ಆಂತರ್ಯದಲ್ಲೇ ಇದೆ ಆನಂದ

Smile
Published on

| ವಿದ್ಯಾ ಅಮ್ಮಣ್ಣಾಯ

ಹಳ್ಳಿಯೊಂದರಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ನಿರಾಶನಾಗಿ ಮರದ ಬುಡವೊಂದರಲ್ಲಿ ಕುಳಿತು ಕಾಲ ಕಳೆಯುತ್ತಿದ್ದ. ಪ್ರತಿದಿನ ಭೇಟಿಯಾದವರಲ್ಲೆಲ್ಲ ಯಾವುದಾದರೊಂದು ಕಾರಣಕ್ಕಾಗಿ ಬದುಕನ್ನು ದೂರಿಕೊಳ್ಳುತ್ತಿದ್ದ. ಇವನ ಗೋಳು ಕೇಳಿ ಕೇಳಿ ಬೇಸತ್ತ ಜನರು ಆತನ ಸಹವಾಸದಿಂದ ಎಲ್ಲರಿಗೂ ದುಃಖ ಅಂಟಿಕೊಳ್ಳುತ್ತದೆ ಅಂತ ಅಂದುಕೊಂಡು ಆತನಿಂದ ದೂರವಿರತೊಡಗಿದರು. ಆ ವ್ಯಕ್ತಿ ಏಕಾಂಗಿಯಾದ. ಬದುಕಿನಲ್ಲಿ ತನಗೆ ಸಿಗದ ಆನಂದಗಳ ಕುರಿತು ಚಿಂತಿಸುತ್ತ ಕಾಲ ಕಳೆದ.

ಇದ್ದಕಿದ್ದಂತೆ ಒಂದು ದಿನ ಆತನ ಕುರಿತು ಆಶ್ಚರ್ಯಕರ ಸುದ್ದಿ ಹರಡತೊಡಗಿತು. ನಿರಾಶಾವಾದಿಯ ಮುಖದಲ್ಲಿ ನಗುವಿದೆ, ಸಂತೋಷವಿದೆ, ಎಲ್ಲರೊಂದಿಗೆ ನಗುತ್ತ ಬೆರೆಯುತ್ತಿದ್ದಾನೆ ಎಂಬ ಸುದ್ದಿ. ಚಕಿತಗೊಂಡ ಜನರು ಅವನನ್ನು ಭೇಟಿಯಾಗಿ- ‘ಈ ಸಂತೋಷಕ್ಕೆ ವಿಶೇಷ ಕಾರಣವಾದರೂ ಏನು?’ಎಂದು ಪ್ರಶ್ನಿಸಿದರು. ‘ವಿಶೇಷ ಕಾರಣಗಳೇನೂ ಇಲ್ಲ, ಕಳೆದ 60 ವರ್ಷಗಳಿಂದ ಸಂತೋಷವನ್ನು ಹುಡುಕುತ್ತ ದಿನಕಳೆದೆ, ಇಲ್ಲದೆ ಇರುವುದರ ಕುರಿತು ಚಿಂತಿಸುತ್ತ ಅಲೆದಾಡಿದೆ. ಆದರೆ ಅದು ವ್ಯರ್ಥವೆಂಬುದು ಈಗ ಅರಿವಾಯಿತು. ಜೀವನದಲ್ಲಿ ಇರುವುದರಲ್ಲೇ ಆನಂದವನ್ನು ಅನುಭವಿಸಬಹುದು ಎನ್ನುವುದೇ ನಿಜ. ಆದುದರಿಂದ ಈಗ ಇರುವಷ್ಟು ಸಮಯ ಆನಂದದಿಂದ ಇರಲು ನಿರ್ಧರಿಸಿದ್ದೇನೆ’ ಎಂದ.

