ನಮ್ಮ ಹೆಮ್ಮೆ: ವಿದೇಶಗಳ ರಾಜಕೀಯ-ಆಡಳಿತದ ಉನ್ನತ ಸ್ಥಾನದಲ್ಲಿ ಭಾರತೀಯ ಮೂಲದವರು..

Our pride
Published on

ಸದಭಿಪ್ರಾಯದ ರಾಯಭಾರಿಗಳು

| ಗುರುರಾಜ ದೇಶಪಾಂಡೆ ಖ್ಯಾತ ಐಟಿ ಉದ್ಯಮಿ
  • ಈಗ ಭಾರತದ ಹೊರಗೆ 2 ಕೋಟಿಗೂ ಅಧಿಕ ಭಾರತೀಯರಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣತಿಯನ್ನು ಪ್ರದರ್ಶಿಸಿದ್ದಾರೆ. ಇಂಜಿನಿಯರಿಂಗ್, ಔಷದ, ವ್ಯಾಪಾರ, ರಾಜಕೀಯ, ವಿಶ್ವವಿದ್ಯಾನಿಲಯ- ಈ ಕ್ಷೇತ್ರಗಳಲ್ಲಿ ಅವರೀಗ ಪ್ರಾಮುಖ್ಯ ಪಡೆದುಕೊಂಡಿದ್ದಾರೆ. ಜತೆಗೆ, ಚಲನಚಿತ್ರ, ಸಮಾಜಕಾರ್ಯ, ಸಾಹಿತ್ಯ, ಪತ್ರಿಕೋದ್ಯಮ, ಟಿವಿ ಮತ್ತು ಇತರ ಕ್ಷೇತ್ರಗಳಲ್ಲಿಯೂ ಕ್ರಮೇಣ ಛಾಪು ಮೂಡಿಸುತ್ತಿದ್ದಾರೆ. ಕಠಿಣ ಸಂದರ್ಭಗಳನ್ನು ಗ್ರಹಿಸಿ ಕಾರ್ಯನಿರ್ವಹಿಸುವ ಕ್ಷಮತೆಯುಳ್ಳ ಮೌಲ್ಯಗಳ ಬಲವಾದ ಅಡಿಪಾಯವನ್ನು ಭಾರತೀಯರು ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅವಕಾಶ ಸಿಕ್ಕರೆ ಅವರು ಖಂಡಿತವಾಗಿಯೂ ಮಿಂಚುತ್ತಾರೆ. ನಾನು 1973ರಲ್ಲಿ ಭಾರತವನ್ನು ತೊರೆದೆ. 70 ಮತ್ತು 80 ರ ದಶಕದಲ್ಲಿ ಅಲ್ಲಿ ಯಾವುದೇ ಪ್ರಮುಖ ಭಾರತೀಯರು ಇರಲಿಲ್ಲ. 1990ರ ದಶಕದಲ್ಲಿ ನಾವು ಯಶಸ್ವಿ ಟೆಕ್ ಉದ್ಯಮಿಗಳು, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ವೈದ್ಯರನ್ನು ನೋಡಲಾರಂಭಿಸಿದೆವು. ಕಳೆದ 20 ವರ್ಷಗಳಲ್ಲಿ ಭಾರತೀಯರು ದೊಡ್ಡ ಕಂಪನಿಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯದಲ್ಲಿ ಯಶಸ್ವಿಯಾದ ಮೊದಲ ತಲೆಮಾರಿನ ಭಾರತೀಯರು ಹೆಚ್ಚು ಇಲ್ಲ. ಅವರು ಭಾರತದಲ್ಲಿ ಬೆಳೆದ ಕಾರಣ ಹೊಸ ದೇಶದಲ್ಲಿ ಅವರ ಸಾಮರ್ಥ್ಯ ಒರೆಗೆ ಹಚ್ಚಲಾಗಲಿಲ್ಲ. ಆದರೂ ಈಗ ಎರಡನೇ ತಲೆಮಾರಿನ ಭಾರತೀಯರು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ; ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್​ನಲ್ಲಿ. ಏಕೆಂದರೆ ಅವರು ಅತ್ಯುತ್ತಮ ಮೌಲ್ಯಗಳನ್ನು ಮತ್ತು ಕೆಲಸದ ನೀತಿಗಳನ್ನು ನೀಡಿದ ಭಾರತೀಯ ಪಾಲಕರಿಂದ ಬೆಳೆಸಲ್ಪಟ್ಟಿದ್ದಾರೆ. ಎರಡನೇ ತಲೆಮಾರಿನವರು ಬೌದ್ಧಿಕವಾಗಿ ಬಲಶಾಲಿಗಳು ಮಾತ್ರವಲ್ಲದೆ, ಉತ್ತಮ ಸಂವಹನಕಾರರು ಸಹ ಆಗಿದ್ದಾರೆ.
