ಸ್ವಾತಂತ್ರ್ಯ ಸಂಗ್ರಾಮದ ಉಜ್ವಲ ದೀಪ

Edit 1
Published on

ಲೋಕಮಾನ್ಯ ಬಾಲ ಗಂಗಾಧರ ತಿಲಕರು ಛತ್ರಪತಿ ಶಿವಾಜಿಯ ಶೌರ್ಯ, ಪ್ರತಾಪಗಳನ್ನು ಆವಾಹಿಸಿಕೊಂಡಿದ್ದರು. ಅವನಲ್ಲಿ ಅಡಗಿದ್ದ ರಾಜನೀತಿ, ರಾಜತಂತ್ರ, ಸ್ಪೂರ್ತಿ, ಶಕ್ತಿಸಂಪನ್ನತೆ ಮುಂತಾದ ಕ್ಷಾತ್ರಗುಣಗಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನ್ವಯಿಸಿ ಅವನ್ನು ಅನುಷ್ಠಾನಗೊಳಿಸಲು ಅವರು ಸದಾ ಉತ್ಸುಕರಾಗಿರುತ್ತಿದ್ದರು.

ಒಂದು ಜನಾಂಗದ ಚರಿತ್ರೆ ಅಥವಾ ಇತಿಹಾಸವೆಂದರೆ ಅದೊಂದು ಪುರಾಣವಿದ್ದಂತೆ. ಅದು ಒಂದು ದಿವಸದ ಅಥವಾ ಒಂದು ವರ್ಷದ ಕಥೆಯಲ್ಲ. ಅದು ಒಬ್ಬ ಮನುಷ್ಯನ ಅಥವಾ ಸಣ್ಣ ಗುಂಪಿನ ಕಥೆಯಲ್ಲ. ಅದು ಹತ್ತಾರು ವರ್ಷಗಳ ಕಾಲ ಸಾವಿರಾರು ಜನರಿಂದ ಕೂಡಿ ನಡೆದುಕೊಂಡು ಬಂದ ವಿಸ್ತಾರವಾದ ಪ್ರಸಂಗ. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕಥೆಯೂ ಹಾಗೆಯೇ. ಅದು ಬಹು ವಿಸ್ತಾರವಾದುದು. ಅದರಲ್ಲಿ ನೂರಾರು ಮಂದಿ ಪ್ರಸಿದ್ಧರಾಗಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿರುವ ಗಾಂಧಿಯವರ ಹೆಸರು ಎಲ್ಲರ ಬಾಯಲ್ಲೂ ಓಡಾಡುತ್ತದೆ. ಸುಮಾರು ಮುನ್ನೂರು-ನಾನೂರು ವರ್ಷಗಳ ಇತಿಹಾಸವಿರುವ ಈ ಹೋರಾಟದಲ್ಲಿ ಮೊದಲು ಹೆಜ್ಜೆಯಿಟ್ಟವರು ಗಾಂಧಿಯವರಿಗಿಂತ ಹಿಂದಿನವರು. ಅವರನ್ನು ‘ಸ್ವಾತಂತ್ರ್ಯ ಸಂಗ್ರಾಮದ ಪೂರ್ವಾಚಾರ್ಯರು’ ಎಂದು ಕರೆಯಬಹುದು.

