ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ಮಹಿಳೆ: ಕಿತ್ತೂರು ರಾಣಿ ಚನ್ನಮ್ಮ ನೆನಪು ನಂದಾದೀಪ

Chennamma
Published on
ಸಿಪಾಯಿ ದಂಗೆಯ ಹಿನ್ನೆಲೆಯಲ್ಲಿ 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟವನ್ನು ಭಾರತದ ಇತಿಹಾಸಕಾರರು ಪ್ರಥಮ ಸ್ವಾತಂತ್ರ್ಯ ಹೋರಾಟ ಹಾಗೂ ಇದರಲ್ಲಿ ಭಾಗಿಯಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ ಎಂದೇ ಪರಿಗಣಿಸುತ್ತಾರೆ. ಆದರೆ, ಇದಕ್ಕೂ ಮೊದಲು ಬ್ರಿಟಿಷರ ವಿರುದ್ಧ ಕರ್ನಾಟಕದ ಕಿತ್ತೂರಿನ ರಾಣಿ ಚನ್ನಮ್ಮ ನಡೆಸಿದ ಹೋರಾಟ ಭಾರತದ ಇತಿಹಾಸದಲ್ಲಿ ಅವಿಸ್ಮರಣೀಯವಾದುದು.

| ಪ್ರಕಾಶ ಗಿರಿಮಲ್ಲನವರ ಸಾಹಿತಿ, ಬೆಳಗಾವಿ

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕೀರ್ತಿ ಕಿತ್ತೂರು ಸಂಸ್ಥಾನಕ್ಕೆ ಸಲ್ಲುತ್ತದೆ. ಭಾರತದ ಇತಿಹಾಸಕಾರರು ಸ್ವಾತಂತ್ರ್ಯ ಸಂಗ್ರಾಮವನ್ನು ಕ್ರಿ.ಶ. 1857ರಿಂದ ಪರಿಗಣಿಸುತ್ತಾರೆ. ಅದರಲ್ಲೂ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂದು ದಾಖಲಿಸಿದ್ದಾರೆ. ಆದರೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ 33 ವರ್ಷಗಳ ಪೂರ್ವದಲ್ಲಿಯೇ ಆಂಗ್ಲರ ವಿರುದ್ಧ ಹೋರಾಡಿದ ವೀರಮಹಿಳೆ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ. ಕ್ರಿ.ಶ. 1824ರಲ್ಲಿಯೇ ಆಂಗ್ಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚನ್ನಮ್ಮಳನ್ನು ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ ಎಂದು ಕರೆಯುತ್ತಾರೆ. ಚನ್ನಮ್ಮ ರಾಣಿ ಒಬ್ಬ ಮಹಿಳೆಯಾಗಿ ಬಲಾಢ್ಯ ಬ್ರಿಟಿಷರ ವಿರುದ್ಧ ಹೋರಾಡಿದ ಅವಳ ಶೌರ್ಯ, ರಾಷ್ಟ್ರಾಭಿಮಾನ ಹಾಗೂ ಉದಾತ್ತ ಮಾನವೀಯ ಗುಣಗಳು ಎಂದೆಂದಿಗೂ ಆದರ್ಶಮಯವಾದವು. ಇಂಥ ಹೋರಾಟಗಾರ್ತಿಯ ಬದುಕು ನಮ್ಮ ಇಂದಿನ ಯುವಜನಾಂಗಕ್ಕೆ ಪ್ರೇರಣಾದಾಯಕವಾಗಿದೆ. ಅಂತೆಯೇ ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಬರೆಯುವಾಗ ಕಿತ್ತೂರು ಸಂಸ್ಥಾನದ ಚನ್ನಮ್ಮ ರಾಣಿಯ ಹೋರಾಟದ ಕಥನವನ್ನು ಸ್ಮರಿಸಲೇಬೇಕಾಗುತ್ತದೆ. ವಿಜಯನಗರೋತ್ತರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ನೂರಾರು ರಾಜಕೀಯ ಸಂಸ್ಥಾನಗಳಲ್ಲಿ ಕಿತ್ತೂರು ಸಂಸ್ಥಾನವೂ ಒಂದು. 