

ಮುಕ್ಕಾಲು ಶತಮಾನದ ಹಿಂದೆ, ಅಂದರೆ 1947ರ ಜುಲೈ 22ರಂದು ಭಾರತದ ಸಂವಿಧಾನ ರಚನಾ ಸಭೆಯು ರಾಷ್ಟ್ರಧ್ವಜವನ್ನು ಅಂಗೀಕರಿಸಿತು. ಜವಾಹರಲಾಲ್ ನೆಹರು ಅವರು ಭಾವಪೂರ್ಣ ಭಾಷಣ ಮಾಡುವುದರ ಮೂಲಕ ನಿರ್ಣಯವನ್ನು ಮಂಡಿಸಿದರು. ಚಪ್ಪಾಳೆ, ಹಷೋದ್ಗಾರಗಳ ನಡುವೆ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಆ ಮೂಲಕ ಭಾರತದ ಇತಿಹಾಸದಲ್ಲಿ ಮತ್ತೊಂದು ಸ್ಮರಣೀಯ ಕ್ಷಣ ದಾಖಲಾಯಿತು.
ಸಂವಿಧಾನ ರಚನಾ ಸಭೆಯು ನವದೆಹಲಿಯ ಶಾಸನಸಭೆ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಡಾ. ರಾಜೇಂದ್ರ ಪ್ರಸಾದ ಅಧ್ಯಕ್ಷತೆಯಲ್ಲಿ ಸಭೆ ಸೇರಿತ್ತು. ಧ್ವಜ ಕುರಿತ ನೆಹರು ಅವರ ನಿರ್ಣಯವು ಕಾರ್ಯಸೂಚಿಯ ಮೊದಲ ವಿಷಯವಾಗಿದೆ ಎಂದು ಅಧ್ಯಕ್ಷರು ಘೊಷಿಸಿದರು. ಆಗ ನೆಹರು ಈ ಕೆಳಗಿನ ನಿರ್ಣಯ ಮಂಡಿಸಿದರು.
‘ಭಾರತದ ರಾಷ್ಟ್ರೀಯ ಧ್ವಜವು ಕಡು ಕೇಸರಿ (ಕೇಸರಿ), ಬಿಳಿ ಮತ್ತು ಗಾಢ ಹಸಿರು ಸಮಪ್ರಮಾಣದಲ್ಲಿ ಸಮತಲವಾಗಿರುವ ತ್ರಿವರ್ಣವಾಗಿರಬೇಕು. ಬಿಳಿ ಪಟ್ಟಿಯ ಮಧ್ಯದಲ್ಲಿ ಚರಕವನ್ನು ಪ್ರತಿನಿಧಿಸಲು ಆಕಾಶ ನೀಲಿ ಬಣ್ಣದಲ್ಲಿ ಒಂದು ಚಕ್ರ ಇರಬೇಕು. ಚಕ್ರದ ವಿನ್ಯಾಸವು ಅಶೋಕನ ಸಾರನಾಥ ಸ್ತಂಭದಲ್ಲಿನ ಚಕ್ರದಂತೆ ಇರಬೇಕು. ಚಕ್ರದ ವ್ಯಾಸವು ಬಿಳಿ ಪಟ್ಟಿಯ ಅಗಲಕ್ಕೆ ಸಮನಾಗಿ ಇರಬೇಕು. ಧ್ವಜದ ಉದ್ದಕ್ಕೆ ಅಗಲದ ಅನುಪಾತವು ಸಾಮಾನ್ಯವಾಗಿ 3:2ರಲ್ಲಿ ಇರಬೇಕು’.
ದಿನದ ಕೊನೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಸಂಪೂರ್ಣ ಸಭೆಯು ಇದರ ಪರವಾಗಿತ್ತು ಎಂದು ದಾಖಲೆಗಳು ಹೇಳುತ್ತವೆ. ಧ್ವಜ ನಿರ್ಣಯ ಮಂಡನೆ ಸಂದರ್ಭದಲ್ಲಿ ನೆಹರು ವಿವಿಧ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತಾಡಿದರು.
