

ಕೈ ಕೊಡುವುದು ಎಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಜೀವನದಲ್ಲಿ ಒಮ್ಮೆಯಾದರೂ ನಾವು ಇನ್ನೊಬ್ಬರಿಗೆ ಕೈ ಕೊಟ್ಟಿರುತ್ತೇವೆ. ಅಥವಾ ಬೇರೆಯವರು ನಮಗೆ ಕೈ ಕೊಟ್ಟಿರುತ್ತಾರೆ. ಕೈ ಕೊಡು ಎಂಬ ನುಡಿಗಟ್ಟು ನನಗೂ
ಕೆಲವೊಮ್ಮೆ ಟಿವಿಯಲ್ಲಿ ಟಿ-20 ಕ್ರಿಕೆಟ್ ಪಂದ್ಯದ ನಿರ್ಣಾಯಕ ಓವರ್ ನೋಡುತ್ತಿರುವಾಗ ವಿದ್ಯುತ್ ಹೋಗುವುದುಂಟು. ಆಗ ನಮ್ಮ ಬಾಯಿಂದ ‘‘ಛೇ! ಬಡ್ಡಿ ಮಗಂದು, ಕರೆಂಟು ಕೈ ಕೊಡ್ತು’’ ಎನ್ನುವ ಉದ್ಗಾರ ಹೊರಹೊಮ್ಮುತ್ತದೆ. ಪಂದ್ಯ ಮುಗಿಯುವವರೆಗೂ ತಡೆರಹಿತ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ವಿದ್ಯುತ್ ಮಂಡಳಿಯವರು ನಮಗೆ ಆಶ್ವಾಸನೆ ನೀಡಿರುವುದಿಲ್ಲ. ಆದರೂ ನಾವು ಕರೆಂಟು ಕೈ ಕೊಟ್ಟಿತು ಅನ್ನುತ್ತೇವೆ. ಮೈಕು, ಟೆಲಿಫೋನು, ವಾಹನಗಳು, ಮಿಕ್ಸರು, ವಾಶಿಂಗ್ ಮೆಷಿನ್ ಮುಂತಾದ ನಿರ್ಜೀವ ವಸ್ತುಗಳು ಕೂಡಾ ಕೈ ಕೊಡುತ್ತವೆ. ಇಲ್ಲಿ ಕೈ ಕೊಡುವುದೆಂದರೆ ಇದ್ದಕ್ಕಿದ್ದಂತೆ ಹಾಳಾಗುವುದು ಎಂದು ಅರ್ಥ. ಒಟ್ಟಿನಲ್ಲಿ ಕೈ ಕೊಡು ಅನ್ನುವುದಕ್ಕೆ ಒಳ್ಳೆಯ ಅರ್ಥವಿಲ್ಲ. ಆದ್ದರಿಂದ ಹಸ್ತ ಲಾಘವ ಅಥವಾ ಶೇಕ್ ಹ್ಯಾಂಡ್ ಮಾಡುವಾಗ ಕೈ ಕೊಡಿ ಅನ್ನುವುದಕ್ಕಿಂತ ಕೈ ನೀಡಿ ಅನ್ನುವುದೇ ಉತ್ತಮ. ಅದೇನೇ ಇರಲಿ. ಕೈ ಕೊಡು ಎಂಬ ನುಡಿಗಟ್ಟಿನ ವ್ಯಾಖ್ಯಾನವನ್ನು ಇಲ್ಲಿಗೇ ಕೈ ಬಿಟ್ಟು ಜೀವನದಲ್ಲಿ ಯಾರು ಯಾರಿಗೆ ಯಾವಾಗ ಕೈ ಕೊಡುತ್ತಾರೆ ಎಂಬುದನ್ನು ನೋಡೋಣ.
