

ಇಷ್ಟಕ್ಕೂ ಹಿಂದೂ ಎನ್ನುವ ಪದ ಬೇಡವೆನ್ನುವ ಮಂದಿ ಈ ಧರ್ಮವನ್ನು ಸನಾತನ ಎಂದು ಒಪ್ಪುವರೇ? ಅದು ಅನುಮಾನವೇ. ಏಕೆಂದರೆ ಹಿಂದೂ ಎನ್ನುವುದಕ್ಕಿಂತಲೂ ಆಳ ಮತ್ತು ವಿಸ್ತಾರ ಅರ್ಥ ಹೊಂದಿರುವ ಪದ ಸನಾತನ. ಅತ್ಯಂತ ಪ್ರಾಚೀನವೂ ನಿತ್ಯ ನೂತನವೂ ಆಗಿರುವ ಈ ಧರ್ಮಕ್ಕೆ ಸೂಕ್ತವಾಗಿ ಹೊಂದುವ ಪದವೂ. ಆದರೆ ಇದನ್ನು ಸಹಿಸಬಲ್ಲ ಸಾಮರ್ಥ್ಯ ಇವರಿಗಿದೆಯೇನು? ಇವರಿಗೆಲ್ಲ ಹಿಂದೂಧರ್ಮ ಕೊಟ್ಟಿರುವ ಸ್ವಾತಂತ್ರ್ಯ ಬೇಕು, ಇಲ್ಲಿಂದ ದಕ್ಕಿರುವ ಪರಂಪರೆಯ ಘನತೆ ಬೇಕು, ಈ ವಿಶಾಲವಾದ ಭೂಭಾಗ ಬೇಕು, ಧರ್ಮ ಮಾತ್ರ ಬೇಡ! ಏಕೆಂದರೆ ಇವರಿಗೆಲ್ಲ ಅಧಿಕಾರ ನಡೆಸಲು ಅನ್ಯಮತೀಯರ ವೋಟು ಬೇಕು. ಹಿಂದೂ ಎನ್ನುವುದು ರಾಜಕೀಯವಾಗಿ ಪ್ರಬಲವಾಗುತ್ತಿದೆ ಎನ್ನುವುದೇ ಈ ಪದದ ದ್ವೇಷಕ್ಕೆ ಕಾರಣ.
ಇಷ್ಟಕ್ಕೂ ಹಿಂದೂ ಪದ ಸಂಸ್ಕೃತದ್ದಲ್ಲ ಎನ್ನುವುದನ್ನು ಒಪ್ಪಬಹುದಾದರೂ ಕಾಲಕ್ರಮದಲ್ಲಿ ಈ ಪದ ಸಂಸ್ಕೃತದಲ್ಲಿ ಸೇರಿಹೋಗಿದೆ ಎಂಬುದನ್ನೂ ಒಪ್ಪಲೇಬೇಕು. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಆಕ್ರಮಣಕಾರಿಗಳಾಗಿ ಬಂದ ಪರ್ಷಿಯನ್ನರು ಸಿಂಧೂ ನದಿಯನ್ನು ‘ಹಿಂದೂ’ ಎಂದು ಉಚ್ಚರಿಸಿದ್ದರಿಂದ ಈ ನದಿ ಆಚೆಗೆ ವಾಸಿಸುವ ಮಂದಿಯೆಲ್ಲ ಹಿಂದೂಗಳೆಂದಾದರು ಎಂಬುದು ಒಂದು ಸಾಮಾನ್ಯ ವಾದ. ಆದರೆ ಪ್ರಾಚೀನ ಗ್ರೀಕರು, ಅಮೇನಿಯನ್ನರೂ ಇದೇ ಪದವನ್ನು ಬಳಕೆ ಮಾಡಿರುವುದು ಉಲ್ಲೇಖವಾಗಿದೆ. ವಾಸ್ತವವಾಗಿ ಇದು ಸಪ್ತಸಿಂಧೂ ರಾಷ್ಟ್ರ. ಸಿಂಧೂ ಎನ್ನುವ ನದಿಯಿದ್ದಂತೆ ಸಂಸ್ಕೃತದಲ್ಲಿ ಸಾಗರಕ್ಕೂ ‘ಸಿಂಧೂ’ ಎನ್ನಲಾಗುತ್ತದೆ. ಹೀಗಾಗಿ ಸುತ್ತಲೂ ಸಮುದ್ರ ಮತ್ತು ಅನೇಕ ನದಿಗಳನ್ನು ಹೊಂದಿರುವಂತಹ ಈ ರಾಷ್ಟ್ರ ಸಪ್ತಸಿಂಧೂ ರಾಷ್ಟ್ರವೆಂದು ಗುರುತಿಸಲ್ಪಟ್ಟಿದ್ದರಲ್ಲಿ ಅರ್ಥವಿದೆ. ಸಂಸ್ಕೃತದ ಅನೇಕ ಸಾಹಿತ್ಯದಲ್ಲಿ ಇದರ ಉಲ್ಲೇಖವಾಗಿರುವುದನ್ನು