  • ಹೊರ ದೇಶಗಳಲ್ಲಿರುವ ಭಾರತೀಯರಿಂದಾದ ಮುಖ್ಯ ಪ್ರಯೋಜನವೆಂದರೆ ಅವರು ಭಾರತದಲ್ಲಿರುವ ಭಾರತೀಯರಲ್ಲಿ ಸೃಷ್ಟಿಸಿರುವ ವಿಶ್ವಾಸ. ಭಾರತೀಯ ಟೆಕ್ ಉದ್ಯಮಿಗಳು ಅಮೆರಿಕದಲ್ಲಿ ಮೊದಲು ಯಶಸ್ವಿಯಾದರು. ಭಾರತದಲ್ಲಿರುವವರಿಗೆ ತಾವೂ ಸಹ ಮಾಡಬಹುದು ಎಂಬ ನಂಬಿಕೆ ಇದರಿಂದಾಗಿ ಮೂಡಿತು. ಈಗ ಭಾರತೀಯ ಟೆಕ್ ವಾಣಿಜ್ಯೋದ್ಯಮಿಗಳು ಜಗತ್ತಿನ ಇತರೆಲ್ಲ ಉದ್ಯಮಿಗಳಿಗಿಂತ ಹೆಚ್ಚು ಯಶಸ್ವಿಯಾಗುತ್ತಿದ್ದಾರೆ. ಅಲ್ಲದೆ, ಭಾರತದ ಹೊರಗಿನ ಪ್ರಮುಖ ಭಾರತೀಯರು ಭಾರತದ ಬಗೆಗೆ ಸದಭಿಪ್ರಾಯವನ್ನು ಹರಡುವ ರಾಯಭಾರಿಗಳ ದೊಡ್ಡ ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ದೇಶಗಳಲ್ಲಿ ಭಾರತೀಯರು ಯಶಸ್ವಿಯಾಗುತ್ತಿರುವುದು ಹೊಸ ವಿದ್ಯಮಾನವಾಗಿದೆ. ಇದು ಜಾಗತಿಕವಾಗಿ ಭಾರತಕ್ಕೆ ಹೆಚ್ಚಿನ ಮಹತ್ವವನ್ನು ತರುತ್ತದೆ. ಅಲ್ಲದೆ, ಬಲವಾದ ಸಂಬಂಧಗಳನ್ನು ನಿರ್ವಿುಸಲು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ.

