ವಿವೇಕಧಾರೆ ಅಂಕಣ: ಅಮೆರಿಕದ ಪ್ರಗತಿಗೆ ಪಥದರ್ಶಿಯಾದ ವಿವೇಕಯತಿ

Vivekananda
Published on

ಮನಸ್ಸಿನ ಶಾಂತಿ ಪಡೆದುಕೊಂಡು ಸಾರ್ಥಕತೆ ಕಾಣಬೇಕಾದರೆ ಜೀವನದ ದೃಷ್ಟಿಕೋನವು ಬದಲಾಗಬೇಕೆಂಬ ಸೂಕ್ಷ್ಮವನ್ನು ಅಮೆರಿಕನ್ನರು ಸ್ವಾಮೀಜಿಯವರಿಂದ ಅರಿಯುವಂತಾಯಿತು. ಸರ್ವವಿಧಗಳಿಂದಲೂ, ಆದರ್ಶಗಳಿಂದಲೂ ಭಾರತ ತತ್ತ್ವದ ವ್ಯಕ್ತರೂಪವಾಗಿದ್ದ ಸ್ವಾಮಿ ವಿವೇಕಾನಂದರು ಭೋಗಭೂಮಿಯಾದ ಅಮೆರಿಕಕ್ಕೆ ಉದ್ಧಾರದ ಹೆದ್ದಾರಿ ತೋರುವ ದಿಕ್ಸೂಚಿಯಾದರು.

ಜಗತ್ತಿನ ಇತಿಹಾಸದಲ್ಲಿ ಯುವಸಂನ್ಯಾಸಿಗಳಾದ ಶ್ರೀ ಶಂಕರಾಚಾರ್ಯರು ಮತ್ತು ಸ್ವಾಮಿ ವಿವೇಕಾನಂದರು ಅಪೂರ್ವ ಚೇತನರೆನಿಸಿದ್ದಾರೆ. ಅವರುಗಳು ಧಾರ್ವಿುಕ ಇತಿಹಾಸದಲ್ಲಿ ಸುಖ್ಯಾತರಾಗಿ ಜಾಜ್ವಲ್ಯಮಾನರಾದರೂ ವಿಶ್ವವನ್ನೇ ತಬ್ಬುವ ವಿಶ್ವಾತ್ಮಭಾವ ಅವರೀರ್ವರಲ್ಲಿತ್ತು. ಜನರ ಧಾರ್ವಿುಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಬದುಕಿಗೆ ಇವರೀರ್ವರಿತ್ತ ಕೊಡುಗೆ ಅತ್ಯಪಾರ. ಇವರೀರ್ವರ ಅಂತರಂಗದ ವ್ಯಕ್ತಿತ್ವಗಳು ಪರಬ್ರಹ್ಮಸಂಸ್ಪರ್ಶದಿಂದ ಪಾವನವಾಗಿದ್ದವಲ್ಲದೆ ಅವರುಗಳು ಸಾಧನಾ ಜೀವನದಿಂದ ಸ್ವಾನುಭವಗೊಳಿಸಿಕೊಂಡ ಸತ್ಯಸಾಕ್ಷಾತ್ಕಾರದ ಅರ್ನ್ಯಘಫಲವೂ ಅವರ ವ್ಯಕ್ತಿತ್ವದ ಪರಿಪೂರ್ಣತೆಗೆ, ಪರಿಪಕ್ವತೆಗೆ ಅನ್ವರ್ಥವಾಗಿದ್ದವು. ಧೀರ ಗಂಭೀರ ನಿಲುವಿನವರಾದ ಇವರೀರ್ವರ ವಾಣಿಯಲ್ಲಿ ಲಕ್ಷ್ಮಿಯ ತೇಜಸ್ಸು, ಶಾರದೆಯ ಓಜಸ್ಸು ಮತ್ತು ದುರ್ಗೆಯ ಪರಾಕ್ರಮಗಳು ಓತಪೋ›ತವಾಗಿ ಹರಿಯುತ್ತಿದ್ದವು.

