

ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ, ಭೂತಋಣ- ಹೀಗೆ ಐದು ಬಗೆಯ ಋಣಗಳ ಮೋಚನೆಗಾಗಿ ಮಾಡುವ ಮಹತ್ತರವಾದ ಕರ್ತವ್ಯದ ಜವಾಬ್ದಾರಿ ಸಕಲ ಮನುಜರಿಗೆ ಮುಖ್ಯವಾಗಿ ಗೃಹಸ್ಥಾಶ್ರಮಿಗಳಿಗೆ ಇದೆ. ಪಿತೃಋಣದಿಂದ ಮುಕ್ತರಾಗಲು, ಶ್ರದ್ಧೆಯಿಂದ ಮಾಡಬೇಕಾದ ವೈದಿಕ ಕಾರ್ಯಕ್ರಮವೇ ಶ್ರಾದ್ಧ. ಇದಕ್ಕೆ ಪಿಂಡಪ್ರದಾನ ಎಂಬ ಹೆಸರೂ ಇದೆ. ದೇಹ-ಗೇಹಗಳನ್ನು ಕರುಣಿಸಿದ ಪಿತೃದೇವತೆಗಳನ್ನು ಸ್ಮರಿಸುವ ದಿನ. ಶ್ರಾದ್ಧದಿಂದಲೇ ಇವರಿಗೆ ಸಂತೃಪ್ತಿ. ಈ ದಿನದಂದು ಅವರು ಮಾಡುವ ಆಶೀರ್ವಾದ ಅಮೋಘವಾದದ್ದು.
ಪಿತೃದೇವತೆಗಳು ಕೊಡುವ ವರ ಹಾಗೂ ಶಾಪಗಳೆರಡೂ ಅತಿಬಲಾತ್ಮಕವಾಗಿಯೇ ಇರುತ್ತವೆ. ಒಂದು ಹಂತದಲ್ಲಿ
ಭದ್ರಪದವಿಗೆ ಭಾದ್ರಪದವೇ ಶ್ರೇಷ್ಠ: ಮೃತತಿಥಿಯ ದಿನದಂದು ವಾರ್ಷಿಕ ಶ್ರಾದ್ಧವನ್ನು ಆಚರಿಸುವಾಗ ತಂದೆ-ತಾಯಿ, ಅಜ್ಜ, ಮುತ್ತಜ್ಜ, ಅಜ್ಜಿ, ಮುತ್ತಜ್ಜಿ ಇವರಿಗೆಲ್ಲ ಪಿಂಡಪ್ರದಾನವನ್ನು ಮಾಡುತ್ತಾರೆ. ಆದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಅಂದರೆ ಪಿತೃಪಕ್ಷದಲ್ಲಿ ಮಾತ್ರ-ಮೃತರಾದ ಪ್ರತಿಯೊಬ್ಬ ಬಂಧು-ಮಿತ್ರರಿಗೂ ತಿಲ-ಜಲಾಂಜಲಿ ಸಹಿತ ಪಿಂಡಪ್ರದಾನವನ್ನು ಮಾಡಬೇಕು.
ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡಿರುವುದರಿಂದ ಈ ಪಕ್ಷವು ಪಿತೃದೇವತೆಗಳಿಗೆ ಪರ್ವಕಾಲ ಎನಿಸುತ್ತದೆ. ಈ ಸಮಯದಲ್ಲಿ ಸಮಸ್ತ ಪಿತೃಗಳು ಅನ್ನ-ಉದಕ ಆಕಾಂಕ್ಷಿಗಳಾಗಿ ಗಾಳೀರೂಪದಿಂದ ಭೂಲೋಕದ ತಮ್ಮ ವಂಶಜರ ಮನೆಗಳಿಗೆ ಆಗಮಿಸಿ ನೆಲೆಸುತ್ತಾರೆ ಎಂದು ಮಹಾಭಾರತವು ಉಲ್ಲೇಖಿಸಿದೆ.
ಮನೆಯ ಎಲ್ಲ ಸದಸ್ಯರೂ ಭಾಗವಹಿಸಿ ಶ್ರದ್ಧಾನ್ವಿತರಾಗಿ ಮಾಡುವ ಶ್ರಾದ್ಧದ ಆಚರಣೆಯ ದೃಶ್ಯವನ್ನು ಕಂಡು, ‘ಇವರ ಜೀವನ ಸುಭದ್ರವಾಗಲಿ ಭದ್ರಪದವಿ ಪ್ರಾಪ್ತವಾಗಲಿ’ ಎಂದು ಸಂತೋಷದಿಂದ ಹಾರೈಸುತ್ತಾರೆ.
