

ಆರ್ಯ ಆಕ್ರಮಣವಾದಕ್ಕೆ ಇವರು ಕೊಟ್ಟ ಪುರಾವೆ ಸರಸ್ವತಿ ನದಿ ಭಾರತದಲ್ಲಿ ಇರಲೇ ಇಲ್ಲ ಎಂಬುದು. ವೇದಗಳಲ್ಲಿ ಉಲ್ಲೇಖಗೊಂಡಿರುವ ಸರಸ್ವತಿ ನದಿ ವಾಸ್ತವವಾಗಿ ಭಾರತದಲ್ಲಿಲ್ಲದೇ ಇದ್ದುದರಿಂದ ಈ ಇಡಿಯ ಸಂಸ್ಕೃತಿ ಇರಾನಿನ ಮೂಲದ್ದೇ ಆಗಿರಬೇಕು ಎಂದು ವಾದಿಸಲಾಯ್ತು. ಅಫ್ಘಾನಿಸ್ತಾನದಲ್ಲಿನ ಹರಾಕಿತಿ ಎಂಬ ಸರೋವರವನ್ನೇ ಸರಸ್ವತಿಯ ಅಪಭ್ರಂಶವೆಂದು ತೋರಿಸಿ ಕೈತೊಳೆದುಕೊಳ್ಳಲಾಯ್ತು. ಹೊರಗಿನಿಂದ ಬಂದ ಆರ್ಯರು ಆಕ್ರಮಣ ಮಾಡಿ ಮೆರೆಯಬಹುದಾದರೆ ನಾವೇಕೆ ಆಳ್ವಿಕೆ ಮಾಡಬಾರದು ಎಂಬುದು ಕ್ರಿಶ್ಚಿಯನ್ನರ ವಾದ. ನಮಗೂ ಈ ತಥಾಕಥಿತ ಆರ್ಯರ ಮೇಲೆ ಎಷ್ಟು ಕೋಪವಿತ್ತೆಂದರೆ ನಾವು ಇಟಲಿಯಿಂದ ಬಂದ ಮಿಷನರಿಗಳನ್ನು ಬೇಕಾದರೆ ಪ್ರೀತಿಸುತ್ತಿದ್ದೆವು, ಉತ್ತರ ಭಾರತದಿಂದ ಬಂದ ತಥಾಕಥಿತ ಆರ್ಯರನ್ನಲ್ಲ. ಎಲ್ಲ ವಿಚಾರಗಳೂ ಆರ್ಯ ಆಕ್ರಮಣವಾದದ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿತು. ಭಾರತೀಯ ಮನಸ್ಸುಗಳಲ್ಲಿ ಎಷ್ಟು ಹುಳಿ ಹಿಂಡಲಾಯ್ತೆಂದರೆ ದಕ್ಷಿಣ ಭಾರತದವ ಉತ್ತರದವನನ್ನು ಆರ್ಯನೆಂದ, ಕರ್ನಾಟಕದ ದಲಿತ ಬ್ರಾಹ್ಮಣನನ್ನು ಆರ್ಯನೆಂದ, ಹೀಗೆ ಪ್ರತಿಯೊಬ್ಬನೂ ಮತ್ತೊಬ್ಬನನ್ನು ಆರ್ಯ ದೃಷ್ಟಿಯಿಂದಲೇ ನೋಡುತ್ತಾ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ನಡೆದ!
