

ಬದುಕಿನ ಅನೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊನೆಗೂ ಸಿಗುವುದಿಲ್ಲ.
ಕಣ್ಣಿಗೆ ಕಾಣಿಸುವ ಕಾರಣಗಳು ಅನೇಕಾನೇಕ. ಆದರೆ, ಎಲ್ಲ ಸಮಸ್ಯೆಗಳ ಒಳಗುಟ್ಟು ಹೊರಗಣ್ಣ ನೋಟಕ್ಕೆ ಕಾಣುವಂಥದ್ದೇ ಆಗಿರುವುದಿಲ್ಲ. ‘ಮನಸಿನೊಳಗೆ ನೋಡು’ ಎಂದು ದಾಸರು ಹೇಳಿದ್ದು ಅದೇ ಕಾರಣಕ್ಕೆ.
ಏಕ್ ಸೆ ಅನೇಕ್, ಅನೇಕ್ ಸೆ ಏಕ್, ಏ ಸಬ್ ಪ್ಹೇಕ್, ತುಜ್ವೆು ದೇಖ್.. ಎಂಬ ದೋಹೆಯ ಭಾವಾರ್ಥವೂ ಅದೇ.
ಸಮಸ್ಯೆ ಇದೆ. ಬಹಳ ಕಾಲದಿಂದ ಬಾಧಿಸುತ್ತಿದೆ. ಏನೆಲ್ಲ ಹುಡುಕಾಟ, ತಡಕಾಟ, ಪರದಾಟ, ಪೇಚಾಟ, ಹೋರಾಟಗಳ ಬಳಿಕವೂ ಪರಿಹಾರ ಕಾಣುತ್ತಿಲ್ಲ. ಎಲ್ಲೋ ಏನೋ ಕೊಂಡಿ ತಪ್ಪಿದೆ. ಗುರಿ ಕಾಣುತ್ತಿರುತ್ತದೆ. ಆದರೆ, ದಾರಿಯಲ್ಲಿ ಹಠಾತ್ ನಿಲುಗಡೆಗಳು ಎದುರಾಗುತ್ತವೆ. ಸರಿದಾರಿ ಅಂದುಕೊಂಡ ಕಡೆ ಡೆಡ್ಎಂಡ್ ಅಡ್ಡಲಾಗಿ ಹಾದಿ ಬದಲಿಸುವಂತಾಗುತ್ತದೆ. ಹತ್ತಿರವೆಂದುಕೊಂಡ ಗುರಿ ದೂರ ಸರಿದಂತೆ ಭಾಸವಾಗುತ್ತದೆ.
**
ಪ್ರೀತಿ, ಅಧಿಕಾರ, ಅವಕಾಶ, ಸ್ಥಾನಮಾನ...
ತ್ಯಾಗರಾಜರಾಗುವುದು ಎಲ್ಲರಿಂದ ಸಾಧ್ಯವಿಲ್ಲ. ನನಗೇನೂ ಬೇಕಾಗಿಲ್ಲ, ಯಾವುದೂ ಇರದಿದ್ದರೂ ಖುಷಿಯಾಗಿರಬಲ್ಲೆ ಎಂಬ ವೈರಾಗ್ಯದ ಮಾತು ಆಡುವುದು ಸುಲಭ. ಆದರೆ, ವಸ್ತುಶಃ ಪಾಲಿಸುವುದು ಕಷ್ಟ. ತ್ಯಾಗ ಮಾಡುವುದು ಅಷ್ಟು ಸುಲಭವೂ ಅಲ್ಲ.. ಎಲ್ಲವನ್ನೂ ಬಿಟ್ಟುಕೊಡುವುದು, ಹಾಗೆ ಬಿಟ್ಟುಕೊಟ್ಟ ಮೇಲೆ ಏನೂ ಆಗಿಲ್ಲವೆಂಬಂತೆ ಬದುಕುವುದು ಬಹಳ ಕಷ್ಟ... ವಿರಾಟ್ ಕೊಹ್ಲಿ ಪಡುತ್ತಿರುವ ಕಷ್ಟವನ್ನು ನೋಡುವಾಗ ‘ತ್ಯಾಗದ ನೋವಿನಿಂದ’ ಅವರು ಹೊರಬಂದಿಲ್ಲವೆನಿಸುತ್ತದೆ.
