ವಿಜಯವಾಣಿ ಮನೋಲ್ಲಾಸ: ಮೌಕ್ತಿಕ ಸತ್ಯ ಅರಿಯೋಣ

Manollada
Published on

ಒಮ್ಮೆ ಒಬ್ಬ ಸದ್ಗುಣಿ ರಾಜ ನೆಮ್ಮದಿಯನ್ನು ಅರಸುತ್ತ, ಓರ್ವ ಸಾಧುವಿನ ಬಳಿ ಬಂದ. ಸಾಧುವಿಗೆ ನಮಸ್ಕರಿಸಿ ನಯ-ವಿನಯದಿಂದ, ‘‘ಸ್ವಾಮೀ, ನಾನು ಎಲ್ಲ ಸಂಪತ್ತು, ಐಶ್ವರ್ಯ, ಶಕ್ತಿ, ಸಾಮರ್ಥ್ಯ, ಧೈರ್ಯ, ಸುಂದರ ಸದ್ಗುಣಿ ಪರಿವಾರ ಎಲ್ಲ ಹೊಂದಿದವನಾಗಿ ಕೂಡ ನೆಮ್ಮದಿ ಇಲ್ಲದೆ ಕೊರಗುತ್ತಿದ್ದೇನೆ. ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇನೆ, ನನ್ನ ಸುಪರ್ದಿಯಲ್ಲಿ ಎಲ್ಲ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿವೆ. ಹೋಮ, ಹವನ, ದಾನಧರ್ವದಿಗಳನ್ನು ಆಯಾ ಕಾಲಕ್ಕೆ ಅನುಚಿತವಾಗಿ ಮಾಡಿಕೊಂಡು ಬಂದಿದ್ದೇನೆ. ‘ನನ್ನಂಥ ಪ್ರಜಾಪಾಲಕ ಇನ್ನೊಬ್ಬನಿಲ್ಲ’ ಎನ್ನುವುದು ಪ್ರಜೆಗಳ ಅಭಿಮತ. ಆದರೆ ಈ ನೆಮ್ಮದಿ ಇಲ್ಲದ ಜೀವನ ಬರಡಾಗಿ ಭಾಸವಾಗುತ್ತಿದೆ. ಹಾಗಾಗಿಯೇ, ನಿಮ್ಮ ಮಾರ್ಗದರ್ಶನಕ್ಕಾಗಿ ಬಂದಿದ್ದೇನೆ’’ ಎಂದ.

