

ಆ ಆಶ್ರಮವೆಂದರೆ ಜನರಿಗೆ ನೆಮ್ಮದಿಯ ತಾಣ. ನಗುನಗುತ್ತ ಮಾತನಾಡುವ ಅಲ್ಲಿರುವ ಯೋಗಿಯನ್ನು ಕಂಡರೆ ಜನರಿಗೆ ಒಂದು ಬಗೆಯ ಸಮಾಧಾನ. ಆ ಆಶ್ರಮಕ್ಕೆ ದಿನವಿಡೀ ಜನರು ಸಂದರ್ಶಿಸುತ್ತಲೇ ಇರುತ್ತಾರೆ. ಅದೊಂದು ದಿನ ಉತ್ಸವದ ನೆಪದಲ್ಲಿ ಸಾವಿರಾರು ಜನ ಆ ಆಶ್ರಮದ ಬಳಿ ಸೇರಿದ್ದರು. ಓರ್ವನು ಎಲ್ಲರಿಗೂ ಕೇಳಿಸುವ ಹಾಗೆ ಅತ್ಯಾಶ್ಚರ್ಯದಿಂದ ಕೇಳಿದ, ‘ಮಹೋದಯರೇ, ನೀವು ಯಾವಾಗಲೂ ನಮ್ಮನ್ನು ಖುಷಿ ಪಡಿಸುವುದರಲ್ಲಿಯೇ ತತ್ಪರರಾಗಿರುತ್ತೀರಿ. ನಿಮ್ಮ ಕುರಿತಾಗಿ ಎಂದಿಗೂ ಹೇಳಿಕೊಳ್ಳುವುದಿಲ್ಲ. ಮೇಲಾಗಿ ನೀವು ಈ ಜಾಗ ಬಿಟ್ಟು ಬೇರೆಡೆ ಹೋಗಿದ್ದನ್ನೂ ನಾವು ಕಂಡಿಲ್ಲ’. ಮಿಕ್ಕ ಅನೇಕರು ಆತನ ಮಾತಿಗೆ ತಮ್ಮ ದನಿ ಸೇರಿಸಿದಾಗ, ಅನಿವಾರ್ಯವಾಗಿ ಆ ಮಹಾಪುರುಷ ತನ್ನ ಕುರಿತಾಗಿ ಮಾತನಾಡಲೇ ಬೇಕಾಯಿತು. ‘ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ನೋವು, ಯಾತನೆ ಇರಲೇ ಬೇಕು. ನಾನೇನು ಅದರಿಂದ ಹೊರತಾಗಿಲ್ಲ. ಕೆಲ ವರ್ಷಗಳ ಹಿಂದೆ ಲೋಕಸಂಚಾರ ಮಾಡುವಾಗ ಸಂಭವಿಸಿದ ಅಪಘಾತ ನನ್ನ ಒಂದು ಕಾಲನ್ನು ಕಸಿದುಕೊಂಡಿತು. ಸಂಚರಿಸಲು ಅಸಮರ್ಥನಾದ ನಾನು ನೆಮ್ಮದಿ ನೀಡಿದ ಈ ಜಾಗದಲ್ಲೇ ವಿಶ್ರಾಂತಿ ಪಡೆಯಲು ನಿರ್ಧರಿಸಿದೆ’ ಎನ್ನುತ್ತ ಅರ್ಧ ಕತ್ತರಿಸಿ ಹೋದ ತನ್ನ ಕಾಲನ್ನು ಅಲ್ಲಿ ನೆರೆದಿದ್ದವರಿಗೆ ಪ್ರದರ್ಶಿಸಿದ. ಜನರು ಮರುಗುತ್ತ, ‘ಕಡೇ ಪಕ್ಷ ನಿಮ್ಮ ನೋವನ್ನು ನಮ್ಮ ಬಳಿ ಹೇಳಬಹುದಿತ್ತಲ್ಲವೇ?’ ಎಂದು ಕೇಳಲಾಗಿ ಆ ಯೋಗಿಯು, ‘ಕಾಲು ಕಳೆದುಕೊಂಡಿದ್ದು ನನ್ನ ಪ್ರಾರಬ್ಧವಷ್ಟೇ. ಅದನ್ನು ತೋರಿಸಿ ಇತರರಿಗ್ಯಾಕೆ ನೋವನ್ನು ಮಾಡಲಿ? ಯೋಗಮಾರ್ಗವನ್ನು ಹಿಡಿದ ನನಗೆ ಸದ್ವಿಚಾರವನ್ನು ಹಂಚಿಕೊಳ್ಳುವುದೇ ಧರ್ಮ. ನನ್ನ ಈ ಗೋಳನ್ನು ನಿಮ್ಮ ಬಳಿ ಹೇಳಿಕೊಂಡಿದ್ದರೆ ಇಷ್ಟೋತ್ತಿಗಾಗಲೇ ನನ್ನನ್ನು ದೂರ ಮಾಡಿ ಬಿಡುತ್ತಿದ್ದಿರಿ’ ಎಂದ. ಸೇರಿದ್ದ ಜನರಿಗೆ ಮಾತೇ ಹೊರಡಲಿಲ್ಲ.