ಹೌದು. ಎಷ್ಟೋ ಬಾರಿ ನಾವು ಕೂಡ ಹೀಗೆಯೇ ವರ್ತಿಸುತ್ತೇವೆ. ಇಲ್ಲದೆ ಇರುವುದರ ಕುರಿತು ಕೊರಗುತ್ತ ಇರುವ ಸುಖವನ್ನು ಅನುಭವಿಸದೆ ಒದ್ದಾಡುತ್ತೇವೆ. ಸಂತೋಷವನ್ನು ಹುಡುಕುತ್ತ ಹುಡುಕುತ್ತ ಕಾಲ ಕಳೆಯುತ್ತೇವೆ. ಯಾವುದರಲ್ಲೂ ತೃಪ್ತರಾಗದೆ ಬದುಕನ್ನು ಹಳಿಯುತ್ತಿರುತ್ತೇವೆ. ಹಣವಿದ್ದರೇ ಸಂತೋಷ ಅಂತ ಹೇಗಾದರೂ ಮಾಡಿ ಹಣ ಸಂಪಾದನೆ ಮಾಡುತ್ತೇವೆ. ಅದು ಸಾಲದಾದಾಗ ಮೋಜುಮಸ್ತಿಗಳಲ್ಲಿ ಕಾಲ ಕಳೆಯುತ್ತೇವೆ. ಇನ್ನಷ್ಟು ಹಣ, ಆಸ್ತಿ ಗಳಿಸುವ ಹುಚ್ಚಿನಿಂದ ಕೆಲವೊಮ್ಮೆ ಇರುವ ಹಣವನ್ನು ಕಳೆದುಕೊಳ್ಳುತ್ತೇವೆ. ಹೀಗೆ ಸಂತೋಷದ ಹುಡುಕಾಟದಲ್ಲಿ ಆಯಸ್ಸು, ನೆಮ್ಮದಿ ಕಳೆದು ಹೋದದ್ದೇ ತಿಳಿಯುವುದಿಲ್ಲ. ಅಷ್ಟರಲ್ಲಿ ಯೌವನ ಮುಗಿದು ವೃದ್ಧಾಪ್ಯ ಬಂದು ಬಿಡುತ್ತದೆ. ಸಂತೋಷದಿಂದ ಇರಬೇಕಾದ ದಿನಗಳು ಮುಗಿದು ಹೋಗಿರುತ್ತವೆ.

ಆದುದರಿಂದ ಇರುವುದರಲ್ಲಿಯೇ ನೆಮ್ಮದಿ ಕಾಣಬಯಸಬೇಕು. ಸಂತೋಷ ಅನ್ನುವುದು ನಾವೇ ಸೃಷ್ಟಿಸಿಕೊಳ್ಳುವ ಸ್ಥಿತಿ. ಹಣ, ಆಸ್ತಿ, ಬಂಗಲೆಗಳು ನೆಮ್ಮದಿಯನ್ನು ತಂದುಕೊಡಲಾರವು. ಅವರಿವರನ್ನು ನೋಡಿ ನಾವೂ ಹಾಗೆಯೇ ಆಗಬೇಕು ಎನ್ನುವುದು ಹುಚ್ಚುಹಠ. ಅದು ಬಿಟ್ಟು ನಮ್ಮಲ್ಲಿರುವುದರಲ್ಲಿಯೇ ತೃಪ್ತಿಯನ್ನು ಕಂಡುಕೊಳ್ಳಬೇಕು. ಗುಡಿಸಲಿನಲ್ಲೂ ನೆಮ್ಮದಿ, ಸಂತೋಷದಿಂದಿರುವ ಅನೇಕ ಸಂಸಾರಗಳು ನಮ್ಮ ಸುತ್ತಮುತ್ತಲಿವೆ. ಅರಮನೆಯಿದ್ದರೂ ನೆಮ್ಮದಿಯಿಲ್ಲದ ಸಂಸಾರಗಳೂ ಇವೆ.

ಡಿವಿಜಿ ಹೇಳಿದಂತೆ, ‘ಇರುವ ಭಾಗ್ಯವ ನೆನೆದು, ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ ಮಂಕುತಿಮ್ಮ’. ನಾವೆಲ್ಲರೂ ಈ ಭೂಮಿಯ ಮೇಲೆ ನಾನಾ ರೂಪಗಳಲ್ಲಿ ನಾನಾ ಸ್ಥಿತಿಗಳಲ್ಲಿ ಬಂದಾಗಿದೆ. ನಮ್ಮ ನಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವುದರಿಂದಲೇ ಆನಂದ. ಬಡವನಾದರೆ ದುಡಿಯುವುದರಿಂದ, ಧನಿಕನಾದರೆ ನೀಡುವುದರಿಂದ, ಒಟ್ಟಿನಲ್ಲಿ ಮಾನವರಂತೆ ಬದುಕಬೇಕು. ಇರುವುದರಲ್ಲೇ ಖುಷಿಪಟ್ಟು ಸಂತಸವನ್ನು ಹಂಚುತ್ತ ಬದುಕುವುದೇ ಆನಂದ.

(ಲೇಖಕರು ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net