ಆಗಲೇ ಪಥ ಬದಲಾಯಿಸಬಲ್ಲಂತಹ ಸಂಶೋಧನೆಗಳು ನಡೆದಿದ್ದು. ಹರಪ್ಪ ನಾಗರಿಕತೆಯ ಉತ್ಖನನಗಳು ಅಲ್ಲಿ ಯಾವುದೇ ಆಕ್ರಮಣವನ್ನು ಸಾಬೀತುಪಡಿಸಲಿಲ್ಲ. ಉಪಗ್ರಹದ ಚಿತ್ರಗಳ ಹೀಟ್ ಮ್ಯಾಪನ್ನು ಅಧ್ಯಯನ ಮಾಡಿದಾಗ ಭೂಗರ್ಭದಲ್ಲಿ ನದಿಯೊಂದು ಹರಿಯುತ್ತಿದ್ದುದು ಕಂಡು ಬಂತು ಮತ್ತು ಈ ನದಿ ವೇದಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿಯ ಪಾತ್ರವನ್ನೇ ಹೋಲುತ್ತಿದ್ದುದು ಎಲ್ಲರನ್ನೂ ಅಚ್ಚರಿಗೆ ತಳ್ಳಿತು. ಇದರ ಅಧ್ಯಯನ ತೀವ್ರವಾಗುತ್ತಿದ್ದಂತೆ ಆರರಿಂದ ಹತ್ತು ಸಾವಿರ ವರ್ಷಗಳ ಹಿಂದೆ ಈ ನದಿ ಜೀವಂತವಾಗಿದ್ದುದರ ಕುರಿತಂತೆ ವಿಜ್ಞಾನಿಗಳು ಖಡಾಖಂಡಿತವಾಗಿ ಹೇಳಿದರು. ಮುಂದೆ ಹರಿಯಾಣಾದ ಹರಪ್ಪ ನಾಗರಿಕತೆಯ ಅವಶೇಷಗಳ ಹಿನ್ನೆಲೆಯಲ್ಲಿ ಸಿಕ್ಕ ಮೂಳೆಗಳ ಡಿಎನ್ಎ ಇತರೆ ದೇಶದ ಈ ಕಾಲಘಟ್ಟದ ಡಿಎನ್ಎಗಳಿಗಿಂತಲೂ ಭಿನ್ನವಾಗಿರುವುದು, ಆರ್ಯರೆಂಬ ಜನಾಂಗ ವಿದೇಶದ್ದು ಎಂಬ ವಾದವನ್ನು ಪೂರ್ಣವಾಗಿ ಸಾಯಿಸಿಬಿಟ್ಟಿತು. ಆರ್ಯರು ಭಾರತೀಯರಾಗಿದ್ದರು, ಅವರು ಆಕ್ರಮಣ ಮಾಡಿ ದ್ರವಿಡರನ್ನು ಸೋಲಿಸಲಿಲ್ಲ, ವೇದಗಳು ಭಾರತೀಯರದ್ದೇ ಕೊಡುಗೆ ಎಂಬೆಲ್ಲ ಚಿಂತನೆಯನ್ನು ಜಗತ್ತಿನ ವಿಜ್ಞಾನಿಗಳು ಸಂಪೂರ್ಣವಾಗಿ ಒಪ್ಪಿಕೊಂಡರು. ಆರ್ಯರ ಆಕ್ರಮಣವೆಂಬುದು ಬುಡವಿಲ್ಲದ ವಾದ ಎನ್ನುವುದು ಅವರಿಗೀಗ ಮನವರಿಕೆಯಾಗಿತ್ತು. ಕಳೆದ ಎರಡು ದಶಕಗಳಿಂದ ಜಗತ್ತಿಗೆ ಈ ಕುರಿತಂತೆ ಯಾವ ಅನುಮಾನವೂ ಇಲ್ಲ. ಆದರೆ ಕೆಲವೇ ವರ್ಷಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಮಾತ್ರ ಈ ವಿಚಾರದ ಕುರಿತಂತೆ ಇನ್ನೂ ಅರಿವು ಮೂಡಿಲ್ಲ! ಅವರು ಈಗಲೂ ಅದೇ ಹಳತಾದ ವಾದವನ್ನು ಮುಂದಿಟ್ಟುಕೊಂಡು ಹಿಂದೂಗಳಲ್ಲಿ ಒಡಕನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ. ನಾವೂ ಕೂಡ ಅದಕ್ಕೆ ಬಲಿಯಾಗುತ್ತಿದ್ದೇವೆ. ರಾಜಕೀಯ ಕಾರಣಕ್ಕಾಗಿ ದೇಶವನ್ನು ಒಡೆಯಲು ಹೇಸದ ಮಂದಿಯಿಂದ ನಾವು ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಠ್ಯಪುಸ್ತಕ ಬದಲಾಗಬೇಕಾದ್ದು ಮಕ್ಕಳಿಗಲ್ಲ, ಈ ರಾಜಕಾರಣಿಗಳಿಗೆ.
