ಮನೋಲ್ಲಾಸ: ಸತ್ಸಂಪಾದನೆ ಇರಲಿ

E 6
Published on

ಸೀತಾನ್ವೇಷಣೆಗೆಗಾಗಿ ಲಂಕೆಗೆ ಹಾರಿದ ಹನುಮಂತ ಸೀತೆಯನ್ನು ಕಾಣದೇ ಅಶೋಕವನದಲ್ಲಿ ರಾತ್ರಿಯನ್ನು ಕಳೆದ. ಇನ್ನೂ ಕತ್ತಲೆ ಇರುವಾಗಲೇ ಸೇವಕರೊಂದಿಗೆ ಬಂದು ರಾವಣ ಒಬ್ಬ ವನಿತೆಯನ್ನು ಮಾತನಾಡಿಸುತ್ತಿದ್ದ. ತನ್ನೆಲ್ಲ ಪೌರುಷವನ್ನು ಕೊಚ್ಚಿಕೊಂಡು ತನಗೆ ವಶಳಾಗಬೇಕೆಂದ. ಆಕೆ ಈತನನ್ನು ಕತ್ತೆತ್ತಿಯೂ ನೋಡದೇ ಇದ್ದುದನ್ನು ಪಂಜಿನ ಬೆಳಕಿನಲ್ಲಿ ಕಂಡು ಈಕೆಯೇ ಜಾನಕಿಯೆಂದು ನಿರ್ಧರಿಸಿದ ರಾವಣನ ಗರ್ಜನೆ ಹೆಚ್ಚಾಗುತ್ತಿದ್ದಂತೆ ಆಕೆ ಒಂದು ಹುಲ್ಲುಕಡ್ಡಿಯನ್ನು ಇಟ್ಟು ‘ನಿನ್ನಂತಹ ಪಾಪಿ ಮತ್ತು ಹೇಡಿ ಪ್ರಪಂಚದಲ್ಲಿಯೇ ಯಾರೂ ಇಲ್ಲ, ಪರನಾರಿಯನ್ನು ಕದ್ದುತಂದ ನೀನು ಈ ತೃಣಕ್ಕೆ ಸಮಾನ’ ಎಂದು ತುಚ್ಛೀಕರಿಸಿದಾಗ ಅವಮಾನಿತನಾದ ಖಳ 60 ದಿನಗಳ ಗಡುವು ನೀಡಿ, ಎಚ್ಚರಿಸಿ ಬುಸುಗುಡುತ್ತಿರುವ ಕಾಳಸರ್ಪದಂತೆ ಹೊರಟು ಹೋದ. ಆಗ ಸೀತೆಗೆ ದುಃಖ, ಜಿಗುಪ್ಸೆ ಅಸಹಾಯಕತೆ ಒಟ್ಟಿಗೆ ಸೇರಿ ಮನಸ್ಸನ್ನು ಅಲ್ಲೋಲ-ಕಲ್ಲೋಲಗೊಳಿಸತೊಡಗಿದವು. ಪ್ರಾಣ ಕಳೆದುಕೊಳ್ಳುವ ಯೋಚನೆಯಲ್ಲಿದ್ದಾಗ ಪ್ರತ್ಯಕ್ಷಗೊಂಡ ಹನುಮಂತ ಉಪಾಯದಿಂದ ಸೀತೆಯನ್ನು ಸಂತೈಸಿದ. ಶ್ರೀರಾಮನ ಉಂಗುರ ನೀಡಿದ. ‘ಶ್ರೀರಾಮಚಂದ್ರ ಪ್ರಭು ಶೀಘ್ರದಲ್ಲೇ ಬಂದು ಸಂಕಷ್ಟ ಪರಿಹಾರ ಮಾಡುತ್ತಾರೆ, ತಮ್ಮನ್ನು ರಕ್ಷಿಸುತ್ತಾರೆ; ಚಿಂತೆ ಮಾಡುವುದು ಬೇಡ ಮಾತೆ, ರಾವಣನ ಅಹಂಕಾರ ಅಡಗುತ್ತದೆ’ ಎಂದು ಅಭಯ ನೀಡಿ ಸೀತೆಯ ಕುರುಹನ್ನು ಪಡೆದು, ಮರಳಿ ಹೋಗಿ ಶ್ರೀರಾಮನಿಗೆ ಸಮರ್ಪಿಸಿದ.

