ತತ್ತ್ವಪದಗಳಿಂದ ಜೀವನದೃಷ್ಟಿ ಕೊಟ್ಟ ಸಮಾನತೆಯ ಹರಿಕಾರರು

Sisunala
Published on

ಸಂತ ಶಿಶುನಾಳ ಶರೀಫರ ದ್ವಿಶತಮಾನೋತ್ಸವದ ಸಮಾರೋಪ ಹಾಗೂ ಕಳಸದ ಗುರು ಗೋವಿಂದ ಭಟ್ಟರ 150ನೇ ಆರಾಧನಾ ಉತ್ಸವದ ಅಂಗವಾಗಿ ವಿಶೇಷ ಲೇಖನ

ಸಹೋದರತ್ವವನ್ನು ಎತ್ತಿ ಹಿಡಿದು, ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು- ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂಥ ‘ಸಮಾನತೆಯ ಹರಿಕಾರರು’. ಇವರಿಬ್ಬರದು ಅಪರೂಪದ ಗುರು-ಶಿಷ್ಯ ಜೋಡಿ.

ಅಂದಿನ ಅವಿಭಾಜ್ಯ ಧಾರವಾಡ ಜಿಲ್ಲೆಯ, ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಶಿಶುನಾಳ ಗ್ರಾಮದ ದೇವಕಾರ ಮನೆತನದ ಇಮಾಮ್ ಹಜರತ್ ಸಾಹೇಬ್ ಹಾಗೂ ಹಜ್ಜೂಮಾ ದಂಪತಿಗೆ, ಪಕ್ಕದ ಹಳ್ಳಿಯಾದ ಹುಲಗೂರಿನ ಸಂತ ಹದಿರೇಶ್ ಖಾದರಿ ವರಪ್ರಸಾದದಿಂದ, 1819 ಜುಲೈ 3ರಂದು ಮಹಮ್ಮದ್ ಶರೀಫರು ಜನಿಸಿದರು. 70 ವರ್ಷಗಳ ಪರಿಪೂರ್ಣ ಆಧ್ಯಾತ್ಮಿಕ ಜೀವನ ನಡೆಸಿ 1889 ಜುಲೈ 3ರಂದು ದೇಹ ತ್ಯಜಿಸಿದರು.

ಶರೀಫರು ಶಿಶುನಾಳದಲ್ಲಿ ಬೆಳೆಯುತ್ತಿರುವಾಗಲೇ ವೇದ, ಪುರಾಣ, ಶಾಸ್ತ್ರ, ರಾಮಾಯಣ, ಮಹಾಭಾರತ, ದೇವಿಪುರಾಣ, ಪ್ರಭುಲಿಂಗ-ಲೀಲೆಯ ಪುಟಗಳನ್ನು, ತಿರುವಿಹಾಕಿ, ಅವುಗಳ ಅಂತರಂಗವನ್ನು ಅರಗಿಸಿಕೊಂಡರು. ಹಾಗೆಯೇ ಮೊಹಮ್ಮದೀಯನಾದ್ದರಿಂದ ಕುರಾನಿನ ಅಧ್ಯಯನ ಮಾಡಿ ‘ಕುರಾಣಾ-ಪುರಾಣ; ನಮಾಜ-ನಮನ; ಫಕೀರ-ಜಂಗಮ; ಅಲ್ಲಾ-ಅಲ್ಲಮ; ಮಸೀದಿ-ಮಂದಿರ, ಎಲ್ಲವೂ ಒಂದೇ, ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು’ ಎಂಬ ಮರ್ಮವನ್ನು ಅರಿತುಕೊಂಡು, ಅಧ್ಯಾತ್ಮದ ಹಸಿವನ್ನು ನೀಗಿಸಲು ಗುರುವನ್ನು ಅರಸುತ್ತಿದ್ದರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ, ಕಳಸ ಗ್ರಾಮದ ಜೋಶಿ ಮನೆತನದ ಸ್ಮಾರ್ತ ಬ್ರಾಹ್ಮಣರಾದ ಗೋವಿಂದಭಟ್ಟರು, ಸುತ್ತಮುತ್ತಲಿನ 14 ಹಳ್ಳಿಗಳಿಗೆ ಜೋಯಿಸರಾಗಿದ್ದು, ಗುಡಿಗೇರಿಯ ಕಲ್ಮೇಶ ದೇವರಗುಡಿಯಲ್ಲಿ (ಅಂದಿನ ಗುಡಿಪುರ) ಪೂಜೆ ಮಾಡುತ್ತಿದ್ದರು. ಇವರು ಹುಟ್ಟಿದ ವಿವರಗಳು ನಿಖರವಾಗಿ ದೊರಕದೆ ಇದ್ದರೂ, ಕ್ರಿ.ಶ. 1800ರಲ್ಲಿ ಹುಟ್ಟಿ 1870ರಲ್ಲಿ ದೇಹ ಬಿಟ್ಟರೆಂಬ ನಂಬಿಕೆ ಇದೆ. ಮಹಾನ್ ತಪಸ್ವಿಯಾದ ಇವರು, ದೇವಿಯ ಆರಾಧಕರಾಗಿದ್ದು, ತಪೋಬಲದಿಂದ ವಾಕ್​ಸಿದ್ಧಿ ಗಳಿಸಿದ್ದರು. ಕಾಲಜ್ಞಾನವನ್ನು ತಿಳಿದಿದ್ದ ಗೋವಿಂದ ಭಟ್ಟರು ಕುಳಿತಲ್ಲೆಯೇ- ‘ಶರೀಫ ಬೇಗ ಬಾರೋ, ಎಷ್ಟು ಕಾಯುವುದೋ ನಿನಗಾಗಿ’ ಎಂದು ಕನವರಿಸುತ್ತಿದ್ದರಂತೆ.