ಇದನ್ನು ಕೇಳಿದ ಸಾಧು ಮುಗುಳ್ನಕ್ಕು- ‘ರಾಜನ್ ನಿನ್ನ ವ್ಯಕ್ತಿತ್ವದ ಶೋಭೆಯನ್ನು ಇನ್ನಷ್ಟು ಹೆಚ್ಚಿಸುತ್ತಿರುವ ಈ ನಿನ್ನ ಕೊರಳಿನ ಮುತ್ತಿನ ಸರವನ್ನೊಮ್ಮೆ ನೋಡು, ಆ ಚಿಪ್ಪಿನ ಮುತ್ತಿನ ಹುಟ್ಟಿನ ಕತೆಯ ಸಂದೇಶದಲ್ಲಿ ನಿನ್ನ ಪ್ರಶ್ನೆಗೆ ಉತ್ತರವಿದೆ, ಈ ಮುತ್ತು ಆವಿರ್ಭವಿಸಬೇಕು ಎಂದಾದರೆ ಸ್ವಾತಿ ನಕ್ಷತ್ರದಲ್ಲಿ ಮಳೆ ಬಿದ್ದರೆ ಮಾತ್ರ ಸಾಧ್ಯ. ಆ ಕಾಲಕ್ಕೆ ಸರಿಯಾಗಿ ಸಮುದ್ರದ ಚಿಪ್ಪು ಬಾಯ್ತೆರೆದು ಇರಬೇಕು ಹಾಗೂ ಆ ಸ್ವಾತಿನಕ್ಷತ್ರದ ಮಳೆಹನಿ ಚಿಪ್ಪಿನ ಬಾಯೊಳಗೆ ಬೀಳಬೇಕು. ಹೀಗೆ ಇಂಥದ್ದೊಂದು ಅಮೂಲ್ಯ ರತ್ನದ ಸೃಷ್ಟಿ ನನ್ನಿಂದ ಆದದ್ದು ಎಂದು ಸ್ವಾತಿ ಮಳೆಯಾಗಲಿ, ಸಮುದ್ರದ ಚಿಪ್ಪಾಗಲಿ ಬೀಗುವುದು ಉಂಟೆ? ಹೀಗೆ ಎಲ್ಲ ಆಗುಹೋಗುಗಳಿಗೆ ಒಂದು ಕಾಲ ಮತ್ತು ಕಾರಣ ಇದ್ದೇ ಇರುತ್ತದೆ. ಅದಕ್ಕೆ ಮಳೆ, ಚಿಪ್ಪು ಎಲ್ಲ ನಿಮಿತ್ತ ಅಷ್ಟೇ. ತನ್ನಿಂದ ಆದದ್ದು ಎಂಬ ಅಹಂಕಾರ ಲೇಪವಿಲ್ಲದ ಮನಸ್ಸು ಶಾಂತವಾಗಿರುತ್ತದೆ, ಅರಿಷಡ್ವರ್ಗದ ಲೇಪವಿಲ್ಲದೆ ಶಾಂತಭಾವದಿಂದ ನೋಡಿದಾಗ ಮಾತ್ರ ಭಗವದ್ ಸೃಷ್ಟಿಯ ಸತ್ಯದರ್ಶನವಾಗುತ್ತದೆ. ಆ ನಿಮಿತ್ತವಾಗಲೂ ಯೋಗ, ಯೋಗ್ಯತೆ ಒಂದಾಗಬೇಕು. ನಿನ್ನ ಈ ಸದ್ಗುಣಗಳ ಕಾರಣ ‘ನಿಮಿತ್ತ’ವಾಗುವ ಯೋಗ ಲಭ್ಯವಾಗಿದೆ, ಎಲ್ಲ ಸದ್ಗುಣಗಳಿದ್ದು ಎಲ್ಲ ನನ್ನಿಂದಲೇ ಆದ್ದದ್ದು ಎಂಬ ಅಹಂಕಾರ ಭಾವದಿಂದ ನಿನ್ನ ಮನಸ್ಸು ಭಾರವಾಗಿದ್ದರಿಂದಲೇ ನೆಮ್ಮದಿಯಿಲ್ಲದೆ ಪರದಾಡುತ್ತಿರುವೆ, ತೃಣಮಪಿ ನ ಚಲತಿ ತೇನವಿನಾ!’ ಎಂದು ವಿವರಿಸಿದರು. ರಾಜನ ಆಂತರ್ಯದ ಕಣ್ಣು ತೆರೆದು ಅಹಂಕಾರ ದೂರವಾಯಿತು. ಜೀವನ ನೆಮ್ಮದಿಯ ಗೂಡಾಯಿತು.

ಎಷ್ಟೋ ಬಾರಿ ನಾವು ಕೂಡ ಹೀಗೆ ವರ್ತಿಸುತ್ತೇವೆ ಅಲ್ಲವೇ? ‘ಇದು ನನ್ನಿಂದ ಆಗಿದ್ದು’, ‘ನಾನೇ ಮಾಡಿದ್ದು’, ‘ನಾನಿಲ್ಲದಿದ್ದರೆ ಈ ಕಾರ್ಯ ಸಾಧ್ಯ ಆಗುತ್ತಿರಲಿಲ್ಲ’ ಎಂಬ ಅಹಂನ ಭಾವನೆ ವ್ಯಕ್ತಪಡಿಸುತ್ತೇವೆ. ಯಾವುದೇ ಒಳಿತು ಕೆಲಸವಾಗಬೇಕಾದರೂ ಅದಕ್ಕೆ ಭಗವಂತನ ಅನುಗ್ರಹ ಇರುತ್ತದೆ. ಅಂಥ ಕಾರ್ಯ ಪೂರ್ಣಗೊಳಿಸಲು ವಿಧಿ ನಮ್ಮನ್ನು ‘ನಿಮಿತ್ತ’ವಾಗಿಸಿಕೊಂಡಿರುತ್ತದೆ ಅಷ್ಟೇ. ಮೂಲಶಕ್ತಿಯೇ ಬೇರೆ. ಆದರೆ ಅದನ್ನು ಮರೆತು ಎಲ್ಲ ‘ನನ್ನಿಂದ ಆದದ್ದು’ ಎಂಬ ಭಾವನೆ ಏಕೆ? ನಮ್ಮನ್ನು ಕವಿದಿರುವ ಅರಿಷಡ್ವರ್ಗದ ಮಾಯೆಯಿಂದ ಹೊರಬಂದರೆ ನಮ್ಮ ಅಂತಚಕ್ಷುಗಳಿಗೆ ಜೀವನ ಸತ್ಯದ ಸಾಕ್ಷಾತ್ಕಾರ ಆಗಬಹುದಲ್ಲವೇ?

| ಪೂರ್ಣಿಮಾ ಹೆಗಡೆ

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net