ಬುದ್ಧಿಯ ಬಳಕೆ ಯಾವುದಕ್ಕೆ?

Mind
Published on

ಧೃತರಾಷ್ಟŠನ ಮಗನಾದ ದುರ್ಯೋಧನನು ಬಾಲ್ಯದಲ್ಲಿಯೇ ಆಟ, ಪಾಠಗಳಲ್ಲಿ ಬಲು ಚುರುಕಾಗಿದ್ದವನು. ಆದರೆ ಪಾಂಡುವಿನ ಮಕ್ಕಳ ಜೊತೆಗೇ ಬೆಳೆಯುತ್ತ ಆಟ ಆಡುವಾಗ ಬಲಿಷ್ಠನಾದ ಭೀಮನು ಗೆದ್ದರೆ ಸಹಿಸಿಕೊಳ್ಳುತ್ತಿರಲಿಲ್ಲ. ಧನುರ್ವಿದ್ಯೆಯಲ್ಲಿ ಪರಿಣತಿ ಹೊಂದಿದ ಅರ್ಜುನ, ನಕುಲ, ಸಹದೇವರನ್ನು ಕಂಡು ಹೊಟ್ಟೆಕಿಚ್ಚು ಪಟ್ಟ. ಕ್ರಮೇಣ ಅವಿವೇಕತನ, ದರ್ಪವೆಲ್ಲವೂ ಮೈಗೂಡಿ ಅವನಿಗೇ ಅರಿವಿಲ್ಲದ ಹಾಗೇ ಅವನ ಬುದ್ಧಿಯು ಪಾಪದ ಕಡೆಗೆ ವಾಲಿತು. ಪರಿಣಾಮವಾಗಿ ಯಾವ ಅನುಕಂಪವನ್ನೂ ತೋರದೆ ಪಾಂಡವರನ್ನು ರಾಜ್ಯದಿಂದ ಹೊರ ಹಾಕುವ ಉಪಾಯ ಮಾಡಿದ. ಕಡೇ ಪಕ್ಷ ಕೆಟ್ಟ ಮೇಲಾದರೂ ಬುದ್ಧಿ ಬಂದಿದ್ದರೆ ಮುಂದಾಗುವ ದೊಡ್ಡ ಅಪಾಯದಿಂದ ಪಾರಾಗಬಹುದಿತ್ತೇನೋ? ಅವನ ಸುತ್ತ ಅನ್ಯಾಯಮತಿಗಳೇ ಮೇಳೈಸಿ ಭೀಷ್ಮವಿದುರರಂಥ ಪ್ರಾಜ್ಞರೂ ಅವನಿಗೆ ಕಾಣಿಸಲಿಲ್ಲ. ಬರು ಬರುತ್ತ ಅವನ ಬುದ್ಧಿ ಅದೆಷ್ಟು ಕುತ್ಸಿತವಾಯಿತೆಂದರೆ ಸಂಧಾನಕ್ಕೆ ಬಂದ ಕೃಷ್ಣನನ್ನೇ ಧಿಕ್ಕರಿಸಿದ.

