

| ರೇಖಾ ಗಜಾನನ ಭಟ್ಟ
ಅದೊಂದು ಸ್ವರ್ಗದೂರು. ಅಲ್ಲಿ ಕರಕುಶಲ ವಸ್ತು ತಯಾರಿಕೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. ದೇವತೆಗಳೇ ನಿರ್ಣಾಯಕರಾಗಿ ಬರುವ ಕಾರಣ ಆ ಸ್ಪರ್ಧೆ ಹೆಚ್ಚು ಜನಪ್ರಿಯವಾಗಿತ್ತು. ಸುಶಾಮ ಮತ್ತು ಕಲಾಧರ ಎನ್ನುವವರು ಅಂತಿಮ ಹಂತ ತಲುಪಿದರು. ಕಲಾಧರ ಈ ಹಿಂದಿನ ಅನೇಕ ಸ್ಪರ್ಧೆಗಳ ವಿಜಯಿಯಾಗಿದ್ದು ಅವನನ್ನು ಯಾರಿಂದಲೂ ಮೀರಿಸಲಾಗದು ಎಂಬ ಮಾತಿತ್ತು. ಅಂತಿಮ ಸ್ಪರ್ಧೆಯ ದಿನ ಇಬ್ಬರೂ ಸ್ಪರ್ಧಿಗಳಿಗೆ ಒಂದೊಂದು ಹತ್ತಿಯ ಹೊರೆ ನೀಡಿ ಆ ಹತ್ತಿಯಿಂದ ರಾತ್ರಿಯಿಡಿ ಕತ್ತಲೆಯಲ್ಲಿ ಅಂದವಾದ ವಸ್ತುಗಳನ್ನು ತಯಾರಿಸಬೇಕು ಎಂದು ಸೂಚಿಸಿ, ನಿರ್ಣಾಯಕರು ಬೆಳಗ್ಗೆ ಬಂದು ನೋಡಿ ನಿರ್ಣಯ ನೀಡುತ್ತಾರೆ ಎಂದು ತಿಳಿಸಲಾಯಿತು.
ಇಬ್ಬರೂ ಸ್ಪರ್ಧಾ ಕೋಣೆ ಸೇರಿದರು. ಕಲಾಧರ ‘ಇರುಳು ಪೂರ ಕಷ್ಟಪಡುವ ಬದಲು ನಸುಕಿನಲ್ಲಿ ಎದ್ದು ನಿರ್ಣಾಯಕರು ಬರುವುದರೊಳಗೆ ಅದ್ಭುತವಾದ ವಸ್ತುಗಳನ್ನು ತಯಾರಿಸಬಲ್ಲೆ’ ಎಂದುಕೊಂಡು ಆ ಹತ್ತಿಹೊರೆಯನ್ನೇ ತಲೆದಿಂಬು ಹಾಸಿಗೆಯನ್ನಾಗಿ ಮಾಡಿಕೊಂಡು ಮಲಗಿಬಿಟ್ಟ. ಸುಶಾಮ ತನ್ನ ಹತ್ತಿಹೊರೆಯಿಂದ ಹತ್ತಿ ತೆಗೆದು ತಡಕಾಡುತ್ತ ವಸ್ತು ತಯಾರಿಸಲು ಶುರುಮಾಡಿದ. ನಸುಕು ಹರಿದಾಗ ಲಗುಬಗೆಯಿಂದ ಎದ್ದ ಕಲಾಧರ ಅತ್ಯುತ್ತಮವಾಗಿ ಕಲಾಕೃತಿ ನಿರ್ವಿುಸಿದ. ಇಬ್ಬರೂ ನಿರ್ಣಾಯಕರ ದಾರಿ ಕಾಯತೊಡಗಿದರು. ಅಷ್ಟರಲ್ಲಿ ಸ್ಪರ್ಧೆಯಲ್ಲಿ ಸುಶಾಮ ವಿಜಯಿಯಾಗಿದ್ದಾನೆ ಎಂಬ ಉದ್ಘೋಷ ಸಭೆಯಲ್ಲಿ ಮೊಳಗಿದಾಗ ಕಲಾಧರ ಕೋಪಗೊಂಡು ಅಲ್ಲಿಗೆ ತೆರಳಿ ‘ಇದು ಮೋಸ, ನಿರ್ಣಾಯಕರು ಬಂದು ನೋಡಿ ನಿರ್ಣಯಮಾಡದೇ ಹೇಗೆ ಫಲಿತಾಂಶ ನೀಡಿದಿರಿ..?!’ ಎಂದು ಕೂಗಿದ. ಆಗ ಅಲ್ಲೇ ಕುಳಿತಿದ್ದ ಸೂರ್ಯದೇವ ನಸುನಗುತ್ತ ‘ಈ ಕೊನೆಯ ಸ್ಪರ್ಧೆಯ ನಿರ್ಣಾಯಕನಾಗಿ ನಾನು ಬಂದಿದ್ದೆ. ಇರುಳ ಸರಿಸಿ ಬೆಳಕು ಹರಿಸುತ್ತ ನಾನು ನಿಮ್ಮಲ್ಲಿಗೆ ಬಂದಾಗ ನೀನು ನಿದ್ರಿಸುತ್ತಿದ್ದೆ. ಆದ್ದರಿಂದ ನೀನು ನಿದ್ರಿಸಲೆಂದು ಬಳಸಿದ ಆ ಹತ್ತಿ ತಲೆದಿಂಬು, ಹಾಸಿಗೆಯನ್ನೇ ನಿನ್ನ ಕಲಾಕೃತಿ ಎಂದು ಸ್ಪರ್ಧೆಗೆ ಪರಿಗಣಿಸಬೇಕಾಯಿತು. ಆದರೆ ಸುಶಾಮ ಬಹಳಷ್ಟು ಕಲಾಕೃತಿಗಳನ್ನು ತಯಾರಿಸಿದ್ದ. ಆದ್ದರಿಂದ ಅವನು ವಿಜಯಶಾಲಿಯಾದ’ ಎಂದ.
ಕಲಾಧರನಲ್ಲಿ ತಾನು ಅತ್ಯುತ್ತಮ, ಈ ಸ್ಪರ್ಧೆ ತನಗೆ ಸಣ್ಣದು ಎಂಬ ಭಾವನೆ ಇತ್ತು. ಸ್ಪರ್ಧೆಗಾಗಿ ನಿದ್ದೆ ಕಳೆದುಕೊಂಡು ಕಲಾಕೃತಿ ತಯಾರಿಸುವುದರ ಬದಲಾಗಿ ಬೆಳಕು ಹರಿದ ಮೇಲೆ ಮಾಡಿದರಾಯಿತು ಎಂಬ ಉಡಾಫೆಯೇ ಅವನಿಗೆ ಸೋಲನ್ನು ತಂದಿತು. ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ಪ್ರತಿಭೆಯ ಜೊತೆ ಸರಿಯಾದ ಸಮಯಕ್ಕೆ ತೆರೆದುಕೊಳ್ಳುವ ಪ್ರಸ್ತುತಿ ಹೇಗೆ ಮುಖ್ಯವೋ ಹಾಗೆ ಜೀವನದ ಮೈಲಿಗಲ್ಲುಗಳನ್ನು ಏರುವಾಗಲೂ ಇಂತಹ ಜಾಗರೂಕತೆ ನಮ್ಮೊಳಗೆ ಇರಬೇಕು. ಗೆಲುವು ನಮ್ಮದೇ ಎಂದು ಬೀಗುವ ನಮಗೆ ಸಣ್ಣಸಣ್ಣ ವಿಷಯಗಳಲ್ಲಿ ಎಡವಿದ್ದು ಅರಿವಾಗುವುದಿಲ್ಲ. ಜೀವನದಲ್ಲಿ ದೇವರು ನೀಡುವ ಪರೀಕ್ಷೆ ಯಾವತ್ತೂ ನಿಯಮಬದ್ಧವಾಗಿಯೇ ಇರುವುದರಿಂದ ನೀತಿಬದ್ಧವಾಗಿ, ಜಾಗರೂಕತೆಯಿಂದ ಎದುರಿಸಿ ಜಯಗಳಿಸೋಣ.
ಸಾಮರ್ಥ್ಯವೊಂದೇ ಗೆಲುವು ನೀಡದು ಎಲ್ಲ ಸಲ
ಸಮಯಕ್ಕೆ ತಕ್ಕ ಪ್ರಸ್ತುತಿಗೂ ಇದೆ ಸಮಬಲ
ನಾನು ಮೇಲೆಂದು ಮೈಮರೆಯದಿರು ಮನವೆ
ಜಾಗರೂಕತೆಯಲಿ ಮುನ್ನಡೆಯುತಿರು ಗೆಲುವೆ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)