ಒಂದು ದೇಶದ ಜನತೆಯ ಜೀವನ, ಇತಿಹಾಸ, ಚರಿತ್ರೆ ದೊಡ್ಡ ನದಿಯ ಪ್ರವಾಹದಂತೆ ಇರುತ್ತದೆ. ಎಲ್ಲಿಯೋ ಹುಟ್ಟಿ ಸಣ್ಣದಾಗಿ ಹರಿಯುವ ನದಿ ಮುಂದೆ ಹೋಗಹೋಗುತ್ತಿದ್ದಂತೆ ದೊಡ್ಡದಾಗುತ್ತ ಕೊನೆಯಲ್ಲಿ ಸಮುದ್ರ ಸೇರಿ ಅಪಾರ, ಅಗಾಧವೆನಿಸಿಕೊಂಡುಬಿಡುತ್ತದೆ. ಅದು ದೊಡ್ಡದಾಗಲು ದಾರಿಯಲ್ಲಿ ಅದು ಹೋಗುವಾಗ ಜೊತೆಗೆ ಸೇರಿದ ನೂರಾರು ತೊರೆಗಳು, ಹಳ್ಳಗಳು, ಹೊಳೆಗಳು ಕಾರಣವಾಗಿರುತ್ತವೆ. ಹಾಗೆಯೇ ಕಾಲಾನುಕಾಲದಲ್ಲಿ ಬೆಳೆದದ್ದು, ವಿಸ್ತಾರವಾದದ್ದು ನಮ್ಮ ಸ್ವಾತಂತ್ರ್ಯ ಹೋರಾಟದ ಕಥೆ. ಅದು ಗಾಂಧಿ ಕಾಲಘಟ್ಟಕ್ಕೆ ರಭಸದ ಪ್ರವಾಹೋಪಾದಿಯಲ್ಲಿ ಬೆಳೆದಿತ್ತು. ಹಾಗೆ ಬೆಳೆಯುವುದಕ್ಕೆ ಅಲ್ಲಿಯವರೆಗೆ ಹರಿಯಿಸಿಕೊಂಡು ಬಂದ ಉಪನದಿಗಳೇ ಕಾರಣ. ಆ ಉಪನದಿಗಳು ಒಂದೆರಡಲ್ಲ. ಸಾವಿರಾರು, ಲಕ್ಷಗಳು. ಅವರೆಲ್ಲರೂ ನಮ್ಮ ಭಕ್ತಿ, ಕೃತಜ್ಞತೆಗಳಿಗೆ ಪಾತ್ರರು. ಆಂತಹವರಲ್ಲಿ ಅಗ್ರಗಣ್ಯರಾದವರು ಕ್ಷಾತ್ರಕೆಚ್ಚಿನ, ಗಟ್ಟಿ ಎದೆಯ ಲೋಕಮಾನ್ಯ ಬಾಲಗಂಗಾಧರ ತಿಲಕರು.

ಬಾಲಗಂಗಾಧರ ತಿಲಕರು ಮತ್ತೊಬ್ಬ ಸ್ವಾತಂತ್ರ್ಯವೀರ ಗೋಪಾಲಕೃಷ್ಣ ಗೋಖಲೆಯವರ ಸಮಕಾಲೀನರು. ಸ್ವಾತಂತ್ರ್ಯ ಪಡೆಯುವ ವಿಚಾರದಲ್ಲಿ, ಸಾಗುತ್ತಿರುವ ದಾರಿಯಲ್ಲಿ್ಲ ಗೋಖಲೆಯವರಿಗೂ ತಿಲಕರಿಗೂ ಆಕಾಶ-ಭೂಮಿಯಷ್ಟು ಅಂತರ ಇತ್ತು. ಗೋಖಲೆ ಸೌಮ್ಯವಾದಿಗಳೂ, ಶಾಂತಿವಾದಿಗಳೂ ಆಗಿದ್ದರು. ಸಂಧಾನದ ಮೂಲಕ ಸ್ವಾತಂತ್ರ್ಯ ಸಿಗಬೇಕೆಂದು ಅವರು ಬಯಸಿದ್ದರು. ಆದರೆ ತಿಲಕರ ಮನೋಭಾವ ಹಾಗಿರಲಿಲ್ಲ. ‘ಬ್ರಿಟಿಷರು ಅನ್ಯಾಯಮಾರ್ಗಿಗಳು, ಕ್ರೂರಿಗಳು. ಅವರಲ್ಲಿ ಯಾವುದೇ ಸಂಧಾನಮಾರ್ಗ ಸಲ್ಲದು. ನಮ್ಮ ಸ್ವಾತಂತ್ರ್ಯಕ್ಕೆ ನಾವು ಅವರ ಬಳಿ ಭಿಕ್ಷೆ ಬೇಡಬೇಕಾಗಿಲ್ಲ. ‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’. ಅದು ಕೇಳಿ ಪಡೆಯುವಂಥಾದ್ದಲ್ಲ. ಅವರು ಈ ನೆಲವನ್ನು ಬಿಟ್ಟು ಹೊರಟುಹೋಗಬೇಕು. ಅದಕ್ಕಾಗಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ’ ಎಂಬ ನಿಲುವು ಅವರದಾಗಿತ್ತು. ಆ ಹಿನ್ನೆಲೆಯಲ್ಲೇ ತಿಲಕರನ್ನು ಮತ್ತು ಅವರ ಹಾಗೆಯೇ ಚಿಂತಿಸುವವರನ್ನು ಉಠ್ಟಿಛಿಞಜಿಠಠಿ ್ಫತೀವ್ರಗಾಮಿಗಳು’ ಎಂದೂ, ಗೋಖಲೆ ಹಾಗೂ ಅವರ ಗುಂಪನ್ನು Mಟಛಛ್ಟಿಚಠಿಛ್ಫಿ ‘ಮಂದಗಾಮಿಗಳು’ ಎಂದೂ ಜನ ಕರೆದರು. ನಂತರ ಅವು ಎರಡು ಬಣಗಳಾಗಿ ಹೊರಬಿದ್ದು ಒಂದೇ ಉದ್ದೇಶ, ಗುರಿಗಾಗಿ ಹೋರಾಡಿದವು. ಆದರೆ ಅವು ಪರಸ್ಪರ ಗೌರವವಿಟ್ಟುಕೊಂಡೇ ಹೋರಾಡಿದವು ಎನ್ನುವುದು ಸ್ಮರಣೀಯ.

ತಿಲಕರು ಅಚ್ಚ ಭಾರತೀಯ ಪರಂಪರೆಯವರಾಗಿದ್ದರು. ಅವರಿಗೆ ನಮ್ಮ ಪ್ರಾಚೀನ ಸಾಹಿತ್ಯಗಳ ಅರಿವು ಚೆನ್ನಾಗಿತ್ತು; ವೇದ, ಸಂಸ್ಕೃತ, ರಾಮಾಯಣ, ಭಾರತ, ಪುರಾಣಗಳ ತಿಳಿವಳಿಕೆ ಸಾಕಷ್ಟು ಇತ್ತು. ಹಾಗಿರುವುದರಿಂದಲೇ ಅವರು 1892ರಲ್ಲಿ ವೇದಗಳ ರಚನಾಕಾಲ ಕುರಿತು ಪುಸ್ತಕ ಬರೆದು ಓರಿಯಂಟಲ್ ಸಮ್ಮೇಳನಕ್ಕೆ ಕಳುಹಿಸಿಕೊಡಲು ಸಾಧ್ಯವಾಯಿತು. ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ ಅವರು ಭಗವದ್ಗೀತೆಯಿಂದ ಪ್ರೇರಣೆ ಪಡೆದಿದ್ದರು. ಗೀತೆ ಅವರಿಗೆ ಕೇವಲ ಒಂದು ಪುಸ್ತಕವಾಗಿರದೆ ಜೀವನಮೌಲ್ಯಗಳ ಅನುಸಂಧಾನವಾಗಿತ್ತು. ಅದರ ಹಿನ್ನೆಲೆಯಲ್ಲೇ ಅವರು ‘ಗೀತಾ ರಹಸ್ಯ’ ಕೃತಿ ಬರೆದರು. ಶತ್ರುಗಳನ್ನು ಮರ್ದಿಸುವುದಕ್ಕೆ ಶ್ರೀಕೃಷ್ಣನ ವಾಣಿ ಅರ್ಜುನನಿಗೆ ಪ್ರೇರಕಶಕ್ತಿಯಾದಂತೆ ತಿಲಕರಿಗೂ ಅದು ಪ್ರೇರಕಶಕ್ತಿಯಾಯಿತು. ಬ್ರಿಟಿಷರ ದುರಾಡಳಿತದ ಸಂದರ್ಭದಲ್ಲಿ ಅವರು ಅದನ್ನು ಓದಿದ್ದರಿಂದ ಇಡೀ ಭಗವದ್ಗೀತೆ ಅವರಿಗೆ ಕರ್ಮಯೋಗವಾಗಿಯೇ ತೋರಿತು. ವಸ್ತುತಃ ಭಗವದ್ಗೀತೆ ಭಕ್ತಿ, ಜ್ಞಾನ, ಕರ್ಮಯೋಗಗಳ ಸಮುಚ್ಚಯ. ಸ್ವತಃ ತಿಲಕರು ಒಬ್ಬ ಕರ್ಮಯೋಗಿಯೇ ಆಗಿದ್ದರು. ‘ಕರ್ಮದಲ್ಲಿ ಮಾತ್ರ ನಿನಗೆ ಅಧಿಕಾರ, ಫಲದಲ್ಲಿ ಇಲ್ಲ’ ಎಂಬ ಭಗವದ್ಗೀತೆಯ ವಾಕ್ಯ ಅವರ ಮೇಲೆ ಬಹಳ ಪ್ರಭಾವ ಬೀರಿತ್ತು. ಅಂತೆಯೇ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬ್ರಿಟಿಷರ ವಿರುದ್ಧ ಹೋರಾಡಿದರು. 1916 ಜುಲೈ 23ರಂದು 61ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿದ ಒಂದು ಲಕ್ಷ ರೂಪಾಯಿಗಳನ್ನು ರಾಷ್ಟ್ರಹಿತಕ್ಕಾಗಿ ಅರ್ಪಿಸಿಬಿಟ್ಟರು.

ಭಾರತೀಯ ತತ್ತ್ವಶಾಸ್ತ್ರಗಳಲ್ಲಿ ಪೌರುಷಬೋಧಕ ವಾಣಿಯನ್ನೊಳಗೊಂಡ ಗೀತೆಯಂತಹ ಕೃತಿ ಮತ್ತೊಂದು ಸಿಗಲಾರದು. ಆ ಕಾಲದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಗೀತೆಯ ಈ ಮರ್ಮವನ್ನು ತಿಲಕರಷ್ಟು ಚೆನ್ನಾಗಿ ತಿಳಿದವರು ಮತ್ತು ಅದನ್ನು ಅನುಷ್ಠಾನಗೊಳಿಸಿದವರು ಬಹಳ ವಿರಳ. ಜತೆಜತೆಗೇ ತಿಲಕರು ಭಾರತೀಯ ರಾಜನೀತಿ, ರಾಜತಂತ್ರವನ್ನೂ ಅಷ್ಟೇ ಚೆನ್ನಾಗಿ ತಿಳಿದಿದ್ದರು. ಅದಕ್ಕೆ ಒಂದು ಉದಾಹರಣೆ-ಛತ್ರಪತಿ ಶಿವಾಜಿ ಮಹಾರಾಜನು ಅಫ್ಜಲ್ ಖಾನನನ್ನು ಕೊಂದಿದ್ದು ಮೋಸದಿಂದ ಎಂದು ಜನರೆಲ್ಲ ಆಡಿಕೊಳ್ಳುತ್ತಿದ್ದಾಗ- ಮುಖ್ಯವಾಗಿ ಬ್ರಿಟಿಷರು- ತಿಲಕರು-‘ಶಿವಾಜಿಯು ಅಫ್ಜಲ್​ಖಾನನ ವಧೆ ಮಾಡಿದ್ದು ನೂರಕ್ಕೆ ನೂರು ಸರಿ. ಅದು ಸರಿಯಲ್ಲವೆಂದು ಹೇಳುವವರು ಮೂರ್ಖರು, ನ್ಯಾಯಾನ್ಯಾಯದ ಅರಿವಿಲ್ಲದವರು. ದೇಶದ ಹಿತದೃಷ್ಟಿಯಿಂದ ನಿಸ್ವಾರ್ಥದೃಷ್ಟಿಯಿಂದ ಮಾಡಿದ ಯಾವುದೇ ಕೆಲಸವು ಅನ್ಯಾಯ ಅಥವಾ ಅನೀತಿಯದಲ್ಲ. ಶ್ರೀಕೃಷ್ಣಪರಮಾತ್ಮನು ಧರ್ಮದ ರಕ್ಷಣೆಗಾಗಿ ತನ್ನ ಬಂಧುವರ್ಗದ ವಿರುದ್ಧವೇ ಅರ್ಜುನನಿಗೆ ಹೋರಾಡಲು ತಿಳಿಸಲಿಲ್ಲವೆ? ನಮ್ಮ ಮನೆಯೊಳಗೆ ಕಳ್ಳರು ನುಗ್ಗಿ, ನಮ್ಮನ್ನೇ ಆಕ್ರಮಿಸಿ ಕುಳಿತರೆ, ಅವರನ್ನು ಹೊರಗಟ್ಟುವ ಸಾಮರ್ಥ್ಯ ನಮಗಿಲ್ಲವಾದರೆ ಮೀನಮೇಷ ಎಣಿಸದೆ ಅವರನ್ನು ಅದೇ ಮನೆಯಲ್ಲಿ ಕೂಡಿಹಾಕಿ ಜೀವಂತ ಭಸ್ಮ ಮಾಡುವುದೇ ಉಚಿತವಾದ ದಾರಿ. ಪರಮಾತ್ಮನು ಪರಕೀಯ ಬ್ರಿಟಿಷರಿಗೆ ಈ ನಮ್ಮ ಹಿಂದೂಸ್ಥಾನವನ್ನು ಹಿತ್ತಾಳೆಯ ಫಲಕದ ಮೇಲೆ ಕೆತ್ತಿ ಇಟ್ಟಿಲ್ಲ’ ಎಂದು ಗುಡುಗಿದ್ದರು. ಇಂತಹ ಕ್ಞಾತ್ರತೇಜಸ್ಸು, ಪೌರುಷ, ಹೋರಾಟದ ಕೆಚ್ಚು ತಿಲಕರ ರಕ್ತದ ಕಣಕಣಗಳಲ್ಲೂ ಇದ್ದವು. ಇಂತಹ ಕೆಚ್ಚಿನ ಮಾತು ಮತ್ತು ಉಗ್ರಹೋರಾಟಗಳಿಂದಲೇ ಅವರು ಮಹಾರಾಷ್ಟ್ರದ ‘ಕೇಸರೀ’ ಅನ್ನಿಸಿಕೊಂಡಿದ್ದರು. ಅವರ ಈ ನಿಲುವನ್ನು ಕಂಡಾಗ ‘ಮಾಯಾವೀ ಮಾಯಯಾ ವಧ್ಯಃ’ (ಕಪಟಿಗಳನ್ನು ಅವರ ಕಪಟಮಾರ್ಗದಿಂದಲೇ ಕೊಲ್ಲಬೇಕು) ಎಂಬ ಶುಕ್ರನೀತಿ ನೆನಪಿಗೆ ಬಾರದೇ ಇರದು.

ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ, ಅವರು ಮತ್ತು ಅವರ ಆತ್ಮೀಯ ಸ್ನೇಹಿತ ಅಗರ್​ಕರ್ ಸ್ಥಾಪಿಸಿದ ಮರಾಠಿಭಾಷೆಯ ‘ಕೇಸರೀ’ ಪತ್ರಿಕೆ ಮತ್ತು ಇಂಗ್ಲಿಷ್ ಭಾಷೆಯ ‘ಮರಾಠಾ’ ಪತ್ರಿಕೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡರು. ತಿಲಕರಂತೆಯೇ ಅಗರ್​ಕರ್ ಕೂಡ ಅಪ್ರತಿಮ ರಾಷ್ಟ್ರಭಕ್ತರಾಗಿದ್ದರು. ಬೆಂಕಿಯುಂಡೆಯಂತಹ, ತೀಕ್ಷ್ಣಮಾತುಗಳೇ ಆವರ ಪತ್ರಿಕೆಗಳಲ್ಲಿ ತುಂಬಿರುತ್ತಿದ್ದವು. ಬ್ರಿಟಿಷರ ವಿರುದ್ಧ ಜನರನ್ನು ಪ್ರಚೋದಿಸಲು, ಸಂಘಟಿಸಲು, ಬ್ರಿಟಿಷರ ಅನ್ಯಾಯ, ದೌರ್ಜನ್ಯಗಳನ್ನು ಹೊರಹಾಕಲು, ಇಂದಿನ ಕರೊನಾದಂತೆಯೇ ಆ ದಿನಗಳಲ್ಲಿ ಬಂದಿದ್ದ ಪ್ಲೇಗ್​ನಂತಹ ಮಹಾಮಾರಿಯ ಬಗ್ಗೆ ಎಚ್ಚರಿಕೆ ನೀಡಲು ಆ ಪತ್ರಿಕೆಗಳು ಬಹಳ ಉಪಯೋಗಕ್ಕೆ ಬಂದವು.

1900ರಲ್ಲಿ ಲಾರ್ಡ್ ಕರ್ಜನ್ನನು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದ. ಅವನ ಅನ್ಯಾಯ, ದೌರ್ಜನ್ಯಗಳಿಗೆ ಕೊನೆಯೇ ಇರಲಿಲ್ಲ. ಅದೇ ಸಂದರ್ಭದಲ್ಲಿ ಆತ ಬಂಗಾಲದ ವಿಭಜನೆಗೆ ತೊಡಗಿದ್ದ. ಆಗ ತಿಲಕರು ‘ಕೇಸರೀ’ ಪತ್ರಿಕೆಯ ಸಂಪಾದಕೀಯದಲ್ಲಿ ‘ಲಾರ್ಡ್ ಕರ್ಜನ್ನನು ಲಂಕೆಯ ರಾವಣನ ಹಾಗೆ ಭಾರತದಲ್ಲೆಲ್ಲ ಭ್ರಾಂತನಾಗಿ ಕುಣಿಯಬಯಸುತ್ತಿದ್ದಾನೆ. ಅಧಿಕಾರದ ಮದ ಅವನ ತಲೆಗೇರಿ ವಿಚಾರಶೂನ್ಯತೆಯುಂಟಾಗಿದೆ. ಬಂಗಾಲದಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮದಿಸಿದ ಆನೆಯಂತೆ ಅಲೆಯುತ್ತಿದ್ದಾನೆ’ ಎಂದು ತೀಕ್ಷ್ಣವಾಗಿ ಬರೆದು ಪ್ರತಿಭಟಿಸಿದ್ದರು.

ಜನರನ್ನು ಒಗ್ಗೂಡಿಸುವುದಕ್ಕೆ ಗಣೇಶೋತ್ಸವವನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸುವಂತೆ ತಿಲಕರು ಕರೆಕೊಟ್ಟರು. ಆ ಹಬ್ಬದ ಸಂದರ್ಭದಲ್ಲಿ ಜನರಿಗೆ ಅರಿವನ್ನು ಮೂಡಿಸಲು ಉಪನ್ಯಾಸಗಳನ್ನು ಏರ್ಪಡಿಸಿದರು. ತಿಲಕರು ಛತ್ರಪತಿ ಶಿವಾಜಿಯ ವೀರ್ಯ, ಶೌರ್ಯ, ಪ್ರತಾಪಗಳನ್ನು ಆವಾಹಿಸಿಕೊಂಡಿದ್ದರು. ಅವನಲ್ಲಿ ಅಡಗಿದ್ದ ರಾಜನೀತಿ, ರಾಜತಂತ್ರ, ಸ್ಪೂರ್ತಿ, ಶಕ್ತಿಸಂಪನ್ನತೆ ಮುಂತಾದ ಕ್ಷಾತ್ರಗುಣಗಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನ್ವಯಿಸಿ ಅವನ್ನು ಅನುಷ್ಠಾನಗೊಳಿಸಲು ಅವರು ಸದಾ ಉತ್ಸುಕರಾಗಿರುತ್ತಿದ್ದರು. ಅದಕ್ಕಾಗಿ ಅವರು ಶಿವಾಜಿಯ ಜಯಂತಿ (15-4-1896)ಯನ್ನು ಜನರ ಒಗ್ಗಟ್ಟಿನ ಸಂಕೇತವಾಗಿ ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.

ತಿಲಕರು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರೂ ಕ್ರಾಂತಿಕಾರಿ ಯೋಚನೆಯಳ್ಳವರಾಗಿದ್ದರು. ದಿಟ್ಟ, ನಿರ್ಭೀತ ನುಡಿಗಳುಳ್ಳವರಾಗಿದ್ದರು. ಇದು ಸ್ಪಷ್ಟವಾಗಬೇಕಾದರೆ ಅವರು ‘ಅಸ್ಪಶ್ಯತೆ’ ಮತ್ತು ‘ಮೋಕ್ಷ’ದ ಬಗ್ಗೆ ಆಡಿದ ಮಾತುಗಳನ್ನು ಗಮನಿಸಬೇಕು. ‘ಒಂದು ವೇಳೆ ದೇವರು ಅಸ್ಪಶ್ಯತೆಯನ್ನು ಒಪ್ಪಿಕೊಳ್ಳುವುದಾದರೆ ನಾನು ಅವನನ್ನು ದೇವರೆಂದು ನಂಬುವುದಿಲ್ಲ. ಪುರಾತನ ಕಾಲದಲ್ಲಿ ಬ್ರಾಹ್ಮಣರ ಕ್ರೂರತೆಯಿಂದ ಅಸ್ಪಶ್ಯತೆ ಆಚರಣೆ ಬಂದಿರಬಹುದು. ಆದರೆ ಈಗ ನಾವು ಆ ಪಿಡುಗನ್ನು ನಿಮೂಲ ಮಾಡಬೇಕಾದ ಕಾಲ ಬಂದಿದೆ’ ಎಂದು ಹೇಳಿದ್ದರು. ತಿಲಕರಿಗೆ ‘ದೈವಭಕ್ತಿ’ ಮತ್ತು ‘ರಾಷ್ಟ್ರಭಕ್ತಿ’ ಬೇರೆಯಾಗಿರಲಿಲ್ಲ. ಎರಡೂ ಒಂದೇ ಆಗಿದ್ದವು. ಅದಕ್ಕೆ ಸಾಕ್ಷಿಯಾಗಿ ಅವರು ‘ಪಾಂಡುರಂಗನ ಭಕ್ತರು ವರ್ಷವರ್ಷವೂ ಯಾತ್ರೆ ಮಾಡುತ್ತ ತಾವು ಪಂಢರಾಪುರದಲ್ಲಿ ನಿಧನರಾದರೆ ಮೋಕ್ಷ ಸಿಗುವುದೆಂಬ ನಂಬಿಕೆ ಹೊಂದಿರುತ್ತಾರೆ. ಹಾಗೆಯೇ ನೀವು ಸ್ವರಾಜ್ಯಕ್ಕಾಗಿ ಹೋರಾಡುತ್ತ ಮಡಿದರೆ ಅದು ತಾಯ್ನಾಡಿನ ಮುಕ್ತಿಗಾಗಿ ನೀವು ಮಾಡಿದ ಪ್ರಯತ್ನವಾಗುವುದು’ ಎಂದು ಹೇಳಿದ್ದರು.