ಉಪನಿಷತ್ತುಗಳನ್ನು ಆಂಗ್ಲಭಾಷೆಗೆ ಅನುವಾದಿಸಿದ ಖ್ಯಾತ ಚಿಂತಕ ಅರ್ನೆಸ್ಟ್ ಹ್ಯೂಮ್ ತನ್ನ ‘ಹದಿಮೂರು ಪ್ರಮುಖ ಉಪನಿಷತ್ತುಗಳು’ ಎಂಬ ಪುಸ್ತಕದಲ್ಲಿ, ‘ಉಪನಿಷತ್ತುಗಳ ಅತ್ಯಂತ ಹರ್ಷದಾಯಕವೂ, ಪ್ರಶಂಸನೀಯವೂ ಆದ ಗುಣಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ ಅವುಗಳಲ್ಲಿ ಸತ್ಯದ ಅನ್ವೇಷಣೆಯ ಬಗ್ಗೆ ಕಾಣುವ ಶ್ರದ್ಧೆ’ ಎಂದಿದ್ದಾನೆ. ವಿಶ್ವವಿಖ್ಯಾತ ಪ್ರೊ.ಮ್ಯಾಕ್ಸ್​ಮುಲ್ಲರ್ ಹೇಳುತ್ತಾರೆ: ‘ಸಹಸ್ರಾರು ವರ್ಷಗಳ ಹಿಂದೆಯೇ, ಬಳಲಿಕೆ ಹೆದರಿಕೆಗಳನ್ನೇ ತಿಳಿಯದ ಭಾರತೀಯರು ಕ್ರಮಕ್ರಮವಾಗಿ ವೇದಾಂತದಂಥ ದರ್ಶನವೊಂದನ್ನು ರೂಪಿಸಿದರು ಎಂಬುದು ವಾಸ್ತವವಾಗಿಯೂ ಅಚ್ಚರಿಯನ್ನುಂಟು ಮಾಡುವಂಥದ್ದು. ಪ್ರಾಚೀನ ಗಾಥಿಕ್ ಚರ್ಚೊಂದರ ಓಲುಶಿಖರದ ಕೊನೆಯ ಮೆಟ್ಟಿಲುಗಳನ್ನು ಏರುವಾಗ ಹೇಗೋ ಹಾಗೆ ಈಗಲೂ ಈ ದರ್ಶನವು ತಲೆಸುತ್ತು ತರುತ್ತದೆ. ಹೆರೊಕ್ಲಿಟಸ್, ಪ್ಲೇಟೋ, ಕ್ಯಾಂಟ್, ಹೆಗಲ್ ಇವರೂ ಸೇರಿದಂತೆ ನಮ್ಮ ತತ್ತ್ವಶಾಸ್ತ್ರಜ್ಞರಲ್ಲಿ ಯಾರೂ ಸಿಡಿಲು ಬಿರುಗಾಳಿಗಳಿಗೆ ಹೆದರದೆ ಭಾರತೀಯರು ನಿರ್ವಿುಸಿದಂಥ ಶಿಖರವನ್ನು ನಿರ್ವಿುಸುವ ಸಾಹಸವನ್ನು ಮಾಡಲಿಲ್ಲ. ಕೊನೆಯಲ್ಲಿ ಹೇಗೋ ಹಾಗೆ ಪ್ರಾರಂಭದಲ್ಲೂ ಅದನ್ನು ಆತ್ಮ ಎನ್ನಿ, ಇಲ್ಲವೇ ಬ್ರಹ್ಮ ಎನ್ನಿ ಒಂದು ಮಾತ್ರ ಇದ್ದಿರಬೇಕು ಎಂಬುದನ್ನು ಕಂಡುಕೊಂಡ ಮೇಲೆ ಮೊದಲ ಮೆಟ್ಟಿಲಿನಂತೆಯೇ ಒಂದಾದ ಮೇಲೊಂದರಂತೆ ಇತರ ಮೆಟ್ಟಿಲುಗಳು ರಚಿತವಾಗುತ್ತ ಹೋದವು...’