ಮನೆ ಕೆಲಸದವಳು, ಇಸ್ತ್ರಿ ಅಂಗಡಿಯವರು, ದುರಸ್ತಿ ಮಾಡುವವರು, ವಾಹನ ಚಾಲಕರು ಕೈ ಕೊಡುವುದು ತೀರಾ ಸಾಮಾನ್ಯ. ಬೆಂಗಳೂರಿನಲ್ಲಿ ಕಾರ್ಪೆಂಟರು, ಇಲೆಕ್ಟ್ರೀಶಿಯನ್ನು, ಪ್ಲಂಬರು ಹೇಳಿದ ಸಮಯಕ್ಕೆ ಬರುತ್ತಾರೆ ಅಂದರೆ ಯಾರೂ ನಂಬರು! ಕೈ ಕೊಡುವ ಕಲೆ ಕೆಲವು ಸಾಹಿತಿಗಳಿಗೂ ಗೊತ್ತಿದೆ. ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡು ಕೊನೆ ಘಳಿಗೆಯಲ್ಲಿ ಅನಾರೋಗ್ಯ ಅಥವಾ ಇನ್ನಾವುದೋ ಸುಳ್ಳು ಕಾರಣ ಹೇಳಿ ಕೈ ಕೊಡುವ ಸಾಹಿತಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಸಮಾರಂಭಕ್ಕೆ ಒಂದು ವಾರ ಇರುವಾಗ ಮುಖ್ಯ ಅತಿಥಿಗಳಾಗಿ ಬನ್ನಿ ಎಂದು ಯಾರಾದರೂ ನನ್ನನ್ನು ಕರೆದರೆ, ಮೊದಲು ಒಪ್ಪಿಕೊಂಡವರು ಕೈ ಕೊಟ್ಟಿದ್ದಾರೆ ನಾನು ಸ್ಟೆಪ್ನಿ ಎಂಬುದು ಸ್ಪಷ್ಟ. ಸಾಹಿತಿಗಳಿಗೆ ಹೋಲಿಸಿದರೆ ಕಲಾವಿದರು ಕೈ ಕೊಡುವುದು ಕಡಿಮೆ. ಏಕೆಂದರೆ ಅವರು ಮುಂಗಡ ತೆಗೆದುಕೊಂಡಿರುತ್ತಾರೆ. ಕೈ ಕೊಡುವುದು ಇನ್ನೊಬ್ಬರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಬಗೆಯುವ ದ್ರೋಹ. ಆದರೂ ಅದೀಗ ಎಷ್ಟು ಸಾಮಾನ್ಯವಾಗಿದೆ ಎಂದರೆ ಯಾರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅಧಿಕ ಬಡ್ಡಿ ನೀಡುತ್ತೇವೆ ಎಂದು ಜನರನ್ನು ನಂಬಿಸಿ ಠೇವಣಿ ಸಂಗ್ರಹಿಸುವ ಫೈನಾನ್ಸ್ ಕಂಪೆನಿಗಳು, ಸಹಕಾರಿ ಸಂಘಗಳು ಇದ್ದಕ್ಕಿದ್ದಂತೆ ಬಾಗಿಲು ಮುಚ್ಚಿ ಗ್ರಾಹಕರಿಗೆ ಕೈ ಕೊಟ್ಟ ಸುದ್ದಿ ಆಗಾಗ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತದೆ. ಇಂಥ ವಂಚನೆಗಳ ಬಗ್ಗೆ ಜನರು ನಾಲ್ಕು ದಿನ ರೋಷಾವೇಶದಿಂದ ಮಾತಾಡಿ ನಂತರ ತಣ್ಣಗಾಗುತ್ತಾರೆ. ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಹಕರಿಗೆ ಕೈ ಕೊಡುವುದಿಲ್ಲ. ಆದರೆ ಕೆಲವು ಗ್ರಾಹಕರು ಬ್ಯಾಂಕಿಗೆ ಕೈ ಕೊಡುತ್ತಾರೆ.
