ಚಕ್ರವರ್ತಿ ಸೂಲಿಬೆಲೆ ಅಂಕಣ| ಬಂಗಾಳದಲ್ಲಿ ಶ್ರೀರಾಮನೂ ಕೋಮುವಾದಿ!

Mamatha Banarjee
Published on

ನೇತಾಜಿ ಸುಭಾಷ್​ಚಂದ್ರ ಬೋಸರ ಜಯಂತಿಯ ಆಚರಣೆ ಕೊಲ್ಕತ್ತಾದಲ್ಲಿ ಬಲು ವಿಶಿಷ್ಟವಾಗಿ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಅದಕ್ಕೆ ‘ಪರಾಕ್ರಮ ದಿವಸ’ ಎಂಬ ನಾಮಕರಣವನ್ನೂ ಮಾಡಿತು. ಅಲ್ಲದೇ ಮತ್ತೇನು? ದಾಸ್ಯದಲ್ಲಿದ್ದ ಭಾರತದಿಂದ ತಪ್ಪಿಸಿಕೊಂಡು ಹೋಗಿ ದಾಸ್ಯದಲ್ಲಿಟ್ಟಿರುವವರ ಶತ್ರುಗಳನ್ನು ಭೇಟಿಮಾಡಿ ಅವರ ಸಹಕಾರ ಪಡೆದು, ಸೇನೆಕಟ್ಟಿ ಆಕ್ರಮಣ ಮಾಡಿ, ಆಳುವವರ ಎದೆ ನಡುಗಿಸಿದ ಆ ವ್ಯಕ್ತಿಯದ್ದು ಪರಾಕ್ರಮವಲ್ಲದೇ ಮತ್ತೇನು? ಹೆಸರು ಸುಭಾಷರಿಗೆ ಅನ್ವಯವಾಗುವಂಥದ್ದೇ. ಪ್ರತಿಯೊಂದರಲ್ಲೂ ರಾಜಕೀಯವನ್ನು ನೋಡುವ ಮಮತಾ ಬ್ಯಾನರ್ಜಿ ಸಹಜವಾಗಿಯೇ ಉರಿದುಬಿದ್ದರು. ಕೇಂದ್ರ ಸರ್ಕಾರ ಬಂಗಾಳದ ಚುನಾವಣೆಗೆ ಪೂರ್ವಭಾವಿಯಾಗಿಯೇ ಹೀಗೆ ಮಾಡುತ್ತಿದೆ ಎಂಬುದು ಅವರ ಆಕ್ರೋಶಕ್ಕೆ ಕಾರಣ.

ಬೋಸರ 125ನೇ ಜಯಂತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸಾಮಾನ್ಯ ಅಂಶವೂ ಮಮತಾಗೆ ಹೊಳೆಯಲಿಲ್ಲ ಅಥವಾ 1897ರಲ್ಲಿ ಸುಭಾಷ್​ಚಂದ್ರ ಬೋಸರು ಹುಟ್ಟಿದ್ದೇ ತಪ್ಪಾಯಿತೆಂದು ಅವರು

ಭಾವಿಸಿರಲು ಸಾಕು. ಮಮತಾ ಅದಕ್ಕೆ ಬೇರೊಂದು ಸ್ವರೂಪವನ್ನು ಕೊಟ್ಟು ‘ಪರಾಕ್ರಮ’ ಎಂಬ ನಾಮಕರಣವೇ ಸರಿಯಿಲ್ಲವೆಂದು ರೇಗಾಡಿದ್ದೂ ಆಯ್ತು. ಇವೆಲ್ಲಕ್ಕಿಂತಲೂ ವಿಷಮ ಪರಿಸ್ಥಿತಿ ಎದುರಾಗಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ. ಅದೂ ರಾಜಕೀಯವಾಗಿರಬೇಕೆಂದೇನೂ ಇಲ್ಲ. ಪಶ್ಚಿಮ ಬಂಗಾಳ ಸುಭಾಷ್​ಚಂದ್ರ ಬೋಸರ ಕರ್ಮಕ್ಷೇತ್ರವಾಗಿತ್ತು ಮತ್ತು ಈಗಲೂ ಆ ರಾಜ್ಯ ಬೋಸರನ್ನು ರಾಷ್ಟ್ರಕ್ಕೆ ತಮ್ಮ ಕೊಡುಗೆ ಎಂದೇ ಭಾವಿಸುತ್ತದೆ. 