

ದೇಶಕ್ಕೆ ಆಗಿನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಎಸ್ಸೆಸ್ಸೆಲ್ಸಿ ಮುಗಿಸಿ ದೆಹಲಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ ಆ ಯುವಕ ಅಕ್ಕನ ಮದುವೆಯಲ್ಲಿ ಒಂದು ಹಾಡು ಹೇಳಿದ್ದ. ಎಂಥ ಕಂಠ, ಎಂಥ ಸೊಗಸು. ಅಲ್ಲಿದ್ದವರೆಲ್ಲ ಮಂತ್ರಮುಗ್ಧರಾಗಿದ್ದರು. ಅದೇ ಮದುವೆಗೆ ಬಂದಿದ್ದ ಮೋತಿಲಾಲ್ ಎಂಬ ನಟ ‘ನೀನು ಇರಬೇಕಾಗಿದ್ದು ಇಲ್ಲಲ್ಲ; ಬಾಲಿವುಡ್ನಲ್ಲಿ. ನನ್ನ ಜತೆ ಬಾ’ ಎಂದು ಮುಂಬೈಗೆ ಕರೆದೊಯ್ದಿದ್ದರು. ಅಲ್ಲಿ ಪಂಡಿತ್ ಜಗನ್ನಾಥ ಪ್ರಸಾದ್ ಅವರ ಬಳಿ ಸಂಗೀತ ಕಲಿಕೆಯೂ ಆರಂಭವಾಗಿತ್ತು. ಮುಂದೆ ಆ ಯುವಕ ಬಾಲಿವುಡ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಗಾಯಕರ ಯಾದಿಯಲ್ಲಿ ಗುರುತಿಸಲ್ಪಟ್ಟ. ಕಿಶೋರ್ಕುಮಾರ್ ಮತ್ತು ಮೊಹಮದ್ ರಫಿ ಅವರಂಥ ಶ್ರೇಷ್ಠ ತಲೆಮಾರಿನ ದಿಗ್ಗಜ ಗಾಯಕರ ಜತೆಜತೆಗೆ ಅವರಿಗೆ ಸರಿಸಮಾನವಾಗಿ ಔನ್ನತ್ಯ ಕಂಡ ಆ ಯುವಕನೇ ಮುಕೇಶ್. ಸಹಸ್ರಮಾನದ ಕಂಠ ಎಂಬ ಹೊಗಳಿಕೆ ಸಂದಾಯವಾಗಿದ್ದು ಇದೇ ಗಾನಗಾರುಡಿಗನಿಗೆ.
ಬಾಲಿವುಡ್ನಲ್ಲಿ ಹಿನ್ನೆಲೆ ಗಾಯಕರಾಗಿ ಮುಕೇಶ್ಗೆ ಮೊದಲ ಬ್ರೇಕ್ ಸಿಕ್ಕಿದ್ದು ಸಹ ಮೋತಿಲಾಲ್ ಮೂಲಕವೇ. 1945ರಲ್ಲಿ ‘ಪೆಹ್ಲಿ ನಜರ್’ ಚಿತ್ರದಲ್ಲಿ ‘ದಿಲ್ ಜಲ್ತಾ ಹೆ ತೊ ಜಲ್ನೇ ದೇ’ ಗೀತೆಯನ್ನು ಮುಕೇಶ್ ಹಾಡಿದ್ದರು. ಅನಿಲ್ ಬಿಸ್ವಾಸ್ ಸಂಗೀತ ಸಂಯೋಜಿಸಿ, ಆಹ್ ಸೀತಾಪುರಿ ರಚಿಸಿದ್ದ ಈ ಹಾಡು ಒಂದು ವಿಶೇಷ ಕಾರಣಕ್ಕೆ ಪ್ರಸಿದ್ಧವಾಯಿತು. ಮುಕೇಶ್ಗೆ ಬಾಲ್ಯದಿಂದಲೂ ದಿಗ್ಗಜ ಗಾಯಕ ಕೆ.