

ನಮ್ಮ ದೇಶದ ಸಂಸ್ಕೃತಿ, ಜ್ಞಾನಪರಂಪರೆಯ ರಕ್ಷಣೆಯಾಗಬೇಕು ಎಂಬ ಆಗ್ರಹದ ಕೂಗು ಕೇಳುತ್ತಲೇ ಇರುತ್ತೇವೆ. ಇಂಥ ಮಹಾನ್ ಉದ್ದೇಶ ಸಾಕಾರಕ್ಕಾಗಿ ಜೀವನವನ್ನೇ ತಪಸ್ಸಿನಂತೆ ಮುನ್ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲ, ಇಂಥ ಬೃಹತ್ ಕಾರ್ಯಗಳು ಕೇವಲ ಮನುಜ ಸಂಕಲ್ಪದಿಂದ ನೇರವೇರುವುದು ಕಷ್ಟಸಾಧ್ಯವೇ ಸರಿ. ಭಗವಂತ ಎಂದು ಕರೆಯಲ್ಪಡುವ ಆ ಪರಮ ಶಕ್ತಿಯೇ ಅಸಾಧಾರಣವಾದದ್ದನ್ನು ಸಾಧಿಸಲು ಕೆಲ ಸಜ್ಜನ ಶಕ್ತಿಗಳನ್ನು ಆಯ್ದುಕೊಳ್ಳುತ್ತದೆ. ಆ ಮುಖೇನ ಇತಿಹಾಸದಲ್ಲಿ ದಾಖಲಾಗುವ, ವರ್ತಮಾನಕ್ಕೆ ಬೆಳಕಾಗುವ, ಭವಿಷ್ಯಕ್ಕೆ
ವಿಜ್ಞಾನ-ತಂತ್ರಜ್ಞಾನ ರಂಗದಿಂದ ಬಂದು, ಅಲ್ಲಿ ಸಾಧನೆಯ ಹೆಜ್ಜೆಗುರುತು ಮೂಡಿಸಿದ ಕಶ್ಯಪರು ವೇದದ ಕಡೆಗೆ ಹೊರಳಿ, ಅದನ್ನೇ ಜೀವನವ್ರತವಾಗಿಸಿಕೊಂಡಿದ್ದು ಅನನ್ಯ. ಎಲೆಮರೆ ಕಾಯಿಯಂತೆ ಇದ್ದು, ವೇದದ ಇಪ್ಪತೆôದು ಸಾವಿರ ಮಂತ್ರಗಳಿಗೂ ಆಂಗ್ಲ ಭಾಷೆಯಲ್ಲಿ ಅರ್ಥ ಬರೆದು ಪ್ರಕಟಿಸಿದ್ದಾರೆ. ಇವರು ಹೊರತಂದ ಋಗ್ವೇದದ 12, ಕೃಷ್ಣಯಜುರ್ ವೇದದ 4, ಅಥರ್ವವೇದದ 6, ಸಾಮವೇದದ 2, ಶುಕ್ಲಯಜುರ್ ವೇದದ 3 ಸಂಪುಟಗಳು ವೇದಾಸಕ್ತರ ಜ್ಞಾನದ ಹಸಿವನ್ನು ತಣಿಸುತ್ತಿವೆ. ಇವರ ಕಾರ್ಯಸಾಧನೆಗಾಗಿ ಈ ವರ್ಷದ ಪದ್ಮಶ್ರೀ ಪ್ರಶಸ್ತಿ ಅರಸಿಕೊಂಡು ಬಂದಿದ್ದು, ವೇದ ಸಂಶೋಧನೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ. ಇಪ್ಪತೆôದು ಸಾವಿರ ಶ್ಲೋಕಗಳಿಗೆ ಅರ್ಥ ಬರೆಯುವುದೆಂದರೆ ಅದು ಯಾಂತ್ರಿಕ, ಬೌದ್ಧಿಕ ಕೆಲಸವಲ್ಲ. ಇದಕ್ಕಾಗಿ ಅಪಾರ ಜ್ಞಾನ, ಶ್ರದ್ಧೆ, ಬದ್ಧತೆ ಬೇಕೇಬೇಕು. ಕಶ್ಯಪರು ಹದಿನಾಲ್ಕು ವರ್ಷ ತಪಸ್ಸಿನಂತೆ ಕುಳಿತು ಬರೆದಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಅಲೌಕಿಕ ಅನುಭವಗಳೂ ಅವರಿಗಾಗಿದ್ದು, ಅಧ್ಯಾತ್ಮ ಪಯಣದ ಮೈಲಿಗಲ್ಲೇ ಸರಿ.