ಪ್ರಾಜ್ಞರ ಅದ್ಭುತ ಮಾತುಗಳು ಭವ್ಯ ಭಾರತದ ಸನಾತನ ಪರಂಪರೆಯ ಸತ್ಯದ ರೂಪವನ್ನು ಎತ್ತಿ ಹಿಡಿದಿವೆ. ಇಂತಹ ಹಿನ್ನೆಲೆಯಿಂದ ಉದಿಸಿ ಬಂದ ಸ್ವಾಮಿ ವಿವೇಕಾನಂದರು ಸಮಗ್ರ ಜಗತ್ತನ್ನು ತಮ್ಮ ಸೂಕ್ಷ್ಮ ಹಾಗೂ ತೀಕ್ಷ್ಣ ದೃಷ್ಟಿಯಿಂದ ಪರೀಕ್ಷಿಸಿ ಆಯಾ ಸಮಾಜದ ಅಂತಃಸ್ಸತ್ವವನ್ನು ಪತ್ತೆಹಚ್ಚುವುದರಲ್ಲಿ ಯಶಸ್ವಿ ಯಾದರು. ಯಾವುದೇ ಸಮಸ್ಯೆಯ ಮೂಲವನ್ನಷ್ಟೇ ಪತ್ತೆ ಹಚ್ಚುವುದೇ ಅವರ ಉದ್ದೇಶವಾಗಿರದೆ ಅದರ ಪರಿಹಾರವನ್ನು ಜನ ಮಾನಸಕ್ಕೆ ಮುಟ್ಟಿಸುವ ಅವರ ಕಾರ್ಯಶೀಲತೆ ನಿಜಕ್ಕೂ ಅದ್ಭುತ.

ದಾಸ್ಯರಾಷ್ಟ್ರಸಂಜಾತರಾದ ಸ್ವಾಮೀಜಿ ಸ್ವತಂತ್ರವೂ ಹಾಗೂ ಸಂಪದ್ಭರಿತವೂ ಆದ ಅಮೆರಿಕಕ್ಕೆ ತೆರಳಿದರು. ಅಲ್ಲಿ ತಮ್ಮನ್ನೆಂದೂ ದಾಸ್ಯರಾಷ್ಟ್ರದ ದಾಸಪ್ರತಿನಿಧಿಯಂತೆ ನೀಚ ಅನುಸಂಧಾನಗೈಯ್ಯದೆ ತಮ್ಮ ಸಿಂಹಸದೃಶ ವ್ಯಕ್ತಿತ್ವದಿಂದ ವೇದಾಂತದ ಕಹಳೆಯನ್ನೂದಿ ಜನರ ರಗಳೆಯನ್ನು ದೂರವಾಗಿಸಿದರು. ಕೇವಲ ವಿಜ್ಞಾನ ಹಾಗೂ ಭೌತಿಕ ಸಂಪತ್ತುಗಳ ಒಣಜಗತ್ತಿಗೆ ಜೋತುಬಿದ್ದಿದ್ದ ಪಾಶ್ಚಾತ್ಯರನ್ನು ತಮ್ಮ ವೇದಾಂತದ ಕೃಪಾಜಲದಿಂದ ತೋಯಿಸಿ ಬುದ್ಧಿಹೃದಯಗಳನ್ನು ಹಸನಾಗಿಸಿದರು.

ಶ್ರೀರಾಮಕೃಷ್ಣರೊಮ್ಮೆ ಹೇಳುತ್ತಾರೆ- ‘ಲೋಕಶಿಕ್ಷಣಗೈಯಲು ಜಗನ್ಮಾತೆ ಹಿಂದೆ ಶುಕದೇವ, ನಾರದ ಹಾಗೂ ಶಂಕರಾಚಾರ್ಯರಿಗೆ ಲೈಸೆನ್ಸ್ ನೀಡಿದ್ದಳು. ಈಗ ನರೇಂದ್ರನಿಗೆ ಲೈಸೆನ್ಸ್ ನೀಡಿದ್ದಾಳೆ’. ಅಮೆರಿಕದ ಸಂದರ್ಶನವೊಂದರಲ್ಲಿ ಸ್ವಾಮೀಜಿ ಹೇಳಿದ್ದಾರೆ, ‘ಪೂರ್ವರಾಷ್ಟ್ರಗಳಿಗೆ ಬುದ್ಧನು ಸಂದೇಶವೊಂದನ್ನು ಇತ್ತ ಹಾಗೆ ಪಶ್ಚಿಮ ರಾಷ್ಟ್ರಗಳಿಗೆ ನನ್ನದೊಂದು ಸಂದೇಶವಿದೆ’. ಮತ್ತೊಂದು ಸಂದರ್ಭದಲ್ಲಿ ಸ್ವತಃ ಸ್ವಾಮಿಜಿಯೇ ಹೇಳುತ್ತಾರೆ, ‘ನಾನೇ ಶಂಕರನಾಗಿದ್ದೆ’. ಸಾರಾಂಶವೆಂದರೆ ಶಂಕರಾಚಾರ್ಯರ ಲೋಕಕಲ್ಯಾಣ ಕಾರ್ಯವು ಸಹಸ್ರ ವರ್ಷಗಳ ನಂತರ ಸ್ವಾಮಿ ವಿವೇಕಾನಂದರ ಮೂಲಕ ಮುಂದುವರಿದಿದೆ. ದೇವೇಂದ್ರನಾಥ ಟ್ಯಾಗೋರರು ಯುವಕ ನರೇಂದ್ರನಿಗೆ ‘ಯೋಗಿಯ ಕಣ್ಣುಗಳಿವೆ’ ಎಂದರೆ ಶ್ರೀರಾಮಕೃಷ್ಣರು ನರೇಂದ್ರನಿಗೆ ಕಣ್ಣುಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣುವಂತೆ ಸಲಹೆಯಿತ್ತರು. ಆನಂತರದಲ್ಲಿ ಸ್ವಾಮೀಜಿ ಅಮೆರಿಕದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಪಾಶ್ಚಿಮಾತ್ಯ ನಾಡಿಗೆ ವೇದಾಂತ ತತ್ತ್ವದ ಆಸರೆಯಿತ್ತು ತಮ್ಮ ವಿಶ್ವಮಾನವ ವಿರಾಟ್ ಸ್ವರೂಪ ಪರಿಚಯಿಸಿದ್ದು ಇತಿಹಾಸ.

