

ರಾಜನೊಬ್ಬ ಬೇಟೆಯಾಡುತ್ತ ದಾರಿ ತಪ್ಪಿ, ಬಳಲಿದ. ಕಾಡಿನಿಂದ ಆಚೆ ಹೋಗುವ ದಾರಿ ಸಿಗುತ್ತಿಲ್ಲ. ಬಾಯಾರಿಕೆ, ಹಸಿವು ಜೀವವನ್ನು ಹಿಂಡತೊಡಗಿದವು. ಇನ್ನು ತೊಟ್ಟು ನೀರು ಸಿಗದಿದ್ದರೆ ಪ್ರಾಣವೇ ಹೋಗಿಬಿಡುತ್ತದೆ ಎಂಬಂಥ
ಎಷ್ಟು ವಾಸ್ತವ ಅಲ್ಲವೇ? ಮನುಷ್ಯ ನೂರೆಂಟು ಬೇಕುಗಳ ಹಿಂದೆ ಓಡುತ್ತಾನೆ, ಅವುಗಳನ್ನು ಪಡೆಯಬೇಕು ಎಂದು ಜಟಾಪಟಿ ಮಾಡುತ್ತಾನೆ. ಆದರೆ, ಮನುಷ್ಯ ನೆಮ್ಮದಿಯಿಂದ ಬದುಕಲು ಬೇಕಾದದ್ದು ಬೊಗಸೆ ನೀರು, ತುತ್ತು ಅನ್ನ, ಸಣ್ಣ ಸೂರು. ಈ ಸರಳಸತ್ಯ ಮರೆತಿರುವುದರಿಂದಲೇ ಕಷ್ಟಗಳು ಹೆಚ್ಚಿವೆ, ಮನುಷ್ಯನ ಸ್ವಾರ್ಥಕ್ಕೆ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಿವೆ.
ಬೇಸಿಗೆ ಅಡಿಯಿಟ್ಟಿದೆ. ಈಗಾಗಲೇ ನೀರಿನ ಭೀಕರ ಸಮಸ್ಯೆ ಕಣ್ಣಿಗೆ ರಾಚುವಂತಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲ ನೀರಿನ ಬೇಡಿಕೆ ಜಾಸ್ತಿ ಆಗುತ್ತಿದೆ. ಆದರೆ, ನಮ್ಮ ನದಿ, ಕೆರೆಗಳು ಸೇರಿ ಇತರೆ ಜಲಮೂಲಗಳು, ಜಲಸಂಗ್ರಹಾಗಾರಗಳ ಸ್ಥಿತಿ ಹೇಗಿದೆ? ಇವುಗಳನ್ನು ಉಳಿಸಿಕೊಳ್ಳಲು ಏಕಿಷ್ಟು ಉದಾಸೀನ? ಎಂಬ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಸಿಗುವುದಿಲ್ಲ. ಆದರೆ, ಪ್ರಬಲ ಇಚ್ಛಾಶಕ್ತಿಯೊಂದು ಉದಯಿಸಿದರೆ ಪರಿಸ್ಥಿತಿ ಹೇಗೆ ಬದಲಾಗಬಲ್ಲದು ಎಂಬುದಕ್ಕೆ ಪುದುಚೇರಿ (ಪಾಂಡಿಚೇರಿ) ಮತ್ತು ಕಾರಿಕಲ್ ಜಿಲ್ಲೆಗಳು ಸಾಕ್ಷಿಯಾಗಿವೆ. ಬಹುತೇಕ ಕಡೆ ಜನರೇ ಅಧಿಕಾರಿಗಳನ್ನು ಭೇಟಿ ಮಾಡಿ, ‘ನಮ್ಮ ಕೊಳವೆಬಾವಿ ಕೆಟ್ಟುಹೋಗಿದೆ, ಕೆರೆ ಬತ್ತಿಹೋಗಿದೆ. ಏನಾದರೂ ಪರಿಹಾರ ಕಲ್ಪಿಸಿ’ ಎಂದು ಕೇಳಿಕೊಳ್ಳುವುದು ಸಾಮಾನ್ಯ. ಆದರೆ, ಈ ಎರಡೂ ಜಿಲ್ಲೆಗಳಲ್ಲಿ ಇಬ್ಬರು ಯುವ ಐಎಎಸ್ ಅಧಿಕಾರಿಗಳೇ ಜನರ ಸಹಭಾಗಿತ್ವದಿಂದ ನೂರಾರು ಜಲಮೂಲಗಳಿಗೆ ಮರುಜನ್ಮ ನೀಡಿರುವ ಪ್ರೇರಣಾದಾಯಿ ಕಥೆಯಿದು. ರಾಜಸ್ಥಾನದಲ್ಲಿ 40 ಸಾವಿರಕ್ಕೂ ಅಧಿಕ ‘ಜೋಹಾಡ್’ (ಸಣ್ಣ ಅಣೆಕಟ್ಟು ) ಗಳನ್ನು ನಿರ್ವಿುಸಿ ‘ನೀರಿನ ಗಾಂಧಿ’ ಎಂದೇ ಖ್ಯಾತಿ ಆಗಿರುವ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪ್ರೊ.