ರಾಷ್ಟ್ರೀಯವಾದಿ ಸಾಹಿತ್ಯದ ಪ್ರಖರದೀಪ ಶಿವರಾಮು

Shivaramu
Published on
ನಿಷ್ಕಳಂಕ ದೇಶಭಕ್ತ, ಪ್ರತಿಭಾಶಾಲಿ ಕವಿ, ಸಾಹಿತಿ. ಹೀಗೆ ಅನೇಕ ವಿಶೇಷಣಗಳಿಗೆ ಒಪು್ಪವ ವ್ಯಕ್ತಿ ಶಿವರಾಮು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸಮಾಜ ಸಂಘಟನೆಯ ಸೇವೆಗೆ ಜೀವನವನ್ನು ಮುಡಿಪಾಗಿಟ್ಟವರು. ಈ ರಾಷ್ಟ್ರೀಯವಾದಿ ಲೇಖಕನಿಗೆ ಸಾವರ್ಕರ್ ಪ್ರಶಸ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಅವರ ಜೀವನ-ಸಾಧನೆಗಳ ಕಿರುನೋಟ ಇಲ್ಲಿದೆ.

ಕನಕಪುರದಲ್ಲಿ (1934ರ ಜುಲೈ 8) ಜನಿಸಿದ ಶಿವರಾಮು ಅಲ್ಲಿಯೇ ಪ್ರಾಥಮಿಕ-ಪ್ರೌಢ ಶಿಕ್ಷಣ ಪಡೆದರು. ಪಠ್ಯಪುಸ್ತಕಗಳಿಗಿಂತ ಅಕ್ಕಪಕ್ಕದವರಲ್ಲಿ ದೊರೆಯುತ್ತಿದ್ದ ಪುಸ್ತಕ ಓದುವುದರಲ್ಲಿಯೇ ಹೆಚ್ಚು ಆಸಕ್ತಿ. ನಂತರ ಆರ್​ಎಸ್​ಎಸ್ ಶಾಖೆಯ ನಂಟು. ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಜತೆಗೂಡಿ ಸಾಹಿತ್ಯಿಕ ಒಲವು.

1948ರಲ್ಲಿ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಆರ್​ಎಸ್​ಎಸ್ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿತು. ಇದರ ವಿರುದ್ಧ ಹಲವು ಆಯಾಮಗಳಲ್ಲಿ ಹೋರಾಟ ನಡೆಯಿತು. ಶಿವರಾಮು ಹಾಗೂ ಇತರರು ಚನ್ನಪಟ್ಟಣದಲ್ಲಿ ಸತ್ಯಾಗ್ರಹ ನಡೆಸಿ ಬಂಧಿತರಾದರು. ಆಗ ಅವರಿಗೆ 13 ವರ್ಷ. ಎಸ್​ಎಸ್​ಎಲ್​ಸಿ ನಂತರ 1949ರಲ್ಲಿ ಇಂಟರ್​ವಿುಡಿಯಟ್ ಓದಲು ಬೆಂಗಳೂರಿಗೆ ಆಗಮಿಸಿ, ಬಸವನಗುಡಿಯಲ್ಲಿದ್ದ ನಾಗರಾಜ ಶಾಸ್ತ್ರೀಯವರ ಮನೆಯಲ್ಲಿ ತಂಗಿದರು. ಸಾಹಿತ್ಯಿಕ ಕಾರ್ಯಕ್ರಮ ಹಾಗೂ ಆರ್​ಎಸ್​ಎಸ್ ಶಾಖೆಯಲ್ಲಿ ಭಾಗವಹಿಸುವ ಆಸಕ್ತಿಯೂ ಮುಂದುವರಿದಿತ್ತು.