ಎಲ್. ಸೈಗಲ್ ಎಂದರೆ ಇಷ್ಟ. ಸೈಗಲ್ರನ್ನೇ ಅನುಕರಿಸಿ ಹಾಡುತ್ತಿದ್ದರು. ‘ದಿಲ್ ಜಲ್ತಾ ಹೆ ತೋ ಜಲ್ನೇ ದೇ’ ಹಾಡನ್ನು ಸೈಗಲ್ ಕೇಳಿಸಿಕೊಂಡು ‘ಅರೇ, ನನ್ನದೇ ಕಂಠ. ಆದರೆ, ಯಾವಾಗ ಹಾಡಿದ್ದೆಂದು ನನಗೇ ನೆನಪಿಲ್ಲವಲ್ಲ’ ಎಂದು ಅಚ್ಚರಿ ಪಟ್ಟಿದ್ದರು. ಕೊನೆಗೆ ಅವರಿಗೆ ಇದು ಹೊಸ ಗಾಯಕ ಮುಕೇಶ್ ಹಾಡಿದ್ದೆಂದು ತಿಳಿಯಿತು. ಸಿನಿಗಾಯನದ ಆರಂಭಿಕ ವರ್ಷದಲ್ಲಿ ಸೈಗಲ್ರ ಪಡಿಯಚ್ಚಿನಂತೆ ಹಾಡುತ್ತಿದ್ದ ಮುಕೇಶ್ ಬರುಬರುತ್ತ ಸಂಗೀತ ನಿರ್ದೇಶಕ ನೌಷಾದ್ರ ನೆರವಿನಿಂದ ತಮ್ಮದೇ ಶೈಲಿ ರೂಢಿಸಿಕೊಂಡರು.
ಪ್ರಾರಂಭದಲ್ಲಿ ಮುಕೇಶ್ಗೆ ದಿಲೀಪ್ಕುಮಾರ್ ಚಿತ್ರಗಳಲ್ಲಿ ಹೆಚ್ಚು ಅವಕಾಶ ದೊರೆಯುತ್ತಿತ್ತು. ರಾಜ್ ಕಪೂರ್ ಚಿತ್ರಗಳಲ್ಲಿ ಮೊಹಮ್ಮದ್ ರಫಿ ಹೆಚ್ಚಾಗಿ ಹಾಡುತ್ತಿದ್ದರು. ದಿಲೀಪ್ಕುಮಾರ್ಗಾಗಿ ಮುಕೇಶ್ ‘ಜೀವನ್ ಸಪ್ನಾ ತೂಟ್ ಗಯಾ’, ‘ಯೇ ಮೇರಾ ದೀವಾನಾಪನ್ ಹೇ’, ‘ಸುಹಾನಾ ಸಫರ್’, ‘ದಿಲ್ ತಡಪ್ ತಡಪ್ ಕೆ’ ಮೊದಲಾದ ಅದ್ಭುತಗೀತೆಗಳನ್ನು ಹಾಡಿದ್ದರು. ಕಾಲಕ್ರಮೇಣ ದಿಲೀಪ್ಕುಮಾರ್ ತಮ್ಮ ಚಿತ್ರಗಳಿಗೆ ಗಾಯಕರಾಗಿ ಮೊಹಮದ್ ರಫಿ ಅವರನ್ನು ಹೆಚ್ಚು ಇಷ್ಟ ಪಟ್ಟರು. ರಾಜ್ ಕಪೂರ್ ಚಿತ್ರಗಳಲ್ಲಿ ಮುಕೇಶ್ ಕಾಯಂ ಆದರು. ಇದೊಂದು ಅದ್ಭುತವೇ ಆಗಿತ್ತು. ರಾಜ್ ಕಪೂರ್ ಮತ್ತು ಮುಕೇಶ್ ಬಾಲಿವುಡ್ನ ಗಂಧರ್ವಜೋಡಿಯೇ ಆಗಿಹೋದರು. ರಾಜ್ ಕಪೂರ್ ಶರೀರ, ಮುಕೇಶ್ ಶಾರೀರ ಜನ್ಮಾಂತರದ ಅನುಬಂಧವೆಂಬಂತೆ ಇಬ್ಬರೂ ಹೊಂದಿಕೊಂಡಿದ್ದರು. ಸೂಪರ್ಹಿಟ್ ಹಾಡುಗಳು ಒಂದೇ ಎರಡೇ.