ನಮ್ಮ ಶಾಸಕರು, ಸಚಿವರು ಕೈ ಕೊಡುವುದರಲ್ಲಿ ಎತ್ತಿದ ಕೈ. ಯಥಾ ರಾಜಾ ತಥಾ ಪ್ರಜಾ ಎಂಬ ಉಕ್ತಿಯಂತೆ ಕೈ ಕೊಡುವ ಜನರು ಹೆಚ್ಚಾಗುತ್ತಿರುವುದಕ್ಕೆ ನಮ್ಮ ನಾಯಕರೇ ಕಾರಣ ಅನ್ನಬಹುದು. ಮತ ಯಾಚಿಸಲು ಬಂದಾಗ ಆಶ್ವಾಸನೆಗಳ ಮಳೆ ಸುರಿಸಿ, ಗೆದ್ದ ಮೇಲೆ ಅವುಗಳನ್ನು ಸಂಪೂರ್ಣ ಮರೆತುಬಿಡುತ್ತಾರೆ. ಅವರ ಪಕ್ಷ ಅಧಿಕಾರಕ್ಕೆ ಬಂದರೆ ಮಠಾಧಿಪತಿಗಳೂ ಸೇರಿದರಂತೆ ವಿವಿಧ ಕಡೆಗಳಿಂದ ಒತ್ತಡ ತಂದು ಸಚಿವರಾಗಲು ಪ್ರಯತ್ನಿಸುತ್ತಾರೆ. ಒಂದು ಬಾರಿ ಮಂತ್ರಿ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರಾದರೆ ಮತ್ತೆ ನಿಶ್ಚಿಂತೆ. ಬೇಕಾದಷ್ಟು ದುಡ್ಡು, ಆಸ್ತಿ ಮಾಡಬಹುದು. ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳು ಘೊಷಿಸುವ ಆಸ್ತಿ ಹೆಚ್ಚುತ್ತಲೇ ಇರುತ್ತದೆ. ಕೆಲವು ಶಾಸಕರು ಮತ್ತು ಸಚಿವರ ಬಳಿ ಅದೆಷ್ಟು ಆಸ್ತಿ ಇರುತ್ತದೆ ಎಂದರೆ ವಿವರ ಸಲ್ಲಿಸಲು ಎಷ್ಟು ಸಮಯ ಕೊಟ್ಟರೂ ಸಾಕಾಗುವುದಿಲ್ಲ. ಐಟಿ, ಇಡಿ ಮುಂತಾದ ಇಲಾಖೆಗಳವರು ಧಾಳಿ ಮಾಡಿದಾಗ ಬಯಲಾಗುವ ರಾಜಕಾರಣಿಗಳ ಸಂಪತ್ತಿನ ಪ್ರಮಾಣ ನೋಡಿ ಜನರು ಬೆರಗಾಗುತ್ತಾರೆ. ಆದರೆ ಅಧಿಕಾರಿಗಳಿಗೆ ಕಾಣುವುದು ಮಂಜುಗಡ್ಡೆಯ ತುದಿ ಮಾತ್ರ.
ಕೋಟಿಗಟ್ಟಲೆ ಆಸ್ತಿಪಾಸ್ತಿ
ನಗದು ಚಿನ್ನ ಬೆಳ್ಳಿ
ಇಷ್ಟೇ ಅಲ್ಲ ಇನ್ನೂ ಇದೆ
ಸ್ವಿಸ್ ಬ್ಯಾಂಕಿನಲ್ಲಿ
ರಾಜಕಾರಣ ಅಂದರೆ
ಹಣ ಸುರಿಯುವ ನಲ್ಲಿ!
ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಯಂತೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಹಣ ಸಂಪಾದಿಸಲು ಸಾಧ್ಯವಿಲ್ಲ. ಹೀಗಾಗಿ ಗೆದ್ದ ನಂತರ ಮತದಾರರಿಗೆ ಕೈ ಕೊಡುವುದು ಅನಿವಾರ್ಯವಾಗುತ್ತದೆ.