ನಮ್ಮದ್ದೂ ಒಂದು ದೋಷವಿದೆ. ಮಾತೆತ್ತಿದರೆ ಹಿಂದೂ ಸಮಾಜದಲ್ಲಿ ಜಾತಿಪದ್ಧತಿ ಇದೆ, ಅಸ್ಪಶ್ಯತೆ ಇದೆ. ಹೀಗಾಗಿಯೇ ಈ ಸಮಾಜ ಮುಂದುವರಿಯುವುದಿಲ್ಲ ಎಂದೆಲ್ಲ ಕೀಳರಿಮೆಯಿಂದ ನರಳುತ್ತಿರುತ್ತೇವೆ. ಕಳೆದ ನೂರು ವರ್ಷಗಳಲ್ಲಿ ಭಾರತ ಬದಲಾಗಿರುವ ರೀತಿ ಅನೂಹ್ಯವಾದ್ದು. ಡಾ. ಬಾಬಾಸಾಹೇಬ್ ಅಂಬೇಡ್ಕರರು ಮಳೆ ಬೀಳುವಾಗಲೂ ಮನೆಗೆ ಸೇರಿಸಿಕೊಳ್ಳದೇ ಬೀದಿಯಲ್ಲೇ ನಿಲ್ಲಬೇಕಾದ ಕಾಲವಿತ್ತು. ಆದರಿಂದು ಹಾಗಿಲ್ಲ. ನಗರಗಳಲ್ಲಂತೂ ಯಾರದ್ದು ಯಾವ ಜಾತಿ ಎಂಬುದೇ ಅರಿವಾಗುವುದಿಲ್ಲ. ಬದುಕಿನ ರೀತಿ-ನೀತಿಗಳು ಎಷ್ಟರ ಮಟ್ಟಿಗೆ ಬದಲಾಗಿವೆ ಎಂದರೆ ಜನ ಹೋಟೆಲುಗಳಲ್ಲಿ ಊಟ ಮಾಡುತ್ತಾರೆ, ಒಟ್ಟಿಗೆ ರಂಗಮಂದಿರಗಳಿಗೆ ಹೋಗುತ್ತಾರೆ, ಮಂದಿರ ಜಾತ್ರೆಗಳಲ್ಲಿ ಯಾವ ಭೇದವೂ ಇಲ್ಲ, ಮುಕ್ತವಾಗಿ ಒಬ್ಬರ ಮನೆಗಳಿಗೆ ಒಬ್ಬರು ಹೋಗುವ ವಾತಾವರಣ ಸೃಷ್ಟಿಯಾಗಿದೆ. ಹಾಗಂತ ಪೂರ್ತಿಯಾಗಿ ಜಾತಿ ಪದ್ಧತಿ ಸತ್ತೇಹೋಗಿದೆ ಎಂದೇನೂ ಹೇಳುವುದಿಲ್ಲ. ಆದರೆ ಕಂಡುಬಂದಿರುವ ಬದಲಾವಣೆ ಮಾತ್ರ ಅನೂಹ್ಯವಾದದ್ದು. ಇಷ್ಟಾದರೂ ನಮ್ಮ ಮೇಲೆ ಗೂಬೆ ಕೂರಿಸುವುದನ್ನು ಮಾತ್ರ ಬಿಡುವುದೇ ಇಲ್ಲ. ಈ ಕೀಳರಿಮೆಯಿಂದಾಗಿಯೇ ನಾವೀಗ ಮತಾಂತರವನ್ನು, ಲವ್ಜಿಹಾದನ್ನು ಎದುರಿಸಲು ಸಾಧ್ಯವಾಗದೇ ಬಳಲುತ್ತಿರುವುದು. ಈ ಕೀಳರಿಮೆಯನ್ನು ಕೊಡವಿಕೊಂಡು ನಾವೀಗ ಸಿಡಿದೇಳಬೇಕಿದೆ. ಮುಸಲ್ಮಾನರಲ್ಲಿ ನಮಗಿಂತ ಹೆಚ್ಚು ಜಾತಿ ವ್ಯವಸ್ಥೆ ಇದೆ. ಅವರಲ್ಲಿ ಅಶ್ರಫ್ಗಳು ಮೇಲ್ವರ್ಗದವರು, ಅಜ್ರಫ್ಗಳೆಂದರೆ ದಲಿತರು. ಈ ದಲಿತರನ್ನು ಮೇಲ್ವರ್ಗದವರು ತುಳಿಯುವ ಪರಿ ಇದೆಯಲ್ಲ ಅದು ಎಂಥವರಿಗೂ ಗಾಬರಿ ಹುಟ್ಟಿಸುವಂಥದ್ದು.