1893ರ ಸೆಪ್ಟೆಂಬರ್ 11ರಿಂದ 27ರವರೆಗೆ ನಡೆದ ಪ್ರಥಮ ವಿಶ್ವಧರ್ಮ ಸಮ್ಮೇಳನವು ಜಗತ್ತಿನಲ್ಲಿ ಸಕಾರಾತ್ಮಕ ತಿರುವನ್ನು ಹತ್ತಾರು ದಿಕ್ಕುಗಳಲ್ಲಿ, ವಿಚಾರಗಳಲ್ಲಿ ನೀಡುವಲ್ಲಿ ಯಶಸ್ವಿಯಾಯಿತು. ಅಮೆರಿಕದ ಜಡಭೂಮಿಯನ್ನು ಕೊಲಂಬಸ್ ಆವಿಷ್ಕರಿಸಿದ್ದರೆ ಸ್ವಾಮಿ ವಿವೇಕಾನಂದರು ಅವರಿಗೆ ತಮ್ಮಲ್ಲಿ ಹುದುಗಿರುವ ಚೈತನ್ಯ ಶಕ್ತಿಯನ್ನು ಹುಡುಕಿಕೊಟ್ಟರು. ಸಮ್ಮೇಳನದ ಕುರಿತ ಕೆಲವು ಮಾತುಗಳನ್ನು ಹೇಳಬಹುದಾದರೆ ಸ್ವಾಮಿ ವಿವೇಕಾನಂದರು ಧಾರ್ವಿುಕ ವಿಚಾರದಲ್ಲಷ್ಟೇ ಅಲ್ಲದೆ ವೈಜ್ಞಾನಿಕ ವಿಷಯದಲ್ಲೂ ಪ್ರವಚನಗಳನ್ನು ನೀಡಿದರು. ‘ದೈವದತ್ತವಾಗ್ಮಿ’ ಎಂದೇ ಶ್ಲಾಘಿಸಲ್ಪಟ್ಟ ಸ್ವಾಮೀಜಿಯವರನ್ನು ಕುರಿತು, ‘ಅವರ ವಯಸ್ಸು ಸುಮಾರು ಮೂವತ್ತು ವರ್ಷ; ಆದರೆ ಸಂಸ್ಕೃತಿಯ ದೃಷ್ಟಿಯಲ್ಲಿ ಯುಗಯುಗಳಷ್ಟು ಹಿರಿಯರು’ ಎಂಬುದು ಒಬ್ಬ ಧೀಮಂತನ ಉದ್ಗಾರವಾದರೆ, ಪ್ರಖ್ಯಾತ ಸಂಶೋಧಕ ಹಿರಮ್ ಮ್ಯಾಕ್ಸಿಮ್ ಹೇಳುತ್ತಾನೆ-‘ಸ್ವಾಮಿ ವಿವೇಕಾನಂದರದ್ದು ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ, ಅಪರಿಮಿತ ಜ್ಞಾನ, ವೆಬ್​ಸ್ಟರ್ ಪದವೀಧರನಂತೆ ಅವರ ಆಂಗ್ಲಭಾಷೆ. ಅವರ ಮಾತು ಕೇಳಿದ ಮೇಲೆ ತಮ್ಮ ಸಂಖ್ಯಾವೃದ್ಧಿಗೆ ಮತಾಂತರವನ್ನೇ ಆಶ್ರಯಿಸಿದ್ದ ಧರ್ಮಪ್ರತಿನಿಧಿಗಳಿಗೆ ತಿಳಿಯಿತು, ಈಗ ತಾವೊಬ್ಬ ನೆಪೊಲಿಯನ್ನನ್ನು ಎದುರಿಸಬೇಕಿದೆ’ ಎಂದು.

