

‘ದೈಹಿಕ ಸಾಮರ್ಥ್ಯ ಮಿತಿಯ (Limitations) ಕಾರಣದಿಂದಾಗಿ ಮಹಿಳೆಯರಿಗೆ ಕಮಾಂಡಿಂಗ್ ಹುದ್ದೆ ನೀಡಲು ಸಾಧ್ಯವಿಲ್ಲ’ ಎನ್ನುವ ಕೇಂದ್ರ ಸರ್ಕಾರದ ವಾದಕ್ಕೆ ‘ಆಡಳಿತಾತ್ಮಕ ಇಚ್ಛಾಶಕ್ತಿ ಮತ್ತು ಮನಸ್ಥಿತಿ ಬದಲಾವಣೆಯ ಅಗತ್ಯವಿದೆ’ ಎನ್ನುವ ಖಡಕ್ ಅಭಿಪ್ರಾಯದೊಂದಿಗೆ ಸವೋಚ್ಚ ನ್ಯಾಯಾಲಯ ಮಹಿಳೆಯರಿಗೆ ಕಮಾಂಡಿಂಗ್ ಹುದ್ದೆಗೆ ಸಮಾನ ಅವಕಾಶ ನೀಡುವಂತೆ ಆದೇಶ ನೀಡಿದೆ. ಜಮ್ಮು-ಕಾಶ್ಮೀರದಂತಹ ಉಗ್ರವಾದಗ್ರಸ್ತ ಪ್ರದೇಶದಲ್ಲಿ ಎದುರಿನಿಂದ ವೈರಿಗಳು, ಇನ್ನೊಂದೆಡೆ ಭಯಾನಕ ಉಗ್ರರು, ಮೇಲಾಗಿ ವಿಷಮ ಹವಾಮಾನ ಪರಿಸ್ಥಿತಿ ಎನ್ನುವಂತಹ ಹಲವು ಶತ್ರುಗಳೊಂದಿಗೆ ಏಕಕಾಲದಲ್ಲಿ ಎದುರಿಸುವ ಶಕ್ತಿ ಸ್ತ್ರೀಯರಿಗಿದೆಯೇ ಎನ್ನುವ ಅಪಸ್ವರ 1993ರಲ್ಲಿ ಮಹಿಳೆಯರಿಗೆ ಕಮಿಷನ್ಡ್
ತಾರತಮ್ಯದ ಅಸಂತೋಷ: ಸೇನೆಯ ಶಿಕ್ಷಣ ಮತ್ತು ನ್ಯಾಯಾಂಗ ವಿಭಾಗಗಳಾದ ಸೇನಾ ಶಿಕ್ಷಣ ಕೋರ್ (Army Educational Corps) ಮತ್ತು ಜಡ್ಜ್ ಅಡ್ವೋಕೇಟ್ ಜನರಲ್ ಬ್ರಾಂಚ್ (Judge Advocate General branch) ಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳಾ ಪರ್ಮನೆಂಟ್ ಕಮಿಷನ್ ಸೌಲಭ್ಯವನ್ನು ಈ ವರ್ಷದ ಏಪ್ರಿಲ್ನಲ್ಲಿ ಇತರ ಎಂಟು ವಿಭಾಗಗಳಿಗೆ ವಿಸ್ತರಿಸುವುದಾಗಿ ಸೆಪ್ಟೆಂಬರ್ 2019ರಲ್ಲೇ ರಕ್ಷಣಾ ಮಂತ್ರಾಲಯವು ಘೊಷಿಸಿದೆ. ಸೇನೆಯ ತಾಂತ್ರಿಕ ವಿಭಾಗಗಳೆನಿಸಿದ ಸಿಗ್ನಲ್ಸ್, ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಅಂಡ್ ಮೆಕ್ಯಾನಿಕಲ್ ಇಂಜಿನಿಯರ್ಸ್ (EME), ಆರ್ಡಿನೆನ್ಸ್ ಮೊದಲಾದ ನಾನ್ ಕಾಂಬೇಟೆಂಟ್ ಸ್ವರೂಪದ ಯುನಿಟ್ಗಳಲ್ಲಿ ಪರ್ಮನೆಂಟ್ ಅಧಿಕಾರಿಗಳಾಗಿ (ಕಮಿಷನ್ಡ್) ನೇಮಕ ಮಾಡಲು ಈಗಾಗಲೇ ಸರ್ಕಾರ ಒಪ್ಪಿಕೊಂಡಿದೆ. ಹೊಸ ಆದೇಶದಿಂದ ನೇರವಾಗಿ ಶತ್ರುಗಳನ್ನು ಎದುರಿಸಬೇಕಾದ ಕಾಲ್ದಳದ ಯುನಿಟ್ಗಳ, ತೋಪಖಾನೆ ಹಾಗೂ Armed ರೆಜಿಮೆಂಟ್ಗಳ ಕಮಾಂಡ್ ನೀಡಲೇ ಬೇಕಾಗಿದೆ.