ರಾಜೇಂದ್ರ ಸಿಂಗ್ ಪುದುಚೇರಿಗೆ ಭೇಟಿ ನೀಡಿ, ಈ ಜಲವಿಸ್ಮಯವನ್ನು ಕೊಂಡಾಡಿದ್ದಾರೆ. ಹಾಗಾಗಿಯೇ, ಜಲಮೂಲಗಳ ಜೀಣೋದ್ಧಾರದ ನಿಟ್ಟಿನಲ್ಲಿ ಇಡೀ ದೇಶ ಪುದುಚೇರಿ ಮತ್ತು ಕಾರಿಕಲ್ ಜಿಲ್ಲೆಗಳತ್ತ ನೋಡುತ್ತಿದೆ ಎಂಬುದು ಅತಿಶಯೋಕ್ತಿ ಅಲ್ಲ. ಮುಖ್ಯವಾಗಿ, ನೀರಿನ ವಿಷಯದಲ್ಲಿ ಜನರ ಸಹಭಾಗಿತ್ವ ದೊರೆತರೆ ಎಂಥ ಅದ್ಭುತ ಪರಿವರ್ತನೆ ತರಬಹುದು ಎಂಬುದಕ್ಕೆ ಈ ಪ್ರಯೋಗಗಳು ಸಾಕ್ಷಿ.
ಬನ್ನಿ, ಮೊದಲು ಪುದುಚೇರಿಯನ್ನು ನೋಡೋಣ. ಇಲ್ಲಿನ ಪ್ರಸಕ್ತ ಜಿಲ್ಲಾಧಿಕಾರಿ ಡಾ. ಟಿ.ಅರುಣ್. ಅಪ್ಪಟ ಕನ್ನಡಿಗರು! ನಾಗರಿಕ ಸೇವೆಯ ಅಧಿಕಾರಿ ಆದ ಬಳಿಕ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಬೇಕು ಎಂಬ ಕಳಕಳಿಯಿಂದ ಸದಾ ಶ್ರಮಿಸುವವರು. ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಶಾಲಾಶಿಕ್ಷಣ, ಮೈಸೂರಿನಲ್ಲಿ ಪಿಯು ಶಿಕ್ಷಣ, ಬಳಿಕ ಅಲ್ಲಿನ ಜೆಎಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿದ ಅರುಣ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂಡಿ(ಚರ್ಮತಜ್ಞ) ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿ ಓದುತ್ತಿರುವಾಗಲೇ ಯುಪಿಎಸ್ಸಿ ಪರೀಕ್ಷೆಗಳ ಬಗ್ಗೆ ಒಲವು ಮೂಡಿತು. ಕುಟುಂಬ ಸದಸ್ಯರು, ಸ್ನೇಹಿತರು, ಪ್ರಾಧ್ಯಾಪಕರು ಎಲ್ಲರೂ ಇವರ ಕನಸಿಗೆ ಪ್ರೋತ್ಸಾಹ ನೀಡಿದರು. ಪರಿಣಾಮ, 2013ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಅರುಣ್ ಮೊದಲು ಒಂದು ವರ್ಷ ಪುದುಚೇರಿಯಲ್ಲಿ, ಬಳಿಕ ಮೂರು ವರ್ಷ ಸಿಕ್ಕಿಂನಲ್ಲಿ ಕಾರ್ಯನಿರ್ವಹಿಸಿ ಜನಸ್ನೇಹಿ ಅಧಿಕಾರಿ ಎನಿಸಿಕೊಂಡರು. 