ಮುಸಲ್ಮಾನರು ಹಿಂದೂಗಳನ್ನು ಬೇಕಿದ್ದರೆ ಮದುವೆಯಾಗಿಬಿಡುತ್ತಾರೆ. ಆದರೆ ಅಶ್ರಫ್ಗಳು ಅಜ್ರಫ್ಗಳ ಮನೆಯಿಂದ ಹೆಣ್ಣು ತಂದುಕೊಳ್ಳಲಾರರು. ಹಾಗಂತ ಇವೆರಡೇ ಪಂಗಡಗಳಲ್ಲ, ಇದರಲ್ಲೂ ನೂರಾರು ವಿಭಜನೆಗಳು. ಅಷ್ಟಾದರೂ ಅವರು ಮಾತ್ರ ಕೀಳರಿಮೆಯಿಂದ ನರಳುವುದಿಲ್ಲ. ಏಕೆಂದರೆ ಅವರಿಗೆ ಒಟ್ಟಾಗಲು ಹಿಂದೂವಿರೋಧವೆಂಬ ದಂಡವೊಂದು ಕೈಯ್ಯಲ್ಲಿದೆ. ಅದನ್ನು ಬಳಸಿ ಜೊತೆಗೆ ಸೇರಿಬಿಡುತ್ತಾರೆ. ಇರುವ ಎಲ್ಲ ಕೀಳರಿಮೆಯನ್ನು ಮರೆತುಬಿಡುತ್ತಾರೆ. ನಾವಾದರೋ ಸಣ್ಣ-ಸಣ್ಣ ವಿಚಾರಗಳಿಗೂ ಕಿತ್ತಾಡುತ್ತಾ, ನಮ್ಮನ್ನು ನಾವು ಬಲಹೀನರನ್ನಾಗಿಸಿಕೊಳ್ಳುತ್ತಿದ್ದೇವೆ. ಮುಂದಿನ ಹತ್ತು ವರ್ಷಗಳ ಕಾಲ ನಮ್ಮಲ್ಲಿರುವ ಕೆಡುಕುಗಳ ಕುರಿತಂತೆ ನಾವು ಕೆಲಸ ಮಾಡಬೇಕು ನಿಜ, ಆದರೆ ಒಳಿತಿನ ಕುರಿತಂತೆ ಹೆಚ್ಚು ಮಾತನಾಡಬೇಕು. ಶೈವರು-ವೈಷ್ಣವರಲ್ಲಿ ಇರುವ ಸಾಮಾನ್ಯ ಅಂಶಗಳ ಕುರಿತಂತೆ ಜನರೊಂದಿಗೆ ಹೆಚ್ಚು ರ್ಚಚಿಸಬೇಕು. ಲಿಂಗಾಯತರು-ಬ್ರಾಹ್ಮಣರ ನಡುವೆ ಇರಬಹುದಾದ ಸಮಾನ ಅಂಶಗಳನ್ನು ಮುನ್ನೆಲೆಗೆ ತರಬೇಕು. ಜಾತಿಗೆ ಸೀಮಿತವಾಗಿಸಿರುವ ಮಹಾಪುರುಷರನ್ನು ವಿಸ್ತಾರಗೊಳಿಸಬೇಕು. ಕೊನೆಗೆ ಹಿಂದುವೆನಿಸಿಕೊಳ್ಳುವ ಯಾವೊಬ್ಬನೂ ಹಸಿವಿನಿಂದ ನರಳದಂತೆ, ಅನಕ್ಷರತೆಯಿಂದ ಕೊರಗದಂತೆ, ಕೆಲಸವಿಲ್ಲದೇ ಸಾಯದಂತೆ ನೋಡಿಕೊಳ್ಳಬೇಕು. ಬಹುಶಃ ನಮ್ಮೆಲ್ಲರ ಕರ್ತವ್ಯದ ಭಾಗವಿದು. ಆಗ ಮಾತ್ರ ಸಮರ್ಥವಾದ, ಸದೃಢವಾದ ರಾಷ್ಟ್ರ ಕಟ್ಟಲು ಸಾಧ್ಯ.
ಹ್ಹ! ಆದರೇನು? ನಾಲ್ಕು ಜನ ಈ ರೀತಿಯ ಸಂಕಲ್ಪ ಮಾಡಿದ ಮರುಕ್ಷಣವೇ ಈ ನಾಲ್ಕು ಜನರನ್ನೊಡೆಯಲು ಸಿದ್ದರಾಮಯ್ಯನಂಥವರೊಬ್ಬರು ಬಂದು ನಿಂತುಬಿಡುತ್ತಾರೆ. ಮತ್ತು ಇವರ ರಂಗಿನ ಸುಳ್ಳುಗಳು ಸತ್ಯದ ಮೇಲೆ ಪರದೆಯನ್ನೇ ಎಳೆದುಬಿಡುತ್ತವೆ. ಆದರೆ ಒಂದಂತೂ ಸತ್ಯ. ಈ ದೇಶ ಮ್ಯಾಕ್ಸ್ಮುಲ್ಲರ್ನನ್ನೇ ಜೀರ್ಣಿಸಿಕೊಂಡಿರುವಾಗ ಇವರೆಲ್ಲ ಯಾವ ಲೆಕ್ಕ?
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)