

ಬ್ರಿಟಿಷರಿಂದ ಭಾರತ ಸ್ವತಂತ್ರವಾಗಿದ್ದು 1947ರಲ್ಲಿ. ಆದರೆ, ಶಿಕಾರಿಪುರ ತಾಲೂಕಿನ ಈಸೂರು ಗ್ರಾಮ 1942ರಲ್ಲೇ ಸ್ವಾತಂತ್ರ್ಯ ಘೊಷಿಸಿಕೊಂಡಿತ್ತು. 1942ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಕೂಗೆದ್ದಾಗ ಅದಕ್ಕೆ ಮೊದಲು ಸ್ಪಂದಿಸಿದ್ದು ಈಸೂರು ಗ್ರಾಮಸ್ಥರು. ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಘೊಷಣೆಯೊಂದಿಗೆ ಆ ಪುಟ್ಟ ಗ್ರಾಮದ ಜನರು ಬ್ರಿಟಿಷ್ ಸಾಮ್ರಾಜ್ಯಶಾಹಿಗೇ ಸೆಡ್ಡು ಹೊಡೆದರು. 1942ರವರೆಗೂ ಶಿವಶರಣರ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಶಿಕಾರಿಪುರ ತಾಲೂಕು ಈಸೂರು ದಂಗೆ ಬಳಿಕ ಸ್ವಾತಂತ್ರ್ಯ ಹೋರಾಟಗಾರರ ನಾಡಾಗಿಯೂ ಗುರುತಿಸಿಕೊಂಡಿತು. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಶಾನುಭೋಗರು, ಪಟೇಲರನ್ನು ಇಲ್ಲಿನ ಜನರು ಬಹಿಷ್ಕರಿಸಿದರು. ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಕಡತಗಳನ್ನು ಸುಟ್ಟು ಹಾಕಿದರು. ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದ ಎದುರು ರಾಷ್ಟ್ರಧ್ವಜ ಹಾರಿಸಿದರು. ಕೆಂಪು ಕೋಟೆಗೂ ಮೊದಲು ಈಸೂರಿನಲ್ಲಿ ರಾಷ್ಟ್ರಧ್ವಜ ಹಾರಿತ್ತು. ಕಂದಾಯ ಪಾವತಿಗೆ ಗ್ರಾಮಸ್ಥರು ನಿರಾಕರಿಸಿದ ಪರಿಣಾಮ ಅಮಲ್ದಾರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈಸೂರಿಗೆ ಬಂದು ರಾಷ್ಟ್ರಧ್ವಜವನ್ನು ಕಾಲಿನಿಂದ ಒದ್ದು ಅಪಮಾನ ಮಾಡಿದರು. ಇದರಿಂದ ರೊಚ್ಚಿಗೆದ್ದ ಮಂದಿ ಅಧಿಕಾರಿಗಳನ್ನು ಥಳಿಸಿದರು. ಗೋಲಿಬಾರ್ ನಡೆಸಿದರೂ ಅಂಜಲಿಲ್ಲ. ಗ್ರಾಮಸ್ಥರು ಹಲ್ಲೆ ನಡೆಸಿದ ಪರಿಣಾಮ ಅಧಿಕಾರಿಗಳಿಬ್ಬರೂ ಸಾವನ್ನಪ್ಪಿದರು.
ಸ್ಮಾರಕ ಭವನಕ್ಕೆ ಅನುದಾನ: ಶಿವಪುರ ಮಾದರಿಯಲ್ಲಿ ಇಲ್ಲಿಯೂ ಹುತಾತ್ಮರ ಸ್ಮರಣಾರ್ಥ ವೀರಸೌಧ ಸ್ಮಾರಕ ಭವನ ನಿರ್ವಣವಾಗ ಬೇಕೆಂಬ ಬಯಕೆ ಹಲವು ವರ್ಷಗಳದ್ದು. ಇದು ಕೈಗೂಡುವ ಸಮಯ ಸನ್ನಿಹಿತವಾಗಿದೆ. ಈಸೂರಿನ ಸ್ಮಾರಕ ಅಭಿವೃದ್ಧಿಗೆ ಐದು ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ.