‘ವೇದವು ಶ್ರೇಷ್ಠ ಜೀವನದ ಬುನಾದಿ. ಭಾರತದ ಅಜೇಯ ಪರಂಪರೆಯ ಮೂಲಾಧಾರವೂ ವೇದವೇ. ಆದ್ದರಿಂದ ವೇದದ ಪರಿಪೂರ್ಣ ಸತ್ಯದ ಶೋಧವು ನಮ್ಮ ಆಧುನಿಕ, ಬೌದ್ಧಿಕ ಕುತೂಹಲದ ಅವಶ್ಯಕತೆ ಮಾತ್ರವಲ್ಲ; ಮಾನವ ಜನಾಂಗದ ಭವಿಷ್ಯಕ್ಕೆ ವ್ಯಾವಹಾರಿಕ ಅಗತ್ಯ ಆಗಿದೆ’ ಎಂದು ಸ್ಪಷ್ಟವಾಗಿ ಹೇಳಿದವರು ಶ್ರೀಅರೋಬಿಂದೊ. ಜೀವನಕ್ಕೆ ಹೊಸ ಆಯಾಮ ನೀಡಲು ಮತ್ತು ಅಂತಃಸತ್ವ ಹೆಚ್ಚಿಸಲು ವೇದಸಂದೇಶವೇ ದಾರಿದೀಪ. ಆದರೆ, ತುಂಬ ಜನರಲ್ಲಿ ವೇದ, ಉಪನಿಷತ್ ತಿಳಿದುಕೊಳ್ಳುವುದು ಕಠಿಣ ಕೆಲಸ, ಅದಕ್ಕಾಗಿ ಪಂಡಿತೋತ್ತಮರೇ ಆಗಿರಬೇಕು ಎಂಬ ಅಭಿಪ್ರಾಯವಿದೆ.
ಈ ನೆಲದ ಮೂಲಜ್ಞಾನವಾದ ವೇದವು ಮನೆ-ಮನೆಗೂ ತಲುಪಬೇಕು ಎಂಬ ಉದ್ದೇಶದಿಂದಲೇ ಕಶ್ಯಪರು 1997ರಲ್ಲಿ ಬೆಂಗಳೂರಿನಲ್ಲಿ ‘ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆ’ (ಸಾಕ್ಷಿ)ಯನ್ನು (ಜಠಿಠಿಟಠ://ಡಛಿಛಚಜ.ಟಞ/) ಸ್ಥಾಪಿಸಿದ್ದಾರೆ. ವೇದಜ್ಞಾನ ಸಂರಕ್ಷಣೆ, ಸಂಶೋಧನೆ ಹಾಗೂ ಪ್ರಸಾರ ಕಾರ್ಯದಲ್ಲಿ ಈ ಸಂಸ್ಥೆ ಗಮನಾರ್ಹವಾಗಿ ಕೆಲಸ ಮಾಡುತ್ತಿದೆ. ವೇದದ 25 ಸಾವಿರ ಮಂತ್ರಗಳನ್ನು ಅರ್ಥಸಹಿತವಾಗಿ ಕನ್ನಡಕ್ಕೆ ಅನುವಾದಿಸಿರುವ ಲೇಖಕ, ಚಿಂತಕ ಡಾ.ರಘುನಾಥ ಜಹಾಗೀರದಾರ (ಡಾ.ರ.ವಿ.ಜಹಾಗೀರದಾರ) ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿಯಾಗಿ ಮತ್ತು ಬಿಂದುಮಾಧವ ಜಹಾಗೀರದಾರ ಮುಖ್ಯ ವ್ಯವಸ್ಥಾಪಕರಾಗಿ ಹೊಣೆಗಾರಿಕೆ ನಿಭಾಯಿಸುವ ಜತೆಗೆ, ವೇದಸಂಸ್ಕೃತಿಯನ್ನು ಶ್ರೀಸಾಮಾನ್ಯರವರೆಗೆ ತಲುಪಿಸುತ್ತಿದ್ದಾರೆ. ಒಂದು ದಶಕದ ಅವಧಿಯಲ್ಲೇ ಎರಡು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವೇದಾಸಕ್ತರ ಕೈಗೆ ತಲುಪಿಸಿರುವುದು ‘ಸಾಕ್ಷಿ’ಯ ಹೆಗ್ಗಳಿಕೆ.