**
ವಿರಾಟ್, ಬದುಕಿನಲ್ಲಿ ಸಾಕಷ್ಟು ಕಷ್ಟವನ್ನು ಕಂಡು, ಉಂಡು ಮೇಲೆ ಬಂದ ಹುಡುಗ. ಆದರೆ, ಬ್ಯಾಟಿಂಗ್ ಮಾಡುವುದು ಅವರಿಗೆ ಯಾವಾಗಲೂ ಕಷ್ಟದ ಕೆಲಸವೇ ಆಗಿರಲಿಲ್ಲ. ಬೌಂಡರಿ ಬಾರಿಸುವುದು, ಸಿಕ್ಸರ್ ಚಚ್ಚುವುದು, ಸೆಂಚುರಿ ಹೊಡೆಯುವುದು ಕೊಹ್ಲಿ ಪಾಲಿಗೆ ಲೀಲಾಜಾಲವೆಂಬಷ್ಟು ಸಹಜ ಸುಲಭವಾಗಿತ್ತು. ಬ್ಯಾಟಿಂಗ್ ಕ್ರೀಸಿನಲ್ಲಿ ಕೊಹ್ಲಿ ಯಾವುದೋ ಒಬ್ಬ ಬೌಲರ್ ವಿರುದ್ಧ ತಿಣುಕಾಡಿದ್ದೇ ಅಪರೂಪ... ಹೀಗಿರುವಾಗ ಕಳೆದ ಎರಡೂ ಚಿಲ್ಲರೆ ವರ್ಷಗಳಿಂದ ಅದೇನಾಯಿತು? ಶತಕ ನಿರೀಕ್ಷೆಯ ಬರಗಾಲದಲ್ಲಿ ನಾಯಕತ್ವದ ನಾಲ್ಕು ಕಿರೀಟಗಳು ಬಿಕರಿಯಾಗಿ ಹೋದವು. 70 ಶತಕಗಳ ಬಳಿಕ 71ನೇ ಮೂರಂಕಿ ಹುಳಿ ದ್ರಾಕ್ಷಿಯಾಗಿ ಕೊಹ್ಲಿ ಕೈಯಿಂದ ತಪ್ಪಿಸಿಕೊಳ್ಳುತ್ತಿರುವುದು ಹೇಗೆ?
ಫಾಮ್ರ್ ತಾತ್ಕಾಲಿಕ, ಕ್ಲಾಸ್ ಶಾಶ್ವತ ಎಂಬ ಮಾತಿದೆ. ಕೊಹ್ಲಿ ವಿರಳ ಪ್ರತಿಭೆ. ಸಾರ್ವಕಾಲಿಕ ಸಾಧನೆಗಳನ್ನು ಒಂದಾದಮೇಲೊಂದರಂತೆ ಧಾವಂತದಿಂದ ಒಲಿಸಿಕೊಳ್ಳುತ್ತ ದಾಪುಗಾಲಿಡುತ್ತಿದ್ದ ಸಮರ್ಥ. ಅವರ ಆಟದಲ್ಲಿ ಎದುರಾಳಿಗಳು ವ್ಯೂಹ ಹೆಣೆಯುವಂಥ ಹುಳುಕುಗಳೇ ಕಡಿಮೆ. ಸರ್ವಋತು ಆಟಗಾರ. ಯಾವುದೇ ದೇಶ, ಪಿಚ್, ವಾತಾವರಣ, ಸ್ಪಿನ್, ಸ್ಪೀಡ್, ಸ್ವಿಂಗ್ ಎಂಬ ಯಾವ ಭೇದವೂ ಇಲ್ಲದೆ ಏಕಪ್ರಕಾರವಾಗಿ ಆಡಬಲ್ಲ ಗಟ್ಟಿಗ.