ಮುಕೇಶ್ ಮೊದಲ ಬಾರಿ ರಾಜ್ ಕಪೂರ್ ಚಿತ್ರಕ್ಕಾಗಿ ಹಾಡಿದ್ದು 1949ರಲ್ಲಿ ‘ಆಗ್’ ಚಿತ್ರದಲ್ಲಿ. 1950ರಲ್ಲಿ ‘ಬರ್ಸಾತ್’ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಶಂಕರ್ ಜೈಕಿಶನ್ ರಂಗಪ್ರವೇಶವಾದಾಗ ಒಂದು ಪರಿಪೂರ್ಣ ಕಾಂಬಿನೇಷನ್ ಸಿದ್ಧವಾಗಿತ್ತು. ಮುಂದಿನ ರಾಜ್ ಕಪೂರ್ ಚಿತ್ರಗಳಿಗೆ ಶಂಕರ್ ಜೈಕಿಶನ್ ಸಂಗೀತ, ಮುಕೇಶ್ ಗಾಯನ ಇರಲೇಬೇಕೆಂಬ ತ್ರಿವೇಣಿಸಂಗಮ ಅದಾಗಿತ್ತು. ಎಂಥೆಂಥ ಹಾಡುಗಳು. ಆ ಕಾಲಕ್ಕೆ ಮಾತ್ರವಲ್ಲ, ಸರ್ವಕಾಲದಲ್ಲೂ ಜನ ನೆನಪಿಸಿಕೊಳ್ಳುವಂಥ ಅಮರಗೀತೆಗಳು ಇವರಿಂದ ಸೃಷ್ಟಿಯಾದವು. ‘ಮೇರಾ ಜೂತಾ ಹೆ ಜಪಾನಿ’, ‘ಆವಾರಾ ಹು’, ‘ಆ ಜಾ ರೇ ಅಬ್ ಮೆರಾ ದಿಲ್’, ‘ಪ್ಯಾರ್ ಹುವಾ ಇಕರಾರ್ ಹುವಾ’, ‘ರುಕ್ ಜಾ ಓ ಜಾನೆವಾಲಿ’, ‘ಕಿಸಿ ಕೆ ಮುಸ್ಕುರಾಹಟೋ ಪೆ ಹೋ ನಿಸಾರ್, ಜೀನಾ ಇಸೀ ಕಾ ನಾಮ್ ಹೈ’, ‘ಜಿಸ್ ದೇಶ್ ಮೆ ಗಂಗಾ ಬೆಹ್ತೀ ಹೇ’, ‘ದೋಸ್ತ್ ದೋಸ್ತ್ ನಾ ರಹಾ’, ‘ದೀವಾನಾ ಮುಜ್ಕೊ ಲೋಗ್ ಕಹತೇ ಹೇ’, ‘ಜಾನೆ ಕಹಾ ಗಯೆ ವೊ ದಿನ್’ ಒಂದೇ ಎರಡೇ... 1976ರಲ್ಲಿ ಮುಕೇಶ್ ತಮ್ಮ 53ನೇ ವಯಸ್ಸಲ್ಲದ ವಯಸ್ಸಿನಲ್ಲಿ ತೀರಿಕೊಂಡಾಗ ‘ನಾನು ನನ್ನ ಧ್ವನಿಯನ್ನೇ ಕಳೆದುಕೊಂಡೆ’ ಎಂದು ರಾಜ್ ಕಪೂರ್ ಪರಿತಪಿಸಿದ್ದರು.