125ನೇ ಜಯಂತಿಯನ್ನು ಅಲ್ಲಿಯೇ ಆಚರಿಸುವುದರಲ್ಲಿ ವಿಶೇಷ ಅರ್ಥವೂ ಇತ್ತು. ಎಡವಟ್ಟಾಗಿದ್ದು ಮಮತಾ ಬ್ಯಾನರ್ಜಿ ಮಾತನಾಡಲು ನಿಂತಾಗಲೇ. ಮಮತಾ ನಿಂತೊಡನೆ ಜನರು ‘ಜೈಶ್ರೀರಾಮ್ ಘೊಷಣೆಗಳನ್ನು ಮೊಳಗಿಸಲಾರಂಭಿಸಿದರು. ಅಲ್ಲಿನ ಮುಖ್ಯಮಂತ್ರಿ ಆ ಘೊಷಣೆಗಳನ್ನು ಕೇಳಿದಾಗ ಉರಿದು ಬೀಳುತ್ತಾರೆಂಬುದು ಗೊತ್ತಿದ್ದುದರಿಂದಲೇ ಜನ ಹಾಗೆ ಮಾಡಿದರೆಂಬುದು ನಿರ್ವಿವಾದ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಚುನಾವಣೆ ಹೊತ್ತಲ್ಲಿ ಮೋದಿ ಹೆಸರನ್ನು ಕೇಳಿದಾಗಲೆಲ್ಲ ಉರಿದು ಬೀಳುತ್ತಿದ್ದರಲ್ಲ, ಅವರಿಗೆ ಪ್ರತೀ ಕಾರ್ಯಕ್ರಮದಲ್ಲೂ ಜನ ಮೋದಿ-ಮೋದಿ ಎನ್ನುತ್ತಲೇ ಸ್ವಾಗತಿಸುತ್ತಿದ್ದುದು ನಿಮಗೂ ನೆನಪಿರಬೇಕು. ಒಂದು ಕಾರ್ಯಕ್ರಮದಲ್ಲಂತೂ ಸ್ವತಃ ಮೋದಿಯೇ ಹಾಗೆ ಮಾಡಬೇಡಿರೆಂದು ಕೇಳಿಕೊಳ್ಳಬೇಕಾಗಿ ಬಂದಿತು. ಕೋಲ್ಕತ್ತದ ಜನ ಘೊಷಣೆ ಕೂಗುತ್ತಿದ್ದುದು ಮೋದಿಯ ಹೆಸರಿನದ್ದಲ್ಲ. ಬದಲಿಗೆ ಭಾರತದ ಅಸ್ತಿತ್ವದ ಸ್ವರೂಪವಾಗಿರುವ ಶ್ರೀರಾಮನ ಹೆಸರಿನದ್ದು. ದೀದಿಗೆ ಅಷ್ಟೇ ಸಾಕಾಯಿತು. ಜನರನ್ನು ಎರ್ರಾಬಿರ್ರಿಯಾಗಿ ತರಾಟೆಗೆ ತೆಗೆದುಕೊಂಡರು. ಇಷ್ಟಕ್ಕೂ ನೆರೆದಿದ್ದ ಜನರು ಉತ್ತರಪ್ರದೇಶ, ಬಿಹಾರಗಳಿಂದ ಬಂದವರಾಗಿರಲಿಲ್ಲ ಅಥವಾ ಹಣಕೊಟ್ಟು ಆಫ್ರಿಕಾ, ಆಸ್ಟ್ರೇಲಿಯಾದಿಂದ ಕರೆಸಿಕೊಂಡವರಾಗಿರಲಿಲ್ಲ. ಅವರು ದೀದಿಯ ಬಂಗಾಳದ್ದೇ ಜನ. ಅಕ್ಷರಶಃ ರಾಮನ ನಾಡಿನ ಭಾರತೀಯರೇ. ಅವರು ಶ್ರೀರಾಮನಿಗೆ ಜಯಕಾರ ಹೇಳದೇ ಒಸಾಮಾ ಬಿನ್ ಲಾಡೆನ್​ಗೆ ಹೇಳುವುದು ಸಾಧ್ಯವೇನು? ಆದರೆ ದೀದಿಯ ಆಕ್ರೋಶ ಹೊಸತೇನೂ ಅಲ್ಲ. ಈ ಹಿಂದೆಯೂ ಈ ಘೊಷಣೆಗಳಿಂದ ಅವರು ಉರಿದುಬಿದ್ದಿದ್ದು ದಾಖಲಿದೆ. ಎರಡು ವರ್ಷಗಳ ಹಿಂದೆ ರಾಮನವಮಿಯ ಮೆರವಣಿಗೆಗಳಲ್ಲಿ ಬಿಲ್ಲು-ಬಾಣಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿ ಕುಖ್ಯಾತಿಗೆ ಒಳಗಾದರು. ದುರ್ಗಾಪೂಜೆ ಮೆರವಣಿಗೆ ಹೊತ್ತಲ್ಲೇ ಮುಸಲ್ಮಾನರ ಹಬ್ಬವೂ ಬಂದಿರುವುದರಿಂದ ಈ ಬಾರಿ ಮೆರವಣಿಗೆಯೇ ಬೇಡವೆನ್ನುತ್ತ ಮೂಲೆ-ಮೂಲೆಗಳಲ್ಲೂ ಹಬ್ಬಿಕೊಂಡಿರುವ ದುರ್ಗಾಭಕ್ತರ ಕೆಂಗಣ್ಣಿಗೆ ಗುರಿಯಾದರು.