14 ಕರ್ಯಾತ್ (ವಿಭಾಗ)ಗಳ ಈ ಸಂಸ್ಥಾನ ಅತ್ಯಂತ ಶ್ರೀಮಂತವೂ ಸಮೃದ್ಧವೂ ಆದ ಇತಿಹಾಸವನ್ನು ಹೊಂದಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ರಾಜಮಾರ್ಗದಲ್ಲಿ ಬೆಳಗಾವಿ-ಧಾರವಾಡ ನಗರಗಳ ಮಧ್ಯದಲ್ಲಿ ಇರುವ ಒಂದು ಸಣ್ಣ ಪಟ್ಟಣವಾಗಿದೆ ಇಂದಿನ ಕಿತ್ತೂರು. ಆದರೆ, ಅದು ಒಂದು ಕಾಲಕ್ಕೆ ಭವ್ಯ ಸಂಸ್ಥಾನವನ್ನು ಹೊಂದಿದ ಮಹಾನಗರವಾಗಿತ್ತು. ಕ್ರಿ.ಶ. 1585ರಲ್ಲಿ ಸಗರ ನಾಡಿನಿಂದ ಬಂದ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಎಂಬ ಶೂರ ಸೇನಾನಿಗಳಿಂದ ಪ್ರಾರಂಭವಾದ ಈ ಸಂಸ್ಥಾನ ಮೊದಲು ಮುಗುಟಖಾನ ಹುಬ್ಬಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ನಂತರ ಸಂಪಗಾವಿಯನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳಲಾಯಿತು. ತದನಂತರ ಕ್ರಿ.ಶ. 1660ರಿಂದ ಕ್ರಿ.ಶ. 1691ರವರೆಗೆ ಸಂಸ್ಥಾನವನ್ನು ಆಳಿದ ಅಲ್ಲಪ್ಪಗೌಡ ಸರದೇಸಾಯಿ ಈ ಸಂಸ್ಥಾನವನ್ನು ಕಿತ್ತೂರಿಗೆ ವರ್ಗಾಯಿಸಿ, ಕಿತ್ತೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ಪ್ರಾರಂಭಿಸಿದರು. ಇವರೇ ಕಿತ್ತೂರಿನಲ್ಲಿ ಭವ್ಯವಾದ ಕಿತ್ತೂರು ಕೋಟೆಯನ್ನು ಕಟ್ಟಿದವರು.

ಕಿತ್ತೂರು ಒಂದು ಚಿಕ್ಕ ಸಂಸ್ಥಾನವಾಗಿತ್ತು. ಕೇವಲ 283 ಊರುಗಳು, 74 ಕೊಪ್ಪಗಳ ಸಂಸ್ಥಾನವಾಗಿದ್ದರೂ, ಅದರ ಪರಿಸರದ ಗಡಿಸೀಮೆಗಳಲ್ಲಿ ಅನೇಕ ರಾಜ್ಯಗಳು ಕೂಡಿದ್ದವು. ಒಂದು ಕಡೆ ಪೋರ್ಚುಗೀಸರು, ಉತ್ತರದಲ್ಲಿ ಮರಾಠರು, ಮತ್ತೊಂದು ದಿಕ್ಕಿಗೆ ವಿಜಯಪುರದ ಆದಿಲಶಾಹಿಗಳು, ದಕ್ಷಿಣಕ್ಕೆ ಸವಣೂರಿನ ನವಾಬರು, ಮೈಸೂರಿನ ಹೈದರಾಲಿ-ಟಿಪ್ಪು ಇವರೆಲ್ಲ ಕಿತ್ತೂರು ಸಂಸ್ಥಾನವನ್ನು ಹೇಗಾದರೂ ಮಾಡಿ ಕಬಳಿಸಬೇಕೆಂದು ಹೊಂಚು ಹಾಕುತ್ತಿದ್ದರು. ಇವರನ್ನೆಲ್ಲ ನಿಗ್ರಹಿಸಿ, ಸಂಸ್ಥಾನವನ್ನು ಕಾಪಾಡಿಕೊಂಡು ಬಂದದ್ದು ಒಂದು ದೊಡ್ಡ ಸಾಹಸವೆಂದೇ ಹೇಳಬೇಕು.