ಬಾದಾಮಿಯ ಬನಶಂಕರಿದೇವಿಯೊಂದಿಗೆ ಮಾತಾನಾಡುವ ಇಚ್ಛಾಶಕ್ತಿಯನ್ನು ಹೊಂದಿದ್ದ ಗೋವಿಂದಭಟ್ಟರಂಥ ಗುರುಗಳು, ಶರೀಫರಿಗೆ ಸಿಕ್ಕಿದ್ದು, ಒಂದರ್ಥದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ, ಸ್ವಾಮಿ ವಿವೇಕಾನಂದರು ಸಿಕ್ಕಂತೆ. ಇವರಿಬ್ಬರ ಮೊದಲ ಭೇಟಿ ಶಿಶುನಾಳದಲ್ಲಿ ಆದಾಗ, ಗೋವಿಂದಭಟ್ಟರು ಶರೀಫನಿಗೆ ‘ನಿನ್ನಪ್ಪ ಯಾರು’ ಎಂಬ ಪ್ರಶ್ನೆ ಕೇಳಿದೊಡನೆ ಅದಕ್ಕೆ ಉತ್ತರವಾಗಿ ಥಟ್ಟನೆ ‘ನಿಮ್ಮಪ್ಪನೇ... ನಮ್ಮಪ್ಪ’ ಎಂದು ಹೇಳಿದರು. ಈ ಉತ್ತರದಿಂದ ಸುಪ್ರಸನ್ನರಾದ ಗೋವಿಂದಭಟ್ಟರು ಶರೀಫರನ್ನು ಆತ್ಮಾನಂದದಿಂದ ಶಿಷ್ಯನನ್ನಾಗಿ ಸ್ವೀಕರಿಸಿದರು.