‘ಈ ಧ್ವಜವನ್ನು ನಾನು ಮತ್ತು ಸದನದಲ್ಲಿರುವ ಇತರರು ಹೆಮ್ಮೆ ಮತ್ತು ಉತ್ಸಾಹದಿಂದ ಮಾತ್ರವಲ್ಲದೆ, ನಮ್ಮ ರಕ್ತನಾಳಗಳು ಜುಮ್ಮೆನ್ನುವ ರೀತಿಯಲ್ಲಿ ನೋಡುತ್ತಿದ್ದೆವು. ನಾವು ಕೆಲವೊಮ್ಮೆ ಕುಸಿದಾಗ, ಈ ಧ್ವಜದ ನೋಟವು ನಮಗೆ ಮುಂದುವರಿಯಲು ಧೈರ್ಯ ತುಂಬುತ್ತಿತು. ಈ ಧ್ವಜವನ್ನು ಕೆಲವರು ಸಾವಿನ ಕೊನೆಯ ಕ್ಷಣದವರೆಗೂ ಹಿಡಿದಿದ್ದರು. ತಾವು ಕುಸಿದರೂ ಧ್ವಜವನ್ನು ಮೇಲಕ್ಕೆತ್ತಿ ಹಿಡಿಯಲು ಇತರರಿಗೆ ಹಸ್ತಾಂತರಿಸಿದರು. ಈ ಕ್ಷಣವು ನಮ್ಮ ಎಲ್ಲಾ ಹೋರಾಟಗಳ ವಿಜಯ ಮತ್ತು ವಿಜಯದ ಅಂತ್ಯವನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ಮತ್ತು ಭವಿಷ್ಯದಲ್ಲಿ ನಾವು ಎದುರಿಸಬೇಕಾದ ಪ್ರಚಂಡ ಸಮಸ್ಯೆಗಳಿವೆ. ಈ ದೇಶದಲ್ಲಿ ಪ್ರಬಲ ಸಾಮ್ರಾಜ್ಯವು ತನ್ನ ದಿನಗಳನ್ನು ಇಲ್ಲಿಗೆ ಕೊನೆಗೊಳಿಸಲು ನಿರ್ಧರಿಸಿದೆ ಎಂಬುದು ಸಣ್ಣ ವಿಷಯವಲ್ಲ. ಅದು ನಾವು ಗುರಿ ಇಟ್ಟ ಉದ್ದೇಶವಾಗಿತ್ತು. ನಾವು ಆ ಉದ್ದೇಶವನ್ನು ಸಾಧಿಸಿದ್ದೇವೆ ಅಥವಾ ಅದನ್ನು ಶೀಘ್ರದಲ್ಲೇ ಸಾಧಿಸುತ್ತೇವೆ’ ಎಂದು ನೆಹರು ಹೇಳಿದರು.
ಭಾರತದ ಧ್ವಜಸಂಹಿತೆ 2002ರ ಪ್ರಕಾರ ಕೈಮಗ್ಗ ಮತ್ತು ಕೈಯಿಂದ ನೇಯ್ದ ಖಾದಿಯಿಂದ ಮಾಡಿದ ಬಟ್ಟೆಗಳಿಂದ ಮಾತ್ರ ಧ್ವಜಗಳನ್ನು ತಯಾರಿಸಲು ಅನುಮತಿ ಇತ್ತು. 2021ರ ಡಿಸೆಂಬರ್ 30ರಂದು ಧ್ವಜಸಂಹಿತೆಗೆ ತಿದ್ದುಪಡಿ ತರಲಾಯಿತು. ಕೈಮಗ್ಗ ಅಥವಾ ಕೈಯಿಂದ ತಯಾರಿಸಲಾದ ಬಟ್ಟೆಯಿಂದ ಮಾತ್ರವಲ್ಲದೆ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದಲೂ ರಾಷ್ಟ್ರಧ್ವಜ ಮಾಡಬಹುದು ಎಂದು ಈ ತಿದ್ದುಪಡಿ ಹೇಳುತ್ತದೆ. ಈ ಬದಲಾವಣೆಯಿಂದಾಗಿ ಬಾವುಟಗಳ ಬೆಲೆಯು ಕಡಿಮೆಯಾಗಿ, 2022ರ ಆಗಸ್ಟ್ 15ರಂದು ಪ್ರಾರಂಭಿಸಲು ಉದ್ದೇಶಿಸಿರುವ ‘ಹರ್ ಘರ್ ತಿರಂಗಾ’ದ ಅಭಿಯಾನಕ್ಕೆ ಪೂರಕ ಬಲವನ್ನು ಒದಗಿಸುವ ನಿರೀಕ್ಷೆಯಿದೆ.
