ಇದು ಮೈತ್ರಿಯೊಂದರ ಮರಣಕಾಲ!

Heart
Published on

‘ಅಷ್ಟೆ ನೋಡಿ, ಆಮೇಲಿಂದ ನನಗೂ ಅವನಿಗೂ ಟಚ್ಚೇ ತಪ್ಪಿ ಹೋಯ್ತು’ ಅಂತ ವಿವರಿಸುತ್ತಿರುತ್ತೇವೆ. ಅದು ಸಂಬಂಧವೊಂದು ಸದ್ದಿಲ್ಲದೆ ಸತ್ತುಹೋದುದನ್ನು ವಿವರಿಸುವ ರೀತಿ. ನಿನ್ನೆ ಮೊನ್ನೆಯತನಕ ಪ್ರತಿನಿತ್ಯ ಸಿಗುತ್ತಿದ್ದ.

ಸ್ವಲ್ಪ ಹೊತ್ತಾದರೂ ಮಾತು, ಕಷ್ಟ ಸುಖ, ಸುಮ್ಮನೆ ಹರಟೆ, ಹಳೇ ಜೋಕು, ಹೊಸ ಹಾಡು, ಓದಿದ ಪುಸ್ತಕ ಇತ್ಯಾದಿ ಇತ್ಯಾದಿ. ಗೆಳೆತನ ಚೆನ್ನಾಗಿತ್ತು. ದಿನಕ್ಕೊಂದಾದರೂ ಮೊಬೈಲಿಗೆ ಮೆಸೇಜಿರುತ್ತಿತ್ತು. ಆಮೇಲೆ ಏನಾಯಿತು? ಏನೂ ಆಗಲಿಲ್ಲ. ಆದರೆ ಟಚ್ಚೇ ತಪ್ಪಿಹೋಯಿತು. ಮನುಷ್ಯ ಅಪರೂಪವಾಗಿ ಬಿಟ್ಟ. ಮೇಲೆ ಬಿದ್ದು ಫೋನ್ ಮಾಡಿದರೆ, ‘ಸ್ವಲ್ಪ ಬಿಜಿ ಇದೀನೀ. ಮತ್ತೆ ಮಾಡ್ತಿನಿ ಆಯ್ತಾ?’ ಎಂಬ ಉತ್ತರ. ಆದರೆ ಮತ್ತೆ ಆತ ಫೋನ್ ಮಾಡುವುದಿಲ್ಲ.

ಅಸಲಿಗೆ ಆಗಿದ್ದೇನು? ತೀರ ಅಂಥ ಜಗಳವೇನಾಗಿಲ್ಲ. ಪ್ರಖರ ಭಿನ್ನಾಭಿಪ್ರಾಯವಿಲ್ಲ. ಈ ಮಧ್ಯೆಯಂತೂ ವಿಪರೀತ ಅವೈಡ್ ಮಾಡುತ್ತಿದ್ದಾನಾ ಅನ್ನಿಸುತ್ತದೆ. ನಮ್ಮಿಬ್ಬರ ಮಧ್ಯದ ಸಂಬಂಧಕ್ಕಿದ್ದ ಮ್ಯಾಜಿಕ್ ಸತ್ತುಹೋಯಿತಾ? ಹಾಗಂತ ಹೇಳಬಹುದಿತ್ತಲ್ಲ? ‘ನೀನು ಬೋರು. ನೀನು ಸಾಕು’ ಅಂದಿದ್ದರೂ ಸಾಕಿತ್ತು. ಇದ್ಯಾಕೆ ಹೀಗೆ ಮಾತಿನ ಅರ್ಧದಲ್ಲಿ ಎದ್ದು ಹೋಗಿಬಿಟ್ಟ?

ಹಾಗೆ ಎದ್ದುಹೋಗುವುದೇ ಕೆಲವರ ಶೈಲಿ. ಅದು ಅವರ ಸ್ಟ್ರಾ್ಯಟಜಿ. ಅವರು ಒಂದು ಸಂಬಂಧವನ್ನು ಕೊಂದು ಹೋಗುವುದಿಲ್ಲ. ಮಕಮಕ ಬೈದೋ, ಕಡ್ಡಿ ಮುರಿದಂತೆ ಹೇಳಿಯೋ, ನಿನ್ನ ಸಹವಾಸ ಸಾಕು ಅಂತ ಘೊಷಿಸಿಯೋ-ಚರಮಗೀತೆ ಹಾಡಿ ಕತೆ ಮುಗಿಸಿ ಹೋಗುವುದಿಲ್ಲ. They Just Vanish. ಕೆಲವೊಮ್ಮೆ Fade ಆಗೀ ಆಗೀ ಕಣ್ಮರೆಯಾಗಿಬಿಡುತ್ತಾರೆ.