ಪ್ರತಿಪಕ್ಷಗಳು ರಾಮನನ್ನು ಕಾಡಿದಾಗಲೆಲ್ಲ ಬಿಜೆಪಿಯ ಬೇರು ಗಟ್ಟಿಯಾಗುತ್ತಲೇ ಹೋಗುತ್ತದೆ ಎಂಬ ಹಿತೈಷಿಗಳ ಮಾತು ಮಮತಾರನ್ನು ಕಾಡಿರಲು ಸಾಕು. ಕೊನೆಗೂ ಅವರು ತಮಗರಿವಿಲ್ಲದಂತೆಯೇ ರಾಮನನ್ನು ಬಿಜೆಪಿಯ ಪರವಿರುವವನು ಎಂದು ನಿರ್ಧರಿಸಿ ಆತನ ಹೆಸರು ಬಂದಾಗಲೆಲ್ಲ ಹೆಚ್ಚು-ಹೆಚ್ಚು ಗರಂ ಆಗತೊಡಗಿದರು. ಹೆಚ್ಚು-ಹೆಚ್ಚು ತಪು್ಪಗಳನ್ನೂ ಮಾಡಲಾರಂಭಿಸಿದರು. ಅನೇಕ ಕಡೆಗಳಲ್ಲಿ ‘ಜೈ ಶ್ರೀರಾಮ್ ಎಂಬುದು ಆತಂಕವಾದಿಗಳ ಘೊಷಣೆ ಎಂದು ಹೇಳಿಯೂಬಿಟ್ಟರು! ಸಹಜವಾಗಿಯೇ ಬಂಗಾಳದ ಮಾನಸಿಕತೆಗೆ ಇದು ಬಲುದೊಡ್ಡ ಆಘಾತ. ಅನೇಕ ವರ್ಷಗಳ ಕಾಲ ಮುಸಲ್ಮಾನರ ಆಳ್ವಿಕೆಯಿಂದ ನಲುಗಿದ, ಆನಂತರ ಕಾಂಗ್ರೆಸ್, ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿದಂತಿದ್ದ ಬಂಗಾಳದ ಜನತೆಯ ಒಳಗೆ ಸುಪ್ತವಾಗಿ ಹರಿಯುತ್ತಿದ್ದ ಹಿಂದೂ ಪ್ರವಾಹ ಹೆದ್ದೆರೆಯಾಗಲು ಸಿದ್ಧತೆ ನಡೆಸಿತು. ದೀದಿ ರಾಮನನ್ನು ತೆಗಳಿದಷ್ಟೂ ರಾಮಕಾರ್ಯಕ್ಕೆ ಅಲ್ಲಿನ ಜನರ ಉತ್ಸಾಹ ಹೆಚ್ಚುತ್ತ ನಡೆಯಿತು. ಏಳು ದಶಕಗಳ ಕಾಲ ಕಂಡ-ಕಂಡಲ್ಲಿ ಮೂಗು ತೂರಿಸಿ ಹಿಂದೂಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅವಹೇಳನ ಮಾಡಿ, ಮೂಲೋತ್ಪಾಟನೆಗೊಳಿಸುವ ಪ್ರಯತ್ನವನ್ನು ಎಡಪಂಥೀಯರು ಮಾಡುತ್ತಲೇ ಬಂದಿದ್ದರಲ್ಲದೆ ಒಂದು ಹಂತಕ್ಕೆ ಯಶಸ್ವಿಯೂ ಆಗಿಬಿಟ್ಟಿದ್ದರು. ದೀದಿ ಕೆಲವೇ ತಿಂಗಳಲ್ಲಿ ಅದನ್ನೆಲ್ಲ ಬುಡಮೇಲುಗೊಳಿಸಿ ಹಿಂದೂಗಳನ್ನು ಏಕತ್ರಗೊಳಿಸಿದರಲ್ಲದೆ ಬಂಗಾಳದ ಹಿಂದೂಗಳು ರಾಷ್ಟ್ರ ಪುನರ್​ನಿರ್ವಣಕ್ಕೆ ಕೈಜೋಡಿಸುವಂತೆ ಮಾಡಿಬಿಟ್ಟರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮಮತಾಗೆ ಕೃತಜ್ಞತೆ ಸಲ್ಲಿಸಲೇಬೇಕು.