ಮಹಾಲಯದಿಂದ ಆನಂದನಿಲಯದೆಡೆಗೆ: ‘ಅಪರೇ ಪಕ್ಷೇ ಶ್ರಾದ್ಧಂ ಕುರ್ಯಾತ್ ದಿನೇದಿನೇ’
ಭಾದ್ರಪದ ಕೃಷ್ಣಪಕ್ಷದ ಏಕಾದಶಿ ಹಾಗೂ ಘಾತಚತುರ್ದಶಿ ಈ ಎರಡು ದಿನಗಳನ್ನು ಹೊರತು ಉಳಿದ ಎಲ್ಲ ದಿನಗಳಲ್ಲಿಯೂ ಮಹಾಲಯ ಶ್ರಾದ್ಧವನ್ನು ಕಡ್ಡಾಯವಾಗಿ ಆಚರಿಸಬೇಕು. ಸಕಲ ವ್ರತ-ನಿಯಮಗಳಿಗಿಂತ ಹರಿದಿನವಾದ ಏಕಾದಶಿ ಉಪವಾಸ ವ್ರತವು ಸವೋಚ್ಚವಾದದ್ದರಿಂದ ಅಂದು ಮಹಾಲಯ-ಶ್ರಾದ್ಧವನ್ನು ಮಾಡಬಾರದು.
ಸರ್ವಪಿತೃ ಅಮಾವಾಸ್ಯೆಯ ಹಿಂದಿನ ದಿನವು ‘ಘಾತ ಚತುರ್ದಶಿ ತಿಥಿ’ ಎಂದು ಪ್ರಸಿದ್ಧವಾಗಿದೆ. ಆತ್ಮಹತ್ಯೆ, ಕೊಲೆ, ವಾಹನಗಳಿಂದ ಅಪಘಾತ, ಎತ್ತರದಿಂದ ಬೀಳುವಿಕೆ, ವಿಷಪ್ರಾಶನ, ಬೆಂಕಿ, ನೀರು, ವಿದ್ಯುತ್, ಶಸ್ತ್ರಾಯುಧಗಳ ಪ್ರಹಾರ, ಕ್ರೂರಮೃಗಗಳಿಂದ ಆಕ್ರಮಣ ಮೊದಲಾದವುಗಳಿಂದ ಆಘಾತಕಾರಿಯಾದ ಮರಣವನ್ನು, ಅಪಮೃತ್ಯುವನ್ನು ಹೊಂದಿದವರಿಗೆ ಮಾತ್ರ ಮಹಾಲಯವನ್ನು ಮಾಡಲು ಘಾತಚತುರ್ದಶಿ ಯೋಗ್ಯವಾಗಿದೆ. ಆದರೆ ಈ ಅಂಶಗಳಿಂದ ವ್ಯತಿರಿಕ್ತರಾದವರಿಗೆ ಅರ್ಥಾತ್ ಸಹಜ ಮರಣ ಹೊಂದಿದವರಿಗೆ ಈ ದಿನದಂದು ತಿಲ-ಜಲಾಂಜಲಿಗೆ ಮಾತ್ರ ಅವಕಾಶವಿದೆ (ಪತಿ ಇರುವಾಗಲೇ ಮುತೆôದೆಯಾಗಿ ಮೃತಿಯನ್ನು ಹೊಂದಿದ ಸತಿಯ ಶ್ರಾದ್ಧವನ್ನು ಆಚರಿಸುವ ದಿನವೇ ಅವಿಧವಾ ನವಮೀ.) (ಹರಿಪಾದವನ್ನು ಸೇರಿದ ಯತಿಗಳನ್ನು ಸಂಸ್ಮರಿಸುವ ದಿನವನ್ನು ಯತಿದ್ವಾದಶೀ ಎಂದು ಕರೆಯಲಾಗುತ್ತದೆ.) ಇನ್ನುಳಿದ ಹದಿಮೂರು ದಿನಗಳಲ್ಲಿಯೂ ಪಿಂಡಪ್ರದಾನವನ್ನು ಅತ್ಯವಶ್ಯವಾಗಿ ಮಾಡಬೇಕು. ಇದು ಉತ್ತಮಪಕ್ಷವಾಗಿದೆ. ಅಕಸ್ಮಾತ್ ಅನುಕೂಲವಾಗದಿರುವಾಗ ಪಂಚಮೀ, ಷಷ್ಠೀ, ಅಷ್ಟಮೀ, ದಶಮೀ, ಅಮಾವಾಸ್ಯ ಈ ತಿಥಿಪಂಚಕ ಪ್ರಶಸ್ತವಾಗಿದೆ. ಗಯಾಶ್ರಾದ್ಧವನ್ನು ಆಚರಿಸಿದ ಫಲ ಬರುತ್ತದೆ.
