

| ಶ್ರೀರಾಮ ಚಕ್ರವರ್ತಿ
ವಿಶಾಲ ಗಂಭೀರವಾದ ಸಮುದ್ರ, ಅದರಮೇಲೆ ಒಂದು ಸುಂದರವಾದ ನೌಕೆ. ಆ ನೌಕೆಯಲ್ಲಿ ಹತ್ತಾರು ಪ್ರಯಾಣಿಕರಿದ್ದಾರೆ. ಆ ಹಡಗು ಸಮುದ್ರತೀರವನ್ನು ತಲುಪಲು, ಅಲೆಗಳ ಏರಿಳಿತಗಳಿಗೆ ಅನುಗುಣವಾಗಿ ತೂಗುತ್ತ, ತೇಲುತ್ತ ಮುಂದೆ-ಮುಂದೆ ಸಾಗುತ್ತಿತ್ತು. ಸಮುದ್ರದ ಭೋರ್ಗರೆತ ಹೆಚ್ಚಾಗಲಾರಂಭಿಸಿತು, ಮಂದವಾಗಿದ್ದ ಅಲೆಗಳ ರಭಸ ಜೋರಾಯಿತು, ಚಂಡಮಾರುತದ ಲಕ್ಷಣಗಳು ಕಂಡುಬಂದವು. ಪರಿಣಾಮವಾಗಿ ನೌಕೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು, ಪ್ರಯಾಣಿಕರಲ್ಲಿ ಆತಂಕದ ವಾತಾವರಣ. ಇದನ್ನರಿತುಕೊಂಡ ನಾವಿಕರು ಪ್ರಯಾಣಿಕರಿಗೆ ಧೈರ್ಯ ತುಂಬುತ್ತ, ‘ಹೆದರಬೇಕಾಗಿಲ್ಲ, ನಾವು ಹೇಳುವ ನಿಯಮಗಳನ್ನು ಅನುಸರಿಸಿದರೆ, ಆಜ್ಞೆ ಮಾಡಿದ ಸ್ಥಳಗಳಲ್ಲಿಯೇ ಕುಳಿತುಕೊಳ್ಳುವುದೇ ಆದರೆ ನೀವು ಸುರಕ್ಷಿತವಾಗಿ ದಡವನ್ನು ಸೇರಬಹುದು’ ಎಂದು ಆಶ್ವಾಸನೆಯಿತ್ತರು.
ಇಷ್ಟೆಲ್ಲ ಸ್ಪಷ್ಟವಾಗಿ ತಿಳಿಸಿದ್ದರೂ ಎಷ್ಟೋ ಪ್ರಯಾಣಿಕರು ಆದೇಶವನ್ನು ಮೀರಿ ನಡೆದರು. ಪರಿಣಾಮ ಹಲವರು ಸಂಕಷ್ಟಕ್ಕೆ ಸಿಲುಕಿದರು. ಆದರೆ, ನಾವಿಕನ ಆದೇಶವನ್ನು ಪಾಲಿಸುತ್ತ ಒಂದು ಮಗು ನೆಮ್ಮದಿಯಾಗಿ ನಿಗದಿತ ಸ್ಥಾನದಲ್ಲಿ ಕುಳಿತಿತ್ತು. ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಮತ್ತೊಬ್ಬ ಪ್ರಯಾಣಿಕ ಆಶ್ಚರ್ಯದಿಂದ ಪ್ರಶ್ನಿಸಿದ, ‘ನೀನು ಹೇಗೆ ಅಷ್ಟು ಧೈರ್ಯದಿಂದ ವರ್ತಿಸಿದೆ? ನಿನಗೆ ಭಯ ಆಗಲಿಲ್ಲವೇ?’. ಅದಕ್ಕೆ ಮಗು, ‘ನಾವಿಕರು ನನ್ನ ತಂದೆ. ಅವರು ನನ್ನನ್ನು ಸುರಕ್ಷಿತವಾಗಿ ತಲುಪಿಸುತ್ತಾರೆಂದು ಸಂಪೂರ್ಣ ನಂಬಿಕೆಯಿತ್ತು, ಹಾಗಾಗಿ ಯಾವ ರೀತಿಯ ಭಯವೂ ಆಗಲಿಲ್ಲ’ ಎಂದಿತು.