ಆದರೆ ಈ ಘಟನೆಯ ಅವಲೋಕನ ಮಾಡುತ್ತ ಒಂದಷ್ಟು ವಿಚಾರಗಳನ್ನು ನಾವು ರ್ಚಚಿಸಲೇಬೇಕಿದೆ. ಜೈಶ್ರೀರಾಮ್ ಘೊಷಣೆಯನ್ನು ಮಮತಾ ಕೋಮುವಾದಿ ಎನ್ನುವುದಕ್ಕೂ, ಅದನ್ನು ಈ ರೀತಿಯ ಸಭೆಗಳಲ್ಲಿ ಉಚ್ಚರಿಸಬಾರದು ಎಂದು ಹೇಳಿದ್ದಕ್ಕೂ, ಅವರ ಮಾತುಗಳನ್ನು ಸಮರ್ಥಿಸಿಕೊಳ್ಳುವ ಬುದ್ಧಿಜೀವಿ ಪತ್ರಕರ್ತ ವರ್ಗಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳಲೇಬೇಕಲ್ಲ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ನಾಯಕರಿಗೆ ಹಿಂದೂ-ಮುಸ್ಲಿಂ ಏಕತೆಯ ಭೂತವೊಂದು ಸವಾರಿಯಾಗಿಬಿಟ್ಟಿತ್ತು. ಹಿಂದೂ ತಲೆಬಾಗಿಯಾದರೂ ಮುಸಲ್ಮಾನನ ಗೆಳೆತನ ಬಯಸಬೇಕೆಂಬುದು ನಾಯಕರುಗಳ ವಾದ. ಅದಕ್ಕೆ ಕಾಂಗ್ರೆಸ್ ಅಧಿವೇಶನದಲ್ಲಿ ಯಾವ ಮುಸಲ್ಮಾನ ಅಭಿಪ್ರಾಯ ಮಂಡಿಸಲೆಂದು ನಿಂತರೂ ಉಳಿದೆಲ್ಲ ಸದಸ್ಯರು ಉಘೕ ಉಘೕ ಎನ್ನುತ್ತ ಆತನಿಗೆ ಜೈಕಾರ ಹಾಕಬೇಕಿತ್ತು. ಕೆಲವೊಮ್ಮೆಯಂತೂ ಆತ ನಿಂತೊಡನೆ ಅಲ್ಲಾ ಹೊ ಅಕ್ಬರ್ ಎಂಬ ಘೊಷಣೆಯನ್ನೂ ಮೊಳಗಿಸಬೇಕಾಗುತ್ತಿತ್ತು. ಆದರೆ ಅಂದು ಅದು ಕೋಮುವಾದಿ ಎನಿಸಿರಲಿಲ್ಲ. ರಾಜಕೀಯ ಸಭೆಯೊಂದರಲ್ಲಿ ಒಂದು ಮತವನ್ನು ಉನ್ನತೀಕರಿಸುವ ಈ ಘೊಷಣೆಗಳು ಕೂಡದು ಎಂದು ಯಾರೂ ಹೇಳಿರಲಿಲ್ಲ. ಮುಸಲ್ಮಾನರಿಗೆ ಮಾತನಾಡಲು ಹೆದರಿಕೆಯಾಗುತ್ತದೆ, ಹೀಗಾಗಿ ಈ ಘೊಷಣೆಗಳ ಮೂಲಕ ಅವರಲ್ಲಿ ಧೈರ್ಯ ತುಂಬಬೇಕು ಎಂಬುದು ಅಂದಿನ ಕಾಂಗ್ರೆಸ್ ನಾಯಕರುಗಳ ವಾದ. ಹಿಂದೂಗಳ ಮನೆಗಳನ್ನು ಲೂಟಿಗೈಯ್ಯುವಾಗ ಅವರಿಗೆ ಹೆದರಿಕೆ ಆಗುವುದಿಲ್ಲ! ಹಿಂದೂವಾಗಿರುವುದಕ್ಕಾಗಿಯೇ ತೆರಿಗೆ ಕಟ್ಟಬೇಕಾದ ಸ್ಥಿತಿ ನಿರ್ಮಾಣ ಮಾಡಿದ್ದರಲ್ಲ, ಅಂದು ಜೊತೆಗಾರ ಹಿಂದೂಗಳ ತಲೆಗಂದಾಯದಲ್ಲಿ ತಾನು ಊಟ ಮಾಡುತ್ತಿದ್ದೇನೆ ಎಂಬ ನೋವೂ ಅವರಿಗಿರಲಿಲ್ಲ. ಯಾರ ಬರ್ಬರ ಆಕ್ರಮಣದ ಕಾರಣಕ್ಕಾಗಿ ಈ ದೇಶದಲ್ಲಿ ಅನಿವಾರ್ಯ ಬಾಲ್ಯವಿವಾಹಗಳು ಆರಂಭವಾದವೋ, ಯಾರ ದಾಳಿಯನ್ನು ಊಹಿಸಿಕೊಂಡೇ ಅಸಂಖ್ಯ ಹೆಣ್ಣುಮಕ್ಕಳು ಜೀವಹರಣ ಮಾಡಿಕೊಳ್ಳಲು ಬೆಂಕಿಗೆ ಧುಮುಕಿದರೋ, ಯಾರ ಕ್ರೌರ್ಯದ ಕಲ್ಪನೆ ಮಾತ್ರದಿಂದಲೇ ಗಂಡನ ಚಿತೆಯೊಂದಿಗೆ ಹೆಣ್ಣುಮಕ್ಕಳು ಜೀವ ಅಂತ್ಯಗೊಳಿಸಿಕೊಂಡರೋ, ಯಾರ ದುಷ್ಟತನದಿಂದಾಗಿ ದೇವಾಲಯಗಳು ಧ್ವಂಸಗೊಂಡು, ದೇವರ ಮೂರ್ತಿಗಳು ಬರಿಯ ಕಲ್ಲುಗಳಾಗಿ ರಾಜರ ಅರಮನೆಯ ಮೆಟ್ಟಿಲುಗಳಾದವೋ, ಯಾರು ಪಕ್ಕದ ಮನೆಯವರು ತಮಗೆ ಸಹಕಾರಿಗಳಾಗಿದ್ದರು ಎಂಬುದನ್ನು ಮರೆತು ದಂಗೆಯ ಸಂದರ್ಭದಲ್ಲಿ ಬರ್ಬರವಾಗಿ ನಡಕೊಂಡರೋ ಅವರಿಗೆ ನಾವು ಧೈರ್ಯ ತುಂಬಬೇಕಿತ್ತಂತೆ, ಶಭಾಷ್!

ಹೋಗಲಿ, ನಾವೆಲ್ಲರೂ ಪ್ರತಿನಿತ್ಯ ಭಜಿಸುವ ರಾಮ್ುನ್ ‘ರಘುಪತಿ ರಾಘವ ರಾಜಾರಾಂ’ ಅನ್ನು ಬದಲಾಯಿಸಿ ‘ಈಶ್ವರ್ ಅಲ್ಲಾಹ್ ತೇರೇನಾಮ್ ಎಂಬ ಸಾಲನ್ನು ಸೇರಿಸಲಾಯ್ತಲ್ಲ, ಅದು ಸರಿಯೋ ತಪ್ಪೋ ಎಂಬುದರ ಬಗ್ಗೆ ಇಂದಿಗೂ ಚರ್ಚೆ ನಡೆಯುವುದಿಲ್ಲವಲ್ಲ. ಯಾರಿಗಾಗಿ ರಾಮ್ುನ್ ಅನ್ನೇ ಬದಲಾಯಿಸಲಾಯ್ತೋ ಅವರು ಅದನ್ನು ಎಂದಿಗೂ ಹಾಡಲೇ ಇಲ್ಲ, ಬದಲಿಗೆ ಯಾರಿಗೆ ಈ ಎಲ್ಲ ವಿಚಾರಗಳ ಸಮಸ್ಯೆಯೇ ಇರಲಿಲ್ಲವೋ ಅವರು ಮಾತ್ರ ಇಂದಿಗೂ ಅದನ್ನೇ ಮೂಲ ರಾಮ್ುನ್ ಎಂಬಂತೆ ಹಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ಮೇಲಾದರೂ ಅದನ್ನು ಮೂಲಸ್ಥಿತಿಗೆ ತರಬೇಕೆಂದು ನಮಗೆ ಅನ್ನಿಸಲೇ ಇಲ್ಲವಲ್ಲ. ಈಗೇನು ರಘುಪತಿ ರಾಘವ ರಾಜಾರಾಂ ಹಾಡಿದರೆ ನಾವು ವೇದಿಕೆಯಿಂದ ನಿರ್ಗಮಿಸಬೇಕೇನು?

