ಮನೋಲ್ಲಾಸ: ವಿದ್ಯೆ ವಿವೇಕವನ್ನು ಬೆಳೆಸಲಿ

Manollasa
Published on

ವೇದ ಎನ್ನುವ ಹೆಸರಿನ ವಿದ್ಯಾರ್ಥಿ ಧೌಮ್ಯ ಋಷಿಗಳ ಶಿಷ್ಯ. ಗುರು ಸೇವೆಗೆ ನಿಂತ ವೇದ ಸತತ ಪರಿಶ್ರಮದಿಂದ ಸಕಲ ವಿದ್ಯಾಪಾರಂಗತನಾದ. ಒಮ್ಮೆ ಶಿಷ್ಯನನ್ನು ಕರೆದ ಗುರುಗಳು, ‘ವೇದ, ನೀನು ಈಗ ಅಸಾಮಾನ್ಯ ಪಂಡಿತನಾಗಿರುವೆ! ಇನ್ನು ಕಲಿಯುವುದು ಯಾವುದೂ ಉಳಿದಿಲ್ಲ! ಆದರೆ, ನೀನು ಒಂದಷ್ಟು ಕಾಲ ನನ್ನ ಸೇವೆ ಮಾಡಿ ಉಳಿಯಬೇಕೆಂಬುದು ನನ್ನ ಆಸೆ’ ಎಂದರು. ಗುರುಗಳ ಆಸೆ ತನಗೆ ಆಜ್ಞೆಯೆಂದರಿತ ವೇದ ಗುರುಗಳ ಸೇವೆಗೆ ನಿಂತ.

ಅದೊಂದು ಮಳೆಗಾಲದ ಸಮಯ ಗುರುಬಂಧುಗಳು ಹೊಲ ಉಳುವುದಕ್ಕೆ ವೇದನನ್ನು ಕರೆದೊಯ್ದರು ಮಾತ್ರವಲ್ಲ, ಎತ್ತುಗಳ ಬದಲಿಗೆ ವೇದನನ್ನೇ ನೇಗಿಲಿಗೆ ಹೂಡಿದರು. ವೇದ ಹೊಲ ಉಳುತ್ತಿದ್ದಾಗ ಮಳೆ ಸುರಿಯಲಾರಂಭಿಸಿತು. ಆದರೆ ಆತನಿಗೆ ಒಂದು ಗೊರಬನ್ನೂ ನೀಡದೆ ಹೊಲ ಉಳಿಸಲಾಯಿತು. ವೇದ ನಿಶ್ಚಿಂತನಾಗಿ ಉಳುತ್ತಲಿದ್ದ, ಅವನ ಮನಸ್ಸಿನಲ್ಲಿದ್ದದ್ದೂ ಗುರುಸೇವೆಯ ವ್ರತವಷ್ಟೇ! ಮಧ್ಯಾಹ್ನದಷ್ಟಕ್ಕೆ ವೇದನನ್ನು ಹೊಲದ ಮಧ್ಯೆ ನಿಲ್ಲಿಸಿದ ಗುರುಬಂಧುಗಳು ಬದು ಎಡಗೆ ತೆರಳಿ ಊಟ ಮುಗಿಸಿದರೂ ವೇದನನ್ನು ಊಟಕ್ಕೆ ಕರೆಯಲಿಲ್ಲ! ವೇದ ಹಸಿವಿನಿಂದ ತತ್ತರಿಸಿದ್ದ. ಆದರೂ ಸಿಡುಕದೆ ಚಳಿ ಮಳೆ ಗಾಳಿಯನ್ನು ಲೆಕ್ಕಿಸದೆ ಹೊಲದ ಮಧ್ಯೆ ಶಾಂತವಾಗಿ ನಿಂತಿದ್ದ! ಊಟ ಮುಗಿಸಿದ ಗುರುಬಂಧುಗಳು ವೇದನನ್ನು ಕರೆದá--‘ನಾವು ಆಶ್ರಮಕ್ಕೆ ಹೊರಡುತ್ತೇವೆ. ನೀನು ಎತ್ತುಗಳನ್ನು ಮೇಯಿಸಿ ಹೊತ್ತಾದ ನಂತರ ಬಾ’ ಎಂದು ಹೇಳಿ ಹೊರಟರು. ವೇದ ಹಾಗೆಯೇ ಮಾಡಿದ! ಮುಂದಿನ ದಿನಗಳಲ್ಲೂ ವೇದ ಗುರುಗಳ ಎಲ್ಲ ಸೇವೆಯನ್ನು ಮಾಡುತ್ತ ಸಂಪ್ರೀತನಾಗಿದ್ದ! ತಾನು ಸಕಲಕಲಾ ಪಾರಂಗತ ಎಂಬ ಹಮ್ಮುಬಿಮ್ಮು ಅವನ ಪ್ರಜ್ಞೆಗೆ ಬಾರದೇ ಆತ ಸ್ಥಿತಪ್ರಜ್ಞನಾಗಿ ಉಳಿದ.

