ಹಿರಿಯಜ್ಜಿ ಕೈಗೆ ಗ್ರಾಮ ಪಂಚಾಯತಿ ನೇತೃತ್ವ; ಇವರಿಗೆ ವಯಸ್ಸು ಸಂಖ್ಯಾ ಸೂಚಕವಷ್ಟೆ!

Ajji
Published on
ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತು ಇವರಿಗೆ ಅನ್ವರ್ಥವಾದಂತಿದೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರ ಸಾಧನೆ ಗಮನಾರ್ಹ. ಇವರಿಗೆ ವಯಸ್ಸು ಸಂಖ್ಯಾ ಸೂಚಕವಷ್ಟೆ. ಸಾಧಿಸಬೇಕು ಎಂಬ ಛಲವಷ್ಟೇ ಮನಸ್ಸಿನಲ್ಲಿರುವುದು. 90ರ ಇಳಿವಯಸ್ಸಿನಲ್ಲೂ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿರುವ ಇವರು ಈಗಿನ ಯುವ ಪೀಳಿಗೆಗೆ ಮಾರ್ಗದರ್ಶಕರು. ಅವರ ಸಾಧನೆಯ ಕಿರು ಪರಿಚಯ ಇಲ್ಲಿದೆ.

| ಚೈತ್ರಾ ಪಾಣೆ ಮಂಗಳೂರು

ಮಗನ ಪರವಾಗಿ ಪ್ರಚಾರ ಮಾಡುತ್ತಿದ್ದವರು ಈಗ ಪಂಚಾಯಿತಿ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ/ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಗಮನಸೆಳೆದವರ ಪೈಕಿ 90 ವರ್ಷ ವಯಸ್ಸಿನ ಎಸ್.ಪೆರುಮಾತಾಳ್ ಪ್ರಮುಖರು. ತಿರುನೆಲ್ವೇಲಿ ಜಿಲ್ಲೆಯ ಪಾಳ್ಯಂಕೋಟೆ ಪಂಚಾಯಿತಿ ಒಕ್ಕೂಟದ ವ್ಯಾಪ್ತಿಯಲ್ಲಿರುವ ಶಿವಂತಿಪಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಈ ಸಲ ಮಹಿಳೆಗೆ ಮೀಸಲು ಎಂದು ಘೋಷಿತವಾಗಿತ್ತು. ಇದನ್ನು ಗಮನಿಸಿದ ಎಸ್.ಪೆರುಮಾತಾಳ್ ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದರು. ವರ್ಷಗಳಿಂದ ಮಗನ ಪರ ಪ್ರಚಾರ ಮಾಡುತ್ತಿದ್ದವರು ಈ ಬಾರಿಯ ಚುನಾವಣೆಯಲ್ಲಿ ವಯಸ್ಸನ್ನು ಮರೆತು ಮಗನ ಹಾದಿಯಲ್ಲಿ ಮುನ್ನಡೆಯಲು ತೀರ್ಮಾನಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಜನರು ಕೈ ಬಿಡಲಿಲ್ಲ: ನಿತ್ಯವೂ ಜನರ ಜತೆಗೆ ಒಡನಾಡುತ್ತಿದ್ದರು. ಮನೆಮನೆಗೆ ಭೇಟಿ ನೀಡುತ್ತಿದ್ದ ಕಾರಣ ಪಂಚಾಯಿತಿಯ ಸಮಸ್ಯೆಗಳ ಅರಿವು ಇವರಿತ್ತು. ಅದನ್ನೇ ಗಮನದಲ್ಲಿಟ್ಟುಕೊಂಡು ಚುನಾವಣೆಗೆ ನಿಂತಿದ್ದ ಪೆರುಮಾತಾಳ್ ಜನರ ಕೃಪಾಕಟಾಕ್ಷದಿಂದ ಜಯ ಸಾಧಿಸಿದ್ದಾರೆ. ಸದ್ಯಕ್ಕೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ನಂಬಿಕೆ ಉಳಿಸಿಕೊಳ್ಳುವುದಷ್ಟೇ ಇವರ ಮುಂದಿರುವ ಸವಾಲು.

ಅವರ ನಿರ್ಧಾರ ತಪ್ಪಾಗಿರಲಿಲ್ಲ: ಚುನಾವಣಾ ಫಲಿತಾಂಶ ಬಂದಾಗ ಎಲ್ಲರ ಹುಬ್ಬು ಮೇಲೇರಿತ್ತು. ಒಟ್ಟು 2060 ಮತಗಳ ಪೈಕಿ 1,568 ಮತಗಳು ಪೆರುಮಾತಾಳ್ ಪರ ಬಿದ್ದಿತ್ತು. ಪ್ರತಿಸ್ಪರ್ಧಿಗಳೆಲ್ಲರೂ ಠೇವಣಿ ಕಳೆದುಕೊಂಡಿದ್ದರು! ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾದ್ದರಿಂದ ಇದಕ್ಕೆ ಪೆರುಮಾತಾಳ್ ಹೊರತಾಗಿ ಬೇರಾರೂ ಸ್ಪರ್ಧಿಗಳಿರಲಿಲ್ಲ. ಈಗ ಅವರು ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದು, ತಮಿಳುನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ಪೈಕಿ ಹಿರಿಯರೆಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net