ಬ್ರಾಹ್ಮಣರಾದ ಗೋವಿಂದಭಟ್ಟರು ಮಹಮ್ಮದೀಯನಾದ ಶರೀಫನನ್ನು ಶಿಷ್ಯನನ್ನಾಗಿ ಮಾಡಿಕೊಂಡು, ಸದಾ ಅವನೊಡನೆ ಅಲೆದಾಡುವುದನ್ನು ಸ್ವಜಾತಿ ಬಾಂಧವರು ಒಪ್ಪದೆ, ಗೋವಿಂದಭಟ್ಟರನ್ನು ‘ಜಾತಿಯಿಂದ ಬಹಿಷ್ಕಾರ’ ಹಾಕುವುದಾಗಿ ಬೆದರಿಕೆ ಹಾಕಿದರೂ ಅದಕ್ಕೆ ಸೊಪು್ಪಹಾಕಲಿಲ್ಲ. ವೇದ, ಉಪನಿಷತ್ತು ಹಾಗೂ ವೈದಿಕಧರ್ಮದ ಸಾರವನ್ನು ಶರೀಫರಿಗೆ, ಜನಿವಾರ ಹಾಕಿ ತಿಳಿಸಿಕೊಟ್ಟಾಗ ಶರೀಫರೂ ಆತ್ಮಾನಂದದಿಂದ ‘ಹಾಕಿದ ಜನಿವಾರವ, ಸದ್ಗುರುನಾಥ, ಹಾಕಿದ ಜನಿವಾರವ, ಹಾಕಿದ ಜನಿವಾರ, ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸಲೆಂದು’ ಹಾಡಿದರು.

ಶರೀಫರು ಗೋವಿಂದಭಟ್ಟರಿಂದ ಗುರು ಉಪದೇಶವನ್ನು ಪಡೆದುಕೊಂಡು, ಅವರೊಂದಿಗೆ ಇರುವುದನ್ನು ಮುಸಲ್ಮಾನರೂ ಒಪ್ಪಲಿಲ್ಲ. ಗುರುಗಳಂತೆಯೇ ಶರೀಫರೂ ಎರಡೂ ಸಮುದಾಯದವರು ಕೊಟ್ಟ ಕಷ್ಟಗಳನ್ನು ಎದುರಿಸಿ, ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ತಿಳಿಸಿದರು. ‘ಬೋಧ ಒಂದೇ ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ¬-ಶಿಶುನಾಳಧೀಶನ ಭಾಷೆ ಒಂದೇ’ ಎಂದು, ‘ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು.

ಶರೀಫರ ತಂದೆ-ತಾಯಿ, ಮಗ ಹೀಗೆ ಅಲೆದಾಡುತ್ತಿರುವುದಕ್ಕೆ, ಮದುವೆಯೇ ಸರಿಯಾದ ಮದ್ದೆಂದು ತಿಳಿದು ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾಳೊಂದಿಗೆ ವಿವಾಹ ನೆರವೇರಿಸಿದರು. ಈ ಮದುವೆಗೆ ಗುರುಗಳಾದ ಗೋವಿಂದ ಭಟ್ಟರು ಹಸಿರು ನಿಶಾನೆ ನೀಡಿದ್ದರು. ಇವರ ದಾಂಪತ್ಯದ ಬಾಳಿನಲ್ಲಿ ಲತ್ತೂಮಾ ಎಂಬ ಹೆಣ್ಣುಕೂಸು ಬೆಳದಿಂಗಳಂತೆ ಜನಿಸಿತು. ಗುರುಗಳಾದ ಗೋವಿಂದಭಟ್ಟರ ಪ್ರಭಾವದಿಂದ, ಮಡದಿ-ಮಕ್ಕಳ ವ್ಯಾಮೋಹಕ್ಕೆ ಒಳಗಾಗದೆ, ಪ್ರಾಪಂಚಿಕ ವಿಷಯಗಳಲ್ಲಿ ‘ಕುಂಬಾರ ಹುಳುವಿನಂತೆ’ ವ್ಯವಹರಿಸುತ್ತಿದ್ದರು. ಕೆಲವೇ ದಿನಗಳಲ್ಲಿ ಮುದ್ದಿನ ಮಗಳು ಲತ್ತೂಮಾ ಕಾಯಿಲೆಯಿಂದ ತೀರಿಕೊಂಡಳು. ಮಗಳ ಅಗಲಿಕೆಯ ದುಃಖದಿಂದ ಶರೀಫರು ಉರ್ದುವಿನಲ್ಲಿ ‘ದುಃಖ ಮೇ ಪಡಾ ಮನ್, ಸುಖ ನಹೀ ಮಾಯಾ, ಟಕತಿ ಮರನಾ ರಖವಾಲಾರೇ’ ಎಂಬ ತತ್ತ್ವಪದವನ್ನು ಅಲ್ಲಿಯೇ ನುಡಿದರು. ಮಗಳ ಸಾವಿನ ದುಃಖ ತಡೆಯಲಾರದೆ ಫಾತಿಮಾ ಕೂಡ ತವರುಮನೆಯಾದ ಕುಂದಗೋಳದಲ್ಲಿ ಕೊನೆಯುಸಿರೆಳದಳು. ಅಂತ್ಯಕ್ರಿಯೆಗೆ ಬರಬೇಕೆಂದು ಮಾವ ಹೇಳಿ ಕಳುಹಿಸಿದಾಗ, ‘ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗ್ಯಾಕೋ’ ಎಂದು ಹೇಳಿ, ಪ್ರಪಂಚದ ಹಂಗನ್ನು ತೊರೆದರು, ಸ್ವಲ್ಪ ಕಾಲದ ನಂತರ ತಾಯಿ-ತಂದೆಯೂ ಇಹಲೋಕ ತ್ಯಜಿಸಿದಾಗ, ಶರೀಫರಿಗೆ ತಮ್ಮವರು ಎಂದು ಉಳಿದವರು ಗೋವಿಂದಭಟ್ಟರೊಬ್ಬರೆ. ಅವರಲ್ಲಿ ಸಂಪೂರ್ಣ ಶರಣಾಗಿ, ಉಳಿದ ಜೀವನವನ್ನು ‘ಗೋವಿಂದಮಯ’ ವಾಗಿಸಿಕೊಂಡರು.

