ವಿಜಯವಾಣಿ ವಿಹಾರ: ಟೆಕ್ ಸವಿದ ಸಾರಸ್ವತ ಲೋಕ

vihar 14
Published on

ಸಾಹಿತ್ಯ ಸಂವಾದ, ನಾಟಕ ಅಭ್ಯಾಸ, ಪ್ರದರ್ಶನ, ಪುಸ್ತಕ ಬಿಡುಗಡೆ, ತರಗತಿಗಳಲ್ಲಿ ಮಗ್ನವಾಗಿರುತ್ತಿದ್ದ ಸಾರಸ್ವತ ಲೋಕ, ಕರೊನಾ ಕಾರಣಕ್ಕೆ ಸ್ತಬ್ಧವಾಗಿತ್ತು. ಕರೊನಾ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಅನಿವಾರ್ಯವಾದ ಕಾರಣ ಮೇಲ್ನೋಟಕ್ಕೆ ನಿಷ್ಕ್ರಿಯವಾಗಿ ಕಂಡರೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ‘ವರ್ಚುವಲ್ ಲೋಕ’ದಲ್ಲಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತು. ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರ ಸುದ್ದಿ ಹಾಗೂ ಭಾವಚಿತ್ರವನ್ನು ಮಾಧ್ಯಮಗಳಿಗೆ ಕಳಿಸಲು ಒಂದು ದಿನ ಸಮಯ ತೆಗೆದುಕೊಳ್ಳುತ್ತಿದ್ದ ಆಯೋಜಕರು ಫೇಸ್​ಬುಕ್ ಲೈವ್ ಮಾಡುವ ಮಟ್ಟಕ್ಕೆ ‘ಟೆಕ್ ಸವಿ’ (Tech Savvy) ಆದದ್ದು ಕರೊನಾ ಕಾಲದ ಸ್ಥಿತ್ಯಂತರ.

ಆನ್​ಲೈನ್ ತರಗತಿಗಳು ಮನೆಮಾತು: ಸಂಗೀತ, ಚಿತ್ರಕಲೆ, ಭರತನಾಟ್ಯ ಮುಂತಾದ ಕಲೆಗಳನ್ನು ಕಲಿತವರು 10-15 ಆಸಕ್ತರಿಗೆ ಕಲಿಸುವ ಮೂಲಕ ಕಲಾಪ್ರಸಾರದ ಜತೆಗೆ ಜೀವನ ನಡೆಸಲು ಒಂದಷ್ಟು ಹಣವನ್ನೂ ಗಳಿಸುತ್ತಿದ್ದರು. ಬಹುತೇಕ ಗುರುಶಿಷ್ಯ ಪರಂಪರೆಯಲ್ಲೇ ಈ ತರಗತಿಗಳು ನಡೆಯುತ್ತಿದ್ದವು. ಗುರುವಿನೆದುರು ಭೌತಿಕವಾಗಿ ಕುಳಿತು ತಿದ್ದಿ ತೀಡಿಸಿಕೊಂಡರೇ ಶಿಕ್ಷಣ ಒಲಿಯುವುದು ಎಂಬ ನಂಬಿಕೆ. ಆದರೆ ಭೌತಿಕವಾಗಿ ಒಟ್ಟುಗೂಡುವುದನ್ನೇ ನಿರ್ಬಂಧಿಸಿದ ಕರೊನಾದಿಂದಾಗಿ ಪ್ರಾರಂಭದ ಕೆಲಕಾಲ ಅನೇಕರಿಗೆ ದಿಕ್ಕೇ ತೋಚದಂತಾಯಿತು.