ಸಾವರ್ಕರ್ರಾದಿಯಾಗಿ ಅನೇಕರು ಗುರುತಿಸಿದ್ದಾರೆ. ಮುಂದೆ ಪ್ರಾಕೃತದಲ್ಲಿ ಸಪ್ತಸಿಂಧೂ ಹಪ್ತಹಿಂದೂ ಎಂದು ರೂಪಗೊಂಡಿತು. ಇದನ್ನೇ ಬಹುತೇಕ ಹೊರಗಿನವರು ಬಳಸಲಾರಂಭಿಸಿದರು. ಜರತೂಷ್ಟ್ರರ ಪವಿತ್ರಗ್ರಂಥ ‘ಜೆಂದ್ ಅವೆಸ್ಥಾ’ದಲ್ಲಿ ‘ಹಪ್ತಹಿಂದೂ’ ಎಂಬ ಪದ ಬಳಕೆಯಾಗಿದೆ. ಮುಂದೆ ಈ ಪದವೇ ವ್ಯಾಪಕಗೊಂಡು ಹಿಂದೂ ಮತ್ತು ಹಿಂದೂಸ್ಥಾನವೂ ಗುರುತಿಸಲ್ಪಟ್ಟಿತು. ಅದೂ ಸರಿಯೇ. ಬೇರೆ ಯಾರೂ ಇಲ್ಲದ್ದಾಗ ನಮ್ಮನ್ನು ಭಿನ್ನವೆಂದು ಗುರುತಿಸಿಕೊಳ್ಳುವ ಅಗತ್ಯವೇ ಇಲ್ಲ. ನಮಗಿಂತ ಭಿನ್ನವಾದ ಜನಾಂಗ ಬಂದಾಗ ಅವರು ತಮ್ಮದ್ದೇ ಆದ ರೀತಿಯಲ್ಲಿ ನಮ್ಮನ್ನು ಗುರುತಿಸುವುದು ಸಹಜವೇ ಅಲ್ಲವೇನು? ಇದೂ ಹಾಗೆಯೇ. ಹೀಗಾಗಿಯೇ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಹಿಂದೂ ಎಂಬ ಪದದ ಉಲ್ಲೇಖ ಕಂಡುಬರದಿದ್ದರೂ ಆನಂತರದ ಸಾಹಿತ್ಯಗಳು ಇದನ್ನು ವಿಪುಲವಾಗಿ ಬಳಸಿವೆ.
ಹಿಮಾಲಯಂ ಸಮಾರಭ್ಯ ಯಾವದಿಂದು ಸರೋವರಂ
ತಮ್ ದೇವನಿರ್ವಿುತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ|| ಎಂಬ ಶ್ಲೋಕ ಹಿಂದೂರಾಷ್ಟ್ರದ ಉಲ್ಲೇಖ ಮಾಡುವಂಥದ್ದೇ. ಹಿಮಾಲಯದಿಂದ ಆರಂಭಿಸಿ ಸಾಗರದವರೆಗೆ ವಿಶಾಲವಾಗಿ ಹರಡಿಕೊಂಡಿರುವ ಭೂಭಾಗವನ್ನೇ ಹಿಂದೂಸ್ಥಾನವೆಂತಲೂ, ಇಲ್ಲಿರುವ ಜನರೇ ಹಿಂದೂಗಳೆಂತಲೂ ನಾವು ಪುರಾಣ ಕಾಲದಲ್ಲಿ ಒಪ್ಪಿಕೊಂಡಿದ್ದೆವು. ಅಷ್ಟೇ ಅಲ್ಲ, ಹಿಂದೂ ಪದಕ್ಕೆ ಲಕ್ಷಣವನ್ನು ವಿವರಿಸುತ್ತಾ,
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮ ದೃಢಾಶ್ರಯಃ
ಗೋಭಕ್ತಃ ಭಾರತ ಗುರುಃ ಹಿಂದುಃ ಹಿಂಸ ನ ದೂಷಕಃ|| ಎಂದು ಹೇಳಲಾಗಿದೆ. ಓಂಕಾರವನ್ನು ಮೂಲಮಂತ್ರವೆಂದು ಭಾವಿಸುವವನೂ, ಪುನರ್ಜನ್ಮವನ್ನು ದೃಢವಾಗಿ ನಂಬುವವನೂ, ಭಾರತವನ್ನು ಗುರುವೆಂದು ಒಪ್ಪಿಕೊಂಡವನೂ, ಗೋಭಕ್ತನೂ ಆದ ಅಹಿಂಸಾನಿಷ್ಠನೇ ಹಿಂದೂ ಎಂಬ ಮಾತಂತೂ ಅಕ್ಷರಶಃ ಹಿಂದೂ ನಂಬಿಕೆಗಳನ್ನು, ಬದುಕಿನ ರೀತಿ-ನೀತಿಗಳನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ. ಮೇರುತಂತ್ರದಲ್ಲಂತೂ, ‘ಹೀನಂ ಚ ದೂಷಯಂತ್ಯೇವ ಹಿಂದುರಿತ್ಯುಚ್ಚತೇ’ ಎಂಬ ವಾಕ್ಯವಿದೆ. ‘ದುಷ್ಟರನ್ನು ಶಿಕ್ಷಿಸುವವ ಹಿಂದೂ’ ಎಂಬುದು ಅದರ ಸ್ಥೂಲವಾದ ಅರ್ಥ. ಅಂದರೆ ಹಿಂದುವೆನ್ನುವುದು ಅನೇಕ ಬಾರಿ ರಾಷ್ಟ್ರವಾಚಕವಾಗಿಯೂ ಇನ್ನೂ ಕೆಲವು ಬಾರಿ ಸನಾತನ ಧರ್ಮಕ್ಕೆ ಪರ್ಯಾಯವಾಗಿಯೂ ಬಳಕೆಯಾಗುತ್ತದೆ. ಕನ್ನಡ ಎಂದರೆ ಅದು ಭಾಷೆ ಎಂಬುದಂತೂ ಗೊತ್ತೇ ಇದೆ. ಕೆಲವು ಬಾರಿ ಅದು ದೇಶವಾಚಕವಾಗಿಯೂ ಬಳಕೆಯಾಗುವುದು ಅನೇಕ ಸಾಹಿತ್ಯಗಳಲ್ಲಿ ಕಂಡುಬರುತ್ತದೆ. ಇನ್ನೂ ಕೆಲವು ಬಾರಿ ಅದು ಈ ನಾಡಿನ ಜನರನ್ನು ಗುರುತಿಸಲು ಬಳಸುತ್ತಿದ್ದ ಪದವೂ. ಒಂದೇ ಪದ ಪ್ರದೇಶ ಜನಾಂಗ, ಭಾಷೆಯಾಗಿ ಹೇಗೆ ಬಳಕೆಯಾಗುವುದೋ ಹಾಗೆಯೇ ಹಿಂದೂ ಎಂಬ ಪದ ಕೂಡ. ಈ ಆಧಾರದ ಹಿನ್ನೆಲೆಯಲ್ಲಿಯೇ ಸಾವರ್ಕರರು,
ಆಸಿಂಧು ಸಿಂಧು ಪಯರ್åಂತಾ ಯಸ್ಯ ಭಾರತ ಭೂಮಿಕಾ
ಪಿತೃಭೂಃ ಪುಣ್ಯಭೂಶ್ಚೈವ ಸವೈ ಹಿಂದೂರಿತಿ ಸ್ಮತಃ|| ಎಂದರು. ಸಮುದ್ರದಿಂದ ಹಿಮಾಲಯದವರೆಗೆ ಹಬ್ಬಿರುವ ವಿಶಾಲವಾದ ಭಾರತಭೂಮಿಯನ್ನು ಪಿತೃಭೂಮಿ, ಪುಣ್ಯಭೂಮಿ ಎಂದು ಭಾವಿಸುವವನೇ ಹಿಂದೂ ಎಂದರು. ಅಲ್ಲಿಗೆ ಅವರು ಸ್ಪಷ್ಟವಾದ ಗೆರೆಯೊಂದನ್ನೆಳೆದು ಭಾರತೀಯನಾಗಲು, ಹಿಂದುವೆನಿಸಿಕೊಳ್ಳಲು ರೂಪುರೇಷೆ ಹಾಕಿಕೊಟ್ಟರು. ಭಾರತದಲ್ಲೇ ಇದ್ದು ಈ ದೇಶವನ್ನು ತುಂಡರಿಸಬೇಕು ಎಂದುಕೊಳ್ಳುವವರಿಗೆ, ಆರ್ಯ-ದ್ರಾವಿಡ ವಾದ ಮುಂದಿಟ್ಟು ದೇಶವನ್ನು ಚೂರು ಮಾಡಬೇಕು ಎಂದುಕೊಳ್ಳುವವರಿಗೆ, ದಲಿತ-ಬ್ರಾಹ್ಮಣರನ್ನು ಎತ್ತಿಕಟ್ಟಿ ಕಿತ್ತಾಡುವಂತೆ ಮಾಡಬೇಕು ಎಂದು ಭಾವಿಸುವವರಿಗೆ ಈ ಪದಗಳೆಲ್ಲ ಅರ್ಥವಾಗೋದು ಕಷ್ಟ. ಅವರಿಗೇನಿದ್ದರೂ ಪರ್ಷಿಯಾದ ಡಿಕ್ಷನರಿಯೇ ಇದಕ್ಕೆ ಬೇಕಾಗಿದೆ.
