ಕಾಡಂಚಿನ ಬೇಲಿ ಸದೃಢವಾಗಿರಲಿ

RailwayBarricade- Bandipura- Elephant
Published on

ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಕಾಡಂಚಿನಗುಂಟ ಅರಣ್ಯ ಇಲಾಖೆ ಆನೆಕಂದಕಗಳನ್ನು ನಿರ್ವಿುಸಿತ್ತು. ಆದರೆ, ಮಳೆಬಂದು ಮಣ್ಣು ಹರಿದುಬಂದು ಆನೆಕಂದಕಗಳು ಮುಚ್ಚಿಹೋಗಿವೆ. ಹಾಗಾಗಿ, ಆನೆಗಳು ಜಮೀನಿನೊಳಗೆ ಬರದಂತೆ ಮಾಡಲು ಕಾಡಂಚಿನಲ್ಲಿರುವ ಜಮೀನುಗಳ ಕೆಲ ರೈತರು ಜಮೀನು ಸುತ್ತ ಬೇಲಿ ನಿರ್ವಿುಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಆನೆಗಳ ಸಾವಿಗೆ ಕಾರಣವಾಗುತ್ತಿರುವುದು ಕಳವಳಕಾರಿ.

ವನ್ಯಜೀವಿಗಳನ್ನು ರಕ್ಷಿಸಲು ಈ ಹಿಂದೆ ಮನವಿ ಮಾಡಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರ 2018ರಲ್ಲಿ ರೈಲು ಕಂಬಿ ಅಳವಡಿಸಿ ಬೇಲಿ ನಿರ್ವಿುಸಲು ನಿರ್ಧರಿಸಿತು. 2019ರಲ್ಲಿ ಉಕ್ಕಿನ ರೈಲು ಕಂಬಿಗಳ ಬೇಲಿ ನಿರ್ವಿುಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿತು. ಪ್ರಸಕ್ತ ಬಂಡೀಪುರದ ಕಾಡಂಚಿನಲ್ಲಿ ಬೇಲಿ ನಿರ್ವಿುಸುವ ಕಾರ್ಯ ಪ್ರಗತಿಯಲ್ಲಿದೆ. ಇತ್ತೀಚೆಗೆ ಆನೆಯೊಂದು ಬಂಡಿಪುರ ಹುಲಿಯೋಜನೆಯ ಎನ್ ಬೇಗೂರು ವಲಯದ ಬಸಾಪೂರ ಗ್ರಾಮದ ಬಳಿ ಬೇಲಿಯ ಕಂಬಕ್ಕೆ ಗುದ್ದಿ ಬೇಲಿ ಮುರಿದಿರುವುದು ವರದಿಯಾಗಿದೆ.

ಬೇಲಿಗೆ ಕಂಬಗಳನ್ನು ಅಳವಡಿಸುವಾಗ ಬಲಿಷ್ಠವಾದ ಕಂಬವನ್ನು ಗಟ್ಟಿಯಾದ ಕಾಂಕ್ರೀಟ್ ಕಟ್ಟೆಯಲ್ಲಿ ನೆಟ್ಟು ರೈಲುಕಂಬಿಗಳನ್ನು ಅಳವಡಿಸುವ ಮೂಲಕ ಆನೆಗಳು ಬೇಲಿಯನ್ನು ಮುರಿಯದಂತೆ ಮಾಡುವುದು ಅವಶ್ಯ. ಈ ಕುರಿತು ವನ್ಯಜೀವಿಪ್ರಿಯರು, ಸಂಘಟನೆಗಳು ಸಕಾರಾತ್ಮಕ ಚಿಂತನೆ ಮಾಡಿ ಕಾಡಂಚಿನಗುಂಟ ಸದೃಢ ಉಕ್ಕಿನ ರೈಲು ಕಂಬಿ ಬೇಲಿ ನಿರ್ವಿುಸಲು ಸರ್ಕಾರದ ಮೇಲೆ ಒತ್ತಡ ಹೇರಲಿ.

| ಬಸವರಾಜ ಹುಡೇದಗಡ್ಡಿ ವಕೀಲರು, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net