ಎಲ್ಲರಿಗೂ ಬೆಳಕಾಗಿ ಬದುಕೋಣ

Milk
Published on

ಒಂದುಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ. ದೇವರು ಪ್ರತ್ಯಕ್ಷನಾಗಿ ‘ಏನು ಸಮಸ್ಯೆ?’ ಎಂದು ಕೇಳಿದ. ಆಗ ಹಾಲು ಹೇಳಿತು-‘ಓ ದೇವ! ನಾನು ಹಾಲು. ನಾನು ಹಸುವಿನಿಂದ ಬರುವಾಗ ಶುದ್ಧವಾಗಿಯೇ ಇರುತ್ತೇನೆ. ಆದರೆ ಈ ಮನುಷ್ಯರು ನನಗೆ ಹುಳಿ ಹಿಂಡಿ (ಮೊಸರು ಹಾಕಿ) ನನ್ನನ್ನು ವಿಕಾರ ಮಾಡಿಬಿಡುತ್ತಾರೆ. ಅದು ನನಗೆ ಇಷ್ಟವಿಲ್ಲ. ಆದ್ದರಿಂದ ಹಾಲಾಗಿಯೇ ಇರುವಂತೆ ನನಗೆ ವರ ಕೊಡು’.

ಅದಕ್ಕೆ ದೇವರು ನಕ್ಕು ಹೇಳುತ್ತಾನೆ-‘ಹೇ ಹಾಲೇ! ಇಲ್ಲಿ ಕೇಳು. ನೀನು ಹಾಲಾಗಿಯೇ ಇರುವ ಬದುಕಿಗೆ ಆಸೆಪಡುವ ಮೊದಲು ಈ ಮಾತನ್ನು ಕೇಳು. ನೀನು ಹಾಲಾಗಿದ್ದರೆ ಒಂದುದಿನ ಮಾತ್ರ ಬದುಕುವಿ. ಮೊಸರು ಹಾಕಿ ಹೆಪ್ಪಾಕಿದರೆ ಎರಡುದಿನ ಬದುಕುತ್ತಿ. ಅದನ್ನು ಕಡೆದು ಬೆಣ್ಣೆಯಾದರೆ ವಾರಗಟ್ಟಲೆ ಬದುಕುತ್ತಿ. ಅದೇ ಬೆಣ್ಣೆಯನ್ನು ಕಾಯಿಸಿ ತುಪ್ಪವಾದರೆ ಬಹಳದಿನ ಬದುಕುತ್ತಿ. ಜೊತೆಗೆ ನನ್ನ ಎದುರು ದೀಪ ಬೆಳಗಲು ನೀನು ಕಾರಣವಾಗುತ್ತಿ. ಎಲ್ಲೆಡೆ ಬೆಳಕು ನೀಡುತ್ತಿ. ಹಾಗಾದರೆ ಈಗ ಹೇಳು-ಹಾಲಾಗಿ ಹುಟ್ಟಿ ಒಂದುದಿನ ಮಾತ್ರ ಇದ್ದು ಹಾಲಾಗಿಯೇ ಸಾಯುವೆಯೋ? ಅಥವಾ ಮನುಷ್ಯ ಹುಳಿ ಹಿಂಡಿದರೂ ಅದನ್ನು ಅಭಿವೃದ್ಧಿಗೆ ಕಾರಣವೆಂದು ಬಗೆದು, ನಾನಾವಿಕಾರಗಳನ್ನು ಹೊಂದುತ್ತ, ಅನುದಿನವೂ ಬೆಳೆದು ಬೆಳೆದು, ಎಲ್ಲರಿಗೂ ಬೆಳಕಾಗಿ ಬಹಳದಿನ ಬದುಕುವೆಯಾ?’