ಶಾರ್ಟ್ ಸರ್ವೀಸ್ ಕಮಿಷನ್ಡ್ ಅಧಿಕಾರಿಯಾಗಿ ಸೇನೆಗೆ ಸೇರುವ ಪುರುಷ ಅಧಿಕಾರಿಗಳಿಗೆ ಆದ್ಯತೆಯ ಮೇಲೆ ಪರ್ಮನೆಂಟ್ ಕಮಿಷನ್ ದೊರೆಯುತ್ತದೆ ಆದರೂ ಮಹಿಳಾ ಅಧಿಕಾರಿಗಳಿಗೆ ಅಂತಹ ಭಾಗ್ಯವಿಲ್ಲ. ಪರ್ಮನೆಂಟ್ ಕಮಿಷನ್ ದೊರೆಯದ ಮಹಿಳಾ ಶಾರ್ಟ್ ಸರ್ವೀಸ್ ಕಮಿಷನ್ಡ್ ಅಧಿಕಾರಿಗಳಿಗೆ ಕಮಾಂಡ್ ಅವಕಾಶವಿಲ್ಲ. 14 ವರ್ಷಗಳ ಅಲ್ಪಾವಧಿಯ ಸೇವೆ ಸಲ್ಲಿಸಿ ಮಧ್ಯವಯಸ್ಸಿನಲ್ಲಿ ನಿವೃತ್ತರಾಗಬೇಕಾದ ಮಹಿಳಾ ಅಧಿಕಾರಿಗಳಿಗೆ ಈ ತಾರತಮ್ಯದ ಕುರಿತು ಅಸಂತೋಷವಿದೆ.
ಪ್ರಥಮ ಪಂಕ್ತಿಯ ಕರ್ತವ್ಯ (First line defence): ಹಿರಿಯ ಸೇನಾನಿ ಲೆ. ಜನರಲ್(ನಿವೃತ್ತ) ಡಿ.ಎಸ್.ಹೂಡಾ ಅವರು ನಿಯಂತ್ರಣ ರೇಖೆ ಅಥವಾ ಪ್ರಥಮ ಶ್ರೇಣಿಯ ರಕ್ಷಣಾ ಪಂಕ್ತಿಯಲ್ಲಿ ಜವಾನರು ಮತ್ತು ಅಧಿಕಾರಿಗಳು ಬಂಕರ್ಗಳಲ್ಲಿ ಒಂದೆಡೆ ಇರಬೇಕಾದಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ಮಹಿಳಾ ಕಮಾಂಡರ್ಗಳನ್ನು ಅಪಾಯಗಳಿಂದ ರಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಬೇಕಾದಂತಹ ಸನ್ನಿವೇಶಗಳಲ್ಲಿ, ಇದು ಪುರುಷ ಜವಾನ-ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಬಹುದು ಎನ್ನುತ್ತಾರೆ. ಅದೇ ಅಧಿಕಾರಿ, ‘ಸೇನೆಯಲ್ಲಿ ಮಹಿಳೆಯರ ಪಾತ್ರದ ಕುರಿತಾಗಿ ನಕಾರಾತ್ಮಕ ಧೋರಣೆ ಹೊಂದಿದ್ದ ನಾನು ಜಮ್ಮು-ಕಾಶ್ಮೀರದ ಉರಿಯಲ್ಲಿ ಬ್ರಿಗೇಡ್ ಕಮಾಂಡರ್ ಆಗಿದ್ದಾಗ ಕ್ಯಾಪ್ಟನ್ ರೋಸಿ ಎನ್ನುವ ಸೇನಾ ಶಿಕ್ಷಣ ಕೋರ್ನ ಮಹಿಳಾ ಅಧಿಕಾರಿ ತನಗೆ ನೀಡಿದ ಹೆಚ್ಚುವರಿ ಅಪರೇಶನ್ ಕಾರ್ಯವನ್ನು ನಿಭಾಯಿಸಿದ ಚಾಕಚಕ್ಯತೆಯಿಂದ ಪ್ರಭಾವಿತನಾಗಿ ನನ್ನ ಧೋರಣೆ ಬದಲಿಸಿಕೊಂಡೆ’ ಎನ್ನುತ್ತಾರೆ.