ಕಳೆದ ನೂರಕ್ಕೂ ಹೆಚ್ಚು ಇನಿಂಗ್ಸ್ಗಳ ಆಟವನ್ನೇ ಆಧರಿಸಿ ಹೇಳುವುದಾದರೂ, ಕೊಹ್ಲಿ ಶತಕ ಬಾರಿಸುತ್ತಿಲ್ಲ ಎನ್ನುವುದಷ್ಟೇ ನಿಜ. ಆದರೆ, ಅವರ ಆಟದ ಮೊನಚು ಮಾಸಿಲ್ಲ. ಅವರು ಬ್ಯಾಟನ್ನು ಚೆಂಡಿಗೆ ತಾಕಿಸಲು ಒದ್ದಾಡುತ್ತಿಲ್ಲ, ವೇಗದ ಎಸೆತಗಳನ್ನು ಅಂದಾಜಿಸಲಾಗದೆ ಸತತವಾಗಿ ಬೌಲ್ಡ್ ಆಗುತ್ತಿಲ್ಲ, ಸ್ವಿಂಗ್ ಎಸೆತಗಳನ್ನು ಕೆಣಕಿ ಸ್ಲಿಪ್ ಫೀಲ್ಡರ್ಗಳಿಗೆ ಸುಲಭ ತುತ್ತಾಗುತ್ತಿಲ್ಲ. ರನ್ ಗಳಿಸಲು ಒದ್ದಾಡುತ್ತಿಲ್ಲ. ಅವರ ಫೇವರಿಟ್ ಹೊಡೆತಗಳೆಲ್ಲವೂ ಅವರ ಬತ್ತಳಿಕೆಯಲ್ಲೇ ಇವೆ. ಸಿಕ್ಸರ್ ಬಾರಿಸುವಾಗಿನ ಸೊಗಸು ಮಾಯವಾಗಿಲ್ಲ.. ಬೌಂಡರಿ ಬಾರಿಸುವ ಟೈಮಿಂಗ್, ಪ್ಲೇಸ್ವೆುಂಟ್ ಹದ ತಪ್ಪಿಲ್ಲ. ಕಳೆದ ನೂರು ಇನಿಂಗ್ಸ್ಗಳಿಂದ ಅವರು ಶತಕ ಬಾರಿಸದಿದ್ದರೂ, ಯಾವುದೇ ಬೌಲರ್ ತನ್ನ ಮೇಲೆ ಸವಾರಿ ಮಾಡಲು ಅವಕಾಶ ಕೊಟ್ಟಿಲ್ಲ. ಇನ್ನು ಫಿಟ್ನೆಸ್ ವಿಚಾರದಲ್ಲೂ ಅಷ್ಟೇ, ಸಮಕಾಲೀನರಲ್ಲಿ ಕೊಹ್ಲಿಯನ್ನು ಮೀರಿಸುವಂಥ ಇನ್ನೋರ್ವ ಆಟಗಾರ ಇಲ್ಲ.
ಕೆಲವೊಮ್ಮೆ, ಕ್ರಿಕೆಟ್ ಮೈದಾನದಲ್ಲಿ ಸಾಧನೆಗೆ ಮನುಷ್ಯ ಪ್ರಯತ್ನದ ಜೊತೆಗೆ ದೈವಸಂಕಲ್ಪವೂ ಜತೆಗಿರಬೇಕೆನಿಸುತ್ತದೆ. ಪಂದ್ಯಗಳ ಲೈವ್ ವೀಕ್ಷಣೆಯಲ್ಲಿ ನಾವು ಅದೆಷ್ಟು ಬಾರಿ ಕಂಡಿಲ್ಲ? ಸುಲಭಾತಿಸುಲಭ ಕ್ಯಾಚ್ಗಳನ್ನು ಆಟಗಾರರು ನೆಲಕ್ಕೆ ಹಾಕುತ್ತಾರೆ. ಮೊನ್ನೆ ಐಪಿಎಲ್ ಪಂದ್ಯವೊಂದರಲ್ಲಿ ಒಬ್ಬನೇ ಆಟಗಾರನಿಗೆ ಸತತ ಎರಡು ಎಸೆತಗಳಲ್ಲಿ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಲಾಯಿತು. ಆದರೂ, ಕೊನೆಗೆ ಆತ ಅದೇ ಓವರ್ನಲ್ಲಿ ಮೂರನೇ ಬಾರಿ ಕ್ಯಾಚ್ ನೀಡಿ ಔಟಾಗಿದ್ದು ಬೇರೆ ಮಾತು. ತುಂಬಾ ಸುಲಭವೆನಿಸುವ ರನೌಟ್ಗಳು, ಸ್ಟಂಪ್ ಔಟ್ಗಳು ಮಿಸ್ ಆಗುತ್ತವೆ. ಅದೃಷ್ಟವಿದ್ದ ದಿನ ಚೆಂಡನ್ನು ಹತ್ತು ಬಾರಿ ಆಕಾಶಕ್ಕೆ ಹೊಡೆದರೂ, ಫೀಲ್ಡರ್ಗಳು ಇಲ್ಲದ ಜಾಗದಲ್ಲೇ ಬಿದ್ದಿರುತ್ತದೆ. ಪಕ್ಕಾ ಎಲ್ಬಿಡಬ್ಲ್ಯು ಅನ್ನಿಸುತ್ತಿದ್ದರೂ, ಅಂಪೈರ್ ನೀಡುವುದಿಲ್ಲ, ಡಿಆರ್ಎಸ್ನಲ್ಲೂ ತಾಂತ್ರಿಕ ಕಾರಣ ಮುಂದೊಡ್ಡಿ ಅಂಪೈರ್ ತೀರ್ಪೆ ಅಂತಿಮ ಎಂದು ಬಿಟ್ಟಿರುತ್ತಾರೆ. ಕೊಹ್ಲಿಗೆ ಇತ್ತೀಚಿನ ಇನಿಂಗ್ಸ್ಗಳಲ್ಲಿ ಇಂಥ ಅದೃಷ್ಟ ಕೂಡ ಕೈಹಿಡಿಯುತ್ತಿಲ್ಲ. ಯಾವನೋ ಬೌಲರ್ ಜೀವಮಾನದಲ್ಲಿ ನೆನಪಿಟ್ಟುಕೊಳ್ಳುವಂಥ ಅದ್ಭುತ ಎಸೆತ, ಹಿಡಿಯಲೇ ಅಸಂಭವ ಎಂಬಂಥ ಅದ್ಭುತ ಕ್ಯಾಚ್ಗಳಿಗೆ ಕೊಹ್ಲಿ ಔಟಾಗುತ್ತಿದ್ದಾರೆ. ಡಿಆರ್ಎಸ್ನಲ್ಲೂ ಫಿಫ್ಟಿ-ಫಿಫ್ಟಿ ಎಂಬಂತೆ ತೋರುವ ತೀರ್ಪಗಳು ಕೊಹ್ಲಿ ವಿರುದ್ಧವೇ ಹೋಗುತ್ತಿವೆ. ಇವತ್ತಿನ ಲಹರಿ ಅಮೋಘವಾಗಿದೆ ಶತಕ ಗ್ಯಾರಂಟಿ ಎಂಬ ಭಾವನೆ ಬೆಳೆಯುವ ಹಂತದಲ್ಲೇ ಕೊಹ್ಲಿ ಔಟಾಗುತ್ತಿದ್ದಾರೆ.
