ಮನೋಲ್ಲಾಸ: ಯಾವುದರತ್ತ ಗಮನ?

Manollasa
Published on

| ಡಾ.ಗಾಯತ್ರಿದೇವಿ ಸಜ್ಜನ್

Manollasa1
ಒಂದು ಸುಂದರವಾದ ಮುಂಜಾನೆ. ಗುರುಕುಲವೊಂದರಲ್ಲಿ ಶಿಷ್ಯರು ಯೋಗಾಭ್ಯಾಸ ಮಾಡುತ್ತಿದ್ದರು. ಆಗ ಅಲ್ಲಿಗೆ ಆಗಮಿಸಿದ ಆಗಂತುಕನೊಬ್ಬ ಮೊದಲನೆಯ ಸಾಲಿನಲ್ಲಿ ಆಸನ ಮಾಡುತ್ತಿದ್ದವನನ್ನು ಕುರಿತು, ‘ಏ ಹುಡುಗಾ, ತಲೆಕೆಳಗಾಗಿ ನಿಂತು ನೀನೇನು ಮಾಡುತ್ತಿರುವೆ?’ ಎಂದು ಕೇಳಿದ. ಆಗ ಆ ಹುಡುಗನು, ‘ನಿನಗೆ ಕಣ್ಣು ಕಾಣುವುದಿಲ್ಲವೇ? ನಾನು ಶೀರ್ಷಾಸನ ಮಾಡುತ್ತಿರುವೆ’ ಎಂದು ಒರಟಾಗಿ ಉತ್ತರಿಸಿದ. ಆಗಂತುಕನು ಗುಂಪಿನ ಮಧ್ಯೆ ಕುಳಿತು ಪ್ರಾಣಾಯಾಮ ಮಾಡುತ್ತಿದ್ದ ಮತ್ತೊಬ್ಬ ಶಿಷ್ಯನಿಗೆ, ‘ಮೂಗು ಹಿಡಿದು ಕುಳಿತು ನೀನೇನು ಮಾಡುತ್ತಿರುವೆ?’ ಎಂದು ಕೇಳಿದ. ಆ ಶಿಷ್ಯನು, ‘ನನಗೆ ಉಸಿರಾಟದ ತೊಂದರೆ ಇರುವುದರಿಂದ ಗುರುಗಳ ಸಲಹೆಯ ಮೇರೆಗೆ ಆರೋಗ್ಯ ಸುಧಾರಣೆಗಾಗಿ ನಾಡಿಶೋಧನ ಪ್ರಾಣಾಯಾಮ ಮಾಡುತ್ತಿರುವೆ’ ಎಂದ.

ಮೂಲೆಯಲ್ಲಿ ಕುಳಿತು ಪದ್ಮಾಸನ ಹಾಕಿ ಧ್ಯಾನ ಮಾಡುತ್ತಿದ್ದ ಶಿಷ್ಯನನ್ನು ಕಂಡ ಆಗಂತುಕ ಅವನ ಸನಿಹದಲ್ಲಿ ಕುಳಿತನು. ಅವನು ಕಣ್ಣು ತೆರೆದಾಗ, ‘ಮಗೂ, ಕಣ್ಣು ಮುಚ್ಚಿ ಕುಳಿತು ನೀನೇನು ಮಾಡುತ್ತಿರುವೆ?’ ಎಂದು ಕೇಳಿದ. ಆ ತರುಣನು ಮಂದಹಾಸ ಬೀರುತ್ತ, ‘ಪ್ರಕೃತಿಯ ಮಡಿಲಲ್ಲಿ ಕುಳಿತು ಜ್ಯೋತಿಸ್ವರೂಪನಾದ ಆ ಪರಶಿವನನ್ನು ಧ್ಯಾನಿಸುತ್ತ ಈ ಸಮಾಜದಲ್ಲಿ ಎಲ್ಲರೊಂದಿಗೆ ಸಹಯೋಗದಿಂದ ಬಾಳಲು ಶಕ್ತಿ ಕೊಡು ತಂದೆ ಎಂದು ಪ್ರಾರ್ಥಿಸುತ್ತಿದ್ದೇನೆ’ ಎಂಬುದಾಗಿ ವಿನಯಪೂರ್ವಕವಾಗಿ ಹೇಳಿದ.