ಮುಕೇಶ್ ಕಂಠವೆಂದರೆ ಕಲ್ಲನ್ನೂ ಕರಗಿಸುವಂಥ ಜೇನುಧ್ವನಿ. ಆ ಮಾಧುರ್ಯ, ಸ್ನಿಗ್ಧತೆ, ಆರ್ದ್ರತೆ... ಅದರಲ್ಲೂ ಮುಕೇಶ್ರ ಶೋಕಗೀತೆಗಳಲ್ಲಂತೂ ಕೇಳುಗರು ತಮ್ಮ ಬದುಕಿನ ನೋವು, ಯಾತನೆ, ವೇದನೆಗಳ ಪ್ರತಿಬಿಂಬ ಕಾಣುತ್ತಿದ್ದರು. ‘ಮೇರಾ ನಾಮ್ ಜೋಕರ್’ ಚಿತ್ರದ ‘ಜೀನಾ ಯಹಾ ಮರ್ನಾ ಯಹಾ, ಇಸ್ಕೆ ಸಿವಾ ಜಾನಾ ಕಹಾ’ ಹಾಡಿರಲಿ, ‘ಜಾನೆ ಕಹಾ ಗಯೆ ವೊ ದಿನ್’ ಗೀತೆಯಿರಲಿ, ಮುಕೇಶ್ ಜೀವ, ಭಾವ ತುಂಬಿ ಹಾಡುತ್ತಿರುವಾಗ ಯಾರಪ್ಪಣೆಗೂ ಕಾಯದೆ ಕಣ್ಣೀರು ಕೆನ್ನೆ ತೋಯಿಸಿಬಿಡುತ್ತಿತ್ತು. ಹಾಗೆ ನೋಡಿದರೆ, ಮುಕೇಶ್ ಕಾಲಘಟ್ಟ ಭಗ್ನಪ್ರೇಮಿಗಳ ಕಾಲ ಎನ್ನುವವರೂ ಇದ್ದಾರೆ. ಆಗಿನ್ನೂ ಸ್ವಾತಂತ್ರ್ಯದ ಬೆಳಕು ಕಂಡಿದ್ದ, ಸಾಂಪ್ರದಾಯಿಕ ಭಾರತದಲ್ಲಿ ಸಫಲ ಪ್ರೇಮಕ್ಕಿಂತ ಭಗ್ನಪ್ರೇಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರೀತಿಯಲ್ಲಿ ಸೋತ ಎಲ್ಲ ಹೃದಯಗಳಿಗೆ ಮುಕೇಶ್ ಧ್ವನಿಯಾಗಿದ್ದರು ಎಂಬ ವಿಶ್ಲೇಷಣೆ ಚಾಲ್ತಿಯಲ್ಲಿತ್ತು.