ಸಂಗೀತ ಕ್ಷೇತ್ರದಲ್ಲಿ ಈ ಹಿಂದೆಯೂ ಆನ್​ಲೈನ್ ಸಂಗೀತ ತರಗತಿಗಳು ನಡೆಯುತ್ತಿದ್ದವು. ಆದರೆ ಅವು ವಿದೇಶಗಳಲ್ಲಿ ನೆಲೆಸಿರುವವರಿಗೇ ಹೆಚ್ಚಾಗಿ ಸೀಮಿತವಾಗಿದ್ದವು. ಕರೊನಾ ಲಾಕ್​ಡೌನ್ ಕಾರಣಕ್ಕೆ, ಅಕ್ಕ ಪಕ್ಕದ ರಸ್ತೆಗಳಲ್ಲಿದ್ದವರೂ ಆನ್​ಲೈನ್ ತರಗತಿಯಲ್ಲಿ ಭಾಗವಹಿಸುವಂತಾಯಿತು.

ಕಲಾಸೌರಭ ಫೌಂಡೇಷನ್​ನ ಬೆಂಗಳೂರು ವಿದ್ವಾನ್ ದತ್ತಾತ್ರಿ ಆನ್​ಲೈನ್ ತರಗತಿಗಳಲ್ಲಿ ಹಿಂದಿಗಿಂತಲೂ ಹೆಚ್ಚು ಸಕ್ರಿಯರಾಗಿದ್ದಾರೆ. ‘15-20 ವಿದ್ಯಾರ್ಥಿಗಳು ಆನ್​ಲೈನ್ ತರಗತಿಯಲ್ಲಿ ಭಾಗವಹಿಸುತ್ತಿದ್ದಾರೆ. ವಾರಕ್ಕೆ ಎರಡು ದಿನ ಇದ್ದ ತರಗತಿಗಳು ಈಗ ಮೂರು ನಡೆಯುತ್ತಿವೆ. ವಿದ್ಯಾರ್ಥಿಗಳೂ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಏಕತಾನತೆಗೆ ಒಳಗಾಗುವ ಬದಲಿಗೆ ಸಂಗೀತವನ್ನು ಕಲಿಯುವುದರಿಂದ ಸಕ್ರಿಯರಾಗುತ್ತಾರೆ ಅಂತ ವಿದ್ಯಾರ್ಥಿಗಳ ಪೋಷಕರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಆನ್​ಲೈನ್ ತರಗತಿಗಳಿಂದ ಹೊಸ ದಾರಿಗಳು ತೆರೆದುಕೊಂಡಿವೆ’ ಎನ್ನುತ್ತಾರೆ ದತ್ತಾತ್ರಿ. ಇದೇ ಮಾದರಿಯಲ್ಲಿ ಚಿತ್ರಕಲಾ ತರಗತಿಗಳು, ಭರತನಾಟ್ಯ ತರಗತಿಗಳು ಸಹಜವಾಗಿ ನಡೆದವು. ತಮ್ಮ ನೆಚ್ಚಿನ ಪುಸ್ತಕ ಓದಿ, ಮತ್ತಿಬ್ಬರು ಸ್ನೇಹಿತರಿಗೆ ಟ್ಯಾಗ್ ಮಾಡಿ ಹವ್ಯಾಸ ಮುಂದುವರಿಸುವ ಸರಣಿಯನ್ನು ಫೇಸ್​ಬುಕ್ ಬಳಕೆದಾರರು ನಡೆಸಿದರು.