ಜೀವನವೆಂದರೆ ಭಗವಂತನು ನಮಗೆ ಕರುಣಿಸಿದ ಸುಂದರ ಅವಕಾಶ. ಎಷ್ಟು ಸಾಧ್ಯವೋ ಅಷ್ಟು ಖುಷಿಯ ವಿಚಾರವನ್ನು ಇತರರೊಡನೆ ಹಂಚಿಕೊಳ್ಳುತ್ತ ಬದುಕಿದಾಗಲೇ ನಮ್ಮ ಬದುಕಿಗೂ ಮೌಲ್ಯ ಬರುತ್ತದೆ. ನಮ್ಮ ದುಃಖವನ್ನು ಅತ್ಯಾಪ್ತರ ಬಳಿ ಹೇಳಿಕೊಂಡು ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹಾಗಂತ ಅದನ್ನೇ ಸದಾ ಯಾರೆಂದರೆ ಯಾರಲ್ಲಿ ಹೇಳಿಕೊಳ್ಳುತ್ತಿದ್ದರೆ ಜನ ನಮ್ಮನ್ನು ಸದಾದುಃಖಿಯೆಂದು ಪರಿಗಣಿಸಿ ದೂರ ತಳ್ಳುತ್ತಾರೆ. ಮಗುವಿನ ಸಾವಿನ ಕಹಿವಾರ್ತೆಯನ್ನು ತೆಗೆದುಕೊಂಡು ಮನೆ-ಮನೆ ಅಲೆದಾಡಿದ ಕಿಸಾ ಗೋತಮಿಯ ಕಥೆಯೇನಾಯ್ತು? ಹೋದಲ್ಲೆಲ್ಲ ಜನ ತಮ್ಮ ಗೋಳನ್ನೇ ಹಂಚಿಕೊಂಡರು. ಜನರಿಗೆ ನಾವು ಏನನ್ನು ಹಂಚುತ್ತೇವೆಯೋ ಅದನ್ನೇ ಜನರೂ ನಮಗೆ ಕೊಡುತ್ತಾರೆ. ಯಾವುದನ್ನು ಬಿತ್ತುತ್ತೇವೆಯೋ ಅದನ್ನೇ ಬೆಳೆಯಾಗಿ ಪಡೆಯುತ್ತೇವೆಯಷ್ಟೇ.
ಯೇನ ಕೇನ ಪ್ರಕಾರೇಣ ಯಸ್ಯ ಕಸ್ಯಾಪಿ ದೇಹಿನಃ|
ಸಂತೋಷಂ ಜನಯೇತ್ ಪ್ರಾಜ್ಞಸ್ತದೇವೇಶ್ವರಪೂಜನಮ್|
ಎಂಬುದಾಗಿ ಯಾವುದಾದರೂ ಒಂದು ಬಗೆಯಿಂದ ವ್ಯಕ್ತಿಯೋರ್ವನನ್ನು ಖುಷಿ ಪಡಿಸುವುದು ಪ್ರಾಜ್ಞನ ಲಕ್ಷಣ. ಸುತ್ತಲಿನವರಲ್ಲಿ ಸಂತೋಷ ಹರಡುವುದೇ ಈಶ್ವರನ ಪೂಜೆ ಎನ್ನಲಾಗಿದೆ. ಅದಕ್ಕಾಗಿಯೇ ಡಿವಿಜಿಯವರು ‘ನಗುವ ನಗಿಸುವ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ’ ಎಂಬುದಾಗಿ ನಾವು ನಗುತ್ತ ನಮ್ಮ ನಗುವನ್ನು ಇತರರಿಗೆ ಹಂಚಿ ಖುಷಿಪಡಿಸುತ್ತ ಹೋಗುವುದೇ ಜೀವನಧರ್ಮ ಎಂದಿದ್ದಾರೆ.
| ಡಾ. ಗಣಪತಿ ಆರ್.ಭಟ್
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)
(ಪ್ರತಿಕ್ರಿಯಿಸಿ: manollasavv@gmail.com)