

"ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು' ಎಂಬ ತಪ್ತಿಯ ಬದುಕನ್ನು ಕಂಡುಕೊಂಡವರು ಇವರು.
ಜಿ.ಪಿ. ರಾಜರತ್ನಂ ತಾನು ಎಂದೂ ಕುಡಿಯದೇ ಕುಡುಕನ ಬಾಯಿಂದ ಹೊಸದೊಂದು ಫಿಲಾಸಫಿಯನ್ನೇ ತೆರೆದಿಟ್ಟ ಪರಿ ಅದ್ಭುತವಾದುದು. "ಏಳ್ಕೊಳ್ಳಾಕೊಂದೂರು ತಲೆ ಮ್ಯಾಗೊಂದ್ಸೂರು ಮಲಗಾಕೆ ಭೂಮ್ತಾಯಿ ಮಂಚ. ಕೆಹಿಡಿದೋಳ್ ಪುಟ್ನಂಜಿ ನಗ್ನಗ್ತಾ ಉಪ್ಪ$್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ'. ಕುಡಿದು ತೂರಾಡುವ ಯೆಂಡ್ಗುಡ್ಕ ರತ್ನನ ಬಾಯಲ್ಲಿ ಬರೋದೆಲ್ಲಾ ಇಂಥ ಜೀವನ ತತ್ತ$್ವಗಳೇ. "ನಮ್ದೇ ಲೋಕ ಉಟ್ಟಿಸ್ಕೋಬೇಕು ಈ ಲೋಕಾನೇ ಮರ್ತು' ಎಂದು ಕರೆಕೊಡುವ ರತ್ನ ಲೌಕಿಕ ಪ್ರಪಂಚದ ಯಾವ ಸುಖಕ್ಕೂ ಬೆಲೆ ಕೊಡುವವನಲ್ಲ. ಅವನ ಪುಟ್ನಂಜಿ "ನಗುನಗು'ತ್ತಾ ಉಪು$್ಪ ಗಂಜಿ ಕೊಟ್ಟರೆ ಅದೇ ಅವನಿಗೆ ಮಷ್ಟಾನ್ನ. ನಗುವಿನ ಮಹತ್ವವನ್ನು ಇದಕ್ಕಿಂತ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೆ?
"ನಕ್ಕಾಂವ ಗೆದ್ದಾಂವ' ಎಂದು ಹೇಳಿ ನಕ್ಕವನಿಗೆ ಜಯಮಾಲೆ ಹಾಕಿದವರು ಬೇಂದ್ರೆ. ನಗುವನ್ನು ಅತ್ಯುನ್ನತ ಸ್ಥಾನದಲ್ಲಿ ಸ್ಥಾಪಿಸಿದ ಬೇಂದ್ರೆಯವರು ನಗುವಿಗೆ ತಾತ್ವಿಕವಾದ ಅರ್ಥವನ್ನು ಕಲ್ಪಿಸಿದವರು. "ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ, ಬಡ ನೂರು ವರುಷಾನ ಹರುಷಾದಿ ಕಳೆಯೋಣ, ಯಾಕಾರೆ ಕೆರಳೋಣ' ಎಂದರು. "ನಗೆಯಲ್ಲಿ ಹೊಗೆ ಬ್ಯಾಡ' ಎಂದ ಕವಿ ಬೇಂದ್ರೆ, ತನ್ನ ಮನದನ್ನೆಯನ್ನು ಮೊದಲ ಬಾರಿ "ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ' ಮನಸೂರೆಗೊಂಡ ನಗುವನ್ನೇ "ನಾರಿ ನಿನ್ನ ಮಾರಿಮ್ಯಾಗ ನಗೀನವಿಲು ಆಡುತ್ತಿತ್ತ' ಎಂದು ಹಾಡಿ ನಗೆನವಿಲಿನ ನಾಟ್ಯದ ಖುಷಿಯನ್ನು ಹಂಚಿದವರು.
