

| ಸುನೀತಾ ಜಗದೀಶ್
ಮನುಷ್ಯನಿಗೆ ನೆಮ್ಮದಿಯ ಜೀವನವಿದ್ದರೂ ಅದನ್ನು ಹೇಗೆ ಅನುಭವಿಸುವುದು ಎಂದು ತಿಳಿದಿರುವುದಿಲ್ಲ. ಏನಾದರೊಂದು ಬೇಸರ ಅಥವಾ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವ ಚಾಳಿ. ಒಬ್ಬ ಯಾವುದೇ ತಪ್ಪನ್ನು ಮಾಡದಿದ್ದರೂ ಅವನಲ್ಲಿ ಸುಮ್ಮನೆ ಏನಾದರೊಂದು ಹುಳುಕನ್ನು ಹುಡುಕಿ ಜಗಳ ಕಾಯುವುದೇ ಕಾಯಕವಾಗಿರುತ್ತದೆ. ಚಿಕ್ಕವಿಷಯವನ್ನು ದೊಡ್ಡದು ಮಾಡುತ್ತ ಹೋಗುತ್ತಾರೆ. ಸಣ್ಣದರಲ್ಲಿಯೇ ಸಮಸ್ಯೆಯನ್ನು ಕಿವುಚಿ ಹಾಕುವುದನ್ನು ಬಿಟ್ಟು ಅದನ್ನು ದೊಡ್ಡದು ಮಾಡಿ ಸಮಾಜದಲ್ಲಿ ನೆಮ್ಮದಿಯನ್ನು ಹಾಳು ಮಾಡುತ್ತಾರೆ.
ಒಂದು ಹಳ್ಳಿಯಲ್ಲಿ ಒಬ್ಬ ಸಂತರಿದ್ದರು. ಅಲ್ಲಿಯ ಜನ ಏನಾದರೂ ಸಮಸ್ಯೆಗಳಿದ್ದರೆ ಅವರ ಬಳಿ ಹೋಗಿ ಹೇಳಿಕೊಳ್ಳುತ್ತಿದ್ದರು. ಸಮಸ್ಯೆ ಏನೇ ಇರಲಿ ಅದನ್ನು ಬುದ್ಧಿವಂತಿಕೆಯಿಂದ ಆ ಸಂತರು ಪರಿಹರಿಸುತ್ತಿದ್ದರು. ಆದರೆ ಆ ಹಳ್ಳಿಜನರು ಪದೇಪದೆ ಒಂದೇ ತರಹದ ಸಮಸ್ಯೆ ತರುತ್ತಿದ್ದರು. ಇದರಿಂದ ಬೇಸತ್ತ ಸಂತರು ಉಪಾಯವನ್ನು ಹೂಡಿ ಗ್ರಾಮಸ್ಥರನ್ನು ಕರೆದು, ‘ನೀವೆಲ್ಲರೂ ಇವತ್ತು ಇಲ್ಲಿ ಸೇರಬೇಕು. ನಿಮ್ಮ ಜೊತೆ ಹಾಸ್ಯಪ್ರಸಂಗದ ಬಗ್ಗೆ ಮಾತನಾಡುತ್ತೇನೆ. ಇದರಿಂದ ನಿಮ್ಮ ಮನಸ್ಸಿಗೆ ಹಿತವಾಗುವುದು, ಸಮಸ್ಯೆ ಕೂಡ ದೂರವಾಗುವುದು’ ಎಂದರು. ಸಂತರು ಹಾಸ್ಯಪ್ರಸಂಗವನ್ನು ಶುರು ಮಾಡಿದರು. ಇವರ ಹಾಸ್ಯದ ಮಾತುಗಳನ್ನು ಕೇಳಿದ ಜನ ಬಿದ್ದು ಬಿದ್ದು ನಕ್ಕರು. ಸ್ವಲ್ಪಹೊತ್ತು ಬಳಿಕ ಅದೇ ಹಾಸ್ಯಪ್ರಸಂಗ ಪ್ರಸ್ತಾಪಿಸಿದಾಗ, ಕೆಲವರು ಮಾತ್ರ ನಕ್ಕರು. ಕೆಲವು ನಿಮಿಷ ಬಿಟ್ಟು ಮೂರನೆ ಬಾರಿಯೂ ಅದೇ ಹಾಸ್ಯಪ್ರಸಂಗ ನಿವೇದಿಸಿದಾಗ, ಯಾರು ಕೂಡ ನಗಲಿಲ್ಲ. ಪದೇಪದೆ ಅದೇ ಹಾಸ್ಯಪ್ರಸಂಗ ಕೇಳಿದ ಜನಕ್ಕೆ ನೀರಸವಾಯಿತು. ಎಲ್ಲರೂ ಅವರವರ ಮನೆಗೆ ಹೊರಡಲು ಅಣಿಯಾದರು.