ಅವನೊಬ್ಬನ ಅವಿವೇಕಿತನವು ಇಡೀ ಕೌರವ ಕುಲವನ್ನೇ ಬಲಿ ಪಡೆಯಿತು. ಬುದ್ಧಿಯ ಸದ್ಬಳಕೆಯಾಗದಿದ್ದರೆ ಆಗುವ ಘೋರ ಅನಾಹುತಕ್ಕೆ ಇದುವೇ ಜ್ವಲಂತ ಉದಾಹರಣೆ. ಮನುಷ್ಯ ತಾನು ಬುದ್ಧಿವಂತನೆಂದುಕೊಂಡಂತೆಲ್ಲ ತನ್ನ ಬುದ್ಧಿ ಯಾವುದರ ಕಡೆಗೆ ವಾಲುತ್ತಿದೆ ಎಂಬುದನ್ನೇ ವಿಚಾರಿಸುವುದಿಲ್ಲ. ಅದರ ಕುಪರಿಣಾಮವನ್ನು ಮಾತ್ರ ಇಡೀ ಸಮಾಜವೇ ಹೊರಬೇಕಾಗುತ್ತದೆ. ಆದರೆ ಪ್ರಾಜ್ಞನಾದ ವ್ಯಕ್ತಿ ತಾನು ಬುದ್ಧಿವಂತನೆಂದು ಹೇಳಿಕೊಳ್ಳುವುದೇ ಇಲ್ಲ. ಅವನ ಬುದ್ಧಿವಂತಿಕೆಯ ಪ್ರಯೋಜನವು ಇಡೀ ಸಮಾಜಕ್ಕೇ ಸಿಗುವುದು. ಅವಿವೇಕಿಗಳ ನಡುವೆಯೇ ಇದ್ದರೂ ವಿದುರನು ಪ್ರಜ್ಞೆಯನ್ನು ಮೆರೆದ. ಮೊದ ಮೊದಲು ಕೌರವರ ಅನ್ಯಾಯ ತಡೆಯಲು ಪ್ರಯತ್ನಿಸಿದನಾದರೂ ಯಾವಾಗ ತನ್ನ ಮಾತಿಗೆ ಅಲ್ಲಿ ಬೆಲೆಯಿಲ್ಲವೆಂದು ತಿಳಿದನೋ, ನ್ಯಾಯವಿರುವ ಕಡೆಗೆ ವಾಲಿದ. ಕೌರವರ ಜೊತೆಗೇ ಇದ್ದರೂ ಅವರ ಹಂಗಲ್ಲಿರದೆ ಪಾಂಡವರಿಗೆ ಸಹಾಯ ಮಾಡಿದ. ಅವರು ಅರಗಿನ ಮನೆಯಲ್ಲಿ ನೆಲೆಸಿದ್ದಾಗ ಕೌರವರ ಸಂಚನ್ನು ವಿದುರನು ಪತ್ತೆ ಮಾಡದಿದ್ದರೆ ಪಾಂಡವರು ಅಲ್ಲಿಂದ ಜೀವಂತವಾಗಿ ಬರುತ್ತಿರಲಿಲ್ಲ. ನಮ್ಮ ಸುತ್ತ ಅಧರ್ಮವೇ ಇದ್ದರೂ, ಎಂಥಹ ಸಂದಿಗ್ಧತೆಯಲ್ಲಿ ನಾವಿದ್ದರೂ ನಮ್ಮ ಬುದ್ಧಿ ನ್ಯಾಯದ ಪರವಾಗಿ ಇದ್ದರೆ ಸಾಕು. ಅದುವೇ ರಾಷ್ಟŠಕ್ಕೆ ಹಿತವನ್ನು ಉಂಟು ಮಾಡಬಲ್ಲದು.

ದೇವರು ಮನುಷ್ಯನಿಗೆ ದಯಪಾಲಿಸಿರುವ ಬಲುದೊಡ್ಡ ಅಸ್ತŠವೆಂದರೆ ಬುದ್ಧಿ. ಅದನ್ನು ನಾವು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಅಳಿವೋ, ಉಳಿವೋ ಎಂಬುದು ನಿರ್ಧಾರಿತ. ಒಂದೆಡೆ ಆಧುನಿಕ ಜಗತ್ತಿನ ವಿಕಾಸವಿಸ್ತರಣೆಗಳಿಗೆಲ್ಲ ಮನುಷ್ಯನ ಬುದ್ಧಿಯೇ ಕಾರಣವಾದರೆ ಇನ್ನೊಂದೆಡೆ ಅದು ವಿಪರೀತವಾದ ಪಕ್ಷಕ್ಕೆ ಸರ್ವನಾಶವೂ ಶತ ಸಿದ್ಧ ಎನ್ನುವುದನ್ನು ಇತಿಹಾಸವು ಸಾರುತ್ತದೆ. ಮನುಕುಲದ ಹಿತ ಬಯಸುವ ನಾವು ಬುದ್ಧಿಯನ್ನು ಸರಿಯಾದ ದಿಶೆಯಲ್ಲಿ ಕೊಂಡೊಯ್ಯುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಾವು ಪ್ರಜ್ಞಾವಂತರಾಗೋಣ. ಬುದ್ಧಿವಂತಿಕೆ ನಮ್ಮ ಮೌಲ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ಇಡೀ ಮನುಕುಲವನ್ನೇ ಬೆಳಗಬಲ್ಲದು ಎಂಬುದನ್ನು ಮರೆಯದಿರೋಣ.

| ಡಾ.ಗಣಪತಿ ಆರ್.ಭಟ್

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net