ಜೀವನದಲ್ಲಿ, ನಾವಿಕನಿತ್ತಂತಹ ಶಾಸನಗಳನ್ನು ಅನೇಕ ಬಾರಿ ಎದುರಿಸುತ್ತೇವೆ. ಅಂತಹ ಅನೇಕ ವಿಧಿ-ನಿಷೇಧಗಳ ಕಟ್ಟಳೆಗಳನ್ನು ನಮ್ಮ ಶಾಸ್ತ್ರಗಳು ಮಾಡುತ್ತವೆ. ಸತ್ಯವನ್ನು ಹೇಳು, ಪ್ರಾಮಾಣಿಕವಾಗಿ ಬಾಳು ಇತ್ಯಾದಿಗಳು. ಹಾಗಾದರೆ ಇಲ್ಲಿ ಯಾವ ಪ್ರಯಾಣ, ಇದರ ಉದ್ದೇಶವೇನು? ಈ ನಮ್ಮ ಜೀವನವೇ ಪ್ರಯಾಣ, ಅದರಲ್ಲಿ ನಾವೇ ಪ್ರಯಾಣಿಕರು, ಸಂಸಾರ ಎಂಬ ಭೀಕರ ಸಮುದ್ರವನ್ನು ದಾಟಿ, ಜನನ-ಮರಣಗಳಿಂದ ಮೋಕ್ಷವನ್ನು ಪಡೆಯುವುದೇ ನಾವು ತಲುಪಬೇಕಾದ ದಡ. ನಿಪುಣರಾದ ನಾವಿಕರು ಭಾರತೀಯ ಮಹರ್ಷಿಗಳು. ಅವರು ಧರ್ಮ-ಮೋಕ್ಷಗಳ ಪರಿಚಯವನ್ನು ಚೆನ್ನಾಗಿ ಬಲ್ಲವರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅಲೆಗಳಲ್ಲಿ ಸ್ಥಿರವಾಗಿ ಧರ್ಮದಲ್ಲಿ ನಿಲ್ಲಿಸುವಂಥ ಆದೇಶವೇ ಶಾಸ್ತ್ರಗಳು. ಆ ಪದವೇ ಹೇಳುವಂತೆ, ‘ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಭಿಧೀಯತೇ’, ಅಂದರೆ ಯಾವುದರ ನಿಯಮಕ್ಕೆ (ಶಾಸನಕ್ಕೆ) ಒಳಪಟ್ಟರೆ ನಮ್ಮ ರಕ್ಷಣೆಯಾಗುವುದೋ ಅದೇ ಶಾಸ್ತ್ರ. ನಾವಿಕನ ಮಾತಿನಂತೆ ತಜ್ಞರ ಹಿತವಚನವಿದು. ಮಹರ್ಷಿಗಳ ಶಾಸ್ತ್ರದಲ್ಲಿ ಮಗುವಿನಂತೆ ಪೂರ್ಣ ಭರವಸೆಯನ್ನಿಟ್ಟು ಬಾಳಾಟವನ್ನು ರೂಪಿಸಿಕೊಳ್ಳುವುದಾದರೆ, ನಾವೂ ಸುರಕ್ಷಿತವಾಗಿ ದಡವನ್ನು ಸೇರಬಹುದು. ಇಲ್ಲವಾದ್ದಲ್ಲಿ ಪ್ರಕೃತಿಯ ವೇಗಕ್ಕೆ ಸಿಲುಕಿ ದಾರಿ ತಪ್ಪಿಹೋಗುವುದು ನಿಶ್ಚಿತ. ‘ಸೃಷ್ಟಿ, ಸ್ಥಿತಿ, ಲಯಗಳು ಎಲ್ಲಿಯವರೆಗೆ ನಡೆಯುತ್ತಿರುತ್ತವೆಯೋ ಅಲ್ಲಿಯವರೆಗೂ ಸೃಷ್ಟಿ ವಿದ್ಯಾ ರಹಸ್ಯರೂಪಗಳಾದ ವೇದಶಾಸ್ತ್ರಗಳೂ ನಿತ್ಯವಾಗಿಯೇ ಇರುತ್ತವೆ’ ಎಂಬ ಶ್ರೀರಂಗ ಮಹಾಗುರುಗಳ ಮಾತು ಸ್ಮರಣೀಯ. ಮಹರ್ಷಿ ಯೋಜಿತವಾದ ಶಾಸ್ತ್ರೋಕ್ತ ಜೀವನವು ನಮ್ಮದಾಗಲಿ ಎಂದು ಆಶಿಸೋಣ, ಅಂತೆಯೇ ಬಾಳೋಣ.
(ಲೇಖಕರು ಇಂಜಿನಿಯರ್, ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)