ಪೊಲೀಸರಿಂದ ಕಿರುಕುಳ: ಗ್ರಾಮಸ್ಥರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ಬ್ರಿಟಿಷ್ ಆಡಳಿತ ಮುಂದಾಯಿತು. ಪೊಲೀಸರು ಊರಿಗೆ ನುಗ್ಗಿದರು. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದರು. ಪತ್ನಿ, ತಂದೆ, ತಾಯಿಯ ಒತ್ತಡಕ್ಕೆ ಮಣಿದು ಹಲವರು ಅರಣ್ಯ ಸೇರಿಕೊಂಡರು. ಪುರುಷರು ಕೆಲ ಕಾಲ ತಲೆಮರೆಸಿಕೊಂಡರೆ, ಹೆಂಗಸರು-ಮಕ್ಕಳು ಸಮೀಪದ ಗ್ರಾಮದಲ್ಲಿನ ಬಂಧುಗಳ ಮನೆಗೆ ತೆರಳಿದರು.
ಬಲಿದಾನ: ದಂಗೆ ನಡೆಸಿ ಇಬ್ಬರು ಅಧಿಕಾರಿಗಳ ಸಾವಿಗೆ ಕಾರಣವಾಗಿದ್ದಾರೆ ಎಂದು 24 ಜನರನ್ನು ಬಂಧಿಸಲಾಯಿತು. ಐವರಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ 19 ಮಂದಿಗೆ ಜೀವಾವಧಿ ಶಿಕ್ಷೆ ನೀಡಿತು. ಕೆ.ಗುರಪ್ಪ, ಮಲ್ಲಪ್ಪ, ಸೂರ್ಯ ನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ, ಶಂಕರಪ್ಪ ಸ್ವಾತಂತ್ರ್ಯ್ಕಾಗಿ ಬಲಿದಾನಗೈದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಟ್ನಾಳ ಎಂಬ ಪುಟ್ಟ ಗ್ರಾಮವು ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಂತ ಗಂಡುಮೆಟ್ಟಿದ ನೆಲ. ದೇಸಗತಿ ಮನೆತನದ ಬಸಲಿಂಗಪ್ಪ ದೇಶಮುಖ ಅವರು ಜೋಡುಗತ್ತಿಯ (ಎರಡು ಖಡ್ಗ) ಬಹಾದ್ದೂರ್ ಎಂದೇ ಖ್ಯಾತಿ ಪಡೆದಿದ್ದರು. ಯುದ್ಧಕ್ಕೆ ಹೊರಟರೆ ಜೋಡುಗತ್ತಿಯೇ ಬೇಕು. 40 ಹಳ್ಳಿಗಳ ಒಡೆತನವಿದ್ದರೂ ಬ್ರಿಟಿಷರ ವಿರುದ್ಧ ಹೋರಾಡಬೇಕೆಂಬ ಛಲದಿಂದ ಕೊಟ್ನಾಳ ಗ್ರಾಮದಲ್ಲಿ 5 ಸಾವಿರ ಮಂದಿಯ ಬೃಹತ್ ಸೈನ್ಯ ಕಟ್ಟಿ ಅವರಿಗೆ ಯುದ್ಧ ತರಬೇತಿ ನೀಡುತ್ತಿದ್ದರು. ರಹಸ್ಯವಾಗಿ ಮದ್ದುಗುಂಡುಗಳನ್ನು ತಯಾರಿಸುತ್ತಿದ್ದರು. ವೀರರಾಣಿ ಕಿತ್ತೂರು ಚನ್ನಮ ಅವರ ತಾಯಿ ಇದೇ ದೇಶಮುಖ ಮನೆತನದವರು ಎನ್ನುವುದು ವಿಶೇಷ.