ಮಮತಾ ಬ್ಯಾನರ್ಜಿ ಎತ್ತಿದ ಪ್ರಶ್ನೆಗಳಿಗೆ ಅನೇಕರು ಉತ್ತರಿಸಲು ತಡಕಾಡುತ್ತಿದ್ದಾರೆ. ಸರ್ಕಾರಿ ಸಭೆ-ಸಮಾರಂಭಗಳಲ್ಲಿ ರಾಜಕೀಯವನ್ನು ತರಬಾರದು ಎಂದು ಹೇಳುವ ಮೂಲಕ ಅವರು ಜೇನಿನಗೂಡಿಗೇ ಕೈಹಾಕಿಬಿಟ್ಟಿದ್ದಾರೆ. ಪ್ರಾಮಾಣಿಕವಾಗಿ ಹೇಳಿ, ಎಷ್ಟು ಸರ್ಕಾರಿ ಶಾಲೆಗಳಲ್ಲಿ ನೆಹರು, ಇಂದಿರಾ, ರಾಜೀವ್​ರ ಫೋಟೋ ರಾರಾಜಿಸುತ್ತಿದೆ ಅಂತ. ಗಾಂಧೀಜಿ ಚಿತ್ರ ಶಾಲೆಯಲ್ಲಿರುವುದನ್ನು ಒಪ್ಪಿಕೊಳ್ಳಬಹುದು. ಪಕ್ಕಾ ರಾಜಕಾರಣಿಯೇ ಆಗಿದ್ದ ನೆಹರು ಏಕೆ? ವಿವೇಕಾನಂದರ ಜಯಂತಿಯ ಆಚರಣೆ ಶಾಲೆಗಳಲ್ಲಿ ನಡೆಯುವುದನ್ನು ಒಪ್ಪಿಕೊಳ್ಳಬಹುದು, ನೆಹರು ಹುಟ್ಟಿದಹಬ್ಬ ಏಕೆ? ಅದು ರಾಜಕಾರಣವಲ್ಲವೇನು? ಕಾಂಗ್ರೆಸ್ಸಿಗೆ ಭವಿಷ್ಯದ ಪೀಳಿಗೆಯ ಮನಸ್ಸಿನೊಳಗೆ ನೇರಸ್ಥಾನ ಮಾಡಿಕೊಟ್ಟು ಮತ ಹಾಕಿಸುವ ಹುನ್ನಾರವಲ್ಲವೇನು ಅದು. ಇಂದಿರಾ ಗಾಂಧಿಯ ಯಾವ ಕೊಡುಗೆಗಾಗಿ ಅವರ ಚಿತ್ರ ಎಲ್ಲ ಶಾಲಾ-ಕಾಲೇಜುಗಳಲ್ಲಿ ಇರಬೇಕು? ಅನೇಕ ಶಾಲೆಗಳಲ್ಲಿ ಇಂದಿಗೂ ರಾಜೀವ್ ಗಾಂಧಿಯವರ ಚಿತ್ರಪಟವನ್ನು ನೋಡುವಾಗಲಂತೂ ಪಿಚ್ಚೆನಿಸುತ್ತದೆ. ಅಕ್ಷರಶಃ ಶಾಲೆಗಳಲ್ಲಿ ಮಕ್ಕಳ ಬುದ್ಧಿಗೆ ಮಸಿ ಬಳಿಯುವ ಪ್ರಯತ್ನಗಳೇ ಇವು. ಮೋದಿ ಜಾಗದಲ್ಲಿ ಅಕಸ್ಮಾತ್ ರಾಹುಲ್ ಪ್ರಧಾನಿಯಾಗಿಬಿಟ್ಟಿದ್ದರೆ ನಮ್ಮ ಶಾಲಾ-ಕಾಲೇಜುಗಳು ರಾಹುಲ್ ಚಿತ್ರವನ್ನು ಹಾಕಿ ಸಂಭ್ರಮಿಸಿಬಿಡುತ್ತಿದ್ದವು. ಅಷ್ಟೇ ಅಲ್ಲ, ಅವರ ಹುಟ್ಟಿದಹಬ್ಬವನ್ನೂ ಶಾಲೆಗಳಲ್ಲಿ ಆಚರಿಸಬೇಕಾದ ಸ್ಥಿತಿಯನ್ನು ಊಹಿಸಿಕೊಳ್ಳಿ! ಅಷ್ಟರಿಂದಂತೂ ಬಚಾವಾಗಿದ್ದೇವೆ. ರಾಜಕೀಯವನ್ನು ಎಲ್ಲ ಕ್ಷೇತ್ರಗಳಲ್ಲಿ ಬೆರೆಸುವುದನ್ನು ರೂಢಿ ಮಾಡಿದ್ದೇ ಕಾಂಗ್ರೆಸ್ಸು. ಅದಕ್ಕೇ ಗಾಂಧೀಜಿ ಆರಂಭದಲ್ಲೇ ಹೇಳಿದ್ದು ‘ಕಾಂಗ್ರೆಸ್ಸನ್ನು ವಿಸರ್ಜಿಸಿ, ಸ್ವಾತಂತ್ರ್ಯದ ಹೊತ್ತಲ್ಲಿ ಹೊಸದೊಂದು ಪಾರ್ಟಿಯ ರಚನೆ ಮಾಡಿ ಅಧಿಕಾರವನ್ನು ಪಡೆಯಬೇಕು’ ಅಂತ. ಆದರೆ ಅಷ್ಟು ಧೈರ್ಯ, ಸಾಹಸಗಳು ನೆಹರು ಪಾಳಯದಲ್ಲಿರಲಿಲ್ಲ. ಅವರು ಎ.