ಪ್ರತಿಭೆ, ಸಾಮರ್ಥ್ಯಕ್ಕೆ ಮಣೆ-ಹೊಣೆ

| ಎನ್. ಪಾರ್ಥಸಾರಥಿ ಮಾಜಿ ರಾಯಭಾರಿ
  • ಭಾರತೀಯರ ವಿದೇಶ ವಲಸೆಯನ್ನು ಎರಡುಮೂರು ಬಗೆಯಲ್ಲಿ ವ್ಯಾಖ್ಯಾನಿಸಬಹುದು. ಆರಂಭದಲ್ಲಿ ಬದುಕಿನ ಅವಕಾಶಗಳನ್ನು ಹುಡುಕಿಕೊಂಡು ಲಂಡನ್​ಗೆ ತೆರಳಿದರು. ಇದಕ್ಕೆ ಮುಖ್ಯ ಕಾರಣ ಭಾಷೆ. ಬ್ರಿಟಿಷರು ದೀರ್ಘಕಾಲ ಇಲ್ಲಿ ಆಡಳಿತ ನಡೆಸಿದ್ದರಿಂದ ಅವರ ಜತೆ ಸಂವಹನ ಸುಲಭವಾಗಿತ್ತು. ಉದ್ಯೋಗ, ವ್ಯಾಪಾರದ ಸಲುವಾಗಿ ಮತ್ತು ವೈದ್ಯರು ಹೆಚ್ಚಾಗಿ ಹೋಗುತ್ತಿದ್ದರು. 1990ರ ದಶಕದಲ್ಲಿ ಭಾರತದ ಕಂಪನಿಗಳು ವಿದೇಶಗಳಲ್ಲಿ ಹೂಡಿಕೆ ಮಾಡತೊಡಗಿದವು. ದೊಡ್ಡ ಉದ್ಯಮಿಗಳು ಅಲ್ಲಿಗೆ ಹೋದರು. ಜತೆಗೆ, ಇಂಜಿನಿಯರ್​ಗಳು ಅಮೆರಿಕಕ್ಕೆ ಉದ್ಯೋಗ ಅರಸಿ ಹೋಗತೊಡಗಿದರು. ಇದಲ್ಲದೆ, ಅಮೆರಿಕದಲ್ಲಿ ಪ್ಲಾಂಟೇಶನ್ ಕೆಲಸಗಾರರ ಅಗತ್ಯ ಬಹುವಾಗಿ ಇದ್ದುದರಿಂದ ಇಂಥವರು ಕೆನಡಾ ಮೂಲಕ ಅಮೆರಿಕಕ್ಕೆ ತೆರಳುತ್ತಿದ್ದರು. 2000ನೇ ಇಸ್ವಿ ನಂತರದಲ್ಲಿ ಐಟಿ ಕ್ರಾಂತಿಯ ತರುವಾಯ ಎಲ್ಲ ಬಗೆಯ ಜನರೂ ವಿದೇಶಗಳತ್ತ ಹೆಜ್ಜೆಹಾಕಿದರು. ಇದರಿಂದ ಕ್ರಮೇಣ ಭಾರತೀಯರ ಪ್ರಭಾವ ಹಾಗೂ ಜಾಗತಿಕವಾಗಿ ಮೌಲ್ಯ ಹೆಚ್ಚತೊಡಗಿತು. ಇಲ್ಲಿಂದ ತೆರಳಿದವರಲ್ಲಿ ಆರಂಭದಲ್ಲಿ ಇದ್ದ ಒಂದು ಬಗೆಯ ಕೀಳರಿಮೆ ಈಗ ಇಲ್ಲ. ಇವರು ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದರು. ಅದರಲ್ಲೂ ವಿಶೇಷವಾಗಿ 2006ರ ಸುಮಾರಿನಿಂದ ವಿದೇಶಗಳ ಆಡಳಿತ ವ್ಯವಸ್ಥೆಯಲ್ಲೂ ನಮ್ಮವರ ಸಕ್ರಿಯತೆ ಹೆಚ್ಚತೊಡಗಿತು. ಈಗ ಇವರು ಒಂದು ರೀತಿಯಲ್ಲಿ ಬ್ರಿಜ್ ತರಹ ಆಗಿದ್ದಾರೆ. ಮೋದಿ ಸರ್ಕಾರ ಬಂದ ಮೇಲೆ ಎನ್​ಆರ್​ಐಗಳ ವಿಷಯದಲ್ಲಿ ಇನ್ನಷ್ಟು ಒತ್ತುನೀಡಿ, ವೀಸಾ ಇತ್ಯಾದಿ ಸಮಸ್ಯೆಗಳಾದಾಗ ಮಧ್ಯಸ್ಥಿಕೆ ವಹಿಸಿ ತ್ವರಿತವಾಗಿ ಬಗೆಹರಿಸಲು ಕ್ರಮ ತೆಗೆದುಕೊಳ್ಳತೊಡಗಿತು. ?\