ವಸಾಹತುಶಾಹಿ ಆಳ್ವಿಕೆ ವಿರುದ್ಧ ಹೋರಾಡುತ್ತಿರುವಾಗ ಸ್ವತಂತ್ರ ಭಾರತದ ಧ್ವಜದ ಕನಸು ಕಂಡವರೆಲ್ಲರ ಧೈರ್ಯ ಮತ್ತು ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜ ಅಂಗೀಕರಿಸಿ 75 ವರ್ಷಗಳಾದ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. ಜವಾಹರಲಾಲ್ ನೆಹರು ಅವರು ಹಾರಿಸಿದ ಮೊದಲ ಧ್ವಜದ ಚಿತ್ರಗಳು, ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳ ಸಂಬಂಧಿತ ಪುಟಗಳು ಮತ್ತು ‘ಶಹೀದ್ ಗರ್ಜನಾ’, ‘ಝುಂಡಾ ಊಂಚಾ ರಹೇ ಹಮಾರಾ’ ಪರಂಪರೆಯ ಪ್ರತಿಗಳನ್ನೂ ಮೋದಿ ಪೋಸ್ಟ್ ಮಾಡಿದ್ದಾರೆ.
‘ಔಪಚಾರಿಕ ನಿರ್ಣಯದಿಂದ ಮಾತ್ರವಲ್ಲದೆ; ಜನಪ್ರಿಯತೆ, ಮೆಚ್ಚುಗೆ, ಬಳಕೆ ಮತ್ತು ಕಳೆದ ಕೆಲವು ದಶಕಗಳಲ್ಲಿ ಇದಕ್ಕೆ ಸಂಬಂಧಪಟ್ಟ ತ್ಯಾಗದ ಪ್ರತೀಕವಾಗಿ ಈ ಧ್ವಜವನ್ನು ಅಂಗೀಕರಿಸಲಾಗಿದೆ. ಈ ಧ್ವಜಕ್ಕಿರುವ ಜನಪ್ರಿಯತೆಯನ್ನು ಸಂವಿಧಾನ ರಚನಾ ಸಭೆಯು ದೃಢೀಕರಿಸುವ ಕೆಲಸವನ್ನು ಮಾಡಿದೆ. ಧ್ವಜವನ್ನು ಕೋಮುವಾದಿ ಪರಿಭಾಷೆಯಲ್ಲಿ ಯೋಚಿಸಬಾರದು. ಧ್ವಜವನ್ನು ರೂಪಿಸಿದಾಗ ಇದಕ್ಕೆ ಯಾವುದೇ ಕೋಮು ಸಂಬಂಧಿ ಮಹತ್ವವಿರಲಿಲ್ಲ. ನಾವು ಸುಂದರವಾದ ಧ್ವಜದ ವಿನ್ಯಾಸವನ್ನು ಯೋಚಿಸಿದ್ದೇವೆ. ಏಕೆಂದರೆ, ರಾಷ್ಟ್ರದ ಸಂಕೇತವು ನೋಡಲು ಸುಂದರವಾಗಿರಬೇಕು. ಧ್ವಜವು ಒಟ್ಟಾರೆ ಸಂಯೋಜನೆಯಲ್ಲಿಯೂ ಮತ್ತು ಪ್ರತ್ಯೇಕ ಭಾಗಗಳಲ್ಲಿಯೂ ರಾಷ್ಟ್ರದ ಚೈತನ್ಯವನ್ನು, ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದುಬಂದಿರುವ ಸಂಪ್ರದಾಯ, ಮಿಶ್ರ ಮನೋಭಾವವನ್ನು ಪ್ರತಿನಿಧಿಸುತ್ತದೆ’ ಎಂದು ನೆಹರು ಹೇಳಿದರು.
ಸೇಠ ಗೋವಿಂದ ದಾಸ್, ವಿ.ಐ. ಮುನಿಸ್ವಾಮಿ ಪಿಳ್ಳೆ ೖ, ಚೌಧರಿ ಖಲೀಕುಜ್ಜಮಾನ್, ಎಸ್. ರಾಧಾಕೃಷ್ಣನ್, ಸೈಯದ್ ಮೊಹಮ್ಮದ್ ಸಾದುಲ್ಲಾ, ಫ್ರಾಂಕ್ ಆರ್. ಆಂಥೋನಿ, ಗಿಯಾನಿ ಗುರುಮುಖ್ ಸಿಂಗ್ ಮುಸಾಫರ್, ಡಾ ಜೋಸೆಫ್ ಅಲ್ಬನ್ ಡಿಸೋಜಾ, ಜೈ ನಾರಾಯಣ ವ್ಯಾಸ್ ಹಾಗೂ ಸರೋಜಿನಿ ನಾಯ್ಡು ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಹಲವು ಸದಸ್ಯರು ಧ್ವಜಕ್ಕೆ ಗೌರವ ಸಲ್ಲಿಸುವ ರೀತಿಯಲ್ಲಿ ನಿರ್ಣಯವನ್ನು ಬೆಂಬಲಿಸಿದರು. 1947ರ ಆಗಸ್ಟ್ 16ರಂದು ಕೆಂಪುಕೋಟೆಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಧಿಕೃತ ತ್ರಿವರ್ಣ ಧ್ವಜದ ಆರೋಹಣವನ್ನು ನೆರವೇರಿಸಿದರು.