ಸಮ್ಮೇಳನದ ಸಮಾರೋಪದಲ್ಲಿ ಸ್ವಾಮೀಜಿ ನುಡಿಯುತ್ತಾರೆ- ‘‘ಕ್ರೈಸ್ತನಾದವನು ಹಿಂದೂವೋ, ಬೌದ್ಧನೋ ಆಗಬೇಕಿಲ್ಲ; ಅಂತೆಯೇ ಹಿಂದೂವು ಬೌದ್ಧನೋ, ಕ್ರೈಸ್ತನೋ ಆಗಬೇಕಿಲ್ಲ. ಆದರೆ ಪ್ರತಿಯೊಬ್ಬನೂ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು, ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳದೆ, ತನ್ನದೇ ಆದ ಬೆಳವಣಿಗೆಯ ನಿಯಮಾನುಸಾರವಾಗಿ ಬೆಳೆಯಬೇಕು. ಈ ಸಮ್ಮೇಳನವು ಜಗತ್ತಿಗೇನಾದರೂ ತೋರಿಸಿಕೊಟ್ಟಿದ್ದರೆ ಇದನ್ನು: ಪಾವಿತ್ರ್ಯ, ಪರಿಶುದ್ಧತೆ ಮತ್ತು ಅನುಕಂಪ ಇವುಗಳೆಲ್ಲ ಪ್ರಪಂಚದ ಯಾವುದೋ ಒಂದು ಮತಕ್ಕೆ ಮಾತ್ರವೇ ಮೀಸಲಾಗಿಲ್ಲ; ಮತ್ತು ಜಗತ್ತಿನ ಪ್ರತಿಯೊಂದು ಮತವೂ ಅತ್ಯುನ್ನತ ಶೀಲಸಂಪನ್ನರಾದ ಸ್ತ್ರೀಪುರುಷರನ್ನು ನಿರ್ಮಾಣ ಮಾಡಿದೆ. ಇಂತಹ ಸ್ಪಷ್ಟ ನಿದರ್ಶನಗಳಿದ್ದರೂ ಕೂಡ, ಯಾರಾದರೂ ತಮ್ಮ ಧರ್ಮ ಮಾತ್ರವೇ ಉಳಿಯುತ್ತದೆ, ಉಳಿದುದೆಲ್ಲ ಅಳಿಯುತ್ತದೆ ಎಂದು ತಿಳಿಯುವುದಾದರೆ, ನನಗೆ ಅವರ ಬಗ್ಗೆ ಕನಿಕರವಾಗುತ್ತದೆ ಮತ್ತು ಎಷ್ಟೇ ವಿರೋಧವಿದ್ದರೂ ಬಹು ಶೀಘ್ರದಲ್ಲೇ ಪ್ರತಿಯೊಂದು ಧರ್ಮದ ಧ್ವಜದ ಮೇಲೂ ‘ಯುದ್ಧವಲ್ಲ, ಸಹಕಾರ’, ‘ನಾಶವಲ್ಲ, ಸ್ವೀಕಾರ’, ‘ವೈಮನಸ್ಯವಲ್ಲ, ಶಾಂತಿ-ಸಮನ್ವಯ’ ಎಂದು ಬರೆಯಲಾಗುತ್ತದೆ ಎಂಬುದನ್ನು ನಾನು ಅವರಿಗೆ ತೋರಿಸಿಕೊಡುತ್ತೇನೆ’’.

ಸಮ್ಮೇಳನದ ಸಾಮಾನ್ಯ ಸಮಿತಿಯ ಮುಖ್ಯಸ್ಥ ಡಾ.ಜಾನ್ ಹೆನ್ರಿ ಬರೋಸ್, ‘ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರು ನಿಜವಾದ ಹಿಂದೂಧರ್ಮದ ಘನತೆಯನ್ನು ಜಗತ್ತಿನ ಮುಂದೆ ಅತಿ ಎತ್ತರದಲ್ಲಿ ಪರಿಚಯಿಸಿದ್ದಾರೆ’ ಎಂದರು. ಇಡೀ ಅಮೆರಿಕವೇ ಸ್ವಾಮೀಜಿಯವರಿಗೆ ಶಿರಬಾಗಿತೆಂಬ ಸತ್ಯ ಅಲ್ಲಿನ ಪ್ರತಿಷ್ಠಿತ ಪತ್ರಿಕೆಯೊಂದರ ವರದಿ ಹೊರಗೆಡವುತ್ತದೆ: ‘ಹೌದು, ಅವರು ಬೋಧಿಸುತ್ತಾರೆ; ಅವರ ಪ್ರತಿಯೊಂದು ಮಾತೂ, ಅವರ ಪ್ರತಿಯೊಂದು ಪ್ರಖರ-ಜೀವಂತ ಭಾವನೆಯೂ ಸಹಿಷ್ಣುತೆ, ಸತ್ಯ ಹಾಗೂ ಪವಿತ್ರತೆಯ ಸಂದೇಶ. ಸುಲಲಿತ ವಾಗ್ಝರಿಯ ತರ್ಕಬದ್ಧ ವಾಕ್​ಸರಣಿಯ ಪಂಡಿತರಾದ ಅವರ ಬೆರಳತುದಿಯಲ್ಲಿ ಬೈಬಲ್, ಕುರಾನ್, ವೇದಗಳು ಅಡಕವಾಗಿವೆ. ಅವರದು ವಿದ್ಯುತ್ತಿನಂಥ ಚುರುಕುತನದ ಸ್ಪುಟವಾದ ಮನಸ್ಸು. ಅವರೊಬ್ಬ ಕಲಾಕಾರ, ಪಂಡಿತ, ಭಗವಂತನ ಶ್ರೇಷ್ಠತಮ ಸೇವಕ’.

ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ಜನರ ಅವಶ್ಯಕತೆಗಳನ್ನು ಎಲ್ಲ ದೃಷ್ಟಿಗಳಿಂದಲೂ ವಿಶ್ಲೇಷಿಸುವುದರಲ್ಲಿ ಯಶಸ್ವಿಯಾದರು. ಸಮ್ಮೇಳನದ ನಂತರ ಅವರು ಹೊರರಾಷ್ಟ್ರಗಳಲ್ಲಿ ಮೂರು ಹಂತಗಳಲ್ಲಿ ಕಾರ್ಯವೆಸಗಿದರು.

1. ಧರ್ಮದ ಶುದ್ಧೀಕರಣ: 1893 ಮತ್ತು 94ನೇ ವರ್ಷಗಳಲ್ಲಿ ಸ್ವಾಮೀಜಿ ಅಮೆರಿಕ ದೇಶದಲ್ಲಿ ಭಾರತದ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಇದ್ದ ಅಜ್ಞಾನವನ್ನು ಭಗವಾನ್ ಶ್ರೀರಾಮಕೃಷ್ಣರ ಹಾಗೂ ವೇದೋಪನಿಷತ್ತುಗಳ ದಿವ್ಯಸಂದೇಶಗಳ ಚಿಂತನೆಗಳ ಬೆಳಕಿನಲ್ಲಿ ನಿಮೂಲನ ಮಾಡಿದರು. ಭಾರತದ ಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ಅತಿ ಎನ್ನಿಸಬಹುದಾದಷ್ಟು ಅಜ್ಞಾನಿಗಳೇ ಆಗಿದ್ದ ಪಾಶ್ಚಾತ್ಯರಿಗೆ ಸ್ಪಷ್ಟ ತಿಳವಳಿಕೆಯಿತ್ತ ಅವರು ಈ ವಿಧಾನದ ಪ್ರಥಮ ಚಿಕಿತ್ಸೆ ಮೂಲಕ ಧರ್ಮ, ಸಂಸ್ಕೃತಿಗಳ ಶುದ್ಧೀಕರಣಕ್ಕೆ ಮುಂದಾದರು. ಅಮೆರಿಕದ ಪ್ರತಿಷ್ಠಿತ ಮಹಿಳೆಯೊಬ್ಬಳು ಹೇಳುತ್ತಾಳೆ: ‘ಓಹ್, ವಿವೇಕಾನಂದರ ದಿವ್ಯ ಬೋಧನೆಗಳೆಂಥವು! ಅಲ್ಲಿ ಅರ್ಥಹೀನವಾದುದೊಂದೂ ಇಲ್ಲ. ಇನ್ನು ನಾನು ಹಳೆಯ ‘ನಾನು’ ಆಗಿ ಉಳಿಯುವುದಿಲ್ಲ ಎಂದೆನಿಸುತ್ತದೆ. ಏಕೆಂದರೆ, ನಾನು ಪರಮಸತ್ಯದ ಇಣುಕುನೋಟವೊಂದನ್ನು ಪಡೆದುಕೊಂಡಿದ್ದೇನೆ’.