‘ಸೀತೆ ಹೇಗಿದ್ದಾಳೆ’ ಎಂದು ಶ್ರೀರಾಮ ಕೇಳಿದ ಪ್ರಶ್ನೆಗೆ ಹನುಮನ ಉತ್ತರ ‘ನಿಯತಾ ಅಕ್ಷತಾಂ ದೇವೀ’ ಅಂದರೆ ಸಾಧಿ್ವಾದ ಜಾನಕಿಯು ಅತ್ಯಂತ ನಿಯಮಬದ್ಧಳಾಗಿದ್ದಾಳೆ ಎಂದು ಆಕೆಗೆ ಯಾವುದೇ ಅಹಿತಕರ ಘಟನೆ, ತೊಂದರೆ ಸಂಭವ ಇಲ್ಲವೆಂದು ರಾಮನ ನಿರೀಕ್ಷೆಯಲ್ಲಿದ್ದಾಳೆ ಎಂದು ತಿಳಿಸುತ್ತಾನೆ. ಎಂಥ ಅದ್ಭುತ ವಿಚಾರ!

ಇದೇ ಸಂಪಾದನೆ ಅದೂ ಸತ್ಸಂಪಾದನೆ. ರಾವಣನ ದುರ್ನಡತೆ, ಕಠೋರವಾಕ್ಯ ಸೀತೆಯು ಅದಕ್ಕೆ ಬೇಸತ್ತು ಕೆಡುಕನ್ನು ಯೋಚಿಸಿದ್ದು, ಆಕೆ ಮ್ಲಾನವದನಳಾಗಿದ್ದು, ಸೊರಗಿದ್ದು, ಇದಾವುದನ್ನೂ ಪ್ರಸ್ತಾಪಿಸಲಿಲ್ಲ. ಅಲ್ಲದೆ, ಹನುಮಂತ ತಾನು ಮಾಡಿದ ಸಾಹಸವನ್ನು ಹೇಳಿಕೊಳ್ಳದೆ ರಾಮಕಾರ್ಯವನ್ನು ಸಂಪನ್ನಗೊಳಿಸಿದ. ಶ್ರೀರಾಮನನ್ನು ಚಿಂತೆಗೆ ದೂಡುವ ಯಾವ ಸಂಗತಿಯನ್ನೂ ಹೇಳುವುದಿಲ್ಲ ಹನುಮ. ಇದೇ ಮಹಾತ್ಮರ ಲಕ್ಷ್ಮಣ, ‘ನಭ್ರೂಯಾತ್ ಸತ್ಸಮಪ್ರಿಯಂ’. ಅದಕ್ಕೆ ಹನುಮನಿಗೆ ವಾಕ್ಪಟುತ್ವದ ಬಿರುದು. ನಾವು ಏನೇನನ್ನು ಸಂಗ್ರಹಿಸುತ್ತೇವೆಯೋ ಅದೆಲ್ಲವೂ ಸತ್ಸಂಪಾದನೆಯಾಗುವುದಿಲ್ಲ. ಅದರಲ್ಲಿ ಅಪಾಯಕರ, ಅಪ್ರಯೋಜಕರವಿರಬಹುದು. ಅದಕ್ಕೆ ‘ಸಂಪಾದಕ’ ಎಂದರೆ ಅಗತ್ಯವಾದುದನ್ನು ಅವಶ್ಯಕತೆಗೆ ತಕ್ಕಷ್ಟು ಉದ್ವೇಗಕ್ಕೆ ಎಡೆ ಮಾಡಿಕೊಡದಂತೆ ಪ್ರಚುರಪಡಿಸುವುದು. ಅಂತೆಯೇ ನಮ್ಮ ಜೀವನದಲ್ಲಿ ಏನೇನನ್ನೋ ಸಂಗ್ರಹಿಸುತ್ತೇವೆ. ಆದರೆ ಯಾವುದು ಅತಿಪ್ರಾಮುಖ್ಯವಾಗಿರುತ್ತದೋ ಅದನ್ನು ಮಾತ್ರ ಉಳಿಸಿಕೊಳ್ಳಬೇಕು. ಅದೂ ಸತ್ಸಂಪಾದನೆಯಿಂದ ಕೂಡಿದ್ದಾಗಿರಬೇಕು. ಆಗಲೇ ಜೀವನಕ್ಕೆ ನಿಜವಾದ ಅರ್ಥ, ಸಾರ್ಥಕತೆ. ಅಲ್ಲವೇ?

 | ರಾಮಸುಬ್ರಾಯ ಶೇಟ್

(ಲೇಖಕರು ಗಮಕ ವ್ಯಾಖ್ಯಾನಕಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net