ಆದರೆ ನಗೆಯ ಹಿಂದೆಯೇ ಇರುವ ದು@ಖದ ಕುರಿತು ಈ ಹಿರಿಯ ಕವಿಗಳು ಅವಜ್ಞೆ ಹೊಂದಿದವರಲ್ಲ. ಹಗಲು ರಾತ್ರಿಗಳಂತೆ ಸುಖ&ದು@ಖಗಳು, ಅಳು&ನಗುಗಳು ಒಂದರ ಹಿಂದೆ ಇನ್ನೊಂದು ಬಂದೇ ಬರುತ್ತವೆ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ವಿಧಿಯನ್ನು ಹೆಚ್ಚು ಪ್ರಶ್ನಿಸದೆ "ಹೊರಡು ಕರೆ ಬರಲ್ ಅಳದೆ' ಎಂದು ನಂಬಿದವರು. ಬಡತನದ ಬವಣೆಯಲ್ಲಿ ಬೇಯುತ್ತ ಒಂದು ಹೊತ್ತಿನ ಊಟಕ್ಕೂ ಭವತಿ ಭಿಾಂದೇಹಿ ಎನ್ನುವಂತಹ ಸ್ಥಿತಿ ಇದ್ದ ಮುದ್ದಣ ಅದೇ ಕಾರಣಕ್ಕಾಗಿ ಯರೋಗಕ್ಕೆ ತುತ್ತಾಗಿ ಸಾವಿಗೀಡಾದವರು. ತನ್ನ ಅಲ್ಪ ಜೀವಿತಾವಧಿಯಲ್ಲಿ ಕನ್ನಡಿಗರು ಎಂದೂ ಮರೆಯದ ಮುದ್ದಣ ಮನೋರಮೆಯರನ್ನು ಚಿತ್ರಿಸಿದ ಮಹಾಕವಿ. ತನ್ನೆದುರು ಮನದನ್ನೆ ಮನೋರಮೆಯನ್ನು ಕೂಡಿಸಿಕೊಂಡು ಸಾಹಿತ್ಯ ಸಲ್ಲಾಪಗೆಯ್ಯುತ್ತಾ ಅವಳೆದುರು ನಗುವಿನ ಮಳೆ ಸುರಿಸುತ್ತಾ ಕೊನೆಗೆ ಮನೋರಮೆ "ನೀನೇನ್ ಕಬ್ಬಿಗನೋ ಸಬ್ಬವಕಾರನೋ?' ಎಂದು ಕೇಳುತ್ತಾಳೆ.
"ಕನ್ನಡದ ಭಗವದ್ಗೀತೆ'ಯಾಗಿರುವ "ಮಂಕುತಿಮ್ಮನ ಕಗ್ಗ' ಕತಿಯನ್ನು ರಚಿಸಿ ಅಜರಾಮರರಾಗಿರುವ ಡಿ.ವಿ. ಗುಂಡಪ್ಪ ಅವರ ಸರಳ ವ್ಯಕ್ತಿತ್ವದಲ್ಲಿ ನಗೆಯನ್ನು ಸಹಜ ಜೀವನಧರ್ಮವಾಗಿ ಸ್ವೀಕರಿಸಿದ್ದು ಕಂಡುಬರುತ್ತದೆ.
"ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ/ಜಗವ ಸುಡುಗಾಡೆಂಬ ಕಟು ತಪಸು ಬೇಡ..' ಬೇರೆಯವರು ನಗುವುದನ್ನು ಕಂಡಾಗ ಅದರಲ್ಲಿ ಕೊಂಕು ಹುಡುಕುವ ಸಿನಿಕರು ನಮ್ಮ ನಡುವೆ ಇಲ್ಲದಿಲ್ಲ. ತಾವು ನಗಲಾರರು; ನಗುವವರನ್ನು ನೋಡಿ ಸಹಿಸಲಾರರು. ಇಂಥ ವ್ಯಕ್ತಿಗಳು ಬದುಕನ್ನು ನರಕವಾಗಿಸಲು ಪಣ ತೊಟ್ಟವರಂತೆ ಗಂಟುಮುಖದ ಪ್ರದರ್ಶನ ಮಾಡಿಕೊಂಡೇ ಇರುತ್ತಾರೆ. ನಗುವನ್ನು ಕಬಳಿಸುವ ಅಳು ನಗುವಿನ ಬೆನ್ನ ಹಿಂದೇ ಇರುತ್ತದೆ ಎಂಬ ಕಟುಸತ್ಯವನ್ನು ನಮ್ಮ ಕವಿಗಳು ಅರಿಯದವರಲ್ಲ.
