

ಯುದ್ಧಾಪರಾಧ!
ಮೂರು ತಿಂಗಳ ಹಿಂದೆ ಬೃಹತ್ ರಷ್ಯಾ ನೆರೆಯ ಯೂಕ್ರೇನ್ ಮೇಲೆ ಆಕ್ರಮಣವೆಸಗಿದಾಗಿನಿಂದ ಮತ್ತೆ ಮತ್ತೆ ಕೇಳುತ್ತಿರುವ ಪದ ಇದು. ಪಶ್ಚಿಮದ ಮಾಧ್ಯಮಗಳು ವರ್ಣಿಸಿದಂತೆ ಉತ್ತರದ ಕಿಯೆವ್ ಮತ್ತು ಖಾರ್ಕೀವ್ ನಗರಗಳ ಮೇಲೆ ರಷ್ಯಾ ಎಸಗಿದ ದಾಳಿಯ ಉಗ್ರತೆ ಹಾಗೂ ದಕ್ಷಿಣದ ಮರಿಯಾಪೋಲ್ ಮತ್ತು ಕೆಸೋನ್ ನಗರಗಳನ್ನು ವಶಪಡಿಸಿಕೊಂಡ ಭೀಷಣತೆಯನ್ನು ಖಂಡಿಸಲು ಅಮೆರಿಕಾ, ಬ್ರಿಟನ್, ಜರ್ಮನಿ ಮತ್ತು ಯೂರೋಪಿಯನ್ ಯೂನಿಯನ್ನ ನಾಯಕರು ‘ಯುದ್ಧಾಪರಾಧ’ ಎಂಬ ಪದವನ್ನು ಬಳಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ರಂತೂ ರಷಿಯನ್ ಅಧ್ಯಕ್ಷ ವ್ಲಾದಿಮೀರ್ ಪೂತಿನ್ ಅವರನ್ನು ಕಸಾಯಿ, ಕೊಲೆಗಡುಕ ಸರ್ವಾಧಿಕಾರಿ ಎಂದೆಲ್ಲಾ ಹೀಗಳೆದು, ಯುದ್ಧಾಪರಾಧಗಳಿಗಾಗಿ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ನಲ್ಲಿ ವಿಚಾರಣೆಗೊಳಿಸಬೇಕೆಂದು ಹೇಳಿದ್ದಾರೆ. ಜತೆಗೆ, ಅಂತಹ ಮನುಷ್ಯ ಅಧಿಕಾರದಲ್ಲಿ ಮುಂದುವರಿಯಲಾಗದು ಎಂದೂ ಹೇಳಿಬಿಟ್ಟಿದ್ದರು.
ಒಟ್ಟಿನಲ್ಲಿ ರಷ್ಯಾ ಮತ್ತದರ ಅಧ್ಯಕ್ಷರ ವಿರುದ್ಧ ಪಶ್ಚಿಮ ಜಗತ್ತು ಹರಿಹಾಯುತ್ತಿರುವ ಹಿನ್ನೆಲೆಯಲ್ಲಿ, ಯುದ್ಧಾಪರಾಧ ಎಂದರೆ ಏನೆಂದು ಶೋಧಿಸುವುದು ಮತ್ತು ಈ ಪರಿಕಲ್ಪನೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಚಿತ್ರಿಸುವುದು ಈ ಲೇಖನದ ವಸ್ತುವಿಷಯ.
ಪ್ರಾಚೀನ ಜಿಜ್ಞಾಸೆ: ಯುದ್ಧವೇ ಒಂದು ಅಪರಾಧ, ಇನ್ನು ಯುದ್ಧಾಪರಾಧಗಳನ್ನು ಪ್ರತ್ಯೇಕಿಸಿ ಹೇಳುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಅನಾದಿ ಕಾಲದಲ್ಲೇ ಕಾಡಿದ್ದಿರಬಹುದು. ಹೀಗಾಗಿಯೇ ಯುದ್ಧಗಳನ್ನು ‘ನ್ಯಾಯಸಮ್ಮತ ಯುದ್ಧ’ ಮತ್ತು ‘ನ್ಯಾಯಸಮ್ಮತವಲ್ಲದ ಯುದ್ಧ’ ಎಂದು ವಿಂಗಡಿಸುವುದೂ ಪ್ರಾಚೀನ ಕಾಲದಲ್ಲೇ ಆರಂಭವಾದಂತೆ ಕಾಣುತ್ತದೆ. ಈ ವಿಂಗಡಣೆ ಮತ್ತು ಅದಕ್ಕನುಗುಣವಾಗಿ ಯುದ್ಧನಿರತ ರಾಜ್ಯಗಳು/ಸೇನೆಗಳು ಅನುಸರಿಸಬೇಕಾದ ನಿಯಮಗಳ ಸೃಷ್ಟಿ ಮತ್ತು ಅನುಸರಣೆ ಪೌರ್ವಾತ್ಯ ಅದರಲ್ಲೂ ಮುಖ್ಯವಾಗಿ ಭಾರತೀಯ ಪರಂಪರೆಯಲ್ಲಿ ಪಕ್ವಗೊಂಡದ್ದನ್ನು ಕಾಣುತ್ತೇವೆ. ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಲ್ಲಿ ಯುದ್ಧವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ನಡೆಯಬೇಕೆಂದೂ, ಅವುಗಳ ನಡುವಿನ ಸಮಯ ಗಾಯಾಳುಗಳನ್ನು ಶುಶ್ರೂಷೆಗಾಗಿ ಯುದ್ಧರಂಗದಿಂದ ಹೊರಗೊಯ್ಯಲು, ಮೃತದೇಹಗಳನ್ನು ಶಾಸ್ತ್ರಬದ್ಧವಾಗಿ ಸಂಸ್ಕಾರ ಮಾಡಲು, ವಿಶ್ರಾಂತಿಗಾಗಿ ಹಾಗೂ ಶಕ್ತಿಮರುಗೂಡಿಕೆಗಾಗಿ ವಿನಿಯೋಗವಾಗಬೇಕೆಂದೂ ಯುದ್ಧನಿಯಮಗಳು ರೂಪಿತಗೊಂಡಿದ್ದವು. ಆ ಅವಧಿಯಲ್ಲಿ ಪರಸ್ಪರ ಶತ್ರುಗಳು ನಿರಾಯುಧರಾಗಿ ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವೂ ಇತ್ತು. ಜತೆಗೆ, ನಿರಾಯುಧರ ಮೇಲೆ ಶಸ್ತ್ರಪ್ರಯೋಗ ಸಲ್ಲದು ಎಂಬ ನಿಯಮವೂ ಇತ್ತು. ಈ ನಿಯಮಗಳಿಂದ ಉಪಯೋಗ ಪಡೆಯಬೇಕಾದರೆ ಅದೇ ನಿಯಮಗಳನ್ನು ಮೊದಲಿಗೆ ಪಾಲಿಸಬೇಕಿತ್ತು. ಶರಣಾಗತನಾದವ ಕ್ಷಮಾದಾನಕ್ಕೆ ಅರ್ಹ, ಸ್ತ್ರೀಯರು ಮತ್ತು ಬಾಲಕರ ವಿರುದ್ಧ ಶಸ್ತ್ರಪ್ರಯೋಗ ಕೂಡದು ಎಂಬ ನಿಯಮವೂ ಇತ್ತು. ಈ ನಿಯಮಗಳ ಉಲ್ಲಂಘನೆ ‘ಯುದ್ಧಾಪರಾಧ’ವೆಂದು ಪರಿಗಣಿಸಲ್ಪಡುತ್ತಿತ್ತು ಮತ್ತು ಉಲ್ಲಂಘಿಸಿದಾತ ಶಿಕ್ಷೆಗೆ ಅರ್ಹನಾಗುತ್ತಿದ್ದ.