ವೇದಗಳನ್ನು ಅರಿಯುವ ಮುನ್ನ ಅವುಗಳ ಮೂಲ ತಿರುಳು ತಿಳಿದರೆ ಜಿಜ್ಞಾಸುಗಳಿಗೆ ಹೆಚ್ಚು ಅನುಕೂಲ. ಇದಕ್ಕಾಗಿ ಕಶ್ಯಪರು ಸುಲಭವಾಗಿ ಅರಿವಿಗೆ ಎಟುಕಬಹುದಾದ ಕೃತಿಗಳನ್ನು ರಚಿಸಿದ್ದಾರೆ. ಅವುಗಳ ಪೈಕಿ ‘ಋಗ್ವೇದದ ಅಂತರಂಗ’, ‘ಯಜುರ್ವೆದದ ಅಂತರಂಗ’, ‘ಸಾಮವೇದದ ಅಂತರಂಗ’, ‘ಅಥರ್ವವೇದದ ಅಂತರಂಗ’, ‘ಆಧುನಿಕರಿಗಾಗಿ ವೇದಜ್ಞಾನ’, ‘ವ್ಯಾಪಕವಾಗಿ ಬಳಕೆಯಲ್ಲಿರುವ ವೇದ ಮಂತ್ರಗಳು’, ‘ಸರಸ್ವತಿ’, ‘ರುದ್ರ ಮಂತ್ರಗಳು’, ‘ವೇದಪ್ರಕಾಶ’, ‘ಶಾಂತಿ ಮಂತ್ರಗಳು’, ‘ಗಣಪತಿ’, ‘ಅಗ್ನಿ’, ‘ಸೋಮ’, ‘ವೇದ ಸುರಭಿ’ ಕೃತಿಗಳು ಪ್ರಮುಖ. ‘ಗಜಢ ್ಕಚಛ ್ಕಜ ್ಖಛಚ’ (‘ಋಗ್ವೇದವನ್ನು ಯಾಕೆ ಓದಬೇಕು?’) ಪುಸ್ತಕ ಕನ್ನಡ, ಹಿಂದಿ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡು, ಹತ್ತು ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ.
