

ಯಾವುದೇ ವಿಷಯವಾಗಲಿ ಅದು ತಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ಬಹುತೇಕ ಜನರು ಅದನ್ನು ಬೇರೆಯವರಿಗೆ ವರ್ಗಾಯಿಸುತ್ತಾರೆ. ಇಷ್ಟವಾದದ್ದನ್ನು ಮತ್ತು ಇಷ್ಟವಾಗದೇ ಇದ್ದುದನ್ನು, ಸೋಲು ಮತ್ತು ಗೆಲುವು-ಹೀಗೆ ಎರಡನ್ನೂ ಬೇರೆಯವರಿಗೆ ವರ್ಗಾಯಿಸಲು ಇಚ್ಛಿಸಿದರೆ ಮಾತ್ರ ಅದು ಸೂಕ್ತ ಕ್ರಮವಾಗುತ್ತದೆ.
ಹಾಗಾದರೆ ಇದೊಂದು ಪದಗಳ ಒಂದು ರೀತಿಯ ಆಟವೇ? ನಾವು ಯೋಚಿಸಬಹುದಾದ ಒಂದು ರೀತಿಯ ಮನರಂಜನೆಯೇ ಸರಿ. ಕನಸು ಮತ್ತು ಜಾಗ್ರತಾವಸ್ಥೆ ಹಾಗೂ ವಾಸ್ತವಿಕತೆ ಮತ್ತು ಕನಸುಗಳು ಒಂದೆಯೇ? ಅದು ಹಾಗಲ್ಲ, ನಿಮ್ಮ ಸಂವೇದನೆಗಳು ಅವುಗಳನ್ನು ಯಾವ ರೀತಿ ವ್ಯಾಖ್ಯಾನಿಸುತ್ತವೆಯೋ ಆಗ ನಿಮಗೆ ವಾಸ್ತವ ತಿಳಿಯುತ್ತದೆ. ಅದು ಯಾವ ರೀತಿ ಇದೆಯೋ ನಿಮಗೆ ತಿಳಿದಿಲ್ಲ. ಆದ್ದರಿಂದ ನೀವು ಯಾವುದನ್ನು ವಾಸ್ತವಿಕತೆ ಎಂದು ಕರೆಯುವಿರೋ ಅದು ನಿಮ್ಮ ಮನಸ್ಸಿನ ಗ್ರಹಿಕೆಯ ವಿವರಣೆಯಾಗಿರುತ್ತದೆ. ನೀವು ಕನಸು ಎಂದು ಏನನ್ನು ಕರೆಯುವಿರೋ ಅದೂ ಸಹ ಮನಸ್ಸಿನ ಗ್ರಹಿಕೆಯ ವಿವರಣೆಯಾಗಿರುತ್ತದೆ. ನಿಮ್ಮ ಮನಸ್ಸಿನೊಳಗೆ ಏನಾದರೂ ಸಂಭವಿಸಲಿ ಅದು ಇನ್ನೊಂದು ರೀತಿಯ ವಾಸ್ತವಿಕತೆಯಾಗಿರುತ್ತದೆ. ಅದನ್ನು ನಾವು ‘ಮಾನಸಿಕ ವಾಸ್ತವಿಕತೆ’ ಎಂದು ಕರೆಯಬಹುದು. ಬಹುತೇಕ ಜನರಿಗೆ ಅವರ ಕನಸು ಅವರ ಯೋಚನಾಲಹರಿಗಿಂತಲೂ ಹೆಚ್ಚು ಬಲವಾಗಿರುತ್ತದೆ. ವಿಷಾದಕರವೆಂದರೆ, ಬಹಳಷ್ಟು ಕನಸುಗಳು ಅವರ ನೆನಪಿನಲ್ಲಿ ಇರುವುದಿಲ್ಲ.