‘ನಾವು ಪ್ರೀತಿಸಿದವರು ಯಾಕಾದರೂ ನಮ್ಮಿಂದ ದೂರವಾಗ್ತಾರೋ? ತುಂಬ ಬೇಕು ಅನ್ನಿಸಿದವರನ್ನೇ ಕಳ್ಕೋತೀವಿ...’ ಅಂತ ಹುಡುಗಿಯೊಬ್ಬಳು ಕಣ್ತುಂಬಿಕೊಂಡು ಹೇಳುತ್ತಿದ್ದಳು. ಅವಳಿಗೆ ಹೇಳಿದೆ ‘ನಾವು ಪ್ರೀತಿಸಿದವರು ದೂರವಾದಾಗ, ಅವರಿಗೆ ಸದ್ಯಕ್ಕೆ ನಮ್ಮ ನೆಸೆಸಿಟಿ ಇರಲಿಕ್ಕಿಲ್ಲ. ಅದಕ್ಕೇ ಹೊರಟು ಹೋಗಿದ್ದಾರೆ ಅಂತ ಅಂದುಕೊಂಡು ನೋಡು. ಮನಸಿಗೆ ರಿಲೀಫ್ ಸಿಕ್ಕಂತಾಗುತ್ತದೆ. ನಮ್ಮನ್ನವರು ತಿರಸ್ಕರಿಸಿ ಹೋಗಿಲ್ಲ. ಅವರಿಗೆ ಸದ್ಯಕ್ಕೆ ನಮ್ಮ ನೆಸೆಸಿಟಿ ಕಾಣುತ್ತಿಲ್ಲ. ಹೀಗಾಗಿ ಹೊರಟು ಹೋಗಿದ್ದಾರೆ. ತಮ್ಮ ನೆಸೆಸಿಟಿಗೆ ನಮ್ಮನ್ನು ಉಪಯೋಗಿಸಿಕೊಂಡರು ಅಂತ ಅಂದುಕೊಂಡರೆ ದುಃಖವಾಗುತ್ತದೆ. ಆ ಗೆಳೆತನದ ಮಧುರ ಅನುಭೂತಿಯ ನೆಸೆಸಿಟಿ ಇಬ್ಬರಿಗೂ ಇತ್ತು. ಈಗ ಆ ಪೈಕಿ ಒಬ್ಬರ Need ಮುಗಿದಂತಿದೆ. ನಂಗೊತ್ತು, ಪ್ರೀತಿಸಂಬಂಧಗಳ ವಿಷಯದಲ್ಲಿ ‘ಹೊರಟು ಹೋದವರಿಗಿಂತ’ ಹೆಚ್ಚಾಗಿ ‘ಉಳಿದುಹೋದವರು’ ದುಃಖಪಡುತ್ತೇವೆ. ಹೆಚ್ಚು ಅವಮಾನಿತರಾಗುತ್ತೇವೆ. ಕಳವಳಗೊಳ್ಳುತ್ತೇವೆ. ಆದರೆ ಒಂದು ಸಲ, ‘ಅವರಿಗೆ ನಮ್ಮ ನೆಸೆಸಿಟಿ ಇರಲಿಕ್ಕಿಲ್ಲ ಬಿಡು’ ಅಂದುಕೊಂಡು ನೋಡು? ಮನಸಿಗೆ ಕೊಂಚ ಸಮಾಧಾನ ಸಿಕ್ಕಂತಾಗುತ್ತದೆ’ ಅಂದೆ.