ಗಾಯಕರಾಗಿ ಶೋಕಗೀತೆಗಳ ಮೂಲಕ ಪ್ರಸಿದ್ಧರಾದರೂ, ನಿಜ ಜೀವನದಲ್ಲಿ ಮುಕೇಶ್ ಹಾಡಿದ್ದು ಪ್ರೇಮರಾಗವನ್ನೇ. ಮುಕೇಶ್ 23ನೇ ವಯಸ್ಸಿನಲ್ಲಿ ಸರಳಾ ತ್ರಿವೇದಿ ರಾಯ್ಚಂದ್ ಎಂಬ ಹದಿನೆಂಟರ ಸುಂದರಿಯನ್ನು ಪ್ರೀತಿಸಿದ್ದರು. ಸರಳಾ ಅಪ್ಪ ರಾಯ್ಚಂದ್ ತ್ರಿವೇದಿ ಆ ಕಾಲದಲ್ಲೇ ಕೋಟ್ಯಧೀಶರಾಗಿದ್ದರು. ಮುಕೇಶ್ ಮುಂಬೈನಲ್ಲಿ ಅನಾಮಿಕರಂತಿದ್ದರು. ಇರುವುದಕ್ಕೆ ಅವರಿಗೊಂದು ಮನೆ ಇರಲಿಲ್ಲ. ನಿಯಮಿತ ಆದಾಯವಿರಲಿಲ್ಲ. ಚಲನಚಿತ್ರಗಳಲ್ಲಿ ಹಾಡುವುದೆಂದರೆ ಅನೈತಿಕ, ಗೌರವಸ್ಥರು ಹಾಡುವುದಿಲ್ಲ ಎಂಬ ಕೀಳರಿಮೆಯಿದ್ದ ಕಾಲಘಟ್ಟವದು. ಹಾಗಾಗಿ ಸರಳಾ ತಂದೆ ಇವರ ಮದುವೆಗೆ ಒಪ್ಪುವುದು ಸಾಧ್ಯವೇ ಇರಲಿಲ್ಲ. ಓಡಿಹೋಗಿ ಮದುವೆ ಆಗುವುದೊಂದೇ ದಾರಿಯಾಗಿತ್ತು. ಮುಕೇಶ್ರ ಅಮೃತ ಕಂಠದಲ್ಲಿ ಜೀವನವನ್ನು ಕಂಡಿದ್ದ ಸರಳಾ ಯಾವುದಕ್ಕೂ ಸಿದ್ಧವಿದ್ದರು. ಅಂತೂ 1946ರ ಜುಲೈ 22ರಂದು ಮುಂಬೈನ ಖಾಂಡಿವಿಲಿಯ ದೇವಸ್ಥಾನವೊಂದರಲ್ಲಿ ಅವರಿಬ್ಬರ ಮದುವೆಯಾಯಿತು. ಈ ಸಂದರ್ಭದಲ್ಲೂ ಮುಕೇಶ್ಗೆ ಬೆನ್ನೆಲುಬಾಗಿ ನಿಂತವರು ಮೋತಿಲಾಲ್. ಆದರೂ, ಕೋಟ್ಯಧಿಪತಿಯ ಮಗಳೊಂದಿಗೆ ಈ ತಿರುಕನ ಮದುವೆಗೆ ಎಷ್ಟು ದಿನದ ಬಾಳುವೆಯೋ ಎಂದು ಆಡಿಕೊಂಡವರು ಬಹಳ. ಆದರೆ, ಮುಕೇಶ್ರ ಪ್ರೀತಿ ಗಟ್ಟಿಯಾಗಿತ್ತು. ಅವರ ದಾಂಪತ್ಯ ಮುಕೇಶ್ ಕೊನೆಯುಸಿರಿನವರೆಗೂ, ಅಂದರೆ 30 ವರ್ಷಗಳ ಬಾಳುವೆ ಕಂಡಿತು. ಅವರ ಐವರು ಮಕ್ಕಳ ಪೈಕಿ ನಿತಿನ್ ಮುಕೇಶ್ ಪ್ರಸಿದ್ಧ ಗಾಯಕ. ಅವರ ಮೊಮ್ಮಗ ನೀಲ್ ನಿತಿನ್ ಮುಕೇಶ್ ಸದ್ಯ ಬಾಲಿವುಡ್ನಲ್ಲಿ ಜನಪ್ರಿಯ ನಟ.