ತಾವು ಡಿವಿಜನ್ ಕಮಾಂಡರ್ ಆಗಿದ್ದಾಗ ಉಗ್ರವಾದ ಪೀಡಿತ ಇಲಾಖೆಯಲ್ಲಿ ಮಹಿಳಾ ಅಧಿಕಾರಿಯೋರ್ವರು ಕಾನ್ವಾಯ್ ಕಮಾಂಡರ್ ಆಗಿ ಹಾಗೂ ಇಂಜಿನಿಯರ್ಸ್ ತಂಡದ ಜವಾನರೊಂದಿಗೆ ಬುಲ್ಡೋಜರ್ನಲ್ಲಿ ನಿರಂತರ 3-4 ವಾರ ರಾತ್ರಿಯಿಡೀ ಕಳೆದಿದ್ದನ್ನು ಸ್ಮರಿಸುವ ಲೆ.ಜ.(ನಿವೃತ್ತ) ಹಸ್ನೈನ್ ಕೇವಲ ಮಹಿಳೆ ಎನ್ನುವ ಒಂದೇ ಕಾರಣದಿಂದ ಕಮಾಂಡ್ ನೀಡದಿರುವುದು ಸಮಂಜಸವಲ್ಲ ಎನ್ನುತ್ತಾರೆ. ‘ಕಠಿಣ ಪರಿಶ್ರಮ, ವೃತ್ತಿಪರತೆ ಹಾಗೂ ಸಾಮರ್ಥ್ಯವನ್ನು ಹೊಂದಿದ ನಾಯಕತ್ವವನ್ನು ಪುರುಷ-ಮಹಿಳೆ ಎನ್ನದೆ ಗೌರವಿಸುವ ಗುಣ ಸೈನಿಕರಲ್ಲಿದೆ. ಮಹಿಳೆಯರ ಕುರಿತಾದ ನಕಾರಾತ್ಮಕ ಮನಸ್ಥಿತಿಯಿಂದ ಸೈನಿಕರು ಖಂಡಿತ ಹೊರಬರುತ್ತಾರೆ’ ಎನ್ನುತ್ತಾರೆ ಲೆ.ಜ.ಹೂಡಾ.
