

‘ವಿಶ್ವ ಸಾಮಾಜಿಕ ನ್ಯಾಯ ದಿನ’ಕ್ಕೆ ವಿಶ್ವಸಂಸ್ಥೆ 2007 ನವೆಂಬರ್ 22ರಲ್ಲಿ ಒಪ್ಪಿಗೆ ನೀಡಿತು. 2009 ಫೆಬ್ರವರಿ 20ರಿಂದ ಜಾರಿಗೊಳಿಸಿ ಆಚರಿಸಲಾಗುತ್ತಿದೆ.
ಸಾಮಾಜಿಕ ನ್ಯಾಯ ಎಂದರೇನು?: ಅದು ಒಂದು ತತ್ತ್ವ. ಅದಕ್ಕೆ ಹಲವಾರು ವಿಶ್ಲೇಷಣೆಗಳಿದ್ದರೂ ಗುರಿ ಒಂದೇ. ಈ ತತ್ತ್ವದ ಮಹತ್ವ ಗುರಿ ಸಮಾನತೆ.
ಭಾರತದ ಸಂವಿಧಾನ ಸಾಮಾಜಿಕ ನ್ಯಾಯಕ್ಕೆ ಅಗ್ರಗಣ್ಯ ಸ್ಥಾನ ನೀಡಿದೆ. ನಮ್ಮ ದೇಶದ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಶಬ್ದಾರ್ಥ ನಿರೂಪಣೆ ಇಲ್ಲದಿದ್ದರೂ, ಅದರ ತತ್ತ್ವವನ್ನು ಸಂವಿಧಾನದ ಪೀಠಿಕೆ, ಅನುಚ್ಛೇದ 14, 15, 16, 38, 39, 46, 330ರಿಂದ 342ರಲ್ಲಿ ಅಳವಡಿಸಿಕೊಳ್ಳಲಾಗಿದೆ. ರಾಜನೀತಿಯ ನಿರ್ದೇಶಕ ತತ್ತ್ವಗಳ ಗುರಿಯೇ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಜ್ಯ. ಅಸಮಾನತೆಯನ್ನು ಪ್ರತಿಬಿಂಬಿಸುವ ಯಾವುದೇ ಕೃತ್ಯವನ್ನು ನಮ್ಮ ಸಂವಿಧಾನ ಸಹಿಸುವುದಿಲ್ಲ. ಹಾಗಾಗಿ ಈ ಎಲ್ಲ ಸಾಂವಿಧಾನಿಕ ನಿರ್ದೇಶನಗಳನ್ನು ಚಾಚು ತಪ್ಪದೆ, ವಿಳಂಬವಾಗದೆ ಜಾರಿಗೊಳಿಸಬೇಕೆಂದು ನೆನಪು ಮಾಡುವುದೆ ‘ವಿಶ್ವ ಸಾಮಾಜಿಕ ನ್ಯಾಯ ದಿನ’ದ ಉದ್ದೇಶ. ಸಾಮಾಜಿಕ ನ್ಯಾಯದ ಎಲ್ಲ ಅಂಶಗಳನ್ನು ಇಡೀ ವಿಶ್ವದಲ್ಲಿ ಎಲ್ಲ ರಾಷ್ಟ್ರಗಳು ಜಾರಿಗೊಳಿಸಬೇಕೆಂಬುದೇ ವಿಶ್ವಸಂಸ್ಥೆಯ ಆಶಯ.
ಇನ್ನೂ ಭಾರತ ಹಾಗೂ ಅದರ ಸಂವಿಧಾನದ ಬಗ್ಗೆ ಪ್ರಸ್ತಾಪಿಸಿದರೆ, ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್, ‘ಸಾಂವಿಧಾನಿಕ ನ್ಯಾಯಾಲಯಗಳ ಯಾವುದೇ ತೀರ್ಪು ಬಂದರೂ ಅದು ಸಾಮಾಜಿಕ ನ್ಯಾಯದ ತತ್ತ್ವವನ್ನು ಪ್ರತಿಬಿಂಬಿಸಬೇಕು’ ಎಂದು ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ರಾಜಕೀಯ ಪ್ರಜಾಪ್ರಭುತ್ವಕ್ಕಿಂತ, ಸಾಮಾಜಿಕ ಪ್ರಜಾಪ್ರಭುತ್ವಕ್ಕೇ ಹೆಚ್ಚು ಒತ್ತು ಕೊಟ್ಟಿದ್ದು, ‘ಸಾಮಾಜಿಕ ಪ್ರಜಾಪ್ರಭುತ್ವ ಬರದೇ ಇದ್ದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಹೆಚ್ಚು ಕಾಲ ಉಳಿಯಲಾರದು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಜೀವನದ ಕ್ರಮವಾದಾಗ ಮಾತ್ರ ಸಾಮಾಜಿಕ ಪ್ರಜಾಪ್ರಭುತ್ವ ಕಾಣಲು ಸಾಧ್ಯ’ ಎಂದು ಸಂವಿಧಾನ ಸಭೆ (ಇಟ್ಞಠಠಿಜಿಠ್ಠಿಛ್ಞಿಠಿ ಅಠಠಛಿಞಚ್ಝಿಢ)ಯ ಅವರ ಅಂತಿಮ ಭಾಷಣದಲ್ಲಿ (1949 ನವೆಂಬರ್ 25) ಹೇಳಿದ್ದಾರೆ.