ಹ್ಞಾಂ! ಹೌದು ಹಿಂದೂ ಪದದ ಅರ್ಥವನ್ನು ಈ ರಾಜಕೀಯ ನಾಯಕರು ಹೆಕ್ಕಿತೆಗೆದಿದ್ದು ಪರ್ಷಿಯಾದ ಡಿಕ್ಷನರಿಯಿಂದ. ಅದೂ ಕೂಡ ಸ್ಟಿಫನ್ ನ್ಯಾಪ್ ಎಂಬ ಹಿಂದೂಧರ್ಮ ಪರವಾದ ಲೇಖಕರ ಲೇಖನದಿಂದ. ‘ಲುಘೕದ್-ಇ-ಕಿಶ್ವಾರಿ’ ಎಂಬ ಪರ್ಷಿಯಾದ ನಿಘಂಟೊಂದು 1964ರಲ್ಲಿ ಹಿಂದೂ ಎನ್ನುವ ಪದಕ್ಕೆ ಕೇಡಿ, ಗುಲಾಮ, ಕರಿಯಾ ಎಂಬೆಲ್ಲ ಅರ್ಥವನ್ನು ಕೊಟ್ಟಿತು. ಈ ರಾಜಕೀಯ ನಾಯಕರು ಇದರಲ್ಲಿ ಯಾವುದನ್ನು ಅಶ್ಲೀಲವೆಂದು ಕರೆದಿದ್ದಾರೋ ದೇವರೇ ಬಲ್ಲ. ಕರಿಯರನ್ನು ಹಾಗೆಂದು ಇವರು ಭಾವಿಸಲಿಲ್ಲವೆಂದರೆ ಸಾಕಷ್ಟೆ. ಸ್ಟಿಫನ್ ನ್ಯಾಪ್ ಈ ಪದದ ಕುರಿತಂತೆ ವ್ಯಾಖ್ಯೆ ಮಾಡುತ್ತಾ ಇದರ ಬಳಕೆಯನ್ನು ಕಾಲಕ್ರಮದಲ್ಲಿ ನಿಲ್ಲಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಅವರು ಹಾಗೆ ಹೇಳಲು ಕಾರಣ ಹಿಂದೂ ಎಂಬ ಪದಕ್ಕಿಂತಲೂ ಸನಾತನ ಎಂಬುದು ಈ ಧರ್ಮವನ್ನು ಸೂಕ್ತವಾಗಿ ಪ್ರತಿಪಾದಿಸಬಲ್ಲುದು ಎಂಬುದೇ ಆಗಿದೆ. ಇಷ್ಟಾಗಿಯೂ ವಿಸ್ತಾರವಾಗಿ ರ್ಚಚಿಸುವ ಅವರು, ಕ್ರಿ.ಶ 622ರಲ್ಲಿ ಹುಟ್ಟಿದ ಇಸ್ಲಾಂ 644ರ ವೇಳೆಗೆ ಪರ್ಷಿಯಾವನ್ನು ಪೂರ್ಣ ತನ್ನ ತೆಕ್ಕೆಗೆ ತೆಗೆದುಕೊಂಡಿತು ಎನ್ನುತ್ತಾರೆ. ಅಲ್ಲಿಯವರೆಗೂ ಇರಾನಿನ ಈ ಭಾಗದಲ್ಲಿ ಹಿಂದೂಗಳು ಮತ್ತು ಹಿಂದೂರಾಷ್ಟ್ರದ ಕುರಿತಂತೆ ಅಪಾರವಾದ ಶ್ರದ್ಧೆಯ ಭಾವನೆಯಿತ್ತು. ಇರಾನಿನ ಜೊರಾಷ್ಟ್ರಿಯನ್ ಮತದ ಸ್ಥಾಪಕನಾದ ಜರತೂಷ್ಟ್ರ ಭಾರತದವನೇ ಆಗಿದ್ದುದು ಇದಕ್ಕೊಂದು ಕಾರಣ ಎಂದು ಅನೇಕರು ನಂಬುತ್ತಾರೆ. ಪರ್ಷಿಯಾವನ್ನು ಗೆದ್ದ ಮುಸಲ್ಮಾನರು ಅಲ್ಲಿಂದ ಮುಂದೆ ಭಾರತವನ್ನು ಗೆಲ್ಲಬೇಕೆಂದು