ಎಲ್ಲರಿಗೂ ದಕ್ಕದ ಕಮಾಂಡ್: ಪಿರಮಿಡ್ ಆಕಾರದ ಸೈನ್ಯ ರ್ಯಾಂಕ್ ಸಂರಚನೆಯಲ್ಲಿ (rank structure) ಕಮಿಷನ್ಡ್ ಪಡೆಯುವ ಪ್ರತಿಯೋರ್ವ ಅಧಿಕಾರಿಗೂ ಯುನಿಟ್ ಒಂದರ ಕಮಾಂಡಿಂಗ್ ಆಫೀಸರ್ (CO) ಹುದ್ದೆ ಹೊಂದುವ ಮಹತ್ವಾಕಾಂಕ್ಷೆ ಇರುತ್ತದೆ. 800-900 ಜವಾನರನ್ನೊಳಗೊಂಡ ಬಟಾಲಿಯನ್ ಕಮಾಂಡರ್ ಹುದ್ದೆ ನಿರ್ವಹಿಸುವ ಕರ್ನಲ್ ರ್ಯಾಂಕ್ ಎಲ್ಲ ಪುರುಷ ಅಧಿಕಾರಿಗಳಿಗೂ ಸುಲಭವಾಗಿ ದಕ್ಕುವುದಿಲ್ಲ. ವಿವಿಧ ವೃತ್ತಿಪರ ಕೋರ್ಸ್ಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ, ನಿರಂತರ ಪರಿಶ್ರಮದಿಂದ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಕಠಿಣ ಮಾನದಂಡಗಳನ್ನು ಸಾಧಿಸುವ ಕೇವಲ ಶೇಕಡ 30 ಅಧಿಕಾರಿಗಳು ಯುನಿಟ್ ಕಮಾಂಡರ್ ಹುದ್ದೆಗೇರುತ್ತಾರೆ.
ಯುನಿಟ್ ಕಮಾಂಡ್ ಮಾಡಿದ ಅಧಿಕಾರಿಗಳಿಗೆ ಮಾತ್ರ ಮುಂದೆ ಬ್ರಿಗೇಡ್, ಡಿವಿಜನ್ಗಳನ್ನು ಕಮಾಂಡ್ ಮಾಡುವ ಅವಕಾಶ ದೊರೆಯುತ್ತದೆ. ಅದರಲ್ಲೂ ಇನ್ಪೆಂಟ್ರಿ, ಆಮ್್ಡರ್ ಆರ್ಟಿಲರಿಯಂತಹ ಕಾಂಬೇಟೆಂಟ್ ಯುನಿಟ್ ಕಮಾಂಡರ್ಗಳಿಗೆ ಮಾತ್ರ ಕೋರ್, ಕಮಾಂಡ್ನಂತಹ ಉನ್ನತ ಸೈನ್ಯ ಫಾಮೇಶನ್ ಕಮಾಂಡರ್ ಹುದ್ದೆ ನಿರ್ವಹಿಸುವ ಹೊಣೆ ದೊರೆಯುತ್ತದೆ. ವೃತ್ತಿ ಪ್ರಾರಂಭಿಸುವ ಪುರುಷರಿಗೆ ತಾವೂ ಒಂದು ದಿನ ಯುನಿಟ್, ಬ್ರಿಗೆಡ್ ಕಮಾಂಡರ್ ಆಗಬೇಕು ಎನ್ನುವ ಬಯಕೆ ಇದ್ದಂತೆ ಮಹಿಳೆಯರಿಗೂ ಸಹಜವಾಗಿಯೇ ಇರುತ್ತದೆ. ದಕ್ಷತೆ, ಸಾಮರ್ಥ್ಯ ಪ್ರದರ್ಶಿಸುವ, ವೃತ್ತಿಪರ ಕಷ್ಟಸಹಿಷ್ಣುತೆ ಇರುವ ದಕ್ಷ ಮಹಿಳಾ ಅಧಿಕಾರಿಗಳಿಗೂ ಅರ್ಹತೆಯ ಆಧಾರದ ಮೇಲೆ ಕಮಾಂಡಿಂಗ್ ಅವಕಾಶ ನೀಡುವ ವ್ಯವಸ್ಥೆ ಸರಿ. ಅದರೊಂದಿಗೂ ಮಹಿಳೆ ಎನ್ನುವ ಆಧಾರದಲ್ಲಿ ಸಿಗುವ ರಿಯಾಯಿತಿಗಳನ್ನು ಮುಂದುವರಿಸುವುದರ ಕುರಿತೂ ಯೋಚಿಸಬೇಕಾಗಬಹುದು.
(ಲೇಖಕರು ಮಾಜಿ ಸೈನಿಕರು, ಹವ್ಯಾಸಿ ಬರಹಗಾರರು)