ಕರ್ಮವನ್ನು ಬಿಡಿಸಿಕೊಳ್ಳುವುದು: ಯಾವುದನ್ನು ಈಗಾಗಲೇ ಮಾಡಿರುವಿರೋ ಅದರಿಂದ ಬಿಡಿಸಿಕೊಳ್ಳುವ ಪ್ರಕ್ರಿಯೆಯನ್ನಾಗಿ ಬದುಕನ್ನು ವ್ಯಾಖ್ಯಾನಿಸಬಹುದು. ‘ನಿನ್ನ ಬದುಕು ಈ ರೀತಿಯಾಗಿರುವುದಕ್ಕೆ ಕಾರಣ ನಿನ್ನ ಕರ್ಮವೇ ಆಗಿದೆ!’- ಎಂದು ನಾವು ಹೇಳುವಾಗ, ನಿಮ್ಮ ಬದುಕು, ಈಗಾಗಲೇ ನೀವೇನು ಮಾಡಿರುವಿರೋ ಅದರಿಂದ ಬಿಡಿಸಿಕೊಳ್ಳುವುದು ಎಂದರ್ಥ. ಆದರೆ ಬದುಕಿನ ಸನ್ನಿವೇಶಗಳು ನೀವು ಹೊಂದಿರುವ ಕರ್ಮದ ವಾಸ್ತವಗಳೊಂದಿಗೆ ಚೆನ್ನಾಗಿ ಸಹಕರಿಸಲಾರದು. ಕಣ್ಣುಗಳನ್ನು ತೆರೆದುಕೊಂಡು ನೀವೊಂದು ಕನಸನ್ನು ಕಟ್ಟಲು ಪ್ರಯತ್ನಿಸಿ, ಇದಕ್ಕೆ ಪ್ರಪಂಚದ ಸಹಕಾರವನ್ನು ಅಪೇಕ್ಷಿಸಿದರೆ ಅದರಿಂದ ಏನಾದರೂ ಪ್ರಯೋಜನವಿದೆಯೇ? ಇಲ್ಲ. ಏಕೆಂದರೆ ಪ್ರಪಂಚವು ನಿಮ್ಮ ಕನಸಿನೊಂದಿಗೆ ಸಹಕರಿಸುವುದಿಲ್ಲ. ಅವುಗಳಿಗೆ ಅವುಗಳದ್ದೇ ಆದ ವಿಚಾರವಿರುತ್ತದೆ.
ಒಂದು ಕನಸಿನಲ್ಲಿ ನಿಮಗಿರುವ ಒಂದು ರೀತಿಯ ಕರ್ಮಬಂಧನಕ್ಕೆ
ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸಮರ್ಥರಾಗಿರುವಿರಿ. ಬದುಕೇನಾದರೂ ಅಜ್ಞಾನದ ಕರ್ಮದ ಬಿಡುಗಡೆಯ ಸ್ಥಿತಿಯನ್ನೂ ಮೀರಿ ಹೋಗಿ ಅದೊಂದು ಪ್ರಜ್ಞಾಯುತ ಪ್ರಕ್ರಿಯೆಯಾಗಿದ್ದರೆ, ಆಗ ಎಚ್ಚರದಿಂದಿರುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಯಾವುದು ಈಗಾಗಲೇ ಮಾಡಲ್ಪಟ್ಟಿದೆಯೋ ಅದರಿಂದ ಮಾತ್ರ ಬಿಡುಗಡೆ ಹೊಂದಲು ಮಾತ್ರ ಬದುಕು ಸೀಮಿತವಾಗಿದ್ದರೆ ಅದಕ್ಕೆ ಕನಸು ಒಂದು ಒಳ್ಳೆಯ ಅವಕಾಶವಾಗಿದೆ. ಯೋಗ ಸಂಸ್ಕೃತಿಯಲ್ಲಿ ಮಹಾದೇವನಾದ ಶಿವನನ್ನು ಸಂಪೂರ್ಣ ನಿದ್ರಾವಸ್ಥೆಯಲ್ಲಿರುವಂತೆ ಅಥವಾ ಪರಿಪೂರ್ಣ ಜಾಗರೂಕನಾಗಿರುವಂತೆ ವರ್ಣಿಸಲಾಗಿದೆ. ಇದು ವ್ಯಕ್ತಿಯ ಸಂಪೂರ್ಣವಾದ ಪ್ರಜ್ಞಾಯುತ ಸ್ಥಿತಿಯಾಗಿದೆ; ಅವನು ಅಸ್ತಿತ್ವದಲ್ಲಿಲ್ಲ ಅಥವಾ ಅಸ್ತಿತ್ವದಲ್ಲಿದ್ದಾನೆ.