ಮುಂದೆ, ಗುರು ಶಿಷ್ಯರಿಬ್ಬರೂ ಒಬ್ಬರನ್ನೊಬ್ಬರು ಬಿಡದೆ, ಅವಿಭಜಿತ ಧಾರವಾಡ, ಬಳ್ಳಾರಿ, ಚಿತ್ರದುರ್ಗ, ಉತ್ತರಕನ್ನಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿರುವ ಕೆಲವು ಗುಡಿಗಳಿಗೆ ಭೇಟಿ ನೀಡಿ, ನಂತರ ಶಿಶುನಾಳ-ಕಳಸದ ಸುತ್ತುಮುತ್ತಲಿನ ಗ್ರಾಮಗಳ, ಅಲ್ಲಿಯ ಗ್ರಾಮದೇವತೆಗಳ ಹಾಗೂ ಇತರ ಗುಡಿಗಳ ದರ್ಶನ ಪಡೆದರು. ದಿನನಿತ್ಯ ನಡೆಯುವ ಘಟನೆಗಳನ್ನು ಇವರಿಬ್ಬರೂ ತತ್ತ್ವಪದಗಳಲ್ಲಿ ವಿವರಿಸಿ ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ನೀಡುತ್ತಿದ್ದರು. ‘ಕೋಡಗನ ಕೋಳಿ ನುಂಗಿತ್ತಾ’, ‘ಬಿದ್ದಿಯಬ್ಬೆ ಮುದುಕಿ’, ‘ಹಾವು ತುಳಿದೇನೆ’, ‘ಎಂಥ ಮೋಜಿನ ಕುದುರಿ’, ‘ಗುಡಿಯ ನೋಡಿರಣ್ಣ’, ‘ತರವಲ್ಲ ತಗೀ ನಿನ್ನ ತಂಬೂರಿ’, ‘ಏನ್ ಕೊಡ ಏನ್ ಕೊಡವಾ’, ‘ಸೋರುತಿಹುದು ಮನೆಯ ಮಾಳಿಗಿ’, ‘ಕುಂಬಾರಕೀ ಈಕಿ ಕುಂಬಾರಕಿ’, ‘ಗುಡು ಗುಡಿಯ ಸೇದಿ ನೋಡೋ’ ಮುಂತಾದ ತತ್ತ್ವಪದಗಳು ಇಂದಿಗೂ ಜನಸಾಮಾನ್ಯರ ಬಾಯಲ್ಲಿ ನಲಿಯುತ್ತಿವೆ. ಶರೀಫರು ರಚಿಸಿದ ಒಟ್ಟು 410 ತತ್ತ್ವಪದಗಳು ದಾಖಲಾಗಿವೆ. ಅವುಗಳಲ್ಲಿ ದೇವಸ್ತುತಿ, ಶಕ್ತಿಸ್ತುತಿ, ಗುರುಸ್ತುತಿ, ದಂಡಕ, ಕಾಲಜ್ಞಾನ, ಲಾವಣಿ, ರಿವಾಯತ್, ಅಲಾವಿ ಪದಗಳು ಸೇರಿವೆ. ಜೊತೆಗೆ ಘಟನಾತ್ಮಕ ಹಿನ್ನೆಲೆಯಲ್ಲಿ ಬರೆದ ನೀತಿಯನ್ನು ಒಳಗೊಂಡ ಇನ್ನೂ ಅನೇಕ ರಚನೆಗಳಿವೆ. ಹೀಗೆ ತತ್ತ್ವಪದ ಹಾಡಿ ತತ್ತ್ವಬೋಧನೆ ಮಾಡಿದರು. ದಂಡಕ ಹೇಳಿ ದೇವಿ-ದೇವತೆಯರನ್ನು ಸ್ತುತಿಸಿದರು. ಕಾಲಜ್ಞಾನ ನುಡಿದು ಎಲ್ಲರನ್ನೂ ಎಚ್ಚರಿಸಿದರು. ಲಾವಣಿ ಹೇಳಿ ನೀತಿ ಬೋಧಿಸಿದರು. ಹೋಳಿಹಾಡು ಹೇಳಿ ಭವ್ಯಚರಿತ್ರೆಯನ್ನು ವಿವರಿಸಿದರು ಹಾಗೂ ಮಂಗಳಾರತಿಯನ್ನು ಹಾಡಿ ಸರ್ವರಿಗೂ ಮಂಗಳವನ್ನು ಬಯಸಿದರು. ಆದ್ದರಿಂದಲೇ ಶರೀಫರು ‘ಸರ್ವಜನರ ಸಂತ’ರಾದರು.

