

| ರಾಜು ಭೂಶೆಟ್ಟಿ
ಬಿಳಿ ಗುಲಾಬಿ ಹೂವೊಂದು ಉದ್ಯಾನದಲ್ಲಿ ತುಂಬ ಚೆನ್ನಾಗಿ ಬೆಳೆದು ಅರಳಿತ್ತು. ಸುಂದರವಾದ ಬಿಳಿಬಣ್ಣ, ನಯವಾದ ದಳಗಳು, ಸೊಗಸಾದ ಸುವಾಸನೆಯಿಂದ ಪ್ರತಿಯೊಬ್ಬರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಸಾಕಷ್ಟು ಜನರು ಆ ಉದ್ಯಾನಕ್ಕೆ ಭೇಟಿ ಕೊಟ್ಟು, ಆ ಹೂವಿನೊಂದಿಗೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷಪಡುತ್ತಿದ್ದರು. ಇಷ್ಟೆಲ್ಲ ಸೌಂದರ್ಯವನ್ನು ಹೊಂದಿದ್ದರೂ ಆ ಹೂವಿಗೆ ಮಾತ್ರ ತನ್ನ ಸೌಂದರ್ಯದ ಬಗ್ಗೆ ಯಾವುದೇ ಅರಿವು, ಅಭಿಮಾನ ಇರಲಿಲ್ಲ. ಹೀಗೆ ಸ್ವಲ್ಪ ದಿನಗಳು ಗತಿಸಿದ ನಂತರ ಆ ಹೂವಿನ ಬಣ್ಣವು ಮಸುಕಾಗುತ್ತ ಒಣಗತೊಡಗಿತು. ಅದೇ ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದ ತರುಣಿ ಇದನ್ನು ಗಮನಿಸಿ ಆ ಒಣಗುತ್ತಿದ್ದ ಗುಲಾಬಿ ಹೂವನ್ನು ಕಿತ್ತು ವಿಭಿನ್ನ ಬಣ್ಣಗಳನ್ನು ಹೊಂದಿದ್ದ ಒಂದು ಗಾಜಿನ ಪಾತ್ರೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಇಟ್ಟಳು. ನಂತರ ಆ ಗಾಜಿನ ಪಾತ್ರೆಯನ್ನು ಕಿಟಕಿಯ ಎದುರು ನೇರವಾಗಿ ಸೂರ್ಯನ ಬೆಳಕು ಅದರ ಮೇಲೆ ಬೀಳುವಂತೆ ಇಟ್ಟಳು.
ಸೂರ್ಯನ ಬೆಳಕು ಆ ಗಾಜಿನ ಪಾತ್ರೆಯ ಮೇಲೆ ಬಿದ್ದು ಪ್ರತಿಫಲನ ಹೊಂದುತ್ತಿರುವುದರಿಂದ ಪ್ರಥಮ ಬಾರಿಗೆ ಆ ಹೂವಿಗೆ ತನ್ನ ಸೌಂದರ್ಯವನ್ನು ಅರಿತುಕೊಳ್ಳುವುದು ಸಾಧ್ಯವಾಯಿತು. ಅಂದರೆ ನೀರು, ಸೂರ್ಯನ ಬೆಳಕಿನಿಂದ ಅದು ತನ್ನ ಸೌಂದರ್ಯವನ್ನು ಮರಳಿ ಪಡೆದುಕೊಂಡಿತು.
ಹೀಗೆ ಹಲವಾರು ಬಾರಿ ನಮ್ಮ ಶಕ್ತಿ, ಸಾಮರ್ಥ್ಯಳನ್ನು ಹೊರಗಿನವರು ಗುರುತಿಸಿರುತ್ತಾರೆ, ‘ಎಲ್ಲವೂ ನಿನ್ನಿಂದ ಸಾಧ್ಯ, ಮಾಡು, ಮುಂದುವರಿ’ ಎಂದು ಸ್ಪೂರ್ತಿ ನೀಡಿರುತ್ತಾರೆ. ಆದರೆ ನಮಗೆ ಮಾತ್ರ ನಮ್ಮ ಶಕ್ತಿ, ಸಾಮರ್ಥ್ಯ ಬಗ್ಗೆ ಅರಿವೇ ಇರುವುದಿಲ್ಲ. ನಮ್ಮಲ್ಲಿ ಇರುವ ಶಕ್ತಿಗಳೇನು, ದೌರ್ಬಲ್ಯಗಳೇನು, ಶಕ್ತಿಯಿಂದ ಬೆಳೆಯುವುದು ಹೇಗೆ, ದೌರ್ಬಲ್ಯಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವುದು ಹೇಗೆ? ಎಂಬುದರ ಬಗ್ಗೆ ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಹಿಡಿದ ಕೆಲಸಗಳಲ್ಲಿ ಯಶಸ್ಸು ದೊರಕದು. ನಮ್ಮ ಬಗ್ಗೆ ನಮಗೆ ಗೊತ್ತಿರುವಷ್ಟು ಬೇರಾರಿಗೂ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಹೇಳುವುದು ತನ್ನರಿವೇ ತನಗೆ ಗುರು ಎಂದು.
ಉನ್ನತ ಯಶಸ್ಸು ನಮ್ಮದಾಗಬೇಕು ಎಂದರೆ ನಮ್ಮನ್ನು ನಾವು ಅರಿತುಕೊಳ್ಳಬೇಕು. ನಮ್ಮ ಶಕ್ತಿ, ಸಾಮರ್ಥ್ಯಗಳನ್ನೇ ಅರಿತುಕೊಳ್ಳದಿದ್ದರೆ ಸಾಧನೆಯ ಹಾದಿಯಲ್ಲಿ ಸಾಗಲು ಹೇಗೆ ಸಾಧ್ಯ? ಅಷ್ಟಕ್ಕೂ, ವಿದ್ಯಾವಂತರಿರಲಿ, ಅವಿದ್ಯಾವಂತರಿರಲಿ ಎಲ್ಲರಲ್ಲೂ ಜೀವನವನ್ನು ರೂಪಿಸಿಕೊಳ್ಳುವ ಒಂದು ಶಕ್ತಿ ಇರುತ್ತದೆ. ಅದನ್ನು ಗುರುತಿಸಿ, ಆ ಸಾಮರ್ಥ್ಯದ ಬಲದಿಂದ ಸಾಧನೆಯ ಏಣಿಯನ್ನು ಹತ್ತಬೇಕು. ಕೀಳರಿಮೆ, ಹತಾಶೆ, ನಿರಾಶೆ ಬದಿಗಿಟ್ಟು ನಮ್ಮನ್ನು ನಾವು ಮುಕ್ತವಾಗಿ ಅವಲೋಕಿಸಿಕೊಳ್ಳಬೇಕು. ಆಗಲೇ ವ್ಯಕ್ತಿತ್ವ ಅರಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ, ತರುಣರು ಸಕಾಲದಲ್ಲಿ ಅವರ ಸಾಮರ್ಥ್ಯ ಅರಿತುಕೊಂಡು, ಮುಂದೆ ನಡೆದರೆ ಸರಿಯಾದ ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡು, ಸಂತೃಪ್ತಿಯಿಂದ ಬಾಳಲು ಸಾಧ್ಯ.
(ಲೇಖಕರು ಹವ್ಯಾಸಿ ಬರಹಗಾರರು)