

ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಕಟಿಸಿದ 276 ನಗರಸಭೆ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಹೈಕೋರ್ಟ್ ತಿರಸ್ಕರಿಸಿ ತೀರ್ಪು ನೀಡಿರುವುದು ಸರ್ಕಾರಕ್ಕಾದ ಮುಖಭಂಗವೆಂದೇ ಹೇಳಬಹುದು. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದೆ ಎಂದು ಹೈಕೋರ್ಟ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಸರ್ಕಾರ ನಿಗದಿ ಮಾಡಿದ್ದ ಮೀಸಲಾತಿಯನ್ನು ತಿರಸ್ಕರಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಿದೆ. ಸರ್ಕಾರಗಳು ಬದಲಾದಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಲು ಎಲ್ಲ ರಾಜಕೀಯ ಪಕ್ಷಗಳು ಸ್ಥಳೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಸಂವಿಧಾನದ 74ನೇ ತಿದ್ದುಪಡಿಯನ್ನು ಅವಮಾನಿಸುತ್ತಿವೆ. ಆದ್ದರಿಂದ ಮೀಸಲಾತಿ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ ನಡೆಯುವಂತಾಗಲು ಮೀಸಲಾತಿ ಪ್ರಕಟಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವುದು ಹೆಚ್ಚು ಸೂಕ್ತ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮತ್ತು ಆರೋಗ್ಯಕರ ಚರ್ಚೆ ನಡೆಯಲಿ.
| ವಿ.ಜಿ.ಇನಾಮದಾರ ಸಾರವಾಡ ವಿಜಯಪುರ ಜಿಲ್ಲೆ