ತ್ರಿಕಾಲ ಜ್ಞಾನಿಯಾಗಿದ್ದ ಗುರುಗೋವಿಂದ ಭಟ್ಟರು ತಮ್ಮ ಅಂತ್ಯದಿನಗಳು ಸಮೀಪವಾಗುತ್ತಿರುವುದನ್ನು ಅರಿತು ಒಂದು ದಿನ, ‘ಅಪ್ಪಗಳಾ ನನಗಾ ವಾಂತಿ ಬರೋಂಗ ಆಗ್ತಿದೆ. ಆದ್ರ ನಾ ಮಾಡೋ ವಾಂತಿ ಎಲ್ಲೂ ಚೆಲ್ಲಬಾರದು. ಯಾರೂ ತುಳೀಬಾರದು, ಅಂಥಾ ಜಾಗ ನೋಡ್ರಪಾ....’ ಎಂದರು. ಸುತ್ತ ನೆರೆದ ಶಿಷ್ಯರೆಲ್ಲ ಗಾಬರಿಯಾದರು. ಅಷ್ಟು ಹೊತ್ತಿಗೆ ಶರೀಫರು ಅಲ್ಲಿಗೆ ಓಡೋಡಿ ಬಂದರು. ತಮ್ಮ ದೇಹವನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಎಂದರಿತು, ತಮ್ಮ ಬೊಗಸೆಯನ್ನು ಗುರುಗಳ ಮುಂದೆ ಒಡ್ಡಿದರು. ಗುರುಗಳು ಬೊಗಸೆಯಲ್ಲಿ ಮಾಡಿದ ವಾಂತಿಯನ್ನೇ ‘ಉತ್ಕೃಷ್ಟ ಪ್ರಸಾದ’ ಎಂದು ಶರೀಫರು ಕುಡಿದು ಬಿಟ್ಟರು. ಈ ಮೂಲಕ ಗುರು ಗೋವಿಂದಭಟ್ಟರು ತಮ್ಮೊಳಗಿನ ಅಧ್ಯಾತ್ಮ ಹಾಗೂ ಜ್ಞಾನಶಕ್ತಿಯನ್ನು ಶರೀಫರಿಗೆ ಧಾರೆಯೆರೆದರು. ಇದರ ಫಲವಾಗಿ ಶರೀಫರಲ್ಲೂ ತ್ರಿಕಾಲ ಜ್ಞಾನ ಹಾಗೂ ಪವಾಡಶಕ್ತಿ ಮೂಡಿತು. ತಮ್ಮ ಗುರುಗಳು ದೇಹಾಂತ್ಯವಾದ ವರ್ಷ 1870ರ ನಂತರ 19 ವರ್ಷಗಳ ಕಾಲ ಅನೇಕ ಪವಾಡಗಳನ್ನು ಮಾಡಿ ಇನ್ನಷ್ಟು ಮಹಿಮಾವಂತರಾದರು.

ಗುರುಗಳಿಂದ ಕಾಲಜ್ಞಾನ ತಿಳಿದ ಶರೀಫರು ಮುಂದೆ ಒದಗಲಿರುವ ಆಪತ್ತುಗಳನ್ನು ಮೊದಲೇ ಗ್ರಹಿಸಿ, ಎಲ್ಲರನ್ನೂ ಎಚ್ಚರಿಸಿದರು. ಮುಂದೆ, ಗುರುಗಳಾದ ಗೋವಿಂದ ಭಟ್ಟರಂತೆ, ಶರೀಫರು ಕೂಡ ತಮ್ಮ ಅಂತ್ಯಕಾಲ ಸಮೀಪವಾಗುತ್ತಿರುವುದನ್ನು ಜ್ಞಾನಶಕ್ತಿಯಿಂದ ತಿಳಿದು, ‘ಬಿಡತೀನಿ ದೇಹ ಬಿಡತೇನಿ, ಕೊಡತೀನಿ ಭೂಮಿಗೆ, ಇಡತೀನಿ ಮಹಿಮರ ನಡತೀ ಹಿಡಿದು, ಜೀವನ ಬಾಧೆಗೆದ್ದು ಶಿವಲೋಕದೊಳಗೆ ನಾ’ ಎಂದು ತಿಳಿಸಿ ದೇಹತ್ಯಾಗ ಮಾಡಿದರು. ಸಂತ ಶಿಶುನಾಳ ಶರೀಫರ ದ್ವಿ-ಶತಮಾನೋತ್ಸವದ ಅಂಗವಾಗಿ, ಕಳಸದ ಗುರು ಗೋವಿಂದ ಭಟ್ಟರ ಹಾಗೂ ಸಂತ ಶಿಶುನಾಳ ಶರೀಫರ ತತ್ತ್ವ, ಚಿಂತನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸರ್ವಧರ್ಮಗಳ ಸಮಾನತೆ, ಸೌಹಾರ್ದ, ಸಹಿಷ್ಣುತೆ ಭಾವನೆಯನ್ನು ಸಮಾಜದಲ್ಲಿ ಬಿತ್ತುವ ಉದ್ದೇಶದಿಂದ ‘ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ’ ಕಾರ್ಯ ಮಾಡುತ್ತಿದೆ. ಪ್ರತಿಷ್ಠಾನ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ವಿವರಗಳಿಗಾಗಿ ಸಂರ್ಪಸಿ. ‘ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದಭಟ್ಟರ ಪ್ರತಿಷ್ಠಾನ’ ನಂ.10, ಗುರುಗೋವಿಂದ ಕೃಪಾ, 16ನೇ ಮುಖ್ಯರಸ್ತೆ, ಪದ್ಮನಾಭನಗರ, ಬೆಂಗಳೂರು ದೂರವಾಣಿ: 080- 41507455.

(ಲೇಖಕರು ದೂರದರ್ಶನ ದೆಹಲಿ ಹಾಗೂ ಬೆಂಗಳೂರು ದಕ್ಷಿಣ ವಲಯದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net