ಅವನಿಗೆ ಇವೆರಡರ ನಡುವಣ ಅಂತರದ ವಾಸ್ತವಿಕತೆಯಿಲ್ಲ, ಏಕೆಂದರೆ, ಅಲ್ಲಿ ಬಿಡಿಸಿಕೊಳ್ಳುವುದು ಏನೂ ಇಲ್ಲದಿದ್ದರೆ, ಅಲ್ಲಿ ಕೇವಲ ನಿಶ್ಚಲತೆ ಮತ್ತು ಜಾಗೃತಿ ಇರುತ್ತದೆ. ಅಲ್ಲಿ ಕನಸಿನ ಸ್ಥಿತಿ ಇರುವುದಿಲ್ಲ. ನಾನು ‘ಕನಸು’ ಎಂದು ಹೇಳುವಾಗ ಕೇವಲ ನೀವು ನಿದ್ದೆ ಮಾಡುವಾಗ ಸಂಭವಿಸುವ ದೃಶ್ಯಾವಳಿಗಳ ಕುರಿತು ಮಾತನಾಡುತ್ತಿಲ್ಲ, ಕಣ್ತೆರೆದಿರುವಾಗಲೂ ನೀವೊಂದು ಕನಸಿನ ಸ್ಥಿತಿಯಲ್ಲಿರುವಿರಿ. ಪ್ರಸ್ತುತದಲ್ಲಿ, ನೀವು ಈ ಸೃಷ್ಟಿಯನ್ನು ಹೇಗೆ ಅನುಭವಿಸುತ್ತಿರುವಿರಿ ಎನ್ನುವುದೂ ಸಂಪೂರ್ಣವಾಗಿ ಕನಸೇ ಆಗಿದೆ. ಅದು ಇರುವ ರೀತಿಯಲ್ಲಿ ಇಲ್ಲ.
ಕನಸಿನ ಶಕ್ತಿ ಮತ್ತು ಕನಸಿನ ಕ್ಷುಲ್ಲಕತನ ಎರಡೂ ಏಕಕಾಲದಲ್ಲಿ ಉಪಸ್ಥಿತವಾಗಿರುತ್ತವೆ. ಯಾರು ಕನಸಿನಲ್ಲಿ ಗಾಢವಾಗಿ ಮುಳುಗಿ ಹೋಗಿರುತ್ತಾರೋ, ಅದೊಂದು ಬಲವಾದ ವಿಷಯವಾಗುತ್ತದೆ. ಯಾರು ಕನಸನ್ನು ಸ್ವಲ್ಪ ದೂರದಿಂದ ನೋಡುತ್ತಾರೋ ಅವರಿಗೆ ಅದೊಂದು ಕ್ಷುಲ್ಲಕ ವಿಷಯವಾಗುತ್ತದೆ. ಇದು ನೀವು ನಿಮ್ಮ ಕನಸಿಗೆ ಸಂಬಂಧಿಸಿದಂತೆ ಯಾವ ಸ್ಥಿತಿಯಲ್ಲಿರುವಿರಿ ಎನ್ನುವುದರ ಮೇಲೆ ಆಧಾರವಾಗಿರುತ್ತದೆ.