ಮುಕೇಶ್ ಗಾಯಕರಾಗಿ ಲೋಕಪ್ರಸಿದ್ಧರಾದ ಮೇಲೂ ನಟನೆಯ ಒಳಬೇಗುದಿ ಕಾಡುತ್ತಲೇ ಇತ್ತು. ಕೆಲವು ಚಿತ್ರಗಳಲ್ಲಿ ನಟಿಸುತ್ತಲೂ ಇದ್ದರು. ಆದರೆ, ಗಾಯಕರಾಗಿ ಉತ್ತುಂಗದಲ್ಲಿ ಇರುವಾಗ ಮತ್ತೊಮ್ಮೆ ನಾಯಕರಾಗಲು ಹೊರಟಿದ್ದು ಅವರ ವೃತ್ತಿಜೀವನಕ್ಕೆ ಹೊಡೆತ ನೀಡಿತು. 1953ರಲ್ಲಿ ‘ಮಾಶೂಖಾ’ ಮತ್ತು 1956ರಲ್ಲಿ ‘ಅನುರಾಗ್’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರಿಂದ ಅವರಿಗೆ ನಷ್ಟವೇ ಆಯಿತು. ಆರ್ಥಿಕವಾಗಿ ಬಿಕ್ಕಟ್ಟು ಎದುರಾಗಿತ್ತು. ಅನೇಕ ಬಾರಿ ಕುಟುಂಬನಿರ್ವಹಣೆಯೂ ಕಷ್ಟವಾಗುತ್ತಿತ್ತು. ಐವರು ಮಕ್ಕಳ ದೊಡ್ಡ ಕುಟುಂಬ ನಿರ್ವಹಿಸುವಾಗ ಒಂದೊಂದು ತಪ್ಪುಹೆಜ್ಜೆಯೂ ಕಷ್ಟ ಹೆಚ್ಚಿಸುತ್ತಿತ್ತು. ಒಮ್ಮೆಯಂತೂ ಪರೀಕ್ಷಾ ಶುಲ್ಕ ಕಟ್ಟಲಾಗದೆ ಅವರ ಇಬ್ಬರು ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆದರೆ, ಕಷ್ಟ ಬಂದಾಗಲೆಲ್ಲ ಅವರ ಸಿರಿಕಂಠ ಕೈಹಿಡಿದು ಕಾಪಾಡಿತ್ತು.
ದಿಲೀಪ್ಕುಮಾರ್, ರಾಜ್ ಕಪೂರ್ ನಂತರ ಮನೋಜ್ಕುಮಾರ್ ಅವರಿಗೂ ಹೆಚ್ಚಿನ ಗೀತೆಗಳನ್ನು ಮುಕೇಶ್ ಹಾಡಿದರು. ರಾಜ್ ಕಪೂರ್ ಸೋದರ ಶಶಿ ಕಪೂರ್, ಅಮಿತಾಬ್ ಬಚ್ಚನ್ ಚಿತ್ರಗಳಲ್ಲೂ ಮುಕೇಶ್ ಅಷ್ಟೆ ತನ್ಮಯತೆಯಿಂದ ಹಾಡಿದರು. 1974ರಲ್ಲಿ ರಜನಿಗಂಧ ಚಿತ್ರದ ‘ಕಯಿ ಬಾರ್ ಯು ಭಿ ದೇಖಾ ಹೇ’ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಮುಕೇಶ್, ನಾಲ್ಕು ಬಾರಿ ಫಿಲಂಫೇರ್ ಪ್ರಶಸ್ತಿಗೂ ಪಾತ್ರರಾಗಿದ್ದರು. ಅವರ ಕೊನೆಯ ಫಿಲಂಫೇರ್ ಪ್ರಶಸ್ತಿ 1976ರಲ್ಲಿ ಅಮಿತಾಬ್ ಬಚ್ಚನ್ರ ಕಭಿ ಕಭಿ ಚಿತ್ರದ ‘ಕಭಿ ಕಭಿ ಮೇರೆ ದಿಲ್ ಮೇ ಖಯಾಲ್ ಆತಾ ಹೇ’ ಹಾಡಿಗಾಗಿ ಮರಣೋತ್ತರವಾಗಿ ಲಭಿಸಿತು.