ಪೌರವನ ಆದರ್ಶ: ಐತಿಹಾಸಿಕ ಕಾಲದಲ್ಲೂ ಈ ಯುದ್ಧನಿಯಮಗಳು ಅನುಸರಿಸಲ್ಪಡುತ್ತಿದ್ದ ಉದಾಹರಣೆಗಳು ಭಾರತೀಯ ಇತಿಹಾಸದಲ್ಲಿ ದೊರೆಯುತ್ತವೆ. ಹಾಗೇ ಈ ನಿಯಮಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪರಿಚಿತ ಎಂಬ ಕುರುಹೂ ಕಾಣಸಿಗುತ್ತದೆ. ಮ್ಯಾಸಿಡೋನಿಯನ್ ಸಾಮ್ರಾಟ ಅಲೆಕ್ಸಾಂಡರ್ ಮತ್ತು ಜೀಲಂ ರಾಜ್ಯದ ಅರಸ ಪೌರವನ ನಡುವೆ ಕ್ರಿ.ಪೂ. 326ರಲ್ಲಿ ನಡೆದ ಯುದ್ಧ ಇಲ್ಲಿ ಉಲ್ಲೇಖಾರ್ಹ. ಕತ್ತಲಾದ ಮೇಲೆ ಯುದ್ಧ ಸಲ್ಲದು ಎಂಬ ಭಾರತೀಯ ನಿಯಮವನ್ನು ಪೌರವ ಪಾಲಿಸಿದರೆ, ಅಂತಹ ನಿಯಮದ ಪರಿಚಯವಿಲ್ಲದ ಅಲೆಕ್ಸಾಂಡರ್ ಕತ್ತಲಲ್ಲೇ ತನ್ನ ಸೇನೆಯನ್ನು ನದಿ ದಾಟಿಸಿ ವಿಶ್ರಮಿಸುತ್ತಿದ್ದ ಎದುರಾಳಿಯ ಮೇಲೆರಗುತ್ತಾನೆ.
ಇದರರ್ಥ ಆ ದಿನಗಳ ಯೂರೋಪಿಯನ್ನರು ನೀತಿನಿಯಮಾವಳಿಗೆ ಕಟ್ಟುಬೀಳದ ಅನಾಗರಿಕರಾಗಿದ್ದರು ಎಂದಲ್ಲ. ಕ್ರಿ.ಪೂ. 432ರಲ್ಲಿ ಜರುಗಿದ ಪೆಲಪೊನೆಶಿಯನ್ ಸಮ್ಮೇಳನ ಮತ್ತು ಮರುವರ್ಷ ಆರಂಭವಾಗಿ 27 ವರ್ಷ ನಡೆದ ಪೆಲಪೊನ್/ಎಸಿಯನ್ ಯುದ್ಧದ ಕುರಿತಾಗಿ ಥೂಕಿಡೈಡೆಸ್ ಬಿಟ್ಟುಹೋಗಿರುವ ವಿವರವಾದ ಬರಹಗಳು ಆ ದಿನಗಳ ಗ್ರೀಕರು ಅಂತಾರಾಷ್ಟ್ರೀಯ ಸಂಬಂಧಗಳು, ರಾಜತಂತ್ರ, ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಒಪ್ಪಂದಗಳ ಬಗೆಗಿನ ನಿಷ್ಠೆ ಕುರಿತಂತೆ ಅದೆಷ್ಟು ಉನ್ನತ ಮಟ್ಟದ ಚಿಂತನೆ ಹೊಂದಿದ್ದರು ಮತ್ತು ನೀತಿನಿಯಮಗಳಿಗೆ ಅದೆಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ನಮಗೆ ಮನದಟ್ಟು ಮಾಡಿಕೊಡುತ್ತವೆ. ಆದರೆ ಒಮ್ಮೆ ಯುದ್ಧ ಆರಂಭವಾದರೆ ಅಲ್ಲಿ ಯಾವುದೇ ನಿಯಮಗಳ ಅಗತ್ಯವಿಲ್ಲ ಎಂಬ ಚಿತ್ರಣವೂ ಅದೇ ಥೂಕಿಡೈಡೆಸ್ನ ಬರಹಗಳಿಂದ ನಮಗೆ ತಿಳಿಯುತ್ತದೆ. ಅದೇ ನಿಯಮರಹಿತ ಯುದ್ಧಗಳು ಮುಂದಿನ ಹಲವಾರು ಶತಮಾನಗಳವರೆಗೆ ಯೂರೋಪ್ ಮತ್ತು ಪಶ್ಚಿಮ ಏಷ್ಯಾದ ಇತಿಹಾಸದಲ್ಲಿ ಅಗಣಿತ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ನೀತಿನಿಯಮವಿಲ್ಲದ, ಮೋಸ ಮತ್ತು ಕ್ರೌರ್ಯದಿಂದ ಕೂಡಿದ ಯುದ್ಧವಿಧಾನಗಳು, ಸಾಮೂಹಿಕ ಹತ್ಯಾಕಾಂಡ, ಸ್ತ್ರೀಯರ ಮಾನಾಪರಣ ಮತ್ತು ಗುಲಾಮೀಕರಣ, ಎಳೆಯರ ಹತ್ಯೆ ಯೂರೋಪ್, ಪಶ್ಚಿಮ ಮತ್ತು ಮಧ್ಯ ಏಷ್ಯಾದ ಬದುಕಿನ ಭಾಗವೇ ಆಗಿಹೋದವು. ಅರಬ್ಬರು ಮತ್ತು ಮಂಗೋಲರು ರಣಾಂಗಣದಲ್ಲಿ ಮತ್ತು ನಂತರ ವಿರೋಧಿಗಳ ಬಗ್ಗೆ ತೋರಿದ ಕ್ರೌರ್ಯವಂತೂ ವರ್ಣಿಸಲಸದಳ.
ಮಧ್ಯಯುಗದಲ್ಲಿ ಪುನರುಜ್ಜೀವನ ಕಾಲದ ಯೂರೋಪಿಯನ್ನರಲ್ಲಿ ತಮ್ಮ ಹಾಗೂ ಇತರರ ಕುರಿತಾಗಿ ಮಾನವೀಯ ಎನಿಸಬಹುದಾದ ಚಿಂತನೆಗಳನ್ನು ಮೂಡಿಸತೊಡಗಿದಾಗ ಯುದ್ಧದ ಬಗೆಗೂ ಅವರ ಚಿಂತನೆಗಳು ಬದಲಾಗತೊಡಗಿದ್ದನ್ನು ಕಾಣುತ್ತೇವೆ. ಅಷ್ಟಾಗಿಯೂ, ಆ ಮಾನವೀಯ ಚಿಂತನೆಗಳನ್ನು ಅವರು ಅನುಸರಿಸತೊಡಗಿದ್ದು ಇತರ ಯೂರೋಪಿಯನ್ ಜನಾಂಗಗಳನ್ನು ರಣಾಂಗಣಗಳಲ್ಲಿ ಎದುರಿಸಿದಾಗ ಮಾತ್ರ. ಹದಿನಾರನೇ ಶತಮಾನದೊಂದಿಗೇ ಆರಂಭವಾಗಿ ಮುಂದಿನ ಮೂರೂವರೆ ಶತಮಾನಗಳವರೆಗೆ ಅವ್ಯಾಹತವಾಗಿ ಸಾಗಿದ ವಸಾಹತುಶಾಹಿ ಯುಗದಲ್ಲಿ ಇದೇ ಯೂರೋಪಿಯನ್ನರು ಅಮೆರಿಕಾ, ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಎಸಗಿದ ಕ್ರೌರ್ಯಗಳು ಅಪಾರ. ಅಂತಿಮವಾಗಿ, ಕೆಲವಾದರೂ ನಿಯಮಗಳನ್ನು ರೂಪಿಸಿ, ಅಗತ್ಯ ಕೆಡುಕು ಆದ ಯುದ್ಧವನ್ನು ಮಾನವೀಯಗೊಳಿಸುವ ನಿರ್ದಿಷ್ಟ ಪ್ರಯತ್ನ ನಡೆದದ್ದು ಯೂರೋಪಿಯನ್ ಸಂಸ್ಕೃತಿಯ ವಿಸ್ತರಣವಾದ ಅಮೆರಿಕಾದಲ್ಲಿ. ಈ ನಿಯಮಗಳ ಅಗತ್ಯ ಅವರಿಗೆ ಕಂಡದ್ದು 1861ರಲ್ಲಿ ಆರಂಭವಾದ ಅಂತರ್ಯುದ್ಧದಲ್ಲಿ ತಂತಮ್ಮನ್ನೇ ಕೊಂದುಕೊಳ್ಳತೊಡಗಿದಾಗ. ತಮ್ಮದೇ ದಕ್ಷಿಣ ರಾಜ್ಯಗಳ ವಿರುದ್ಧದ ಆ ಯುದ್ಧದಲ್ಲಿ ಯೂನಿಯನ್ ಸೈನಿಕರ ವರ್ತನೆ ಹೇಗಿರಬೇಕೆಂದು ಅಧ್ಯಕ್ಷ ಅಬ್ರಹಾಂ ಲಿಂಕನ್ ಏಪ್ರಿಲ್ 24, 1863ರಂದು ಹೊರಡಿಸಿದ ‘ಲೀಬರ್ ಕೋಡ್’ ಆಧುನಿಕ ಯುದ್ಧನಿಯಮಗಳ ವಿಕಾಸದಲ್ಲಿ ಮೊದಲ ನಿರ್ಣಾಯಕ ಹೆಜ್ಜೆ. ಅಮೆರಿಕಾದಲ್ಲಿ ಆರಂಭವಾದದ್ದನ್ನು ವಿಸ್ತರಿಸಿ ಯೂರೋಪ್ಗೆ ಅನ್ವಯಿಸುವ ಪ್ರಯತ್ನ ನಡೆದದ್ದು ಆ ಶತಮಾನದ ಅಂತ್ಯದಲ್ಲಿ. ನೆದರ್ಲ್ಯಾಂಡ್ನ ಹೇಗ್ ಪಟ್ಟಣದಲ್ಲಿ 1899 ಮತ್ತು 1907ರಲ್ಲಿ ನಡೆದ ಎರಡು ಸಮ್ಮೇಳನಗಳಲ್ಲಿ ಅಂಗೀಕೃತವಾದ ಯುದ್ಧನಿಯಮಗಳು ಮತ್ತು ಯುದ್ಧಾಪರಾಧಗಳ ಪಟ್ಟಿ ‘ಹೇಗ್ ಒಪ್ಪಂದಗಳು’ ಎಂದು ಇತಿಹಾಸದಲ್ಲಿ ದಾಖಲಾಗಿವೆ. ದುರಂತವೆಂದರೆ ಹೇಗ್ ಒಪ್ಪಂದಗಳನ್ನೇ ಅಣಕ ಮಾಡುವಂತೆ 1914ರಲ್ಲಿ ಇಡೀ ಯೂರೋಪ್ ಮೊದಲ ಮಹಾಯುದ್ಧದ ದಳ್ಳುರಿಯಲ್ಲಿ ಬಿತ್ತು. ಮೊದಲಿಗೆ 1914ಕ್ಕೆ ನಿಗದಿಯಾದ, ಯುದ್ಧದಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಮೂರನೆಯ ಹೇಗ್ ಸಮ್ಮೇಳನ ನಡೆಯಲೇ ಇಲ್ಲ.