ಹಾಗಾದರೆ ನೀವು ಕನಸಿನಲ್ಲಿ ಕರ್ಮವನ್ನು ಶೇಖರಿಸಿಕೊಳ್ಳಬಲ್ಲಿರೇ? ಕರ್ಮದ ಶೇಖರಣೆ ನೀವು ಮಾಡುವ ಚಟುವಟಿಕೆಯಲ್ಲಿಲ್ಲ, ಅದು ಇಚ್ಛಾಶಕ್ತಿ ಅಥವಾ ವ್ಯಕ್ತಿಯ ಕ್ರಿಯೆಯ ಉದ್ದೇಶದಲ್ಲಿರುತ್ತದೆ. ಕನಸಿನಲ್ಲಿ ನೀವು ಉದ್ದೇಶಪೂರ್ವಕವಾಗಿರಲು ಸಮರ್ಥರೇ? ಇಂದು ನಾನು ಇಂತಹ ರೀತಿಯ ಕನಸನ್ನು ಕಾಣುತ್ತೇನೆ ಎಂದು ನಿರ್ಧರಿಸಲು ಸಾಧ್ಯವೇ? ಇಲ್ಲ. ಕನಸಿನಲ್ಲಿ ಇಚ್ಛೆ ಇರುವುದಿಲ್ಲ. ಆದ್ದರಿಂದ ಕನಸು ಕೇವಲ ಒಂದು ಕರ್ಮದಿಂದ ಬಿಡುಗಡೆಗೊಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಹಗಲಿನಲ್ಲಿ ಸಹ ಬಹುತೇಕ ಸಮಯಗಳಲ್ಲಿ ನೀವು ಅದಾಗಲೇ ಆಗಿಹೋಗಿರುವ ಕ್ರಿಯೆಯಿಂದ ಬಿಡಿಸಿಕೊಳ್ಳುತ್ತಿರುವಿರಿ. ನಿಮ್ಮ ಕೋಪ, ಮಹತ್ವಾಕಾಂಕ್ಷೆ, ನಿರಾಶೆ, ಪ್ರೀತಿ, ಭಾವೋದ್ರೇಕ, ನಿಮ್ಮ ದ್ವೇಷ ಇವುಗಳೆಲ್ಲವೂ ಬಹುತೇಕವಾಗಿ ಕೇವಲ ನಿಮ್ಮ ಕರ್ಮವನ್ನು ಬಿಡುಗಡೆಗೊಳಿಸುವುದಾಗಿದೆ, ನೀವು ಮಾಡುವುದಲ್ಲ. ಇದನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದಾಗ ಮಾತ್ರ ನೀವು ಅದನ್ನು ಅರಿಯುವಿರಿ. ಉದಾಹರಣೆಗೆ- ನಿನ್ನೆಯ ದಿನ ಒಬ್ಬರ ಮೇಲೆ ಬಹುವಾಗಿ ಕೋಪಿಸಿಕೊಂಡಿರಿ ಎಂದುಕೊಳ್ಳೋಣ, ಮತ್ತು ಇಂದು, ‘ನಾನು ಆ ವ್ಯಕ್ತಿಯ ಮೇಲೆ ಕೋಪಿಸಿಕೊಳ್ಳಲು ಇಚ್ಛಿಸುವುದಿಲ್ಲ’ ಎಂದು ನಿಶ್ಚಯಿಸಿಕೊಳ್ಳುವಿರಿ. ಆದರೆ ಆ ವ್ಯಕ್ತಿಯನ್ನು ಭೇಟಿಯಾದಾಗ, ನೀವು ಮತ್ತೆ ಕೋಪಿಸಿಕೊಳ್ಳುವುದನ್ನು ಕಂಡುಕೊಳ್ಳುವಿರಿ. ಸ್ಪಷ್ಟವಾಗಿ ಇದು ನೀವು ಮಾಡಿದುದಲ್ಲ. ಬಹುತೇಕ ಸಮಯಗಳಲ್ಲಿ ಯಾವುದು ಈಗಾಗಲೇ ಆಗಿರುವುದೋ ಅದನ್ನು ಕೇವಲ ವ್ಯತಿರಿಕ್ತ ರೀತಿಯಲ್ಲಿ ಮಾಡುವಿರಿ. ನಿಮ್ಮನ್ನು ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ಇದನ್ನು ಅರಿತುಕೊಳ್ಳುವಿರಿ. ಕರ್ಮದ ಬಿಡುಗಡೆ ಹೊಂದುವ ಈ ಪ್ರಕ್ರಿಯೆ ಹೆಚ್ಚು ವಾಸ್ತವವಾಗಿ ಕಂಡುಬರುತ್ತದೆ, ಇದನ್ನು ನೀವೇ ಮಾಡುತ್ತಿರುವಿರಿ ಎನ್ನುವುದಾಗಿ ಕಾಣಬರುತ್ತದೆ. ನಾವು ಕರ್ಮ ಎಂದಾಗ, ‘ಇದು ನೀವು ಮಾಡಿದುದು’ ಎಂದು ಹೇಳುತ್ತೇವೆ. ವ್ಯಕ್ತಿ ಏನೇ ಮಾಡಲಿ ಅವನು ಅದನ್ನು ತನ್ನ ಸಂಕಲ್ಪದಿಂದ ಮಾಡಿದ್ದೆಂದು ನಂಬಿದಾಗ ಅದು ಅವನ ಅಜ್ಞಾನದ ಮೂಲಸ್ಥಿತಿಯಾಗಿರುತ್ತದೆ.