ಹಾಗಾದರೆ, ಏನಾಗಿದೆ ಕೊಹ್ಲಿಗೆ? ಏನಾಗಿದೆ ಅವರ ಆಟಕ್ಕೆ? ಅವರು ದೊಡ್ಡ ಮೊತ್ತ ಗಳಿಸಲಾಗದೇ ಇರುವುದಕ್ಕೆ ಅವರ ಆಟದ ಯಾವುದೋ ತಾಂತ್ರಿಕ ಸಮಸ್ಯೆ ಕಾರಣವೆನಿಸುತ್ತಿಲ್ಲ. ದುರದೃಷ್ಟದ ಜತೆಗೆ, ಮಾನಸಿಕವಾಗಿಯೂ ಅವರು ಮೊದಲಿನಂತಿಲ್ಲ ಎಂಬುದೇ ಕಾರಣವಿರುವಂತಿದೆ. ಹೊರಜಗತ್ತಿನ ಕಣ್ಣಿಗೆ ಕೊಹ್ಲಿ ಎಷ್ಟೇ ಸಹಜವಾಗಿ ಕಂಡರೂ; ಜೊತೆ ಆಟಗಾರರೊಂದಿಗೆ ಖುಷಿಖುಷಿಯಾಗಿ ಕಂಡುಬಂದರೂ, ಅಭಿಮಾನಿಗಳೊಂದಿಗೆ ಚೇಷ್ಟೆ, ಆಟದ ನಡುವೆ ಸಿಟ್ಟು, ವಿವಿಧ ಮುಖಭಾವ ಭಂಗಿಗಳಲ್ಲಿ ವ್ಯತ್ಯಾಸ ಕಾಣದಿದ್ದರೂ, ಒಳಗೊಳಗೇ ಕೊಹ್ಲಿ ಕರಗುತ್ತಿರುವುದು ನಿಜ. ಅದ್ಯಾವುದೋ ವೇದನೆ, ಹತಾಶೆ, ಮನೋವ್ಯಥೆ ಅವರನ್ನು ಹಿಡಿದಿಟ್ಟಿರುವಂತಿದೆ. ಭಾರತೀಯ ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕನಾಗಿದ್ದರೂ, ಐಸಿಸಿ ಟೂರ್ನಿಗಳಲ್ಲಿ ದೊರಕದ ಯಶಸ್ಸು, ಐಪಿಎಲ್ ನಾಯಕರಾಗಿ ವೈಫಲ್ಯಗಳು ಹೊಣೆಗಾರಿಕೆಯೇ ಬೇಡ ಎಂಬ ಹಂತಕ್ಕೆ ಅವರನ್ನು ತಂದು ನಿಲ್ಲಿಸಿದವು. ಇನ್ನು ಹೊಣೆಗಾರಿಕೆಯನ್ನು ಸ್ವತಃ ತೊರೆಯುವುದು ಒಂದು ರೀತಿಯಾದರೆ, ಏಕದಿನ ನಾಯಕತ್ವವನ್ನು ಬಲವಂತವಾಗಿ ಕಿತ್ತುಕೊಳ್ಳುವಂಥ ಪರಿಸ್ಥಿತಿ ನಿರ್ವಣವಾಗಿದ್ದು, ಅವರನ್ನು ಇನ್ನಷ್ಟು ಘಾಸಿಗೊಳಿಸಿತು. ಕ್ರಿಕೆಟಿಗನಾಗಿ ಎಷ್ಟೇ ಮೇರು ಸಾಧನೆ ಮಾಡಿದ್ದರೂ, ಯಾರೊಬ್ಬರೂ ತಂಡ, ಸಂಸ್ಥೆಗಿಂತ ದೊಡ್ಡವರಲ್ಲ. ಹೀಗಿರುವಾಗ ಬಿಸಿಸಿಐನ ಅಧಿಕಾರ ಸ್ಥಾನದಲ್ಲಿರುವವರ ವಿರುದ್ಧ ಆರೋಪಗಳನ್ನು ಮಾಡಿ ಕೊಹ್ಲಿ ಬಹಿರಂಗ ಜಟಾಪಟಿಗಿಳಿದಿದ್ದು ಬ್ಯಾಟಿಂಗ್ ಮೇಲೆ ಮತ್ತಷ್ಟು ಒತ್ತಡ ಹೇರಿತು. ಶ್ರೇಷ್ಠ ಆಟಗಾರನಾಗಿದ್ದರೂ, ನಾಯಕನಾಗಿ ವೀಕ್ ಎಂಬ ಟೀಕೆಯನ್ನು ಸುಳ್ಳು ಮಾಡಲಾಗದೆ, ದಕ್ಷಿಣ ಆಫ್ರಿಕಾ ಪ್ರವಾಸದಿಂದ ಸೋತು ಮರಳಿದ್ದು ಹತಾಶೆ ಹೆಚ್ಚಿಸಿತು. ವ್ಯಕ್ತಿಗತವಾಗಿ ರೋಹಿತ್ ಶರ್ಮ- ವಿರಾಟ್ ಕೊಹ್ಲಿ ಸಂಬಂಧ ಯಾವ ರೀತಿ ಇದೆಯೋ ಅವರಿಬ್ಬರಿಗೇ ಗೊತ್ತು. ಆದರೆ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ವರ್ಸಸ್ ವಿರಾಟ್ ಎಂಬ ಅಭಿಮಾನಿಗಳ ಯುದ್ಧವೇ ನಡೆದಿದ್ದು ಇಬ್ಬರಿಗೂ ಒಳಿತು ತರಲಿಲ್ಲ. ಇಬ್ಬರೂ ಪ್ರತೀ ಇನಿಂಗ್ಸ್ನಲ್ಲೂ ವಿಫಲರಾಗುವಂತೆಯೇ ಇಲ್ಲ ಎಂಬ ಒತ್ತಡದಿಂದ ಕಣಕ್ಕಿಳಿಯುವಂತಾಯಿತು. ಇವೆಲ್ಲವೂ ಅನಗತ್ಯ, ಅನಪೇಕ್ಷಿತ ಒತ್ತಡಗಳಿಗೆ, ತಳಮಳಗಳಿಗೆ ಕಾರಣವಾದವು.