ಜಿನೀವಾ ಒಪ್ಪಂದ: ಹೀಗೆ ‘ಲೀಬರ್ ಕೋಡ್’ ಮೂಲಕ ಅಮೆರಿಕಾದಲ್ಲಿ ಆರಂಭವಾಗಿ, ಹೇಗ್ ಒಪ್ಪಂದಗಳ ಮೂಲಕ ಯುರೋಪ್ಗೆ ವಿಸ್ತರಿಸಿದ ಯುದ್ಧಾಪರಾಧಗಳ ಗುರುತಿಸುವಿಕೆ ಮತ್ತು ನಿಯಂತ್ರಣ ಪ್ರಕ್ರಿಯೆಯನ್ನು ಇಡೀ ಜಗತ್ತಿನಲ್ಲಿ ಸಾರ್ವತ್ರಿಕಗೊಳಿಸುವ ಘನಿಷ್ಟ ಪ್ರಯತ್ನ ಆರಂಭವಾದದ್ದು ಎರಡನೆಯ ಮಹಾಯುದ್ಧಾನಂತರ. ಈ ಹಾದಿಯಲ್ಲಿ ನಿರ್ಣಾಯಕ ಹೆಜ್ಜೆಗಳನ್ನಿಡತೊಡಗಿದ್ದು 1949ರಲ್ಲಿ ಆರಂಭವಾದ ‘ಜಿನೀವಾ ಒಪ್ಪಂದಗಳು’ ಸರಣಿಯ ಮೂಲಕ. ಪರಿಣಾಮವಾಗಿ, ಅಂತಾರಾಷ್ಟ್ರೀಯ ಕಾನೂನಿನ ಭಾಗವಾದ ಯುದ್ಧಕಾನೂನಿಗೆ ವ್ಯತಿರಿಕ್ತವಾಗಿರುವ ಯುದ್ಧಾಪರಾಧಗಳ ಒಂದು ಒಪ್ಪಿತ ಹಾಗೂ ನಿಶ್ಚಿತ ಪಟ್ಟಿ ಮಾನವಕುಲಕ್ಕೆ ಇಂದು ಲಭ್ಯವಿದೆ. ಆ ಪಟ್ಟಿಯಲ್ಲಿ ಕಾಣುವ ಅಂಶಗಳಿವು-
ಸಾಮೂಹಿಕ ಹತ್ಯಾಕಾಂಡ, ಜನಾಂಗ ನಿಮೂಲನ, ಎದುರಾಳಿ ಸೈನಿಕರನ್ನು ಕೈದಿಯಾಗಿ ತೆಗೆದುಕೊಳ್ಳುವ ಅವಕಾಶವಿದ್ದರೂ ಅವರನ್ನು ಕೊಲ್ಲುವುದು, ಶಸ್ತ್ರರಹಿತ ನಾಗರಿಕರ ಹಾಗೂ ಯುದ್ಧಕೈದಿಗಳ ಉದ್ದೇಶಪೂರ್ವಕ ಹತ್ಯೆ ಮತ್ತು ಪೀಡನೆ, ಅವರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳುವುದು, ನಾಗರಿಕ ಆಸ್ತಿಪಾಸ್ತಿಯ ಅನವಶ್ಯಕ ನಾಶ, ಮೋಸ ಮತ್ತು ನಂಬಿಕೆದ್ರೋಹದ ಮೂಲಕ ಹಾದಿತಪ್ಪಿಸುವುದು, ಲೈಂಗಿಕ ದೌರ್ಜನ್ಯ, ಲೂಟಿ, ಸೇನೆಗೆ ಎಳೆಯರ ಭರ್ತಿ.