ಸ್ವಹಿತವನ್ನು ಕಳಚಿಕೊಳ್ಳುವುದು: ಒಂದು ಮಂತ್ರವಿದೆ- ‘ಎಲ್ಲವೂ ನೀನೇ ಮಹದೇವ. ನೀನೇ ಎಲ್ಲವೂ. ನನ್ನ ದುಷ್ಟತನವು ನನ್ನ ಮನಸ್ಸಿನದಾಗಿದೆ, ನನ್ನ ಕ್ರಿಯೆಗಳು ನನ್ನ ದೇಹದ್ದಾಗಿದೆ - ನಾನೆಲ್ಲಿರುವೆ? ನಾನು ಅಸ್ತಿತ್ವದಲ್ಲಿಯೇ ಇಲ್ಲ. ಇದೆಲ್ಲವೂ ನಿನ್ನದೇ ಆಗಿದೆ.’ ಒಬ್ಬ ನಿಜವಾದ ಭಕ್ತನು ಇದನ್ನು ಹೇಳಿದರೆ
ಅದೊಂದು ಸುಂದರವಾದ ಜ್ಞಾನೋದಯದ ಸ್ಥಿತಿಯಾಗಿರುತ್ತದೆ. ಇದನ್ನು ಮನಸ್ಸು ಹೇಳಿದರೆ ಇದೊಂದು ಕುಯುಕ್ತಿಯ (ಚತುರತನ) ಅತಿ ಸ್ಪಷ್ಟವಾದ ಸ್ಥಿತಿಯಾಗಿದೆ. ಯಾವುದೇ ವಿಷಯವಾಗಲಿ ಅದು ತಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ಬಹುತೇಕ ಜನರು ಅದನ್ನು ಬೇರೆಯವರಿಗೆ ಅಥವಾ ಬೇರೆ ಯಾವುದಕ್ಕೋ ವರ್ಗಾಯಿಸುವುದನ್ನು ಕಲಿತಿದ್ದಾರೆ. ನಿಮಗೆ ಇಷ್ಟವಾದದ್ದನ್ನು ಮತ್ತು ಇಷ್ಟವಾಗದೇ ಇದ್ದುದನ್ನು, ಸೋಲನ್ನಾಗಲಿ ಹಾಗೂ ಗೆಲುವನ್ನಾಗಲಿ-ಹೀಗೆ ಎರಡನ್ನೂ ಬೇರೆಯವರಿಗೆ ವರ್ಗಾಯಿಸಲು ಇಚ್ಛಿಸಿದರೆ ಮಾತ್ರ ಅದು ಸೂಕ್ತ ಕ್ರಮವಾಗುತ್ತದೆ. ನಿಮ್ಮ ಯೋಗಕ್ಷೇಮ ಹಾಗೂ ಕಷ್ಟವೆರಡನ್ನೂ ಬೇರೆಯವರಿಗೆ ವರ್ಗಾಯಿಸಿದರೆ ಅದೂ ಸರಿ. ಆದರೆ ಸುಖವನ್ನು ಉಳಿಸಿಕೊಂಡು ಕಷ್ಟವನ್ನು ಮಾತ್ರ ಬೇರೆಯವರಿಗೆ ವರ್ಗಾಯಿಸಲು ಇಚ್ಛಿಸಿದರೆ ನೀವು ಬೇರೆಯವರೊಂದಿಗೆ ಕೆಟ್ಟ ವ್ಯವಹಾರ ಮಾಡಲು ಪ್ರಯತ್ನಿಸುತ್ತಿರುವಿರಿ ಎಂದೇ ಅರ್ಥ. ಕಡುಮೂರ್ಖನನ್ನು ಹೊರತುಪಡಿಸಿ ಬೇರೆ ಯಾರೂ ಈ ವ್ಯವಹಾರವನ್ನು ಒಪ್ಪಿಕೊಳ್ಳುವುದಿಲ್ಲ.