ಇದರಿಂದ ನಮ್ಮ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಎಂತಹ ಸ್ಥಾನವನ್ನು ನೀಡಲಾಗಿದೆ ಎಂಬುದು ವೇದ್ಯವಾಗುತ್ತದೆ.
ನಮ್ಮ ಸಂವಿಧಾನದ ನಿರ್ದೇಶನಗಳು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಹೊಂದಿದ್ದರೂ, ಆ ಗುರಿಯನ್ನು ಈವರೆಗೆ ತಲುಪಿದ್ದೆವೆಯೇ ಎನ್ನುವ ಪ್ರಶ್ನೆ ಸಾಮಾಜಿಕ ನ್ಯಾಯಕ್ಕೆ ಬದ್ಧತೆಯನ್ನು ಹೊಂದಿರುವ ಎಲ್ಲರನ್ನೂ ಕಾಡುತ್ತಿದೆ. ಸಂವಿಧಾನ ಬಂದು 70 ವರ್ಷಗಳಾಗಿವೆ. ಸಾಮಾಜಿಕ ನ್ಯಾಯದ ಗುರಿಯಾದ ಸಮಾನತೆ ಸಾಧಿಸಲು ಮೀಸಲಾತಿಯು ಒಂದು ಮಾರ್ಗ, ಈ ಮೀಸಲಾತಿ ತತ್ತ್ವದಲ್ಲೂ ಅವಕಾಶ ವಂಚಿತ, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನೀಡಿರುವ ಮೀಸಲಾತಿಯ ಪ್ರಮಾಣವನ್ನು ಯಾವ ಕ್ಷೇತ್ರಗಳಲ್ಲಿಯೂ ತಲುಪಲಾಗಿಲ್ಲ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಉದಾಹರಣೆ: 01-01-2015ರಲ್ಲಿ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಇದ್ದ ಪ್ರಾತಿನಿಧ್ಯತೆ ಈ ಕೆಳಕಂಡಂತಿದೆ.
ಈ ಕಾರಣಗಳಿಂದ ಅಂತರ್ಗತವಾಗಿರುವ ಸಾಮಾಜಿಕ ಅಸಮಾನತೆ ಅಳಿಸುವ ಕೂಗು ನಿಂತಿಲ್ಲ. ಉಳಿದ ಕ್ಷೇತ್ರಗಳಲ್ಲೂ ತುಳಿತಕ್ಕೆ ಒಳಗಾದ ಶೂದ್ರರು, ಅಸ್ಪೃ್ಯರು ಹಾಗೂ ಬುಡಕಟ್ಟು ಸಮುದಾಯದವರು ಸಾಂವಿಧಾನಿಕ ಉದ್ದೇಶಿತ ಪ್ರಾತಿನಿಧ್ಯದಿಂದ ವಂಚಿತರಾಗಿಯೇ ಇದ್ದಾರೆ. ಆದ್ದರಿಂದ ನಮ್ಮ ಸಂವಿಧಾನ ಜಾರಿಗೆ ಬಂದ ಕಳೆದ ಏಳು ದಶಕಗಳಲ್ಲಿ ಅದರ ಆಶಯಗಳ ಅನುಷ್ಠಾನ ಮತ್ತು ವಾಸ್ತವವನ್ನು ಅವಲೋಕನ ಮಾಡಿ ನ್ಯೂನತೆಯನ್ನು ಸರಿಪಡಿಸುವ ಕಾರ್ಯನೀತಿಯನ್ನು ರೂಪಿಸಿ ಜಾರಿಗೊಳಿಸುವುದೇ ವಿಶ್ವ ಸಾಮಾಜಿಕ ನ್ಯಾಯ ದಿನದ ಪ್ರಾಮುಖ್ಯತೆ. ಈ ಪ್ರಾಮುಖ್ಯತೆ ಈಡೇರಲು ಮಾನವೀಯ ತುಡಿತ ಹಾಗೂ ಸಮಾನತೆಯ ಹಿಂಬಲ ಬೇಕು ಎಂಬುದು ಮಹಾನ್ ಮಾನವತಾವಾದಿ ಮಾರ್ಟಿನ್ ಲೂಥರ್ ಕಿಂಗ್ (ಜೂ) ಆಶಯವಾಗಿತ್ತು.
(ಲೇಖಕರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು)