ಸಕಾಲಿಕ ಅಂಕಣ: ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಬೇಕಿದೆ ಮಹಿಳೆಯರ ಸಹಭಾಗಿತ್ವ

E 3
Published on

ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೊಟ್ಟಮೊದಲ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಪ್ರಖ್ಯಾತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಮಹತ್ವದ ಸಂಶೋಧನೆ ‘ರಾಮನ್ ಪರಿಣಾಮ’ 1928ರ ಫೆಬ್ರವರಿ 28ರಂದು ಪ್ರಕಟಗೊಂಡಿತು. ಈ ಚರಿತ್ರಾರ್ಹ ಸಂದರ್ಭದ ಸ್ಮರಣಾರ್ಥ ಪ್ರತಿವರ್ಷ ಆ ದಿನವನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. 1930ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರವಾದ ಈ ಸಂಶೋಧನೆ ಪ್ರಾರಂಭದಲ್ಲಿ ಅಷ್ಟೇನೂ ದೂರಗಾಮಿ ಅನುಕೂಲಗಳ ಬಗೆಗೆ ಮುನ್ಸೂಚನೆಯನ್ನೇನೂ ನೀಡುವಂತಿಲ್ಲದಿದ್ದರೂ, ದಿನ ಕಳೆದಂತೆ ಈ ಮೂಲ ಸಂಶೋಧನೆಯ ಆನ್ಯಯಿಕ ತಂತ್ರಜ್ಞಾನ ವಿಸ್ತರಿಸುತ್ತಲೇ ಹೋದುದು ನಿಜಕ್ಕೂ ಕುತೂಹಲಕಾರಿ.

ಬೆಳಕಿಗೆ, ಬೆಳಕಿನ ಕಿರಣಗಳ ಸ್ವಭಾವಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಅಂಶವನ್ನು ಈ ಸಂಶೋಧನೆ ಸ್ಪಷ್ಟಪಡಿಸಿದೆ. ಪಾರದರ್ಶಕ ವಸ್ತು (ಮಾಧ್ಯಮ) ಒಂದರ ಮೂಲಕ ಹಾಯ್ದು ಹೋಗುವ ಬೆಳಕಿನ ಕಿರಣಗಳ ತರಂಗಮಾನ ವ್ಯತ್ಯಯ ಹೊಂದುತ್ತದೆ. ಇನ್ನಷ್ಟು ನಿಖರವಾಗಿ ಹೇಳಬೇಕೆಂದರೆ ಬೆಳಕಿನ ಕಿರಣಗಳು ಹೊಂದಿರುವ ಫೋಟಾನ್ (PHOTON) ಎಂಬ ಚೈತನ್ಯ ಕಣಗಳಲ್ಲಿನ ರಚನೆ ಮತ್ತು ಶಕ್ತಿಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಈ ವ್ಯತ್ಯಾಸ ಮಾಧ್ಯಮದ ಸ್ವಭಾವಕ್ಕೆ ಅನುಗುಣವಾಗಿರುತ್ತದೆ. ವಸ್ತುವಿನ ಮೇಲೆ ಬೀಳುವ ಪತನಕಿರಣಗಳು ಮತ್ತು ಅದರಿಂದ ಹೊಮ್ಮುವ ನಿರ್ಗಮನ ಕಿರಣಗಳ ನಡುವಣ ಈ ವ್ಯತ್ಯಾಸವನ್ನು ಬೆಳಕಿನ ತರಂಗಮಾನಕ್ಕೆ ಅನುಗುಣವಾಗಿ ಉಂಟಾಗುವ ರೋಹಿತ (ವರ್ಣಪಟಲ-SPECTRUM)ದ ಮೂಲಕ ಅಭ್ಯಸಿಸಬಹುದು. ಇದಕ್ಕೆ ರೋಹಿತದರ್ಶಕ (SPECTRO METER)) ಉಪಕರಣವನ್ನು ಬಳಸಲಾಗುತ್ತದೆ. ನ್ಯಾನೋ ತಂತ್ರಜ್ಞಾನ ಮತ್ತು ಕ್ವಾಂಟಮ್ ಸಿದ್ಧಾಂತಗಳ ಸಹಾಯದಿಂದ ಇಂತಹ ಫೋಟಾನಿನ ಗುಣಲಕ್ಷಣಗಳ ಬಗೆಗೆ ಹೆಚ್ಚು ನಿಖರವಾಗಿ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ‘ರಾಮನ್ ಪರಿಣಾಮ’ದ ತತ್ತ್ವವನ್ನು ಆಧರಿಸಿ ವಸ್ತುವನ್ನು ಒಡೆಯದೆ, ಕೊರೆಯದೆ ಅಥವಾ ಯಾವುದೇ ರೀತಿಯ ಆಘಾತಕ್ಕೆ ಒಳಪಡಿಸದೆ ಅದನ್ನು ಸುರಕ್ಷಿತವಾಗಿ ಮತ್ತು ಸಮಗ್ರವಾಗಿ ಪರೀಕ್ಷಿಸಲು ಸಾಧ್ಯ. ಉದಾಹರಣೆಗೆ, ಬೆಲೆಬಾಳುವ ಹರಳು, ರತ್ನ ಅಥವಾ ವಜ್ರದಂತಹ ವಸ್ತುಗಳ ಶುದ್ಧತೆಯನ್ನು ಅಥವಾ ಅವುಗಳಲ್ಲಿರುವ ಕಲ್ಮಷದ ಪ್ರಮಾಣವನ್ನು ಈ ವಿಧಾನದಮೂಲಕ ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಬರಬರುತ್ತ ಈ ತತ್ತ್ವವನ್ನೇ ಆಧರಿಸಿ ಅರೆಪಾರದರ್ಶಕ ಮತ್ತು ಕೆಲಮಟ್ಟಿನ ಅಪಾರದರ್ಶಕ ವಸ್ತುಗಳ ಬಗೆಗೂ ಪರೀಕ್ಷಿಸಬಲ್ಲ ಹೊಸ ಹೊಸ ತಾಂತ್ರಿಕ ವಿಧಾನಗಳು ರೂಪುಗೊಂಡವು. ಇವುಗಳನ್ನಾಧರಿಸಿ ಉದ್ಯಮಗಳು ಪ್ರಾರಂಭವಾದವು. ಫೋಟೋ ಫಿಲ್ಮ್ ಗಳ ತಯಾರಿಕೆ ಉದ್ಯಮ ಇದಕ್ಕೊಂದು ಉದಾಹರಣೆ. ಈ ಅನುಕೂಲಗಳಿಂದಾಗಿ ಈ ಸಂಶೋಧನೆ ಭಾರತೀಯರ ಪಾಲಿಗಂತೂ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಗಿ ಪರಿಣಮಿಸಿತು.

ಅಷ್ಟೇ ಅಲ್ಲ. ಇದರ ಸ್ಮರಣಾರ್ಥ ಆಚರಿಸಲಾಗುವ ‘ರಾಷ್ಟ್ರೀಯ ವಿಜ್ಞಾನ ದಿನ’ಕ್ಕೂ ವೈಜ್ಞಾನಿಕ ಚಟುವಟಿಕೆಗಳಿಗೆ ಸ್ಪೂರ್ತಿದಾಯಕ ಸಂದರ್ಭವಾಗಿ ಪರಿಣಮಿಸಿತು. ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ವೈಜ್ಞಾನಿಕ ವಿಷಯಗಳ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಜೊತೆಜೊತೆಗೆ ಜನಸಾಮಾನ್ಯರಲ್ಲೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಬಲ್ಲ ವಿವಿಧ ಕಾರ್ಯಕ್ರಮಗಳ ಆಯೋಜನೆಗೂ ಇದು ಪ್ರೇರಕವಾಗಿ ಪರಿಣಮಿಸಿತು. ಇದಕ್ಕಾಗಿಯೇ ಪ್ರತಿವರ್ಷವೂ ಪ್ರಮುಖ ಉದ್ದೇಶವನ್ನು ಆರಿಸಿ ಧ್ಯೇಯವಾಕ್ಯದಂತೆ ಅದನ್ನು ಪ್ರಕಟಿಸುವ ಕ್ರಮವು ರೂಪುಗೊಂಡಿತು. ಈ ಸಾಲಿನ (2020ನೇ ಸಾಲಿನ) ಧ್ಯೇಯವಾಕ್ಯ ‘ಮಹಿಳೆಯರು ಮತ್ತು ವಿಜ್ಞಾನ’ ಎಂಬುದಾಗಿದೆ.

ಇದು ನಿಜಕ್ಕೂ ಅತ್ಯಂತ ಗಂಭೀರವಾದ ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ತೀರ ಮಹತ್ವದ ವಿಷಯ ಎನ್ನುವುದು ನಿರ್ವಿವಾದ. ಇಂದಿನ ವಿಜ್ಞಾನ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಮಹಿಳಾಸಬಲೀಕರಣ ಎನ್ನುವುದು ಕೇವಲ ಕ್ಲೀಷೆಯಾಗಿ ಉಳಿಯದೆ ಅದೊಂದು ಅತ್ಯಂತ ಅರ್ಥಪೂರ್ಣ ಪ್ರಕ್ರಿಯೆ ಆಗಬಲ್ಲದು ಎಂದರೆ ಅತಿಶಯೋಕ್ತಿಯಲ್ಲ. ಪುರುಷರಿಗೇ ಪ್ರಾಧಾನ್ಯತೆ ನೀಡಲಾಗುತ್ತಿದ್ದ ಸೈನ್ಯಮತ್ತು ರಕ್ಷಣಾಪಡೆಗಳಲ್ಲೂ ಲಿಂಗ ತಾರತಮ್ಯ ನಿವಾರಣೆಗೆ ಸೂಕ್ತ ಮನೋಭಾವ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇದಕ್ಕೆ ಆನೆಬಲವನ್ನೊದಗಿಸಿದೆ.

ವಿಜ್ಞಾನ ಕಲಿಕೆ, ಬೋಧನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಮಾಣ ಭಾರತದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ತುಂಬ ಕಡಿಮೆ. ಇದು ಮುಂಚಿನಿಂದಲೂ ಇರುವ ವಸ್ತುಸ್ಥಿತಿ. ಮಹಿಳೆಯರಿಗೆ ಮತದಾನದ ಹಕ್ಕೂ ಇಲ್ಲದಿದ್ದ ದಿನಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಗೃಹಕೃತ್ಯ ಮತ್ತು ಸಾಂಸಾರಿಕ ಜವಾಬ್ದಾರಿಗಳಿಗಷ್ಟೇ ಮಹಿಳೆಯರ ಕಾರ್ಯವ್ಯಾಪ್ತಿ ಸೀಮಿತ ಎಂದು ಭಾವಿಸಲಾಗಿದ್ದ ಹಿಂದಿನ ಕಾಲದಲ್ಲಿ ಹೆಣ್ಣು, ಗಂಡು ಎಂಬ ತಾರತಮ್ಯ ಸಮಾಜದಲ್ಲಿ ಬೇರೂರಿದ್ದ ಪರಿಣಾಮವೇ ಇಂತಹ ಪರಿಸ್ಥಿತಿ ಉಂಟಾಗಲು ಕಾರಣವಾಯಿತು. ಈ ಮಾತು ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ.

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಮಾನತೆಗೆ ಆದ್ಯತೆ ಕಲ್ಪಿಸಬೇಕಾದ ಅವಶ್ಯಕತೆ ಬಗ್ಗೆ ಆಗಾಗ ಪ್ರತಿಪಾದನೆ ಕಂಡುಬರುತ್ತಿದ್ದರೂ ವಾಸ್ತವ ಇದಕ್ಕಿಂತ ಭಿನ್ನವಾಗಿದೆ. ಸ್ತ್ರೀ ಸಮಾನತೆಗಾಗಿ ನಡೆಯುತ್ತಿರುವ ಪ್ರಯತ್ನಗಳು, ಹೋರಾಟಗಳು ರಾಜಕೀಯ ಅಥವಾ ಅಧಿಕಾರ ವಲಯಗಳಲ್ಲಿ ಕಂಡುಬಂದಂತೆ ಶಿಕ್ಷಣ ಮತ್ತು ಸಂಶೋಧನಾವಲಯಗಳಲ್ಲಿ ಕಾಣಸಿಗುತ್ತಿಲ್ಲ. ವಿಜ್ಞಾನ ಅಥವಾ ತಂತ್ರಜ್ಞಾನ ಹೆಣ್ಣುಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯೇ ಸರಿ, ಅವರಿಗೆ ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಅಥವಾ ಕಲಾತ್ಮಕ ವಿಷಯಗಳು ಮಾತ್ರ ಅಭ್ಯಾಸಕ್ಕೆ ಸೂಕ್ತ ಎನ್ನುವಂತಹ ಸಾಂಪ್ರದಾಯಿಕ ಮೌಢ್ಯವೇ ಮಹಿಳೆಯರ ಪಾಲಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ತೊಡಕಾಗಿ ಪರಿಣಮಿಸಿತೆಂಬುದು ನಿರ್ವಿವಾದ. ಆದರೆ ಭಾರತೀಯ ಮಹಿಳೆ ವಿಜ್ಞಾನವೂ ಸೇರಿ ಯಾವುದೇ ಕ್ಷೇತ್ರದಲ್ಲಿ ಪುರುಷರಿಗಿಂತ ಕಡಿಮೆಯೇನಿಲ್ಲ ಎನ್ನುವುದು ವಾಸ್ತವ.

ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಇದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾರೆ. ಅಮೆರಿಕದ ನಾಸಾ ಸಂಸ್ಥೆ ಅಂತರಿಕ್ಷದಲ್ಲಿ ಹಾರಿಬಿಟ್ಟ ಕೋಲಂಬಿಯಾ ಗಗನನೌಕೆಯಲ್ಲಿದ್ದ ಏಳು ಸಿಬ್ಬಂದಿಯಲ್ಲಿ ಒಬ್ಬರಾಗಿದ್ದ ಅವರು ನೌಕೆ ಭೂಮಿಗೆ ಮರಳುವ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದರು. 2003ರಲ್ಲಿ ಸಂಭವಿಸಿದ ಈ ದುರ್ಘಟನೆ ಅಂತರಿಕ್ಷಯಾನಕ್ಕೆ ಭಾರೀ ಹಿನ್ನಡೆ ಉಂಟುಮಾಡಿತು. ವಿಶ್ವವೇ ಬೆಚ್ಚಿಬಿತ್ತು. ಎಲ್ಲರ ಕಣ್ಣು ಒದ್ದೆಯಾದವು. ಕಲ್ಪನಾ ಚಾವ್ಲಾರಿಗೆ ಮರಣೋತ್ತರವಾಗಿ ಅನೇಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಭಾರತವೂ ಇದರಲ್ಲಿ ಹಿಂದೆಬೀಳಲಿಲ್ಲ. ಮಹಿಳಾ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಕಲ್ಪನಾ ಚಾವ್ಲಾ ಹೆಸರಿನಲ್ಲಿ ವಿಶೇಷ ಪ್ರಶಸ್ತಿಯನ್ನು 2004ರಲ್ಲಿ ಪ್ರಕಟಿಸಿತು. ಇನ್ನೂ ಅನೇಕ ಚಟುವಟಿಕೆಗಳು ಅವರ ಸ್ಮರಣಾರ್ಥ ಪ್ರಾರಂಭವಾದವು. ಕಲ್ಪನಾ ಚಾವ್ಲಾರಂತೆಯೇ ಅನೇಕ ಭಾರತೀಯ ಅಥವಾ ಭಾರತೀಯ ಮೂಲದ ಮಹಿಳೆಯರು ವಿದೇಶೀಕಂಪನಿಗಳಲ್ಲಿ ಮಹತ್ವದ ಸ್ಥಾನ ಪಡೆದಿರುವುದನ್ನು ಗಮನಿಸಬಹುದಾಗಿದೆ. ಆದರೆ ಭಾರತದಲ್ಲಿ ಮಾತ್ರ ಇಂತಹ ಬೆಳವಣಿಗೆ ಅಷ್ಟಾಗಿ ಕಂಡುಬರಲಿಲ್ಲ.