ಅನೇಕ ಬಾರಿ ಪ್ರಯತ್ನಪಟ್ಟು ಸೋತುಹೋದರು. ಹಿಂದೂಗಳ ಶೌರ್ಯ ಅವರನ್ನು ರೊಚ್ಚಿಗೆಬ್ಬಿಸಿತು. ಮುಂದೆ ಮೋಸದಿಂದ ಇಲ್ಲಿನ ರಾಜರುಗಳನ್ನು ಸೋಲಿಸಿ ಕ್ರೌರ್ಯವನ್ನೇ ಮೆರೆದು ಇಲ್ಲಿ ಹಿಂದೂಗಳ ಸಮೂಲ ನಾಶ ಮಾಡುತ್ತಿದ್ದುದಲ್ಲದೇ ಅವರನ್ನು ಗುಲಾಮರನ್ನಾಗಿ ತಮ್ಮ ರಾಷ್ಟ್ರಗಳಿಗೆ ಎಳೆದು ತರುತ್ತಿದ್ದರು. ಅಲ್ಲಿ ಸಹಜವಾಗಿ ಗುಲಾಮರು ಯಾರೆಂದಾಗ ಹಿಂದೂಗಳು ಎಂದು ಹೇಳಲಾಗುತ್ತಿದ್ದುದರಿಂದ ಈ ಪದಕ್ಕೆ ಗುಲಾಮ ಎಂಬ ಅರ್ಥ ಬಂದಿರಬಹುದೆಂದು ಎಂಥವನೂ ಊಹಿಸಬಹುದು. ಇನ್ನು ತಾವು ವಶಪಡಿಸಿಕೊಂಡ ಭೂಭಾಗವನ್ನೆಲ್ಲ ಇಸ್ಲಾಮಿಗೆ ಮತಾಂತರಿಸಿದ ಮುಸಲ್ಮಾನರು ಭಾರತದಲ್ಲಿ ಮಾತ್ರ ತಮ್ಮ ಪ್ರಯತ್ನದಲ್ಲಿ ಸೋತುಹೋದರು. ಪ್ರತೀ ಬಾರಿ ಅವರು ಮಂದಿರಗಳನ್ನು ಧ್ವಂಸಗೊಳಿಸಿ ಭಾರತವನ್ನು ಗೆದ್ದಿದ್ದೇವೆಂದು ಬೀಗುವಾಗಲೇ ಮತ್ತೊಬ್ಬ ಹಿಂದೂ ರಾಜ ಸಮರ್ಥವಾಗಿ ಈ ರಾಷ್ಟ್ರವನ್ನು ನಿರ್ವಿುಸುತ್ತಿದ್ದ, ಹಿಂದೂಧರ್ವಿುಯರ ರಕ್ಷಣೆ ಮಾಡುತ್ತಿದ್ದ. ಇತರೆಲ್ಲ ದೇಶಗಳನ್ನು ಹೇಗೆ ಸುಲಭಕ್ಕೆ ಆಪೋಶನ ತೆಗೆದುಕೊಂಡರೋ ಹಾಗೆ ಹಿಂದೂ ರಾಷ್ಟ್ರ ಅವರ ತೆಕ್ಕೆಗೆ ಬೀಳಲಿಲ್ಲ. ಹೀಗಾಗಿಯೇ ಹಿಂದೂ ಎಂದರೆ ‘ಡಾಕು’ ಎಂಬ ಪದ ಅರ್ಥವಾಗಿ ಬಂದಿರಬಹುದು ಎಂಬುದನ್ನೂ ಮೇಲ್ನೋಟಕ್ಕೆ ಊಹಿಸಬಹುದು. ಆದರೆ ಒಂದು ವಿಷಯ ಪ್ರತಿಯೊಬ್ಬರೂ ನೆನಪಿಡಬೇಕು. ವಿರೋಧಿಯೊಬ್ಬ ದೂಷಿಸುತ್ತಿದ್ದಾನೆಂದರೆ ಅರ್ಥ, ನಿಮ್ಮನ್ನು ತನ್ನ ಶಕ್ತಿಯಿಂದ ಗೆಲ್ಲಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂದೇ ಅಲ್ಲವೇನು? ಆಕ್ರೋಶವನ್ನು ತೋರ್ಪಡಿಸಿಕೊಳ್ಳುವ ರೀತಿ ಪದಗಳಿಗೆ ವಿಕೃತ ಅರ್ಥ ಕೊಡುವುದೇ ಆಗಿದೆ. ನಾವು ಚಿಕ್ಕಂದಿನಲ್ಲಿ ಸಂಡಾಸಿಗೆ ಹೋಗುವುದನ್ನು ‘ಲಂಡನ್ನಿಗೆ ಹೋಗಿ ಬರುತ್ತೇವೆ’ ಎನ್ನುತ್ತಿದ್ದೆವು. ಅನೇಕ ಕಾಲೇಜುಗಳಲ್ಲಿ ಶೌಚಗೃಹದ ಮೇಲೆ ‘ಪಾಕಿಸ್ತಾನಕ್ಕೆ ಸ್ವಾಗತ’ ಎಂದು ಬರೆದಿರುವುದನ್ನು ನೀವು ನೋಡಿಲ್ಲವೇನು? ಇದರರ್ಥ ಪಾಕಿಸ್ತಾನವೆಂದರೆ ಶೌಚಗೃಹವೆಂತಲೋ ಲಂಡನ್ ಎಂದರೆ ಸಂಡಾಸೆಂತಲೋ ಅಲ್ಲ ಮತ್ತು ಯಾವುದೋ ರಾಷ್ಟ್ರ ಒಂದು ಪದವನ್ನು ಹೀಗೆ ವಿಕೃತಗೊಳಿಸಿತು ಎಂದಮಾತ್ರಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಯೂ ಇಲ್ಲ. ಇದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗಬೇಕಿದೆ ಅಷ್ಟೇ!
ಕಾಲಕ್ರಮದಲ್ಲಿ ಹಿಂದೂ ಎನ್ನುವ ಪದ ನಮ್ಮಲ್ಲಿ ಎಷ್ಟು ವ್ಯಾಪಕವಾಗಿ ಬಳಕೆಯಾಯ್ತೆಂದರೆ ವಿಜಯನಗರ ಸಾಮ್ರಾಜ್ಯ ಕಟ್ಟಿದ ಬುಕ್ಕ ಭೂಪತಿಯನ್ನು ‘ಹಿಂದೂ ಸುರತ್ರಾಣ’ ಎಂದೇ ಗೌರವಿಸಲಾಗುತ್ತಿತ್ತು. ಮತ್ತು ಶಿವಾಜಿ ಮಹಾರಾಜರನ್ನು ‘ಹಿಂದೂ ಸಾಮ್ರಾಜ್ಯ ಸ್ಥಾಪಕ’ ಎಂದೇ ಗೌರವಿಸಲಾಗುತ್ತದೆ. ಜಗತ್ತೆಲ್ಲ ಇಂದು ಈ ಮಹಾನ್ ಸಂಸ್ಕೃತಿಯನ್ನು ಹಿಂದೂವೆಂದೇ ಗೌರವಿಸುತ್ತಿರುವಾಗ ಇವರುಗಳ ಕಣ್ಣೀರು ಹಾಯೆನಿಸುತ್ತದೆ. ಹಿಂದೂ ಎಂಬ ಪದವನ್ನು ಕೇಳಿದರೆ ಶತ್ರುಗಳಿಗೆ ನಡುಕ ಉಂಟಾಗುವುದು ಸರಿ, ಆದರೆ ತಮ್ಮನ್ನು ತಾವು ಆಳುವವರೆಂದು ಭಾವಿಸಿಕೊಂಡಿರುವವರು ಹೆದರುವುದನ್ನು ಕಂಡರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಗರ್ವದಿಂದ ಹೇಳಿ, ನಾನು ಹಿಂದೂ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)