ಮತದಾರರಿಗೆ ಕೈ ಕೊಡುವ ನಾಯಕರು ಸಂಪುಟದಲ್ಲಿ ಸ್ಥಾನ ಅಥವಾ ಅವರಿಗೆ ಬೇಕಾದ ಖಾತೆ ಸಿಗದಿದ್ದರೆ ತಮಗೆ ಟಿಕೆಟ್ ನೀಡಿದ ಪಕ್ಷಕ್ಕೇ ಕೈ ಕೊಡುತ್ತಾರೆ. ಪಕ್ಷಾಂತರ ಕಾಯಿದೆಯ ಕಣ್ಣಿಗೆ ಮಣ್ಣೆರಚಲು ಸಾಮೂಹಿಕ ಪಕ್ಷಾಂತರ ನಡೆಯುತ್ತದೆ. ಚುನಾವಣೆಯಲ್ಲಿ ಟಿಕೆಟ್ ಪಡೆಯುವಾಗ ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಅನ್ನುತ್ತಾರೆ. ಮಂತ್ರಿಗಿರಿ ಕೊಡದಿದ್ದರೆ ಪಕ್ಷವನ್ನೇ ತ್ಯಾಗ ಮಾಡಿ ಸರ್ಕಾರವನ್ನು ಬೀಳಿಸುತ್ತಾರೆ. ಹೊಸ ಸರ್ಕಾರದಲ್ಲಿ ಇವರ ತ್ಯಾಗಕ್ಕೆ ಬೆಲೆ ಸಿಗುತ್ತದೆ. ನಾಯಕರು ಮತ ಯಾಚಿಸಲು ಬಂದಾಗ ಜನರು ಅವರಿಗೆ ಆಳೆತ್ತರದ ಹಾರ ಹಾಕಿ ಗೌರವಿಸುತ್ತಾರೆ. ಗಂಧದ ಹಾರ, ಏಲಕ್ಕಿ ಹಾರ, ಹೂವಿನ ಹಾರ, ಸೇಬು ಹಣ್ಣಿನ ಹಾರ ಮುಂತಾದ ತರತರದ ಹಾರ ರಾಜಕಾರಣಿಗಳ ಕೊರಳನ್ನು ಅಲಂಕರಿಸುತ್ತದೆ. ಹಾರ ಹಾಕಿದರೆ ಜನರ ಸಮಸ್ಯೆ ಪರಿಹಾರವಾಗುವುದಿಲ್ಲ. ಆದರೂ ಹಾರ ಹಾಕಲೇಬೇಕು. ಏಕೆ ಗೊತ್ತೆ?
ನಾಯಕರಿಗೆ ಶಾಲು ಬೇಕು
ಪೇಟಾ ಬೇಕು, ಹಾರ ಬೇಕು
ಏಕೆಂದರೆ ಅವರು
ಪಕ್ಷದಿಂದ ಪಕ್ಷಕ್ಕೆ ಹಾರಬೇಕು!
ಇನ್ನು ಕೆಲವೇ ದಿನಗಳಲ್ಲಿ (ಫೆ.14) ಪ್ರೇಮಿಗಳ ದಿನ ಬರುತ್ತದೆ. ಅಂದು ಅನೇಕ ಪ್ರೇಮಿಗಳು ಪರಸ್ಪರ ಪ್ರೀತಿಸುವ, ಮದುವೆಯಾಗುವ ಪ್ರಸ್ತಾಪ ಮಾಡುತ್ತಾರೆ. ಕೆಲವರು ಮದುವೆಗಿಂತ ಮೊದಲು ಪ್ರಸ್ತವನ್ನೂ ಮುಗಿಸುತ್ತಾರೆ. ಆದರೆ ಮುಂದೊಂದು ದಿನ ಪ್ರಿಯಕರ ಇದ್ದಕ್ಕಿದ್ದಂತೆ ಕೈ ಕೊಟ್ಟಾಗ ವ್ಯಾಲೆಂಟೇನ್ಸ್ ಡೆ ಸಂದರ್ಭದಲ್ಲಿ ಆತ ಹೇಳಿದ್ದೆಲ್ಲ ಬುರುಡೆ ಅನ್ನುವುದು ತಿಳಿಯುತ್ತದೆ. ಪ್ರೇಯಸಿ ಪ್ರಿಯಕರನ ಪ್ರೀತಿಯ ಬಲೆಗೆ ಬಿದ್ದ ಪ್ರೆ (ಟ್ಟಛಿಢ) ಆಗುತ್ತಾಳೆ. ಕೈ ಕೊಡಬೇಡ ಎಂದು ನಲ್ಲನ ಬಳಿ ಪ್ರೆ (ಟ್ಟಚಢ) ಮಾಡಿದರೂ ಪ್ರಯೋಜನವಾಗುವುದಿಲ್ಲ.