25 ಸಾವಿರ ವೇದ ಮಂತ್ರಗಳ ಆಂಗ್ಲ ಅನುವಾದದ 26 ಆವೃತ್ತಿಗಳು (ಸಾಕ್ಷಿ ಪ್ರಕಾಶನ, ಬೆಲೆ, 10,265), ಕನ್ನಡ ಅನುವಾದದ 28 ಆವೃತ್ತಿಗಳು (ಸಾಕ್ಷಿ ಪ್ರಕಾಶನ, ಬೆಲೆ 7,050) ಜ್ಞಾನಾಕಾಂಕ್ಷಿಗಳ ಮನಸ್ಸು ಗೆದ್ದಿವೆ. ಈ ಕೃತಿಗಳನ್ನು ಶ್ರೀಸಾಮಾನ್ಯರು ಖರೀದಿಸಿ, ಅಧ್ಯಯನ ಮಾಡಿ, ಆ ಜ್ಞಾನವನ್ನು ಇತರರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಇಎಂಐ ರೂಪದಲ್ಲಿ ಖರೀದಿಸಲು ಸಾಕ್ಷಿ ಅನುವು ಮಾಡಿಕೊಟ್ಟಿದೆ. (ಸಂಪರ್ಕಕ್ಕಾಗಿ: 90088-33886)
ನಾಲ್ಕು ವೇದಗಳ ಮಂತ್ರಗಳ ಅರ್ಥವ್ಯಾಖ್ಯಾನವನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವ ಕೆಲಸವೂ ನಡೆಯುತ್ತಿದೆ. ತಮಿಳು, ತೆಲುಗು, ಮರಾಠಿ, ಹಿಂದಿ ಭಾಷೆಗಳಲ್ಲಿ ಈ ಕೆಲಸ ಬಹುತೇಕ ಪೂರ್ಣಗೊಂಡಿದೆ. ವೇದಭಾಷ್ಯ ಕ್ಷೇತ್ರದಲ್ಲಿ ಡಾ.ಕಶ್ಯಪರ ಅನನ್ಯ ಕೊಡುಗೆಯನ್ನು ದೇಶ-ವಿದೇಶಗಳ ವಿದ್ವಾಂಸರು ಗುರುತಿಸಿ, ಗೌರವಿಸಿದ್ದಾರೆ. ಅವರ ಪುಸ್ತಕಗಳಿಗೆ ಗಣ್ಯರು ಬರೆದಂಥ ಮುನ್ನುಡಿ, ವಿಮರ್ಶೆ, ಆಶೀರ್ವಚನಗಳ ಸಂಕಲನವೇ ಒಂದು ಪುಸ್ತಕವಾಗಿದೆ (ವೇದರಹಸ್ಯದ ಪರಿಶೋಧನೆ). ಪ್ರೊ.ಸಾ.ಕೃ.ರಾಮಚಂದ್ರರಾವ್, ಶ್ರೀ ರಂಗಪ್ರಿಯ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಅಮೆರಿಕದ ರ್ಯಾಂಡ್ ಹಿಕ್ಸ್ ಹೀಗೆ ಹಲವರು ಕಶ್ಯಪರ ವೇದಭಾಷ್ಯದ ಪರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಒಬ್ಬ ವಿಜ್ಞಾನಿಯಾಗಿ ಮತ್ತು ಶಿಕ್ಷಕರಾಗಿ, ವಿಷಯಗಳನ್ನು ಸುಂದರವಾಗಿ ಮತ್ತು ಮನವೊಲಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವುದು ಹೇಗೆ ಎಂಬುದನ್ನು ಅವರು ತಿಳಿದಿದ್ದಾರೆ. ಆದ್ದರಿಂದ ಕಶ್ಯಪರ ಕೃತಿಗಳು ಆಧುನಿಕರಿಗೆ ಪ್ರಿಯವೆನಿಸುತ್ತವೆ’ ಎಂದಿದ್ದಾರೆ ಸಿದ್ಧೇಶ್ವರ ಸ್ವಾಮೀಜಿ.