ನೆಹರು ಮಂಡಿಸಿದ ಧ್ವಜ ನಿರ್ಣಯಕ್ಕೆ ಎರಡು ತಿದ್ದುಪಡಿಗಳನ್ನು ತರಲು ತಯಾರಿ ನಡೆದಿತ್ತು. ಆದರೆ, ಇವುಗಳಲ್ಲಿ ಯಾವುದನ್ನೂ ಮಂಡಿಸಲಿಲ್ಲ. ಕೇಂದ್ರ ಪ್ರಾಂತ್ಯದ ಎಚ್.ವಿ. ಕಾಮತ್ ಅವರು ಶ್ವೇತ ಪಟ್ಟಿಯ ಮಧ್ಯದಲ್ಲಿರುವ ಚಕ್ರದ ಒಳಗೆ, ‘ಶಾಂತಂ, ಶಿವಂ, ಸುಂದರಂ’ ಪ್ರತೀಕವಾದ ಪ್ರಾಚೀನ ಭಾರತೀಯ ಸಂಕೇತವಾದ ಸ್ವಸ್ತಿಕವನ್ನು ಚಿತ್ರಿಸಬೇಕು ಎಂದು ಕೇಳುವ ತಿದ್ದುಪಡಿ ಮಂಡಿಸಲು ತಯಾರಾಗಿದ್ದರು. ‘ಆದರೆ, ಧ್ವಜ ವಿನ್ಯಾಸ ನೋಡಿದ ನಂತರ, ಸ್ವಸ್ತಿಕವನ್ನು ಚಕ್ರದಲ್ಲಿ ಸೇರಿಸುವುದು ಕಷ್ಟ ಮತ್ತು ತೊಡಕಿ ನದ್ದಾಗಿದೆ ಎಂಬುದು ಅರಿವಿಗೆ ಬಂದಿತು. ಹಾಗಾಗಿ ತಿದ್ದುಪಡಿ ಮಂಡಿಸುವುದರಿಂದ ಹಿಂದೆ ಸರಿದೆ’ ಎಂದು ಕಾಮತ್ ಹೇಳಿದರು. ‘ತ್ರಿವರ್ಣ ಧ್ವಜದಲ್ಲಿ ಚರಕವನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ನಾನು ಬಯಸಿದ್ದೆ, ಆದರೆ, ಸದನವು ಚಕ್ರದ ಧ್ವಜಕ್ಕೆ ಬೆಂಬಲಿಸಿದ್ದರಿಂದ ನಾನು ತಿದ್ದುಪಡಿ ಮಂಡಿಸಲಿಲ್ಲ’ ಎಂದು ಕೇಂದ್ರ ಪ್ರಾಂತ್ಯದ ಇನ್ನೊಬ್ಬ ಸದಸ್ಯ ಡಾ.ಪಿ.ಎಸ್. ದೇಶಮುಖ್ ಹೇಳಿದರು.
