ಮನೋಲ್ಲಾಸ: ಕೊಟ್ಟ ಮಾತು ತಪ್ಪದಿರಲಿ

Mano
Published on

‘ಹೇ ರಾಜನೇ, ನನ್ನ ಯಜ್ಞವು ರಾಕ್ಷಸರಿಂದ ಹಾಳಾಗುತ್ತಿದೆ. ದೀಕ್ಷೆ ತೊಟ್ಟಿರುವ ನಾನು ಅವರ ವಿರುದ್ಧ ಹೋರಾಡಲು ಅಸಮರ್ಥನು. ಅವರನ್ನು ಬಗ್ಗು ಬಡಿಯಲು ನಿನ್ನ ಮಗನಾದ ರಾಮನೊಬ್ಬನೇ ಸಾಕು. ಅವನನ್ನು ನನ್ನ ಜೊತೆ ಕಾಡಿಗೆ ಕಳುಹಿಸಿ ಕೊಡು’ ಎಂದು ವಿಶ್ವಾಮಿತ್ರ ಮುನಿಗಳು ದಶರಥನನ್ನು ಕೇಳಿಕೊಂಡಾಗ ದಶರಥನಿಗೆ ಒಮ್ಮೆಲೇ ದುಗುಡವಾಯಿತು. ತನ್ನ ಮಗ ರಾಮ ಇನ್ನೂ ಎಳೆಯ ಬಾಲಕ. ಶಸ್ತ್ರಾಸ್ತ್ರಗಳನ್ನೇ ಕಂಡರಿಯದ ಆತ ರಾಕ್ಷಸರನ್ನು ಕೊಲ್ಲುವುದೆಂತು? ವಂಶೋದ್ಧಾರಕ್ಕೆ ಹಂಬಲಿಸಿ, ಕೊನೆಗೆ ಪಡೆದ ಕುಡಿಯನ್ನೇ ಬಿಡುವುದೆಂತು? ಹೀಗೆ ಬಗೆ ಬಗೆಯಾಗಿ ದಶರಥನು ಯೋಚಿಸುತ್ತಿರುವಾಗ, ‘ಚಿಂತಿಸಬೇಡ. ನಾನು ನಿನಗೆ ಮಾತು ಕೊಡುತ್ತೇನೆ. ನನ್ನ ರಕ್ಷಣೆಯಲ್ಲಿರುವಾಗ ರಾಮನಿಗೆ ಯಾವ ತೊಂದರೆಯೂ ಬರುವುದಿಲ್ಲ. ಆತ ರಾಕ್ಷಸರನ್ನು ಸಂಹರಿಸಿ ಲೋಕ ವಿಖ್ಯಾತನಾಗುವನು’ ಎಂದು ವಚನವಿತ್ತರು ಮುನಿಗಳು. ವಿಶ್ವಾಮಿತ್ರರ ಮೇಲೆ ವಿಶ್ವಾಸವಿರಿಸಿ ರಾಮ ಲಕ್ಷ್ಮಣರಿಬ್ಬರನ್ನೂ ದಶರಥನು ಕಾಡಿಗೆ ಕಳುಹಿಸಿ ಕೊಟ್ಟ. ವಿಶ್ವಾಮಿತ್ರರೋ ಮಾತಿಗೆ ಬದ್ಧರಾಗಿ ಬಲಾ, ಅತಿಬಲಾ ಇತ್ಯಾದಿ ವಿದ್ಯೆಯನ್ನು ಹೇಳಿಕೊಡುತ್ತ, ರಾಮನನ್ನು ತಾಟಕೆಯ ಸಂಹಾರ ಕಾರ್ಯದಲ್ಲಿ ತೊಡಗುವಂತೆ ಮಾಡಿ, ಕೊಟ್ಟ ಮಾತಿನಂತೆ ಆತನ ಕೀರ್ತಿಯನ್ನು ತಮ್ಮದೇ ಮಹಿಮೆಯ ಬೆಳಕಿನಲ್ಲಿ ಬೆಳಗುವಂತೆ ಮಾಡಿದರು. ತಮಗೆ ಸಿಕ್ಕ ಅವಕಾಶದಲ್ಲಿಯೇ ರಾಮನನ್ನು ಶಾಸ್ತ್ರಪಾರಂಗತನನ್ನಾಗಿ ಮಾಡಿ ಜೀವನ ಉಜ್ಜೀವನವಾಗುವ ಎಲ್ಲ ವ್ಯವಸ್ಥೆಯನ್ನು ಮಾಡಿದರು.