ಆದರ್ಶ ಪ್ರಾಧ್ಯಾಪಕ, ವಿದ್ವಾಂಸ, ವಿಜ್ಞಾನಿ ಆರ್.ಎಲ್.ಕಶ್ಯಪರು ವೇದಕಾರ್ಯಕ್ಕೆ ತೆರೆದುಕೊಂಡಿದ್ದು ಜೀವನದ ಮಹತ್ವದ ತಿರುವಿನಲ್ಲಿ. ಅವರು ಅಮೆರಿಕದಲ್ಲಿದ್ದಾಗ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿ ಬೇರೆ ಮತ, ಧರ್ಮಗಳ ಗ್ರಂಥಗಳು ಸುವ್ಯವಸ್ಥಿತವಾಗಿ ಸಿಕ್ಕರೆ, ವೇದ, ಉಪನಿಷತ್ಗೆ ಸಂಬಂಧಿಸಿದ ಕೃತಿಗಳು ಕೆಲವೇ ಕಡೆ, ಅವೂ ಸಂಪೂರ್ಣ ಜೀರ್ಣಾವಸ್ಥೆಯಲ್ಲಿ ದೊರೆತವು. ಭಾರತದ ಜ್ಞಾನಪರಂಪರೆಯನ್ನು ರಕ್ಷಿಸುವ ಪ್ರಯತ್ನ ಹಿಂದಿನವರು ಮಾಡಿಲ್ಲ ಎಂದು ದೂರುವುದಕ್ಕಿಂತ ಆ ಕಾರ್ಯವನ್ನು ತಾವೇ ಆರಂಭಿಸಬೇಕು ಎಂದು ಸಂಕಲ್ಪಿಸಿ, ಜಗತ್ತನ್ನು ಅರಿಯುವ ಹೊಸ ಕಿಟಕಿಯಾಗಿ ವೇದವನ್ನು ಪರಿಚಯಿಸಿದರು. ಕಶ್ಯಪರ ಹಿನ್ನೆಲೆಯೂ ವಿಶಿಷ್ಟ. 1938ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಆನರ್ಸ್ ಪದವಿ (1958) ಪಡೆದರು. ಬಳಿಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಡಿ.ಐ.ಐ.ಎಸ್ಸಿ (1961) ಪದವಿ ಗಳಿಸಿದರು. 1962ರಲ್ಲಿ ಗರಿಷ್ಠ ಅಂಕಗಳೊಂದಿಗೆ ಎಂ.ಇ. ಪದವಿ ಪಡೆದರು. 1965ರಲ್ಲಿ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಟಚಠಿಠಿಛ್ಟಿ್ಞ cಚಠಠಜ್ಛಿಜ್ಚಿಚಠಿಜಿಟ್ಞ ಚ್ಞಛ ಠಡಿಜಿಠ್ಚಿಜಜ್ಞಿಜ ಠಿಜಛಿಟ್ಟಢ ವಿಷಯದ ಬಗ್ಗೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್.ಡಿ. ಗಳಿಸಿದರು. ಬಳಿಕ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ದೇಶ-ವಿದೇಶಗಳಲ್ಲಿ 350ಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮಂಡಿಸಿರುವ ಕಶ್ಯಪರು, 50 ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶಿ ಆಗಿದ್ದರು.