1856 ಜುಲೈ 23ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಗಂಗಾಧರ ರಾಮಚಂದ್ರ ಪಂತ್ ಮತ್ತು ಪಾರ್ವತಿಬಾಯಿ ದಂಪತಿಗೆ ಮಗನಾಗಿ ಜನಿಸಿದರು. ಮುದ್ದಿಗಾಗಿ, ಪ್ರೀತಿಗಾಗಿ ‘ಬಾಲ’ ಎಂದು ಕರೆಯುತ್ತಿದ್ದ ಪದ ಅವರ ‘ಗಂಗಾಧರ’ ಎಂಬ ಹೆಸರೊಂದಿಗೇ ಶಾಶ್ವತವಾಗಿ ಸೇರಿಕೊಂಡಿತು. ನಮ್ಮ ದೇಶ ಕಂಡ ಸಾಟಿಯಿಲ್ಲದ, ವೀರ, ಅಪ್ರತಿಮ ರಾಷ್ಟ್ರಭಕ್ತ ಅವರು. ಅವರೊಬ್ಬ ಹುಟ್ಟು ಹೋರಾಟಗಾರ, ಪತ್ರಕರ್ತ, ಅಧ್ಯಾಪಕ, ಸಮಾಜಸುಧಾರಕ, ನ್ಯಾಯವಾದಿ ಎಲ್ಲವೂ ಆಗಿದ್ದರು. ಜೈಲುವಾಸದಲ್ಲಿ ಇರುವಾಗಲೇ ಅವರು ‘ಗೀತಾರಹಸ್ಯ’ ಮತ್ತು ’ಅ್ಚಠಿಜ್ಚಿ ಏಟಞಛಿ ಟ್ಛ ್ಖಛಚಠ’ ಎಂಬ ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದರು. 64 ವರ್ಷಗಳ ಕಾಲ ಸಾರ್ಥಕ ಬಾಳ್ವೆ ನಡೆಸಿದ ಈ ಉಜ್ವಲ ಸ್ವಾತಂತ್ರ್ಯದೀಪ 1920 ಆಗಸ್ಟ್ 1ರಂದು ಆರಿಹೋಯಿತು.

ನೂರರ ಸ್ಮರಣೆ

ಇದೇ ಆಗಸ್ಟ್ 1ಕ್ಕೆ ಲೋಕಮಾನ್ಯ ಬಾಲ ಗಂಗಾಧರ ತಿಲಕರು ನಿಧನರಾಗಿ 100 ವರ್ಷಗಳು ತುಂಬಲಿವೆ. ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಹಲವು ಸ್ವಯಂಸೇವಾ ಸಂಸ್ಥೆಗಳು ಈ ನಿಮಿತ್ತ ತಿಲಕರ ಸಂದೇಶ ಸಾರುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕರೊನಾ ಆರ್ಭಟ ಇರುವುದರಿಂದ ವಿಡಿಯೋ ಕಾನ್ಪರೆನ್ಸ್ ಮತ್ತು ಆನ್​ಲೈನ್ ವೇದಿಕೆಗಳ ಮೂಲಕ ಕಾರ್ಯಕ್ರಮ ನಡೆಯಲಿವೆ.

(ಲೇಖಕರು ನಿವೃತ್ತ ಉಪನ್ಯಾಸಕರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net