ಒ.ಹ್ಯೂಮ್ ಕಟ್ಟಿದ, ತಿಲಕರೆಲ್ಲ ಬೆಳೆಸಿದ, ಗಾಂಧೀಜಿ ಸುಂದರ ರೂಪಕೊಟ್ಟ ಅದೇ ಕಾಂಗ್ರೆಸ್ಸಿಗೆ ಜೋತುಬಿದ್ದರು. ಅಧಿಕಾರವನ್ನು ಪಡೆದುಕೊಂಡರು ಮತ್ತು ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಪಕ್ಷ ನಮ್ಮದು ಎಂದು ಅಸಹ್ಯವಾಗಿ ಹೇಳಿಕೊಳ್ಳುತ್ತಲೇ ನಡೆದರು. ಇಂದಿಗೂ ಹೇಳುತ್ತಿದ್ದಾರೆ. ನೂರಾರು ವರ್ಷಗಳ ಹಿಂದಿನ ಹೋರಾಟವನ್ನು ತಮ್ಮ ಖಾತೆಗೆ ತುಂಬಿಕೊಳ್ಳುವ ಅವರು ನೆಹರು ತಪು್ಪಗಳನ್ನು ಮಾತ್ರ ಸಮಾಜ ಮರೆತುಬಿಡಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಈ ಸ್ವಾತಂತ್ರ್ಯ ಹೋರಾಟದ ಕಥನಗಳನ್ನಿರಿಸಿಕೊಂಡೇ ಪಠ್ಯಪುಸ್ತಕದಲ್ಲಿ ಸ್ಥಾನವನ್ನೂ ಪಡೆದು ಕಾಂಗ್ರೆಸ್ಸಿನ ಪರವಾಗಿ ಪರೋಕ್ಷ ಪ್ರಚಾರ ಮಾಡುತ್ತಾರೆ. ಇವರ ರಾಜಕೀಯದ ಕುರಿತಂತೆ ಎಷ್ಟು ಬರೆದರೂ ಕಡಿಮೆಯೇ. ಅಧಿಕಾರದಲ್ಲಿ ಇರುವಾಗಲೇ ಕಾಂಗ್ರೆಸ್ಸು ತನ್ನ ನಾಯಕರುಗಳ ಹೆಸರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರವೇ ನೆಹರು, ಇಂದಿರಾ, ರಾಜೀವ್​ರ ಹೆಸರಲ್ಲಿ 12 ಯೋಜನೆಗಳನ್ನು ತಂದಿದೆ. ಅದರಲ್ಲಿ ಇಂದಿರಾ ಆವಾಸ್ ಯೋಜನೆ ಮತ್ತು ವಿಕಾಸ ಪತ್ರಗಳು ಬಡ ಮತ್ತು ಮಧ್ಯಮವರ್ಗವನ್ನು ಮುಟ್ಟುವಂಥವು ಮತ್ತು ಸದಾ ಅವರ ಕೊಡುಗೆಯನ್ನು ನೆನಪಿಸುವಂಥವು. ಜನರಿಗೆ ಉದ್ಯೋಗ ಕೊಡುವ ರೋಜ್​ಗಾರ್ ಯೋಜನೆಗೆ ಅವರು ಕೊಟ್ಟಿರುವುದು ನೆಹರೂ ಹೆಸರು. ಇದನ್ನುಳಿದು ರಾಜ್ಯಗಳ ವಿಚಾರಕ್ಕೆ ಬರುವುದಾದರೆ 50ಕ್ಕೂ ಹೆಚ್ಚು ರಾಜ್ಯ ಸರ್ಕಾರದ ಯೋಜನೆಗಳು ಈ ಪರಿವಾರದ ಹೆಸರಿನಲ್ಲೇ ಇವೆ. ಹಳ್ಳಿಗಳಿಗೆ, ಸ್ತ್ರೀಯರಿಗೆ, ತರುಣರಿಗೆ, ವಿಭಿನ್ನ ಕ್ಷೇತ್ರಗಳಲ್ಲಿ ಇವರ ಹೆಸರಿನ ಯೋಜನೆಗಳು ಚಾಲ್ತಿಯಲ್ಲಿವೆ.