2019 ಫೆಬ್ರವರಿಯಿಂದ ಪುದುಚೇರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಮುದ್ರತೀರದಲ್ಲಿ ನೆಲೆಸಿರುವ ಪುದುಚೇರಿ ನಗರ ಕುಡಿಯುವ ನೀರಿಗಾಗಿ ಪರಿತಪಿಸುವುದನ್ನು ಕಂಡು ಈ ಅಧಿಕಾರಿ ಅದಕ್ಕೆ ಉತ್ತರ ಹುಡುಕಲು ಹೊರಟಾಗಲೇ ಜಲಮೂಲಗಳೆಲ್ಲ
ಬತ್ತಿಹೋಗಿದ್ದು ಅಥವಾ ಅತಿಕ್ರಮಣಗೊಂಡಿದ್ದು ಸ್ಪಷ್ಟವಾಯಿತು. ಪುದುಚೇರಿ ನೂರಾರು ಕೆರೆಗಳನ್ನು ಒಳಗೊಂಡ ನಗರ. ಇವೆಲ್ಲ ಎಲ್ಲಿ ಹೋದವು, ಅವುಗಳ ಅಸ್ತಿತ್ವ ಏನಾಯಿತು ಎಂಬುದನ್ನು ಗೊತ್ತುಮಾಡಿಕೊಳ್ಳಲು ಮೊದಲ ಹಂತವಾಗಿ ರೆವಿನ್ಯು ಇಲಾಖೆಯ ನಕ್ಷೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಆ ನಕ್ಷೆಯಲ್ಲಿ ಕೆರೆ, ಕಲ್ಯಾಣಿಗಳ ಮಾಹಿತಿ ಸ್ಪಷ್ಟವಾಗಿತ್ತು. ಆ ಪ್ರದೇಶಕ್ಕೆ ಹೋಗಿ ಅವುಗಳನ್ನು ಗುರುತಿಸಬೇಕಲ್ಲ, ಅದು ದೊಡ್ಡ ಸವಾಲಾಗಿತ್ತು. ನಕ್ಷೆ ಪ್ರಕಾರ ಹುಡುಕಿಕೊಂಡು ಹೋದಾಗ ಕೆರೆಗಳ ಸ್ಥಿತಿ ದಯನೀಯವಾಗಿತ್ತು. ಎಷ್ಟೋ ಕೆರೆಗಳ ಒಡಿಲು ನೀರಿಲ್ಲದೆ ಬರಿದಾಗಿದ್ದರೆ, ಮತ್ತೆ ಕೆಲವು ಕಡೆ ಕಟ್ಟಡಗಳು ತಲೆ ಎತ್ತಿದವು. ಇಷ್ಟು ಕೆರೆಗಳಿಗೆ ಪುನರುಜ್ಜೀವನ ಕಲ್ಪಿಸಿದರೆ ಖಂಡಿತವಾಗಿಯೂ ನೀರಿನ ಸಮಸ್ಯೆ ಬಗೆಹರಿಯುತ್ತದೆ ಮತ್ತು ಅಂತರ್ಜಲದ ಮಟ್ಟವು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟಗೊಂಡಿತು. ಎರಡನೇ ಹಂತದಲ್ಲಿ ಜಲಮೂಲಗಳನ್ನು ಗುರುತಿಸಿ, ಅಳತೆ ಮಾಡಿ ಆ ಜಾಗದಲ್ಲಿ ‘ಇದು ಕೆರೆ’ ಎಂಬ ಫಲಕ ಹಾಕಿಸಲಾಯಿತು. ಇನ್ನು ಮುಂದಿನ ಹಂತ ಪುನರುಜ್ಜೀವನ. ನೂರಾರು ಕೆರೆಗಳ ಜೀಣೋದ್ಧಾರಕ್ಕೆ ದುಡ್ಡು ಎಲ್ಲಿಂದ ತರುವುದು? ಸರ್ಕಾರದಿಂದ ಅಷ್ಟು ಅನುದಾನ ದೊರೆಯುವುದು ತುಂಬ ಕಷ್ಟ. ಹಾಗಾಗಿಯೇ, ಕಾಪೋರೇಟ್ ಕಂಪನಿ ಸೇರಿ ಇತರೆ ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಂಡರು. ಆರಂಭದಲ್ಲೇ ಈ ಪ್ರಯತ್ನಕ್ಕೆ ಭರ್ಜರಿ ಯಶಸ್ಸು ದೊರೆಯುತ್ತಿದ್ದಂತೆ ಸ್ವಯಂಸೇವಾ ಸಂಸ್ಥೆಗಳು (ಎನ್ಜಿಒ) ಮುಂದೆಬಂದವು. ಶಾಸಕರು ಕ್ಷೇತ್ರನಿಧಿಯಡಿ ಅನುದಾನ ನೀಡುತ್ತೇವೆ ಎಂದರು. ಮುಖ್ಯಮಂತ್ರಿ, ರಾಜ್ಯಪಾಲರು ಈ ಪ್ರಯೋಗದ ಫಲಿತಾಂಶ ಕಂಡು ವಿಸ್ಮಿತರಾದರು. ಜನರ ಸಹಭಾಗಿತ್ವ ಹೆಚ್ಚತೊಡಗಿತು. ಹೀಗೆ ಜನಬಲದಿಂದ ಇದಕ್ಕೆ ಆಂದೋಲನದ ಸ್ವರೂಪ ದೊರೆತು ಒಂದಲ್ಲ, ಎರಡಲ್ಲ 192 ಕೆರೆಗಳು ಮತ್ತೆ ಜೀವ ಪಡೆದುಕೊಂಡು, ಜಲಧಾರೆಯೊಂದಿಗೆ ನಳನಳಿಸುತ್ತಿವೆ. ಕೇಂದ್ರ ಸರ್ಕಾರ ನಡೆಸಿದ ಅಧ್ಯಯನದ ಪ್ರಕಾರ ಇಲ್ಲಿನ ಅಂತರ್ಜಲ ಮಟ್ಟ ಹದಿನೈದು ಅಡಿ ಹೆಚ್ಚಾಗಿದೆ! ಬೇಸಿಗೆ ಬಂದರೂ ಕೆರೆಗಳು ತುಂಬಿಕೊಂಡಿವೆ. ಈ ಕೆರೆಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಅಭಿಯಾನವೂ ಉತ್ಸಾಹದಿಂದ ನಡೆಯುತ್ತಿದೆ.
ರೆಸಾರ್ಟ್ ಮಾಲೀಕರು, ಹೋಟೆಲಿನವರು, ಕಾಪೋರೇಟ್ ಕಂಪನಿಗಳು ಹೀಗೆ ಹಲವು ವಲಯಗಳು ಕೆರೆಗಳನ್ನು ದತ್ತು ಪಡೆದು ಉದ್ಧರಿಸಿವೆ. ಇವರ ಮನವೊಲಿಸುವಲ್ಲಿ ಡಾ.ಅರುಣ್ ಅವರ ಶ್ರಮ ಗಮನಾರ್ಹ. ಈಗ ಕೆರೆಗಳು ಪ್ರವಾಸಿತಾಣಗಳಾಗಿ ಮಾರ್ಪಟ್ಟಿದ್ದು, ಟೆಕ್ಕಿಗಳು, ಇತರರು ವಾರಾಂತ್ಯಗಳಲ್ಲಿ ಭೇಟಿ ನೀಡುತ್ತಿದ್ದಾರೆ. ಮಹಿಳಾ ದಿನದಂದು (ಮಾರ್ಚ್ 8) ಹಲವು ಮಹಿಳಾ ಸಂಘಟನೆಗಳು ಸ್ವಯಂಪ್ರೇರಿತವಾಗಿ ಹಲವು ಕೆರೆಗಳನ್ನು ದತ್ತು ತೆಗೆದುಕೊಂಡಿವೆ. ಈ ಅಭಿಯಾನಕ್ಕೆ ‘ನೀರುಂ ಊರುಂ ತಿಟ್ಟಂ’ (ನೀರು ಮತ್ತು ಊರು) ಎಂಬ ಸಾರ್ಥಕ ಹೆಸರು. ಮಳೆನೀರನ್ನು ಸಂಗ್ರಹಿಸುವ ಬಗ್ಗೆ ಗ್ರಾಮಗಳಲ್ಲೂ ಜಾಗೃತಿ ಮೂಡಿಸಲಾಗಿದ್ದು, ಸರ್ಕಾರಿ ಕಟ್ಟಡಗಳಿಗೆ ಮತ್ತು ರೆಸಾರ್ಟ್, ಹೋಟೆಲ್ಗಳಿಗೆ ಮಳೆನೀರು ಕೊಯ್ಲು ಕಡ್ಡಾಯ ಮಾಡಲಾಗಿದೆ. ಕೆರೆ, ಕಲ್ಯಾಣಿಗಳ ಅತಿಕ್ರಮಣ ತೆರವುಗೊಂಡಿದೆ. 