ಒಂದುದಿನ ಮಾತ್ರ ಮಹಾಲಯಶ್ರಾದ್ಧವನ್ನು ಮಾಡುವವರು ಪಾಡ್ಯ, ಷಷ್ಠೀ, ಏಕಾದಶಿ ತಿಥಿಗಳು- ಶುಕ್ರವಾರ ಹಾಗೂ ರೋಹಿಣಿ, ರೇವತಿ, ಮಘಾ ನಕ್ಷತ್ರಗಳು ಇರುವ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಮಾಡಬೇಕು. ಆದರೆ ತಿಲತರ್ಪಣವನ್ನು ಮಾತ್ರ ಏಕಾದಶಿಯನ್ನು ಹೊರತುಪಡಿಸಿ ನಿತ್ಯದಲ್ಲಿಯೂ ಕೊಡಬೇಕು. ನಿರ್ಣಯಸಿಂಧುವಿನಲ್ಲಿ ತಿಳಿಸಿದಂತೆ ಕ್ರಮವಾಗಿ ಮೃತರಾದ ತಂದೆ-ತಾಯಿ, ಹೆಂಡತಿ, ಅತ್ತೆ-ಮಾವ, ಮಕ್ಕಳು, ಸಹೋದರರು, ದೊಡ್ಡಪ್ಪ-ಚಿಕ್ಕಪ್ಪ, ವಿದ್ಯಾಗುರುಗಳು, ಕುಲಪುರೋಹಿತರು ಮೊದಲಾದ ವಿದಿತರಾದ ಮೃತವ್ಯಕ್ತಿಗಳಿಗೆ ಪಿಂಡದಾನ, ತರ್ಪಣಾದಿಗಳನ್ನು ಸಲ್ಲಿಸಬೇಕು. ವಿಶಿಷ್ಟವಾದ ಈ ಕವ್ಯಕಾರ್ಯದಿಂದ ಎಲ್ಲ ಹಿರಿಯರು ಆನಂದಮಯನ ನಿಲಯದಲ್ಲಿ ಆನಂದದಿಂದ ವಿಹರಿಸುತ್ತಾರೆ.
ದೇವಲೀಲೆ ಹಾಗೂ ಪಿತೃದೇವತೆಗಳ ದಯೆಯಿಂದ ಪ್ರಿಯವಾದ ಕ್ಷೀರ, ಮೊಸರು, ಘತಭಕ್ಷ್ಯಗಳಿಂದ, ಭೂಯಿಷ್ಠವಾದ ಅನ್ನದಾನ, ದಕ್ಷಿಣಾದಾನದಿಂದ ಬಂದ ಫಲದ ಸುಖಾನುಭೂತಿ ಎಲ್ಲ ಜೀವಾತ್ಮರಿಗೂ ಉಂಟಾಗುತ್ತದೆ. ಅನಾರೋಗ್ಯ, ವೃದ್ಧಾಪ್ಯ ಮುಂತಾದ ಕಾರಣಗಳಿಂದ ಶ್ರಾದ್ಧವನ್ನು ವಿಸõತವಾಗಿ ಮಾಡಲು ಅಸಮರ್ಥರಾದವರು
‘ಆಬ್ರಹ್ಮಸ್ತಂಭಪರ್ಯಂತಂ ದೇವರ್ಷಿ ಪಿತೃಮಾನವಾಃ
ತೃಪ್ಯಂತು ಪಿತರಃ ಸರ್ವೇ ಮಾತೃಮಾತಾಮಹಾದಯಃ |
ಅತೀತಕುಲಕೋಟೀನಾಂ ಸಪ್ತದ್ವೀಪನಿವಾಸಿನಾಮ
ಆಬ್ರಹ್ಮಭುವನಾಲ್ಲೋಕಾತ್ ಇದಮಸ್ತು ತಿಲೋದಕಮ್ ||’
ಎಂದು ಪಠಿಸುತ್ತ ಮೂರು ಆವರ್ತಿ ತಿಲತರ್ಪಣವನ್ನು ಕೊಡಬೇಕು. ಸಕಲ ಜಾತಿ-ವರ್ಣದವರಿಗೂ ಪಿತೃಸಂಸ್ಮರಣೆ ವಿಹಿತವಾಗಿದೆ. ನದಿತೀರ, ತೀರ್ಥಕ್ಷೇತ್ರಗಳಲ್ಲಿ ಅರ್ಪಿಸಿದ ತರ್ಪಣದಿಂದ ಅತಿಶಯವಾದ ಪುಣ್ಯಪ್ರಾಪ್ತಿಯಾಗುತ್ತದೆ. ಮುಖ್ಯವಾಗಿ ಶ್ರಾದ್ಧದೇವನಾದ ಶ್ರೀಜನಾರ್ದನ ರೂಪೀ ಗಯಾಗದಾಧರ ದೇವರ ಒಲುಮೆ ಸಿದ್ಧಿಸುತ್ತದೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)