2. ಸ್ಪಷ್ಟೀಕರಣ: ತಮ್ಮ ಪ್ರಥಮ ಚಿಕಿತ್ಸಾ ಕಾರ್ಯಯಶಸ್ಸಿನ ನಂತರ 1895 ಮತ್ತು 96ನೇ ವರ್ಷಗಳಲ್ಲಿ ತಿಳಿಯಾದ ಹಾಗೂ ಶುದ್ಧವಾದ ಪಾಶ್ಚಾತ್ಯ ಮನಸ್ಸುಗಳಿಗೆ ವೇದಾಂತದ ಸಂದೇಶಗಳ ತಂಪನ್ನೆರೆದು ಧರ್ಮದ ಸ್ಪಷ್ಟೀಕರಣಗೈದರು.

3. ಪುಷ್ಟೀಕರಣ: 1899 ಮತ್ತು 1900ನೇ ವರ್ಷಗಳಲ್ಲಿ ಸ್ವಾಮೀಜಿ ಹಿಂದೆ ಪ್ರವಚನಗಳ ಮೂಲಕ ಸಾರಿದ್ದ ವೇದಾಂತ ಚಿಂತನೆಗಳನ್ನು ಈಗ ಸಾಧನಾ ಶಿಬಿರಗಳನ್ನೇರ್ಪಡಿಸಿ ಅವುಗಳ ಪುಷ್ಟೀಕರಣ ಕಾರ್ಯವನ್ನು ನೆರವೇರಿಸಿದರು.

ಮಾನವನ ನೈಜ ಸ್ವರೂಪದ ಕುರಿತು ಮಾತನಾಡುತ್ತ, ‘ಬಾಹ್ಯ ಪ್ರಪಂಚದಲ್ಲಿ ನೆರವೇರಿಸುತ್ತಿರುವ ಸತ್ಯಾನ್ವೇಷಣೆ, ಆನಂದ ಹಾಗೂ ಸಾಫಲ್ಯದ ಆವಿಷ್ಕಾರ ಮತ್ತು ದೈವವನ್ನು ಅರಸುವುದನ್ನು ಅಂತರಂಗದ ಆಳಕ್ಕೆ ತಿರುಗಿಸಿ. ನಿಮ್ಮ ಆಂತರ್ಯದಲ್ಲಿರುವ ದೇವರೇ ತನ್ನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವಂತೆ ನಿಮ್ಮನ್ನು ಪ್ರಚೋದಿಸುತ್ತಾನೆ. ಅಲ್ಲಿ, ಇಲ್ಲಿ, ಬಹಳ ಹುಡುಕಾಡಿದ ಮೇಲೆ, ಗುಡಿ, ಚರ್ಚು, ಭೂಮಿ, ಸ್ವರ್ಗ, ಇಲ್ಲೆಲ್ಲ ಹುಡುಕಿದ ನಂತರ, ಸುತ್ತಾಟ ಮುಗಿಸಿ ಪ್ರಾರಂಭದ ಸ್ಥಳಕ್ಕೆ ಮತ್ತೆ ಬರುತ್ತೀರಿ. ನೀವು ಯಾರಿಗಾಗಿ ಅಳುತ್ತಿರುವಿರೋ, ಯಾರನ್ನು ಮುಗಿಲಿನಿಂದ ಆವೃತವಾದ ರಹಸ್ಯಮಯ ವಸ್ತುವೆಂದು ಭಾವಿಸಿದ್ದೀರೋ, ಅದು ನಿಮಗೆ ಅತ್ಯಂತ ಹತ್ತಿರದಲ್ಲಿದೆ. ಅದೇ ನಿಮ್ಮ ಆತ್ಮ, ಅದೇ ನಿಮ್ಮ ಬಾಳು, ಅದೇ ನಿಮ್ಮ ದೇಹ ಹಾಗೂ ಜೀವನದ ಸತ್ಯ, ಅದೇ ನಿಮ್ಮ ಸ್ವರೂಪ. ನೀವು ಯೋಚಿಸುವ ಪ್ರತಿಯೊಂದು ಒಳ್ಳೆಯ ಆಲೋಚನೆಯೂ, ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸವೂ, ತೆರೆಯನ್ನು ಹರಿದುಹಾಕಿದಂತೆ; ಹಿಂದೆ ಇರುವ ಪವಿತ್ರತೆ, ಅನಂತತೆ, ದಿವ್ಯತೆ ಹೆಚ್ಚು ಹೆಚ್ಚು ವ್ಯಕ್ತವಾಗುತ್ತ ಹೋಗುತ್ತದೆ...’

