ಜನಮತ| ವಿಧಾನಪರಿಷತ್ತನ್ನು ರದ್ದು ಮಾಡುವುದೇ ಲೇಸು!

Vidhana Soudha vvani
Published on
ರಾಜ್ಯ ವಿಧಾನಮಂಡಲದ ಮೇಲ್ಮನೆ ವಿಧಾನಪರಿಷತ್ತು ಹಿರಿಯರ ಸದನ, ಚಿಂತಕರ ಚಾವಡಿ, ಎಂದೆಲ್ಲ ಕರೆಯಿಸಿಕೊಳ್ಳುವ ಗೌರವಾನ್ವಿತ ಸ್ಥಳ! ಆ ಸದನದ ಸದಸ್ಯರೆಲ್ಲರೂ ತಮ್ಮ ವೈಯಕ್ತಿಕ ಗೌರವ ಹಾಗೂ ನೈತಿಕತೆಯನ್ನು ಕಾಪಾಡಿಕೊಂಡು ವಿಧಾನಪರಿಷತ್ತಿನ ಘನತೆಯನ್ನು ರಕ್ಷಿಸಕೊಳ್ಳಬೇಕಾದದ್ದು ಅವರ ಹೊಣೆ. ಇಂತಹ ಗೌರವಾನ್ವಿತ ಸದನದಲ್ಲಿ ಇತ್ತೀಚೆಗೆ ನಡೆದ ನೂಕುನುಗ್ಗಲು, ಎಳೆದಾಟ, ಕಿತ್ತಾಟದ ಅಹಿತಕರ ಘಟನೆ ಪ್ರಜಾತಂತ್ರದ ಗೌರವವನ್ನೇ ಹಾಳು ಮಾಡಿತು. ಸಮಸ್ಯೆಗಳು ಏನೇ ಇದ್ದರೂ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲು ಅವಕಾಶ ಉಂಟು. ಆದರೂ, ಈ ಸದಸ್ಯರು ತುಳಿದ ದಾರಿ ಪ್ರತಿಯೊಬ್ಬ ಕನ್ನಡಿಗನಿಗೂ ನೋವುಂಟು ಮಾಡಿದೆಯಲ್ಲದೆ, ಇಂತಹ ಸದಸ್ಯರುಗಳು ಹಾಗೂ ಸದನ ನಮಗೆ ಬೇಕೆ? ಎನ್ನುವ ಪ್ರಾಮಾಣಿಕ ಪ್ರಶ್ನೆ ಉದ್ಭವಿಸಿದೆ.

ಭಾರತದ 28 ರಾಜ್ಯಗಳಲ್ಲಿ ಕೇವಲ ಆರು ರಾಜ್ಯಗಳು ವಿಧಾನಪರಿಷತ್ತನ್ನು ಹೊಂದಿವೆ. ಆಂಧ್ರಪ್ರದೇಶ (ಸದಸ್ಯರ ಸಂಖ್ಯೆ 58), ಬಿಹಾರ (75), ಕರ್ನಾಟಕ (75), ಮಹಾರಾಷ್ಟ್ರ (78), ತೆಲಂಗಾಣ (40) ಹಾಗೂ ಉತ್ತರಪ್ರದೇಶ (100)ಗಳಲ್ಲಿ ಮಾತ್ರ ವಿಧಾನಪರಿಷತ್ತಿದ್ದು, ಉಳಿದ ರಾಜ್ಯಗಳು ವಿಧಾನಪರಿಷತ್ತು ಇಲ್ಲದೆ ಆಡಳಿತ ನಡೆಸುತ್ತಿವೆ. 1969ರಲ್ಲಿ ಅಸ್ಸಾಂ, ಮಧ್ಯಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ ವಿಧಾನಪರಿಷತ್ತನ್ನು ರದ್ದು ಪಡಿಸಿದರೆ, 1986ರಲ್ಲಿ ತಮಿಳುನಾಡು ಹಾಗೂ 2019ರಲ್ಲಿ ಜಮ್ಮು-ಕಾಶ್ಮೀರ ವಿಧಾನಪರಿಷತ್ತನ್ನು ರದ್ದುಪಡಿಸಿದೆ. ಕರ್ನಾಟಕ ವಿಧಾನಪರಿಷತ್ತನ್ನು ರದ್ದು ಮಾಡಿದರೆ ಆರ್ಥಿಕವಾಗಿ ಅನುಕೂಲವಾಗಬಹುದಲ್ಲದೆ ಅಭಿವೃದ್ಧಿಗಾಗಿ ಹೆಚ್ಚು ಹಣ ವಿನಿಯೋಗಿಸಬಹುದು. ಈ ಬಗ್ಗೆ ಗಂಭೀರ ಚಿಂತನೆ ನಡೆಯಲಿ.

| ಬೀರಣ್ಣ ನಾಯಕ ಮೊಗಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net