ಮಾತು ಮನುಷ್ಯನ ವ್ಯಕ್ತಿತ್ವದ ದರ್ಪಣ ವೆನ್ನುತ್ತಾರೆ. ಸಮಾಜಮುಖಿಯಾದ ನಾವು ಅನೇಕ ಸಂದರ್ಭಗಳಲ್ಲಿ ಮಾತು ಕೊಡಬೇಕಾಗುತ್ತದೆ. ಮಾತು ಕೊಟ್ಟು ಸಂಬಂಧ ಬೆಳೆಸುತ್ತೇವೆ. ವ್ಯವಹಾರ ಕುದುರಿಸುತ್ತೇವೆ. ಕೊಡುವ ಮಾತು ವ್ಯಕ್ತಿಯ ಮೇಲಣ ವಿಶ್ವಾಸದ ಸಂಕೇತವಾದರೂ ಅನೇಕರಿಗೆ ಅದರ ಬಗ್ಗೆ ಅಸಡ್ಡೆ, ಬಂಡವಾಳ ಎಲ್ಲವೂ. ಸಲೀಸಾಗಿಯೇ ಮಾತನ್ನು ಮರೆತುಬಿಡುತ್ತಾರೆ. ಮರೆತಂತೆ ಇರುತ್ತಾರೆ. ಆದರೆ ಕೊಟ್ಟ ಮಾತಿಗೆ ತಪ್ಪುವುದೆಂದರೆ ವ್ಯಕ್ತಿತ್ವವೆಂಬ ಹಸಿಗೋಡೆಯ ಮೇಲೆ ಕತ್ತಿಯನ್ನು ತೂಗಿದ ಹಾಗೆ. ‘ಭಾಷೆ ತಪ್ಪಿದ ಬಳಿಕ ದೇವಾ, ಬಲ್ಲಿದ ಭಕ್ತನೇನು ಮಾಡುವನು?’ ಎಂಬುದಾಗಿ ಬಸವಣ್ಣನವರು ‘ಕೊಟ್ಟ ಮಾತಿಗೆ ತಪ್ಪುವವನು, ಮೊನೆಯಿಲ್ಲದ ಆಯುಧದಂತೆ, ವಿಷವಿಲ್ಲದ ಹಾವಿನಂತೆ ನಿಷ್ಪ›ಯೋಜಕ’ ಎಂದಿದ್ದಾರೆ. ಮಾತನ್ನು ಉಳಿಸಿಕೊಂಡಾಗಲೇ ವ್ಯಕ್ತಿ ವಿಶ್ವಾಸಾರ್ಹನು, ಗಟ್ಟಿಗನೂ ಆಗುತ್ತಾನೆ.

ಕೆಲವೊಮ್ಮೆ ಎಂಥ ಸಂದರ್ಭ ಬಂದೊದಗುತ್ತದೆಯೆಂದರೆ, ನಾವು ಕೊಟ್ಟ ಮಾತು ತಾಳ್ಮೆಯನ್ನೋ, ಸತ್ವವನ್ನೋ ಪರೀಕ್ಷೆ ಮಾಡುತ್ತದೆ ಎನ್ನುವಂತಿರುತ್ತದೆ. ಎಂಥ ವಿಷಮ ಪರಿಸ್ಥಿತಿಯಲ್ಲೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವವನೇ

ನಿಜವಾದ ಧೀರ. ಅದಕ್ಕೆ ಉದಾಹರಣೆಯಾಗಿ ಸಿಗುವುದು ಮಹಾಭಾರತದ ಭೀಷ್ಮರ ಪಾತ್ರ. ತಂದೆ ಶಂತನುವಿಗೆ ಮತ್ಸ್ಯಗಂಧಿಯನ್ನು ವಿವಾಹವಾಗಲು ತನ್ನ ವಿವಾಹವೇ ಅಡ್ಡಿಯಾಗುತ್ತದೆ ಎಂದು ಗೊತ್ತಾದಾಗ ‘ಜೀವನಪರ್ಯಂತ ಮದುವೆಯಾಗದೇ ಇರುತ್ತೇನೆ’ ಎಂದು ಪ್ರತಿಜ್ಞೆಗೈದು ತಂದೆಯೇ ಇನ್ನೊಂದು ವಿವಾಹವಾಗಲು ಅನುವು ಮಾಡಿಕೊಟ್ಟರು ಭೀಷ್ಮಾಚಾರ್ಯರು. ಆದರೆ ಅವರ ಸತ್ವವನ್ನೇ ಪರೀಕ್ಷೆ ಮಾಡುವಂಥ ಸಂದರ್ಭ ಎದುರಾಯಿತು. ಒಮ್ಮೆ ಅಂಬೆ ಎಂಬ ಯುವತಿ ತನ್ನನ್ನು ವಿವಾಹವಾಗುವಂತೆ ದಂಬಾಲು ಬಿದ್ದಾಗ, ಬ್ರಹ್ಮಚರ್ಯವೇ ಮುರಿದು ಬೀಳುವ ಪ್ರಸಂಗ ಬಂದರೂ ಧೃತಿಗೆಡಲಿಲ್ಲ. ಇಂದಿಗೂ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಅನ್ವರ್ಥವೆಂಬಂತೆ ಭೀಷ್ಮಪ್ರತಿಜ್ಞೆ ಜನಜನಿತವಾಗಿದೆ.

ಕೊಟ್ಟ ಮಾತನ್ನು ಉಳಿಸಿಕೊಂಡಾಗಲೇ ವ್ಯಾಪಾರಿ ಗಣ್ಯನಾಗುವುದು, ರಾಜಕಾರಣಿ ಜನನಾಯಕನಾಗುವುದು. ಆಡಿದ ಮಾತಿನ ಬಗ್ಗೆ, ನೀಡಿದ ಭರವಸೆಯ ಬಗ್ಗೆ ಅಸಡ್ಡೆ ಬೇಡ. ಪರರಿಗೆ ಇತ್ತ ಭಾಷೆ, ಭರವಸೆಗಳೆಲ್ಲ ಹುಸಿಯಾಗದಂತೆ ಕಾಯ್ದುಕೊಂಡು ಪ್ರಾಮಾಣಿಕರೆನಿಸಿಕೊಳ್ಳಬೇಕಾದುದು ಜೀವನದ ಅನಿವಾರ್ಯತೆ ಕೂಡ.

| ಡಾ.ಗಣಪತಿ ಆರ್.ಭಟ್

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net