ಲೌಕಿಕ ಭೋಗದ ಅತಿಬಳಕೆಯಿಂದ, ಮನಸ್ಸಿನ ಶಾಂತಿ ಕಾಣದಂತಾಗಿ ‘ಕಾಮ’ ಎಂಬುದು ತೃಪ್ತಿಗಷ್ಟೇ. ಅದು ಸಾರ್ಥಕ್ಯ ನೀಡಬೇಕಾದರೆ ನಮ್ಮ ಜೀವನದ ದೃಷ್ಟಿಕೋನವು ಬದಲಾಗಬೇಕೆಂಬ ಸೂಕ್ಷ್ಮವನ್ನು ಅಮೆರಿಕನ್ನರು ಸ್ವಾಮೀಜಿಯವರಿಂದ ಅರಿಯುವಂತಾಯಿತು. ಸರ್ವವಿಧಗಳಿಂದಲೂ, ಆದರ್ಶಗಳಿಂದಲೂ ಭಾರತ ತತ್ತ್ವದ ವ್ಯಕ್ತರೂಪವಾಗಿದ್ದ ಸ್ವಾಮಿ ವಿವೇಕಾನಂದರು ಭೋಗಭೂಮಿಯಾದ ಅಮೆರಿಕಕ್ಕೆ ಉದ್ಧಾರದ ಹೆದ್ದಾರಿ ತೋರುವ ದಿಕ್ಸೂಚಿಯಾದರು. ತನ್ನ ಸ್ವಾತಂತ್ರೊ್ಯೕತ್ಸವದ ದ್ವಿಶತಮಾನೋತ್ಸವದ ಆಚರಣೆಯಲ್ಲಿ ಅಮೆರಿಕ ಕಳೆದ ಐದು ಶತಮಾನಗಳಲ್ಲಿ ಅಮೆರಿಕದ ಮೇಲೆ ಅತ್ಯುತ್ಕೃಷ್ಟ ಪ್ರಭಾವ ಬೀರಿದ ಬೆರಳೆಣಿಕೆಯಷ್ಟು ವ್ಯಕ್ತಿಗಳಲ್ಲಿ ‘ಸ್ವಾಮಿ ವಿವೇಕಾನಂದ’ರನ್ನು ಕೃತಜ್ಞತೆಯಿಂದ ಸ್ಮರಿಸಿದೆ.

ವಿವೇಕಾನಂದರ ನಿರ್ಗಮನದ ನಂತರ ಸ್ಥಾಪಿತವಾದ ವಿಶ್ವಸಂಸ್ಥೆ ತನ್ನ ಪ್ರಣಾಳಿಕೆಗಳಲ್ಲಿ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಹಲವಾರು ವಿಚಾರಗಳನ್ನೇ ಮುಂಚೂಣಿಯಲ್ಲಿ ಮೇಲ್ಪಂಕ್ತಿಯಾಗಿಸಿದೆ. ‘ನರೇಂದ್ರ ಜಗತ್ತಿಗೆ ಬೋಧಿಸುತ್ತಾನೆ’ ಎಂಬ ಶ್ರೀರಾಮಕೃಷ್ಣರ ಮಾತು ಸಾಕ್ಷಾತ್ತಾಗಿ ಸಾಕಾರಗೊಂಡು ಇಂದು ವಿವೇಕದೀಪವು ಭುವಿಯಲ್ಲಿ ನಂದಾದೀಪವಾಗಿ ಪ್ರಜ್ವಲಿಸುತ್ತಿರುವುದು ಗಮನೀಯ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net