ಆಕೆ ಪೂರ್ತಿ ಕನ್ವಿನ್ಸ್ ಆದಂತೆ ಕಾಣದಿದ್ದರೂ ಕ್ರಮೇಣ ಆಕೆಗೊಂದು ಸಂಗತಿ ಮನವರಿಕೆಯಾಗುತ್ತದೆ. ಅನೇಕ ಸಲ ನಮ್ಮ ಸಂಬಂಧಗಳು ನಮ್ಮ ಮತ್ತು ಬದುಕಿನ ನೀಡ್ ಹಾಗೂ ನೆಸೆಸಿಟಿಗಳ ಮೇಲೆ ಆಧಾರಪಟ್ಟಿರುತ್ತವೆ. ನೆಸೆಸಿಟಿ ಮುಗಿದ ನಂತರ ಸಹಜವಾಗಿಯೇ ಸಂಬಂಧದಲ್ಲಿನ ಮ್ಯಾಜಿಕ್ ಕ್ಷೀಣಗೊಳ್ಳುತ್ತದೆ. ಇಬ್ಬರ ಮಧ್ಯೆ ಆಗುವ ಜಗಳವನ್ನು ಮೊದಲಿನಂತೆ ಚಡಪಡಿಸಿ ರಾಜಿಯಲ್ಲಿ ಮುಕ್ತಾಯಗೊಳಿಸಲು ಹೋಗುವುದಿಲ್ಲ. ಮೊದಲಿನಂತೆ ಭೇಟಿಗೆ ಕಾತರಿಸುವುದಿಲ್ಲ. ಅದು ಮೈತ್ರಿಯೊಂದರ ಮರಣಕಾಲ. ಹಾಗೆ ಮೈತ್ರಿ ಸತ್ತುಹೋಗಲಿಕ್ಕೆ ದೊಡ್ಡ ದೊಡ್ಡ ಕಾರಣಗಳು ಬೇಕಾಗಿಲ್ಲ. ಅಸಲು ಕಾರಣಗಳು ಬೇಕಾಗಿಯೇ ಇಲ್ಲ. ಚಿಕ್ಕ ಸುಳ್ಳು, ಸಣ್ಣ ವಂಚನೆ, ಸುಳ್ಳೇ ಜಗಳ ಹೀಗೆ ಮೇಲುನೋಟಕ್ಕೊಂದು ಕಾರಣ ಅಂತ ಕಾಣಬಹುದೇನೋ? ಆದರೆ ನಿಜವಾದ ಕಾರಣ, ಆ ಸಂಬಂಧದ ಮೂಲಬೇರು ಎಲ್ಲೋ ಒಣಗಿ ಬಿಟ್ಟಿರುತ್ತದೆ. ಬಿಟ್ಟುಹೋದ ಸಂಬಂಧಕ್ಕಾಗಿ ಕಣ್ಣೀರಿಡುವುದೇನಿದ್ದರೂ, ಸತ್ತ ಬೇರು ಚಿಗುರಿಸುವ ವ್ಯರ್ಥ ಪ್ರಯತ್ನ.

ಇದಕ್ಕೆ ತದ್ವಿರುದ್ಧವಾಗಿ ಒಂದು ನೀಡ್ ಅಥವಾ ್ಞ್ಚಠಠಜಿಠಿಢ ಇರುವಂಥ ಸಂಬಂಧವನ್ನೇ ನೋಡಿ. ಅಲ್ಲಿ ಸೆಳೆತ, ಸಂತೋಷ, ಮಾಧುರ್ಯ ಎಲ್ಲ ಸತ್ತಮೇಲೂ ಇಬ್ಬರ ನಡುವಿನ ಸಂಬಂಧ ಬದುಕಿರುತ್ತದೆ. ವರ್ಷಗಟ್ಟಲೆ ಒಟ್ಟಿಗೆ ಮಲಗದಿದ್ದರೂ, ಬೆಳಗ್ಗೆ ಎದ್ದು ನಗುನಗುತ್ತ ಸಂಸಾರ ಮುಂದುವರಿಸಿಕೊಂಡು ಹೋಗುವ ದಂಪತಿಗಳಿರುತ್ತಾರೆ. ಇನ್ನೊಬ್ಬನೊಂದಿಗೆ ಹೊರಟು ಹೋಗಿ ತಿಂಗಳುಗಟ್ಟಲೆ ಇದ್ದಾಕೆಯನ್ನು ಮತ್ತೆ ಕರೆದುಕೊಂಡು ಸಂಸಾರ ಮಾಡುವ ಗಂಡಂದಿರನ್ನು ನೋಡಿದ್ದೇವೆ. ಅಲ್ಲಿ ಔದಾರ್ಯ, ಅಮರಪ್ರೇಮ, ಸುಟ್ಟು ಸುಡುಗಾಡುಗಳ್ಯಾವೂ ಇರುವುದಿಲ್ಲ. ಕೇವಲ ನೀಡ್ ಇರುತ್ತದೆ. ಸಂಬಂಧದ ತಾಯಿಬೇರನ್ನು ಒಣಗದಂತೆ ಕಾಪಾಡುವುದು ಅದೇ.

