವರ್ಧಕಗಳಲ್ಲಿ 61 ಬಿಲಿಯನ್ ಡಾಲರ್​ಗಳನ್ನು ದಾಟಿತ್ತು. ಅಚ್ಚರಿಯೇನು ಗೊತ್ತೇ? ಈ ವಸ್ತುಗಳ ಮಾರುಕಟ್ಟೆಗಾಗಿ ಬಳಸುವ ಮಾಧ್ಯಮಗಳ ಒಟ್ಟಾರೆ ಆದಾಯ 209 ಬಿಲಿಯನ್ ಡಾಲರ್​ಗಳನ್ನು ದಾಟಿತ್ತು. ಇದು ಎಂಥವನ ಕಣ್ಣು ಕುಕ್ಕಲೂ ಸಾಕು. ಅವರೀಗ ಹಲಾಲ್ ಪಾರ್ಕಗಳತ್ತ ಗಮನ ಹರಿಸುತ್ತಿದ್ದಾರೆ. ಈ ಪಾರ್ಕಗಳಲ್ಲಿ ಕಚ್ಚಾ ಪದಾರ್ಥಗಳನ್ನು ಪಡೆದುಕೊಳ್ಳುವುದರಿಂದ ಹಿಡಿದು ಮಾರುಕಟ್ಟೆಗೆ ತಲುಪಿಸುವ ಗಾಡಿಯವರೆಗೂ ಪ್ರತಿಯೊಂದು ಹಲಾಲ್ ಎಕಾನಮಿಯ ಒಂದಂಗವೇ ಆಗಿರುತ್ತದೆ.

ಮುಸಲ್ಮಾನರ ಜನಸಂಖ್ಯೆ ಜಗತ್ತಿನ ಕಾಲುಭಾಗದಷ್ಟಾಗುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಇವರು ಹೀಗೆ ಹಲಾಲ್ ಬೇಡಿಕೆಯನ್ನು ಮುಂದಿರಿಸುತ್ತ ಹೋದರೆ ಜಗತ್ತಿನ ಆರ್ಥಿಕತೆಯೇ ಹಲಾಲ್​ನ ಸುತ್ತ ಸುತ್ತಿದರೆ ಅಚ್ಚರಿ ಪಡಬೇಕಿಲ್ಲ. ಭಾರತದಲ್ಲಿ ಅದಾಗಲೇ ಶೇಕಡ 20ರಷ್ಟಿರುವ ಈ ಮಂದಿ ಜಗತ್ತಿನ ಶೇಕಡ ಹತ್ತರಷ್ಟು ಮುಸಲ್ಮಾನರನ್ನು ಇಲ್ಲಿಯೇ ಗುಡ್ಡೆ ಹಾಕುವಂತೆ ಮಾಡಿದೆ. ಅನೇಕ ಸಾಧುಗಳು ನಡೆಸುವ ಆಸ್ಪತ್ರೆಗಳಿಗೂ ಇಂದು ಅನಿವಾರ್ಯವಾಗಿ ಹಲಾಲ್ ಸರ್ಟಿಫಿಕೇಟ್ ಪಡೆಯಬೇಕಾಗಿದೆ. ಅಮೆರಿಕದ ಷಿಕಾಗೊದಲ್ಲಿ ‘ಐ ಲವ್ ಹಲಾಲ್’ ಎಂಬ ಉತ್ಸವ ನಡೆದಿದ್ದಾಗ ಅರ್ತಿಜಾರಾ ಎಂಬ ಹಲಾಲ್ ಬಟ್ಟೆಅಂಗಡಿಯ ಜನಕ ಸಾರಾ ಅನ್ಸಾರಿ ಭಾಗವಹಿಸಿ ಮುಸಲ್ಮಾನರು ಹೆಚ್ಚು-ಹೆಚ್ಚು ಆರ್ಥಿಕ ಸದೃಢತೆಯತ್ತ ವಾಲುತ್ತಿದ್ದಾರೆ ಎಂದು ಹೇಳಿದ್ದ. ಇದರೊಟ್ಟಿಗೆ ಅವರ ಉದ್ದೇಶ ಚೆನ್ನಾಗಿ ಅರ್ಥವಾಗುತ್ತದೆ.