ಹುಡುಗಿ ಕೇಳಿದಳು- ಗೆಳೆಯಾ
ಪ್ರೀತಿಸಿ ಕೈ ಕೊಡುವೆಯಾ?
ಇದು ಮೋಸ, ಅನ್ಯಾಯ
ಹುಡುಗ ಮರುನುಡಿದ-
ಪ್ರೇಮಪತ್ರದ ಕೊನೆಯಲ್ಲಿ
ಚಿಕ್ಕ ಅಕ್ಷರಗಳಲ್ಲಿ ಬರೆದಿದ್ದೆ
ಷರತ್ತುಗಳು ಅನ್ವಯ!
ಒಂದು ಕಾಲದಲ್ಲಿ ಕೈ ಕೊಡುವುದರಲ್ಲಿ ಮೇಲುಗಳದ್ದೆ ಮೇಲುಗೈ ಆಗಿತ್ತು. ಈಗ ಹುಡುಗಿಯರೂ ಕೈ ಕೊಡುವುದನ್ನು ಕಲಿತಿದ್ದಾರೆ. ಹುಡುಗನಾಗಲೀ ಹುಡುಗಿಯಾಗಲೀ ಪ್ರೀತಿಸುತ್ತೇನೆ ಎಂದು ನಂಬಿಸಿ ಕೈ ಕೊಟ್ಟರೆ, ನಡುನೀರಿನಲ್ಲಿ ಕೈ ಬಿಟ್ರೆ ಅದು ದ್ರೋಹ. ಹೀಗೆ ಮಾಡುವುದಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಛಜಣಡಿಚಿಥಿ ಅನ್ನುತ್ತಾರೆ.
ಮದುವೆಯಾದ ನಂತರವೂ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೈ ಕೊಟ್ಟು ಪರ ಸಂಗ ಮಾಡಿದ ಪ್ರಸಂಗಗಳು ಮಾಧ್ಯಮಗಳಲ್ಲಿ ಆಗಾಗ ಬರುತ್ತವೆ. ಇದಕ್ಕಿಂತ ಮದುವೆಗೆ ಮೊದಲೇ ಕೈ ಕೊಡುವುದು ಎಷ್ಟೋ ವಾಸಿ. ಏಕೆಂದರೆ ಒಂದೋ ಎರಡೋ ಮಕ್ಕಳಾದ ಮೇಲೆ ಪತಿ ಪತ್ನಿಯರು ಒಬ್ಬರಿಗೊಬ್ಬರು ಕೈ ಕೊಟ್ಟು ಬೇರೆಯಾದರೆ ಮುಗ್ಧ ಮಕ್ಕಳು ತ್ರಿಶಂಕುವಾಗುತ್ತಾರೆ. ದಾಂಪತ್ಯದಲ್ಲಿ ಒಬ್ಬರು ಇನ್ನೊಬ್ಬರನ್ನು ವಂಚಿಸಿದ್ದು, ನಂಬಿಕೆಗೆ ದ್ರೋಹ ಬಗೆದದ್ದು ಗೊತ್ತಾದಾಗ ಗಂಡ ಹೆಂಡಿರ ನಡುವೆ ಜಗಳವಾಗುತ್ತದೆ. ಕೊನೆಗೆ ಅದು ಅಂತ್ಯವಾಗುವುದು ಕೊಲೆ ಅಥವಾ ಆತ್ಮ ಹತ್ಯೆಯಲ್ಲಿ. ನಿಜ ಜೀವನದಲ್ಲಿ, ಕತೆ ಕಾದಂಬರಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಇದನ್ನು ನೋಡಿದರೂ ಮರ್ಕಟ ಮನಸ್ಸು ಅವಕಾಶ ಸಿಕ್ಕಿದಾಗ ಸುಮ್ಮನಿರುವುದಿಲ್ಲ.