ಈ ಮೂವರು ಶಿಷ್ಯರು ಒಂದೇ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿದ್ದರೂ, ಯೋಗಾಭ್ಯಾಸದ ಬಗ್ಗೆ ಇರುವ ದೃಷ್ಟಿಕೋನ ಬೇರೆ ಬೇರೆಯೇ. ಮೊದಲನೆಯ ಶಿಷ್ಯನು ಯೋಗಾಭ್ಯಾಸದಿಂದ ದೈಹಿಕ ಸದೃಢತೆಯನ್ನು ಮಾತ್ರ ಅಪೇಕ್ಷಿಸಿದರೆ, ಎರಡನೆಯ ಶಿಷ್ಯನು ಯೋಗಾಭ್ಯಾಸದಿಂದ ತನ್ನ ಆರೋಗ್ಯ ಸುಧಾರಣೆಯನ್ನು ಮಾತ್ರ ಬಯಸುವನು. ಆದರೆ 3ನೇಯ ಶಿಷ್ಯನು ಯೋಗಾಭ್ಯಾಸದಿಂದ ತನ್ನ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು, ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಆಶಿಸುವನು.

ಪ್ರತಿಯೊಬ್ಬ ವ್ಯಕ್ತಿಯೂ ಐದು ಕೋಶಗಳಿಂದ ರಚಿಸಲ್ಪಟ್ಟಿದ್ದಾನೆ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯ ಕೋಶ ಹಾಗೂ ಆನಂದ ಮಯಕೋಶ. ಸಾಧಾರಣ ಮಾನವರೆಲ್ಲರೂ ಮೊದಲಿನ ಮೂರುಕೋಶಗಳ ಕಡೆ ಮಾತ್ರ ಗಮನ ಹರಿಸಿ ಬದುಕನ್ನು ರೂಪಿಸಿಕೊಳ್ಳುವರು. ಆದರೆ ಮಹಾತ್ಮರಾದ ಬುದ್ಧ, ಬಸವ, ಶಂಕರರು ವಿಜ್ಞಾನಮಯಕೋಶ ಹಾಗೂ ಆನಂದಮಯಕೋಶದೆಡೆ ಗಮನ ಹರಿಸಿ ತಮ್ಮ ಅರಿವಿನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತ, ಉತ್ತಮವಾದ ಚಿಂತನೆಗಳಿಂದ ವಿಜ್ಞಾನಮಯಕೋಶಕ್ಕೆ ಚೈತನ್ಯ ನೀಡಿದರು. ಸತ್ ಚಿತ್ ಆನಂದ ಸ್ವರೂಪನಾದ ಪರಬ್ರಹ್ಮನಲ್ಲಿ ಐಕ್ಯವಾಗಲು ಆನಂದಮಯಕೋಶವನ್ನು ಜಾಗೃತಗೊಳಿಸಿದರು. ನಾವು ಕೂಡ ಬದುಕಿನ ನಿಜವಾದ ಬಗೆಯನ್ನು, ಸಾರ್ಥಕತೆಯನ್ನು ಅರಿತು, ಅದನ್ನು ನಮ್ಮದಾಗಿಸಿಕೊಳ್ಳಬೇಕೆ ಹೊರತು ತಾತ್ಕಾಲಿಕ ಪ್ರಯೋಜನಕ್ಕೆ ಬರುವ ಭೌತಿಕ ಸಂಗತಿಗಳನ್ನಲ್ಲ. ಇದನ್ನು ಅರ್ಥಮಾಡಿಕೊಂಡರೆ ಬದುಕಿನ ದಾರಿ ಸರಳ ಮತ್ತು ಸುಗಮವಾಗುತ್ತದೆ.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net