

ಷೇರು ಮಾರುಕಟ್ಟೆಯ ಪ್ರಸ್ತುತ ಪರಿಸ್ಥಿತಿ ಬಗ್ಗೆ ಹೂಡಿಕೆದಾರರು ಚಿಂತಿತರಾಗಿದ್ದಾರೆ. ಹೂಡಿಕೆ ಎಲ್ಲವೂ ವ್ಯರ್ಥವಾಯಿತಲ್ಲ ಎಂದು ಕಳವಳಪಡುತ್ತಿದ್ದಾರೆ. ಆದರೆ, ಇಲ್ಲಿ ಕೆಲವು ವಾಸ್ತವಗಳನ್ನು ಗಮನಿಸಬೇಕು. ಈ ರೀತಿಯ ಮಾರುಕಟ್ಟೆಯ ಇಳಿಕೆ ಇದೇ ಮೊದಲ ಸಲ ಸಂಭವಿಸಿದ್ದಲ್ಲ. ಷೇರು ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್)ದ ಇಳಿಕೆ ಶೇಕಡ 10ರಷ್ಟಕ್ಕೂ ಹೆಚ್ಚು ಪ್ರತಿಶತದಷ್ಟು, ಕಳೆದ 39 ವರ್ಷಗಳಲ್ಲಿ ಬಹಳಷ್ಟು ಬಾರಿ ಕಂಡಿದೆ. ಷೇರು ಸೂಚ್ಯಂಕದ ಇಳಿಕೆ ತಾತ್ಕಾಲಿಕ ಹಿನ್ನಡೆ ಅಷ್ಟೇ, ಆದರೆ ಸೂಚ್ಯಂಕದ ಬೆಳವಣಿಗೆ ಶಾಶ್ವತ. ಈ ಅಂಕಿಸಂಖ್ಯೆಗಳೇ ಅದಕ್ಕೆ ಸಾಕ್ಷಿ.
ಹೂಡಿಕೆದಾರರು ಗಮನಿಸಬೇಕು- ಕೆಲವೇ ದಿನಗಳಲ್ಲಿ ಶ್ರೀಮಂತರಾಗಬೇಕೆಂಬ ಕೆಟ್ಟ ಹಂಬಲದಿಂದ, ನಮ್ಮ ಬಳಿಯಿರುವ ಹಣವನ್ನೆಲ್ಲ ಒಂದೇ ಹೂಡಿಕೆಯಲ್ಲಿ ಅಥವಾ ಒಮ್ಮೆಲೇ ಹೂಡಿಕೆ ಮಾಡುವುದು ಮೂರ್ಖತನ. ಹಾಗೆಯೇ ಸಾಲ ಮಾಡಿ ಹೂಡಿಕೆ ಮಾಡುವುದು ತಪ್ಪು ನಿರ್ಧಾರ. ನಮ್ಮ ಬಳಿಯಿರುವ ಅಷ್ಟಿಷ್ಟು ಹಣ ಅಥವಾ ಸರ್-ಪ್ಲಸ್ ಹಣವನ್ನು ಮಾತ್ರ ಹೂಡಿಕೆ ಮಾಡಬೇಕು. ಹಾಗಾಗಿ ಪ್ರತಿ ಇಳಿಕೆಯ ಹಂತದಲ್ಲಿ ಸ್ವಲ್ಪ, ಸ್ವಲ್ಪ ಹಣವನ್ನು ಹೂಡಿಕೆ ಮಾಡಿ, ಏರಿಕೆ ಕಂಡಾಗ ಹಾಗೂ ಲಾಭದಾಯಕವೆನಿಸಿದಾಗ ಗಳಿಕೆಯನ್ನು ಅನುಭವಿಸುವುದು ಜಾಣತನ.
| ಜೆ.ಸಿ.ಜಾಧವ್, ಗಂಗಾವತಿ