

| ಚಂದ್ರಿಕಾ
ಜಗನ್ನಾಥದಾಸರು ಜ್ಞಾನಿಗಳು, ಅನುಭಾವಿಗಳು ಹಾಗೂ ಶ್ರೇಷ್ಠ ಹರಿಭಕ್ತರು. ಕರ್ನಾಟಕದ ಹರಿದಾಸ ಪರಂಪರೆ ಯಲ್ಲಿ ತಮ್ಮ ಅಸಾಮಾನ್ಯವಾದ ಕೃತಿಗಳಿಂದ ಅಮರ ರಾಗಿರುವರು. ದಾಸಚತುಷ್ಟರೆಂದು ಪ್ರಖ್ಯಾತರಾದವರಲ್ಲಿ ಶ್ರೀಜಗನ್ನಾಥದಾಸರೂ ಒಬ್ಬರು (ಪುರಂದರದಾಸರು, ಶ್ರೀವಿಜಯದಾಸರು, ಗೋಪಾಲದಾಸರು).
18ನೇ ಶತಮಾನದ ಆದಿಯಲ್ಲಿ ಹೈದರಾಬಾದ್ ಪ್ರಾಂತ್ಯದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಸೇರಿದ ಬ್ಯಾಗವೆಟ್ಟ ಗ್ರಾಮದಲ್ಲಿ ನರಸಪ್ಪ-ಲಕ್ಷ್ಮೀಬಾಯಿ ದಂಪತಿಗೆ (ಕೆಲವು ಗ್ರಂಥಗಳಲ್ಲಿ ನರಸಿಂಹದಾಸರು-ಲಕ್ಷ್ಮಮ್ಮ ಎಂದೂ ಇದೆ) ತಿರುಪತಿ ಶ್ರೀನಿವಾಸನ ವರಪ್ರಸಾದದಿಂದ ಹುಟ್ಟಿದವರು ಜಗನ್ನಾಥದಾಸರು (ಕೀಲಕ ಸಂವತ್ಸರ ಶ್ರಾವಣ ಶುದ್ಧ ಬಿದಿಗೆ ಕ್ರಿ.ಶ.1728 ಜುಲೈ 27). ಅದಕ್ಕಾಗಿ ಅವರ ಹೆಸರು ‘ಶ್ರೀನಿವಾಸ’ ಆಗಿತ್ತು. ಬಾಲ್ಯದಲ್ಲಿ ತಂದೆಯಿಂದಲೇ ಸಂಸ್ಕೃತ-ಕನ್ನಡ ವಿದ್ಯಾಭ್ಯಾಸ ನಡೆಯಿತು. ಮುಂದಿನ ಪ್ರೌಢವಿದ್ಯಾಭ್ಯಾಸ ಮಂತ್ರಾಲಯದಲ್ಲಿ ಜರುಗಿತು. ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದು, ಸಂಸ್ಕೃತ ವಾತಾವರಣದಲ್ಲೇ ಬೆಳೆದರು. ವಿದ್ಯಾಭ್ಯಾಸದ ತರುವಾಯ ಮಾನ್ವಿಗೆ ಬಂದು ನೆಲೆಸಿದರು. ಈ ನಡುವೆ ಇವರಿಗೆ ಕ್ಷಯರೋಗ ಅಂಟಿಕೊಂಡು, ತುಂಬ ಬಳಲಿದರು. ಗೋಪಾಲದಾಸರನ್ನು ಗುರುಗಳೆಂದು ಸ್ವೀಕರಿಸಿದ ಶ್ರೀನಿವಾಸಾಚಾರ್ಯರು ಅವರ ಜತೆ ತಿರುಪತಿಗೆ ತೆರಳಿದರು. ವೆಂಕಟೇಶನ ದರ್ಶನ ಹಾಗೂ ಗುರುಕಾರುಣ್ಯದಿಂದ ರೋಗಪರಿಹಾರವಾಗಿ, ಗೋಪಾಲದಾಸರ ಶಿಷ್ಯರೇ ಆಗಿಹೋದರು. ಅವರಿಂದ ‘ದಾಸ ಅಂಕಿತ’ ಪಡೆಯಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಗೋಪಾಲದಾಸರು ಇವರನ್ನು ಪಂಢರಪುರಕ್ಕೆ ಹೋಗಿ ಪಾಂಡುರಂಗನ ಸೇವೆ ಮಾಡುವಂತೆ ಹೇಳಿದರು. ಪಂಢರಪುರದ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುವಾಗೊಮ್ಮೆ ಇವರಿಗೆ ‘ಜಗನ್ನಾಥವಿಠಲ’ ಎಂಬ ಹೆಸರು ಕೆತ್ತಿದ್ದ ಶಿಲೆಯೊಂದು ಕೈಗೆ ಸಿಕ್ಕಿತು. ಇವರು ಶಿಲೆಯನ್ನು ಕಣ್ಣಿಗೊತ್ತಿಕೊಂಡು, ‘ಅಂಕಿತ’ವೆಂದು ಸ್ವೀಕರಿಸಿದರು. ಶ್ರೀನಿವಾಸಾಚಾರ್ಯರು ಅಂದಿನಿಂದ ಜಗನ್ನಾಥದಾಸರರಾದರು. ಅಲ್ಲಿ ಅವರು ಹಾಡಿದ ಮೊದಲ ಪದವೇ ದಾಸರ ಮೊದಲ ಹಾಡಾಯಿತು-‘ತಟಿತ್ಕೋಟಿ ನಿಭ ಕಾಯ ಜಗನ್ನಾಥ ವಿಠಲಯ್ಯ-ವಿಠಲಯ್ಯ...’ ನಂತರ ಅಲ್ಲಿಂದ ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರರನ್ನು ಸ್ತುತಿಸುತ್ತ- ‘ರಾಯ ಬಾರೋ ತಂದೆ-ತಾಯಿ ಬಾರೋ, ನಮ್ಮ ಕಾಯಿ ಬಾರೋ ಮಾಯಿಗಳ ಮರ್ಧಿಸಿದ ರಾಘವೇಂದ್ರ...’ ಎಂದು ಹಾಡಿದರು. ‘ಜಗನ್ನಾಥ ವಿಠಲ’ ಅಂಕಿತದಿಂದಲೇ ದಾಸರು ನೂರಾರು ದೇವರನಾಮಗಳನ್ನೂ, ಉಗಾಭೋಗಗಳನ್ನೂ, ‘ತತ್ತ್ವಸುವ್ವಾಲಿ’ ಎಂಬ ಸಾವಿರಾರು ಸುವ್ವಾಲಿಗಳನ್ನೂ, ಎಲ್ಲಕ್ಕಿಂತ ಹೆಚ್ಚಾಗಿ ‘ಹರಿಕಥಾಮೃತಸಾರ’ ಎಂಬ ಗ್ರಂಥರತ್ನವನ್ನೂ ರಚಿಸಿ, ಪ್ರಸಿದ್ಧರಾದರು. ಸರಳ ಕನ್ನಡ ಭಾಮಿನೀ ಷಟ್ಪದಿಯಲ್ಲಿ ರಚಿತವಾದ ಹರಿಕಥಾಮೃತಸಾರವು ಉಪನಿಷತ್ತುಗಳು, ಪುರಾಣಗಳು, ಪಾಂಚರಾತ್ರಾಗಮ ಇನ್ನೂ ಅನೇಕ ಗ್ರಂಥಗಳ ಸಾರಸಂಗ್ರಹವನ್ನು ಒಳಗೊಂಡಿದೆ. ಮಾಧ್ವಮತದ ಅತ್ಯಂತ ಕ್ಲಿಷ್ಟವಾದ ಪ್ರಮೇಯಗಳು ವಿಸ್ತಾರವಾಗಿ ನಿರೂಪಿತವಾಗಿ 32 ಸಂಧಿಗಳಿಂದ ಕೂಡಿ ಒಟ್ಟು 988 ಷಟ್ಪದಿಗಳಿವೆ. ಇದೊಂದು ಅಧ್ಯಾತ್ಮಶಾಸ್ತ್ರ, ಮೋಕ್ಷಕ್ಕೆ ದಾರಿಯಾಗುವ ಗ್ರಂಥವೆಂದೂ ಹೆಸರಾಗಿದೆ. ಇದನ್ನೂ ಓದಿ: ಮನೋಲ್ಲಾಸ: ರಾಮಾಯಣವೆಂಬ ಮಹಾಫಲ
ಜಗನ್ನಾಥದಾಸರಿಗೆ ಇಬ್ಬರು ಗಂಡುಮಕ್ಕಳಿದ್ದರೂ ಅವರು ಬಹುಬೇಗ ತೀರಿಕೊಂಡಿದ್ದರು. ಇವರ ಶಿಷ್ಯವರ್ಗ ಕನ್ನಡನಾಡಿನೆಲ್ಲಡೆ ಹಂಚಿಹೋಗಿದ್ದಾರೆ. ಜಗನ್ನಾಥದಾಸರ ಶಿಷ್ಯರಲ್ಲಿ ಪ್ರಮುಖರಾದವರು ಶ್ರೀಪ್ರಾಣೇಶವಿಠಲರು, ಅಭಿನವಜನಾರ್ದನವಿಠಲರು, ಶ್ರೀಶ ವಿಠಲರು, ಮನೋಹರವಿಠಲರು. 81ನೇ ವಯಸ್ಸಿನಲ್ಲಿ ಜಗನ್ನಾಥದಾಸರು ಭೌತಿಕಶರೀರವನ್ನು ತೊರೆದರು. ಮಾನ್ವಿಯಲ್ಲಿ ದಾಸರ ಪುಣ್ಯದಿನವನ್ನು ಅವರ ಮನೆಯಲ್ಲಿ (ಈಗ ಗುಡಿಯಾಗಿ ಮಾರ್ಪಟ್ಟಿದೆ) ಆಚರಿಸಿಕೊಂಡು ಬರುತ್ತಿದ್ದಾರೆ ಹಾಗೂ ದಾಸರು ಪೂಜಿಸುತ್ತಿದ್ದ ಶಾಲಿಗ್ರಾಮ, ತುಳಸೀಕಾಷ್ಠವೃಂದಾವನ, ಸತ್ಯಬೋಧರು ಕೊಟ್ಟ ಪಾದುಕೆಗಳು, ಸಣ್ಣ ತಂಬೂರಿ, ಒಂದು ಮೋನೆ ಇವಿಷ್ಟೂ ಅಲ್ಲಿವೆ. ಭಕ್ತಜನರಿಂದ, ದಾಸರುಗಳಿಂದ ಅವೆಲ್ಲವೂ ಪೂಜಿಸಲ್ಪಡುತ್ತಿವೆ.
(ಲೇಖಕರು ಹವ್ಯಾಸಿ ಬರಹಗಾರರು)