ಆಗ ಸಂತರು-‘ನಿಮಗೆ ಪದೇಪದೆ ಒಂದೇ ಹಾಸ್ಯಪ್ರಸಂಗ ಕೇಳಿ ಬೇಸರವಾಗಿದೆ. ಅದೇ ರೀತಿ ನೀವು ಕೂಡ ಒಂದೇ ಸಮಸ್ಯೆಯನ್ನು ಮತ್ತೆಮತ್ತೆ ಹೇಳಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ, ಅದರಿಂದ ಹೊರಗೆ ಬನ್ನಿ, ಬೇರೆ ಪ್ರಪಂಚ ನೋಡಿ, ಎದುರಿಗಿರುವ ಅವಕಾಶಗಳು, ಸುತ್ತಲೂ ಇರುವ ಒಳ್ಳೆಯತನವನ್ನು ಗಮನಿಸಿ, ಆನಂದಮಯ ವ್ಯಕ್ತಿತ್ವ ರೂಪಿಸಿಕೊಳ್ಳಿ’ ಎಂದರು.
ತಮ್ಮ ತಮ್ಮಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಇಚ್ಛಾಶಕ್ತಿ ಇರಬೇಕು. ಕೆಟ್ಟವನನ್ನೂ ಒಳ್ಳೆಯವನನ್ನಾಗಿ ಮಾಡಬಹುದು. ಪ್ರತಿಯೊಬ್ಬರಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ. ಅದನ್ನು ಬಿಟ್ಟು ಬೇರೆಯವರ ಸಮಸ್ಯೆಗಳನ್ನು ನಮ್ಮ ಮೈಮೇಲೆ ಎಳೆದುಕೊಂಡು ಕೊರಗುವುದಕ್ಕಿಂತ ನಾವು ಯಾರ ಸುದ್ದಿಗೂ ಹೋಗದೆ ದೂರು, ಚಾಡಿಗಳಿಂದ ದೂರವಿರಬೇಕು. ಒಂದೇ ಸಮಸ್ಯೆಯನ್ನು ಹಿಡಿದು ಕೊರಗುವುದರಿಂದ ಅಮೂಲ್ಯ ಸಮಯ ಹಾಳಾಗುವುದಲ್ಲದೆ ಮಾನಸಿಕ ಸ್ಥೈರ್ಯವೂ ಕುಂದುವುದು. ಇನ್ನೊಬ್ಬರಿಗೆ ಕೆಡುಕನ್ನು ಮಾಡಿದರೆ ದೇವರು ಖಂಡಿತ ಮೆಚ್ಚಲಾರ. ನಾವು ಸಹಿಷ್ಣುಗಳಾಗಬೇಕು. ತಾಳುವಿಕೆಗಿಂತ ಅನ್ಯ ತಪವಿಲ್ಲ. ದೇವರು ಕೊಟ್ಟ ಉತ್ತಮ ಜೀವನವನ್ನು ಸಂತೃಪ್ತಿಯಿಂದ ನಡೆಸುವುದೇ ಧರ್ಮ.
(ಲೇಖಕರು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)