ಶ್ರೀರಾಮಕೃಷ್ಣ ಮಠದ ಸ್ವಾಮಿ ನಿಶ್ರೇಯಸಾನಂದರ ಮೂಲಕ ಅಧ್ಯಾತ್ಮದ ಆಸಕ್ತಿ ಬೆಳೆಸಿಕೊಂಡ ಕಶ್ಯಪರು ಪಾಂಡಿಚೇರಿಯ ಶ್ರೀಅರೋಬಿಂದೊ ಆಶ್ರಮದ ಎಂ.ಪಿ.ಪಂಡಿತರ ಮೂಲಕ ಯೋಗ, ವೇದಾಂತ ತಂತ್ರ ಮತ್ತು ವೇದಗಳ ಪರಿಚಯ ಹೊಂದಿದರು. ಮುಂದೆ ಹೆಚ್ಚಿನ ಅಧ್ಯಯನದಲ್ಲಿ ತೊಡಗಿ ವೇದಸಾಹಿತ್ಯದ ರಚನೆ ಮಾಡಿದ್ದಾರೆ. 85ರ ಇಳಿವಯಸ್ಸಿನಲ್ಲೂ ಓದು, ಬರಹ, ಚಿಂತನೆಯಲ್ಲಿ ಸಕ್ರಿಯವಾಗಿರುವ ಇವರು ಕಳೆದ 15 ವರ್ಷಗಳಿಂದ ಪ್ರತಿ ಮಂಗಳವಾರ ಬೆಳಗ್ಗೆ ಸಾಕ್ಷಿ ಸಂಸ್ಥೆಯಲ್ಲಿ ವೇದ ಮತ್ತು ಅಧ್ಯಾತ್ಮ ವಿಷಯವಾಗಿ ಉಪನ್ಯಾಸ ತರಗತಿಗಳನ್ನು ನಡೆಸುತ್ತಿದ್ದಾರೆ. ಪದ್ಮಶ್ರೀ ಘೋಷಣೆ ಆದಾಗಲೂ ಅಷ್ಟೇ ನಿರ್ಲಿಪ್ತವಾಗಿ ಪ್ರತಿಕ್ರಿಯಿಸಿದ ಅವರು, ‘ಶಕ್ತಿ ಹಿಂದೆ ನಿಂತು ಈ ಕಾರ್ಯ ಮಾಡಿಸಿದೆ. ವೇದ ಭಾರತೀಯರ ಮನೆ-ಮನ ತಲುಪಬೇಕು. ಅದು ದೊಡ್ಡ ಬದಲಾವಣೆ ತರಬಲ್ಲದು. ಪ್ರಶಸ್ತಿಗಳೇನು, ಕೊಟ್ಟವರಿಗೆ ಖುಷಿಯಾದರೆ ಸಾಕು’ ಎಂದು ಮತ್ತೆ, ಓದಿಗೆ ಮರಳಿದರು.
ಮಳೆನೀರು ಕೊಯ್ಲು, ಸೌರಶಕ್ತಿ, ಪರಿಸರ ಶುದ್ಧಿ ಕೆಲಸದಲ್ಲೂ ಕಶ್ಯಪರಿಗೆ ಭಾರಿ ಆಸಕ್ತಿ. ‘ಲೇಖಕ, ಪ್ರಕಾಶಕನಾಗಿ ಪುಸ್ತಕ ಬರೆಯಲು, ಪ್ರಕಟಿಸಲು ಅಪಾರ ಪ್ರಮಾಣದ ಕಾಗದ ಬಳಸಿದ್ದೇನೆ. ಅದಕ್ಕಾಗಿ ಹಲವಾರು ಮರಗಳು ಬಲಿಯಾಗಿವೆ. ಪ್ರಕೃತಿಗೆ ನಮ್ಮಿಂದಾದ ಸೇವೆ ಮಾಡಬೇಕು’ ಎಂದು ನಿಶ್ಚಯಿಸಿ ಬೆಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಯಡಮಡು ಎಂಬ ಪುಟ್ಟ ಗ್ರಾಮದ ಹತ್ತು ಎಕರೆ ತೋಟದಲ್ಲಿ ನಾಲ್ಕು ಸಾವಿರಕ್ಕಿಂತ ಅಧಿಕ ಗಿಡ-ಮರಗಳನ್ನು ಬೆಳೆಸಲು ಕಾರಣಿಕರ್ತರಾಗಿದ್ದಾರೆ. ಹೀಗೆ ಸಾರ್ಥಕ ಬದುಕಿನ ಮೂಲಕ ಪ್ರೇರಣೆ ನೀಡುತ್ತಿರುವ ಅವರ ನಿಷ್ಠುರ ಚಿಂತನೆ, ಸಮದರ್ಶಿತ್ವವು ಜ್ಞಾನಾಕಾಂಕ್ಷಿ ಸಮೂಹಕ್ಕೆ ದಿವ್ಯ ಆದರ್ಶವೇ ಸರಿ. ಬಾಳನ್ನು ಉನ್ನತ ಧ್ಯೇಯದ ಸಾಕ್ಷಾತ್ಕಾರಕ್ಕಾಗಿ ಮೀಸಲಿಟ್ಟರೆ ದೊರೆಯುವ ಸಾರ್ಥಕತೆ, ಧನ್ಯತೆ ಎಷ್ಟು ಮಹಾನ್ ಎಂಬುದಕ್ಕೆ ಆರ್.ಎಲ್.ಕಶ್ಯಪರ ಬದುಕೇ ನಿದರ್ಶನ.
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)