ಇಂಟರ್​ವಿುಡಿಯಟ್ ಮುಗಿದ ನಂತರ ತಂದೆಯ ಒತ್ತಾಯದ ಮೇರೆಗೆ ಇಂಜಿನಿಯರಿಂಗ್ ಓದಲು ಬಿಎಂಎಸ್ ಕಾಲೇಜ್​ಗೆ ದಾಖಲಾದರು. ನಂತರ ಆರ್​ಎಸ್​ಎಸ್ ಸೆಳೆತ ಪ್ರಬಲವಾಗಿ ಪೂರ್ಣಾವಧಿ ಪ್ರಚಾರಕರಾಗಲು ಶಿವರಾಮು ನಿರ್ಧರಿಸಿದ್ದರಿಂದ ಇಂಜಿನಿಯರಿಂಗ್ ಓದು ಅಪೂರ್ಣವಾಗಿಯೇ ಉಳಿಯಿತು. ಪ್ರಚಾರಕರಾದ ನಂತರ ಹೊಸಕೋಟೆಯಲ್ಲಿ ಸಂಘವನ್ನು ಸಂಘಟಿಸುವ ಕಾರ್ಯ ಕೈಗೊಂಡರು. ಕೆಲ ದಿನಗಳಲ್ಲಿಯೇ ಅವರಿಗೆ ಬೆಂಗಳೂರಿನಲ್ಲಿ ಸಂಘದ ವಾರಪತ್ರಿಕೆ ‘ವಿಕ್ರಮ’ ಪ್ರಕಟಣೆ ಕಾರ್ಯದ ಜವಾಬ್ದಾರಿ ವಹಿಸಲಾಯಿತು. ಪತ್ರಿಕೆ ಸಂಪಾದಕರಾದ ಬಿಎಸ್​ಎನ್ ಮಲ್ಯ ಅವರೊಂದಿಗೆ ಪತ್ರಿಕಾ ಬರವಣಿಗೆಯಲ್ಲಿ ತೊಡಗಿಕೊಂಡರು. ಇದು ಅವರ ಜೀವನದಲ್ಲಿ ಮತ್ತೊಂದು ತಿರುವಾಯಿತು.

ದೇಶಭಕ್ತಿಯನ್ನು ಪ್ರೇರೇಪಿಸುವ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ರೂಢಿ ಆರ್​ಎಸ್​ಎಸ್​ನಲ್ಲಿದೆ. ಸ್ವತಃ ಭಾವುಕರೂ ದೇಶಭಕ್ತರೂ ಆದ ಶಿವರಾಮು ಇಂತಹ ಹಲವಾರು ಗೀತೆಗಳನ್ನು ರಚನೆ ಮಾಡಿದರು. 1962ರಲ್ಲಿ ಬೆಂಗಳೂರಿನ ಸುಭಾಷ್ ನಗರದಲ್ಲಿ ಜರುಗಿದ ಆರ್​ಎಸ್​ಎಸ್ ರಾಜ್ಯ ಮಟ್ಟದ ಶಿಬಿರದಲ್ಲಿ ಸಂಘದ ಸವೋಚ್ಚ ನಾಯಕ ಗುರೂಜಿ ಗೋಳ್ವಲ್ಕರ್ ಭಾಷಣ ಮಾಡಿದರು. ಆ ಸಮಾರಂಭದಲ್ಲಿ ಸ್ವಾಗತಗೀತೆಯಾಗಿ ಶಿವರಾಮು ರಚಿಸಿದ ಗೀತೆಯನ್ನು ಕೇಶವ ಗುರಂ ಹಾಡಿದರು. ಭಾರತದ ಮೇಲೆ ಚೀನಾ ಆಕ್ರಮಣ ಮಾಡಿದ್ದ ಆ ಸಂದರ್ಭದಲ್ಲಿ ಆ ಗೀತೆಯು ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿತ್ತು.

ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ

ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ...

ಈ ಗೀತೆಯ ಪ್ರತಿಯೊಂದು ಪದ ಅರ್ಥಗರ್ಭಿತ, ಸ್ಪೂರ್ತಿದಾಯಕವಾಗಿತ್ತು.

1959ರಿಂದ 1962ರವರೆಗೆ ‘ವಿಕ್ರಮ’ದಲ್ಲಿ ದುಡಿದ ಶಿವರಾಮು ಅವರು ಸಂಘದ ಪ್ರಕಟಣಾ ವಿಭಾಗದ ಹೊಣೆಗಾರಿಕೆಯನ್ನೂ ನಿರ್ವಹಿಸಿದರು. ಆರ್​ಎಸ್​ಎಸ್​ನ ಪ್ರಕಾಶನ ಸಂಸ್ಥೆ ‘ರಾಷ್ಟ್ರೆೊತ್ತಾನ ಪರಿಷತ್ತು’ ಜನ್ಮ ತಳೆದ ನಂತರ 1964ರಿಂದ 1983ರವರೆಗೆ ಪ್ರಕಟಣಗೊಂಡ ಎಲ್ಲ ಪುಸ್ತಕಗಳ ಜವಾಬ್ದಾರಿಯನ್ನು ಅವರೇ ನಿರ್ವಹಿಸಿದರು. ನಂತರ ‘ಉತ್ಥಾನ’ ಮಾಸಪತ್ರಿಕೆಯ ಪ್ರಕಟಣೆ ನೋಡಿಕೊಂಡರು. ಚಂದ್ರಗುಪ್ತ ಮೌರ್ಯ ಕುರಿತು ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಸ್ತಕವನ್ನು 1966ರಲ್ಲಿ ಶಿವರಾಮು ಅವರು ಕನ್ನಡಕ್ಕೆ ‘ಯವನ ವಿಜೇತ ಚಂದ್ರಗುಪ್ತ’ ಎಂಬ ಹೆಸರಿನಲ್ಲಿ ಅನುವಾದಿಸಿದರು. ಕರ್ನಾಟಕದ ಹೋರಾಟಗಾರರ ಕುರಿತ ‘ಕನ್ನಡದ ಗಂಡುಗಲಿಗಳು’, ವಂದೇ ಮಾತರಂ ಕುರಿತ ‘ಒಂದು ಕಥೆ ಒಂದು ವ್ಯಥೆ’, ಸಿಸ್ಟರ್ ನಿವೇದಿತಾ ಕುರಿತ ‘ಅಕ್ಕ ನಿವೇದಿತಾ’ ಕೃತಿಗಳನ್ನು ರಚಿಸಿದರು.