ಸಹಜವಾಯ್ತು ಆನ್​ಲೈನ್

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಶೇ. 99ರಷ್ಟು ಭೌತಿಕವಾಗಿಯೇ ನಡೆಯುತ್ತಿದ್ದವು. ‘ಟೆಕ್ ಸವಿ’ ಲೇಖಕರು ಮಾತ್ರ ಪ್ರಯೋಗವೆಂಬಂತೆ, ಅನೇಕ ಬಾರಿ ಭೌತಿಕ ಕಾರ್ಯಕ್ರಮ ಆಯೋಜಿಸುವ ಹಣ ಉಳಿಸಲು ಫೇಸ್​ಬುಕ್​ನಲ್ಲಿ ಬಿಡುಗಡೆ ಮಾಡುತ್ತಿದ್ದರು. ಆದರೆ ಕರೊನಾ ಕಾಲದಲ್ಲಿ ಇದೇ ಸಹಜವೆಂಬಂತಾಯಿತು. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 5 ಸಾವಿರ ಪುಸ್ತಕಗಳು ಬಿಡುಗಡೆಯಾಗುತ್ತವೆ. ಈ ಪೈಕಿ ಶೇ. 30-40 ಬೆಂಗಳೂರಿನಲ್ಲೆ ಲೋಕಾರ್ಪಣೆ ಆಗುತ್ತವೆ. ಶನಿವಾರ ಹಾಗೂ ಭಾನುವಾರಗಳಂತೂ ದಿನಕ್ಕೆ 2-3 ಬಿಡುಗಡೆ ಕಾರ್ಯಕ್ರಮಗಳು ಆಯೋಜನೆಯಾಗಿರುತ್ತವೆ. ಲಾಕ್​ಡೌನ್ ಘೊಷಣೆಯಾದ ಕೂಡಲೇ ಸಂಪೂರ್ಣ ಸ್ತಬ್ಧವಾದ ಪುಸ್ತಕ ಜಗತ್ತು ಜೂನ್​ನಲ್ಲಿ ಚೇತರಿಸಿಕೊಂಡಿತು. ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕೃತಿಗಳೇ 2-3 ಮರುಮುದ್ರಣ ಕಂಡಿದ್ದು ಓದುಗರನ್ನು ಹಾಗೂ ಪ್ರಕಾಶಕರನ್ನೂ ಉತ್ತೇಜಿಸಿತು. ತಮ್ಮದೇ ಫೇಸ್​ಬುಕ್ ಪುಟದಲ್ಲಿ ಬಿಡುಗಡೆಗಿಂತಲೂ, ಸಂವಾದ, ಬುಕ್ ಬ್ರಹ್ಮದಂತಹ ಆನ್​ಲೈನ್ ವೇದಿಕೆಗಳ ಮೂಲಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರಿಂದ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದಂತೆ, ವೃತ್ತಿಪರವಾಗಿ, ಸುಂದರವಾಗಿ ಕಾರ್ಯಕ್ರಮಗಳು ನೋಡುಗರನ್ನು ತಲುಪಿದವು. ಸಪ್ನಾ, ನವಕರ್ನಾಟಕ, ರಾಷ್ಟ್ರೆೊತ್ಥಾನ, ಅಮೆಜಾನ್, ಪುಸ್ತಕಲೋಕದಂತಹ ಸಂಸ್ಥೆಗಳ ಆನ್​ಲೈನ್ ಪೋರ್ಟಲ್​ಗಳು ಉತ್ತಮ ಸ್ಪಂದನೆ ಕಂಡವು.

ಲೋಕಾರ್ಪಣೆಗೆ ಮೊದಲೇ ಎರಡನೇ ಮುದ್ರಣ!

ಸ್ವಾತಂತ್ರ್ಯವೀರ ಸಾವರ್ಕರ್ ರಚಿಸಿದ ಕೃತಿಯನ್ನು ‘ಭಾರತದ ಇತಿಹಾಸದ ಆರು ಚಿನ್ನದ ಯುಗಗಳು’ ಎಂದು ಡಾ. ಎಸ್.ಆರ್. ಲೀಲಾ ಅವರು ಕನ್ನಡಕ್ಕೆ ಇತ್ತೀಚೆಗೆ ಅನುವಾದಿಸಿದರು. ಬೃಹತ್ ಗಾತ್ರ ಹಾಗೂ 500 ರೂ. ಮುಖಬೆಲೆಯ ಕೃತಿ, ವರ್ಚುವಲ್ ವೇದಿಕೆಯಲ್ಲಿ ನಡೆಸಿದ ಪ್ರಚಾರದಿಂದಾಗಿ ಬಿಡುಗಡೆಗೂ ಮುನ್ನವೇ ಎರಡನೇ ಮುದ್ರಣಕ್ಕೆ ಹೋಗುವಂತಾಯಿತು.