  • ಭಾರತ ಮೂಲದವರು ವಿದೇಶಗಳಲ್ಲಿ ಆಡಳಿತದ ಉನ್ನತ ಹಂತದಲ್ಲಿದ್ದರೆ ಭಾರತಕ್ಕೆ ವಿಶೇಷ ಲಾಭವೇನಾದರೂ ಇದೆಯೇ ಎಂದು ಕೇಳಿದರೆ ‘ಹೌದು’ಎಂದು ಉತ್ತರಿಸಲಾಗದು. ಇದಕ್ಕೆ ಕಾರಣಗಳಿವೆ. ಮೊದಲನೆಯದಾಗಿ, ಜನ್ಮಭೂಮಿ ಮತ್ತು ಕರ್ಮಭೂಮಿ ಎರಡೂ ಬೇರೆ ಬೇರೆ ಎಂಬ ಸ್ಪಷ್ಟತೆ. ಅಲ್ಲದೆ, ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂದಾಕ್ಷಣ ತಮಗೆ ಬೇಕಾದ ಹಾಗೆ ಮಾಡಲು ಬರುವುದಿಲ್ಲ. ಆಯಾ ದೇಶದ ವ್ಯವಸ್ಥೆ, ರೀತಿರಿವಾಜು, ವಿದೇಶಾಂಗ ನೀತಿಗಳಿಗೆ ಅನುಗುಣವಾಗಿಯೇ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಭಾರತಕ್ಕೆ ಫೇವರ್ ಆಗಿ ಅವರು ಕೆಲಸ ಮಾಡಲಿ ಎಂದು ನಿರೀಕ್ಷಿಸುವುದು ಸಹ ಒಂದು ತರಹದಲ್ಲಿ ತಪ್ಪೇ ಆಗುತ್ತದೆ. ಅಷ್ಟೇಕೆ, ತಾವು ಪಕ್ಷಪಾತಿ ಅಲ್ಲ ಎಂದು ಬಿಂಬಿಸಲು ಇವರು ಪ್ರಜ್ಞಾಪೂರ್ವಕವಾಗಿ ಯತ್ನಿಸಬಹುದು. ಹಾಗಂತ ಆ ದೇಶಕ್ಕೂ ಭಾರತದ ಜತೆಗಿನ ಸಂಬಂಧ ಅಥವಾ ವ್ಯವಹಾರದಿಂದ ಪ್ರಯೋಜನವಾಗುತ್ತದೆ ಎಂದಾದಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಇದೇನೇ ಇದ್ದರೂ, ಪ್ರತಿಭೆ, ಸಾಮರ್ಥ್ಯದಿಂದಾಗಿ ಇವರು ಉನ್ನತ ಹಂತಕ್ಕೇರಿರುವುದು ಹೆಮ್ಮೆಯ ಸಂಗತಿಯೇ ಸರಿ.

ಸವಾಲು ಎದುರಿಸಿ ಸಾಧನೆ...

| ಡಾ. ಆರತಿ ಕೃಷ್ಣ ಮಾಜಿ ಉಪಾಧ್ಯಕ್ಷರು, ಅನಿವಾಸಿ ಭಾರತೀಯರ ಕೋಶ, ಕರ್ನಾಟಕ ಸರ್ಕಾರ
  • ಮೊದಲನೆಯ ಪೀಳಿಗೆಯವರು ವಿದೇಶಗಳಿಗೆ ಹೋದಾಗ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗೆ ಆದ್ಯತೆ ನೀಡುತ್ತಾರೆ. ಎರಡನೇ ಪೀಳಿಗೆಯವರು ಅಲ್ಲಿನ ಸ್ಥಿತಿಗತಿ, ದೇಶದ ಬೆಳವಣಿಗೆಗಳಿಗೆ ಹೊಂದಿಕೊಂಡಿರುತ್ತಾರೆ. ಮೂರನೇ ಪೀಳಿಗೆಯವರು