ನಂತರ ಶಿವರಾಮು ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಸ್ಥಾನ ಗಳಿಸಿಕೊಟ್ಟ ಕೃತಿ ಸ್ವಾತಂತ್ರ್ಯವೀರ ಸಾರ್ವಕರ ಅವರ ಕುರಿತ ‘ಆತ್ಮಾಹುತಿ’. ಈ ಕೃತಿಯಲ್ಲಿ ಸಾರ್ವಕರರೇ ತಮ್ಮ ಜೀವನಗಾಥೆಯನ್ನು ಹೇಳುತ್ತಿರುವಂತೆ ನಿರೂಪಣೆ ಇದೆ. ಕ್ರಾಂತಿಕಾರಿ ಭಗತ್ ಸಿಂಗ್ ಅವರ ತಾಯಿ ವಿದ್ಯಾವತಿ ಅವರಿಂದ ಈ ಪುಸ್ತಕ ಲೋಕಾರ್ಪಣೆ ಮಾಡಿಸಿದ್ದು ವಿಶೇಷ.

ವೀರ ಸಾವರ್ಕರ್ ಪ್ರಶಸ್ತಿ ಪ್ರದಾನ ಇಂದು

ವೀರ ಸಾರ್ವಕರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಮಕಾಲೀನ ಹಿಂದು ಸಾಹಿತ್ಯ- ಒಂದು ಅವಲೋಕನ ಸಮಾರಂಭವನ್ನು ಆ. 21ರಂದು ಬೆಂಗಳೂರಿನ ಸುಚಿತ್ರ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿ. ಶಿವರಾಮು ಅವರಿಗೆ ಈ ಪ್ರಶಸ್ತಿ ಸಂದಿದ್ದು, ಅವರ ಪತ್ನಿ ಶಾರದಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಬೆಳಗ್ಗೆ 11.15ಕ್ಕೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ. ಬಾಬು ಕೃಷ್ಣಮೂರ್ತಿ, ಕೆ.ಹರೀಶ್, ಡಾ. ಜಿ.ಬಿ.ಹರೀಶ, ಡಾ. ಎಸ್.ಆರ್.ಲೀಲಾ, ಹರ್ಷ ಸಮೃದ್ಧ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ಆರ್​ಎಸ್​ಎಸ್ ನಿಷೇಧಕ್ಕೆ ಒಳಗಾಯಿತು. ಆಗ ಶಿವರಾಮು ಸೇರಿದಂತೆ ಆರ್​ಎಸ್​ಎಸ್ ನಾಯಕರು ಭೂಗತರಾದರು. ಶಿವರಾಮು ಹಾಗೂ ಸಂಗಡಿಗರು, ರಹಸ್ಯವಾಗಿ ಪತ್ರಿಕೆಗಳನ್ನು ಪ್ರಕಟಿಸುವ ಕಾರ್ಯ ಕೈಗೊಂಡರು. ಮೊದಲಿನಿಂದಲೂ ಕಾಡುತ್ತಿದ್ದ ಅನಾರೋಗ್ಯವು ಈ ದಿನಗಳಲ್ಲಿ ಅವರನ್ನು ಹೆಚ್ಚು ಬಾಧಿಸತೊಡಗಿತು. ನರಗಳ ಸಂಬಂಧಿತ ವ್ಯಾಧಿ ಇರುವುದು ಖಚಿತವಾಯಿತು. ಹೀಗಾಗಿ, ಸಂಘದ ಪೂರ್ಣಾವಧಿ ಪ್ರಚಾರಕ ಕೆಲಸದಿಂದ ನಿವೃತ್ತರಾಗಲು ಆಲೋಚಿಸಿ, ಸಂಘದ ಅನೇಕ ಪ್ರಮುಖರೊಂದಿಗೆ ರ್ಚಚಿಸಿದರು. 1980ರ ಅಕ್ಟೋಬರ್ 10ರಂದು ಹೊಸ ಬದುಕಿಗೆ ಮುಂದಾದರು.