ನನ್ನ ಅಪರೂಪದ ಗೆಳತಿಯೊಬ್ಬಳು ಕೆಲಬಾರಿ ಬರುತ್ತಾಳೆ. ‘ಅದೇಕೋ ಗೊತ್ತಿಲ್ಲ, ಈ ಜಾಗದಲ್ಲಿ ನಿನ್ನನ್ನ ಹೀಗೆ ಭೇಟಿ ಮಾಡಿ, ಕೂತು ಹರಟಿದರೆ ನನ್ನchildhood ಫ್ರೆಂಡ್ ಸಿಕ್ಕಷ್ಟು ಸಂತೋಷವಾಗುತ್ತೆ ನೋಡು’ ಅನ್ನುತ್ತಿರುತ್ತಾಳೆ. ನಿಜ ಹೇಳಬೇಕೆಂದರೆ, ಅವಳ ಗಂಡ ಮತ್ತು ಅವಳು childhood ಫ್ರೆಂಡ್ಸು. ನಾನು ತೀರ ಇತ್ತೀಚಿನ ಸ್ನೇಹಿತ. ಆದರೆ ಅವರಲ್ಲಿ childhood ಮತ್ತು friendship ಎರಡೂ ಮುಗಿದು ಹೋಗಿ, ಈಗ ಕೇವಲ ದಾಂಪತ್ಯ ಮತ್ತು ನೀಡ್ ಉಳಿದಿದೆ. ಹೀಗಾಗಿ ಈಕೆ ಇನ್ನೊಂದು ಬಾಲ್ಯ, ಇನ್ನೊಂದು ಗೆಳೆತನಕ್ಕಾಗಿ ಹಂಬಲಿಸುತ್ತಾಳೆ. ಅದನ್ನು ನಾನು ತಪು್ಪ ಅನ್ನಲಾರೆ. ಹಾಗೆ ಹಂಬಲಿಸುವುದು ಕೂಡ ಆಕೆಯ ನೀಡ್.

ಈ ತೆರನಾದ ನೀಡ್​ಗಳೇ ಜಗತ್ತಿನ ಅತಿ ಹೆಚ್ಚಿನ ಸಂಖ್ಯೆಯ ಸಂಬಂಧಗಳನ್ನು ಹಿಡಿದಿಟ್ಟಿರುತ್ತದೆ. ಗಂಡ-ಹೆಂಡತಿ, ತಂದೆ-ಮಕ್ಕಳು, ಅಣ್ಣ-ತಮ್ಮಂದಿರು, ಒಂದೇ ಕಡೆ ಕೆಲಸ ಮಾಡಿ ಜೀವಮಾನವನ್ನೆಲ್ಲ ಒಟ್ಟಿಗೆ ಕಳೆದ ಕಲೀಗ್ಸು-ನಾವೆಲ್ಲ ಒಬ್ಬರಿಗೊಬ್ಬರು ಬೋರ್ ಆಗದೆ ಇರುತ್ತೇವೆಯೇ? ಖಂಡಿತ ಆಗಿರುತ್ತೇವೆ. ಹೊಸ ಸಂಬಂಧಕ್ಕೆ ಹಾತೊರೆಯುತ್ತೇವೆ. ಕಿಟಕಿ ತೆರೆಯುತ್ತೇವೆ. ಕದ ಕಳಚುತ್ತೇವೆ. ಯಾವುದೂ ತಪ್ಪಲ್ಲ.

ಆದರೆ ಒಂದು ಷರತ್ತಿದೆ.

ಹ್ಯಾಗೆ ಬೋರೆದ್ದು ಹೋದ ದಾಂಪತ್ಯದಲ್ಲಿ ಅಡುಗೆ-ಊಟ-ಮನೆಬಾಡಿಗೆ-ಇನ್ಶೂರೆನ್ಸು ಇತ್ಯಾದಿಗಳಷ್ಟೆ ನೀಡ್​ಗಳಾಗಿ ಉಳಿದು ಹೋಗುತ್ತವೆಯೋ ಹಾಗೆ ಈ ಅಪರೂಪದ ಸಂಬಂಧಗಳಲ್ಲಿ ದೇಹ, ಮೋಹ, ಉನ್ಮಾದವಷ್ಟೆ ನೀಡ್ ಆಗಿ ಬೆಳೆದುಬಿಡಬಾರದು. ಇವುಗಳನ್ನು ಮೀರಿದ ಒಂದು ನಿರಂತರ ಅರಸುವಿಕೆ, ಸಾಹಚರ್ಯ, ಸಾನ್ನಿಧ್ಯಗಳು ಸೃಷ್ಟಿಯಾದರೆ ಮಾತ್ರ ಆ ಸಂಬಂಧಕ್ಕೆ ಆಯುಷ್ಯ.

ತಮಾಷೆಯೆಂದರೆ, ಅಂಥ ಆಯುಷ್ಯ ಕೂಡ ಒಂದಲ್ಲ ಒಂದು ದಿನ ತೀರಿಹೋಗುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net