ಗಂಡುಗಲಿ: ಬಸಲಿಂಗಪ್ಪ ದೇಶಮುಖ ಅವರು ಸುರಪುರದ ವೆಂಕಟಪ್ಪ ನಾಯಕ ಹಾಗೂ ನರಗುಂದದ ಬಾಬಾಸಾಹೇಬ ರಾಯಣ್ಣ ಜೊತೆಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಗುಪ್ತವಾಗಿ ಅಣಿಯಾಗಿದ್ದರು. ಇದಕ್ಕಾಗಿ ಕೊಟ್ನಾಳ, ಜಂಬಗಿ ಗ್ರಾಮಗಳಲ್ಲಿ ದೊಡ್ಡ ಸೈನ್ಯ ತಯಾರು ಮಾಡಿದ್ದರು. ಕೊಟ್ನಾಳ ಕೋಟೆಯಲ್ಲಿ ರಣತಂತ್ರಗಳನ್ನು ಕಲಿಸಲಾಗುತ್ತಿತ್ತು. ಇದರ ಜೊತೆಗೆ ಮದ್ದುಗುಂಡು, ತುಪಾಕಿಗಳು, ಶಶ್ತ್ರಾಸ್ತ್ರಗಳನ್ನು ತಯಾರಿಸಿ ಸಂಗ್ರಹಿಸಿಟ್ಟಿದ್ದರು. ಈ ಕುರಿತು ಗುಪ್ತಚರರಿಂದ ಮಾಹಿತಿ ಪಡೆದ ಬ್ರಿಟಿಷರು ಕೊಟ್ನಾಳದ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು, ಕೋಟೆಯನ್ನು ಭಗ್ನಗೊಳಿಸಿದರು.
ಗಲ್ಲಿಗೇರುವವರೆಗೂ ಹೋರಾಟ: ಆದರೂ ಹಿಮ್ಮೆಟ್ಟದ ಬಸಲಿಂಗಪ್ಪ ದೇಶಮುಖ ನಿರಂತರ ಹೋರಾಟ ಮುಂದುವರಿಸಿದ್ದರು. ಜನರಲ್ಲಿ ಸ್ವಾತಂತ್ರ್ಯ ಕಿಚ್ಚು ಹೊತ್ತಿಸುತ್ತಿದ್ದರು. 1857ರ ಮೊದಲ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಬಸಲಿಂಗಪ್ಪ ಹಾಗೂ ಅವರ ಮಗ ವೀರಸಂಗಪ್ಪ ಅವರನ್ನು ಬಂಧಿಸಿ ಸೊಲ್ಲಾಪುರದ ಕಾರಾಗೃಹದಲ್ಲಿ ಎರಡು ವರ್ಷ ಚಿತ್ರಹಿಂಸೆ ನೀಡಿದರು. ನಂತರ ಸೊಲ್ಲಾಪುರದ ಕಲೆಕ್ಟರ್ ಕಚೇರಿ ಎದುರು 1862ರಲ್ಲಿ ಬ್ರಿಟಿಷ್ ಸರ್ಕಾರ ವಿರೋಧಿ ಚಟುವಟಿಕೆ ಕಾರಣ ನೀಡಿ ತಂದೆ-ಮಗನನ್ನು ಗಲ್ಲಿಗೇರಿಸಿದರು.
ಬಸಲಿಂಗಪ್ಪ ದೇಶಮುಖ ಮತ್ತು ಅವರ ಮಗ ವೀರಸಂಗಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅಲ್ಲದೆ, ಇಂಚಗೇರಿ ಮಠ, ಕನ್ನೂರು ಮಠದ ಶ್ರೀಗಳು, ಮಸಿಬಿನಾಳದ ಶ್ರೀಗಳು ಹೀಗೆ ಅನೇಕರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. | ಡಾ. ಎ.ಎಲ್. ನಾಗೂರ ಇತಿಹಾಸ ತಜ್ಞ
ಮೀನಾಕ್ಷಿ ಚೌಕ್ನಲ್ಲಿ ಸ್ಮಾರಕ: ಬಸಲಿಂಗಪ್ಪ ಹಾಗೂ ವೀರಸಂಗಪ್ಪ ಅವರ ಸ್ಮರಣಾರ್ಥವಾಗಿ ವಿಜಯಪುರ ನಗರದ ಮಧ್ಯಭಾಗದಲ್ಲಿರುವ ಮೀನಾಕ್ಷಿ ಚೌಕ್ನಲ್ಲಿ ಹುತಾತ್ಮ ಸ್ತಂಭವನ್ನು ನಿರ್ವಿುಸಿದೆಯಾದರೂ ಅದರ ಸಮರ್ಪಕ ಸಂರಕ್ಷಣೆ ಆಗುತ್ತಿಲ್ಲ.