ಕೊಯಮತ್ತೂರಿನ ಆರ್ಯವೈದ್ಯ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು. ವೈದ್ಯರು ಹಾಗೂ ಆಪ್ತೇಷ್ಟರ ಅಭಿಲಾಷೆಯಂತೆ ಗೃಹಸ್ಥ ಜೀವನಕ್ಕೆ ಕಾಲಿಡಲು ಶಿವರಾಮು ಮುಂದಾದರು. 1983ರ ಏಪ್ರಿಲ್ 18ರಂದು ಮಠಂಕುಬೆಟ್ಟು ಮಹಾಬಲ ಐತಾಳರ ಸೋದರಿ ಶಾರದಾ ಅವರೊಂದಿಗೆ ವಿವಾಹ ನೆರವೇರಿತು. ಸಾವರ್ಕರ್ ಜನ್ಮ ಶತಾಬ್ದಿ ಹಾಗೂ ವಂದೇ ಮಾತರಂ ಗೀತೆಯ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಶಿವರಾಮು ಅವರಿಗೆ ನಿಧಿ ಅರ್ಪಿಸಲು ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಿತಿ ರಚಿಸಲಾಯಿತು. 1983ರ ಅಕ್ಟೋಬರ್ 14ರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಿ, 30 ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಯಿತು. ನಂತರ ಶಿವರಾಮು ಅವರು ಬದುಕಿಗೆ ಕಂಡುಕೊಂಡ ದಾರಿ ಎಂದರೆ ಪುಸ್ತಕ ಮಾರಾಟ. ತಾವೇ ಕೆಲ ಪುಸ್ತಕಗಳನ್ನು ಪ್ರಕಟಿಸಿದರು. ಜೋಳಿಗೆಯಲ್ಲಿ ಪುಸ್ತಕ ಹಾಕಿಕೊಂಡು ಮನೆಮನೆಗೆ ತೆರಳಿ ಮಾರಿದರು. ಅವರ ಕೃತಿಗಳಿಂದ ಪ್ರೇರಿತರಾಗಿದ್ದ ಡಾ. ಪಳ್ಳತಡ್ಕ ಕೇಶವ ಭಟ್ಟರು ಪಳ್ಳತಡ್ಕದಲ್ಲಿ ಮನೆಯನ್ನು ನಿರ್ವಿುಸಿ ಶಿವರಾಮು ಅವರಿಗೆ ಕೆಲ ಕಾಲ ವಾಸಿಸಲು ಅನುವು ಮಾಡಿಕೊಟ್ಟರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಇತರರ ನೆರವಿನಿಂದ ಬಂಗಾಡಿಯ ಇಂದಬೆಟ್ಟು ಎಂಬಲ್ಲಿ ಸ್ವಂತ ಮನೆಗೆ ಒಡೆಯರಾದರು. ಶಿವರಾಮು ಅವರಿಗೆ ಇಬ್ಬರು ಮಕ್ಕಳು. ಮಗ ಶ್ರೀಧರ ಮತ್ತು ಮಗಳು ಶ್ರೀಕಲಾ.

ನಂತರದ ದಿನಗಳಲ್ಲಿ ಹಲವು ಸಂಘ-ಸಂಸ್ಥೆಗಳು ಅವರಿಗೆ ಸನ್ಮಾನ ಏರ್ಪಡಿಸಿ ನಿಧಿ ಸಮರ್ಪಣೆ ಮಾಡಿದವು. 1998ರ ಜೂನ್​ನಲ್ಲಿ ಹುಟ್ಟೂರಾದ ಕನಕಪುರದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿ ಅವರನ್ನು ಭವ್ಯವಾಗಿ ಮೆರವಣಿಗೆ ಮಾಡಿದ್ದು ಅವಿಸ್ಮರಣೀಯವಾಯಿತು. ಅನಾರೋಗ್ಯದಿಂದಾಗಿ 1999ರ ನವೆಂಬರ್ 4ರಂದು ಶಿವರಾಮು ಇಹಲೋಕ ತ್ಯಜಿಸಿದರೂ ದೇಶಭಕ್ತಿ ಸಾರುವ ಕೃತಿ, ಗೀತೆಗಳ ಮೂಲಕ ಲಕ್ಷಾಂತರ ಜನರ ಹೃನ್ಮಂದಿರದಲ್ಲಿ ಅಜರಾಮರರಾಗಿದ್ದಾರೆ.

(ಸಾಹಿತಿ ಹಾಗೂ ಶಿವರಾಮು ಅವರ ಒಡನಾಡಿ ಬಾಬು ಕೃಷ್ಣಮೂರ್ತಿ ಅವರ ‘ಸ್ವಾತಂತ್ರ್ಯವೀರ ಸಾಹಿತಿ ಶಿವರಾಮು’ ಕೃತಿಯಿಂದ ಆಯ್ದ ಭಾಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net