ಅಕಾಡೆಮಿಗಳೂ ಹಿಂದುಳಿಯಲಿಲ್ಲ...

ಕರೊನಾದಿಂದ ಸ್ತಬ್ಧವಾಗಿದ್ದ ಸಾರಸ್ವತ ಲೋಕದಲ್ಲಿ ಜೀವ ತುಂಬಲು ಸರ್ಕಾರದ ಅಕಾಡೆಮಿಗಳು ಸೃಜನಾತ್ಮಕವಾಗಿ ಸ್ಪಂದಿಸಿದವು. ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಅನೇಕ ವರ್ಚುವಲ್ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ‘ಹೊಸ ಹಾದಿ ಹೊಸ ಹೆಜ್ಜೆ’ ಹೆಸರಿನಲ್ಲಿ ಸರಣಿ ‘ಇ-ಉಪನ್ಯಾಸಗಳನ್ನು’ ಆಯೋಜಿಸಲಾಯಿತು. ಕೇವಲ 3,200 ಇದ್ದ ಯೂಟ್ಯೂಬ್ ಸಬ್​ಸ್ಕ್ರೆ ೖಬರ್​ಗಳ ಸಂಖ್ಯೆ ಈಗ 5 ಸಾವಿರ ದಾಟಿದೆ. ಕಾರ್ಯಕ್ರಮ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ಸ್ಟುಡಿಯೋ ಬಳಸಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಕಂಡು ಉತ್ತೇಜಿತರಾಗಿ, ಧ್ವನಿ, ಬೆಳಕು ವ್ಯವಸ್ಥೆ ಮಾಡಿ ಅಕಾಡೆಮಿಯ ಸ್ಟುಡಿಯೋ ನಿರ್ವಿುಸುವ ನಿರ್ಧಾರ ಮಾಡಲಾಗಿದೆ. ಕರೊನಾ ಮಾನಸಿಕವಾಗಿ ಕುಗ್ಗಿಹೋಗಿರುವ ಕಲಾವಿದರನ್ನು ಸಕ್ರಿಯಗೊಳಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ನಡೆಸಿದ ಮಾತಿನ ಮಂಟಪ ಕಾರ್ಯಕ್ರಮ ಬಹು ಯಶಸ್ವಿಯಾಯಿತು. ಕೆಲವು ಕಾರ್ಯಕ್ರಮಗಳನ್ನು 30 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಅಕಾಡೆಮಿಯಲ್ಲೇ ಆಶ್ಚರ್ಯ ಹುಟ್ಟಿಸಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ ಆನ್​ಲೈನ್ ಕಲಾಶಿಬಿರದಲ್ಲಿ 60 ಕಲಾವಿದರಿಗೆ ಅವಕಾಶ ನೀಡಲಾಯಿತು. ಕಲಾವಿದರು ತಂತಮ್ಮ ಮನೆಗಳಲ್ಲಿ ರಚಿಸಿದ ಕಲಾಕೃತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಯಿತು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜಾಲಗೋಷ್ಠಿ ಹೆಸರಿನಲ್ಲಿ ನಡೆಸಿದ ಕಾರ್ಯಕ್ರಮಗಳು ಸಾಕಷ್ಟು ಮೆಚ್ಚುಗೆ ಪಡೆದವು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಪುಸ್ತಕಗಳನ್ನು ಆನ್​ಲೈನ್ ಮೂಲಕ ಲೋಕಾರ್ಪಣೆ ಮಾಡಿತು. (ಲೇಖನ: ರಮೇಶ್ ದೊಡ್ಡಪುರ, ವಿಜಯವಾಣಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net