1779ರಿಂದ 1816 ವರೆಗೆ ಈ ರಾಜ್ಯವನ್ನಾಳಿದವನು-ಮಲ್ಲಸರ್ಜ ದೇಸಾಯಿ. ಮಲ್ಲಸರ್ಜ ದೊರೆಗೆ ಇಬ್ಬರು ಹೆಂಡಂದಿರು. ಹಿರಿಯವಳು ರುದ್ರವ್ವ, ಕಿರಿಯವಳು ಚನ್ನಮ್ಮ, ಚನ್ನಮ್ಮ ಕಾಕತಿ ದೇಸಾಯರ ಮಗಳು. ಇವಳು ಸುಂದರಿ, ಯುದ್ಧಕಲೆಯನ್ನು ಚೆನ್ನಾಗಿ ಅರಿತಿದ್ದಳು. ಚನ್ನಮ್ಮಳಿಗೆ ಮಕ್ಕಳಾಗಲಿಲ್ಲ. ಮಲ್ಲಸರ್ಜ ತೀರಿದ ಬಳಿಕ ರುದ್ರವ್ವನ ಹಿರಿಯ ಮಗ ಶಿವಲಿಂಗರುದ್ರಸರ್ಜ ಪಟ್ಟಕ್ಕೆ ಬಂದ. ಮಕ್ಕಳಿಲ್ಲದ ಶಿವಲಿಂಗ ರುದ್ರಸರ್ಜ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು 1824ರಲ್ಲಿ ನಿಧನನಾದ. ಇದಕ್ಕೆ ಮೊದಲು ಮಾಸ್ತಮರಡಿ ಬಾಳಪ್ಪಗೌಡರ ಮಗ ಶಿವಲಿಂಗ ಎಂಬ ಬಾಲಕನನ್ನು ದತ್ತು ತೆಗೆದುಕೊಂಡಿದ್ದ. ಕಿತ್ತೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಬ್ರಿಟಿಷರು ಹೊಂಚುಹಾಕುತ್ತಿದ್ದರು. ಆದ್ದರಿಂದ ಅವರು ಈ ದತ್ತಕವನ್ನೊಪ್ಪಲು ನಿರಾಕರಿಸಿದರು. ಇದರಿಂದ ಉಂಟಾಗಬಹುದಾದ ಘರ್ಷಣೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಚನ್ನಮ್ಮ ಸಿದ್ಧತೆ ಮಾಡಿಕೊಂಡಳು, ಅರಮನೆಯ ಕಾರಭಾರಿಗಳಾಗಿದ್ದ ಮಲ್ಲಪ್ಪ ಶೆಟ್ಟಿ, ವೆಂಕಟರಾಯ ಎಂಬ ದ್ರೋಹಿಗಳಿಂದ ಈ ಸಂಗತಿ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಯಿತು. 1824ರ ಅಕ್ಟೋಬರ್ 11ರಂದು ಥ್ಯಾಕರೆ ಹಠಾತ್ತಾಗಿ ಕಿತ್ತೂರಿನ ಕೋಟೆಯ ಮೇಲೆ ಏರಿಬಂದ. ದಿನಾಂಕ 13ರಂದು ಕೋಟೆಯ ಹೆಬ್ಬಾಗಿಲನ್ನು ಒಡೆಯಲು ಥ್ಯಾಕರೆ ಕ್ಯಾಪ್ಟನ್ ಬ್ಲಾಕ್​ನಿಗೆ ಆಜ್ಞೆಯಿತ್ತ. ಅಷ್ಟರಲ್ಲಿ ಕಿತ್ತೂರಿನ ಯೋಧ ಅಮಟೂರ ಬಾಳಪ್ಪ ಥ್ಯಾಕರೆಯನ್ನು ಗುಂಡಿಕ್ಕಿ ಕೊಂದ, ಬ್ಲಾ್ಯಕ್, ಇನ್ನಿತರ ಅಧಿಕಾರಿಗಳು ಹೋರಾಟದಲ್ಲಿ ಮಡಿದರು. ನೂರಾರು ಬ್ರಿಟಿಷ್ ಸೈನಿಕರು ಸೆರೆಸಿಕ್ಕರು. ಇದರಿಂದ ಸಹಜವಾಗಿ ಸಿಟ್ಟಿಗೆದ್ದ ಬ್ರಿಟಿಷರು ಕಿತ್ತೂರು ವಶಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡರು. ಮೈಸೂರು, ಮದರಾಸು, ಮುಂಬೈ, ಸೊಲ್ಲಾಪುರ ಇನ್ನಿತರ ಕಡೆಗಳಿಂದ ಬಂದ ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ನುಗ್ಗಿತು. ಕೋಟೆಗೆ ಕೈ ಹಚ್ಚಿದರೆ ಸೆರೆಯಾಳುಗಳನ್ನು ನಾಶಪಡಿಸುವುದಾಗಿ ಕಿತ್ತೂರಿನ ವೀರರು ಬೆದರಿಕೆ ಹಾಕಿದರು. ದೇಶಗತಿಯನ್ನೂ ಬಿಟ್ಟು, ದತ್ತಕಪುತ್ರ›ನನ್ನೂ ಮಾನ್ಯ ಮಾಡುವುದಾಗಿ ಚಾಪ್ಲಿನ್ ವಚನಕೊಟ್ಟಾಗ, ಚನ್ನಮ್ಮ ಬಂಧಿಗಳನ್ನು ಬಿಡುಗಡೆ ಮಾಡಿದಳು. ಕೃತಘ್ನನಾದ ಚಾಪ್ಲಿನ್ ಕೋಟೆ ಮುತ್ತಲು ತನ್ನ ಸೇನೆಗೆ ಅಪ್ಪಣೆಯಿತ್ತ. ಚನ್ನಮ್ಮ ಕೆರಳಿ ತನ್ನ ಶೂರ ಸೇನೆಯೊಡನೆ ತಾನೇ ಕಾಳಗಕ್ಕೆ ನಿಂತಳು. ಬ್ರಿಟಿಷರ ಸುಸಜ್ಜಿತ ಆಯುಧಗಳೆದುರು ಕಿತ್ತೂರು ಪಕ್ಷಕ್ಕೆ ಸೋಲಾಯಿತು. ಚನ್ನಮ್ಮ ಮತ್ತು ಸೊಸೆ ವೀರಮ್ಮ ಪಾರಾಗಿ ಹೋಗಲು ಮಾಡಿದ ಪ್ರಯತ್ನ ವಿಫಲವಾಯಿತು. ಚನ್ನಮ್ಮ ಮತ್ತು ವೀರವ್ವ ಇಬ್ಬರೂ ಬ್ರಿಟಿಷರ ಗೃಹ ಬಂಧಿಗಳಾದರು. ಅವರನ್ನು ಬೈಲಹೊಂಗಲದ ಸೆರೆಮನೆಯಲ್ಲಿ್ಲಲಾಯಿತು. ಸೆರೆವಾಸದಲ್ಲಿದ್ದರೂ ಚನ್ನಮ್ಮ ಮರಳಿ ತನ್ನ ರಾಜ್ಯ ಪಡೆಯುವ ಕನಸು ಕಾಣುತ್ತ, ಸಂಗೊಳ್ಳಿ ರಾಯಣ್ಣನಂಥ ವೀರಯೋಧರ ಗುಪ್ತ ಸಂಪರ್ಕ ಪಡೆದಳು. ಕಿತ್ತೂರಿನ ಬಿಡುಗಡೆಗೆ ಪ್ರಯತ್ನಿಸಲು ತನ್ನ ಆಭರಣ, ಹಣ ಕಳುಹಿಸುತ್ತ ಅವರನ್ನು ಹುರಿದುಂಬಿಸಿದಳು. 1839ರ ಫೆಬ್ರವರಿ 4ರಂದು ಚನ್ನಮ್ಮ ನಿಧನಳಾದಳು. ಆಗ ಆಕೆಗೆ 57 ವರ್ಷ ವಯಸ್ಸು.

ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಲ್ಪಟ್ಟಿರುವ ಕಿತ್ತೂರು ಸಂಸ್ಥಾನದ ಯುದ್ಧಚರಿತ್ರೆ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಆ ಹೋರಾಟದ ನೇತೃತ್ವ ವಹಿಸಿದ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ ಎಂದೇ ಖ್ಯಾತಳಾದ ವೀರರಾಣಿ ಕಿತ್ತೂರ ಚನ್ನಮ್ಮ ಭಾರತೀಯ ಮಹಿಳೆಯರ ಸ್ವಾಭಿಮಾನದ ಸಂಕೇತ. ಅವಳ ಕೆಚ್ಚು, ಪರಾಕ್ರಮಗಳನ್ನು ನಮ್ಮ ಜಾನಪದರು ಲಾವಣಿ, ಗೀಗೀ ಪದಗಳಲ್ಲಿ ಹಾಡಿ ಹೊಗಳಿದ್ದಾರೆ. ಆಂಗ್ಲರ ಹುಟ್ಟಡಗಿಸಲು ದಿಟ್ಟೆದೆಯಿಂದ ಹೋರಾಡಿದವಳು ಕಿತ್ತೂರ ರಾಣಿ ಚನ್ನಮ್ಮ. ಈ ನಾಡಿನ ಅಭಿಮಾನ, ದೇಶಾಭಿಮಾನದ ಮಹಿಳೆ. ಕಿತ್ತೂರು ಸಂಸ್ಥಾನ ಮತ್ತು ಚನ್ನಮ್ಮಳ ಯಶೋಗಾಥೆ ಇಂದಿಗೂ ಜನರ ಮನದಾಳದಲ್ಲಿ ನೆಲೆಯೂರಿನಿಂತಿದೆ.

ವೀರ ಸಂಗೊಳ್ಳಿ ರಾಯಣ್ಣ: ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ್ ಸೆರೆಗೆ ಸಿಕ್ಕ ನಂತರವೂ ಕಿತ್ತೂರಿನ ಕೆಲವು ಸ್ವಾಭಿಮಾನಿ ತರುಣರು ಕೂಡಿ ಹೋರಾಟದ ರೂಪುರೇಷೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತರಾದರು. ಇವರ ನಾಯಕರತ್ನವಾಗಿ ಹೊರಹೊಮ್ಮಿದವನು ಸಂಗೊಳ್ಳಿ ರಾಯಣ್ಣ. ರಾಯಣ್ಣ ಸ್ವಾತಂತ್ರ್ಯ ಸ್ವಾಭಿಮಾನದ ಕಿಡಿಯಾದ. ಕಿತ್ತೂರಿನ ಜನರ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸುವುದಕ್ಕಾಗಿ ರಾಯಣ್ಣ ಪಣ ತೊಟ್ಟ. ಈ ಹೋರಾಟದ ಸಂದರ್ಭದಲ್ಲಿ ಅವನು ನಿರ್ವಹಿಸಿದ ಪಾತ್ರ ಅತ್ಯಂತ ರೋಚಕವಾಗಿದೆ. ಕಿತ್ತೂರು ಇತಿಹಾಸದಲ್ಲಿ ರಾಯಣ್ಣನ ಹೋರಾಟ ಅತ್ಯದ್ಭುತವಾಗಿದೆ. ಯುವಜನರಲ್ಲಿ ಪ್ರೇರಣಾದಾಯಕವಾದ ಸಂವೇದನೆಯನ್ನು ಹುಟ್ಟುಹಾಕಿದ ಶ್ರೇಯಸ್ಸು ರಾಯಣ್ಣನದು. ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಸಿಂಹಸ್ವಪ್ನವಾಗಿ ರಾಯಣ್ಣ ಕಾಡುತ್ತಾನೆ. ಸರಕಾರವನ್ನೇ ಗಡಗಡ ನಡುಗಿಸುತ್ತಾನೆ. ಸರಕಾರಕ್ಕೆ ಸವಾಲೆನಿಸುವ ರೀತಿಯಲ್ಲಿ ಸಂಘಟನೆಯನ್ನು ಮಾಡುತ್ತಾನೆ. ಸಂಗೊಳ್ಳಿ ಬೈಲಹೊಂಗಲ ತಾಲೂಕಿನ ಒಂದು ಚಿಕ್ಕ ಹಳ್ಳಿ. ಅಲ್ಲಿಯ ರೋಗಣ್ಣವರ ಮನೆತನದ ಕೆಂಚಮ್ಮನ ಮಗನಾದ ರಾಯಣ್ಣ, ಕಿತ್ತೂರು ಸಂಸ್ಥಾನದ ಬಗ್ಗೆ ಅಪಾರವಾದ ಶ್ರದ್ಧೆಯನ್ನು ಇಟ್ಟುಕೊಂಡಿರುತ್ತಾನೆ. ತನ್ನ ಕಾರ್ಯದಕ್ಷತೆ ಮತ್ತು ವೀರಗುಣಗಳಿಂದ ರಾಯಣ್ಣ ಅಲ್ಪಾವಧಿಯಲ್ಲಿ ನಾಯಕರತ್ನ ಆಗಿ ಹೊರಹೊಮ್ಮುತ್ತಾನೆ. ವೀರರಾಣಿ ಚನ್ನಮ್ಮಳ ಪರಮಾಪ್ತ ಬಂಟನಾಗಿ ಸಂಸ್ಥಾನದ ಶ್ರೇಯಸ್ಸಿಗೆ ದುಡಿಯುತ್ತಾನೆ. ರಾಯಣ್ಣನ ಹೋರಾಟ ಅಪ್ರತಿಮವಾಗಿದೆ.

ಇಂದಿನಿಂದ 3 ದಿನ ಉತ್ಸವ: ರಾಜ್ಯ ಸರ್ಕಾರವು ಕಿತ್ತೂರು ಕೋಟೆಯನ್ನು ಪುನರ್ ನಿರ್ವಿುಸಲು ಯೋಜನೆ ರೂಪಿಸಿದೆ. ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಮಾಡುತ್ತಿದೆ. ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಆಂಗ್ಲರ ವಿರುದ್ಧ ಯುದ್ಧ ಸಾರಿದ ಪ್ರಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ. ಅವರು ಹೋರಾಟ ಮಾಡಿ, ವೈರಿಗಳ ರುಂಡ ಚಂಡಾಡಿ ಯುದ್ಧ ಗೆದ್ದ ದಿನವಾದ 1824ರ ಅ. 23ರ ವಿಜಯೋತ್ಸವದ ಸೆವಿನೆನಪಿಗಾಗಿ ಮತ್ತು ಇಂದಿನ ಯುವ ಪೀಳಿಗೆಯಲ್ಲಿಯೂ ಶೌರ್ಯ, ಸಾಹಸ, ಇತಿಹಾಸ, ದೇಶಪ್ರೇಮ ಬಡಿದೆಬ್ಬಿಸಲು ಸರ್ಕಾರ ಪ್ರತಿವರ್ಷ ಮೂರು ದಿನಗಳ ಕಾಲ ಕಿತ್ತೂರ ಉತ್ಸವ ಆಚರಿಸುತ್ತದೆ. ಈ ಬಾರಿ ಅ. 23-25ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net