ಆಗಿದ್ದು ಆಗಿಹೋಯಿತು. ನಡೆದುಹೋಗಿದ್ದನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಂದೇನು ಎಂಬುದಷ್ಟೇ. ಸದ್ಯ ಕೊಹ್ಲಿ ಮಾಡಬೇಕಿರುವುದೂ ಅದೇ. ವೊನ್ನೆ ರವಿಶಾಸ್ತ್ರಿ ಹೇಳಿದ್ದೂ ಅದನ್ನೇ. ಕೊಹ್ಲಿ ಮಾನಸಿಕವಾಗಿ ಜಡವಾಗಿದ್ದಾರೆ, ದಣಿದಿದ್ದಾರೆ, ಅವರಿಗೆ ಕೆಲಕಾಲ ವಿಶ್ರಾಂತಿ ಅಗತ್ಯವಿದೆ ಎಂದು. ಬಹುಶಃ ನಿಜವಿರಬಹುದು. ಮುಂಬರುವ ವಿಶ್ವಕಪ್ಗೆ ಮುನ್ನ ಕೆಲಕಾಲ ಆಟದಿಂದ, ಪಾರ್ಟಿಗಳಿಂದ, ಸ್ನೇಹಿತರಿಂದ, ಸೋಷಿಯಲ್ ಮೀಡಿಯಾದಿಂದ, ಒಟ್ಟಾರೆ ಹೊರಜಗತ್ತಿನಿಂದ ಬಿಡುವು ಪಡೆದು, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹೊಸ ಹುರುಪಿನಿಂದ, ನವಚೈತನ್ಯದಿಂದ ಕ್ರಿಕೆಟ್ಗೆ ಮರಳಲು ಬೇಕಾದ ಮನೋಬಲ, ಆತ್ಮವಿಶ್ವಾಸವನ್ನು ಕೊಹ್ಲಿ ಗಳಿಸಿಕೊಳ್ಳಬೇಕಿದೆ. 70ಕ್ಕೆ ಹೋಲಿಸಿದರೆ 30 ದೊಡ್ಡದಲ್ಲ, ನೂರು ದೂರವೂ ಇಲ್ಲ. ಆದರೆ, ಗುರಿ ತಲುಪಲು ಹಿಂದೆಂದಿಗಿಂತ ಹೆಚ್ಚಿನ ಆತ್ಮಬಲ ಬೇಕಿದೆ. ವಿಚಿತ್ರವೆಂದರೆ, ಹಿಂದಿನ ಎಲ್ಲ ಐಪಿಎಲ್ಗಳಲ್ಲಿ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ, ತಂಡವಾಗಿ ಆರ್ಸಿಬಿ ವಿಫಲವಾಗುತ್ತಿತ್ತು. ಈ ಬಾರಿ ಆರ್ಸಿಬಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ಕೊಹ್ಲಿ ದೊಡ್ಡ ಮೊತ್ತ ಗಳಿಸಲು ಪರದಾಡುತ್ತಿದ್ದಾರೆ. ಅಂದರೆ, ಯಾವುದೋ ಆಂತರಿಕ ಒತ್ತಡವೇ ಅವರನ್ನು ಕಟ್ಟಿ ಹಾಕಿದೆ. ಅದನ್ನವರು ಮೀರಿ ನಿಲ್ಲಬೇಕಿದೆ. ಅಂತರಂಗದ ಯುದ್ಧವನ್ನು ಗೆಲ್ಲಬೇಕಿದೆ. ಜಗತ್ತನ್ನು ಗೆಲ್ಲುವ ಮುನ್ನ ನಮ್ಮನ್ನು ನಾವು ಗೆಲ್ಲಬೇಕು.
