ಮನೋಲ್ಲಾಸ: ಸಜ್ಜನರ ಸಾಂಗತ್ಯವಿರಲಿ

Stack of hands showing unity and teamwork
Close up top view of young people putting their hands together. Friends with stack of hands showing unity and teamwork.
Published on

ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುವ ಆಳುಗಳ ವಿಶ್ರಾಂತಿಗಾಗಿ ತಾಳೆಗರಿಗಳ ಎರಡು ಚಪ್ಪರಗಳನ್ನು ಹಾಕಿಸಿದ್ದ. ದಿನಕಳೆದಂತೆ ಆ ಚಪ್ಪರಗಳು ಜೀರ್ಣಾವಸ್ಥೆಗೆ ಬರಲಾರಂಭಿಸಿದಾಗ ಬೇರೆ ಕಡೆ ವ್ಯವಸ್ಥೆ ಕಲ್ಪಿಸಿದ. ಹೀಗಾಗಿ ಈ ಚಪ್ಪರಗಳು ಖಾಲಿ ಬಿದ್ದವು. ಒಂದನೇ ಚಪ್ಪರದ ಬುಡದಲ್ಲಿ ಗೆದ್ದಲಿನ ಗೂಡಿತ್ತು. ಆ ಗೂಡಿನ ಗೆದ್ದಲುಗಳು ತಮ್ಮ ಸ್ವಭಾವದ ಕಾರಣದಿಂದಾಗಿ ಬಹುಬೇಗನೆ ಚಪ್ಪರದ ಬುಡದಿಂದ ಮೇಲೇರಲಾರಂಭಿಸಿದವು. ಇನ್ನೊಂದು ಚಪ್ಪರದ ಬುಡದಲ್ಲಿ ಸಿಹಿಕುಂಬಳದ ಬೀಜವೊಂದು ಎಲ್ಲಿಂದಲೋ ಹಾರಿಬಂದು ಬಿದ್ದಿತ್ತು. ಮಳೆ ಹನಿಯಲು ಆ ಬೀಜ ಮೊಳೆತು ಚಿಗುರಿ, ಬೆಳೆಯುತ್ತ ಚಪ್ಪರದ ತುಂಬ ಹಬ್ಬಲಾರಂಭಿಸಿತು; ಹಸಿರನ್ನು ಹರಡಿತು. ರೈತ ಕೆಲ ದಿನ ಕಳೆದ ಬಳಿಕ ಬಂದಾಗ, ಗೆದ್ದಲು ಹಿಡಿಯುತ್ತಿದ್ದ ಚಪ್ಪರವನ್ನು ನೋಡಿ, ಕಟ್ಟಿಗೆಯೆಲ್ಲ ಹಾಳಾಗುತ್ತದೆಯೆಂದು ಆ ಚಪ್ಪರವನ್ನು ಕೆಡವಿಬಿಟ್ಟ. ಪಕ್ಕದ ಚಪ್ಪರದಲ್ಲಿ ಸಿಹಿಕುಂಬಳ ಬಳ್ಳಿ ಹುಲುಸಾಗಿ ಹಬ್ಬಿ, ಹೂ ಬಿಟ್ಟಿದ್ದನ್ನು ನೋಡಿ ಸಂತಸಪಟ್ಟು, ಆ ಚಪ್ಪರ ಬೀಳದಿರಲೆಂದು ಆಧಾರ ನೀಡಿ, ಇನ್ನಷ್ಟು ಗಟ್ಟಿಯಾಗಿಸಿದ. ಗೆದ್ದಲು ಹಿಡಿದ ಕಾರಣದಿಂದಾಗಿ ಮೊದಲನೇ ಚಪ್ಪರ ಅಳಿಯಿತು. ಬಳ್ಳಿಯನ್ನು ಹಬ್ಬಿಸಿಕೊಂಡ ಎರಡನೇ ಚಪ್ಪರ ಬಾಗಿದರೂ ಸಾರ್ಥಕತೆಯಿಂದ ಬಾಳಿತು. ಎರಡು ಚಪ್ಪರಗಳು ಒಂದೇ ಆಕಾರ, ಗುಣಮಟ್ಟ ಹೊಂದಿದ್ದರೂ ಅವಕ್ಕಂಟಿದ ಸಂಗತಿಗಳ ದೆಸೆಯಿಂದ ಭಿನ್ನವಾಗಿ ಬಾಳಿದವು.

ಮೂಲತಃ ವ್ಯಕ್ತಿ ಒಳ್ಳೆಯವನೇ ಆದರೂ ಅವನ ಕೆಲಸಕಾರ್ಯಗಳು, ಗುಣಸ್ವಭಾವ ಹಾಗೂ ಹವ್ಯಾಸಗಳಿಗೆ ಅನುಸಾರವಾಗಿ ಅವನ ಭವಿಷ್ಯ ರೂಪಿತವಾಗುತ್ತದೆ ಎಂಬುದು ದಿಟ. ಕಲ್ಲು ಎಷ್ಟೇ ಉತ್ತಮವಾಗಿದ್ದರೂ ಮೂರ್ತಿಯಾದರೆ ಮಾತ್ರ ಪೂಜಿಸಲ್ಪಡುತ್ತದೆ. ಶುದ್ಧ ವಜ್ರವೇ ಆದರೂ ಧೂಳು ಮೆತ್ತಿಕೊಂಡಾಗ ಹೊಳೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಜೀವನವನ್ನು ಉನ್ನತೀಕರಿಸುವ ಒಳ್ಳೆಯ ಸಂಸ್ಕಾರಗಳು ಹಾಗೂ ಸನ್ನಡತೆಯ ಜನರು ನಮ್ಮ ಜೊತೆಯಾದರೆ ಬದುಕು ಸಾರ್ಥಕ. ‘ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಅಭಿಮಾನ ಭಂಗ’ ‘ಸಗಣಿ ಜೊತೆ ಸರಸಕ್ಕಿಂತ ಗಂಧದ ಜೊತೆ ಗುದ್ದಾಟ ಲೇಸು’ ಮುಂತಾದ ಸುಬೋಧಗಳೆಲ್ಲವೂ ನಮ್ಮ ಒಡನಾಟ ಹೇಗಿರಬೇಕು ಹಾಗೂ ಯಾರ ಜೊತೆ ಇರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತವೆ. ಸಾಂಗತ್ಯದಿಂದ ನಮ್ಮ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಹೇಳುತ್ತವೆ. ಬದುಕಿನಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಸಂಗತಿಗಳಿರುತ್ತವೆ. ಆಯ್ಕೆ ಮಾಡಿಕೊಳ್ಳುವಾಗ ಎಚ್ಚರ, ವಿವೇಕ ಇರಬೇಕು. ಈ ವಾಸ್ತವವನ್ನು ಅರಿತುಕೊಂಡು ನಡೆದರೆ ಬದುಕಿನ ಪಯಣ ಸುಲಭವೂ, ಸುಂದರವೂ ಆಗುತ್ತದೆ.

ಹಸಿಮಣ್ಣಲಿ ಬಿದ್ದ ಬೀಜ ಮೊಳಕೆಗೆ ಆದಿ

ಬೆಂಕಿಯಲಿ ಬಿದ್ದ ಬೀಜ ಬರಿದೇ ಬೂದಿ

ಸುಜನರ ಸಾಂಗತ್ಯ ಜೊತೆಯಾಗಿರಲು

ಸರಳವು ಪ್ರಶಾಂತ ಬದುಕಿನ ಹಾದಿ

| ರೇಖಾ ಗಜಾನನ ಭಟ್ಟ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net