2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಉಳಿದ ಕ್ಷೇತ್ರಗಳಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಹೊಸ ಬೆಳವಣಿಗೆ ಚುರುಕುಗೊಂಡಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ಜ್ಞಾನಾಧಾರಿತ ಸಂಶೋಧನಾವಿಧಾನ- ಓಐಅಘ ಎಂಬ ಹೊಸಕ್ರಮವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾರಂಭಿಸಿತು. ಮಹಿಳೆಯರಿಗಾಗಿ ಪ್ರತ್ಯೇಕ ಟೆಕ್ನಾಲಜಿ ಪಾರ್ಕ್​ಗಳ ರಚನೆ, ವಿವಿಧ ಬಗೆಯ ತಾಂತ್ರಿಕ ಕೌಶಲಗಳ ಲಭ್ಯತೆಯ ಬಗೆಗೆ ಒಂದೇಕಡೆ ಸಮಗ್ರಮಾಹಿತಿ ನೀಡಬಲ್ಲ ಕೇಂದ್ರೀಕೃತ ಏಕಗವಾಕ್ಷಿ ವ್ಯವಸ್ಥೆ, ಸ್ಥಳೀಯ ಅಗತ್ಯಗಳನ್ನಾಧರಿಸಿದ ತಾಂತ್ರಿಕ ಕೌಶಲಗಳ ವಿವರ ಮುಂತಾದ ಹೊಸಕ್ರಮಗಳನ್ನು ಮಹಿಳಾವಿಜ್ಞಾನಿಗಳ ಪ್ರೋತ್ಸಾಹಕ್ಕಾಗಿಯೇ ಯೋಜಿಸಲಾಯಿತು. ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಜ್ಞಾನ ವಿಷಯ ಬೋಧನೆಗೆ ನೆರವಾಗಲು ‘ವಿಜ್ಞಾನಜ್ಯೋತಿ’ ಎಂಬ ವಿಶೇಷ ಕಲಿಕಾವಿಧಾನವನ್ನು ರೂಪಿಸಲಾಯಿತು. 2019ರಲ್ಲಿ ದೇಶದ ಆಯ್ದ ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸಲಾಯಿತು. ಮೂಲವಿಜ್ಞಾನದ ವಿವಿಧ ವಿಷಯಗಳಲ್ಲಿ ಮತ್ತು ಆನ್ವಯಿಕ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನಾ ಕಾರ್ಯದಲ್ಲಿ ಮಹಿಳೆಯರಿಗೆ ನೆರವಾಗಲು ವಿವಿಧಮಟ್ಟದ ವಿದ್ಯಾರ್ಥಿವೇತನ, ಶಿಷ್ಯವೇತನ ಮತ್ತು ಸಾಲ ಸೌಲಭ್ಯಗಳಂತಹ ಅನುಕೂಲಗಳನ್ನು ಪ್ರಾರಂಭಿಸಲಾಯಿತು. ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡವು. ಕೆಲ ಖಾಸಗಿ ಸಂಸ್ಥೆಗಳೂ ಇದಕ್ಕೆ ಕೈಜೋಡಿಸಿದವು. ಔಷಧ, ಆರೋಗ್ಯರಕ್ಷಣೆ, ಜೈವಿಕ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಪೋ›ತ್ಸಾಹಿಸಲು ವಿಶೇಷ ಗಮನ ನೀಡಲಾಯಿತು. 2015-19ರ ಅವಧಿಯಲ್ಲಿ 77ಮಹಿಳೆಯರಿಗೆ ‘ಯುವ ವಿಜ್ಞಾನಿ’ ನೆರವಿನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಲೋಕಸಭೆಯಲ್ಲಿ ಇತ್ತೀಚೆಗೆ ತಿಳಿಸಿದ್ದಾರೆ. ಈ ಎಲ್ಲ ಪರಿಶ್ರಮಗಳ ಫಲವಾಗಿ ವೈಜ್ಞಾನಿಕ ಸಂಶೋಧನೆಯಲ್ಲಿ ಮಹಿಳೆಯರ ಪ್ರಮಾಣ 2015ರಲ್ಲಿ ಶೇಕಡ 13.9ರಷ್ಟಿದ್ದುದು 2019ರಲ್ಲಿ ಶೇಕಡ 29ಕ್ಕೇರಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಅಂತರಿಕ್ಷ ಸಂಶೋಧನಾಸಂಸ್ಥೆ (ISRO)) ಒಂದು ಅತ್ಯುತ್ತಮ ನಿದರ್ಶನ ಎನ್ನಬಹುದು. ಮಂಗಳಯಾನ ಮತ್ತು ಚಂದ್ರಯಾನ ಯೋಜನೆಗಳಲ್ಲಿ ಮಹಿಳಾವಿಜ್ಞಾನಿಗಳು ಧುರೀಣತ್ವ ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಸ್ರೋದಲ್ಲಿ ಉಪಗ್ರಹಗಳ ವಿನ್ಯಾಸ ನಿರೂಪಣೆ, ನಿರ್ವಣಕಾರ್ಯ, ಉಡಾವಣಾವಾಹಕ ವ್ಯವಸ್ಥೆಯ ವಿವರಗಳು ಮತ್ತು ದತ್ತಾಂಶಸಂಗ್ರಹಗಳಂತಹ ಅನೇಕ ಮಹತ್ವದ ಕಾರ್ಯಗಳಲ್ಲಿ ಮಹಿಳಾಪರಿಣಿತರು ಪುರುಷರಷ್ಟೇ ಸಮರ್ಥರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ದೇಶಕ್ಕೇ ಹೆಮ್ಮೆಯ ವಿಷಯ. ದೈಹಿಕ ಸಾಮರ್ಥ್ಯ ಅವಲಂಬಿಸಿದ ಕೆಲಸಗಳನ್ನು ಬಿಟ್ಟರೆ ಜೀವವಿಜ್ಞಾನ, ತಾಂತ್ರಿಕ ಕೌಶಲ, ಕೃತಕಬುದ್ಧಿಮತ್ತೆ ಮತ್ತು ದೂರಸಂಪರ್ಕ ಮುಂತಾದ ಕ್ಷೇತ್ರದಲ್ಲಿ ಮಹಿಳೆಯರೇ ಹೆಚ್ಚು ಸೂಕ್ತ ಎನ್ನುವುದು ತಿಳಿದುಬಂದಿದೆ. ಮಹಿಳೆಯರಲ್ಲಿ ತಾಳ್ಮೆ, ರ್ತಾಕ ಚಿಂತನೆ, ಎಷ್ಟುಬಾರಿ ಬೇಕಾದರೂ ಬೇಸರಿಸದೆ ಪುನರಾವರ್ತನೆಗೆ ಒಡ್ಡಿಕೊಳ್ಳಬಲ್ಲ ಜಿಗುಟುತನ, ದಣಿವರಿಯದ ಅವಿಶ್ರಾಂತ ದುಡಿಮೆ ಮತ್ತು ಸಹನಶೀಲತೆ ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು. ತಮ್ಮ ಆಸಕ್ತಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ, ಸೋಲು-ಹಿನ್ನಡೆಗಳಿಗೆ ಜಗ್ಗದೆ ಕುಗ್ಗದೆ, ನಿರಂತರ ಪರಿಶ್ರಮಕ್ಕೆ ಒಡ್ಡಿಕೊಳ್ಳುವ ಅವರ ಕಾಯಕದ ತಾದಾತ್ಮಿಕತೆಯನ್ನು ಪುರುಷರಲ್ಲಿ ಕಾಣುವುದು ಅಪರೂಪ. ’ವೈಜ್ಞಾನಿಕ ಸಂಶೋಧನೆಗೆ ಕಠಿಣ ಪರಿಶ್ರಮ ಅಗತ್ಯ’ ಎನ್ನುವ ಪೊ›ಫೆಸರ್ ಸಿ.ಎನ್.ಆರ್.ರಾವ್ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ವೈಜ್ಞಾನಿಕ ಸಂಶೋಧನಾ ಕಾರ್ಯಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಪ್ರಖ್ಯಾತ ಮಹಿಳಾ ವಿಜ್ಞಾನಿ ಮೇರೀ ಕ್ಯೂರಿ ಅವರನ್ನು ಇಲ್ಲಿ ಉದಾಹರಿಸಬಹುದು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಹೀಗೆ ಎರಡೂ ವಿಷಯಗಳಲ್ಲಿ 1903 ಮತ್ತು 1911ರಲ್ಲಿ ಪ್ರತ್ಯೇಕವಾಗಿ ಎರಡು ನೊಬೆಲ್ ಪ್ರಶಸ್ತಿಪಡೆದ ಏಕೈಕ ವಿಜ್ಞಾನಿ ಅವರಾಗಿದ್ದಾರೆ.

(ಲೇಖಕರು ಕೇಂದ್ರೀಯ ವಾರ್ತಾಸೇವೆಯ ನಿವೃತ್ತ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net