200 ಕಿಲೋಮೀಟರ್ ವ್ಯಾಪ್ತಿಯ ಕಾಲುವೆಯನ್ನು ಸ್ವಚ್ಛಗೊಳಿಸಲಾಗಿದೆ. ಕೆರೆ, ಕಲ್ಯಾಣಿಗಳಿಗೆ ಜಿಯೋ ಮ್ಯಾಪಿಂಗ್ ಒಳಪಡಿಸಿ, ಯುನಿಕ್ ಸಂಖ್ಯೆ ನೀಡಲಾಗಿದ್ದು, ಮಹತ್ವದ ಕ್ರಮ. ಈ ತಂತ್ರಜ್ಞಾನದ ಕ್ರಮದಿಂದ ಭವಿಷ್ಯದಲ್ಲಿ ಮತ್ತೆ ಜಲಮೂಲಗಳು ಅತಿಕ್ರಮಣಕ್ಕೆ ಒಳಗಾಗುವುದನ್ನು ತಪ್ಪಿಸಬಹುದು ಮತ್ತು ಜಲಸಂಗ್ರಹಾಗಾರಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ‘ಜಲ ಅಭಿಲೇಖ’ ಎಂಬ ಮೊಬೈಲ್ ಆಪ್ ರೂಪಿಸಲಾಗಿದ್ದು, ಅದು ಜಲಮೂಲಗಳ ಸಮಗ್ರ ಮಾಹಿತಿ ಒಳಗೊಂಡಿದೆ. ಸಮಾಜಪರ ಸಂವೇದನೆ ಹಾಗೂ ತೀವ್ರ ಕಳಕಳಿ ಇರುವ ಅಧಿಕಾರಿಯ ಶ್ರಮದಿಂದ ಮತ್ತು ಅದಕ್ಕೆ ಸಮುದಾಯ ಕೊಟ್ಟ ಬೆಂಬಲದಿಂದ ಪುದುಚೇರಿ ಈಗ ಜಲಸಂಭ್ರಮ ಕಾಣುವಂತಾಗಿದೆ!
ಕಾರಿಕಲ್ ಜಿಲ್ಲೆಯತ್ತ ಬನ್ನಿ. ತುಂಬ ಹಿಂದಿನ ಚಿತ್ರಣ ಬೇಡ. 2019ರಲ್ಲೇ ಇಲ್ಲಿ ಒಂದು ಕೊಡ ನೀರಿಗಾಗಿ ಮೈಲಿಗಟ್ಟಲೇ ನಡೆಯುವ ಸ್ಥಿತಿ ಇತ್ತು. 500 ಅಡಿ ಆಳಕ್ಕೆ ಹೋದರೂ ಅಂತರ್ಜಲ ಸಿಗದಂಥ ಸ್ಥಿತಿ. ಇಲ್ಲಿಯ ಯುವ ಜಿಲ್ಲಾಧಿಕಾರಿ ವಿಕ್ರಾಂತ್ ರಾಜ್ ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಜಲಮೂಲಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವು ಕಾಣೆಯಾಗಿರುವುದನ್ನು ಗಮನಿಸಿದರು. ಇದಕ್ಕೆ ಪರಿಹಾರ ಕಲ್ಪಿಸಲು ‘ನಮ್ ನೀರ್’ (ನಮ್ಮ ನೀರು) ಅಭಿಯಾನ ಆರಂಭಿಸಿದರು. ಕಲುಷಿತಗೊಂಡ, ಅತಿಕ್ರಮಣಗೊಂಡ ಮತ್ತು ತೀವ್ರವಾಗಿ ಹಾನಿಗೊಂಡ 450 ಜಲಮೂಲಗಳನ್ನು ಪತ್ತೆ ಮಾಡಿದರು. ಈ ಪೈಕಿ ಈಗಾಗಲೇ 178ಕ್ಕೂ ಅಧಿಕ ಕೆರೆ, ಕಲ್ಯಾಣಿಗಳು ಮರುಜೀವ ಪಡೆದಿವೆ! ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳ ಆಡಳಿತ ಮಂಡಳಿಗಳು, ಕಾಪೋರೇಟ್ ಕಂಪನಿಗಳು, ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಿಂದ ಮತ್ತು ವಿಕ್ರಾಂತ್ ರಾಜ್ರ ಅಸಾಧಾರಣ ಪ್ರಯತ್ನದಿಂದ ಅಸಾಧ್ಯ ಎನುವಂಥ ಕಾರ್ಯ ಕೂಡ ಸಾಧ್ಯವಾಗಿ, ಅಚ್ಚರಿ ಮೂಡಿಸಿದೆ. ಉಳಿದ ಜಲಮೂಲಗಳ ಜೀಣೋದ್ಧಾರ ಮುಗಿಯುವವರೆಗೆ ವಿಶ್ರಮಿಸುವುದಿಲ್ಲ ಎಂಬುದು ವಿಕ್ರಾಂತರ ದೃಢಸಂಕಲ್ಪ. ಹಾಗೆಯೇ, ಮಳೆನೀರು ಸಂಗ್ರಹಕ್ಕೂ ಸೂಕ್ತ ಯೋಜನೆ ರೂಪಿಸಿ, ಜಾರಿಗೆ ತರಲಾಗಿದೆ. ‘ಕೆರೆ, ಕುಂಟೆಗಳ ಮೇಲೆ ಜನರು ಅವಲಂಬಿತರಾಗಿದ್ದಾಗ ಅವುಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದರು. ಈಗ ಕೊಳವೆಬಾವಿ ಮೂಲಕ ಮನೆಬಾಗಿಲಿಗೆ ನೀರು ಬರುತ್ತಿರುವುದರಿಂದ ಆ ಪಾರಂಪರಿಕ ಜಲಸಂರಕ್ಷಣಾ ವಿಧಾನಗಳನ್ನು ಮರೆತಿದ್ದಾರೆ. ಅದರ ಬಗ್ಗೆ ಮತ್ತೆ ಅರಿವು ಮೂಡಿಸಿ, ಮನೆ-ಮನೆಗಳಿಂದಲೂ ನೀರು ಉಳಿಸುವ ಕಾರ್ಯ ಆರಂಭವಾದರೆ ಅಂತರ್ಜಲ ಮಟ್ಟ ಹೆಚ್ಚುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ವಿಕ್ರಾಂತ್. ‘ಅಧಿಕಾರಿಗಳಾದ ನಮಗೆ ಬದ್ಧತೆ ಇರಬೇಕು ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ತುಡಿತ ಇರಬೇಕು. ಆಗ ಎಲ್ಲರನ್ನೂ ಒಳ್ಳೆಯ ಉದ್ದೇಶಕ್ಕಾಗಿ ಒಟ್ಟಿಗೆ ಕರೆದುಕೊಂಡು ಹೋಗಿ, ಗುರಿ ತಲುಪಲು ಸಾಧ್ಯ’ ಎನ್ನುವುದು ಡಾ.ಅರುಣ್ (ಚ್ಟuಠಿ.ಛಟ್ಚಃಜಞಚಜ್ಝಿ.ಟಞ) ಅವರ ಅಚಲ ನಿಲುವು.
ಇಬ್ಬರು ಅಧಿಕಾರಿಗಳು ಮತ್ತು ಅವರೊಡನೆ ಸೇರಿದ ಜನರು ಇಷ್ಟು ಅದ್ಭುತವಾದ ಪರಿವರ್ತನೆ ತರಬಹುದಾದರೆ ಇದು ಎಲ್ಲ ನಗರ, ಜಿಲ್ಲೆಗಳಿಗೂ ಸಾಧ್ಯ ಅಲ್ಲವೇ? ಅಂಥದ್ದೊಂದು ಇಚ್ಛಾಶಕ್ತಿ ಒಡಮೂಡಿ, ಜಲಯೋಧರ ಪಡೆಯೇ ನಿರ್ಮಾಣ ವಾಗಬೇಕಿದೆ. ಬೆಂಗಳೂರಿನಲ್ಲಿ ವೃಷಭಾವತಿಗೆ ಮತ್ತೆ ಜೀವ ನೀಡುವ ಪ್ರಯತ್ನ ಯುವಾ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಆರಂಭವಾಗಿದ್ದು, ಇದರ ಭಾಗವಾಗಿ 16 ವಾರ ಹೊಸಕೆರೆಹಳ್ಳಿ ಸ್ವಚ್ಛತೆ ನಡೆದಿದೆ. ಸಮುದಾಯದಲ್ಲಿ ಅಪಾರ ಶಕ್ತಿ ಇದೆ. ಅದನ್ನು ಜಾಗೃತಗೊಳಿಸಿದರೆ ನಾವೆಲ್ಲ ಭಗೀರಥರಾಗಬಹುದು, ಗಂಗೆ, ಕಾವೇರಿಯ ಸಾನಿಧ್ಯ ಎಲ್ಲರಿಗೂ ದೊರಕಬಹುದು. ನೀರಿನ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗುವ ಮುನ್ನವೇ, ಬನ್ನಿ ಜಾಗೃತರಾಗೋಣ, ಭಗೀರಥರಾಗೋಣ!
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)