**
ಆಟದಲ್ಲಿ ಸಾಮರ್ಥ್ಯವೊಂದಿದ್ದರೆ ಸಾಲದು. ಅದೃಷ್ಟವೂ ಬೇಕಾಗುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ.
ಕೋನ ಶ್ರೀಕರ್ (ಎಸ್ಕೆ) ಭರತ್ ವೇಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ವಿಕೆಟ್ಕೀಪರ್ ಬ್ಯಾಟ್ಸ್ಮನ್. 2015ರಲ್ಲಿ ಇವರು ಆಂಧ್ರ ಪರ ರಣಜಿ ಪಂದ್ಯದಲ್ಲಿ ತ್ರಿಶತಕ ಬಾರಿಸುವ ಮೂಲಕ ಇಂಥ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಕಳೆದ ವರ್ಷ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಹಲವು ಪಂದ್ಯಗಳನ್ನಾಡಿದ್ದ ಭರತ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಆರ್ಸಿಬಿ ಗೆಲುವಿಗೆ ಕಾರಣರಾಗಿದ್ದರು. ಸ್ಪೋಟಕ ಬ್ಯಾಟಿಂಗ್ ಹಾಗೂ ಚುರುಕಿನ ಕೀಪಿಂಗ್ಗೆ ಹೆಸರಾದ ಭರತ್ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲೂ ಮೀಸಲು ಕೀಪರ್ ಆಗಿ ಸ್ಥಾನ ಪಡೆದವರು.
ಈ ವರ್ಷ ಐಪಿಎಲ್ನಲ್ಲಿ ಉತ್ತಮ ಅವಕಾಶ ದೊರೆತಿದ್ದರೆ, ಭರತ್ ಮ್ಯಾಚ್ವಿನ್ನರ್ ಆಗಿ ಮಿಂಚುವ ಎಲ್ಲ ಅವಕಾಶವಿತ್ತು. ಆದರೆ, ಭರತ್ ದುರದೃಷ್ಟ, ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತು. ಡೆಲ್ಲಿ ತಂಡದ ಕ್ಯಾಪ್ಟನ್ ರಿಷಬ್ ಪಂತ್ ಸ್ವತಃ ವಿಕೆಟ್ಕೀಪರ್ ಆಗಿರುವಾಗ ಭರತ್ಗೆ ಆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಯೇ ಇಲ್ಲ. ಹಾಗೆ ನೋಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ಭರತ್ರನ್ನು ಖರೀದಿಸಿ ಖಾಲಿ ಕೂರಿಸುವ ಮೂಲಕ ಟಿ20 ವಿಶ್ವಕಪ್ ಹತ್ತಿರದಲ್ಲಿರುವಾಗ ರಿಷಬ್ ಪಂತ್ಗೆ
ಪೈಪೋಟಿ ಎದುರಾಗದಂತೆ ‘ಜಾಣತನ’ ಮೆರೆಯಿತೇ ಎಂಬ ಅನುಮಾನವೂ ಬರುವುದು ಸಹಜ. ಒಟ್ಟಿನಲ್ಲಿ ಭರತ್ ಬಳಿ ಡೆಲ್ಲಿ ತಂಡದ ಬೆಂಚು ಕಾಯಿಸುವುದು ಬಿಟ್ಟರೆ ಈ ಋತು ಮುಗಿಯುವವರೆಗೂ ಬೇರಾವ ಆಯ್ಕೆಯೂ ಇಲ್ಲ.
**
ಅನೇಕ ಸಮಸ್ಯೆಗಳಿಗೆ, ಪ್ರಮಾದಗಳಿಗೆ ಪರಿಹಾರ ಹೊರಜಗತ್ತಿನಲ್ಲಿರುವುದಿಲ್ಲ. ನಮ್ಮ ಆಂತರ್ಯವನ್ನು ನಾವು ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ.
ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ||
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)