ಮನೋಲ್ಲಾಸ: ಇನ್ನೊಬ್ಬರ ಏಳಿಗೆ ಸಂಭ್ರಮಿಸೋಣ

Manollasa
Published on

ಹೀಗೊಂದು ಪುಟ್ಟಕಥೆ. ಒಂದು ಮಿಂಚುಹುಳ ತನ್ನ ಪಾಡಿಗೆ ತಾನು ಅತ್ತಿಂದಿತ್ತ ಹಾರಾಡುತ್ತಿತ್ತು. ಅದನ್ನು ನೋಡಿ ಒಂದು ಸರ್ಪ ಅದನ್ನು ತಿನ್ನಲು ಹವಣಿಸುತ್ತಿತ್ತು. ಭಯಭೀತ ಮಿಂಚುಹುಳ ಅತ್ತಿತ್ತ ಹಾರಾಡುತ್ತ ಸರ್ಪದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇತ್ತು. ಆದರೂ, ಸರ್ಪ ಬೆಂಬಿಡದೇ ಅದನ್ನು ಹಿಂಬಾಲಿಸುತ್ತಿತ್ತು. ನಿರಂತರ ಹಾರಾಟದ ನಂತರ ಮಿಂಚುಹುಳ ತುಂಬ ದಣಿಯಿತು. ಬೇರೆ ಮಾರ್ಗ ಇಲ್ಲದೆ ಮಿಂಚುಹುಳ ಸರ್ಪವನ್ನು ಕೇಳಿತು. ‘ನಾನು ನಿನಗೆ ಮೂರು ಪ್ರಶ್ನೆಗಳನ್ನು ಕೇಳಲೇ?’ ಎಂದು. ಸರ್ಪವು ಸಿಟ್ಟಿನಿಂದಲೇ- ‘ಸರಿಸರಿ, ಯಾರಿಗೂ ಉತ್ತರಿಸುವ ಅಗತ್ಯ ನನಗೇನಿಲ್ಲ. ನಿನ್ನನ್ನು ಹೇಗೂ ತಿಂದು ಮುಗಿಸುವವನಿದ್ದೇನೆ. ಪ್ರಶ್ನೆ ಕೇಳು. ಪರವಾಗಿಲ್ಲ’ ಎಂದಿತು.

ಮಿಂಚುಹುಳ ಮೊದಲ ಪ್ರಶ್ನೆಯಾಗಿ, ‘ನಾನು ನಿನ್ನ ಆಹಾರಸರಪಳಿಯಲ್ಲಿ ಇದ್ದೇನೆಯೇ?’ ಎಂದು ಕೇಳಿತು. ‘ಇಲ್ಲ’ ಎಂದಿತು ಸರ್ಪ. ‘ನಾನು ನಿನಗೆ ಏನಾದರೂ ತೊಂದರೆ ಮಾಡಿದ್ದೇನೆಯೇ ? ಅಥವಾ ಕೆಣಕಿದೆನೇ ?’ ಎನ್ನುವುದು ಎರಡನೇ ಪ್ರಶ್ನೆ. ‘ಇಲ್ಲ’ ಎಂಬ ಉತ್ತರ. ‘ಮತ್ತೇಕೆ ನನ್ನನ್ನು ಕೊಂದು ತಿನ್ನಬೇಕೆಂದಿದ್ದಿ?’ ಮೂರನೇ ಪ್ರಶ್ನೆ ಕೇಳಿತು ಮಿಂಚುಹುಳ. ಆಗ ಸರ್ಪ ಹೇಳಿತು- ‘ಏಕೆಂದರೆ ನೀನು ಆ ರೀತಿ ಮಿನುಗುವುದನ್ನು ನೋಡಿ ನನ್ನಿಂದ ಸಹಿಸಲಾಗುತ್ತಿಲ್ಲ.’

ಇದೊಂದು ಪುಟ್ಟಕಥೆ. ಆದರೆ ನಮಗೆ ನೀಡುವ ಸಂದೇಶ ಮಾತ್ರ ಬಹಳ ದೊಡ್ಡದು. ನಮ್ಮ ಬದುಕಿನಲ್ಲಿಯೂ ಇಂತಹ ಸರ್ಪಗಳು ಎದುರಾಗುತ್ತವೆ. ನಮ್ಮ ಬಾಳಿನ ಹೊಳಪನ್ನು, ಏಳಿಗೆಯನ್ನು ಕಂಡು ಹೊಟ್ಟೆಯುರಿಯುವ, ಸಹಿಸದ ಮನುಷ್ಯರೂಪದ ವಿಷಸರ್ಪಗಳು ಅವು. ನಮ್ಮ ಏಳಿಗೆಯನ್ನು ನಾಶಮಾಡಲು ಯತ್ನಿಸುವ ಕ್ರೂರಮನಸ್ಸಿನವರು ಇರುತ್ತಾರೆ. ಅವರಿಂದ ಕೆಲವೊಮ್ಮೆ ಅನವಶ್ಯಕ ಸಂಕಷ್ಟ, ದುಃಖಗಳನ್ನು ಎದುರಿಸಬೇಕಾಗುತ್ತದೆ.