ದಡ್ಡ ವ್ಯಕ್ತಿ ಸಹ ಸ್ವಹಿತದ ವಿಷಯ ಬಂದಾಗ ಬಹಳ ಜಾಣನಾಗುತ್ತಾನೆ, ಮಾನವರು ಹೆಚ್ಚು ಹೆಚ್ಚು ಬುದ್ಧಿವಂತರಾದಾಗ ಮಾತ್ರ ಅವರು ಸ್ವಪ್ರಯೋಜನದ ಕುರಿತು ಅತಿ ಕಡಿಮೆ ಆಸಕ್ತಿ ತೋರಿಸುತ್ತಾರೆ. ದಡ್ಡರಾದಷ್ಟೂ, ಸ್ವಪ್ರಯೋಜನದ ಕುರಿತು ಚಾಣಾಕ್ಷರಾಗಿರುತ್ತಾರೆ. ಇದನ್ನು ನೀವು ಗಮನಿಸಿದ್ದೀರಾ?
ಮಿತವಾದ ಸ್ವಹಿತಾಸಕ್ತಿ ಮೂರ್ಖತನವೇ ಸರಿ. ಇದರಿಂದ ಒಬ್ಬ ಪ್ರತ್ಯೇಕ ಮಾನವನಿಗೆ ಹಾಗೂ ಸಂಪೂರ್ಣ ಮಾನವ ಕುಲಕ್ಕೇ ಭಾರಿ ನಷ್ಟವಾಗುತ್ತಿದೆ. ಅವನು ಈ ಬ್ರಹ್ಮಾಂಡದ ಭವ್ಯತೆಯಲ್ಲಿ ಆಸಕ್ತಿ ಮತ್ತು ಅಂತರ್ಗತಗೊಳಿಸುವ ಸಾಮರ್ಥ್ಯ ಹೊಂದಿರಲು ಶಕ್ತನಿರುವಾಗ, ಯಾರೋ ಅಲ್ಪ ಮನುಷ್ಯನಲ್ಲಿ ತನ್ನ ಆಸಕ್ತಿಯನ್ನು ತೋರಿಸುತ್ತಿದ್ದಾನೆ. ಬುದ್ಧಿವಂತಿಕೆ ವಿಸ್ತಾರಗೊಂಡು ನಾನಾ ವಿಷಯಗಳನ್ನು ಅವಲೋಕಿಸಲು ಪ್ರಾರಂಭಿಸಿದಾಗ, ಮಾನವನು ಸ್ವಹಿತದ ಕುರಿತು ಅಷ್ಟಾಗಿ ಆಸ್ಥೆವಹಿಸುವುದಿಲ್ಲ, ವ್ಯಕ್ತಿಯ ಬುದ್ಧಿವಂತಿಕೆ ನಿಜವಾಗಲೂ ವಿಕಸನಗೊಂಡರೆ ಅವನಿಗೆ ಸ್ವಯಂಹಿತದ ದೃಷ್ಟಿ ಇರುವುದಿಲ್ಲ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.
www.isha.sadhguru.org)