ಅಚ್ಚರಿಯೇನು ಗೊತ್ತೇ? ಒಂದಾದರೂ ಆಟದಲ್ಲಿ ಪ್ರಾವೀಣ್ಯ ತೋರದಿದ್ದ ಈ ಪರಿವಾರದವರ ಹೆಸರಿನಲ್ಲಿ 28 ಕ್ರೀಡಾಕೂಟಗಳು, ಟ್ರೋಫಿಗಳು ಇವೆ. ರಾಜೀವ್ ಗಾಂಧಿ ಹೆಸರಿನಲ್ಲಿ ಖೇಲ್​ರತ್ನ ಏಕಿದೆ ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ! ಏಪೋರ್ಟ್​ಗಳು, ಯುನಿವರ್ಸಿಟಿಗಳು ಎಲ್ಲದಕ್ಕೂ ಈ ಪರಿವಾರದವರ ಹೆಸರುಗಳೇ, ಇದು ರಾಜಕೀಯವಲ್ಲವೇನು? ಹಣ ಸರ್ಕಾರದ್ದು, ಜಾರಿಗೊಳಿಸಲು ಕೆಲಸ ಮಾಡುವವರು ಸರ್ಕಾರದ ಕಾರಕೂನರು, ಆದರೆ ಲಾಭವನ್ನುಣ್ಣುವುದು ಮಾತ್ರ ಒಂದೇ ಪರಿವಾರ!

ಕಾಂಗ್ರೆಸ್ಸಿಗರ ತಾಳ್ಮೆಯನ್ನು ಮೆಚ್ಚಬೇಕಾದ್ದೇ. ಇಷ್ಟು ವರ್ಷಗಳ ಕಾಲ ಒಂದೇ ಪರಿವಾರ ಹೇಳಿದಂತೆ ಕೇಳುತ್ತ, ‘ಮೇರಾ ನಂಬರ್ ಕಬ್ ಆಯೇಗಾ’ ಎಂದು ಕಾಯುತ್ತಲೇ ಕುಳಿತಿದ್ದಾರಲ್ಲ, ಅವರ ಮಾನಸಿಕ ಸ್ಥಿರತೆಗೆ ಉಘೕ ಎನ್ನಲೇಬೇಕು. ಆದರೆ ಪ್ರಶ್ನೆ ಇರೋದು ಮತ್ತೆ ಮಮತಾ ಬ್ಯಾನರ್ಜಿಯ ಮಾನಸಿಕ ಗೊಂದಲಗಳದ್ದೇ. ಸಾಮಾನ್ಯ ಜನ ಶ್ರೀರಾಮನಿಗೆ ಜೈಕಾರ ಹೇಳಿದ್ದನ್ನೇ ರಾಜಕೀಯ ಎನ್ನುವ ಅವರು ಸರ್ಕಾರಗಳು ಒಂದು ಪರಿವಾರಕ್ಕೆ ನಿರಂತರವಾಗಿ ಜೈಕಾರ ಹಾಕುತ್ತ ಬಂದವಲ್ಲ, ಅದರ ಬಗ್ಗೆ ಮುಗುಮ್ಮಾಗಿದ್ದಾರಲ್ಲ. ಬಂಗಾಳದ ಚುನಾವಣೆಗಳಲ್ಲಿ ಉತ್ತರ ದೊರಕಬಹುದೇನೋ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net