ಬ್ರಿಟಿಷರ ಆಡಳಿತ ವಿರೋಧಿಸಿ ಸ್ವಾತಂತ್ರ್ಯ ಚಳವಳಿಯ ಬೀಜ ಮೊಳಕೆಯೊಡೆದ ನೆಲ ಧಾರವಾಡ. 1920ರ ನಂತರ ಭಾರತೀಯರ ಸ್ವಾತಂತ್ರ್ಯ ಕೂಗು ಬ್ರಿಟಿಷರ ಮೈಮನ ನಡುಗಿಸುವಂತೆ ಆವರಿಸಿತ್ತು. 1921ರ ಜು. 1ರಂದು ಧಾರವಾಡದಲ್ಲಿ ಜಕಣಿ ಬಾವಿ ಹತ್ತಿರವಿದ್ದ ಸಾರಾಯಿ ಅಂಗಡಿಗಳ ಎದುರು ಪ್ರತಿಭಟನೆ ನಡೆಯುತ್ತಿತ್ತು. ಬ್ರಿಟಿಷರ ಗೋಲಿಬಾರಿಗೆ ಮಲ್ಲಿಕಸಾಬ ಬಿನ್ ಮರ್ದಾನಸಾಬ, ಗೌಸುಸಾಬ ಬಿನ್ ಖಾದರಸಾಬ, ಅಬ್ದುಲ ಗಫಾರ ಚೌಕಥಾಯಿ ಎಂಬುವರು ಹುತಾತ್ಮರಾದರು. ಖಿಲಾಫತ್ ಕಾರ್ಯಕರ್ತರು ವೀರ ಮರಣವನ್ನಪ್ಪಿ 101 ವರ್ಷಗಳಾದವು.
ಜಿಲ್ಲಾಧಿಕಾರಿಯಾಗಿದ್ದ ಪೇಂಟರ್ ಅವರ ದಬ್ಬಾಳಿಕೆ ಮುಂದುವರಿದಿತ್ತು. ಸಾರಾಯಿ ಪಿಕೆಟಿಂಗ್ಗೆ ಸಂಬಂಧಿಸಿ ಇಬ್ಬರು ಖಿಲಾಫತ್ ಸ್ವಯಂಸೇವಕರಿಗೆ 6 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿತ್ತು. ಅದನ್ನು ಪ್ರತಿಭಟಿಸಿ 1921ರ ಜು. 1ರಂದು ಧಾರವಾಡದಲ್ಲಿ ಹರತಾಳ ಆಚರಿಸಿದರು. ಪ್ರತಿಭಟನಾ ಸಭೆ ನಡೆದು ಸಾರಾಯಿ ಅಂಗಡಿ ಸುಡಲು ಯತ್ನಿಸಿದರು. ದೊಂಬಿ ಮಾಡಿದರು ಎಂಬ ಕಾರಣವೊಡ್ಡಿ ಪೊಲೀಸರು ಗೋಲಿಬಾರ್ ನಡೆಸಿ ಮೂವರು ಖಿಲಾಫತ್ ಕಾರ್ಯಕರ್ತರನ್ನು ಕೊಂದರು. 39 ಜನ ಗಾಯಗೊಂಡರು. ಸರ್ಕಾರ 29 ಜನರನ್ನು ಬಂಧಿಸಿ ದೊಂಬಿಯ ನೆಪ ಹೇಳಿ 27 ಜನರ ಮೇಲೆ ಸುಳ್ಳು ಖಟ್ಲೆ ಹಾಕಿತು. 1921ರ ಜು. 1ರಂದು ನಡೆದ ಧಾರವಾಡದ ಅಸಹಕಾರ ಅಂದೋಲನದಲ್ಲಿ ಮೃತಪಟ್ಟ ಖಿಲಾಫತ್ ಕಾರ್ಯಕರ್ತರ ಸ್ಮರಣಾರ್ಥ ಭಾರತ ಸರ್ಕಾರ 25ನೇ ಸ್ವಾತಂತ್ರ್ಯೊತ್ಸವದ ಸಂದರ್ಭದಲ್ಲಿ ಈ ಹುತಾತ್ಮರ ಸ್ಮಾರಕ ನಿರ್ವಿುಸಲಾಗಿದೆ.