ಈ ಬಗೆಯ ಯುದ್ಧಾಪರಾಧಗಳಿಗಾಗಿ ವಿಚಾರಣೆ ಮತ್ತು ಶಿಕ್ಷೆ ಹೇಗ್ ಒಪ್ಪಂದಗಳಿಗನುಗುಣವಾಗಿ 1945ರಲ್ಲೇ ಆರಂಭವಾಯಿತು. ಮಹಾಯುದ್ಧ ಆರಂಭಿಸಿ ಅಗಾಧ ಪ್ರಮಾಣದಲ್ಲಿ ಯುದ್ಧಾಪರಾಧಗೈದ ಜರ್ಮನಿ ಮತ್ತದರ ಮಿತ್ರದೇಶಗಳ ನಾಯಕರನ್ನು ನ್ಯೂರೆಬರ್ಗ್ನಲ್ಲಿ ಮಿತ್ರರಾಷ್ಟ್ರಗಳು ವಿಚಾರಣೆಗೊಳಪಡಿಸಿ ಶಿಕ್ಷೆ ನೀಡಿದವು. 2002ರಲ್ಲಿ ಹೇಗ್ ಪಟ್ಟಣದಲ್ಲೇ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ (ಐಸಿಸಿ) ಸ್ಥಾಪನೆಯಾದ ನಂತರ, ತಮ್ಮ ದೇಶದಲ್ಲಿ ಅಥವಾ ವಿದೇಶದಲ್ಲಿ ಯುದ್ಧಾಪರಾಧಗೈದ ಹಲವಾರು ಸೇನಾ ಹಾಗೂ ರಾಷ್ಟ್ರನಾಯಕರನ್ನು ಯುದ್ಧಾಪರಾಧಿಗಳೆಂದು ಗುರುತಿಸಲಾಗಿದೆ, ಕೆಲವರನ್ನು ವಿಚಾರಣೆಗೊಳಿಸಿ ಶಿಕ್ಷೆ ನೀಡಿಯೂ ಆಗಿದೆ. ಆದರೆ ಅವರೆಲ್ಲರೂ ಪೂರ್ವ ಯೂರೋಪ್, ಏಷ್ಯಾ ಮತ್ತು ಆಫ್ರಿಕಾದವರು. ಅಂತಹವರ ಪಟ್ಟಿಗೆ ಈಗ ರಷಿಯನ್ ಅಧ್ಯಕ್ಷ ಪೂತಿನ್ರನ್ನು ಸೇರಿಸಲು ಅಮೆರಿಕಾ ಕೂಗೆತ್ತಿದೆ.
ಇವರಿಗೇನು ಶಿಕ್ಷೆ?: ವಿಪರ್ಯಾಸವೆಂದರೆ ಜಿನೀವಾ ಒಪ್ಪಂದಗಳು ಯುದ್ಧಾಪರಾಧಗಳೆಂದು ಗುರುತಿಸಿರುವ ಘೊರ ಅಪರಾಧಗಳನ್ನು ಅಮೆರಿಕಾದ ಒಬ್ಬರಿಗಿಂತಲೂ ಹೆಚ್ಚು ಅಧ್ಯಕ್ಷರು ಎಸಗಿದ್ದಾರೆ. ಲಿಂಡನ್ ಜಾನ್ಸನ್ (1963-68), ರಿಚರ್ಡ್ ನಿಕ್ಸನ್ (1969-74) ವಿಯೆಟ್ನಾಂನಲ್ಲಿ ಎಸಗಿದ ದುಷ್ಕೃತ್ಯಗಳು ಆಧುನಿಕ ಇತಿಹಾಸದ ಒಂದು ಕರಾಳ ಅಧ್ಯಾಯ. ಇವರಿಬ್ಬರೂ ಸೇರಿ ವಿಯೆಟ್ನಾಂ ಮೇಲೆ ಎಸೆದ ಬಾಂಬ್ಗಳ ಸಂಖ್ಯೆ ಎರಡನೆಯ ಮಹಾಯುದ್ಧದಲ್ಲಿ ಬಳಸಿದ ಒಟ್ಟು ಬಾಂಬ್ಗಳಿಗಿಂತಲೂ ಹೆಚ್ಚು! ಆಮೇಲೆ ಹಿರಿಯ ಬುಷ್ ಇರಾಕ್ನಲ್ಲಿ, ಬಿಲ್ ಕ್ಲಿಂಟನ್ ಸರ್ಬಿಯಾದಲ್ಲಿ, ಕಿರಿಯ ಬುಷ್ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ, ಬರಾಕ್ ಒಬಾಮಾ ಸಿರಿಯಾ, ಅಫ್ಘಾನಿಸ್ತಾನ, ಲಿಬಿಯಾ ಮತ್ತು ಇರಾಕ್ನಲ್ಲಿ ಎಸಗಿದ ಯುದ್ಧಾಪರಾಧಗಳನ್ನು ಸರಿಗಟ್ಟುವವರು ಕಡಿಮೆ. 2001ರಿಂದ ಇಲ್ಲಿಯವರೆಗೆ ಅಮೆರಿಕಾದ ವಾಯುದಳ ಇತರ ದೇಶಗಳಲ್ಲಿ ನಡೆಸಿದ ಬಾಂಬ್ ದಾಳಿಗಳ ಸಂಖ್ಯೆ ಒಂದು ಲಕ್ಷವನ್ನು ಮೀರುತ್ತದೆ ಮತ್ತು ಇದರಲ್ಲಿ ಹತರಾಗಿರುವ ನಾಗರಿಕರ ಸಂಖ್ಯೆ 48 ಸಾವಿರ ಎಂದು ಮಾನವ ಹಕ್ಕು ಸಂಘಟನೆಗಳು ಹೇಳುತ್ತವೆ! ಅಮೆರಿಕಾದ ವಾಯುಸೇನೆ ಇರಾಕ್ ಮತ್ತು ಅಘ್ಘಾನಿಸ್ತಾನದಲ್ಲಿ ಹೇಯ ಯುದ್ಧಾಪರಾಧಗಳನ್ನು ಎಸಗಿ ಅದನ್ನು ಜಗತ್ತಿನಿಂದ ಮರೆಮಾಡಲು ಪಿತೂರಿ ನಡೆಸಿದ ಹಲವಾರು ಪ್ರಕರಣಗಳಿವೆ. ಸ್ಟಾ್ಯನ್ಫೊರ್ಡ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ ಅರ್ಧಕ್ಕಿಂತಲೂ ಹೆಚ್ಚು ಅಮೆರಿಕನ್ನರು ಇಂತಹ ಯುದ್ಧಾಪರಾಧಗಳನ್ನು ಬೆಂಬಲಿಸುತ್ತಾರೆ! ಯುದ್ಧಾಪರಾಧಿಗಳ ಪಟ್ಟಿ ದೊಡ್ಡದಿದೆ. ಇವರೆಲ್ಲರಿಗೂ ಶಿಕ್ಷೆಯಾಗುತ್ತದೆಯೇ? ಅಥವಾ ಅವರು ದುಡ್ಡು ಮತ್ತು ಶಸ್ತ್ರಾಸ್ತ್ರಗಳನ್ನು ಎಲ್ಲೆಡೆ ಚೆಲ್ಲುವ ಮೂಲಕ ಸಭ್ಯರಾಗಿಯೇ ಉಳಿದು, ಜಗತ್ತಿಗೆ ಉಪನ್ಯಾಸ ಕೊಡುತ್ತಾ ದಿನಗಳೆದುಬಿಡುತ್ತಿದ್ದಾರೆಯೇ?
(ಲೇಖಕರು ರಾಜಕೀಯ ವಿಶ್ಲೇಷಕರು)