ಮಡದಿ ಇದ್ದರೆ
ಮನೆಯಲ್ಲೆ ಸಿಗುತ್ತದೆ
ಅಧರದ ಆ ಮಧು
ತವರಿಗೆ ಹೋದರೆ
ಹೊರಗಿನಿಂದ ಆಮದು!
ಸ್ನೇಹಿತರು ಕಷ್ಟದಲ್ಲಿದ್ದಾಗ ಒಬ್ಬರು ಇನ್ನೊಬ್ಬರಿಗೆ ಸಾಲ ಕೊಟ್ಟು ನೆರವಾಗುವುದು ಸಾಮಾನ್ಯ. ಫ್ರೆಂಡ್ ಇನ್ ನೀಡ್ ಈಸ್ ಫ್ರೆಂಡ್ ಇಂಡೀಡ್. ಅವರು ಕೊಡುವ ಸಾಲಕ್ಕೆ ಯಾವುದೇ ಡೀಡ್ ಇರುವುದಿಲ್ಲ. ಹೀಗಾಗಿ ಕೆಲವರು ಗೆಳೆಯರಿಂದ ಪಡೆದ ಸಾಲವನ್ನು ವಾಪಾಸು ಕೊಡುವುದೇ ಇಲ್ಲ. ಇನ್ನು ಕೆಲವರು ಕೊಟ್ಟ ಸಾಲವನ್ನು ವಾಪಾಸು ಕೇಳಿದಾಗ ಸಿಟ್ಟು ಮಾಡಿಕೊಳ್ಳುತ್ತಾರೆ. ಹೀಗಾಗಿ ದುಡ್ಡಿನ ಜೊತೆಗೆ ಅವರ ಸ್ನೇಹವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸ್ನೇಹಿತರಿಂದ ಕೈಕಡ ಪಡೆದು ಕೈ ಕೊಡುವುದು ಕೂಡಾ ನಂಬಿಕೆ ದ್ರೋಹ.
ಮಕ್ಕಳು ಬೆಳೆದು ದೊಡ್ಡವರಾಗಿ ಸಂಪಾದನೆ ಮಾಡುವ ತನಕ ಅವರನ್ನು ಸಾಕಿ ಸಲಹುವವರು ಹೆತ್ತವರು ಅಥವಾ ಪೋಷಕರು. ವೃದ್ಧಾಪ್ಯದಲ್ಲಿ ತಂದೆ ತಾಯಿ ಅಥವಾ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಆದರೆ ಇತ್ತೀಚೆಗೆ ಹೆತ್ತವರಿಗೆ ಕೈ ಕೊಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂದು ]ೕರಾಮಚಂದ್ರ ಪಿತೃ ವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೋದರೆ ಇಂದು ಪುತ್ರ ವಾಕ್ಯ ಪರಿಪಾಲನೆಗಾಗಿ ಹೆತ್ತವರು ವೃದ್ಧಾಶ್ರಮ ಸೇರುತ್ತಿದ್ದಾರೆ!
ಮುಗಿಸುವ ಮುನ್ನ:
ಪ್ರೇಮಿಗಳ ದಿನದಂದು
ಪ್ರೀತಿಯ ಕೊಡುಗೆ ಎಂದು
ನೀಡಿದ ಮುತ್ತಿನ ಸರಕೆ
ಬೆಲೆ ಎಷ್ಟೆಂದು
ಹೇಗೆ ಹೇಳುವುದು?
ಪ್ರೀತಿ ಮಾರಾಟದ ಸರಕೆ?
(ಲೇಖಕರು ಕವಿ ಹಾಗೂ ನಾಟಕಕಾರರು)
ಪ್ರತಿಕ್ರಿಯಿಸಿ: hanigarike@gmail.com