ಶಿವಪುರ ಧ್ವಜ ಸತ್ಯಾಗ್ರಹವು ಭಾರತ ಸ್ವಾತಂತ್ರ್ಯತಿಹಾಸದ ಪುಟಗಳಲ್ಲಿ ಮರೆಯಲಾಗದ ಘಟನೆ. ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 1938ರ ಏಪ್ರಿಲ್ನಲ್ಲಿ ಸಿದ್ದಲಿಂಗಯ್ಯ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಗ್ರಾಮದ ಶಿಂಷಾ ನದಿಯ ದಂಡೆಯ ಮೇಲೆ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಬೇಕೆಂದು ತೀರ್ವನಿಸಲಾಯಿತು. ಆದರೆ, ಕಾಂಗ್ರೆಸ್ ಧ್ವಜ ಹಾರಿಸುವುದರಿಂದ ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಧ್ವಜಾರೋಹಣ ಕಾರ್ಯಕ್ರಮ ನಿಷೇಧಿಸಿದ್ದರು.ಈ ನಡುವೆಯೂ 1938ರ ಏ. 11, 12, 13ರಂದು ತಗಡೂರು ರಾಮಚಂದ್ರರಾಯರ ನೇತೃತ್ವದಲ್ಲಿ ಮೈಸೂರು ಯೂತ್ ಲೀಗ್ ಸಮಾವೇಶ ನಡೆಯಿತು. ಮರುದಿನ ಧ್ವಜಾರೋಹಣ ಕಾರ್ಯಕ್ರಮ ನಿಗದಿಯಾಗಿತ್ತು. ಅಂತೆಯೇ, ಸಿದ್ದಲಿಂಗಯ್ಯ ಧ್ವಜಾರೋಹಣ ಮಾಡಿದಾಗ ತಕ್ಷಣವೇ ಅವರನ್ನು ದಸ್ತಗಿರಿ ಮಾಡಲಾಯಿತು. ಜತೆಗೆ ಆಜ್ಞೆ ಉಲ್ಲಂಘಿಸಿದ ಕಾರಣಕ್ಕೆ ಪುರುಷರನ್ನು ಬಂಧಿಸುವ ವೇಳೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದರಲ್ಲದೆ, ರಾಷ್ಟ್ರಧ್ವಜ ರಕ್ಷಿಸುವಲ್ಲಿ ವೀರಸ್ವರ್ಗ ಸೇರಿ ಎಂದು ಯುವಕರಿಗೆ ಕರೆ ನೀಡಿದ್ದರು. ಈ ಹೋರಾಟದಲ್ಲಿ ತಿರುಮಲೇಗೌಡರು 7 ಎಕರೆ ಜಾಗವನ್ನು ಅಧಿವೇಶನ ನಡೆಸಲು ಬಿಟ್ಟುಕೊಟ್ಟಿದ್ದರು.
ಸತ್ಯಾಗ್ರಹಸೌಧ ನಿರ್ಮಾಣ: 1974ರ ಫೆ.14 ರಂದು ವಿಧಾನಸೌಧ ನಿರ್ವತೃ ಕೆಂಗಲ್ ಹನುಮಂತಯ್ಯ ಅವರು ಕಾರ್ಯನಿಮಿತ್ತ ಮೈಸೂರಿಗೆ ಹೋಗುವ ವೇಳೆ ಶಿವಪುರದ ರೈಲ್ವೆ ಸ್ಟೇಷನ್ ವೃತ್ತದ ಬಳಿ ಕಾರು ನಿಲ್ಲಿಸುತ್ತಾರೆ. ಆಗ ಅವರಿಗೆ ಧ್ವಜ ಸತ್ಯಾಗ್ರಹ ಕಾರ್ಯಕ್ರಮ ನೆನಪಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಶಾಶ್ವತ ನೆನಪಿಗಾಗಿ ಸ್ಮಾರಕ ನಿರ್ವಿುಸಬೇಕೆಂದು ನಿರ್ಧರಿಸಿ ಹಲವರ ಸಹಾಯ ಪಡೆಯುತ್ತಾರೆ. 