ಬೇಂದ್ರೆಯವರು ಸಾಲಾಗಿ ಕರುಳಕುಡಿಗಳನ್ನು ಕಳೆದುಕೊಂಡವರು. ಬದುಕಿನ ಕನಸುಗಳೇ ಹೀಗೆ ಕಮರಿ ಹೋದಾಗ ಸಮಚಿತ್ತದಿಂದಿರಲು ಹೆಂಡತಿಗೆ ಬೋಧಿಸುವ ಧೆರ್ಯವಿದ್ದೀತೇ? ಉಸಿರು ಕಳೆದುಕೊಂಡ ಕಂದಮ್ಮನನ್ನು ತೊಡೆಯ ಮೇಲಿಟ್ಟುಕೊಂಡು ನಿಸ್ತೇಜಳಾಗಿ ಕೂತಿರುವ ಹೆಂಡತಿಯ ಬಳಿ, "ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕಾ$್ಯಕ ಮರಸತೀ ದು@ಖ?' ಎಂದು ಕೇಳುತ್ತಾರೆ. ಅಸಹಾಯಕ ದಂಪತಿಗಳ ಈ ಕರುಳಿರಿಯುವ ದಶ್ಯವನ್ನು ಕಂಡಾಗ ವಿಧಿಯ ಕ್ರೌರ್ಯದ ಅರಿವಾಗಿ ಕಣ್ಣೀರು ಜಿನುಗದೇ ಇರದು.
ಸಾರ್ವಜನಿಕರ ಹಣವನ್ನು ತಮಗಾಗಿ ಎಂದೂ ಬಳಸದ, ಬಯಸದ ಕರ್ಮಶುದ್ಧಿ, ವಾಕ್ಶುದ್ಧಿಯನ್ನು ಇಟ್ಟುಕೊಂಡು ಬಾಳಿದವರ ಕಾಲದಲ್ಲಿ ಆಗಿಹೋದ ಕವಿಗಳು, ಮಾಸ್ತಿಯಂತಹ ಅಂತರಂಗ ಹೊಂದಿದ ಅಧಿಕಾರಿಗಳು ನಮ್ಮ ಕನ್ನಡ ನೆಲದಲ್ಲಿಯೇ ಆಗಿಹೋಗಿದ್ದಾರೆ ಎಂಬುದು ನಮ್ಮ ಪಾಲಿನ ಹೆಮ್ಮೆ. ಯಾವುದರಲ್ಲಿಯೂ ಅತಿ ಬೇಡ ಎನ್ನುವ ಡಿವಿಜಿಯವರು ಸಂತುಲಿತ ಬದುಕಿನ ಮಾದರಿಯಂತೆ ಬಾಳಿದವರು.
"ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ ಅತಿ ಬೇಡವೆಲ್ಲಿಯುಂ ಮಂಕುತಿಮ್ಮ' ಎನ್ನುವ ಡಿವಿಜಿ ಸ್ನೇಹಿತರ ಒಡನಾಟದಲ್ಲಿ ಮಗುವಿನಂತೆ ನಗಬಲ್ಲವರಾಗಿದ್ದರು. ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು
ಸಂತೋಷದ ಸೆಲೆಗಳನ್ನಾಗಿ ಆಸ್ವಾದಿಸಬಲ್ಲವರಾಗಿದ್ದರು. ಆದರೂ ನಗುವಿಗೆ ಕುಟಿಲತೆಯ ಲೇಪವಿರಬಾರದು ಎಂದು ನಂಬಿದವರು ಅವರು. ಅಂತರಂಗ ಬಹಿರಂಗ ಶುದ್ಧಿಗೆ ಪ್ರಾಶಸ್ತ$್ಯ ಕೊಡುವ ಕವಿಗಳ ಸಾಲಿನಲ್ಲಿ ಡಿವಿಜಿ ಅಗ್ರಗಣ್ಯರಾಗಿದ್ದಾರೆ. "ನಗುವಿನಲಿ ಊಟದಲಿ ಅನುಗಾಲ
ಶುಚಿಯಿರಲಿ' ಎಂಬ ಜೀವನಶುಚಿತ್ವದ ಪಾಠವನ್ನು ಹೇಳಿದ ಮಹಾನ್ ಕವಿಗೆ ಶರಣೆನ್ನುತ್ತಾ ನಗುವನ್ನು ಕಳೆದುಕೊಳ್ಳದೆ ಅಳುವನ್ನು ಸಂಭಾಳಿಸಿಕೊಳ್ಳುತ್ತ ನಿರುದ್ವಿಗ್ನರಾಗಿ ಬಾಳಲು ಪ್ರಯತ್ನಿಸೋಣ.
(ಲೇಖಕರು ಅರ್ಥಶಾಸ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)