ದೇವರ ಮಾತಿಗೆ ಹಾಲು ಮೂಕವಾಯಿತು. ಶರಣಾಯಿತು. ತನ್ನ ಮನದ ಅಂಧಕಾರದಿಂದ ಹೊರಬಂತು. ದೇವರ ಮುಂದೆ ಬೆಳಗುವ ದೀಪಕ್ಕೆ ಬುನಾದಿಯಾಯಿತು. ಇದೊಂದು ಕಾಲ್ಪನಿಕ ಕಥೆ ನಿಜ. ಆದರೆ ನಮ್ಮ ಜೀವನಕ್ಕೆ ನೀಡುವ ಸಂದೇಶ ಮಾತ್ರ ಬಹಳ ಮುಖ್ಯವಾದದ್ದು. ನಮ್ಮ ಮನಃಸ್ಥಿತಿಯೂ ಹಾಲಿನ ಮನಃಸ್ಥಿತಿಯಂತೆ ಇರುತ್ತದೆ. ನಮ್ಮ ಜೀವನದಲ್ಲಿಯೂ ಯಾರೋ ಹುಳಿ ಹಿಂಡಿದರೆಂದು ಕೊರಗುತ್ತೇವೆ. ನಮ್ಮ ಏಳಿಗೆ ಕಂಡು ಅಸೂಯೆ ಪಡುವವರು ಅನೇಕರು. ಹಾಗಾಗಿ ನಮ್ಮ ಸಾಧನೆಗೆ ಅಡ್ಡಿಪಡಿಸುವುದುಂಟು. ಆದರೆ ಅದನ್ನೇ ಯೋಚಿಸುತ್ತ ಕೊರಗುತ್ತ ಕುಗ್ಗುವುದು ತರವಲ್ಲ. ‘ಆದದ್ದೆಲ್ಲ ಒಳಿತೇ ಆಯಿತು. ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು’ ಎಂಬುದಾಗಿ ದಾಸರು ಹೇಳುವಂತೆ, ಒಂದರ್ಥದಲ್ಲಿ ನಮ್ಮ ಸಾಧನೆಗೆ (ಏಳಿಗೆಗೆ) ಬರುವ ಅಡಚಣೆಗಳು ನಮ್ಮ ಅಭಿವೃದ್ಧಿಗೆ ಬುನಾದಿಯೆಂದು ಭಾವಿಸಿ, ಅದನ್ನು ಮೆಟ್ಟಿನಿಂತು ಬೆಳೆಯುವಂತಾಗಬೇಕು.

ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ

ಪ್ರಾರಬ್ಧಮುತ್ತಮಜನಾ ನ ಪರಿತ್ಯಜಂತಿ ||

ಕವಿ ಹೇಳುವಂತೆ, ಯಾವ ಸಮಸ್ಯೆ ಇಲ್ಲದೆ ಮೇಲೆ ಬರುವುದಕ್ಕಿಂತ ಎಷ್ಟೇ ಸಮಸ್ಯೆಗಳು ಎದುರಾದರೂ ಅವುಗಳನ್ನು ಮೀರಿ ಮೇಲೆ ಬರುವುದೇ ಮಹಾತ್ಮರ ಲಕ್ಷಣ. ಎಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಂಡು, ಹಾಲು ಮೊಸರಾಗಿ ಬೆಣ್ಣೆಯಾಗಿ ತುಪ್ಪವಾಗಿ ಬೆಳೆಯುವಂತೆ ಅನುದಿನವೂ ಬೆಳೆದು ಎಲ್ಲರಿಗೂ ಬೆಳಕಾಗಿ ಬದುಕೋಣ.

| ಕಾಂತೇಶಾಚಾರ್ಯ ಕದರಮಂಡಲಗಿ

(ಲೇಖಕರು ಸಂಸ್ಕೃತ ಸಂಶೋಧಕರು)

(ಪ್ರತಿಕ್ರಿಯಿಸಿ: ಞಚ್ಞಟ್ಝ್ಝಠಚಡಡಃಜಞಚಜ್ಝಿ.ಟಞ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net