1950, 60, 70ರ ದಶಕದಲ್ಲಿ ಬಾಲಿವುಡ್ನ ಹೆಚ್ಚಿನ ಸಂಗೀತ ನಿರ್ದೇಶಕರ ಕಣ್ಮಣಿಯಾಗಿದ್ದ ಮುಕೇಶ್ 1300ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದರು. 1976 ಜುಲೈ 22ರಂದು 53ನೇ ಜನ್ಮದಿನ ಹಾಗೂ 30ನೇ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದ ಮುಕೇಶ್ ಅದಾದ ಮೂರು ದಿನಗಳ ಬಳಿಕ ಮೇರು ಗಾಯಕಿ ಲತಾ ಮಂಗೇಶ್ಕರ್ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಸಂಗೀತಪ್ರವಾಸಕ್ಕೆ ತೆರಳಿದ್ದರು. ಡೆಟ್ರಾಯ್್ಟಲ್ಲಿದ್ದಾಗ ಸಂಭವಿಸಿದ ಭಾರೀ ಹೃದಯಾಘಾತದಿಂದ ಅವರು ಚೇತರಿಸಿಕೊಳ್ಳಲಿಲ್ಲ. ಮತ್ತೆ ತಾಯ್ನಾಡಿಗೆ ಮರಳಿದ್ದು ಅವರ ಪಾರ್ಥಿವಶರೀರ ಮಾತ್ರ. ಅವರು ಬದುಕಿದ್ದಿದ್ದರೆ ಇಂದು (ಜು.22) 97ನೇ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಆದರೇನು? ಸಾವೆನ್ನುವುದು ಶರೀರಕ್ಕೆ ಮಾತ್ರವೇ ಹೊರತು ಶಾರೀರಕ್ಕಲ್ಲ. ಮುಕೇಶ್ ಅಮರಕಂಠದ ಹಾಡುಗಳು ಸರ್ವಕಾಲಕ್ಕೂ ಅಜರಾಮರ.
ಮುಕೇಶ್ ಅಮೆರಿಕಕ್ಕೆ ತೆರಳುವ ಕೆಲವೇ ದಿನ ಮುನ್ನ ‘ಸತ್ಯಂ ಶಿವಂ ಸುಂದರಂ’ ಚಿತ್ರಕ್ಕಾಗಿ ‘ಚಂಚಲ್ ಶೀತಲ್ ನಿರ್ಮಲ್ ಕೋಮಲ್’ ಗೀತೆಯನ್ನು ಹಾಡಿದ್ದರು. ಅದೇ ಅವರ ಕೊನೆಯ ಬಾಲಿವುಡ್ ಹಾಡಾಯಿತು. ಅದಕ್ಕೆ ಮೊದಲು ಅವರು ಹಾಡಿದ್ದ ಕೆಲವು ಚಿತ್ರಗಳು 1980ರ ದಶಕದಲ್ಲೂ ಬಿಡುಗಡೆಗೊಂಡವು.
ಮಾನಾ ಅಪ್ನಿ ಜೇಬ್ ಸೇ ಫಕೀರ್ ಹೇ
ಫಿರ್ ಭಿ ಯಾರೊ ದಿಲ್ ಕೆ ಹಮ್ ಅಮೀರ್ ಹೇ
..ಕಿಸಿ ಕೊ ಹೋ ನ ಹೋ ಹಮೆ ತೊ ಐತಬಾರ್
ಜೀನಾ ಇಸೀ ಕಾ ನಾಮ್ ಹೇ
(ಖಾಲಿ ಕಿಸೆಯ ಫಕೀರ ನಾನಾಗಿರಬಹುದು. ಆದರೆ, ಹೃದಯ ಶ್ರೀಮಂತ. ಯಾರು ನಂಬಲಿ ಬಿಡಲಿ, ಇದೇ ಜೀವನ)
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)