ಸುಭಾಷಿತಕಾರ ಸುಂದರವಾದ ಒಂದು ಮಾತನ್ನು ಹೇಳಿದ್ದಾನೆ-

ನಾಗುಣೀ ಗುಣಿನಂ ವೇತ್ತಿ ಗುಣೀ ಚ ಗುಣಮತ್ಸರೀ |

ಗುಣೀ ಚ ಗುಣರಾಗೀಚ ಸರಲೋ ವಿರಲೋ ಜನಃ ||

ವಿಚಿತ್ರವೆಂದರೆ ಮನುಷ್ಯ ತನ್ನಲ್ಲಿ ಗುಣಗಳಿಲ್ಲದಿದ್ದರೆ ಮತ್ತೊಬ್ಬರಲ್ಲಿನ ಗುಣಗಳನ್ನು ತಿಳಿಯಲಾರ. ತನ್ನಲ್ಲಿ ಗುಣಗಳಿದ್ದರೆ ಮತ್ತೊಬ್ಬರ ಗುಣಗಳನ್ನು ಸಹಿಸುವುದಿಲ್ಲ. ಗುಣವಂತರಲ್ಲಿ ಮಾತ್ಸರ್ಯ, ಅಸೂಯೆ ತೋರುತ್ತಾನೆ. ಹೀಗಿರುವಾಗ ತಾನೂ ಗುಣವಂತನಾಗಿ, ಮತ್ತೊಬ್ಬರ ಗುಣಗಳಲ್ಲಿ ಅನುರಾಗ ಉಳ್ಳವನೂ ಆದಂತಹ ಮನುಷ್ಯ ಬಹಳ ದುರ್ಲಭ ಎನ್ನುತ್ತಾನೆ ಕವಿ.

ನಮ್ಮ ಗುರುಗಳು ಒಂದುಮಾತನ್ನು ಯಾವಾಗಲೂ ಹೇಳುತ್ತಿದ್ದರು- ‘ಮತ್ತೊಬ್ಬರು ಮಾಡುವ ಒಳ್ಳೆಯ ಕೆಲಸಗಳಿಗೆ ಅನುಕೂಲ ಮಾಡಿಕೊಡುವುದು ಉತ್ತಮ. ಅನುಕೂಲ ಮಾಡಿಕೊಡಲು ಆಗದಿದ್ದರೂ ತೊಂದರೆಯನ್ನಂತೂ ಮಾಡಬೇಡಿ’ ಎಂದು. ಅಂದಮೇಲೆ ಮಿಂಚುಹುಳದ ಹೊಳಪನ್ನು ಸಹಿಸದೇ ಅದನ್ನೇ ತಿನ್ನಲು ಹೊರಟಂತಹ ವಿಷಸರ್ಪ ನಾವಾಗುವುದು ಬೇಡ. ಇನ್ನೊಬ್ಬರ ಏಳಿಗೆಯನ್ನು ಸಹಿಸದ ದುರ್ಗಣ ನಮ್ಮದಾಗುವುದು ಬೇಡ. ಮತ್ತೊಬ್ಬರಲ್ಲಿ ಇರುವ ಗುಣಗಳನ್ನು ಕಂಡು ಸಂತೋಷಪಡುವ ಸ್ವಭಾವ ನಮ್ಮದಾಗಲಿ. ಇನ್ನೊಬ್ಬರಲ್ಲಿನ ಗುಣಗಳನ್ನು ಗುರುತಿಸಿ ಸಂತಸಪಡುವ ಒಂದು ಗುಣ ನಮ್ಮಲ್ಲಿದ್ದರೆ ನಮ್ಮಷ್ಟು ಸುಖಿಗಳು ಯಾರೂ ಇರಲಾರರು ಎಂಬ ಸರಳಸತ್ಯವನ್ನು ಅರಿಯೋಣ. ಅಸೂಯೆ, ಮತ್ಸರವನ್ನು ದೂರವಾಗಿಸಿ ಎಲ್ಲರ ಉತ್ಕರ್ಷ ಬಯಸೋಣ.

| ಡಾ.ಕಾಂತೇಶಾಚಾರ್ಯ ಕದರಮಂಡಲಗಿ

(ಲೇಖಕರು ಸಂಸ್ಕೃತ ಸಂಶೋಧಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net