ಗಮನಿಸಲೇಬೇಕಾದ ಮತ್ತೊಂದು ಸಂಗತಿ ಇದೆ. ಮುಸಲ್ಮಾನ್ ರಾಷ್ಟ್ರಗಳಿಗೆ ಇಂಧನದ ಮೂಲಗಳು ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಶಕ್ತಿ ಕುಸಿಯುವ ಆತಂಕ ಕಾಡುತ್ತಿದೆ. ದುಬೈ ತನ್ನ ತಾನು ಹಲಾಲ್ ಪತ್ರ ಕೊಡುವಲ್ಲಿ ಅಧಿಕೃತ ಎಂದು ಹೇಳಿಕೊಳ್ಳುವ ಮೂಲಕ ಜಗತ್ತಿನ ಎಲ್ಲ ರಾಷ್ಟ್ರಗಳೂ ತಮಗೆ ಸದ್ದಿಲ್ಲದೇ ಕಪ್ಪ ಒಪ್ಪಿಸುವ ಯೋಜನೆ ರೂಪಿಸಿಕೊಂಡಿದೆ. ಮೊಘಲರ ಕಾಲದಲ್ಲಿ ಝೆಜಿಯಾ ತಲೆಗಂದಾಯ ಹೀಗೇ ಇತ್ತು. ಭಾರತದಲ್ಲಂತೂ ಜಮಾತ್-ಉಲಿಮಾ-ಇ-ಹಿಂದ್​ನಂತಹ ಸಂಸ್ಥೆಗಳು ಹಲಾಲ್ ನೋಂದಣಿಗೆ 20 ಸಾವಿರ ರೂಪಾಯಿಯನ್ನು ಮತ್ತು ಪ್ರತಿಯೊಂದು ವಸ್ತುವಿಗೂ ಪ್ರಮಾಣಪತ್ರ ನೀಡಲು 500 ರೂಪಾಯಿಯನ್ನು ಪಡೆದುಕೊಳ್ಳುತ್ತದೆ. ಹೀಗೆ ಗಳಿಸಿದ ನೂರಾರು ಕೋಟಿ ರೂಪಾಯಿಯಲ್ಲಿ ಬಹುಪಾಲನ್ನು ಮತ್ತೆ ಮುಸಲ್ಮಾನರ ನಡುವೆ ಖರ್ಚು ಮಾಡುತ್ತ ಹೆಚ್ಚು-ಹೆಚ್ಚು ಹಲಾಲ್​ಗೆ ಒಪ್ಪಿಸುವಲ್ಲಿ ಸಮರ್ಥರಾಗಿಬಿಡುತ್ತಾರೆ. ಮಾಂಸದಿಂದ ಆರಂಭವಾದ ಈ ಹಲಾಲ್ ಚಿಂತನೆ ಈಗ ಮೂಲೆ-ಮೂಲೆಗೂ ಹಬ್ಬಿಬಿಟ್ಟಿದೆ. ನಾವು ದೇವರಿಗೆ ಉಪಯೋಗಿಸುವ ಅರಿಶಿಣಕ್ಕೆ, ಜೇನುತುಪ್ಪಕ್ಕೂ ಈಗ ಹಲಾಲ್ ಬೇಕಾಗಿದೆ. ಸ್ವತಃ ಅನೇಕ ಮುಸಲ್ಮಾನರಿಗೆ ಇದರ ಅರಿವಿಲ್ಲ.

ಆದರೆ ಈಗ ಹಿಂದೂ ಜಾಗೃತನಾಗಿದ್ದಾನೆ. ಸಿಖ್ಖರ ಕಾಲದಲ್ಲಿ ಪ್ರಖ್ಯಾತಗೊಂಡಿದ್ದ ಝುಟ್ಕಾ ಮಾಂಸವನ್ನು ಆತನೀಗ ಬಳಸಲು ಉತ್ಸುಕತೆ ತೋರುತ್ತಿದ್ದಾನೆ. ಅನೇಕ ಮುಸಲ್ಮಾನರಿಗೆ ಇದು ತಮ್ಮ ಆರ್ಥಿಕ ಸ್ವಾತಂತ್ರ್ಯದ ಮೇಲೆ ಮಾಡಿದ ಆಕ್ರಮಣವೆನಿಸುತ್ತಿದೆ. ಆದರೆ ವಾಸ್ತವವಾಗಿ ಹಿಂದೂ ತನ್ನ ತಾನು ರಕ್ಷಿಸಿಕೊಳ್ಳಲು ಮಾಡುತ್ತಿರುವ ಕೊನೆಯ ಪ್ರಯತ್ನವಿದು. ಒಂದೆಡೆ ಪಾಕಿಸ್ತಾನದಿಂದ ಮತ್ತೊಂದೆಡೆ ಬಾಂಗ್ಲಾದೇಶದಿಂದ ಅನಾಥನಾಗಿ ಮರಳುತ್ತಿರುವ ಹಿಂದೂ ತನ್ನೆದೆಯೊಳಗೆ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರದ ಬರ್ಬರ ಹಸಿಚಿತ್ರಗಳ ನೋವಿನೊಂದಿಗೇ ಬಂದಿರುತ್ತಾನೆ. ಭಾರತವೂ ಅಂತಹ ರಾಷ್ಟ್ರವಾಗಿ ಮಾರ್ಪಡುವುದು ಅವನಿಗಿಷ್ಟವಿಲ್ಲ. ಹೀಗೆಂದೇ ಮಹತ್ವದ ಬದಲಾವಣೆಯೊಂದಕ್ಕೆ ಸಜ್ಜಾಗಿದ್ದಾನೆ. ಜಾಗೃತ ಹಿಂದೂವಿನ ಮನಸ್ಥಿತಿ ನೋಡಿದರೆ ಈ ಹೋರಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net