ಧ್ವಜದ ಕುರಿತಂತೆ ನೆಹರು ವಿವರಿಸಿದ ಕೆಲ ಸಂಗತಿಗಳು ಹೀಗಿವೆ: ಧ್ವಜವು ಈ ಹಿಂದೆ ಬಳಸಿದ್ದಕ್ಕಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿದ್ದರೂ, ಅದರ ಬಣ್ಣಗಳು ಒಂದೇ ಆಗಿವೆ. ಕಡು ಕೇಸರಿ, ಬಿಳಿ ಮತ್ತು ಗಾಢ ಹಸಿರು. ಭಾರತದಲ್ಲಿ ಸಾಮಾನ್ಯ ಮನುಷ್ಯನನ್ನು ಸಂಕೇತಿಸುವ ಚರಕವು ಸ್ವಲ್ಪ ವಿಭಿನ್ನವಾಗಿದೆ. ಇದಕ್ಕೆ ಪ್ರಾಯೋಗಿಕ ಕಾರಣವೆಂದರೆ, ಧ್ವಜದ ಒಂದು ಬದಿಯಲ್ಲಿರುವ ಚಿಹ್ನೆಯು ಇನ್ನೊಂದು ಬದಿಯಲ್ಲಿಯೂ ಒಂದೇ ತೆರನಾಗಿ ಕಾಣಬೇಕು. ಚರಕವು ಈ ಹಿಂದೆ ಧ್ವಜದಲ್ಲಿ ಕಾಣಿಸಿಕೊಂಡಿತ್ತು. ಒಂದು ಕಡೆ ಚಕ್ರ ಮತ್ತು ಇನ್ನೊಂದು ಕಡೆ ತಿರುಗಚ್ಚು ಇತ್ತು. ಇನ್ನೊಂದು ದಿಕ್ಕಿನಿಂದ ಗಮನಿಸಿದಾಗ, ಮೊದಲು ತಿರುಗಚ್ಚು ಹಾಗೂ ನಂತರ ಚಕ್ರವು ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಚರಕದ ಬದಲು ಚಕ್ರವನ್ನು ಇಡಲು ನಿರ್ಧರಿಸಲಾಯಿತು. ಇದು ಚರಕದ ಉಳಿದ ಭಾಗವಲ್ಲ. ಇದಕ್ಕಾಗಿ ಅಶೋಕನ ಸ್ತಂಭದ ಮೇಲೆ ಕಂಡುಬರುವ ಪ್ರಸಿದ್ಧ ಚಕ್ರವನ್ನು ಆಯ್ಕೆ ಮಾಡಲಾಯಿತು.
ಈ ಚಕ್ರವು ಭಾರತದ ಪ್ರಾಚೀನ ಸಂಸ್ಕೃತಿಯ ಸಂಕೇತವಾಗಿದೆ; ಭಾರತವು ಯುಗಯುಗಗಳಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ಅನೇಕ ಸಂಗತಿಗಳ ಪ್ರತಿಬಿಂಬವಾಗಿದೆ. ಅಶೋಕನ ಹೆಸರು ವಿಶ್ವ ಇತಿಹಾಸದಲ್ಲಿ ಅತ್ಯಂತ ಭವ್ಯವಾದ ಹೆಸರುಗಳಲ್ಲಿ ಒಂದಾಗಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಕಲಹ, ಸಂಘರ್ಷ ಮತ್ತು ಅಸಹಿಷ್ಣುತೆಯ ಈ ಕ್ಷಣದಲ್ಲಿ, ಪ್ರಾಚೀನ ಕಾಲದಲ್ಲಿ ಯುಗ ಯುಗಾಂತರಗಳಲ್ಲಿ ಭಾರತವು ಯಾವುದರ ಪರವಾಗಿ ನಿಂತಿತ್ತು ಎಂಬುದರ ದ್ಯೋತಕವಾಗಿದೆ.
ಈ ಧ್ವಜವು ಸಾಮ್ರಾಜ್ಯದ ಧ್ವಜವಲ್ಲ; ಸಾಮ್ರಾಜ್ಯಶಾಹಿಯದ್ದೂ ಅಲ್ಲ; ಯಾರ ಮೇಲೂ ಪ್ರಾಬಲ್ಯ ತೋರುವುದಕ್ಕೂ ಅಲ್ಲ. ಆದರೆ, ಈ ಸ್ವಾತಂತ್ರ್ಯದ ಧ್ವಜ ನಮಗಾಗಿ ಮಾತ್ರವಲ್ಲ, ಅದನ್ನು ನೋಡುವ ಎಲ್ಲ ಜನರಿಗೆ ಸ್ವಾತಂತ್ರ್ಯದ ಸಂಕೇತವಾಗಿದೆ. ಈ ಧ್ವಜವು ಎಲ್ಲಿಗೆ ಹೋಗಲಿ... ಅದು ಆ ಜನರಿಗೆ ಸ್ವಾತಂತ್ರ್ಯದ, ಸೌಹಾರ್ದದ, ಭಾರತವು ಪ್ರಪಂಚದ ಪ್ರತಿಯೊಂದು ದೇಶದೊಂದಿಗೆ ಸ್ನೇಹಿತನಾಗಲು ಬಯಸುವ ಮತ್ತು ಭಾರತವು ಎಲ್ಲರಿಗೂ ಸಹಾಯ ಮಾಡಲು ಬಯಸುತ್ತದೆ ಎಂಬ ಸಂದೇಶವನ್ನು ನೀಡುತ್ತದೆ.