ಅದೊಮ್ಮೆ ಶಿಷ್ಯನ ಶ್ರದ್ಧೆ ಮತ್ತು ತಾಳ್ಮೆಗೆ ಮನಸೋತ ಧೌಮ್ಯರು ‘ಮಗು ನಿನ್ನ ಗುರು ಸೇವೆಗೆ ನಾನು ಮನಸೋತೆ, ನಿನ್ನ ಪರೀಕ್ಷಿಸಲೆಂದೇ ನಿನಗೆ ಇಲ್ಲದ ಕಷ್ಟಗಳನ್ನು ಕೊಟ್ಟೆ. ನೀನಾದರೋ ಅವುಗಳನ್ನೆಲ್ಲ ಪರಮ ಸಹಿಷ್ಣುತೆಯಿಂದ ಸ್ವೀಕರಿಸಿ ಎಲ್ಲ ಪರೀಕ್ಷೆಗಳನ್ನೂ ಗೆದ್ದೆ. ಕಷ್ಟಸಹಿಷ್ಣುತೆ, ಸಹನೆ, ವಿಧೇಯತೆ, ಪರೋಪಕಾರ, ನಿರಹಂಕಾರ ಇವುಗಳನ್ನೆಲ್ಲ ಕರಗತ ಮಾಡಕೊಂಡಿರುವ ನೀನೀಗ ನಿಜವಾದ ಜ್ಞಾನಸಂಪನ್ನ, ನೀನೀಗ ನಿನಗಿಷ್ಟವಾದ ಕಡೆಗೆ ಹೋಗಬಹುದು’ ಎಂದು ಹರಸಿ ಶಿಷ್ಯನನ್ನು ಬೀಳ್ಕೊಟ್ಟರು. ನಿಜ, ಜ್ಞಾನ, ವಿದ್ಯೆಯ ಪ್ರಾಪ್ತಿ ಅತ್ಯಂತ ಕಠಿಣ ಕಾರ್ಯ. ಅದಕ್ಕೂ ಕಠಿಣ ಅದನ್ನು ತಾಳ್ಮೆ, ವಿಧೇಯತೆ ವಿನಮ್ರತೆಗೆ ಬಳಸಿಕೊಂಡು ಪೂರ್ಣ ವ್ಯಕ್ತಿಯಾಗುವುದು! ವಿದ್ಯೆ ಪರಿಪೂರ್ಣ ಎನಿಸಲು ಕಷ್ಟಸಹಿಷ್ಣುತೆಯ ಸ್ವಭಾವ ಬೇಕು, ಆ ವಿದ್ಯೆ ಸಾರ್ಥಕ ಪಡಿಸಿಕೊಳ್ಳಲು ಪರೋಪಕಾರದ ಬುದ್ಧಿಬೇಕು! ಇದನ್ನೇ ನಮ್ಮ ಪೂರ್ವಜರು ಹೇಳಿದ್ದು ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂದು ಅಂದರೆ ವಿದ್ಯೆಯಿಂದಲೇ ಮುಕ್ತಿ ಎಂದು. ವಿದ್ಯೆ ಎಂದರೆ ಜೀವನದ ಸತ್ಯಾಸತ್ಯತೆಗಳನ್ನು ಅರಿತು ಉತ್ತಮ ಜೀವನ ನಡೆಸಲು ಸಿಗಬೇಕಾದ ಕೌಶಲ! ಹಾಗಾಗಿ ವಿದ್ಯೆಯನ್ನು ನಾವು ವಿವೇಕಿಗಳಾಗಿ ಬೆಳೆಯಲು ಬಳಸೋಣ. ಆ ವಿದ್ಯೆ ನಮ್ಮನ್ನು ಸಾತ್ವಿಕ ಮಾರ್ಗದೆಡೆಗೆ ಕೊಂಡೊಯ್ಯುವ ದೀವಟಿಗೆಯಾಗಲಿ.

| ಡ್ಯಾನಿ ಪಿರೇರಾ

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net