

| ಡಾ.ಕೆ.ಪಿ.ಪುತ್ತೂರಾಯ
ಭಾರತ ಕಂಡ ಪ್ರಾತಃಸ್ಮರಣೀಯರಲ್ಲಿ ಒಬ್ಬರಾದ ಮದನ ಮೋಹನ ಮಾಳವೀಯರು ಕಾಶಿ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಸಾಹಸಿಗ. ಅವರು ಚಿಕ್ಕ ಬಾಲಕರಾಗಿದ್ದಾಗ ನಡೆದ ಘಟನೆ. ತಂದೆ ಮೋಹನ ಮಾಳವೀಯ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಹರಿಕಥೆ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಸತ್ಯದ ಆರಾಧಕರಾದ ಅವರು ಸಿರಿವಂತಿಕೆಯತ್ತ ಲಕ್ಷ್ಯ ಕೊಟ್ಟವರಲ್ಲ. ಹೀಗಾಗಿ ಬಡತನವು ಅವರ ಮನೆಯ ನಿತ್ಯ ಅತಿಥಿಯಾಗಿತ್ತು.
ಒಂದು ದಿನ ಮನೆಯಲ್ಲಿ ಕಾಳುಕಡ್ಡಿ ಏನೂ ಇರಲಿಲ್ಲ. ಬಾಲಕ ಮದನ್ ಹಸಿದು ಮಲಗಿದ್ದ. ಮಗುವಿನ ಸಂಕಟ ನೋಡಲಾರದೆ ಸತಿಯು ಹೇಳಿದಳು- ‘ನಾನು, ನೀವು ಹೇಗಾದರೂ ಹಸಿವೆ ಸಹಿಸಿಕೊಳ್ಳಬಹುದು. ಆದರೆ ಮಗುವಿಗೆ ಸಾಧ್ಯವೇ? ಮಗುವಿಗೋಸ್ಕರವಾದರೂ, ಏನಾದರೂ ಬೇಡಿ ತರಬಾರದೆ?’ ಉತ್ತರವಾಗಿ ಪತಿ ಹೇಳಿದರು-‘ನಮ್ಮದು ಗೌರವಾನ್ವಿತ ಮನೆತನ. ನಾವು ಎಂದು ಯಾರನ್ನೂ ಕೈಯೊಡ್ಡಿ ಬೇಡಿದವರಲ್ಲ. ಪಾಲಿಗೆ ಬಂದದ್ದನ್ನು ಅನುಭವಿಸಲೇ ಬೇಕು. ನೋಡೋಣ, ಭಗವಂತ ಕೃಪೆ ಮಾಡಿಯಾನು!’
ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು, ‘ನಮ್ಮ ಸಾಹುಕಾರರು ನಿಮಗೆ ಹರಿಕಥೆ ಮಾಡುವಂತೆ ಆಹ್ವಾನಿಸಿದ್ದಾರೆ’ ಎಂದ. ಇವರು ಆ ಸಿರಿವಂತನ ಮನೆಗೆ ಹೋಗಿ ಭಾವ ತುಂಬಿ ಹರಿಕಥೆ ಮಾಡಿದರು. ಸಂತುಷ್ಟನಾದ ಆ ಶ್ರೀಮಂತ ಇವರಿಗೆ ನೂರು ರೂಪಾಯಿಯನ್ನು ಕಾಣಿಕೆಯಾಗಿ ಕೊಟ್ಟ. ಆದರೆ ಮೋಹನರು, ಅದರಲ್ಲಿ ಕೇವಲ ಐದು ರೂಪಾಯಿ ತೆಗೆದುಕೊಂಡು ಉಳಿದ ಹಣವನ್ನು ಹಿಂತಿರುಗಿಸಿದರು. ಸಾಹುಕಾರ ಹೇಳಿದ- ‘ಈ ಎಲ್ಲ ಹಣವು ನಿಮಗೇ’. ‘ಸಾಹುಕಾರರೇ, ನಾನು ಮಾಡಿದ ಹರಿಕಥೆಗೆ ಸಂದಾಯವಾಗಬೇಕಾದ ಹಣ ಐದು ರೂಪಾಯಿಯಷ್ಟೆ. ಹೆಚ್ಚಿನದು ನನಗೇಕೆ?’ ‘ಸಂತರೇ ನಿಮ್ಮ ಕಷ್ಟದ ಜೀವನಕ್ಕೆ ಅನುಕೂಲವಾಗಲೆಂದೇ ಹೆಚ್ಚು ಹಣವನ್ನು ಕೊಟ್ಟಿರುವೆ, ತೆಗೆದುಕೊಳ್ಳಿ’. ಮೋಹನರು ಹೇಳಿದರು-‘ಯಜಮಾನರೇ ನೀವು ಸಂಪತ್ ಧನಿಕರು, ನಾವಾದರೋ ಸಂತಸದ ಧನಿಕರು. ಇರೋದರಲ್ಲೇ ಸಂತೃಪ್ತರು. ದುಡಿಮೆಗೆ ತಕ್ಕುದಾದ ದುಡ್ಡನ್ನು ಮಾತ್ರ ಆಶಿಸುವವರು. ಅತಿ ಆಸೆ ಇಲ್ಲದವರು’.
ಆಗ ಧನಿಕ, ‘ಸರಿ ಹಾಗಾದರೆ. ಆದರೆ ಒಮ್ಮೆ ಕೊಟ್ಟ ಹಣವನ್ನು ತಿರುಗಿ ಪಡೆಯೋದು ನ್ಯಾಯಸಮ್ಮತವಾಗದು. ನಮ್ಮಿಬ್ಬರಿಗೂ ಬೇಡವಾದ ಈ ಹಣವನ್ನು ಯಾವುದಾದರೂ ಸತ್ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ’ ಎಂದ.
ಹೌದು-ಸಂಪತ್ತಿಗೆ ಮೂರು ಹಂತಗಳು. ಗಳಿಕೆ, ಉಳಿಕೆ ಮತ್ತು ಬಳಕೆ. ಇವೆಲ್ಲವೂ ನ್ಯಾಯಸಮ್ಮತ, ಧರ್ಮಸಮ್ಮತವಾಗಿರಬೇಕು ಮತ್ತು ಸಮ ಪ್ರಮಾಣದಲ್ಲಿರಬೇಕು. ಸಂಪತ್ತಿನ ಸಂಪಾದನೆ ಹಾಗೂ ಸಂಗ್ರಹಣೆ ಎಷ್ಟು ಮುಖ್ಯವೋ, ಅದರ ಸೂಕ್ತ ವಿತರಣೆಯೂ ಅಷ್ಟೇ ಮುಖ್ಯ. ಕಾರಣ, ಸಂಪತ್ತಿಗೆ ಮೂರು ಅಂತ್ಯಗಳಿವೆ ಅಲ್ಲವೇ? ಭೋಗ-ತ್ಯಾಗ-ನಾಶ. ನಮ್ಮ ಭೋಗ, ಸುಖ, ಸಂತೋಷಗಳಿಗಾಗಿ ಸಂಪಾದಿಸಿದ ಸಂಪತ್ತನ್ನು ವಿನಿಯೋಗಿಸುವುದರ ಜತೆಗೆ ಒಂದಂಶವನ್ನು ದಾನಧರ್ಮಗಳಿಗೆ ತ್ಯಾಗ ಮಾಡಲೇಬೇಕು. ಇಲ್ಲವಾದರೆ ಅದು ಅನ್ಯರ ಕೈ ಸೇರಿ ನಾಶವಾಗುತ್ತದೆ. ಆದುದರಿಂದ ‘ಬಿಟ್ಟು ಹೋಗೋದರ ಬದಲು ಕೊಟ್ಟು ಹೋಗೋದು ಲೇಸಲ್ಲವೇ?’
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)