1979ರ ಸೆ. 29ರಂದು ಉದ್ಘಾಟನೆ ಮಾಡಲಾಗುತ್ತದೆ. ಅಂದಿನ ಕೇಂದ್ರ ಸರ್ಕಾರದ ರೈಲ್ವೆ ಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ. ಇಷ್ಟು ಭವ್ಯ ಇತಿಹಾಸವಿರುವ ಶಿವಪುರ ಧ್ವಜ ಸತ್ಯಾಗ್ರಹ ಸೌಧವಿಂದು ಮೂಲಸೌಕರ್ಯವಿಲ್ಲದೆ, ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ದಾವಣಗೆರೆ ಹುತಾತ್ಮರ ಸ್ಮಾರಕ: ದಾವಣಗೆರೆಯ ಗಡಿಯಾರ ಕಂಬದ ಬಳಿ ಸೇರಿದ್ದ ಹೋರಾಟಗಾರರು ಬ್ರಿಟಿಷರನ್ನು ಹೊಡೆದೋಡಿಸಲು ಕೈಯಲ್ಲಿ ಕಲ್ಲು, ದೊಣ್ಣೆ ಹಿಡಿದು ಕಾದಿದ್ದರು. ಬಿಳಿಯರ ಸೈನ್ಯ ಬರುತ್ತಿದ್ದಂತೆಯೇ ಕಲ್ಲು ತೂರಾಟ ನಡೆಯಿತು. ದೇಶಭಕ್ತರು ಎದೆಯೊಡ್ಡಿ ನಿಂತರು. ಶತ್ರು ಪಾಳೆಯದಿಂದ ಗುಂಡುಗಳ ಮೊರೆತವಾಗುತ್ತಿದ್ದಂತೆಯೇ 6 ಜನ ಭಾರತೀಯರ ಪ್ರಾಣಪಕ್ಷಿ ಹಾರಿಹೋಗಿತ್ತು. ಹಲವರು ಗಾಯಗೊಂಡರು.
1942ರ ‘ಕ್ವಿಟ್ ಇಂಡಿಯಾ’ ಚಳವಳಿಯ ಈ ದುರಂತದಲ್ಲಿ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಹುತಾತ್ಮರಾದರು. ಅವರ ಸ್ಮಾರಕ ಈಗಲೂ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿದೆ. ಮೆರವಣಿಗೆಯನ್ನು ದಾವಣಗೆರೆಯ ಇಟಗಿ ವೇದಮೂರ್ತಿ, ಅ.ಹಿ. ಶಿವಾನಂದಸ್ವಾಮಿ ನಿಯಂತ್ರಿಸುತ್ತಿದ್ದರು.ಆಕ್ರೋಶಗೊಂಡ ಕ್ರಾಂತಿಕಾರಿಗಳು ಆಹಾರ ಸಾಮಗ್ರಿಗಳಿದ್ದ ರೈಲ್ವೆ ಗೂಡ್ಸ್ ಶೆಡ್ನ ಉಗ್ರಾಣಗಳಿಗೆ ಬೆಂಕಿ ಇಡಲಿದ್ದಾರೆಂಬ ಸುದ್ದಿ ತಿಳಿದ ಬಳ್ಳಾರಿ ಸಿದ್ದಮ್ಮ ಅವರು ತಮ್ಮ ಸಹೋದರ ಸಿದ್ಧಲಿಂಗಪ್ಪ, ಜಾಧವ ನೀಲಕಂಠಪ್ಪ, ಸಿಂಧೆ ಹನುಮಂತರಾಯರನ್ನು ಅಲ್ಲಿಗೆ ಕಳಿಸಿ, ಕ್ರಾಂತಿಕಾರಿಗಳ ಮನವೊಲಿಸಿ ಅದನ್ನು ತಡೆದರು.
ದಕ್ಷಿಣದ ಜಲಿಯನ್ ವಾಲಾಬಾಗ್: ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ‘ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್’ ಎಂತಲೇ ಹೆಸರು ಗಳಿಸಿದೆ. ಶಿವಪುರ ಅಧಿವೇಶನದಲ್ಲಿ ನೀಡಲಾದ ಕರೆಗೆ ಓಗೊಟ್ಟು ವಿದುರಾಶ್ವತ್ಥದಲ್ಲಿ 1938ರಲ್ಲಿ ಏ. 25ರಂದು ಧ್ವಜ ಸತ್ಯಾಗ್ರಹ ಕೈಗೊಳ್ಳಲಾಯಿತು. ಇದನ್ನು ಸಹಿಸದೆ ಜಲಿಯನ್ ವಾಲಾಬಾಗ್ ಮಾದರಿಯಲ್ಲಿ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನ್ನಗಾರಿ ನರಸಪ್ಪ, ಹನುಮಂತಪ್ಪ, ಕಾರಗೊಂಡಹಳ್ಳಿ ಮಲ್ಲಯ್ಯ, ನಾಮಾ ಅಶ್ವತ್ಥನಾರಾಯಣಶೆಟ್ಟಿ, ವೆಂಕಟಗಿರಿಯಪ್ಪ, ನರಸಪ್ಪ, ಮರಳೂರು ಗೌರಮ್ಮ ಸೇರಿ ಅನೇಕ ಹೋರಾಟಗಾರರು ಹುತಾತ್ಮರಾದರು. ನೂರಾರು ಮಂದಿ ಗಾಯಗೊಂಡರು. ಇದು ಇಡೀ ದೇಶದ ಗಮನ ಸೆಳೆದಿತ್ತು. ಘಟನೆಯ ಬಗ್ಗೆ ನೊಂದು ಗಾಂಧೀಜಿ ಇಲ್ಲಿನ ಜನರಿಗೆ ಸಾಂತ್ವನ ಹೇಳಲು ರಾಷ್ಟ್ರಭಕ್ತರ ತಂಡವನ್ನು ಕಳುಹಿಸಿದ್ದರು. ವಿದುರಾಶ್ವತ್ಥದಲ್ಲಿ ಗೋಲಿಬಾರ್ನಲ್ಲಿ ಹುತಾತ್ಮರಾದವರ ಅಂತ್ಯಕ್ರಿಯೆ ನೆರವೇರಿಸಿದ್ದು, ಇದರ ನೆನಪಿಗಾಗಿ ಸತ್ಯಾಗ್ರಹ ಸ್ಮಾರಕ, ವೀರಸೌಧ ಸ್ತೂಪ ಮತ್ತು ಉದ್ಯಾನ ನಿರ್ವಿುಸಲಾಗಿದೆ.
ಈಚಲುವನ ಚಳವಳಿ: 1939ರ ಸೆಪ್ಟೆಂಬರ್ನಲ್ಲಿ ತುರುವನೂರು ಗ್ರಾಮದಲ್ಲಿ ನಡೆದ ಈಚಲುವನ ಚಳವಳಿ ಹೋರಾಟಕ್ಕೆ ಹೊಸ ಹುರುಪು ನೀಡಿತು. ಈಚಲ ಮರಗಳಿಂದ ಹೆಂಡ ತಯಾರಿಸಲಾಗುತ್ತಿತ್ತು. ಹೆಂಡದಿಂದ ಆಗಿನ ಬ್ರಿಟಿಷ್ ಸರಕಾರಕ್ಕೆ ಹೇರಳ ಆದಾಯ ಸಂದಾಯವಾಗುತ್ತಿತ್ತು. ಗ್ರಾಮದ ಹಳ್ಳದ ಬಳಿಯ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿದ್ದ ಈಚಲ ಮರಗಳ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು. ಬ್ರಿಟಿಷ್ ಸರಕಾರ ಹೆಂಡ ಮಾರಾಟಕ್ಕೆ ನೀಡುತ್ತಿದ್ದ ಪ್ರೋತ್ಸಾಹ ವಿರೋಧಿಸಿ ಗ್ರಾಮದ ಹನುಮಂತಪ್ಪ, ರಾಮರೆಡ್ಡಿ ಮತ್ತಿತರರು ಚಳವಳಿ ಆರಂಭಿಸಿದರು. ಎಸ್.ನಿಜಲಿಂಗಪ್ಪ ಕೂಡ ಹೋರಾಟಕ್ಕೆ ಧುಮುಕಿದರು. ಸೆ. 18 ರಂದು ಮುಖಂಡರು ಭಾಷಣ ಮಾಡುತ್ತಿದ್ದರು. ಇದರಿಂದ ಉತ್ತೇಜಿತರಾದ ನೂರಾರು ಜನ ಈಚಲು ಮರಗಳನ್ನು ಕಡಿದು ಧರೆಗುರುಳಿಸಿದರು. ಇಲ್ಲಿ ಭಾಷಣ ಮಾಡಿದ ಅನೇಕರನ್ನು ಬ್ರಿಟಿಷರು ಬಂಧಿಸಿದರು.