ಅಲ್ಲಿಯೇ ಹುಟ್ಟಿ ಅದೇ ದೇಶದ ಪ್ರಜೆಗಳೂ ಆಗಿರುವುದರಿಂದ ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಬೆಳವಣಿಗೆ ದಾಖಲಿಸುತ್ತಾರೆ. ಇಲ್ಲಿನ ರಾಜಕಾರಣಿಗಳಂತೆಯೇ ಅವರು ಸಹ ಎಲ್ಲ ಸವಾಲುಗಳನ್ನು ಎದುರಿಸಿಕೊಂಡೇ ಬೆಳೆದಿರುತ್ತಾರೆ. ಬೇರೆ ಬೇರೆ ದೇಶದಲ್ಲಿ ರಾಜಕೀಯ ಅಧಿಕಾರ ಪಡೆದಿರುವ ಭಾರತೀಯ ಮೂಲದ ಎಷ್ಟೋ ಜನರು ಅಲ್ಲೇ ಜನಿಸಿದವರಾದ್ದರಿಂದ ಸಹಜವಾಗಿ ಭಾರತವನ್ನು ನೋಡಿರುವುದಿಲ್ಲ. ಅಭಿವೃದ್ಧಿ ಹೊಂದುತ್ತಿರುವ ದೇಶದಿಂದ ಬೇರೆ ದೇಶಕ್ಕೆ ಹೋದವರಿಗೆ ಹೆಚ್ಚು ಸವಾಲು ಇರುತ್ತದೆ, ಅಭಿವೃದ್ಧಿ ಹೊಂದಿದ ದೇಶದಿಂದ ಹೋದವರಿಗೆ ಹೆಚ್ಚಿನ ಸವಾಲುಗಳು ಇರುವುದಿಲ್ಲ.
  • ಅನೇಕ ದೇಶಗಳಲ್ಲಿ ಭಾರತೀಯ ಮೂಲದವರು ಅಧ್ಯಕ್ಷ, ಪ್ರಧಾನಿ, ಮಂತ್ರಿಗಳಾಗಿದ್ದಾರೆ. ಬೇರೆ ದೇಶಗಳಲ್ಲಿ ಉನ್ನತ ಹುದ್ದೆ ಗಳಿಸಿದವರು ಆ ದೇಶದ ಹಿತವನ್ನು ಆದ್ಯತೆಯ ಮೇಲೆ ಗಮನಿಸಬೇಕಾಗುತ್ತದೆ. ಭಾರತದೊಂದಿಗಿನ ಸಂಬಂಧ ಅವರ ದೇಶದ ಹಿತಕ್ಕೆ ಪೂರಕವಾಗಿದ್ದರೆ ಮಾತ್ರ ಮುಂದುವರಿಯುತ್ತಾರೆ. ಹೀಗಾಗಿ ಭಾರತದ ಬಗ್ಗೆ ಅವರಿಂದ ಹೆಚ್ಚಿನ ನಿರೀಕ್ಷೆಯನ್ನೇನು ಇಟ್ಟುಕೊಳ್ಳಲಾಗದು. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಐರಿಷ್ ಮೂಲದವರು ಎಂಬುದು ವಿಶೇಷ. ಭಾರತದ ಮೂಲದ ದಿಲೀಪ್​ಸಿಂಗ್ ಸೌಂದ್ 1952ರಲ್ಲಿಯೇ ಅಮೆರಿಕದ ಪ್ರಜಾಪ್ರತಿನಿಧಿ ಪರಿಷತ್​ಗೆ ಸದಸ್ಯರಾಗಿದ್ದರು. ಆ ನಂತರ ಅವಕಾಶ ಸಿಕ್ಕಿದ್ದು ಬಾಬಿ ಜಿಂದಾಲ್ ಅವರಿಗೆ.

ವಿದೇಶದಲ್ಲಿ ವಿವಿಧ ಹುದ್ದೆ

ವಿವಿಧ ದೇಶದಲ್ಲಿ ಅಧಿಕಾರಸ್ಥಾನ ಪಡೆದ, ಉನ್ನತ ಹುದ್ದೆಗೇರಿದ ಭಾರತೀಯ ಮೂಲದ ಕೆಲವರ ಮಾಹಿತಿ ಇಲ್ಲಿದೆ. ಉಳಿದಂತೆ, ಮೇಯರ್, ಸಂಸದ ಇತ್ಯಾದಿ ಸ್ಥಾನಕ್ಕೇರಿದವರ ಯಾದಿ ದೀರ್ಘವಿದೆ.

  • ಐರ್ಲೆಂಡ್: ಲಿಯೋ ವರದ್​ಕರ್ (ಮಾಜಿ ಪ್ರಧಾನಿ)
  • ಫಿಜಿ: ಮಹೇಂದ್ರ ಪಾಲ್ ಚೌಧರಿ (ಮಾಜಿ ಪ್ರಧಾನಿ)
  • ತ್ರಿನಿದಾದ್: ಕಮಲಾ ಪ್ರಸಾದ ಬಿಸೆಸರ್ (ಮಾಜಿ ಪ್ರಧಾನಿ) / ಬಸದೇವ್ ಪಾಂಡೆ (ಮಾಜಿ ಪ್ರಧಾನಿ)
  • ಸಿಂಗಾಪುರ: ದೇವನ್​ನಾಯರ್ (ಮಾಜಿ ಅಧ್ಯಕ್ಷ) / ಎಸ್.ಆರ್. ನಾಧನ್ (ಮಾಜಿ ಅಧ್ಯಕ್ಷ)
  • ಮಾರಿಷಸ್: ಅನಿರುದ್ಧ ಜಗನ್ನಾಥ (ಮಾಜಿ ಅಧ್ಯಕ್ಷ)/ ನವೀನ್ ರಾಮ್ುಲಾಮ್ (ಮಾಜಿ ಪ್ರಧಾನಿ)/ಪ್ರವೀಣ್ ಜಗನ್ನಾಥ (ಮಾಜಿ ಪ್ರಧಾನಿ)/ಅಮಿನಾ ಗರೀಬ್ ಫಕಿಮ್ (ಮಾಜಿ ಅಧ್ಯಕ್ಷೆ)
  • ಮಲೇಷಿಯಾ: ಮಹಾಥಿರ್ ಮೊಹಮ್ಮದ್ (ಮಾಜಿ ಪ್ರಧಾನಿ)
  • ಪೋರ್ಚುಗಲ್: ಅಲ್​ಫ್ರೆಡೋ ನೊಬರ್ ಡಿಕೋಸ್ಟಾ (ಮಾಜಿ ಪ್ರಧಾನಿ) / ಅಂತೊನಿಯೊ ಕೊಸ್ಟಾ (ಪ್ರಧಾನಿ) ಸುರಿನಾಮ್ ರಾಮದತ್ ಮಿಸಿರ್ (ಮಾಜಿ ಅಧ್ಯಕ್ಷ) / ಹೆರಾಲ್ಡ್ ಅನಿಕಲ್ (ಅಧ್ಯಕ್ಷ)/ ಪ್ರತಾಪ್ ರಾಧಾಕೃಷ್ಣನ್/ ಮಾಡು ಹಸನ್​ಅಲಿ/ರಾಮಸೇವಕ್ ಶಂಕರ್ (ಮಾಜಿ ಅಧ್ಯಕ್ಷ)
  • ಗಯಾನ: ಚಡ್ಡಿ ಭರತ್ ಜಗನ್ (ಪ್ರಥಮ ಪ್ರಧಾನಿ) /ಭರತ್ ಜಗದೇವ (ಮಾಜಿ ಉಪಾಧ್ಯಕ್ಷ)
  • ಸಿಷೆಲ್ಸ್: ವಾವೆಲ್ ರಾಮಕಲಾವನ್ (ಅಧ್ಯಕ್ಷ)
  • ಅಮೆರಿಕ: ಕಮಲಾ ಹ್ಯಾರಿಸ್ (ಉಪಾಧ್ಯಕ್ಷೆ)
  • ಬ್ರಿಟನ್: ರಿಷಿ ಸುನಕ್ (ಕನ್ಸರ್ವೆಟಿವ್ ಸಂಸದ, ಹಾಲಿ ಪ್ರಧಾನಿ ರೇಸ್​ನಲ್ಲಿ ಮುಂದಿದ್ದಾರೆ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net